ಗೋಕರ್ಣ.ಮಾ 4. ಗೋಕರ್ಣದ ಸಾಗರತೀರದ ಸಣ್ಣ ಬೇಲೆಯಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ವಿದ್ಯಾನಂದಾಚಾರ್ಯರು ಹಾಗೂ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಚಿದ್ಬೋಧ ಭಾರತೀ ಮಹಾಸ್ವಾಮಿಗಳ ಗುರುಮೂರ್ತಿಗಳ ಪುನಃಪ್ರತಿಷ್ಠಾಮಹೋತ್ಸವವು ಇಂದು ಪ್ರಾತಃಕಾಲ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು. ಶ್ರೀಮದ್ರಾಮಚಂದ್ರಾಪುರಮಠದ ಪ್ರಥಮಪೀಠಾಧೀಶರೂ ಶ್ರೀಮದಾಚಾರ್ಯ ಶಂಕರ ಭಗವತ್ಪಾದರ ಪ್ರಶಿಷ್ಯರೂ ಆಗಿದ್ದ ಶ್ರೀ ಶ್ರೀಮದ್ವಿದ್ಯಾನಂದಾಚಾರ್ಯರ ಹಾಗೂ ಅವರ ಶಿಷ್ಯರೂ ಶ್ರೀಪೀಠದ ದ್ವಿತೀಯ ಪೀಠಾಧೀಶರೂ ಆಗಿದ್ದ ಶ್ರೀ ಶ್ರೀ ಚಿದ್ಬೋಧ ಭಾರತೀ ಮಹಾಸ್ವಾಮಿಗಳು ಇವರ ದಿವ್ಯಸಮಾಧಿ ಸ್ಥಳದಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯವಾದ ಹಾಗೂ ತಾಮ್ರದ ಹೊದಿಕೆಯುಳ್ಳ ಭವ್ಯವಾದ ಕಟ್ಟಡದಲ್ಲಿಂದು ಪ್ರಾತಃಕಾಲ 7-33 ರ ಶುಭಕುಂಭಲಗ್ನದಲ್ಲಿ ಗುರುಮೂರ್ತಿಗಳ ಪ್ರತಿಷ್ಠಾಕಾರ್ಯವನ್ನು ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ ಅಮೃತಹಸ್ತಗಳಿಂದ ನೆರವೇರಿಸಿದರು.
ಶ್ರೀಸುರೇಶ್ವರಾಚಾರ್ಯರಿಂದ ಸನ್ಯಾಸದೀಕ್ಷೆಯನ್ನು ಪಡೆದು ಅವರ ಜ್ಯೇಷ್ಠಶಿಷ್ಯರಾಗಿದ್ದ ಹಾಗೂ ಶ್ರೀಮದಾಚಾರ್ಯ ಶಂಕರ ಭಗವತ್ಪಾದರಲ್ಲಿ ಶಾಸ್ತ್ರಾಭ್ಯಾಸವನ್ನು ಮಾಡಿ ಅತ್ಂತ ಮೇಧಾವಿ ಎಂದು ಖ್ಯಾತರಾಗಿದ್ದ ಶ್ರೀಮದ್ವಿದ್ಯಾನಂದಾಚಾರ್ಯರನ್ನು ಆಚಾರ್ಯ ಶಂಕರಭಗವತ್ಪಾದರು ತಾವು ಗೋಕರ್ಣದ ಸನಿಹದ ಅಶೋಕೆಯಲ್ಲಿ ನೂತನವಾಗಿ ಸಂಸ್ಥಾಪಿಸಿದ ಶ್ರೀ ರಘೂತ್ತಮಮಠಕ್ಕೆ ಪ್ರಥಮ ಪೀಠಾಧಿಪತಿಯನ್ನಾಗಿ ನಿಯಮಿಸಿದ್ದರು. ಅವರ ಶಿಷ್ಯರಾದ ಶ್ರೀ ಚಿದ್ಬೋಧ ಭಾರತೀ ಮಹಾಸ್ವಾಮಿಗಳವರು ಪರಮತಪೋಧನರಾಗಿ ಆಕಾಲದ ಆಳುವ ಅರಸರಿಗೆ ಧರ್ಮಮಾರ್ಗವನ್ನು ಉಪದೇಶಿಸುತ್ತಿದ್ದರೆಂಬುದನ್ನು ಇತಿಹಾಸವು ಉಲ್ಲೇಖಿಸಿದೆ. ಅಂದಿನ ರಘೂತ್ತಮ ಮಠವೇ ಇಂದು ಶ್ರೀಮ್ದ್ರಾಮಚಂದ್ರಾಪುರ ಮಠ ಎಂದು ಪ್ರಸಿದ್ಧವಾಗಿದೆ. ತುಂಬ ಶಿಥಿಲಾವಸ್ಥೆಯಲ್ಲಿದ್ದ ಈ ಸ್ಥಾನವನ್ನು ನವೀಕರಿಸಿ ತಮ್ಮ ಎಲ್ಲ ಸಮಾಜೋನ್ಮುಖಿಯಾದ ಕಾರ್ಯಕ್ರಮಗಳಿಗೆ ಪ್ರೇರಕರಾದ ಈ ಆಚಾರ್ಯದ್ವಯರ ಗುರುಮೂರ್ತಿಗಳನ್ನು ಪುನಃಪ್ರತಿಷ್ಠೆ ಮಾಡಬೇಕೆಂಬ ಈಗಿನ ಪೀಠಾಧೀಶರಾದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರ ಸಂಕಲ್ಪದ ಫಲವಾಗಿ ಈ ಮಹಾಕಾರ್ಯವು ಸಂಯೋಜಿತವಾಗಿತ್ತು.
ಶ್ರೀ ಮಹಾಬಲೇಶ್ವರ ದೇವಾಲಯದ ಪ್ರಧಾನ ಅರ್ಚಕರೂ ಹಾಗೂ ಖ್ಯಾತತಾಂತ್ರಿಕರೂ ಆದ ವೇ.ಶಿತಿಕಂಠ ಭಟ್ಟ ಹಿರೇ ಇವರ ನೇತೃತ್ವದಲ್ಲಿ ಹಾಗೂ ಶ್ರೀ ಮಹಾಬಲ ಉಪಾಧ್ಯ ದಂಪತಿಗಳ ಯಾಜಮಾನ್ಯದಲ್ಲಿ ಎರಡು ದಿನಗಳ ಕಾಲ ನಡೆದ ಈ ಧಾರ್ಮಿಕ ಕಾರ್ಯದಲ್ಲಿ ಶ್ರೀಮಠದ ಭಕ್ತರು ಮತ್ತು ಹವ್ಯಕ ಮಂಡಲದ ಮುಖ್ಯರಾದ ಶ್ರೀ ಎಮ್.ಕೆ.ಹೆಗಡೆ, ನ್ಯಾಯವಾದಿ ಶ್ರೀ ಜಿ.ಜಿ.ಭಟ್ಟ ಹೊನ್ನಾವರ, ಶ್ರೀ ರವಿಶಂಕರ ಭಟ್ಟ, ಶ್ರೀ ಸುಧಾಕರ, ಶ್ರೀ ಮಂಜುನಾಥ ಸುವರ್ಣಗದ್ದೆ ಮತ್ತು ಶ್ರೀ ದೇವಾಲಯದ ಆಡಳಿತಾಧಿಕಾರಿ ಶ್ರೀ.ಜಿ.ಕೆ ಹೆಗಡೆ, ವೇ.ಬಾಲಕೃಷ್ಣ ಭಟ್ಟ ಜಂಭೆ. ವೇ.ಗಣೇಶ ಜಂಭೆ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.
March 8, 2013 at 10:51 PM
ಹರೇ ರಾಮ… 🙂