ಹರೇ ರಾಮ
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಮಹಾಸಂಸ್ಥಾನಮ್ – ಶ್ರೀರಾಮಚಂದ್ರಾಪುರಮಠ
ವಿದ್ಯಾ ವಿಭಾಗ
ಗಿರಿನಗರದ ಶ್ರೀರಾಮಾಶ್ರಮದಲ್ಲಿ ಮಾರ್ಚ್ 20, 2016 ಭಾನುವಾರದಂದು ಮಧ್ಯಾಹ್ನ 12.30 ಗಂಟೆಗೆ ಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಹಿಂದುಳಿದ ಪರಿಶಿಷ್ಠ ಜಾತಿಗೆ ಸೇರಿದ ಮುಕ್ರಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದೆ.
 ಮುಕ್ರಿ ಸಮಾಜವು ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಮುಖವಾಗಿ ವಾಸವಾಗಿರುವ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಮುಕ್ರಿ ಸಮಾಜದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿ; ಆ ಮೂಲಕ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವ ದಿಶೆಯಲ್ಲಿ ಶ್ರೀರಾಮಚಂದ್ರಾಪುರಮಠದ ವಿದ್ಯಾ ವಿಭಾಗದಿಂದ ಈ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತಿದ್ದು, ಈ ವರ್ಷ ಎಸ್.ಎಸ್.ಎಲ್.ಸಿ,  ಪಿ.ಯು.ಸಿ,  ಬಿ.ಎ.,  ಬಿ.ಕಾಂ.,  ಐ.ಟಿ.ಐ.,  ನರ್ಸಿಂಗ್,  ಎಮ್.ಕಾಮ್,  ಎಮ್.ಎ ವ್ಯಾಸಂಗ ಮಾಡುತ್ತಿರುವ ಮುಕ್ರಿ ಸಮಾಜದ 63 ವಿದ್ಯಾರ್ಥಿಗಳಿಗೆ  ಒಟ್ಟು ರೂ. 2,75,000/- ರೂಗಳ ವಿದ್ಯಾರ್ಥಿವೇತನವನ್ನು ವಿತರಿಸಲಾಗುತ್ತಿದೆ.
ಆದಿಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀರಾಮಚಂದ್ರಾಪುರಮಠವು ಶತಮಾನಗಳಿಂದಲೂ ಜ್ಞಾನದಾನವನ್ನು ಮಾಡುತ್ತಿದೆ. ಶ್ರೀಮಠದ ಉಚಿತ ವೇದಪಾಠಶಾಲೆಗಳಲ್ಲಿ ಸಾವಿರಾರು ಜನ ಕಲಿತಿದ್ದು,  ಹೊಸನಗರದ ಶ್ರೀಭಾರತೀ ಗುರುಕುಲದಲ್ಲಿ ಉಚಿತವಾಗಿ ವೇದ, ಸಂಸ್ಕೃತ ಮತ್ತು ಆಧುನಿಕ ವಿದ್ಯಾಭ್ಯಾಸವನ್ನು ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ನೀಡುತ್ತಿದೆ.
ಶ್ರೀರಾಮಚಂದ್ರಾಪುರಮಠದ ವತಿಯಿಂದ ಇಮಾಮಿ ಫೌಂಡೇಷನ್ ಮುಂತಾದ ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಯಾವುದೇ ಜಾತಿ ಧರ್ಮಗಳ ತಾರತಮ್ಯವಿಲ್ಲದೇ ಗೋಕರ್ಣ ಸುತ್ತಮುತ್ತಲಿನ ಬಡ ವಿದ್ಯಾರ್ಥಿಗಳಿಗೆ “ಸಾರ್ವಭೌಮ ವಿದ್ಯಾರ್ಥಿವೇತನ”ವನ್ನು ವಿತರಿಸಲಾಗುತ್ತಿದ್ದು, 2014-15 ರಲ್ಲಿ ಗೋಕರ್ಣ ಸುತ್ತಮುತ್ತಲಿನ 5 ಹಳ್ಳಿಗಳ ಎಲ್ಲಾ ಸಮಾಜದ 247 ವಿದ್ಯಾರ್ಥಿಗಳಿಗೆ ರೂ. 14,50,000/- ಗಳನ್ನು, 2015-16 ಸಾಲಿನಲ್ಲಿ ಗೋಕರ್ಣ ಸುತ್ತಲಿನ 8 ಹಳ್ಳಿಗಳ ಎಲ್ಲಾ ಸಮಾಜದ 649 ವಿದ್ಯಾರ್ಥಿಗಳಿಗೆ ರೂ. 19,41,000/- ರೂಗಳ ಸಾರ್ವಭೌಮ ವಿದ್ಯಾರ್ಥಿವೇತನ ವಿತರಿಸಿರುವುದನ್ನು ನಾವಿಲ್ಲಿ ಸ್ಮರಿಸಬಹುದು.
ಶ್ರೀರಾಮಚಂದ್ರಾಪುರಮಠವು ಹಳ್ಳಿಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ನೀಡುತ್ತಿದ್ದು, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಶ್ರೀಮಠದ ಶಾಲೆಗಳಲ್ಲಿ ಸೆಟಲೈಟ್ ಶಿಕ್ಷಣ, ಕಂಪೂಟರ್ ಶಿಕ್ಷಣ, ಆಂಗ್ಲಭಾಷಾ ಶಿಕ್ಷಣ, ಪರಿಸರ ಜಾಗೃತಿ, ಸಂಸ್ಕೃತಿ ಸಂಸ್ಕಾರದ ಜೊತೆಗಿರುವ ಶಿಕ್ಷಣವನ್ನು ಒದಗಿಸುತ್ತಿದೆ. ಈ ಶಾಲೆಗಳು ಕರ್ನಾಟಕ ಮತ್ತು ಕೇರಳದ ಭಾಗದಲಿದ್ದು,ಗುಂಬಿ ಸಾಫ್ಟ್‍ವೇರ್, ಸಿದ್ದಾಂತ ಫೌಂಡೇಷನ್ ಚೆನ್ನೈ ಮುಂತಾದ ಸಂಸ್ಥೆಗಳ ಸಹಕಾರದೊಂದಿಗೆ ಶ್ರೀಮಠದ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಲಾಗುತ್ತಿದೆ.
ಡಾ|| ಶಾರದಾ ಜಯಗೋವಿಂದ್,
ಶ್ರೀಸಂಸ್ಥಾನದವರ ವಿದ್ಯಾ ವಿಭಾಗದ ಕಾರ್ಯದರ್ಶಿ,
ಶ್ರೀರಾಮಚಂದ್ರಾಪುರಮಠ.
Invitation

Invitation

Facebook Comments Box