ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂಘಟನಾ ಚಾತುರ್ಮಾಸ್ಯದಲ್ಲಿ ಅನುಗ್ರಹಿಸುತ್ತಿರುವ ಪ್ರವಚನದ ಅಕ್ಷರರೂಪ.

ಗುರುಪೂರ್ಣಿಮೆ ದಿನ ನಾವೆಲ್ಲರೂ ಒಂದಾಗಿ ಗುರುವನ್ನು ಸ್ಮರಿಸೋಣ, ಗುರುವನ್ನು ನಮಿಸೋಣ, ಗುರುವನ್ನು ಭಾವಿಸೋಣ, ಗುರುವನ್ನು ಪೂಜಿಸೋಣ, ಗುರುವನ್ನು ಧ್ಯಾನಿಸೋಣ.
ಗುರುವೆಂದರೆ ಅಮಾವಾಸ್ಯೆಯೂ ಅಲ್ಲ, ಅಷ್ಟಮಿಯೂ ಅಲ್ಲ. ಗುರುವೆಂದರೆ ಪೂರ್ಣಿಮೆ.
ಗುರು ಯಾವತ್ತೂ ಅರೆ-ಪೊರೆಯಲ್ಲ, ಅರ್ಧವೋ ಅಪೂರ್ಣವೋ ಅಲ್ಲ. ಗುರು ಎಂದಿಗೂ ಸಂಪೂರ್ಣ, ಗುರು ಅಂದರೆ ಪೂರ್ಣತೆ. ಪೂರ್ಣನನ್ನು ಪೂಜೆ ಮಾಡಿ ನಾವು ಪೂರ್ಣರಾಗಬೇಕು.
ಗುರುಕರುಣೆ ಎಂಬುದು ಬೆಳದಿಂಗಳಿನಂತೆ. ಅದು ಬೆಳಕೂ ಹೌದು ತಂಪು ಹೌದು. ಬೆಳಕೆಲ್ಲವೂ ತಂಪಲ್ಲ. ಸೂರ್ಯನ ಪ್ರಕಾಶವು ತಾಪವನ್ನು ನೀಡುವಂಥದ್ದು; ಆದರೆ ಗುರುವಿನದು ಎಂದಿಗೂ ತಂಪಾದ ಅನಂತಕಿರಣ. ಗುರು ಪೂರ್ಣಿಮೆ ಅಂದರೆ ಬೆಳದಿಂಗಳು, ಗುರುವಿನ ಕರುಣೆಯ ಬೆಳದಿಂಗಳು ನಮ್ಮನಿಮ್ಮೆಲ್ಲರ ಮೇಲೆ ಸದಾಕಾಲವೂ ಬೀಳಲಿ ಮತ್ತು ಮುಂದಿನ ದಾರಿ ತೋರಿಸಲಿ.
ಮಠಕ್ಕೆ ಇದು ಒಂದು ರೀತಿಯ ಸ್ವರ್ಣಿಮಕಾಲ. ಮಠದ ಚರಿತ್ರೆಯ ಅವಲೋಕನ ಮಾಡಿದರೆ, ಪ್ರತಿ ಹಂತದಲ್ಲೂ ಶ್ರೇಯಸ್ಸನ್ನು ತಂದೊದಗಿಸಿದಂತಹ ಗುರುಪರಂಪರೆ. ಹಿರಿಯ ಗುರುಗಳೆಲ್ಲರೂ ವಿಷಕಂಠರೇ ಹೌದು. ಅದೆಂತಹಾ ಕಾರ್ಕೋಟಕ ವಿಷಯವೇ ಸರಿ, ಅದನ್ನು ತಾವು ಕುಡಿದು ಸಮಾಜಕ್ಕೆ ಅಮೃತವನ್ನು ಕೊಟ್ಟಿದ್ದಾರೆ. ನಮ್ಮ ಮಠಕ್ಕೆ ಈಗ ಬಂದಿರುವುದು ಸ್ವರ್ಣ ಯುಗ: ಸ್ವರ್ಣ ಕಿರೀಟ, ಸ್ವರ್ಣಮಂಟಪ, ದಂತ ಸಿಂಹಾಸನಗಳೊಂದಿಗೆ ಸ್ವರ್ಣಪಾದುಕೆಯೂ ಸೇರಿಕೊಂಡು ಇದೀಗ ಸ್ವರ್ಣಿಮಕಾಲಕ್ಕೆ ನಾವು ಹೆಜ್ಜೆ ಇಟ್ಟಿದ್ದೇವೆ. ಖಂಡಿತವಾಗಿಯೂ ಇದು ಹಲವಾರು ಮಹನೀಯರ ಸೇವೆಯ ಫಲವಾಗಿದೆ.
ಪರಿವಾರದ ಹಿರಿಯ ಸದಸ್ಯರಾದ ವಿಭೂತಿ ರಮೇಶರ ಮಹದಾಸೆಯಾಗಿದ್ದಂತಹ ಈ ಕಾರ್ಯವು ಇದೀಗ ರೂಪವನ್ನು ಕಂಡಿದೆ. ಇವರೊಂದಿಗೆ ವಿಶ್ವನಾಥ ಸಾರಂಗ ಹಾಗೂ ಇನ್ನೂ ಅನೇಕರ ಕಾರ್ಯ ಫಲವಾಗಿ ಇದೀಗ ಸ್ವರ್ಣಪಾದುಕೆ ಅನಾವರಣಗೊಂಡಿದೆ.
ಈ ಸ್ವರ್ಣಪಾದುಕೆಯು ಸಂಸ್ಥಾನದ ಪ್ರಾತಿನಿಧ್ಯವನ್ನು ವಹಿಸುತ್ತದೆ.
ಪಾದುಕೆಗಳು ಪ್ರಾತಿನಿಧ್ಯವನ್ನು ವಹಿಸುವುದು ಹೊಸದೇನಲ್ಲ. ಶ್ರೀರಾಮ ವನವಾಸಕ್ಕೆಂದು ಹೊರಟಾಗ ಭರತನು ಅಂಗಲಾಚಿ ಅಣ್ಣನೇ ರಾಜ್ಯಭಾರ ಮಾಡಬೇಕೆಂದು ಕೇಳಿಕೊಂಡಾಗ, ಕೊಟ್ಟಮಾತಿಗೆ ತಪ್ಪದ ರಾಮ ಹಿಂದಿರುಗುವುದು ಶೋಭೆಯಲ್ಲ ಎಂದಾಗ, ಭರತ ಪಾದುಕೆಯನ್ನು ಏರು, ನಿನ್ನ ಸನ್ನಿಧಾನವನ್ನು ನೀಡು ಎಂದು ಕೇಳಿಕೊಳ್ಳುತ್ತಾನೆ. ರಾಮನ ಅನುಪಸ್ಥಿತಿಯಲ್ಲಿಯೂ ಪಾದುಕೆಯನ್ನು ಸಿಂಹಾಸನದಲ್ಲಿ ಇಟ್ಟು ರಾಜ್ಯಭಾರ ಮಾಡುತ್ತಾನೆ. ಯಾವ ಕಾಣಿಕೆ ಬಂದರೂ ಪಾದುಕೆಗೆ ಸಮರ್ಪಣೆ, ಯಾವುದೇ ಕಾರ್ಯಕ್ಕಿಂತ ಮುಂಚೆ ಪಾದುಕೆಯಿಂದ ಅಪ್ಪಣೆ ಪಡೆದು ಮಾಡುತ್ತಿದ್ದ. ಹೀಗೆ 14 ವರ್ಷ ಪಾದುಕಾ ರಾಜ್ಯಭಾರ ನಡೆಯಿತು.
ಅಂತೆಯೇ ಶ್ರೀಮಠದ ಸ್ವರ್ಣಪಾದುಕೆಯು ಇನ್ನು ಮುಂದೆ ಗುರುಪೀಠ, ಗುರುಪರಂಪರೆಯ ಪ್ರಾತಿನಿಧ್ಯವನ್ನು ವಹಿಸುತ್ತದೆ . ಶ್ರೀಸಂಸ್ಥಾನ ಬರುವುದರಲ್ಲಿ ಅನಾನುಕೂಲತೆಯು ಕಂಡುಬಂದರೆ ಚಿಂತಿಸಬಾರದು ಏಕೆಂದರೆ ಸ್ವರ್ಣಪಾದುಕೆಯನ್ನು ಕರೆತರುವ ಮೂಲಕ ಶ್ರೀಸಂಸ್ಥಾನವನ್ನು ಬರಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಶ್ರೀಸಂಸ್ಥಾನ ಕೊಡುವಂತಹ ಭಿಕ್ಷೆಯನ್ನು ಗುರುಭಿಕ್ಷೆ ಎನ್ನುತ್ತೇವೆ. ಇನ್ನು ಒಂದೇ ಸಮಯಕ್ಕೆ ಶ್ರೀಸಂಸ್ಥಾನ ಹಾಗೂ ಸ್ವರ್ಣಪಾದುಕೆ ಬಂದರೆ, ಸ್ವರ್ಣಮಂಟಪದ ಪೂಜೆ ನಡೆದು ಕೊಡುವಂತಹ ಗುರುಭಿಕ್ಷೆ ಅದು ಇನ್ನಷ್ಟು ವಿಶೇಷ, ಅದುವೇ ಸ್ವರ್ಣ ಭಿಕ್ಷೆ. ಸ್ವರ್ಣಪಾದುಕೆಗೆ ನೀಡುವ ಪ್ರತಿಯೊಂದು ಕಾಣಿಕೆಯು ವಿಷ್ಣುಗುಪ್ತವಿಶ್ವವಿದ್ಯಾಪೀಠಕ್ಕೆ ದೇಣಿಗೆಯ ರೂಪದಲ್ಲಿ ಸಲ್ಲುತ್ತದೆ. ಸ್ವರ್ಣಪಾದುಕೆಯ ಅನಾವರಣದ ಯೋಜನೆಯ ಹಿಂದಿನ ಉದ್ದೇಶಗಳಲ್ಲಿ ಇದೂ ಒಂದು. ಬಡವ-ಧನಿಕ ಎಂಬ ಭೇದವು ಪಾದುಕಾಪೂಜೆಯ ವಿಷಯದಲ್ಲಿಲ್ಲ, ಬಯಸಿದಲ್ಲಿ ಬಡವನಾದರೂ ಸರಿ, ಪಾದುಕಾ ಪೂಜೆಗೆ ಅವಕಾಶವು ಖಂಡಿತಾ ದೊರಕುವುದು. ಪತ್ರ, ಪುಷ್ಪ, ಫಲಗಳ ಮೂಲಕ ಭಕ್ತಿಭಾವದೊಂದಿಗೆ ಪಾದಪೂಜೆಗೆ ಅವಕಾಶವಿದೆ. ಆದರೆ ಯಾರಿಗೆ ಶಕ್ತಿ ಇದೆ ಅವರು ದೇಣಿಗೆಯನ್ನು ನೀಡಬೇಕು. ಏಕೆಂದರೆ ಅದು ವಿ.ವಿ.ವಿ ಗೆ ಸಮರ್ಪಿತ.
ಸಂಘಟನಾ ಚಾತುರ್ಮಾಸ್ಯ ಇಡೀ ಸಮಾಜದಲ್ಲಿ ಅದ್ವೈತ ಬರಲಿ ಎಂಬುದು ಉದ್ದೇಶ. ಗುರುಪೀಠದ ಛತ್ರದಲ್ಲಿ ಇಡೀ ಸಮಾಜವು ಒಂದಾದರೆ ಅದುವೇ ಪೀಠಿಕೆ. ನಮ್ಮೆಲ್ಲರ ಮನಸ್ಸು, ಉದ್ದೇಶ ಒಂದಾಗಬೇಕು, ಈಗಾಗಲೇ ಒಂದಾಗಿದ್ದೇವೆ, ಅದು ಪುನಃ ಆರಂಭವಾಗಬೇಕು ಮಠದ ಮೇಲಿನ ಆಪತ್ತು ಆಕ್ರಮಣಗಳನ್ನು ಒಂದಾಗಿ ಎದುರಿಸಿದ್ದೇವೆ, ಹಾಗೆಯೇ ಮನೆಯ ಎಲ್ಲ ಸದಸ್ಯರೂ ಒಂದೇ ಕಡೆ ಮುಖಮಾಡಬೇಕು ಯಾವಕಡೆ ಅಂದರೆ ಮಠದಕಡೆ. ಸಂಘಟನೆಯಿಂದ ದೊರೆತಂತಹ ಫಲವು ದೃಷ್ಟಫಲ. ರಾಮನಕರುಣೆಯಾದರೂ ಅದೃಷ್ಟಫಲ. ಆದರೆ ಸಂಘಟನೆಯ ಮಹತ್ವ ನಾವು ಕಣ್ಣಾರೆ ಕಂಡರಿತದ್ದು. ಆದರೂ ಅಲ್ಲೋ-ಇಲ್ಲೋ ಒಂದಿಷ್ಟು ಎಂಬಂತೆ ಶಿಷ್ಯರಲ್ಲಿ ಇರುವ ದ್ವೇಷದ ಬೀಜವೂ ಇಲ್ಲದಾಗಬೇಕೆಂಬುದೇ ಶ್ರೀಸಂಸ್ಥಾನದ ಆಶಯ. ರಾಮಭದ್ರಾಚಾರ್ಯರು ಹೇಳಿದಂತೆ, “ಸಂಗಚ್ಛಧ್ವಂ ಸಂವದಧ್ವಮ್” ಎಂಬಂತೆ ಆಗಬೇಕಾಗಿರುವುದು ಅನಿವಾರ್ಯವೂ ಹೌದು. ಆಯುರ್ವೇದದ ಪ್ರಕಾರ ಸ್ವಸ್ಥದ ಗುಟ್ಟು ಸ್ವಾಸ್ಥ್ಯದ ರಕ್ಷಣೆ. ಅಂತೆಯೇ ಸಂಘಟನೆಯ ರಕ್ಷಣೆಯೊಂದಿಗೆ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವುದೇ ಪ್ರತಿಯೊಬ್ಬ ಶಿಷ್ಯನ ಧ್ಯೇಯವಾಗಬೇಕು.
ಸಂಘಟನಾ ಚಾತುರ್ಮಾಸ್ಯದ ಸೂತ್ರ:
ಸೇವಕರಿಗೆಲ್ಲ ಕಾಯಕ ಇರತಕ್ಕದ್ದು.
ಪ್ರತಿಯೊಬ್ಬನಿಗೂ ಕಾರ್ಯವನ್ನು ನೀಡಬೇಕು, ಹಾಗೆಯೇ ಕಾಯಕಗಳಿಗೆಲ್ಲ ಸೇವಕ ಇರಬೇಕು. ಯಾವ ಕಾರ್ಯವೂ ಅನಾಥವಾಗಬಾರದು. ಕಾರ್ಯಗಳಲ್ಲಿ, ವ್ಯವಸ್ಥೆಗಳಲ್ಲಿ ಹೊಸತನ್ನು ಕಂಡಂತೆ ಹಳೆಯದೆಲ್ಲ ಬದಲಾವಣೆ ಹೊಂದುವುದು ಸಹಜ. ಈ ಬದಲಾವಣೆಯ ಸಂದರ್ಭದಲ್ಲಿ ಹಳೆಯ ಕಾರ್ಯದ ಸೇವಕರು ಕೆಲಸರಹಿತರಾಗುವ ಸಾಧ್ಯತೆಗಳು ಇವೆ. ಅಂತಹ ಸಂದರ್ಭದಲ್ಲಿ ಅವರನ್ನು ಬದಿಗೆ ತಳ್ಳದೇ ಮತ್ತೊಂದು ಕಾರ್ಯದ ಹೊಣೆಗಾರಿಕೆ ನೀಡಬೇಕು. ಕಾರಣವು ವಿಜ್ಞಾನವೇ ಹೇಳುತ್ತದೆ, ಯಾವ ಅಂಗವನ್ನು ನಾವು ಕ್ರಮೇಣ ಉಪಯೋಗಿಸುವುದಿಲ್ಲವೋ, ಕಾಲಕ್ರಮೇಣ ಆ ಅಂಗವೇ ಇಲ್ಲವಾಗುತ್ತದೆ. ಅಂತೆಯೇ ಹೊಣೆಗಾರಿಕೆಯಿಲ್ಲದೇ ಸೇವಕರು ಬದಿಗೆ ಸರಿದರೆ, ಕ್ರಮೇಣ ಅವರು ಮರೆಯಾಗಿಬಿಡುವರು.
ಒಂದು ವೇಳೆ ನಿಮಗೆ ಯಾವುದೇ ಕೆಲಸದ ಜವಾಬ್ದಾರಿಯನ್ನು ನೀಡದೇ ಇದ್ದರೆ, ಅದನ್ನು ಕೇಳಿಪಡೆದುಕೊಳ್ಳುವುದು ಉತ್ತಮ. ಯಾಕೆಂದರೆ ನಮಗೆ ಅಗತ್ಯವಿರುವುದನ್ನು ಕೇಳಿ ಪಡೆಯಬೇಕಾದುದು ಕ್ರಮವಾಗಿದೆ, ಅದು ಅನ್ನವೇ ಆದರೂ ಸರಿ, ಕಾಯಕವೇ ಆದರೂ ಸರಿ. ಅಲ್ಲದೇ ಗುರುಪೀಠದಲ್ಲಿ ಸೇವೆಯನ್ನು ಯಾಚಿಸಿದವನು ಸಣ್ಣವನಾಗುವುದಿಲ್ಲ, ದೊಡ್ಡವನಾಗುತ್ತಾನೆ. ಹಾಗಾಗಿ, ಶಿಷ್ಯರು ತಾವಾಗಿಯೇ ಬಂದು ಸೇವೆಯನ್ನು ಕೇಳಿ ಪಡೆದುಕೊಳ್ಳಿ. ಸೇವೆಯನ್ನು ಕೇಳಿ ಪಡೆದುಕೊಳ್ಳುವುದು ಆದರ್ಶ. ಗುರುಪೀಠದಲ್ಲಿ, ದೇವರಲ್ಲಿ ಸೇವೆಯನ್ನು ಯಾಚನೆ ಮಾಡಿದವನು ದೊಡ್ಡವನಾಗುತ್ತಾನೆ. ಇವತ್ತು ಹೊಸ ಮಹಾಮಂಡಲದ ಉದ್ಘೋಷವಾಗಿದೆ. ಪ್ರತಿಯೊಬ್ಬ ಶಿಷ್ಯನನ್ನು ಸೂತ್ರಕ್ಕೆ ಒಳಪಡಿಸುವ ಹೊಣೆಗಾರಿಕೆ ಮಹಾಮಂಡಲದ್ದು. ಮೊದಲಿನ ಮಹಾಮಂಡಲದವರು ವಿಶ್ವವಿದ್ಯಾಪೀಠದ ಸೇವೆ ಮಾಡಲಿದ್ದಾರೆ. ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವವರೆಲ್ಲರೂ ವಿಶ್ವವಿದ್ಯಾಪೀಠದಲ್ಲಿ ಸೇವೆಯನ್ನು ಮಾಡಬೇಕು. ಇಲ್ಲಿ ವಿದ್ಯಾರ್ಥಿಗಳು ಬೇಕು, ಆಚಾರ್ಯರು ಬೇಕು, ಒಂದು ಒಳ್ಳೆಯ ವಿಷಯವನ್ನು ಒಂದು ದಿವಸ ಬಂದು ಹೇಳಿ ಕೊಡುವವರು ಬೇಕು.(ಉದಾಹರಣೆಗೆ ದೊನ್ನೆಯನ್ನು ಮಾಡುವುದು ಹೇಗೆ?)ಹೀಗೆ ಸಂಪನ್ಮೂಲ ವ್ಯಕಿಗಳು, ಸಂಪನ್ಮೂಲ, ಸುವಸ್ತುಗಳನ್ನು ಒದಗಿಸುವ ಹೊಣೆ ಸಮಾಜದ್ದಾಗಿದೆ. ಶಾಸನತಂತ್ರದ ಪುನಾರಚನೆ ಶೀಘ್ರದಲ್ಲಿ ಆಗಲಿದೆ.
ಸಂಘಟನಾ ಚಾತುರ್ಮಾಸ್ಯದಲ್ಲಿ ಸಂಘಟನೆ ಆಗಬೇಕು. ಸಂಘಟನೆಯಲ್ಲಿ ಕೆಲಸ ಮಾಡಿದವರ ಗುರುತಿಸುವ ಕೆಲಸವಾಗಬೇಕು. ನಮ್ಮ ಸಮಾಜ ಮಾತ್ರವಲ್ಲ, ಸಮಾಜದ ಬೇರೆಬೇರೆ ಮಜಲುಗಳಲ್ಲಿ ಕೆಲಸ ಮಾಡಿದವರನ್ನು ಗುರುತಿಸಬೇಕು. ಇತರರಿಗೆ ಪ್ರೇರಣೆ ನೀಡಬೇಕು.
ಹಳೆಯ ಸಂಪ್ರದಾಯ
ನಮ್ಮಲ್ಲಿ ಹಳೆಯ ಸಂಪ್ರದಾಯ ಹೇಗೆ ಎಂದರೆ ರಾಮದೇವರ ಪೂಜೆ ಹಾಗೂ ವ್ಯಾಸಪೂಜೆ ಜೊತೆಜೊತೆಯಾಗಿ ಹೆಣೆದುಕೊಂಡಿರುವಂತೆ ನಡೆಯುತ್ತದೆ. ಗುರುಪೂರ್ಣಿಮೆ ದಿನ ರಾಮಪೂಜೆ‌ ಶುರುವಾಗಿ, ಧೂಪ-ದೀಪ, ನೈವೇದ್ಯದವರೆಗೆ ಆಗಿ ವ್ಯಾಸಪೂಜೆ ಆರಂಭವಾಗುತ್ತದೆ. ವ್ಯಾಸಪೂಜೆ ಎಂದರೆ‌ ಅದರಲ್ಲಿ ಕೃಷ್ಣಪಂಚಕ, ವ್ಯಾಸಪಂಚಕ, ಶಂಕರಾಚಾರ್ಯ ಪಂಚಕ, ಸನಕಾದಿಪಂಚಕ, ಗುರುಪಂಚಕ, ಅಷ್ಟದಿಕ್ಪಾಲಕರು(ಅಷ್ಟಕ), ಗುರು, ಗಣಪತಿ, ದುರ್ಗೆ, ಕ್ಷೇತ್ರಪಾಲ, ವಾಸ್ತುಪುರುಷ, ಬ್ರಹ್ಮ ಎಲ್ಲ ಸೇರಿ ಪೂಜೆ ಆಗುವಂತಹದು. ಕೊನೆಯ ಪೂಜೆಯನ್ನು ಸಮಷ್ಟಿ ಪೂಜೆ ಎನ್ನುತ್ತೇವೆ. ಅದು ಕೂಡ ಹಾಗೆ ಧೂಪ-ದೀಪ, ನೈವೇದ್ಯ ಆಗಿ ಅಲ್ಲಿ ನಿಲ್ಲುತ್ತದೆ. ಪುನಃ ರಾಮದೇವರ ಪೂಜೆ ಮುಂದುವರಿದು ಮಹಾನೈವೇದ್ಯ, ಮಹಾಮಂಗಳಾರತಿ ಆಗಿ, ವ್ಯಾಸಪೂಜೆಯ ಮಹಾನೈವೇದ್ಯ, ಮಹಾಮಂಗಳಾರತಿ ಆದ ಮತ್ತೆ ವ್ರತ ಸಂಕಲ್ಪ ನಡೆಯುತ್ತದೆ. ಪುನಃ ರಾಮದೇವರ ಪೂಜೆ ಆಗಿ, ಪುನಃ ವ್ಯಾಸಪೂಜೆ ಆಗಿ ವಿಸರ್ಜನೆ ಆಗಬೇಕು. ಆಮೇಲೆ ವ್ಯಾಸ ಮಂತ್ರಾಕ್ಷತೆ ಸಿಗುವಂತಹದ್ದು. ಮಧ್ಯೆ ಈ ಕ್ರಮ ಸ್ವಲ್ಪ ವ್ಯತ್ಯಾಸವಾಗಿತ್ತು. ಆದರೆ ಇವತ್ತಿನಿಂದ ಮೂಲಪರಂಪರಾಕ್ರಮದಂತೆ ನಡೆಯಲಿದೆ. ನಾವು ನಿಮ್ಮನ್ನು ತಿದ್ದುವುದು ಮಾತ್ರವಲ್ಲ ನಮ್ಮನ್ನು ನಾವು ಪ್ರತಿ ನಿತ್ಯ ತಿದ್ದುಕೊಳ್ಳುವ ಪ್ರಯತ್ನವಿರುತ್ತದೆ.
ಮಠದಲ್ಲಿ ನವರಾತ್ರಿ ಪೂಜೆ ಇತ್ತು. ನವರಾತ್ರಿಯಲ್ಲಿ ಹಗಲು ಉಪವಾಸ ಭಿಕ್ಷೆ ಮಾಡುವಂತಿಲ್ಲ. ಸಂಸ್ಥಾನ ಸೂರ್ಯಾಸ್ತದ ನಂತರ ಭಿಕ್ಷೆ ಮಾಡುವ ಕ್ರಮವಿಲ್ಲ. ವಿಜಯದಶಮಿಯಂದು ಭಿಕ್ಷೆ. ಯಾವುದೋ ಕಾರಣಕ್ಕೆ ಈ ಪದ್ಧತಿ ಬದಲಾಗಿತ್ತು. ರಾತ್ರಿ ನವರಾತ್ರಿಯನ್ನು ನಾವು ಪುನಃ ಆರಂಭಿಸಿದ್ದೇವೆ ಹಾಗೇ ಈ ವರ್ಷದಿಂದ ವ್ಯಾಸಪೂಜೆಯನ್ನು ಕೂಡ ಹಳೆಯ ಕ್ರಮದಲ್ಲಿ ಆಚರಣೆ ಮಾಡಿದ್ದೇವೆ. ಇನ್ನು ಮುಂದೆ ರಾಮದೇವರ ಎರಡೂ ಪೂಜೆಯ ನಂತರ ವ್ಯಾಸಪೂಜೆಯೂ ಆದ ಮತ್ತೆ ಮಂತ್ರಾಕ್ಷತೆ ದೊರೆಯುವುದು.
ಗುರು ಎಂದರೆ ನಾರಾಯಣ ಸ್ವರೂಪ.ಹಾಗಾಗಿ ವಿಷ್ಣು ಸಹಸ್ರನಾಮದೊಂದಿಗೆ ತುಳಸಿಯ ಅರ್ಚನೆ ನಡೆಯುತ್ತದೆ. ನಮ್ಮ ಅಪೇಕ್ಷೆ ಇಂದು ಈಡೇರಿದೆ. ಇಂದು ಸಂಪೂರ್ಣ ತುಳಸಿಯಲ್ಲಿಯೇ ಸಾವಿರ ಅರ್ಚನೆ ನಡೆದಿದೆ. ಗುರುಪರಂಪರೆಯಾದಿ ಸಕಲ ದೇವತೆಗಳ ಅನುಗ್ರಹ ಮಳೆಯಂತೆ ಶಿಷ್ಯರ ಮೇಲೆ ಸುರಿಯಲಿ ಎಂದು ಆಶಿಸುತ್ತೇವೆ.

Facebook Comments Box