ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂಘಟನಾ ಚಾತುರ್ಮಾಸ್ಯದಲ್ಲಿ ಅನುಗ್ರಹಿಸುತ್ತಿರುವ ಪ್ರವಚನದ ಅಕ್ಷರರೂಪ.

ಕೆಲವೊಮ್ಮೆ ಯೋಗ ಇರುತ್ತದೆ ಯೋಗ್ಯತೆ ಇರುವುದಿಲ್ಲ, ಕೆಲವರಿಗೆ ಯೋಗ್ಯತೆ ಇರುತ್ತದೆ ಯೋಗ ಇರುವುದಿಲ್ಲ, ಈ ಯೋಗ ಯೋಗ್ಯತೆಯ ಕುರಿತಾಗಿ ರಾಮಾಯಣದ ಒಂದು ಕಥೆ ಹೀಗಿದೆ.

ದಶರಥ ಚಕ್ರವರ್ತಿಗೆ ಬಹಳ ಕಾಲ ಮಕ್ಕಳಿರಲಿಲ್ಲ. ಒಮ್ಮೆ ಅವನಿಗೆ ಸಂತತಿ ಪ್ರಾಪ್ತಿಗಾಗಿ ಅಶ್ವಮೇಧ ಯಾಗ ಮಾಡುವ ಪ್ರೇರಣೆ ಬಂದಿತು. ಗುರು ಹಿರಿಯರು ಇದಕ್ಕೆ ಸಮ್ಮತಿಸಿ ಆಶೀರ್ವಾದವನ್ನು ನೀಡಿದರು. ಹಾಗೆಯೇ ದಶರಥ ಅಶ್ವಮೇಧ ಯಾಗವನ್ನು ಮಾಡಿದ. ಯಾಗವು ಪೂರ್ಣಗೊಂಡ ಬಳಿಕ ಯಾಗವನ್ನು ನಿರ್ವಹಿಸಿದ ಋತ್ವಿಜರಿಗೆ ದಕ್ಷಿಣೆ ಕೊಡಬೇಕು. ಯಜ್ಞದಲ್ಲಿ ನಾಲ್ಕು ಗಣಗಳು ಅಥವಾ ಭಾಗಗಳಿರುತ್ತವೆ, ನಾಲ್ಕು ವೇದಗಳ ಹಾಗೆ. ಹೋತೃ ಗಣ, ಅಧ್ವರ್ಯು ಗಣ, ಉದ್ಗಾತೃ ಮತ್ತು ಬ್ರಹ್ಮ ಗಣ ಎಂದು. ಒಂದೊಂದು ಗಣಗಳಿಗೂ ನಾಯಕರು ಇರುತ್ತಾರೆ, ಹೋತಾ (ಋಗ್ವೇದ), ಅಧ್ವರ್ಯು (ಯಜುರ್ವೇದ), ಉದ್ಗಾತ (ಸಾಮವೇದ) ಹಾಗೂ ಬ್ರಹ್ಮ (ಅಥರ್ವವೇದ). ಇವರು ನಾಲ್ವರು ಪ್ರಧಾನ ಋತ್ವಿಜರು.
ಅಶ್ವಮೇಧ ಯಾಗದ ದಾನವಾಗಿ ದಶರಥನು ಋತ್ವಿಜರಿಗೆ ಆಯಾ ದಿಕ್ಕಿನಲ್ಲಿರುವ ಎಲ್ಲ ರಾಜ್ಯಗಳನ್ನು ಕೊಟ್ಟನು. ಮಂತ್ರ ಪೂರ್ವಕವಾಗಿ ದೇವತೆಗಳನ್ನು ಕರೆಯುವವನಾದ ಹೋತೃವಿಗೆ ಪೂರ್ವದಿಕ್ಕನ್ನು, ಹವಿಸ್ಸನ್ನು ಸಮರ್ಪಣೆ ಮಾಡುವ ಅಧ್ವರ್ಯುವಿಗೆ ಪಶ್ಚಿಮದಿಕ್ಕನ್ನು, ಸಾಮ ಗಾನದ ಮೂಲಕ ದೇವರನ್ನು ಸಂತೋಷಗೊಳಿಸುವ ಉದ್ಗಾತೃಗೆ ಉತ್ತರದಿಕ್ಕು ಮತ್ತು ಇವೆಲ್ಲವನ್ನೂ ಗಮನಿಸಿ ಸರಿಪಡಿಸುವ ಬ್ರಹ್ಮನಿಗೆ ದಕ್ಷಿಣದಿಕ್ಕು. ಹೀಗೆ ತನ್ನಲ್ಲಿದ್ದ ಎಲ್ಲ ಸಂಪತ್ತನ್ನು ದಶರಥನು ದಾನ ಮಾಡಿದನು. ಅಶ್ವಮೇಧ ಯಜ್ಞದ ಸಂಪ್ರದಾಯವೇ ಹಾಗೆ, ಸಾರ್ವಭೌಮನಾದವನು ಮಾತ್ರ ಮಾಡಲು ಸಾಧ್ಯ. ಮತ್ತು ಯಜ್ಞದ ಕೊನೆಯಲ್ಲಿ ಇಡೀ ಭೂಮಿಯನ್ನು ದಾನವಾಗಿ ಕೊಡಬೇಕು. ಹಾಗೆ ಮಾಡಿ ದಶರಥ ಬರಿ ಕೈಗಳನ್ನು ಮುಗಿದು ನಿಂತ. ಅವನ ಕೈಗಳು ದಾನದಿಂದ ಶೋಭಿಸುತ್ತಿದವು. “ದಾನೇನ ಪಾಣಿ: ನ ತು ಕಂಕಣೇನ”. “ದಾನದಿಂದ ಹಸ್ತಕ್ಕೆ ಶೋಭೆ ಹೊರತು ಬಂಗಾರದ ಬಳೆಯಿಂದ ಅಲ್ಲ.” ಹಾಗಾಗಿ ಈಗ ಅವನ ಹಸ್ತಕ್ಕೆ ಭೂಮಂಡಲವನ್ನೇ ಕೊಟ್ಟಂತಹ ಶೋಭೆ ಇತ್ತು. ದಶರಥನು ‘ಅಕಿಂಚನ’ನಾಗಿ (ಏನೇನೂ ಇಲ್ಲದವನಾಗಿ) ತಲೆಬಾಗಿ ನಿಂತ. ಆದರೆ ಋತ್ವಿಜರು ಅಶ್ವಮೇಧದ ಸಂಪ್ರದಾಯದಂತೆ ಆ ದಕ್ಷಿಣೆಯನ್ನು ಸ್ವೀಕಾರ ಮಾಡಲಿಲ್ಲ. ಅವರು ರಾಜನಿಗೆ ‘ಭೂಮಿಯಿಂದ ನಮಗೆ ಆಗಬೇಕಾದ್ದು ಏನೂ ಇಲ್ಲ, ನಮ್ಮ ಆಶ್ರಮಗಳು, ಗುರುಕುಲದಲ್ಲಿರುವ ವಿದ್ಯಾರ್ಥಿಗಳ ಉದರದ ಹಸಿವನ್ನು ಇಂಗಿಸುವಷ್ಟು ಮೌಲ್ಯ ಕೊಟ್ಟರೆ ಸಾಕು’ ಎಂಬುದಾಗಿ ಹೇಳುತ್ತಾರೆ. ಅವರ ಅಭಿಪ್ರಾಯ ತಮಗೆ ರಾಜ್ಯಭಾರದ ಯೋಗ್ಯತೆಯಿಲ್ಲ, ತಮ್ಮ ಸ್ವಭಾವ, ಸಂಸ್ಕಾರ ಅದಕ್ಕೆ ಸಲ್ಲುವಂತಹದಲ್ಲ ಹಾಗೂ ತಾವು ಶಸ್ತ್ರ ಹಿಡಿದು ಯುದ್ಧ ಮಾಡುವಂತವರಲ್ಲ, ರಾಜ್ಯಪಾಲನೆಗೆ ದಶರಥನೇ ಸರಿ ಎಂಬುದಾಗಿ. ಹಾಗಾಗಿ ‘ಕಿಂಚಿತ್ ಮೌಲ್ಯವನ್ನು ಕೊಡು’ ಎಂಬುದಾಗಿ ಋತ್ವಿಜರು ಹೇಳುತ್ತಾರೆ. ಅದಕ್ಕೆ ದಶರಥನು ಹತ್ತು ಕೋಟಿ ಚಿನ್ನದ ನಾಣ್ಯ, ನಲವತ್ತು ಕೋಟಿ ಬೆಳ್ಳಿ ನಾಣ್ಯ ಹಾಗೆ ಹತ್ತು ಲಕ್ಷ ಗೋವುಗಳನ್ನು ಋತ್ವಿಜರಿಗೆ ಕೊಟ್ಟನು. ಆಗಲೂ ಅದನ್ನು ಸ್ವೀಕರಿಸದೆ ವಸಿಷ್ಠರು ಮತ್ತು ಋಷ್ಯಶೃಂಗರ ಮುಂದೆ ಇಡುತ್ತಾರೆ. ಅವರೂ ಕೂಡ ಯಾರ್ಯಾರಿಗೆ ಎಷ್ಟೆಷ್ಟು ಕೊಡಬೇಕೋ ಅಷ್ಟಷ್ಟು ಕೊಟ್ಟರು. ಎಲ್ಲವನ್ನೂ ತಾವೇ ಇಟ್ಟುಕೊಳ್ಳಲಿಲ್ಲ. ಯೋಗ್ಯತೆ ಇಲ್ಲದೆ ಏನನ್ನೂ ಸ್ವೀಕಾರ ಮಾಡಬಾರದು ಎಂಬುದು ಇದರ ತತ್ವವಾಗಿದೆ. ಈ ಸಂಪ್ರದಾಯ ಎಷ್ಟು ಅದ್ಭುತ ಎಂದರೆ ಯಜ್ಞ ದಕ್ಷಿಣೆಯಾಗಿ ತನ್ನಲ್ಲಿರುವ ಎಲ್ಲವನ್ನೂ ಕೊಡುವ ಯಜಮಾನ, ಹಾಗೆ ತಮ್ಮ ಜ್ಞಾನಕಾರ್ಯಕ್ಕೆ ಎಷ್ಟು ಬೇಕೋ ಅಷ್ಟನ್ನೇ ಸ್ವೀಕರಿಸುವ ಋತ್ವಿಜರು. ಒಂದು ಕ್ಷೇತ್ರದಲ್ಲಿ ತಮಗೆ ಯೋಗ್ಯತೆ ಇದೆ ಎಂದ ಮಾತ್ರಕ್ಕೆ ಎಲ್ಲಾ ಕ್ಷೇತ್ರದಲ್ಲೂ ಹಸ್ತಕ್ಷೇಪ ಮಾಡದಿರುವ ವಿವೇಕ ಇರಬೇಕು ಎಂಬ ಪಾಠವಿದೆ ಇಲ್ಲಿ. “ತಮ್ಮ ಯೋಗ್ಯತೆಯ ಅರಿವಿರುವವರು ಜೀವನದಲ್ಲಿ ಎಡವುದಿಲ್ಲ.”

ರಾವಣನು ಸೀತೆಯನ್ನು ಪಡೆಯುವ ಪ್ರಯತ್ನ ಮಾಡಿದ. ಅಂದರೆ ಯೋಗ್ಯತೆ ಇಲ್ಲದ್ದನ್ನು ಪಡೆಯಲು ಹೋಗಿ ಕೊನೆಯಲ್ಲಿ ತನ್ನಲ್ಲಿದ್ದ ಎಲ್ಲವನ್ನೂ ಕಳೆದುಕೊಂಡ. ಅವನೂ ಉಳಿಯಲಿಲ್ಲ. ಹಾಗಾಗಿ ಯೋಗ್ಯತೆ ಇಲ್ಲದಿರುವುದು ನಮಗೆ ಬಂದರೆ ಅದು ನಮ್ಮ ನಾಶಕ್ಕೆ ಕಾರಣವಾಗುತ್ತದೆ. ಯಾರು ಯಾವ ಕಾರ್ಯಕ್ಕೆ ಸೂಕ್ತವೋ ಅವರೇ ಆ ಕಾರ್ಯವನ್ನು ಮಾಡಬೇಕು ಎನ್ನುವುದು ಕಾರ್ಯಸಿದ್ಧಿಯ ಮೂಲಮಂತ್ರ.!! ಕಣ್ಣು ನೋಡಬೇಕು, ಕಿವಿ ಕೇಳಬೇಕು, ಧ್ವನಿ ಮಿಡಿಯಬೇಕು, ನಾಲಗೆ ನುಡಿಯಬೇಕು, ಕಾಲುಗಳು ನಡೆಯಬೇಕು, ಮೆದುಳು ಎಲ್ಲವನ್ನೂ ಯೋಚಿಸಿ ಸೂಚನೆ ಕೊಡಬೇಕು. ಹಾಗೆಯೇ ಋತ್ವಿಜರಿಗೆ ಇಡೀ ಸಂಪತ್ತು ತಮ್ಮ ಬಳಿ ಬಂದಾಗ ಸ್ವೀಕಾರ ಮಾಡದೇ ಇರುವಂತಹ ಸಂಯಮವಿತ್ತು.

“ಯಾವುದು ಯಾರಿಗೆ ಸಲ್ಲಬೇಕೋ ಅದು ಅವರಿಗೆ ಸಲ್ಲಬೇಕು, ಇಲ್ಲದಿದ್ದರೆ ಅದು ಋಣ ಭಾರವಾಗುತ್ತದೆ. ಯೋಗ್ಯತೆ ಇಲ್ಲದೆ ಇನ್ನೊಬ್ಬನ ಸೊತ್ತನ್ನು ತಾನು ಇಟ್ಟುಕೊಂಡರೆ ಪ್ರಕೃತಿಯು ದಂಡ ವಿಧಿಸುತ್ತದೆ, ಯಾವ ರೀತಿಯಿಂದಲಾದರೂ ನಮ್ಮ ಮೂಲಕ ಆ ಋಣವನ್ನು ತೀರಿಸುತ್ತದೆ.”

ನಮ್ಮ ಜೀವನದಲ್ಲಿ ಏನೆಲ್ಲಾ ಒದಗಿ ಬಂದರೂ ಅದಕ್ಕೆ ನಾವು ಯೋಗ್ಯರೋ ಅಲ್ಲವೋ ಎಂದು ಯೋಚಿಸಿ, ಯೋಗ್ಯ ಅಲ್ಲದಿದ್ದರೆ “ಬೇಡ” ಎಂದು ಹೇಳುವುದನ್ನು ನಾವು ಕಲಿತುಕೊಳ್ಳಬೇಕು. ಇಡೀ ರಾಮಾಯಣದಲ್ಲಿ ಈ ಪಾಠವಿದೆ. ಭರತನಿಗೆ ರಾಜ್ಯ ಸಿಕ್ಕಿದರೂ ಅವನು ಸ್ವೀಕರಿಸಲಿಲ್ಲ, ಏಕೆಂದರೆ ಅದು ರಾಮನಿಗೆ ಸೇರಬೇಕಾದ್ದು ತನಗಲ್ಲ ಎಂದು. ಕಿಷ್ಕಿಂಧೆಯನ್ನು ರಾಮನ ಮೂಲಕವಾಗಿ ಸುಗ್ರೀವ ಗೆದ್ದ. ಆದರೆ ರಾಮ ಕಿಷ್ಕಿಂಧೆಯನ್ನು ತಾನು ಇಟ್ಟುಕೊಳ್ಳದೆ ಸುಗ್ರೀವನಿಗೆ ಕೊಟ್ಟ, ಹಾಗೆ ಲಂಕೆಯನ್ನು ವಿಭೀಷಣನಿಗೆ ಗೆಲ್ಲಲು ಸಾಧ್ಯವಾಗಿದ್ದು ರಾಮನಿಂದಲೆ. ಆದರೆ ರಾಮ ಇಟ್ಟುಕೊಳ್ಳಲಿಲ್ಲ ವಿಭೀಷಣನಿಗೆ ಕೊಟ್ಟ.
ಎಷ್ಟೋ ಬಾರಿ ನಾವು ಯೋಗ್ಯತೆ ಇತ್ತು, ಯೋಗ ಬರಲಿಲ್ಲ ಎಂದು ಬೇಸರ ಪಟ್ಟುಕೊಳ್ಳುತ್ತೇವೆ. ಯೋಗ್ಯತೆ ಇದ್ದರೆ ಯೋಗವೂ ಬಂದೇ ಬರುತ್ತದೆ, ಇವತ್ತು ಅಲ್ಲದಿದ್ದರೆ ನಾಳೆ ಇಲ್ಲಾ ಮುಂದಿನ ಜನ್ಮದಲ್ಲಿ. ಅದಕ್ಕಾಗಿ ನಾವು ಕಾಯಬೇಕು. ಯೋಗ್ಯತೆ ಇದ್ದು ಕೂಡ ಈ ಜನ್ಮದಲ್ಲಿ ಯೋಗ ಬರಲಿಲ್ಲವೆಂದರೆ ಯಾವುದೋ ಜನ್ಮದಲ್ಲಿ ನಾವು ಮಾಡಿದ ತಪ್ಪುಗಳು, ದೋಷಗಳು ಅದಕ್ಕೆ ಕಾರಣವಾಗಿರುತ್ತದೆ. ಹಾಗಾಗಿ ಯಾವುದಾದರೂ ನಮಗೆ ಒದಗಿ ಬರಲಿಲ್ಲವೆಂದರೆ ಅದಕ್ಕೆ ನಾವು ಅರ್ಹರಲ್ಲ ಎಂದೇ ಅರ್ಥ. ಪ್ರತಿಯೊಬ್ಬರೂ ಇದು ನನ್ನದಲ್ಲ, ಇಷ್ಟು ಮಾತ್ರ ನನ್ನದು ಎಂಬ ವಿವೇಚನೆ ಇಟ್ಟುಕೊಂಡರೆ ಕೋರ್ಟು, ಪೊಲೀಸು ಹಾಗೂ ಕಾನೂನುಗಳೇ ಬೇಡವಾಗುತ್ತದೆ. ಚಿನ್ನದ ಕೊಡಲಿಯ ಕಥೆಯ ಹಾಗೆ. ಈ ಭಾವ ನಮ್ಮಲ್ಲಿ ಇದ್ದರೆ ಅದು ನಮ್ಮ ಜೀವನವನ್ನು ಉದ್ಧಾರ ಮಾಡುತ್ತದೆ. ಹಾಗಾಗಿ, “ಯೋಗ್ಯತೆಯನ್ನು ಸಂಪಾದನೆ ಮಾಡಬೇಕು, ಯೋಗವು ತಾನಾಗಿ ಬರುವುದನ್ನು ಕಾಯಬೇಕು” !!. ಯಾವುದೇ ವಿದ್ಯೆಯಾಗಲಿ ಪ್ರತಿನಿತ್ಯವೂ ಅಭ್ಯಾಸ ಮಾಡಿದಾಗ ಮಾತ್ರವೇ ನಮಗೆ ಒಲಿಯುವಂಥದ್ದು. ಯೋಗಕ್ಕಾಗಿ ನಾವು ಕಾಲವನ್ನು ಕಾಯಬೇಕು. ಯೋಗ ಇಲ್ಲದಿರುವುದರ ಕಡೆ ತಿರುಗಿಯೂ ನೋಡಬಾರದು. ಅದು ನಮ್ಮ ಆಪತ್ತಿಗೆ ಕಾರಣವಾಗುವುದು. ಮೊಟ್ಟ ಮೊದಲು ನಾವು ಏನು? ನಮ್ಮ ಯೋಗ್ಯತೆ ಏನು? ಎನ್ನುವುದನ್ನು ತಿಳಿದುಕೊಳ್ಳಬೇಕು. ವಿದ್ಯಾಭ್ಯಾಸ ಎನ್ನುವುದು ಯೋಗ್ಯತೆಯನ್ನು ಸಂಪಾದನೆ ಮಾಡುವ ಹಾಗೂ ಯೋಗ್ಯತೆಯ ಪರಿಚಯದ ಕಾಲ. ಹಾಗಾಗಿ ಯೋಗ್ಯತೆಯನ್ನು ಸಂಪಾದಿಸಿ ,ಯೋಗಕ್ಕಾಗಿ ಪ್ರಾರ್ಥಿಸೋಣ.

Facebook Comments Box