ವಾಲ್ಮೀಕಿ ರಾಮಾಯಣ: ಭಾಗ – 36
ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ.
ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ।**ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ ।**ಸ್ಥಿರೈರಂಗೈಸ್ತುಷ್ಟುವಾಗಂಸಸ್ತನೂಭಿಃ ।**ವ್ಯಶೇಮ ದೇವಹಿತಂ ಯದಾಯೂಃ ।
ಈ ನಾಲ್ಕು ಸಾಲುಗಳು ನಮ್ಮೆಲ್ಲರಿಗೆ ಚಿರ ಪರಿಚಿತ. ಭದ್ರ ಎಂದರೆ ಶುಭ, ಮಂಗಲ ಎಂದು ಅರ್ಥ. ಈ ಮಂತ್ರ ಕಲ್ಯಾಣವನ್ನು ಹೇಳುತ್ತದೆ.
ತಾತ್ಪರ್ಯ: “ಹೇ ದೇವತೆಗಳೇ, ನಮ್ಮ ಕಿವಿಗಳಿಗೆ ಯಾವಾಗಲೂ ಮಂಗಳಕರವಾದ ಶಬ್ದವೇ ಬೀಳಲಿ. ಹಾಗೆಯೇ ನಮ್ಮ ಕಣ್ಣುಗಳಿಗೆ ಒಳ್ಳೆಯ ದೃಶ್ಯಗಳೇ ಕಾಣಿಸಲಿ. ನಮ್ಮ ನಾಲಿಗೆಯಲ್ಲಿ ಒಳ್ಳೆಯ ಮಾತುಗಳೇ ಬರಲಿ”. ಯಾವತ್ತೂ ಇನ್ನೊಬ್ಬರ ಗುಣವನ್ನು ಎತ್ತಿ ಹಾಡಬೇಕು ಹೊರತು ದೋಷವನ್ನಲ್ಲ. ಹಾಗೆ “ನಮ್ಮ ಶರೀರ ಚೆನ್ನಾಗಿರಬೇಕು”. ಇದು ಈ ವೇದದ ಅರ್ಥ. ಇನ್ನೆರಡು ಸಂಗತಿಗಳು ಜೀವನದ ಉಪಯೋಗ ಹೇಗೆ ಎನ್ನುವುದರ ಬಗ್ಗೆ ಇರುವುದು. ‘ಯಜತ್ರಾಃ’ ಯಾಗದ ಯೋಗ್ಯತೆ ನಮಗೆ ಇರಬೇಕು, ಎಂದರೆ ದೇಹ ಗಟ್ಟಿ ಇರಬೇಕು, ಮನಸ್ಸು ಸ್ಥಿರವಾಗಿರಬೇಕು. ಆವಶ್ಯಕ ದ್ರವ್ಯಗಳು ಇರಬೇಕು. ಸಂಪತ್ತು ಇರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪವಿತ್ರತೆ ಮತ್ತು ಅರ್ಹತೆ ಬೇಕು. “ದೇವರ ಕುರಿತು ಪೂಜೆ ಅಥವಾ ಯಾಗ ಮಾಡುವಾಗ ನಾವು ದೇವರಾಗಬೇಕು. “ನಮ್ಮಲ್ಲಿ ದೇವ ಭಾವ ಬಂದರೆ ಮಾತ್ರ ನಾವು ಮಾಡಿದ ಪೂಜೆ ದೇವರಿಗೆ ಸಲ್ಲುತ್ತದೆ. ಯಜ್ಞ ಅಥವಾ ಯಾಗಕ್ಕೆ ಕೇವಲ ಪಾರಿಭಾಷಿಕ ಅರ್ಥ ಮಾತ್ರ ಅಲ್ಲ. ಅದಕ್ಕೆ ಅಗ್ನಿ ಬೇಕು, ಯಜ್ಞಕುಂಡ ಬೇಕು, ದ್ರವ್ಯಗಳು ಬೇಕು, ಮಂತ್ರ ಬೇಕು, ತುಪ್ಪ ಬೇಕು, ಯಾಗ ಮಂಟಪ ಬೇಕು, ಎಂದಷ್ಟೇ ಅಂದುಕೊಳ್ಳಬೇಡಿ.
*“ದೇವತೋದ್ದೇಶ್ಶ್ಯಕ ದ್ರವ್ಯತ್ಯಾಗಃ*” – ದೇವರನ್ನು ಲಕ್ಷ್ಯದಲ್ಲಿ ಇಟ್ಟುಕೊಂಡು ನಾವೇನು ತ್ಯಾಗ ಮಾಡುತ್ತೇವೆಯೋ, ಅದೇ ಯಾಗ. ನಮ್ಮ ಶ್ರಮ ಮತ್ತು ಸಮಯವನ್ನು ದೇವರಿಗೆ ಸಮರ್ಪಣೆ ಮಾಡುವಂತದ್ದು ಸಹ ಯಾಗವೇ. ನಮ್ಮ ಜೀವನವೇ ಯಾಗ ಆಗುವುದಕ್ಕೆ ಸಾಧ್ಯವಿದೆ. ಯಾವ ಸಮಯದಲ್ಲಾದರೂ ನಾವು ಯಾಗವನ್ನು ಮಾಡಬಹುದು. ಅದಕ್ಕೆ ಅಂತಹ ಯೋಗ್ಯತೆ, ವಾತಾವರಣ ಹಾಗೂ ಪ್ರೇರಣೆ ಬೇಕು.
“ನನ್ನ ಜೀವನ ಯಾಗವಾಗಲಿ. ನನಗೆ ಅಂತಹ ಅರ್ಹತೆ ಬರಲಿ. ಬದುಕೇ ಒಂದು ಯಜ್ಞ ಆಗಲಿ” ಎಂದು ಪ್ರಾರ್ಥಿಸಿ ಕೊನೆಯಲ್ಲಿ,
“ವ್ಯಶೇಮ ದೇವ ಹಿತಮ್ ಯದಾಯುಃ”
“ದೇವಹಿತದ ಆಯಸ್ಸನ್ನು ನಾವು ಹೊಂದುವಂತೆ ಆಗಲಿ”, ಎಂದರೆ “ದೇವತೆಗಳಿಗೆ ಕೂಡ ಹಿತವಾಗುವಂತಹ ಆಯಸ್ಸು ನಮಗೆ ಬರಲಿ”.
ಉದಾಹಣೆಗೆ ದಶರಥ. ದೇವಲೋಕಕ್ಕೆ ಸಂಕಟ ಬಂದರೆ ಸೂರ್ಯವಂಶಕ್ಕೆ ಕರೆ ಹೋಗುತ್ತಿತ್ತು, ‘ಬನ್ನಿ, ಕಾಪಾಡಿ’ ಎಂದು.
ಈ ಭೂಮಿಯನ್ನು ದೇವರಿಗೆ ಸಲ್ಲುವಂತೆ ನಾವು ಇಟ್ಟರೆ, ಅದು ದೇವಹಿತವಾಗುವಂತದ್ದು. ಹಾಗಾಗಿ ದೇವರಿಗೆ, ದೇವತೆಗಳಿಗೆ, ದೇವತ್ವಕ್ಕೆ ಸಲ್ಲುವಂತೆ ಇರಬೇಕು. ಅಂತಹ ಆಯಸ್ಸು ನಮಗಿರಲಿ.
ರಾವಣನೂ ಕೂಡ ತುಂಬಾ ವರ್ಷ ಬದುಕಿದ್ದ. ಆದರೆ ಅವನು ದೇವ ಅಹಿತನಾಗಿದ್ದ. ತ್ರಿಲೋಕಕ್ಕೂ ತೊಂದರೆ ಆಗಿದ್ದ. ಅದೇ ರಾಮನ ಕೊನೆಯ ಕ್ಷಣಗಳಲ್ಲಿ ಕಾಲಪುರುಷ ಕೇಳಿದನಂತೆ “ನಿನ್ನ ಸಮಯ ಮುಗಿದಿದೆ. ನೀನು ಇಲ್ಲೇ ಇರುವವನೋ ಅಥವಾ ಪುನಃ ವೈಕುಂಠಕ್ಕೆ ಬರುವವನೋ? ನಿನ್ನ ಇಚ್ಛೆಯಂತೆ ಆಗಲಿ” ಎಂದು. ನಮ್ಮ ಜೀವನ ಹಾಗೆ ಆಗಬೇಕು. ಪರರಿಗೆ ಮತ್ತು ದೇವತೆಗಳಿಗೆ ಹಿತವಾಗಿರಬೇಕು. ರಾವಣನಂತೆ ಇದ್ದರೆ ಇರುವ ಆಯಸ್ಸು ಉಪಯೋಗವಿಲ್ಲ. ಈ ಜಗತ್ತು ಚೆನ್ನಾಗಿ ಇದ್ದರೆ ದೇವರು ಸಂತೋಷ ಪಡುತ್ತಾರೆ. ರಾಮನಂತಹ ಆಯಸ್ಸು ನಮಗೆ ಪ್ರಾಪ್ತಿ ಆಗಲಿ. ಇದಿಷ್ಟು ಈ ಮಂತ್ರದ ಸರಳಾರ್ಥ.
ಆದರೆ ಇವತ್ತಿನ ಜಗತ್ತು ಹೀಗಿಲ್ಲ. ಇಂದಿನ ದಿನಗಳಲ್ಲಿ ಕಣ್ಣನ್ನು ತೆರೆದರೆ ಕಲ್ಮಶಗಳೇ ಕಾಣಿಸುತ್ತದೆ. ವಾತಾವರಣವೇ ಮಲಿನ. ಜನರ ಸಂತೆ, ವಾಹನಗಳ ಶಬ್ದ, ಹೊಗೆ ಇತ್ಯಾದಿ. ಎಲ್ಲಿ ನೋಡಿದರೂ ಕೆಟ್ಟ ಸುದ್ದಿಗಳು. ಜಗತ್ತು ತುಂಬಾ ಕಲುಷಿತವಾಗಿದೆ. ಯಾವ ದಾರಿಯಿಂದ ರೋಗ~ರುಜಿನಗಳು ಬರಬಹುದು ಎನ್ನುವುದು ಗೊತ್ತಿಲ್ಲ.
*ಅಯೋಧ್ಯೆಯ ವರ್ಣನೆ :*
ಈ ಮಂತ್ರದ ವಿವರಣೆಯು, ವಾಲ್ಮೀಕಿಗಳು ಮಾಡಿದ ಅಯೋಧ್ಯೆಯ ವರ್ಣನೆಯನ್ನು ನೋಡಿದರೆ ಅಲ್ಲಿ ಗೋಚರಿಸುತ್ತದೆ.
“ಕಣ್ತೆರೆದಲ್ಲಿ ಕಲ್ಯಾಣ, ಕಿವಿ ತೆರೆದರೆ ಕೂಜನ”. ಎಲ್ಲಿ ಕೇಳಿದರೂ ಮಂಗಳ ಮಧುರ ಶಬ್ದಗಳು, ಇಡೀ ಅಯೋಧ್ಯೆಯಲ್ಲಿ ಎಲ್ಲಿಯೂ ಧೂಳಿನ ಸುಳಿವಿರಲಿಲ್ಲ. ಯಾಕೆಂದರೆ, ಅಯೋಧ್ಯೆಯ ಆಡಳಿತ ವರ್ಗದವರು ಮತ್ತು ಪ್ರಜಾಜನರು ಕೂಡ ಸೇರಿಕೊಂಡು ಪ್ರತಿನಿತ್ಯ ಅಲ್ಲಿನ ರಾಜಮಾರ್ಗದ ಮೇಲೆ ಪರಿಮಳದ ಹಿಮಜಲವನ್ನು ಸೇಚನೆ ಮಾಡುತ್ತಿದ್ದರಂತೆ. ಅಷ್ಟಲ್ಲದೆ ಬೀದಿಗಳ ಮೇಲೆ ಹೂವುಗಳನ್ನು ಚೆಲ್ಲುತ್ತಿದ್ದರು. “ಮುಕ್ತಪುಷ್ಪ” ಎಂದು ವಾಲ್ಮೀಕಿಗಳು ಬಳಸಿದ ಶಬ್ದ. ಹಾಗಾಗಿ ಅಯೋಧ್ಯೆ ರಜಸ್ಸಿನಿಂದ ಮುಕ್ತವಾಗಿತ್ತು, ರಜೋಗುಣದಿಂದಲೂ ಹಾಗೆಯೇ ಧೂಳಿನಿಂದಲೂ. ಅಯೋಧ್ಯೆಯ ಬದುಕನ್ನು ನೋಡಿದರೆ “ಹೂ ಹಾಸಿದ ಹಾದಿ” ಎಂಬಂತೆ ಇತ್ತು. ಹಾಗೆಯೇ ಯಾವಾಗಲೂ ಧೂಪದ ಸುಗಂಧ ಅಲ್ಲಿ ಹಬ್ಬಿ ಹರಡಿರುತ್ತಿತ್ತು. ಆ ಧೂಪದ ಸುಗಂಧದಿಂದ ಸಮ್ಮಿಳಿತವಾದಂತಹ ತಂಪು ಗಾಳಿ ಅಲ್ಲಿ ಹಿತವಾಗಿ, ಮೆಲ್ಲನೆ ಬೀಸುತ್ತಿತ್ತು. ತಂಪು ಗಾಳಿ ಬೀಸಬೇಕೆಂದರೆ ಅಲ್ಲಿ ಮರ, ಗಿಡ, ವನಸ್ಪತಿಗಳು ಬೇಕು. ಅವುಗಳ ಮೇಲಿಂದ ಬೀಸಿ ಬರುವ ಗಾಳಿ ತಂಪಾಗಿಯೂ, ಔಷಧೀಯವಾಗಿಯೂ ಇರುತ್ತದೆ. ಅಲ್ಲಿ ಎಲ್ಲಿ ಕಣ್ಬಿಟ್ಟರೂ ಮಂಗಲಕರ, ಮನೋಹರ ದೃಶ್ಯಗಳೇ ಗೋಚರಿಸುತ್ತಿದ್ದವು, “ಭದ್ರಂ ಪಶ್ಯೇಮ ಅಕ್ಷಭಿಃ”. ಏಕೆಂದರೆ ಎಷ್ಟು ಬಗೆಯ ಶಿಲ್ಪಗಳು ಜಗತ್ತಿನಲ್ಲಿ ಇರಬಹುದೋ, ಶಿಲಾಶಿಲ್ಪ, ಕಾಷ್ಠಶಿಲ್ಪ, ಮೃಚ್ಛಿಲ್ಪ ಹೀಗೆ ಒಂದೊಂದು ಪ್ರಕಾರದಲ್ಲೂ ಕೂಡ ಸರ್ವಶ್ರೇಷ್ಠ ಶಿಲ್ಪಗಳು ಅಯೋಧ್ಯೆಯಲ್ಲಿದ್ದವು. ಯಾವ ಮನೆ, ಕಟ್ಟಡಗಳನ್ನು ನೋಡಿದರೂ ಶಿಲ್ಪಗಳು ಗೋಚರಿಸುತ್ತಿದ್ದವು. ಉತ್ತಮೋತ್ತಮ ಸಂಗೀತ ಕಲಾವಿದರು ಹಲವಾರು ಇದ್ದುದರಿಂದ ಯಾವ ಬೀದಿಗೆ ಹೋದರೂ ಕೂಡ ಸಂಗೀತದ ಸುಮಧುರ ನಿನಾದ ಕೇಳಿ ಬರುತ್ತಿತ್ತು. ಸಂಗೀತವು ಶಾಸ್ತ್ರೀಯವಾಗಿದ್ದರೆ ತುಂಬಾ ಮಂಗಲಕರವಾಗಿ ಕೂಡ ಇರುತ್ತದೆ. “ತುಷ್ಟುವಾಂ ಸಃ”, ಒಳ್ಳೆಯ ಮಾತುಗಳೇ ಅಲ್ಲಿ ಕೇಳಿ ಬರುತ್ತಿದ್ದವು. ಅಯೋಧ್ಯೆಯಲ್ಲಿ ಒಬ್ಬರನ್ನೊಬ್ಬರು ಟೀಕೆ ಮಾಡುವಂತಹ, ನಿಂದನೆ ಮಾಡುವಂತಹ ಪದ್ಧತಿ ಇರಲಿಲ್ಲ. ಮುಖ್ಯವಾಗಿ ದೊರೆಯನ್ನು ಹಾಗೂ ದೊರೆಯ ವಂಶವನ್ನು ಎಲ್ಲೆಂದರಲ್ಲಿ ಹೀಗೆ ಸ್ತುತಿಸುತ್ತಿದ್ದರು, “ಈ ನಗರವನ್ನು, ತಮ್ಮ ಬದುಕನ್ನು ಸುಂದರವಾಗಿ ಇಟ್ಟವರು; ಇಷ್ಟು ಒಳ್ಳೆಯ ವಾತಾವರಣವನ್ನು ನಿರ್ಮಾಣ ಮಾಡಿ ಕೊಟ್ಟವರು; ಕಣ್ಣು, ಕಿವಿ, ಜೀವನ ಎಲ್ಲವೂ ಹಿತವಾಗಿದೆ. ಈ ವ್ಯವಸ್ಥೆಯ ವ್ಯವಸ್ಥಾಪಕ ದೊರೆ.” ಹಾಗಾಗಿ ಅಯೋಧ್ಯೆಯ ಬೀದಿಗಳಲ್ಲಿ ಓಡಾಡಿದರೆ ಕಣ್ಣಿಗೆ ಒಳ್ಳೆಯ ದೃಶ್ಯ, ಕಿವಿಗೆ ಒಳ್ಳೆಯ ಶಬ್ದಗಳು, ಮೂಗಿಗೆ ಒಳ್ಳೆಯ ಪರಿಮಳ, ತಂಪು ಗಾಳಿ ಬೀಸುವಾಗ ಸ್ಪರ್ಶಕ್ಕೆ ಹಿತ ಮತ್ತು ಆ ದೊರೆಯ ಬಗ್ಗೆ ಹಾಗೆಯೇ ಇಕ್ಷ್ವಾಕು ವಂಶದ ಬಗ್ಗೆಯೇ ಒಳ್ಳೆಯ ಮಾತುಗಳು ಕೇಳಿ ಬರುತ್ತಿದ್ದವು.
ಅಯೋಧ್ಯೆಯ ಅನ್ನ, ನೀರಿನ ಬಗ್ಗೆ ವಾಲ್ಮೀಕಿಗಳು ವರ್ಣನೆ ಮಾಡುತ್ತಾರೆ.*”ಶಾಲಿ ತಂಡುಲ ಸಂಪೂರ್ಣ”*”ಶಾಲ್ಯನ್ನ” – ‘ಶಾಲಿ’ ಒಂದು ಪ್ರಕಾರದ ಅಕ್ಕಿ, ಅಕ್ಕಿಯಲ್ಲಿ ಶ್ರೇಷ್ಠವಾದ ಜಾತಿ ಅದು. ಆ ಶ್ರೇಷ್ಠ ತಳಿಯ ಅಕ್ಕಿ ಅಯೋಧ್ಯೆಯಲ್ಲಿ ತುಂಬಿ ತುಳುಕುತ್ತಿತ್ತು. ಆದರೆ ಈಗ ಆ ತಳಿಯ ಅಕ್ಕಿ ಉಳಿದಿಲ್ಲ ಮತ್ತು ಅಯೋಧ್ಯೆಯಲ್ಲಿ ಈಗ ಗೋಧಿ ಮಾತ್ರ ಬೆಳೆಯುತ್ತಾರೆ.
*”ಇಕ್ಷುಕಾಂಡ ರಸೋದಕಾಂ”* ಕಬ್ಬಿನಹಾಲನ್ನು ಹೋಲುವಂತಹ ಸಿಹಿ ಸಿಹಿಯಾದ ನೀರು. ಕೆಲವು ಕಡೆ ನೀರು ಸಪ್ಪೆ, ದಪ್ಪ, ಒರಟು ಹೀಗೆಲ್ಲಾ ಇರುತ್ತದೆ. ಆದರೆ ಅಯೋಧ್ಯೆಯ ನೀರು ಕಬ್ಬಿನಹಾಲು. ಅಯೋಧ್ಯೆಯಲ್ಲಿ ಕಾಣುವ ಮನುಷ್ಯರ ಬಗ್ಗೆಯೂ ತುಂಬಾ ವರ್ಣನೆಗಳಿವೆ. ಕುಂಡಲ, ಮಕುಟ – ಶಿರೋಭೂಷಣ, ಹಾರ ಹಾಕಿಕೊಳ್ಳದೇ ಇರುವವರು ಇಲ್ಲ. ಅಭ್ಯಂಜನ ಸ್ನಾನ ಮಾಡದೇ ಇರುವವರು ಇಲ್ಲ. ಒಳ್ಳೆಯ ವಸ್ತ್ರ ಧಾರಣೆ ಮಾಡದೇ ಇರುವವರು ಇಲ್ಲ. ಹೀಗೆ ತುಂಬಾ ಸುಂದರವಾದ ಕಲ್ಪನೆಗಳಿವೆ. ನಾವು ಪೂರ್ತಿ ಸರ್ಗವನ್ನು ಓದಿದರೆ ಬರುವ ಕಲ್ಪನೆ ಏನೆಂದರೆ, ಅಯೋಧ್ಯೆ ‘ಸ್ವರ್ಗವಾ!’ ಅನ್ನಿಸುತ್ತದೆ. ಮನುಷ್ಯ ಲೋಕದಲ್ಲಿ ಸ್ವರ್ಗ ಇತ್ತಾ? ಎಂಬ ಪ್ರಶ್ನೆ ಮೂಡುತ್ತದೆ. ಸ್ವರ್ಗ ಎಂದರೆ ಏನು? ಕಣ್ತೆರೆದರೆ ಶುಭ, ಕಿವಿ, ಬಾಯಿ ತೆರೆದರೆ ಶುಭ, ಕೈಕಾಲುಗಳು ಗಟ್ಟಿ, ಮುಪ್ಪಿಲ್ಲ, ಶರೀರಕ್ಕೆ ಸಾವಿಲ್ಲ, ಇದೇ ಸ್ವರ್ಗ.
*ನಮ್ಮ ಜೀವನದಲ್ಲಿ “ಭದ್ರಂ ಕರ್ಣೇಭಿಃ……”
*ಈ ಭಾಗವನ್ನು ಇವತ್ತು ಯಾಕೆ ತೆಗೆದುಕೊಂಡೆವೆಂದರೆ, ನಮ್ಮ ಗುರುಕುಲವನ್ನು ಹೀಗೆ ಮಾಡಲು ಸಾಧ್ಯವಾ? ಯಾರೋ ಒಬ್ಬರು ಮಾಡುವಂತಹದ್ದಲ್ಲ. ನಾವೆಲ್ಲರೂ ಸೇರಿ ಮಾಡಬೇಕು. ಏನು ಮಾಡಬೇಕು? ಅಂದರೆ ಎಲ್ಲಿಯೂ ಅಮಂಗಲ, ಕಲ್ಮಶ, ಕೊಳಕು, ಅಶುಭ ಕಾಣಬಾರದು. ಹಾಗೆ ನಾವು ನಮ್ಮ ಹೊರಗಿನ ವಾತಾವರಣ ಮತ್ತು ಅಂತರಂಗವನ್ನು ಇಟ್ಟುಕೊಳ್ಳಬೇಕು. ಯಾಕೆ ನಾವು ನಮ್ಮ ಗುರುಕುಲದ ವಾತಾವರಣವನ್ನು ಅಯೋಧ್ಯೆಯಾಗಿ ಮಾಡಬಾರದು? ನಮ್ಮ ಶಾಲೆ, ಅಕ್ಕ-ಪಕ್ಕದ ವಾತಾವರಣದಲ್ಲಿ ಕಸ, ಕಲ್ಮಶ ತುಂಬಿದ್ದರೆ ಅದು ನರಕ ಎಂದೆನಿಸಿಕೊಳ್ಳುತ್ತದೆ.
‘ಭದ್ರಂ ಕರ್ಣೀಭಿಃ, ಭದ್ರಂ ಅಕ್ಷೇಭಿಃ’ ಆಗುವುದಿಲ್ಲ. ಹಾಗೆ ಆಗಬೇಕು ಎಂದರೆ ಎಲ್ಲಿಯೂ ಕೊಳೆ, ಕಸ ಇರಬಾರದು. ಎಲ್ಲಾ ಕಡೆಯೂ ಶುಭವನ್ನು ಬೆಳೆಸಬೇಕು. ತುಳಸಿ, ದೂರ್ವೆ, ಹೂವಿನ ಗಿಡಗಳನ್ನು ಬೆಳೆಸಬೇಕು. ನಮಗೆ ಬೇಕಾದ ವಾತಾವರಣ ತುಂಬಾ ಮಂಗಲಮಯವಾಗಿ ಇರಬೇಕು. ಹಾಗೇ ನಮ್ಮ ಮಾತುಗಳು ಮಂಗಳಕರವಾಗಿ ಇರಬೇಕು. ಬೆಳಗಾಗುವಾಗಲೇ ಒಂದು ಬೈಗುಳ ಕೇಳಿ ಏಳುವಂತೆ ಆಗಬಾರದು. ನಾವು ಏಳುವ ಹೊತ್ತಿಗೆ ಏಳದೇ ಇದ್ದರೆ ಬೈಗುಳ ಕೇಳಿ ಏಳುವಂತೆ ಆಗುತ್ತದೆ. ಏಳುವ ಹೊತ್ತಿಗೆ ಎದ್ದುಬಿಟ್ಟರೆ ನಮಗೆ ಹೇಗೆ ಬೇಕೋ ಹಾಗೆ ಏಳಬಹುದು. ನಮಗೆ ಯಾವುದು ಬೇಕೋ ಅದನ್ನು ನೋಡಬಹುದು. ಎದ್ದ ಕೂಡಲೇ ಆಕಾಶ ನೊಡಬೇಕಂತೆ, ಅದು ಮಂಗಲ ವಸ್ತು. ದೀಪ, ಗೋವು ಇವುಗಳನ್ನು ನೋಡಬೇಕು, ಇದೆಲ್ಲಾ ಶುಭ. ಕನ್ನಡಿ ನೋಡಬಹುದು, ಏಕೆಂದರೆ ನಮಗೆ ನಾವೇ ಶುಭ. ಕನ್ನಡಿ ಕೂಡಾ ಮಂಗಲ ವಸ್ತುವೇ, ಅದನ್ನು ನೋಡಬಹುದು ಎಂದು ಶಾಸ್ತ್ರವು ತಿಳಿಸುತ್ತದೆ. ನಾವು ಏಳಬೇಕಾದ ಸಮಯಕ್ಕೆ ಏಳದೇ ಇದ್ದರೆ ಇದ್ಯಾವುದಕ್ಕೂ ಅವಕಾಶ ಇರುವುದಿಲ್ಲ. ನಾವು ನಿಮಗೆ ಹೇಳುವುದೇನೆಂದರೆ ಇಡೀ ದಿನವನ್ನು ಅಂದರೆ ಎದ್ದಾಗಿನಿಂದ ಮಲಗುವಲ್ಲಿಯವರೆಗೆ ನಮ್ಮ ಮಾತು, ವ್ಯವಹಾರ, ನಮ್ಮ ಸುತ್ತಮುತ್ತಲಿನ ವಾತಾವರಣ ಪೂರ್ತಿ ಮಂಗಲಕರವಾಗಿರುವಂತೆ ನೋಡಿಕೊಳ್ಳಬೇಕು. ಇದು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಸೇವಕರಿಗೆ ಎಲ್ಲರಿಗೂ ಅನ್ವಯವಾಗುತ್ತದೆ. ಮನಸ್ಸು ಮಂಗಲವಾದರೆ ಮೈ ಕೂಡ ಮಂಗಲವಾಗುತ್ತದೆ. ಮನಸ್ಸು ಮಂಗಲವಾಗಬೇಕಾದರೆ ಆ ಮಂಗಲಮೂರ್ತಿಯ ಸ್ಮರಣೆಯನ್ನು ನಾವು ಮಾಡಬೇಕು. ‘ಅವನಿಗಾಗಿ ಬದುಕು’ ಎನ್ನುವ ಭಾವ ಬೇಕು. ನಮ್ಮ ಜೀವನವೇ ‘ಯಾಗ’ ಆಗುವುದು ಯಾವಾಗ ಎಂದರೆ ‘ಭಗವಂತನ ಸೇವೆಗಾಗಿ ಬದುಕು’, ‘ಅವನ ಪ್ರೀತಿಗಾಗಿ ಬದುಕು’ ಎನ್ನುವ ಉದ್ದೇಶ ನಮಗೆ ಬಂದಾಗ ಮಾತ್ರ. ಆಗ ನಮ್ಮ ಇಡಿಯ ಜೀವನವೇ ಪವಿತ್ರವಾಗುವುದು. ಹಾಗಾಗಿ ನಾವು ಈ ಮಂತ್ರವನ್ನು ನಮ್ಮ ಬದುಕಾಗಿಸಿಕೊಂಡು ನಮ್ಮ ವಾತಾವರಣವನ್ನು ಅದೇ ರೀತಿ ಪರಿವರ್ತನೆ ಮಾಡಬೇಕು.
|| ಹರೇರಾಮ ||
Jagadguru Shankaracharya Sri Sri Raghaveshwara Bharati Mahaswamiji – Ramayana sessions – Akshararoopa
ಶ್ರೀಸಂಸ್ಥಾನದವರು ಅನುಗ್ರಹಿಸುತ್ತಿರುವ – ಧರ್ಮಭಾರತೀ ಪ್ರಕಟಿಸುತ್ತಿರುವ *’ಭಾವ~ರಾಮಾಯಣ’* ವೇ ರಾಮಾಯಣ ಪಾಠದ ಪಠ್ಯ.
*ಶ್ರೀಸಂಸ್ಥಾನದವರು ಧರ್ಮಭಾರತೀ ಮೂಲಕ ಮರ್ಯಾದಾ ಪುರುಷೋತ್ತಮನ ದಿವ್ಯವ್ಯಕ್ತಿತ್ವವನ್ನು ಮತ್ತೆ ಕಟ್ಟಿಕೊಡುತ್ತಿದ್ದಾರೆ.*
ವಿ.ಸೂ: ಚಂದಾ ಮಾಡಲು ಸಂಪರ್ಕಿಸಿ – 9449595254
Leave a Reply