ಗೋಕರ್ಣ: ಈ ನಮ್ಮ ಜೀವನ ಒಂದು ನದಿಯಂತೆ. ಅದರ ಎರಡು ದಡಗಳೇ ಸೀತಾರಾಮಚಂದ್ರರು, ಪ್ರವಾಹದಲ್ಲಿ ಕೊಚ್ಚಿಹೋಗದಂತೆ, ಮುಳುಗದಂತೆ ನಮ್ಮನ್ನು ರಕ್ಷಿಸುವವರು. ಈ ಎರಡು ದಡಗಳಲ್ಲಿ ಯಾವುದನ್ನು ಆಶ್ರಯಿಸಿದರೂ ನಾವು ಸುರಕ್ಷಿತವಾಗಿ ನಮ್ಮ ಬಾಳಿನ ನೌಕೆಯನ್ನು ಗುರಿಯತ್ತ ಸಾಗಿಸಬಹುದು ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಶ್ರೀಗಳವರು ಅಭಿಪ್ರಾಯಪಟ್ಟರು.

ಇಂದು ಸಮೀಪದ ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾದ ರಾಮಕಥಾದಲ್ಲಿ ಪ್ರವಚನ ನೀಡುತ್ತಿದ್ದ ಪೂಜ್ಯಶ್ರೀಗಳು ರಾಮಾಯಣದ ರಾವಣ ಹಾಗೂ ಕುಂಭಕರ್ಣರ ಜನನವೃತ್ತಾಂತದ ಸಾಂಕೇತಿಕತೆಯನ್ನು, ವಾಲ್ಮೀಕಿಮಹರ್ಷಿಗಳ ಅಂತರ್ದರ್ಶನವನ್ನು ಕುರಿತು ವಿವೇಚಿಸಿ ಸಾತ್ವಿಕಶ್ರೇಷ್ಠನಾದ ವಿಶ್ರವಸ್ಸು ಮತ್ತು ಕೈಕಸಿಯರ ಗರ್ಭದಲ್ಲಿ ರಾವಣನಂತಹ ಲೋಕಕಂಟಕರು ಜನಿಸಲು ಕ್ಯಕಸಿಯ ಮನಸ್ಸಿನ ಹಿಂದೆ ಪ್ರೇರಕವಾಗಿದ್ದ ಆಕೆಯ ತಂದೆ ಸುಮಾಲಿಯ ಮನಸ್ಸೇ ಕಾರಣ. ವಿಷ್ಣುದ್ವೇಷಿಯಾಗಿ ರಾಕ್ಷಸವಂಶದ ಉದ್ಧಾರಕ್ಕಾಗಿ ಪ್ರಯತ್ನಶೀಲನಾದ ಅವನ ಕುಟಿಲತಂತ್ರದ ಫಲವಾಗಿ ರಾವಣ,ಕುಂಭಕರ್ಣರು ಹುಟ್ಟಿದರು. ಆದರೆ ಹುಟ್ಟುವ ಮಕ್ಕಳಸ್ವಭಾವವನ್ನು ತಿಳಿದ ಕೈಕಸಿ ಮನಃಪೂರ್ವಕವಾಗಿ ವಿಶ್ರವಸ್ಸನ್ನು ಉತ್ತಮಸಂತಾನಕ್ಕಾಗಿ ಪ್ರಾರ್ಥಿಸಿದಾಗ ಅವಳ ಪರಿಶುದ್ಧವಾದ ಅಂತರಂಗದ ಫಲವಾಗಿ ವಿಭೀಷಣನಂತಹ ಧರ್ಮಾತ್ಮನಾದ ಭಕ್ತಶಿರೋಮಣಿಯಾದ ಮಗ ಕುಲೋದ್ಧಾರಕನಾಗಿ ಜನಿಸಿದ.ಬದುಕಿನಲ್ಲಿ ಸಾಧನೆ ಅಗತ್ಯ, ಆದರೆ ಆ ಸಾಧನೆಗೆ ಅಸೂಯೆ ಕಾರಣವಾದರೆ ಫಲವೂ ಜೀವವಿರೋಧಿಯೇ ಆಗುತ್ತದೆ ಎಂಬುದಕ್ಕೆ ಲೋಕಪಾಲಕನಾಗಿ ಪುಷ್ಪಕವಿಮಾನವನ್ನೇರಿ ಬಂದ ಕುಬೇರನನ್ನು ಕಂಡು ಮಾತ್ಸರ್ಯದಿಂದ ಅವನನ್ನು ಮೀರಿಸುವಂತೆ ಬೆಳೆಯಬೇಕೆಂದು ತನ್ನಮಕ್ಕಳಿಗೆ ಉಪದೇಶಿಸಿದ ಕೈಕಸಿಯೇ ಉತ್ತಮನಿದರ್ಶನ ಎಂದೂ ನುಡಿದ ಪೂಜ್ಯಶ್ರೀಗಳು. ಸಂಸಾರಸಾಗರದಲ್ಲಿ ಇರುವವರಿಗೆ ಒಂದು ಅವಲಂಬನೆ ಅಗತ್ಯ. ಅದರ ಬಲದಿಂದಲೇ ಎಷ್ಟೋ ಕಷ್ಟನಷ್ಟಗಳನ್ನು ನೋವುಗಳನ್ನು ಸಹಿಸಿಕೊಂಡು ಬದುಕಿನ ನಿರ್ವಹಣೆ ಸಾಧ್ಯ. ಶ್ರದ್ಧೆಯೆಂಬುದು ಒಂದು ದಿವ್ಯವಾದ ಔಷಧ. ನಮ್ಮ ಹೆಚ್ಚಿನ ವೇದನೆಗಳಿಗೆ ಆ ಶ್ರದ್ಧೆಯೇ ಪರಿಹಾರವನ್ನು ನೀಡುತ್ತದೆ. ಆದರೆ ನಮಗೆ ಅತ್ಯಾಪ್ತನಾದ ಭಗವಂತನ ಸ್ಮರಣೆಯಾಗುವುದು ವಿಪತ್ತುಬಂದಾಗ ಮಾತ್ರ. ಸಂಕಟಬಂದಾಗ ಮಾತ್ರ ವೆಂಕಟರಮಣನ ನೆನಪಾಗದೆ ಸದಾ ಆ ಪರಮಾತ್ಮನ ನೆನಪಿನಲ್ಲಿದ್ದರೆ ಯಾವಸಂಕಷ್ಟವೂ ನಮ್ಮನ್ನು ಬಾಧಿಸದು ಎಂದು ಉಪದೇಶಿದರು.

ಶ್ರೀ ಶ್ರೀಪಾದ ಭಟ್ಟ, ವಿಶ್ವೇಶ್ವರ ಭಟ್ಟ, ಸಂದ್ಯಾ ಭಟ್ಟ, ಶಂಭು ಭಟ್ಟ ಪ್ರೇಮಲತಾ ದಿವಾಕರ ಇವರ ತುಂಬುಕಂಠದ ಗಾಯನ, ಗೋಪಾಲಕೃಷ್ಣ ಹೆಗಡೆ ಮತ್ತು ಪ್ರಕಾಶ್ ರವರ ತಬಲಾ-ಕೊಳಲು ಜುಗಲ್ ಬಂದಿ, ನೀರ್ನಳ್ಳಿ ಗಣಪತಿಯವರ ಆಶುಚಿತ್ರಗಳು ಕಾರ್ಯಕ್ರಮಕ್ಕೆ ಸೊಗಸು ನೀಡಿದವು. ವಿದ್ವಾನ್ ಜಗದೀಶ ಶರ್ಮಾ ನಿರ್ದೇಶನದಲ್ಲಿ ನಡೆದ ಶ್ರೀ ವಿಶ್ವೇಶ್ವರ ಭಟ್ಟ ಹಾಗೂ ತಂಡದ ನೃತ್ಯವು ಶ್ರೋತೃ ಪ್ರೇಕ್ಷಕರನ್ನು ರಂಜಿಸಿತು. ಚಾತುರ್ಮಾಸ್ಯದ ನಿಮಿತ್ತ ಸಾಗರಮಂಡಲದ ಸಾಗರ ಪೂರ್ವ, ಪಶ್ಚಿಮ ವಲಯಗಳ ಮತ್ತು ಆವಿನಹಳ್ಳಿವಲಯಗಳ ಶ್ರೀಗುರುದೇವತಾಸೇವೆ, ಮಡಿವಾಳ ಸಮಾಜದಶಿಷ್ಯರ ಶ್ರೀಗುರುಪಾದುಕಾಪೂಜೆಗಳು ಸಂಪನ್ನಗೊಂಡವು. ಧರ್ಮಸಭೆಯಲ್ಲಿ ಬಸವಕಲ್ಯಾಣದ ಶ್ರೀ ಸಂಗನಬಸವ ಸ್ವಾಮಿಗಳು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಮಠದ ಸಮಾಜೋನ್ಮುಖಿಯಾದ ವಿವಿಧ ಯೋಜನೆಗಳಿಗೆ ಶಿಷ್ಸಮುದಾಯದ ದೇಣಿಗೆಯಸಮರ್ಪಣೆ, ವಿದ್ಯಾಬಂಧು ಯೋಜನೆಯಡಿ ಪ್ರತಿಭಾಪುರಸ್ಕಾರಗಳು ನಡೆದವು. ಪೂಜ್ಯ ಶ್ರೀ ಶ್ರೀಗಳವರು ಧರ್ಮಸಭೆಯಲ್ಲಿ ಆಶೀರ್ವಚನ ಮಂತ್ರಾಕ್ಷತೆಗಳನ್ನುಅನುಗ್ರಹಿಸಿದರು.

Facebook Comments Box