ಗೋಕರ್ಣ. ಜು. ೧೮: ವೈಕುಂಠ ವೆಂದರೆ ಗಮನದ ಕೊನೆ. ಅದನ್ನು ಸೇರಿದ ಮೇಲೆ ಮುಂದೆ ಗತಿಯಿಲ್ಲ. ಸರ್ವಜೀವಿಗಳ ಶಾಶ್ವತಾನಂದದ ಚರಮಲಕ್ಷ್ಯವದು. ಜೀವರು ಸತತಸಾಧನೆಯ ಬಲದಿಂದ ತದೇಕಪ್ರವಣತೆಯಿಂದ ಪಡೆಯಬಹುದಾದ ಪರಮಪದ. ಸುಖದ ಪರ್ಯಾಯವಾದ ಆನಂದದ ಅನ್ವೇಷಣೆಯೇ ನಮ್ಮ ಬದುಕು. ನಮ್ಮ ಮೂಲನೆಲೆಯಾದ ಅದನ್ನು ಪಡೆಯುವವರೆಗೂ ನಮ್ಮ ಹುಡುಕಾಟ, ಚಡಪಡಿಕೆ ತಪ್ಪುವುದಿಲ್ಲ. ಯಾವಾಗ ಬಿಂದುರೂಪರಾದ ನಾವು ಮಹಾಸಿಂಧುಸದೃಶವಾದ ಆ ಭಗವಂತನ ಸಾನ್ನಿಧ್ಯವನ್ನು ಸೇರುತ್ತೇವೋ ಅದೇ ವೈಕುಂಠ ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಅಭಿಪ್ರಾಯಪಟ್ಟರು. ಇಂದು ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾಗಿರುವ ಶ್ರೀರಾಮಕಥೆಯಲ್ಲಿ ಪ್ರವಚನ ನೀಡುತ್ತಿದ್ದ ಪೂಜ್ಯಶ್ರೀಗಳು ಅಲ್ಲಿ ಕ್ಷೀರಸಮುದ್ರವಿದೆ. ಎಂದೂ ಹಾಳಾಗದ ಹುಳಿಯಾಗದ ಮಾತೃವಾತ್ಸಲ್ಯದ ಹಾಲಿನಂತಿರುವ ಪರಮಾತ್ಮನ ಪ್ರೇಮರೂಪವದು.ಆದಿಶೇಷನನ್ನೇ ಹಾಸಿಗೆಯಾಗಿಸಿ ಲೋಕನಿಯಾಮಕ ಪವಡಿಸಿದ್ದಾನೆ ಎನ್ನುತ್ತವೆ ಪುರಾಣಗಳು. ಹೆಡೆಯೆತ್ತಿದ ಆದಿಶೇಷ ಜಾಗೃತಮನಸ್ಸಿನ ಪ್ರತೀಕ. ಅಲ್ಲಿ ಹಾವಿನ ವಿಷದ ಬದಲಾಗಿ ಅಮೃತವಿದೆ. ಹಾವಿನ ಪರಮವೈರಿಯಾದ ಗರುಡನಿದ್ದರೂ ಅವರಲ್ಲಿ ವೈಮನಸ್ಯವೆಂಬುದಿಲ್ಲ.
ಏಕೆಂದರೆ ಅವರ ದೃಷ್ಟಿಯಿರುವುದು ಪರಮಾತ್ಮನ ಮೇಲೆ. ಭಗವತ್ಸಾನ್ನಿಧ್ಯದಲ್ಲಿ ವೈರಕ್ಕೆಡೆಯೇ ಇಲ್ಲ. ನಾವು ಸದಾ ಅರಸುವ ಸಂಪತ್ತಿ ಅಧಿದೇವತೆ ಲಕ್ಷ್ಮಿ ಆ ದೇವನ ರಾಣಿಯಾಗಿ ಸೇವೆಗೆ ಸಮರ್ಪಿಸಿಕೊಂಡಿದ್ದಾಳೆ. ನಾರಾಯಣನಿದ್ದಲ್ಲಿ ಮಾತ್ರ ಅವಳ ನಿತ್ಯವಾಸ. ಅವಳನ್ನು ಬೆನ್ನು ಹತ್ತಿದವರಿಗೆ ಅವಳು ಎಂದೂ ಸಿಗಲಾರಳು. ಆದರೆ ಪರಮಾತ್ಮನನ್ನು ನಮ್ಮೊಳಗೆ ಇಟ್ಟುಕೊಂಡಾಗ ಮಾತ್ರ ಆಕೆಯನ್ನು ಪಡೆಯಬಹುದು. ಇವೆಲ್ಲವೂ ವೈಕುಂಠವೆಂಬ ಲೋಕಕ್ಕೆ ಪ್ರತೀಕಗಳಾಗಿದ್ದರೂ ನಮ್ಮ ಜೀವನದಲ್ಲಿಯೂ ತಾತ್ವಿಕವಾಗಿ ಸಂಗಮಿಸುತ್ತವೆ. ಸತತಸಾಧನೆಯ ಪರಿಪಾಕದಿಂದ ಜಯವಿಜಯರು ವೈಕುಂಠವನ್ನು ಸೇರಿದರೂ ತಮ್ಮ ಪದವಿಯ ಅಹಂಕಾರದಿಂದಾಗಿ ಶಾಪಗ್ರಸ್ತರಾಗಿ ಭೂಮಿಗೆ ಬಂದರು. ಇದು ಅವರ ಜೀವಶುದ್ಧಿಗಾಗಿ ದೋಷಾಪನಯನಕ್ಕಾಗಿ ಮಾತ್ರವಲ್ಲ,ಅವತಾರದ ಮೂಲಕ ಲೋಕೋದ್ಧಾರದ ಸಂಕಲ್ಪವೂ ಹೌದು. ಪರಿಶ್ರಮದಿಂದ ಪಡೆದ ಸ್ಥಾನವನ್ನು ಉಳಿಸಿಕೊಳ್ಳಲೂ ಅರ್ಹತೆ, ಯೋಗ್ಯತೆ ಬೇಕು. ಬದುಕಿನಲ್ಲಿ ಅಹಂಕಾರಕ್ಕೆ ಮದಕ್ಕೆ ಅವಕಾಶ ಕೊಡಬಾರದೆಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದೂ ಶ್ರೀಗಳು ತಿಳಿಸಿದರು. ಡಾ.ಗಜಾನನ ಶರ್ಮಾ ಹಾಗೂ ವಿದ್ವಾನ್ ಜಗದೀಶ ಶರ್ಮಾ ಬಳಗದ ವೈಕುಂಠರೂಪಕ ಶ್ರೀಪಾದ ಭಟ್ಟ, ಶ್ರೀಮತಿ ಪ್ರೇಮಲತಾ ದಿವಾಕರ್, ಸಂಧ್ಯಾ ಭಟ್, ವಿಶ್ವೇಶ್ವರ ಭಟ್, ಇವರ ಗಾಯನದೊಂದಿಗೆ ಗೋಪಾಲಕೃಷ್ಣ ಹೆಗಡೆ, ಜಿ.ಕೆ.ಹೆಗಡೆ, ಶ್ರೀ ಪ್ರಕಾಶ ಇವರ ವಾದ್ಯವಾದನ ಸಂಯೋಜನೆ ಸಭ್ಯರನ್ನು ಮುದಗೊಳಿಸಿತು.
ಇಂದು ಹೊರನಾಡುಕ್ಷೇತ್ರದ ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ದೇವಾಲಯದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಶಿ ಕುಟುಂಬದಿಂದ ಶ್ರೀಗುರುದೇವತಾಸೇವೆಯು ಸಂಪನ್ನವಾಯಿತು. ಶ್ರೀಮಠದ ಗುರುಕುಲಕ್ಕೆ ಅನ್ನದಾನಕ್ಕಾಗಿ ವಿಶೇಷನಿಧಿಯನ್ನು ನೀಡಿದ ಶ್ರೀ ಭೀಮೇಶ್ವರ ಜೋಶಿಯವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಬೆಂಗಳೂರು ವಲಯಗಳಿಂದ ಇಂದಿನ ರಾಮಕಥಾ ಆಯೋಜಿತವಾಗಿತ್ತು.
July 19, 2011 at 9:40 PM
ನಾರಾಯಣನ ರೂಪದ ಮನಮುಟ್ಟುವ ವರ್ಣನೆ..
ಚೆಂದದ ಚಿತ್ರಗಳು..
ಶುದ್ಧ ನಿರೂಪಣೆ ಖುಶಿಕೊಟ್ಟಿತು..
ದಿನವೂ ಬರಲಿ.. ರಾಮ ಕಥೆಯ ಸವಿ ಸಿಗುತಿರಲಿ:):):)
ನಿರೂಪಕರಿಗೆ ಮನದಾಳದ ಧನ್ಯವಾದ…
July 20, 2011 at 12:08 PM
ರಾಮಕಥೆಯ ನಿರೂಪಣೆಗೆ ತುಂಬಾ ಧನ್ಯವಾದಗಳು. ಶ್ರೀಗಳ ರಾಮಕಥೆಯನ್ನು ಪ್ರತ್ಯಕ್ಷವಾಗಿ ಸವಿಯುವುದೊಂದು ಅಪೂರ್ವ ಅನುಭವ. ಈ ವೀಕೆಂಡ್ ಗೆ ಅಶೋಕೆಯಲ್ಲಿ ರಾಮಕಥೆಯನ್ನು ಆಸ್ವಾದಿಸಲು ಕಾತುರನಾಗಿದ್ದೇನೆ.
July 21, 2011 at 6:39 PM
ಹರೇ ರಾಮ ಗುರುಗಳೇ,
ಬೆಂಗಳೂರು ಸರ್ವಜ್ನ ಮತ್ತು ಯಲಹಂಕ ವಲಯದಿಂದ ಚಾತುರ್ಮಾಸ್ಯಕ್ಕೆ ಬಂದಂತ ಎಲ್ಲಾ ನನ್ನ ಬಂಧುಗಳ ಬಾಯಲ್ಲೂ ಗುರುಗಳ ರಾಮಕಥಾದ ನಿರೂಪಣೆಯೇ.ಪ್ರತಿಯೊಬ್ಬರೂ
ತಮ್ಮ ತಮ್ಮ ಜನ್ಮ ಸಾರ್ಥಕವಾಯಿತು,ಎಂಬ ಧನ್ಯತೆಯಲ್ಲಿದ್ದಾರೆ ಗುರುಗಳೇ…
ವೈಕುಂಠದ ದರುಶನ ನಮಗೂ ಅಂತರ್ಜಾಲದ ಚಿತ್ರಪಟದಲ್ಲಾದರೂ ದೊರೆಯಿತು … ಕ್ರತಜ್ಞೆತೆಗಳು ಗುರುಗಳೇ .
August 2, 2011 at 12:02 AM
॥ಹರೇರಾಮ॥
ಗೋ ವನ್ನೂ ಗೋಕರ್ಣ ವನ್ನೂ ಅಪಾತ್ರರ ಬಂಧನದಿಂದ ಮುಕ್ತ ಗೊಳಿಸಿ ಸಪಾತ್ರರಿಗೆ ಒಪ್ಪಿಸುವ ಕಾರ್ಯಕ್ಕಾಗಿಯೇ
ವೈಕುಂಟ ದಂತಹ ಅಶೋಕೆಯಲ್ಲಿ ರಾಘವ ಈಶ್ವರ ಮತ್ತು ಶಂಕರರು ಸನ್ನಿಹಿತವಾಗಿದ್ದಾರೆ. ಬಳಿಯಲ್ಲೇ ವೀರ ಹನುಮ ಮಹದಪ್ಪಣೆಯ ನಿರೀಕ್ಷೆ ಯಲ್ಲಿದ್ದಾನೆ.
ಲಂಕೆಯ ಅಶೋಕ ವನದಲ್ಲಿ ಶೋಕ ತಪ್ತಳಾಗಿ ರಾವಣನ ಅಂಕೆಯಲ್ಲಿದ್ದ ಸೀತಾ ವಿಮೋಚನೆಗಾಗಿ ಶ್ರೀರಾಮ ಹನುಮಾದಿಗಳೊಡನೆ ಪಾದಬೆಳೆಸಿದಂತೆ ಈ ಚಾತುರ್ಮಾಸ್ಯ ವ್ರತಾಚರಣೆಯ ಈ ಗೋ ವರ್ಷದಲ್ಲೆ ಗೋ, ಗೋಕರ್ಣಗಳು
ಬಂಧನ ಮುಕ್ತ ವಾಗಲಿ ಅಲ್ಲವೇ..?
August 3, 2011 at 7:23 AM
ಹರೇ ರಾಮ…