ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂಘಟನಾ ಚಾತುರ್ಮಾಸ್ಯದಲ್ಲಿ ಅನುಗ್ರಹಿಸುತ್ತಿರುವ ಪ್ರವಚನದ ಅಕ್ಷರರೂಪ.
ಆದ್ಯ ರಘೂತ್ತಮ ಮಠಕ್ಕೂ ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನಕ್ಕೂ ಇದ್ದ ಅವಿನಾಭಾವ ಸಂಬಂಧವೇನು ಗೊತ್ತೇ?
ಗೋಕರ್ಣದ ಉಪಾಧಿವಂತರ ವಂಶದಲ್ಲಿ ಹುಟ್ಟಿದವರೆಲ್ಲರೂ ಪುಣ್ಯವಂತರು. ಮಹಾಬಲೇಶ್ವರನ ಪೂಜೆಯ ಅವಕಾಶ ಪ್ರಾಪ್ತವಾಗಬೇಕಾದರೆ ಜನ್ಮ ಜನ್ಮಾಂತರದ ಮಹಾಪುಣ್ಯವೇ ಬೇಕು. ರಾವಣನು ಘನಘೋರ ತಪಸ್ಸನ್ನು ಮಾಡಿ ಪ್ರಾಪ್ತವಾಗಿರುವಂತದ್ದು – ಆತ್ಮಲಿಂಗ. ಅದನ್ನು ಉಳಿಸಿಕೊಳ್ಳಲು ರಾವಣನಿಗೆ ಸಾಧ್ಯವಾಗಲಿಲ್ಲ. ಅಂದರೆ ರಾವಣನ ಪುಣ್ಯ ಸಾಕಾಗಲಿಲ್ಲ. ಅಂತಹ ಮಹಾಸಾನ್ನಿಧ್ಯ ಮಹಾಬಲೇಶ್ವರ ಮತ್ತು ಆತ್ಮಲಿಂಗ. ಘೋರ ತಪವ ಮಾಡಿ ಆತ್ಮಲಿಂಗವ ಪಡೆದ ರಾವಣನಿಗೆ ಒದಗದ ಮಹಾಬಲೇಶ್ವರನ ಪೂಜಾ ಕೈಂಕರ್ಯದ ಭಾಗ್ಯ ಈಶ್ವರನ ವಿಶೇಷ ಅನುಗ್ರಹದಿಂದ ಗೋಕರ್ಣದ ಉಪಾಧಿವಂತರಿಗೆ ತಲೆಮಾರುಗಳಿಂದ ಒದಗಿದೆ. ಅದು ಹೀಗೆ ನಿರ್ವಿಘ್ನವಾಗಿ ಮುಂದಿನ ತಲೆಮಾರು-ತಲೆಮಾರಿಗೂ ಮುಂದುವರೆಯಬೇಕೆಂಬ ಪ್ರಾರ್ಥನೆ ಶ್ರೀಸಂಸ್ಥಾನದ್ದು.
ಮಠಕ್ಕೂ ಮತ್ತು ಶ್ರೀಕ್ಷೇತ್ರಕ್ಕೂ ಬಹಳ ದೀರ್ಘವಾದ ಮತ್ತು ದೊಡ್ಡ ಬಾಂಧವ್ಯವಿದೆ. ಸಹಸ್ರಾರು ವರ್ಷಗಳ ಹಿಂದೆ ಶಂಕರಾಚಾರ್ಯರು ಮಠವನ್ನು ಇಲ್ಲಿ ಸಂಸ್ಥಾಪನೆ ಮಾಡಿದರು. ಈ ಇಡೀ ದೇಶದಲ್ಲಿ ಎಲ್ಲಿಯೂ ಶಂಕರಾಚಾರ್ಯರು ಮೂರು ಬಾರಿ ಸಂಚಾರ ಮಾಡಿದ್ದಿಲ್ಲ. ಆದರೆ ಗೋಕರ್ಣಕ್ಕೆ ಮಾತ್ರ ಮೂರು ಬಾರಿ ಪಾದಸ್ಪರ್ಶ ಮಾಡಿದ್ದಾರೆ ಎಂಬುದೇ ನಮಗೆ ಹೆಮ್ಮೆಯ ಸಂಗತಿ. ಅವರು ಗೋಕರ್ಣದಲ್ಲಿ ನೀಲಕಂಠ ಪಂಡಿತರ ಜೊತೆಗೆ ವಾಕ್ಯಾರ್ಥಮಾಡಿ ಅವರನ್ನು ಪರಾಭವಗೊಳಿಸುತ್ತಾರೆ, ತಿಂಗಳುಗಳ ಕಾಲ ತಪಸ್ಸನ್ನು ಮಾಡಿದ್ದಾರೆ ಎಂಬುದಾಗಿ ಪರಂಪರೆ ತಿಳಿಸುತ್ತದೆ. ಅವರು ರಾಮಚಂದ್ರಾಪುರ ಮಠವನ್ನು ಸ್ಥಾಪಿಸಿ ಎರಡು ಹೊಣೆಗಾರಿಕೆ ನೀಡುತ್ತಾರೆ. ಒಂದು – ಗೋಕರ್ಣ ಮಂಡಲಾಚಾರ್ಯತ್ವ, ಇನ್ನೊಂದು “ಮಹಾಬಲಸ್ಯ ಲಿಂಗಸ್ಯ ನಿತ್ಯಂ ವಿಧಿವದರ್ಚನಂ” – ಗುರುಪೀಠದ ಶಿಷ್ಯ ಪರಂಪರೆ ವಿಧಿವತ್ತಾಗಿ ಮಹಾಬಲೇಶ್ವರನ ಪೂಜೆಯನ್ನು ನಿರಂತರವಾಗಿ ನಡೆಸಬೇಕು ಎಂದು! ಸಾವಿರ ವರ್ಷಗಳ ಹಿಂದೆ ಶಂಕರಾಚಾರ್ಯರು ಗುರುಪೀಠಕ್ಕೆ ಮಾಡಿದ ಆದೇಶ. ನಮ್ಮ ಪರಂಪರೆಯಲ್ಲಿ ಪೀಠದಲ್ಲಿ ಒಬ್ಬರೇ ಪೀಠಾಧಿಪತಿಗಳು ಎಂದು ತಿಳಿದಿದ್ದೆವು, ಮಠದ ದಾಖಲೆಗಳನ್ನು ಪರಿಶೀಲಿಸಿದರೆ ಈ ಹಿಂದೆ ಒಂದಕ್ಕಿಂತ ಹೆಚ್ಚು ಪೀಠಾಧಿಪತಿಗಳು ಇರುವ ದಾಖಲೆಗಳು ದೊರಕುತ್ತದೆ. ಮಹಾಬಲೇಶ್ವರನ ಪಶ್ಚಿಮ ಭಾಗದಲ್ಲಿ ಮಠ ಇತ್ತು, ಅಲ್ಲಿ ಗುರುಗಳು ಇರುತ್ತಿದ್ದರು. ಒಬ್ಬರು ಮೂಲಮಠದ ಉಸ್ತುವಾರಿಯನ್ನು ನೋಡುತ್ತಿದ್ದರು ಮತ್ತು ಇನ್ನೊಬ್ಬರು ಮಹಾಬಲೇಶ್ವರನ ಪೂಜೆ ಮತ್ತು ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಇದು ಪುರಾತನ ಕಾಲದಿಂದ ಮಠಕ್ಕೂ ಮತ್ತು ದೇವಸ್ಥಾನಕ್ಕೂ ಇರುವ ಬಾಂಧವ್ಯವನ್ನು ಸೂಚಿಸುತ್ತದೆ. ಇದು ಮೊದಲು “ಆದ್ಯ ರಘೂತ್ತಮ ಮಠ” ಎಂಬ ಹೆಸರಿನಲ್ಲಿ ಸ್ಥಾಪನೆ ಆಗಿರುವಂತದ್ದು. ಹನ್ನೆರಡನೇ ಪೀಠಾಧಿಪತಿಗಳು ಹೊಸನಗರದ ಒಂದು ಹಳ್ಳಿ, ರಾಮಚಂದ್ರಾಪುರಕ್ಕೆ ಹೋಗಿ ಅಲ್ಲಿ ಮಠವನ್ನು ಸ್ಥಾಪನೆ ಮಾಡಿದರು. ಅವರ ಹೆಸರು ಶ್ರೀರಾಮಚಂದ್ರಭಾರತಿಗಳು, ಆ ಹಳ್ಳಿಯೂ ರಾಮಚಂದ್ರಾಪುರ, ಪೂಜೆ ಮಾಡುವ ದೇವರು ರಾಮಚಂದ್ರ. ಹೀಗಾಗಿ ರಾಮಚಂದ್ರಾಪುರ ಮಠ ಎಂದಾಯಿತು. ಮೂಲತಃ ಇಲ್ಲಿ ಸ್ಥಾಪನೆ ಆಗಿದ್ದು ಆದ್ಯ ರಘೂತ್ತಮ ಮಠ. ಆದ್ಯ ರಘೂತ್ತಮ ಮಠ ದೇವಸ್ಥಾನದ ಜೊತೆ ಅವಿನಾಭಾವ ಬಾಂಧವ್ಯವನ್ನು ಹೊಂದಿತ್ತು. ಈ ಕಾರಣಕ್ಕಾಗಿ ಎರಡೂ ಕಡೆ ಶ್ರೀಸಂಸ್ಥಾನ ಎಂಬ ಹೆಸರು ಬಂದಿದ್ದು. ಅದಲ್ಲದೆ ಅನೇಕ ಉಪಾಧಿವಂತರನ್ನು, ಅರ್ಚಕರನ್ನು ಕರೆತಂದದ್ದು ಗುರುಪೀಠ ಎಂಬ ದಾಖಲೆಗಳಿವೆ. ಇಂತಹದ್ದೊಂದು ಬಾಂಧವ್ಯ ಇಂದು ನಿನ್ನೆಯದ್ದಲ್ಲ, ಅನಾದಿ ಕಾಲದಿಂದ ಬಂದಿದ್ದು. ಹಾಗಾಗಿಯೇ ಉಪಾಧಿವಂತರ ಸಂಕಷ್ಟಕ್ಕೆ ಸ್ಪಂದಿಸಲು ಈ ಪೀಠ ಸದಾ ಬದ್ಧ. ಮಹಾಬಲೇಶ್ವರನ ಪೂಜಾ ಕೈಂಕರ್ಯವನ್ನು ನೋಡಿಕೊಳ್ಳುವ ಹೊಣೆ ಹೇಗೆ ಶ್ರೀಮಠದ್ದೋ ಹಾಗೆಯೇ ಮಹಾಬಲೇಶ್ವರನ ಪಾದ ಸೇವೆ ಮಾಡುವ ಉಪಾಧಿವಂತರನ್ನು ಉಳಿಸುವ ಅವರ ಸೇವಾವಕಾಶವನ್ನು ರಕ್ಷಣೆ ಮಾಡುವ ಹೊಣೆಗಾರಿಕೆ ಶ್ರೀಮಠದ್ದು. ಉಪಾಧಿವಂತರು ಯಾವುದೇ ಸಂದರ್ಭದಲ್ಲೂ ಯಾವುದೇ ಬಗೆಯ ಕ್ಲೇಶಗಳು ಉಂಟಾದಾಗ ಮಠವನ್ನು ಆಶ್ರಯಿಸಬಹುದು. ಇಲ್ಲಿಂದ ಅವರಿಗೆ ಆಶ್ರಯ, ಆಶೀರ್ವಾದ ಮತ್ತು ಮಾರ್ಗದರ್ಶನಗಳು ಪ್ರಾಪ್ತವಾಗುತ್ತದೆ. ಅದೇ ರೀತಿ ಮಠದೊಂದಿಗೆ ಉಪಾಧಿವಂತರು ಕೂಡ ಅದೇ ಪ್ರೀತಿ ಮತ್ತು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಮಹಾಬಲೇಶ್ವರನ ಕೈಂಕರ್ಯವನ್ನು ಮತ್ತೆ ಮಠಕ್ಕೆ ತಂದು ಕೊಡುವಂತ ಸೇವೆ ಉಪಾಧಿವಂತರಿಂದ ಆಗಿದೆ, ಇದು ಸಣ್ಣ ಸೇವೆಯಲ್ಲ. ಆದ್ದರಿಂದ ಮಹಾಬಲೇಶ್ವರನನ್ನು ಮಠಕ್ಕೆ ಜೋಡಿಸಿದ ಶ್ರೇಯಸ್ಸು ಉಪಾಧಿವಂತ ಮತ್ತು ಅವರ ಮಂಡಲಕ್ಕೆ ಸಲ್ಲುತ್ತದೆ. ಅಲ್ಲಿಂದ ಇಲ್ಲಿವರೆಗೆ ಉಪಾಧಿವಂತರು ಎಲ್ಲಾ ಸಂದರ್ಭದಲ್ಲೂ ಮಠದ ಜೊತೆ ನಿಂತಿದ್ದಾರೆ. ತಮ್ಮ ಒಲವು – ನಿಲುವು ಮಠದ ಕಡೆಗೆ ಇದ್ದು, ಅಚಲವಾದ ನಿಷ್ಠೆಯನ್ನು ಇರಿಸಿಕೊಂಡಿದ್ದಾರೆ. ಕಳೆದ ವರ್ಷ ಚಾತುರ್ಮಾಸ್ಯದಲ್ಲಿ ಹತ್ತು-ಹಲವಾರು ಹೋಮ-ಹವನ, ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪ್ರತಿನಿತ್ಯ ಬಂದು ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಈಗಲೂ ಸಹ ಅನೇಕ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಎಲ್ಲಿ ಬೇಕಾದರೂ ಸ್ಥಾಪಿಸಬಹುದಿತ್ತು. ಹೊಸನಗರದಲ್ಲಿ ಸ್ಥಾಪಿಸುವುದಾದರೆ ಎಲ್ಲಾ ರೀತಿಯ ಅನುಕೂಲಗಳಿದ್ದವು. ಆದರೂ ನಾವು ಇಲ್ಲಿಯೇ ಸ್ಥಾಪಿಸಿದ ಉದ್ದೇಶವೇನೆಂದರೆ ನಮ್ಮ ಮೂಲಸ್ಥಾನ ಇದು. ನಾವು ಇಲ್ಲಿಗೆ ಬಂದು ಕಾರ್ಯ ಆರಂಭ ಮಾಡುವಾಗ ಮಲ್ಲಿಕಾರ್ಜುನ ದೇವಸ್ಥಾನ ತಕ್ಕ ಮಟ್ಟಿಗೆ ನಿರ್ಮಾಣವಾಗಿತ್ತು. ಇಲ್ಲಿಯ ಕ್ಷೇತ್ರಕ್ಕೆ ಹಿನ್ನೆಲೆ ಬೇಕು, ಮೂಲ ಮಠ ನೆಪಮಾತ್ರಕ್ಕೆ ಆಗದೆ ಇಲ್ಲಿಯೇ ಊರ್ಜಿತವಾಗಬೇಕು ಎಂಬ ಕಾರಣಕ್ಕೆ ಇಲ್ಲಿಗೆ ಬಂದು ಅಪರೂಪದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪಿಸಿರುವಂತದ್ದು. ಇಲ್ಲಿ ವಿಶ್ವವಿದ್ಯಾಲಯ ಕೂಡ ಆಗುತ್ತಿದೆ. ಇದನ್ನು ಸ್ಥಾಪಿಸುವಾಗ ಒಂದು ಕಾರಣವೇನಿತ್ತೆಂದರೆ “ಗೋಕರ್ಣದ ಉಪಾಧಿವಂತರ ಮಕ್ಕಳ ಬಾಳು ಬೆಳಕಾಗಬೇಕು”. ಇಲ್ಲಿ ಅಗ್ನಿಹೋತ್ರಗಳು ನಡೆಯುತ್ತಿತ್ತು. ‘ವಿದ್ಯೆಯ ಕಾಶಿ’ ಎಂದು ಹೇಳಲ್ಪಟ್ಟ ಊರು ಗೋಕರ್ಣ. ಒಂದು ಕಾಲದಲ್ಲಿ ವಿದ್ಯೆ ಕಲಿಯಬೇಕೆಂದರೆ ಜನರು ಇಲ್ಲಿಗೆ ಬರುತ್ತಿದ್ದರು. ಧರ್ಮಜಿಜ್ಞಾಸೆ ಬಂದರೆ ಗೋಕರ್ಣದಿಂದ ಪರಿಹಾರ ಪ್ರಾಪ್ತವಾಗುತ್ತಿದ್ದವು. ಮುಂದೆ ಕೂಡ ಪಂಡಿತ ತಲೆಮಾರು ಮುಂದುವರಿಯಬೇಕೆಂಬ ಒಂದು ಉದ್ದೇಶ. ಗೋಕರ್ಣದ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ಬಂದು ಪಾಂಡಿತ್ಯವನ್ನು ಸಂಪಾದನೆ ಮಾಡಿ, ಆಗಮದಲ್ಲಿ, ಧರ್ಮಶಾಸ್ತ್ರದಲ್ಲಿ, ವೇದಗಳಲ್ಲಿ, ಆಧುನಿಕ ವಿದ್ಯೆಗಳಲ್ಲೂ ಕೂಡ ಪರಿಣತಿಯನ್ನು ಸಂಪಾದನೆ ಮಾಡಿ ಗೋಕರ್ಣದ ಕೀರ್ತಿಯನ್ನು ವಿಸ್ತರಿಸಬೇಕು. ಗೋಕರ್ಣದ ಪರಂಪರೆಯನ್ನು ಮುಂದುವರಿಸಬೇಕು. ಅದಕ್ಕಾಗಿ ಈ ಒಂದು ಮಹಾಪ್ರಯತ್ನ. ಒಂದು ಕಾಲದಲ್ಲಿ ಉಪಾಧಿವಂತರೆಲ್ಲಾ ಇದ್ದಿದ್ದು ಇಲ್ಲಿಯೇ, ಈ ಭೂಮಿ ಉಪಾಧಿವಂತರಿಗೆ ಸಂಬಂಧಪಟ್ಟಿದ್ದು. ಇಲ್ಲಿ ಬಹು ದೊಡ್ಡ ಅಗ್ರಹಾರ ಇದ್ದಿದ್ದು ಈಗ ಇತಿಹಾಸ. ಹಾಗಾಗಿ ಮತ್ತೆ ಇಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮತ್ತು ಮೂಲಮಠ ಚಿಗುರಿ ನೆರಳನ್ನು, ತಂಪನ್ನು ನೀಡಲಿರುವುದು. ಇಂದು ಗೋಕರ್ಣಕ್ಕೂ ಮತ್ತು ಮಠಕ್ಕೂ ಇರುವ ಈ ಮಟ್ಟದ ಬಾಂಧವ್ಯ ಈ ಹಿಂದಿನ ಕೆಲವು ತಲೆಮಾರುಗಳಲ್ಲಿ ಎಂದೂ ಇರಲಿಲ್ಲ. ಮತ್ತು ಇಂದು ತುಂಬಾ ಉತ್ತಮ ಮಟ್ಟದ ಬಾಂಧವ್ಯ ಶ್ರೀಮಠಕ್ಕೂ ಮತ್ತು ಉಪಾಧಿವಂತರಿಗೂ ಇದೆ. ಉಪಾಧಿವಂತರಿಗೂ ಮತ್ತು ಎಲ್ಲರಿಗೂ ನಿರತಿಶಯವಾದ ಶ್ರೇಯಸ್ಸನ್ನು ಮಹಾಬಲೇಶ್ವರ ಮತ್ತು ಗುರುಸ್ಥಾನ ನೀಡಲಿ.
Leave a Reply