ವಡೋಧರ(ಗುಜರಾತ್), ಡಿ. ೧೯: ‘ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ಕೆಲ ವಿದ್ರೋಹಿ ಶಕ್ತಿಗಳು ಮಾದ್ಯಮಗಳ ಮೂಲಕ ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಶಿಷ್ಯ-ಭಕ್ತ ಸಮುದಾಯ ಇದಕ್ಕೆ ಕಿವಿಗೊಡದೇ ಸಂಘಟಿತವಾಗಿ ಮುನ್ನಡೆಯಬೇಕು’ ಎಂದು ಗೋಕರ್ಣ ಮಂಡಲಾಧೀಶ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದ್ದಾರೆ.
‘ದೇಶೀಯ ಗೋ ತಳಿಗಳ ಸಂರಕ್ಷಣೆಯ ಮಹಾ ಆಂದೋಲನದ ಮಹತ್ಕಾರ್ಯದ ಅಂಗವಾಗಿ ನಡೆಯುತ್ತಿರುವ ವಿಶ್ವ ಮಂಗಲ ಗೋಗ್ರಾಮ ಯಾತ್ರೆಯಂಥ ಭಾರತ ಪರ್ಯಟನೆಯಲ್ಲಿ ನಾವು ನಿರತರಾಗಿದ್ದು, ಪ್ರಸ್ತುತ ಗುಜರಾತ್ ಹಾಗೂ ಮಹಾರಾಷ್ಟ್ರ ಪ್ರವಾಸದಲ್ಲಿದ್ದೇವೆ. ಉದ್ದೇಶಿತ ಯಾತ್ರೆಯ ಮುಕ್ಕಾಲು ಪಾಲು ಪೂರ್ಣಗೊಂಡಿದ್ದು, ಗೋ ಸಂರಕ್ಷಣೆಯ ನಮ್ಮ ಇಂಗಿತಕ್ಕೆ ದೇಶಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಯಾತ್ರೆ ಯಶಸ್ವಿಯಾಗಿ ಅಂತಿಮ ಹಂತ ತಲುಪುತ್ತಿರುವ ಈ ಸನ್ನಿವೇಶದಲ್ಲಿ ಕೆಲ ವ್ಯಕ್ತಿಗಳು ಮಠದ ವಿರುದ್ಧ ಉದ್ದೇಶಪೂರ್ವಕ ವೃಥಾ ಅಪಪ್ರಚಾರ ನಡೆಸುವ ಮೂಲಕ ಶ್ರೀ ಮಠಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನದಲ್ಲಿ ನಿರತರಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇಂಥ ಷಡ್ಯಂತ್ರದಿಂದ ಗೋ ಸಂರಕ್ಷಣೆಯ ನಮ್ಮ ಜೀವಿತದ ಆಂದೋಲನಕ್ಕೂ ಕಳಂಕ ತರುವ ಹುನ್ನಾರ ನಡೆದಿರುವುದು ಸ್ಪಷ್ಟವಾಗಿದೆ.’ ಎಂದು ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು ತಿಳಿಸಿದ್ದಾರೆ.
‘ಇಡೀ ಜಗತ್ತಿನ ಗಮನ ಸೆಳೆದ ವಿಶ್ವ ಗೋ ಸಮ್ಮೇಳನದ ನಂತರದ ದಿನಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ನಿರಂತರ ಅಪಪ್ರಚಾರದೊಂದಿಗೆ ಮಠದ ವಿರುದ್ಧ ವಿದ್ರೋಹಿ ಶಕ್ತಿಗಳು ಕೆಲಸ ಮಾಡುತ್ತಲೇ ಬರುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈಗಲೂ ಸಹ ಅಂಥ ವ್ಯಕ್ತಿಗಳೇ ಮತ್ತೆ ಕಾರ್ಯ ನಿರತರಾಗಿರುವುದು ವಿಷಾದನೀಯ. ಇದರಿಂದ ಗೋ ಸಂರಕ್ಷಣೆಯ ಮಹಾ ಆಂದೋಲನಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ. ಏನೇ ಆದರೂ ನಮ್ಮ ಜೀವಿತದುದ್ದಕ್ಕೂ ಗೋ ಮಾತೆಗಾಗಿ ಹೋರಾಟ ನಿರಂತರ ಮುಂದುವರಿಯುತ್ತದೆ. ಇಂಥ ಕ್ಷುಲ್ಲಕ ವಿಚಾರಗಳಿಂದ ಮಠದ ಭಕ್ತ ಅಭಿಮಾನಿಗಳು ವಿಚಲಿತರಾಗುವ ಅಗತ್ಯವಿಲ್ಲ. ಗೋ ಪ್ರೇಮಿಗಳು, ಮಠದ ಭಕ್ತ-ಶಿಷ್ಯ ವೃಂದದವರು ಇಂಥವಕ್ಕೆ ಕಿವಿಗೊಡದೇ ವಾಸ್ತವದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ, ಸಂಘಟಿತರಾಗಿ ಒಂದೇ ಮನಸ್ಸಿನ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಬೇಕು.’ ಎಂದು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಪತ್ರಿಕಾ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.

Facebook Comments Box