ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂಘಟನಾ ಚಾತುರ್ಮಾಸ್ಯದಲ್ಲಿ ಅನುಗ್ರಹಿಸುತ್ತಿರುವ ಪ್ರವಚನದ ಅಕ್ಷರರೂಪ.
ದಕ್ಷಿಣ ಕನ್ನಡದ ಒಬ್ಬರ ಪ್ರಶ್ನೆ ಹೀಗಿದೆ..
ಪರಸ್ಪರ ಭೇಟಿಯಾದಾಗ, ಶಿಷ್ಟಾಚಾರಗಳು ನಮ್ಮಲ್ಲಿ ಮತ್ತು ಪಾಶ್ಚಾತ್ಯರಲ್ಲಿ ಬೇರೆ ಬೇರೆ ರೀತಿಯಿದೆ. ನಾವು ಪರಸ್ಪರ ಭೇಟಿಯಾದಾಗ ‘ನಮಸ್ತೇ’ ಎಂದು ಹೇಳಿ, ಹೃದಯದ ಮುಂದೆ ಎರಡೂ ಕೈಗಳನ್ನು ಜೋಡಿಸಿ, ಕೊಂಚ ಮುಂದೆ ಬಾಗುತ್ತೇವೆ. ಆದರೆ ಪಾಶ್ಚಾತ್ಯರು ಕೈ ಕುಲುಕುತ್ತಾ, ಹಾಯ್! ಹಲೋ! ಹೌ ಡು ಯು ಡು? ಎಂಬುದಾಗಿ ಮಾತನಾಡಿಸುತ್ತಾರೆ. ಈ ಎರಡರಲ್ಲಿ ಯಾವುದು ಸರಿ? ಯಾವುದನ್ನು ಅನುಸರಿಸಬೇಕು?
ಹೌದು.. ಬಹಳ ಭಿನ್ನವಾಗಿದೆ. ಮುಖ್ಯವಾದ, ಎದ್ದು ಕಾಣುವ ಭಿನ್ನತೆ ಎಂದರೆ, ಸ್ಪರ್ಶ. ಭಾರತೀಯರ ನಮಸ್ಕಾರ ಮಾಡುವ ಕ್ರಮದಲ್ಲಿ ಸ್ಪರ್ಶ ಇಲ್ಲ. ಆದರೆ ಪಾಶ್ಚಾತ್ಯರು ಭೇಟಿಯಾದಾಗ ಏನು ಶಿಷ್ಟಾಚಾರ ಪಾಲನೆ ಮಾಡ್ತಾರೋ ಕೈ ಕುಲುಕುವುದು, ಸ್ಪರ್ಶವೇ ಮುಖ್ಯ. ಅದು ಈಗ ಕೇವಲ ಅವರ ಪದ್ಧತಿಯಲ್ಲಿ ಒಂದೇ ಅಲ್ಲದೇ, ನಮ್ಮಲ್ಲಿಯೂ ಬಂದಿದೆ. ಕೇವಲ ಮನುಷ್ಯರಲ್ಲ, ಒಂದು ಚಿಕ್ಕ ನಾಯಿಮರಿಗೂ ಸಣ್ಣ ಮರಿಯಿರುವಾಗಿನಿಂದಲೇ ಬೇರೇನೂ ಕಲಿಸದಿದ್ದರೂ ಕೈ ಕುಲುಕುವುದನ್ನು, ಶೇಕ್ ಹ್ಯಾಂಡ್ ಮಾಡುವುದನ್ನು ಕಲಿಸುತ್ತೇವೆ ನಾವು. ಅಷ್ಟರ ಮಟ್ಟಿಗೆ ಚಾಲ್ತಿಗೆ ಬಂದಿರುವುದು. ನಮಸ್ತೆಯೇ ಕಡಿಮೆಯಾಗಿದೆ. ಹಾಗಾಗಿಯೇ ಅದು ಹೇಗೆ ಸರಿ? ಇದು ಹೇಗೆ ಸರಿ? ಎಂಬುದು ಅವರ ಜಿಜ್ಞಾಸೆ.

‘ಸ್ಪರ್ಶ’ ಎಂಬುದು ನಮಗೆ ಗೊತ್ತಿಲ್ಲದಿರುವ ವಿಷಯವೇನಲ್ಲ. ಎಲ್ಲರಿಗೂ ಗೊತ್ತಿರಬೇಕಾದ, ಗೊತ್ತಿರುವ, ಅಧ್ಯಯನದ ವಿಷಯ ಅದು. ನಾವೆಲ್ಲ ಏನನ್ನು ತಿಳಿದಿರಬೇಕು, ಕಲಿಯಬೇಕು ಎಂದರೆ, ಮೊದಲು ನಮ್ಮ ಬಗ್ಗೆ ತಿಳಿದಿರಬೇಕು, ನಮ್ಮ ಮನಸ್ಸು, ದೇಹ, ಇಂದ್ರಿಯಗಳು, ಬದುಕಿನ ಬಗ್ಗೆ ತಿಳಿದಿರಬೇಕು, ಆಮೇಲೆ ಜಗತ್ತಿನ ಬಗ್ಗೆ ಕಲಿಯಲೇಬೇಕು. ಹಾಗೆಯೇ ನಮ್ಮೊಳಗೆ ಬೆಳಗುವ ಪರಮಾತ್ಮನನ್ನು ನಾವು ತಿಳಿದುಕೊಳ್ಳಬೇಕು, ಕಾಣಬೇಕು. ಅದು ಕಟ್ಟಕಡೆಯ ಲಕ್ಷ್ಯ. ಎಲ್ಲ ವಿದ್ಯಾಭ್ಯಾಸವೂ ಪರ್ಯವಸಾನವಾಗಬೇಕಾದುದು ಆತ್ಮಜ್ಞಾನದಲ್ಲಿ, ಪರಮಾತ್ಮ ಜ್ಞಾನದಲ್ಲಿ. ಹಾಗೆಯೇ ತನ್ನ ಬಗ್ಗೆ, ಜಗತ್ತಿನ ಬಗ್ಗೆ, ಹಾಗೂ ದೇವರ ಬಗ್ಗೆ ತಿಳಿದುಕೊಳ್ಳುವುದೇ ವಿದ್ಯಾಭ್ಯಾಸ ಎಂಬುದಾದರೆ, ಅದರ ಆರಂಭವೇ, ನಮ್ಮ ಬಗ್ಗೆ, ನಮ್ಮ ದೇಹದಲ್ಲಿ ಏನಿದೆ, ಅದರ ಉಪಯೋಗಗಳು? ಅದನ್ನು ಹೇಗೆ ಬಳಸಬೇಕು, ಹೇಗೆ ಬಳಸಬಾರದು ಎಂಬುದನ್ನು ತಿಳಿದುಕೊಳ್ಳುವುದು ತುದಿಮೊದಲಿಲ್ಲದಷ್ಟು ಮುಗಿಯದಷ್ಟಿವೆ.

ಅದರ ಒಂದು ಭಾಗ, ಪಂಚೇಂದ್ರಿಯಗಳಲ್ಲಿ ಒಂದು ಸ್ಪರ್ಶ. ಪಂಚೇಂದ್ರಿಯಗಳು ಜಗತ್ತನ್ನು ತಿಳಿಯುವಂತಹ ಸಾಧನಗಳು. ನಾವು ಜಗತ್ತನ್ನು ನೋಡಿ, ಕೇಳಿ, ಪರಿಮಳವನ್ನು ಮೂಸಿ, ರುಚಿ ನೋಡಿ, ಹಾಗೆಯೇ ಮುಟ್ಟಿ, ಸ್ಪರ್ಶದ ಮೂಲಕ ತಿಳಿಯುತ್ತೇವೆ. ಸ್ಪರ್ಶ ಎನ್ನುವುದು ಜಗತ್ತನ್ನು ತಿಳಿಯುವಂತಹ ಸಾಧನ. ಆದರೆ ಸ್ಪರ್ಶದಿಂದ ಮೇಲ್ನೋಟಕ್ಕೆ ಯಾವ ವ್ಯತ್ಯಾಸವೂ ಕೂಡ ಬರುವುದಿಲ್ಲ. ಆದರೆ ಒಳಗೆ ಕೊಂಚ ವ್ಯತ್ಯಾಸ ಇದೆ. ಸಾಮಾನ್ಯ ಸ್ಪರ್ಶದಿಂದ ಕೇವಲ ಬಿಸಿ, ತಂಪು, ಮೃದು, ಒರಟು ಅದರ ಆಕಾರ, ವಿಕಾರಗಳು ಇಂತಹ ವ್ಯತ್ಯಾಸಗಳು ತಿಳಿಯುತ್ತದೆ. ಕೇವಲ ಸ್ಪರ್ಶದಿಂದ ಎಲ್ಲವೂ ತಿಳಿಯುವುದಿಲ್ಲ. ಇದಕ್ಕಿಂತ ಮುಂದಕ್ಕೆ ಒಂದು ಭಾವ ಸ್ಪರ್ಶ ಅಂತ ಇದೆ. ನಮ್ಮ ಭಾವವು ಸ್ಪರ್ಶದ ಮೂಲಕ ಅಭಿವ್ಯಕ್ತವಾದಾಗ ಅದು ಭಾವ ಸ್ಪರ್ಶ. ಉದಾಹರಣೆಗೆ ತಂದೆ – ತಾಯಿಯರು ಸಿಟ್ಟಿನಲ್ಲಿ ಮಕ್ಕಳಿಗೆ ಎರಡೇಟು ಹೊಡೆದರೆ, ಆ ಸ್ಪರ್ಶದಲ್ಲಿ ಇರುವ ಭಾವ, ಅದು ಕೋಪ. ಕೋಪವು ಅವರ ಕೈಗಳ ಮೂಲಕ ನಮಗೆ ಸಂಕ್ರಾಂತವಾಗುವಂತದ್ದು, ಕೋಪದ ಬಿಸಿ ನಮಗೆ ತಟ್ಟುವಂಥದ್ದು. ಏಟು ಬಿದ್ದು, ನೋವಾಗಿರುವುದರ ಭಾವನೆ ನೆನಪಿನಲ್ಲಿ ಉಳಿಯುತ್ತದೆ. ಆ ತಪ್ಪು ಇನ್ನೊಮ್ಮೆ ನಡೆಯುವುದಿಲ್ಲ. ಸ್ಪರ್ಶವಾದ ಮೇಲೆ ಅದಕ್ಕೆ ಪರಿಣಾಮ ಇರುತ್ತದೆ. ಅದು ಕೆಲವೊಮ್ಮೆ ಕೊನೆಯವರೆಗೂ ಉಳಿಯುತ್ತದೆ. ಅದೇ ರೀತಿ ಸಾಂತ್ವನದ ಸ್ಪರ್ಶ. ದುಃಖದಲ್ಲಿ ಅಳುವಾಗ, ಹೆಗಲಮೇಲೆ ಪ್ರೀತಿಯಿಂದ ಕೈಯಿಟ್ಟರೂ ಅದು ಪರಿಣಮಿಸುತ್ತದೆ. ತಾಯಿ ಮಗುವಿನ ಕೆನ್ನೆಯನ್ನು ನೇವರಿಸುವುದು ಕೇವಲ ಸ್ಪರ್ಶವಲ್ಲ, ಅದರಲ್ಲಿ ತಾಯಿಯ ವಾತ್ಸಲ್ಯ ವ್ಯಕ್ತವಾಗುವ ಭಾವವಿದೆ.

ಅದಕ್ಕಿಂತ ಮುಂದಕ್ಕೆ ಸ್ಪರ್ಶದ ಪರಿಣಾಮಗಳಿವೆ. ಒಬ್ಬರು ಇನ್ನೊಬ್ಬರನ್ನು ಮುಟ್ಟಿದಾಗ ಒಂದು ಕಡೆಯ ಚೈತನ್ಯ ಇನ್ನೊಂದು ಕಡೆ ಹರಿಯಬಹುದು. ಉದಾಹರಣೆಗೆ, ಗುರುಕರ ಸ್ಪರ್ಶ, ರಾಮನ ಪಾದ ಸ್ಪರ್ಶ. ಸ್ಪರ್ಶ ಅಂದರೆ ಅಷ್ಟೇ, ಮುಟ್ಟಿದರೆ ಏನೂ ವ್ಯತ್ಯಾಸವೇ ಇಲ್ಲ ಅಂದ್ರೆ ಹಾಗೆಲ್ಲ ಏನೂ ಇಲ್ಲ. ಅದಕ್ಕೆ ಒಳ್ಳೆಯ ನಿದರ್ಶನ ಎಂದರೆ, ಅಹಲ್ಯಾ ಶಾಪ ವಿಮೋಚನೆ. ರಾಮನ ಪಾದದ ಧೂಳಿನ ಸ್ಪರ್ಶದಿಂದ ಅಹಲ್ಯೆಯ ಅತಿ ದೊಡ್ಡ ಪಾಪವು ಕಳೆದು ಹೋಗಿ ನವರೂಪವನ್ನು ತಾಳಿ ಮೇಲಕ್ಕೆದ್ದಳು. ಕಲ್ಲನ್ನು ಹೆಣ್ಣಾಗಿಸುವ ಶಕ್ತಿ ಆ ಸ್ಪರ್ಶಕ್ಕೆ ಇತ್ತು. ರಾಮನೊಳಗಿನ ಅನುಗ್ರಹ, ಚೈತನ್ಯವು ಹರಿಯಲು ಸ್ಪರ್ಶವು ಮಾಧ್ಯಮವಾಗಬಹುದು. ದೇಹದ ಬಳಕೆ ಬಹಳ ದೊಡ್ಡದು. ದೇಹದ ಸಾವಿರಾರು ಚಟುವಟಿಕೆಗಳಲ್ಲಿ ಒಂದು ಸ್ಪರ್ಶ. ಆ ಸ್ಪರ್ಶಕ್ಕೆ ವ್ಯಾಪ್ತಿ ಎಷ್ಟಿದೆ ಎಂದರೆ ನಮ್ಮೊಳಗಿನ ಭಾವವನ್ನು ಅಲ್ಲದೇ ಚೈತನ್ಯವನ್ನೂ ಕೂಡ ಹರಿಸಬಹುದು. ಜಗತ್ತಿನಲ್ಲಿ ಯಾವುದೇ ವಸ್ತುಗಳು ಸಂಸರ್ಗಗೊಂಡರೂ ಕೂಡ ಒಂದರಲ್ಲಿರುವ ಗುಣ-ದೋಷಗಳು ಇನ್ನೊಂದಕ್ಕೆ ಹರಿಯುತ್ತದೆ. ವಿದ್ಯುತ್ ಹೇಗೆ ತಗುಲಿದಲ್ಲೆಲ್ಲ, ನಾವು ಮುಟ್ಟಿದರೆ ಹೇಗೆ ನಮ್ಮಲ್ಲಿಯೂ, ನಮ್ಮನ್ನು ಇನ್ನೊಬ್ಬರು ಮುಟ್ಟಿದಾಗ ಅವರಿಗೂ ಹರಿಯುತ್ತಾ ಹೋಗುತ್ತದೆಯೋ, ಅದೇ ರೀತಿ ನಮ್ಮೊಳಗಿನ ಪಾಪ, ಪುಣ್ಯ, ಗುಣಗಳು, ದೋಷಗಳೂ ಸಹ ನಾವು ಮುಟ್ಟಿದವರ, ನಮ್ಮನ್ನು ಮುಟ್ಟಿದವರ ಪ್ರಕೃತಿಯನ್ನು ಸೇರುತ್ತದೆ. ಅದಕ್ಕೆ ಬಹಳ ದೊಡ್ಡ ಉದಾಹರಣೆಯೇ, ರಾಮನ ಪಾದ ಸ್ಪರ್ಶ ಅಥವಾ ಗುರುವಿನ ಕರ ಸ್ಪರ್ಶ.

ಭೀಮಾ ಶಂಕರರ ಪದ್ಯದಲ್ಲಿ ಅವರು ಹೇಳುವಂತೆ, ಕೈಯಾ ತಲೆಮೇಲೆ ಇಡಲು, ವೈರಾಗ್ಯ ಪಡೆದನೇ. ಗುರುವಿನ ಕರ ಸ್ಪರ್ಶದಿಂದ ಎಷ್ಟೋ ಜನ್ಮದ ಪಾಪಗಳು ತೊಳೆದು ಹೋಗುತ್ತವೆಯಂತೆ. ವೈರಾಗ್ಯ ಎಂಬುದು ಸುಲಭಕ್ಕೆ ಸಿಗುವಂತಹದ್ದಲ್ಲ. ಅದಕ್ಕೆ ಜನ್ಮ ಜನ್ಮಾಂತರದ ಪುಣ್ಯ ಬೇಕಂತೆ. ಸೌಭಾಗ್ಯ ಎಂದರೆ ಹೊರಗಿನ, ಮನೆ, ಆಳು, ಸಂಪತ್ತು ಮತ್ತು ವೈರಾಗ್ಯ ಎಂದರೆ ಒಳಗಿನ ಸಂಪತ್ತು, ಅದು ಬರಬೇಕಾದರೆ ಎಷ್ಟೋ ಜನ್ಮದ ತಪಸ್ಸು ಬೇಕು. ಹಾಗಿರುವಾಗ ಗುರು ತನ್ನ ಹಸ್ತವನ್ನು ಮಸ್ತಕದ ಮೇಲೆ ಇಟ್ಟಾಗ ಜನ್ಮ ಜನ್ಮಗಳ ಪಾಪಗಳು ಕಳೆದು ಹೋದವು, ಪಾವನನಾದೆ, ಪವಿತ್ರಾತ್ಮನಾದೆ, ಮೋಕ್ಷಕ್ಕೆ ಅರ್ಹನಾದೆ, ಸಾಕ್ಷಾತ್ಕಾರಕ್ಕೆ ಜ್ಞಾನಕ್ಕೆ ಅರ್ಹನಾದೆ ನಾನು, ಸಾಧನೆಯ ಬದುಕು ಪ್ರಾರಂಭವಾಯಿತು ಅಲ್ಲಿಂದ ಎಂದೆಲ್ಲಾ ಹೇಳಿದವರಿದ್ದಾರೆ. ಇದೆಲ್ಲ ಸ್ಪರ್ಶದಿಂದ ಸಾಧ್ಯ.

ಸ್ಪರ್ಶದಿಂದ ದೋಷವೂ ಬರಬಹುದು. ಉದಾಹರಣೆಗೆ ಕೆಂಡ. ಮಿತಿಮೀರಿದ ಬಿಸಿಯಿರುವ ಕೆಂಡ ಮುಟ್ಟಿದಾಗ, ಕೈ ಸುಡುತ್ತದೆ. ಅದು ಸ್ಪರ್ಶದಿಂದಲೇ ಆಗುವಂತಹದ್ದು. ದುರ್ಗಂಧವೂ ಹಾಗೆಯೇ, ಮುಟ್ಟಿದರೆ ಕೈ ಕೂಡ ದುರ್ಗಂಧವಾಗುತ್ತದೆ. ಇನ್ನೂ ಒಳ್ಳೆಯ ಉದಾಹರಣೆಯಾಗಿ ‘ಕೊರೋನಾ’ವನ್ನು ಕೊಡಬಹುದು! ಕೊರೋನಾ ಬಂದಾಗ ಇಡೀ ಜಗತ್ತಿನಲ್ಲಿ ಸ್ಪರ್ಶದ ಬಗ್ಗೆ ಒಂದು ಜಾಗೃತಿ ಉಂಟಾಯಿತು. ಆಗ ಎಲ್ಲರೂ ಹಳೆಯ ಪದ್ಧತಿಯಾನುಸಾರವನ್ನು ಪ್ರಾರಂಭಿಸಿದರು. ಅದೊಂದು ಪ್ರತ್ಯಕ್ಷ ದೃಷ್ಟಾಂತ. ಕೇವಲ ಸ್ಪರ್ಶ ಮಾತ್ರದಿಂದ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಬರಬಹುದು. ಕೆಲವು ಕಣ್ಣಿಗೆ ಕಾಣುವ ಚರ್ಮರೋಗಗಳು ಮುಟ್ಟಿದಾಗ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಆದರೆ ಈ ಕೊರೋನಾ ಕಣ್ಣಿಗೆ ಕಾಣದ್ದು. ಆದರೆ ಅದು ಹರಡುತ್ತದೆ. ರೋಗವೇ ಒಬ್ಬರಿಂದೊಬ್ಬರಿಗೆ ಹರಡುವಾಗ, ದೋಷಗಳೂ ಕೂಡಾ ಹರಡುವ ಸಾಧ್ಯತೆ ಇದೆ. ಶಾಸ್ತ್ರಗಳಲ್ಲಿ ಒಂದು ಮಾತಿದೆ, ಇಂದ್ರಿಯಗಳನ್ನು ಮುಟ್ಟಿದಾಗ ಕೈ ತೊಳೆಯಬೇಕು ಎಂದು. ಕೆಲವು ಕಾಲದ ಹಿಂದೆ ಇವೆಲ್ಲಾ ಗೊಡ್ಡು ಸಂಪ್ರದಾಯ ಎಂಬ ಭಾವನೆಯಿತ್ತು. ಆದರೆ ಕೊರೋನಾ ಬಂದಾಗ, ಆಗ ಇವೆಲ್ಲಾ ಎಷ್ಟು ಅರ್ಥಪೂರ್ಣ, ಎಷ್ಟು ಸತ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯ. ಹಾಗಾಗಿಯೇ, ಮುಟ್ಟುವಾಗ ಮತ್ತು ಮುಟ್ಟಿಸಿಕೊಳ್ಳುವಾಗ ಬಹಳ ಜಾಗ್ರತೆ ಬೇಕು. ಮುಟ್ಟಿ ಕೆಡಬಹುದು, ಹಾಗೆಯೇ ಮುಟ್ಟಿ ಕೆಡಿಸಲೂಬಹುದು, ಇನ್ನೊಬ್ಬರ ಪಾವನತೆಯನ್ನು ನಾವು ಹಾಳು ಮಾಡಬಹುದು. ನಮ್ಮ ಪಾವನತೆ ಹೋಗಲೂಬಾರದು. ಹಾಗಾಗಿಯೇ, ಸುಖಾಸುಮ್ಮನೆ ಮುಟ್ಟಲೂ ಬೇಡ, ಮುಟ್ಟಿಸಿಕೊಳ್ಳಲೂ ಬೇಡ. ಮುಟ್ಟುವಾಗ ಒಂದು ಪ್ರಬಲವಾದ ಕಾರಣ ಇರಬೇಕು. ವಸ್ತುಗಳನ್ನು ಕೂಡಾ ಮುಟ್ಟಬಾರದು. ಏಕೆಂದರೆ ವಸ್ತುಗಳಲ್ಲೂ ದೋಷಗಳಿರಬಹುದು. ಶಾಸ್ತ್ರಗಳ ಪ್ರಕಾರ ಮನುಷ್ಯನ ನಾಭಿಯಿಂದ ಮೇಲೆ ಎಷ್ಟು ಪವಿತ್ರವೋ, ನಾಭಿಯಿಂದ ಕೆಳಗೆ ಅಷ್ಟು ಪವಿತ್ರವಲ್ಲ ಎಂದು. ಹಾಗಾಗಿ ಕಾಲುಗಳನ್ನು ಮುಟ್ಟಿಕೊಳ್ಳಬಾರದು. ದೋಷಗಳು ಹೆಚ್ಚಿರುವುದು ಪಾದದಲ್ಲಿ. ಅದು ದೋಷವು ಹೊರ ಹೋಗುವ ಜಾಗವೂ ಹೌದು. ಹಾಗಾಗಿಯೇ ನಮ್ಮ ಪಾದಗಳನ್ನು ನಾವೇ ಅನಗತ್ಯವಾಗಿ ಮುಟ್ಟಿಕೊಳ್ಳಬಾರದು. ಹಾಗಾಗಿಯೇ ಬೇರೆ ಎಲ್ಲರೊಟ್ಟಿಗೆ, ಎಲ್ಲದರೊಟ್ಟಿಗೆ ಅಂತರವನ್ನು ಕಾಯ್ದುಕೊಳ್ಳಬೇಕು. ಅತ್ಯಗತ್ಯವಾಗಿದ್ದಾಗ ಮಾತ್ರವೇ ಸಂಪರ್ಕ ಮಾಡುವುದು ತುಂಬಾ ಉಚಿತ ಹಾಗೂ ತುಂಬಾ ಉಪಯುಕ್ತ.

ಆದರೆ, ಕೆಲವಾರು ಸ್ಪರ್ಶ ನಮಗೆ ಶುಭವನ್ನು ಮಾಡುತ್ತದೆ. ಗಂಗಾ ಸ್ನಾನದಿಂದ ಪಾಪ ಪರಿಹಾರವಾಗುತ್ತದೆ. ಗಂಗೆಯಲ್ಲಿ ಒಮ್ಮೆ ಮುಳುಗಿ ಎದ್ದರೆ ಸಾಕು, ಆಕೆಯನ್ನು ಸ್ಪರ್ಶಿಸಿದರೆ ಸಾಕಂತೆ, ನಾವು ಪವಿತ್ರರಾಗುತ್ತೇವೆ. ಆದರೆ ನಾವು ಮುಟ್ಟಿದರೆ ಗಂಗೆ ಮೈಲಿಗೆಯಾಗುವುದಿಲ್ಲ. ಗಂಗೆಯ ಪಾವಿತ್ರತೆಯೇ ಹಾಗೆ, ಬ್ರಹ್ಮಹತ್ಯೆ ಮಾಡಿದವನು ಮುಟ್ಟಿದರೂ ಕೂಡಾ ಮೈಲಿಗೆಯಾಗುವುದಿಲ್ಲ. ಹಾಗೆಯೇ ಮಹಾಗುರು, ಅಂತಹವರು ಮುಟ್ಟಿದರೆ, ಇಲ್ಲವೇ ಅವರ ಪಾದ ಸ್ಪರ್ಶದಿಂದ ಅಥವಾ ಅವರೇ ನಮ್ಮನ್ನು ಸ್ಪರ್ಶ ಮಾಡಿದಾಗ ಗುರು ಮಲಿನವಾಗುವುದಿಲ್ಲ. ಬದಲಿಗೆ ಶಿಷ್ಯ ಉದ್ಧಾರವಾಗುತ್ತಾನೆ. ಈ ಹಂತಕ್ಕೆ ಏರುವಾಗ, ಸಮಯ, ಸಾಧನೆ ಅಥವಾ ದೈವದತ್ತವಾಗಿ ಭಗವಂತನ ಅವತಾರವಾಗಿ ಬಂದಿರಬೇಕು. ಆ ಮಟ್ಟಕ್ಕೆ ಏರುವವರೆಗೆ ನಮ್ಮ ಹಾಗೂ ಆ ಮಹಾ ವ್ಯಕ್ತಿಯ ನಡುವೆ ಅಂತರವಿರಬೇಕು. ಯಾಕೆ ನಾವು ಮನೆಯಲ್ಲಿ ಆಶೌಚವನ್ನು ಆಚರಿಸಬೇಕೆಂದರೆ, ದೇಹ, ಪ್ರಕೃತಿ ಆಶೌಚವಾಗುವಂತಹ ಹೊತ್ತು ಅದು. ಆ ಸಮಯದಲ್ಲಿ ಮಡಿ ವಸ್ತುಗಳನ್ನು ಮುಟ್ಟಿದರೆ ಅವು ತಮ್ಮತನವನ್ನು ಕಳೆದುಕೊಳ್ಳುತ್ತವೆ. ನಾಳೆ ಮುಟ್ಟಿದಾಗ ನಮಗೆ ಆಗಬೇಕಾದ ಲಾಭ ಆಗೋದಿಲ್ಲ, ನಷ್ಟವಾಗುತ್ತದೆ. ಹಾಗಾಗಿ ಮುಟ್ಟಿ ಕೆಡಬಾರದು, ಮುಟ್ಟಿ ಕೆಡಿಸಬಾರದು. ಈ ನಿಯಮವನ್ನು ನಾವು ನಿರಂತರ ಪಾಲಿಸಬೇಕು.

ಹಾಗೆಯೇ ನಾವು ಪಾವನ ಸ್ಪರ್ಶ ಬಯಸಬೇಕು. ನಾವು ನಿತ್ಯ ಪೂಜೆ ಮಾಡಬೇಕು ಏಕೆಂದರೆ ತುಳಸಿ ಪಾವನ, ಅದನ್ನು ಮುಟ್ಟಿದಾಗ, ಘಂಟೆಯ ನಾದವನ್ನು ಕೇಳಿದಾಗ, ಶಂಖವನ್ನು ಮುಟ್ಟಿದಾಗ, ದೂರ್ವೆ ಅಥವಾ ಪೂಜೆಯ ಅನೇಕ ಮಡಿ ವಸ್ತುಗಳನ್ನು ಮುಟ್ಟಿದಾಗ ಅವೆಲ್ಲದರ ಧರ್ಮ ನಮ್ಮೊಳಗೆ ಹರಿದು, ದೋಷ ಕಳೆದು, ನಮ್ಮ ಮೈಲಿಗೆ ದೂರವಾಗಿ, ತಮ್ಮ ಪಾವನತೆಯನ್ನು ನಮಗೆ ಕೊಡುವುದರಿಂದ ನಾವು ಮಡಿಯಾಗುತ್ತೇವೆ. ಇವೆಲ್ಲಾ ಏಕೆ ಬೇಕು ಎಂದರೆ ನಮ್ಮನ್ನು ಮಡಿ ಮಾಡುವ ಸಲುವಾಗಿ ಬೇಕು. ದೂರ್ವೆಯನ್ನು ಅಂಗಡಿಯಿಂದ ತಂದು ಪೂಜೆ ಮುಗಿಸಬಹುದು ಆದರೆ ಅದಕ್ಕಿಂತ ಶ್ರೇಷ್ಠ ಏನೆಂದರೆ ನಾವೇ ತುಳಸಿ, ದೂರ್ವೆಯನ್ನು ಕೊಯ್ದು ಅದರ ಪಾವನತೆಯಲ್ಲಿ ಭಾಗಿಯಾದಾಗ. ದುಡ್ಡು ಕೊಟ್ಟು ಬರುವಂತಹದ್ದಲ್ಲ ಅದು. ನಾವೇ ಸ್ವತಃ ಆ ಕೆಲಸ ಮಾಡಿ ನಮಗೆ ಆ ಗಿಡದ ಸ್ಪರ್ಶ ಆದಾಗ ನಾವು ಹೆಚ್ಚು ಪಾವನರಾಗುತ್ತೇವೆ, ಪವಿತ್ರವಾಗುತ್ತೇವೆ.

ಎಲ್ಲೆಲ್ಲಿ ಪಾವನತೆ ಇದೆಯೋ ಅಲ್ಲಿಗೆ ನಾವೇ ಹುಡುಕಿಕೊಂಡು ಹೋಗಬೇಕು. ಅದು ತೀರ್ಥಕ್ಷೇತ್ರ, ತೀರ್ಥ ರೂಪರಿರುವ ಜಾಗವಿರಬಹುದು, ತೀರ್ಥ ರೂಪಿ ವಸ್ತುಗಳಿರಬಹುದು, ಅವುಗಳನ್ನು ಜೊತೆಗಿಟ್ಟುಕೊಳ್ಳಬೇಕು. ಅವುಗಳ ಸ್ಪರ್ಶದಿಂದ ನಾವು ನಮ್ಮಲ್ಲಿ ಪಾವನತೆಯನ್ನು ತಂದುಕೊಳ್ಳಬೇಕು. ನಾವು ಎಂದಿಗೂ ಅನಗತ್ಯ ಮೈಲಿಗೆ ಮಾಡುವ, ಪಾವನತೆಯನ್ನು ಕೆಡಿಸುವ ಕೆಲಸ ಮಾಡಬಾರದು. ನಾವು ಅದರಿಂದ ಹಾಳು ಮಾಡಿದ, ಆ ವಸ್ತುವನ್ನು ಮಲಿನ ಮಾಡಿದ ದೋಷಕ್ಕೆ ಪಾತ್ರರಾಗುತ್ತೇವೆ. ಮುಟ್ಟಿದಾಗ ರೋಗ ಬರಬಹುದು ಎಂಬುದು ಸ್ಥೂಲ ಕಾರಣ. ಸೂಕ್ಷ್ಮ ಕಾರಣ ಎಂದರೆ ದೋಷ. ಅದು ಕೂಡಾ ಬರಬಹುದು. ಹಾಗಾಗಿ, ನಡುವೆ ಅಂತರವಿರಲಿ. ಮುಟ್ಟಿ ಕೆಡಬೇಡ, ಕೆಡಿಸಬೇಡ ಎಂಬ ತತ್ವವನ್ನು ಜೀವನದಲ್ಲಿ ಅನುಸರಣೆ ಮಾಡೋಣ. ಆಗ ನಾವು ನಮ್ಮೊಳಗಿನ ಮಡಿಯನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ಎಲ್ಲರೂ ಸ್ಪರ್ಶದ ಪರಿಣಾಮವನ್ನು ತಿಳಿದುಕೊಳ್ಳಬೇಕು. ಮಡಿಯಾಗಿ ಬದುಕಬೇಕು, ಹಿತವಾದ, ಪಾವನವಾದ, ಆನಂದಪ್ರದವಾದ ಸ್ಪರ್ಶವನ್ನು ಬಯಸಬೇಕು, ಸಂಪಾದನೆ ಮಾಡಬೇಕು, ಹುಡುಕಿಕೊಂಡು ಹೋಗಬೇಕು, ಪಡೆದುಕೊಳ್ಳಬೇಕು. ಆಗ ಅದು ನಮ್ಮ ಉದ್ಧಾರಕ್ಕೆ ಕಾರಣವಾಗಬಲ್ಲದು. ರಾಮ ಬಂದು ಅಹಲ್ಯೆಯನ್ನು ಸ್ಪರ್ಶ ಮಾಡಿರುವಂತೆ ಅಂತಹದ್ದೊಂದು ಸ್ಪರ್ಶವಾಗಲು ಯೋಗ, ತಪಸ್ಸು ಬೇಕು.

“ಶಿಲೆಯಾಗಿ ನಿದ್ರಿಸುತ್ತಿರ್ದಾಕೆ, ರಾಮ ಪದತಲದ ಸಂಸ್ಪರ್ಶದಿಂದೆದ್ದು ನಿಂತಂತೆ”
ಅಂತಹದ್ದೊಂದು ಸ್ಪರ್ಶವಾಗಿ ನಮ್ಮ ಉದ್ಧಾರವಾಗುವಂತೆ ರಾಮನಲ್ಲಿ ನಾವು ಪ್ರಾರ್ಥಿಸೋಣ.

Facebook Comments Box