ವಾಲ್ಮೀಕಿ ರಾಮಾಯಣ: ಭಾಗ – 39
ಅಮೇರಿಕ ಸಂಯುಕ್ತ ಸಂಸ್ಥಾನದ ಭೂತಪೂರ್ವ ಅಧ್ಯಕ್ಷ ಜಾನ್ ಕೆನಡಿ ಒಂದು ಮಾತನ್ನು ಹೇಳುತ್ತಾರೆ, “ದೇಶ ನನಗೇನು ಮಾಡಿತು ಎಂದು ಕೇಳಬೇಡಿ, ದೇಶಕ್ಕೆ ನಾನೇನು ಮಾಡಬಲ್ಲೆ ಎಂಬುದನ್ನು ನಿಮಗೆ ನೀವು ಕೇಳಿಕೊಳ್ಳಿ”. ದೇಶಕ್ಕೆ ನಾವು ಸರ್ವಾರ್ಪಣೆ ಮಾಡಬೇಕು. ಯಾಕೆಂದರೆ ದೇಶ ನಮಗೆ ಎಲ್ಲವನ್ನು ಕೊಟ್ಟಿದೆ. ದೇಶ ನನಗೇನು ಮಾಡಿದೆ? ಎಂದು ಆಲೋಚನೆ ಮಾಡಿದರೆ, ಏನು ಮಾಡಿಲ್ಲ ಹೇಳಿ! ನಿಂತ ನೆಲ ನಮ್ಮ ದೇಶ. ನಾವು ಎಲ್ಲಿ ನಿಲ್ಲುತ್ತೇವೆ, ಕೂರುತ್ತೇವೆ, ಮಲಗುತ್ತೇವೆ, ಎಲ್ಲಿ ಊಟ ಮಾಡುತ್ತೇವೆ, ಎಲ್ಲಿ ನಾವು ಬದುಕನ್ನು ಸಾಗಿಸುತ್ತೇವೆ ಅದುವೇ ದೇಶ. ನಾವು ಉಟ್ಟ ಬಟ್ಟೆಯಿಂದ ಹಿಡಿದು ಪ್ರತಿಯೊಂದು ಸಂಗತಿಯು ಕೂಡ ದೇಶದಿಂದ ಬಂದಿರುವಂತದ್ದು. ಹಾಗಾಗಿ ನನ್ನ ದೇಶ ನನಗೇನು ಮಾಡಿತು ಎಂದು ಕೇಳಿಕೊಂಡಾಗ, ಆಲೋಚಿಸಿದಾಗ, ನಾವು ಜೀವನದಲ್ಲಿ ಏನನ್ನೆಲ್ಲ ಪಡೆದುಕೊಂಡಿದ್ದೇವೆಯೋ ಅದರಲ್ಲಿ ಬಹುತೇಕ ಸಂಗತಿಗಳು ಸಮಾಜದಿಂದ, ದೇಶದಿಂದ ಬಂದಿದೆ ಎಂಬುದು ನಮಗೆ ತಿಳಿಯುತ್ತದೆ.
ಮನುಷ್ಯ ಸಂಘಜೀವಿ. ಒಬ್ಬಂಟಿಯಾಗಿ ಮನುಷ್ಯ ಬದುಕಲು ಸಾಧ್ಯವಿಲ್ಲ. ಹಾಗೆ ಬದುಕುವಂತಹ ಪರಂಪರೆ, ಪದ್ಧತಿ ಕೂಡ ಇಲ್ಲ. ಹಾಗಾಗಿ ಅನೇಕಾನೇಕ ಸಂಗತಿಗಳು ಎಲ್ಲಿಂದಲೋ ಬಂದಿರುತ್ತವೆ. ನಮ್ಮ ಜೀವನದಲ್ಲಿ ಕಂಡ, ಕಾಣದ ಕೈಗಳು ಅಂದರೆ ನಮ್ಮ ಜೀವನದಲ್ಲಿ ಯಾರದೆಲ್ಲ ಸಹಕಾರವಿದೆ ಎಂಬುದು ಕೆಲವು ಕಣ್ಣಿಗೆ ಕಾಣುತ್ತದೆ, ಕೆಲವು ಕಾಣುವುದಿಲ್ಲ. ಇವುಗಳ ಒಟ್ಟು ಮೊತ್ತವೇ ದೇಶ. ಎಲ್ಲವನ್ನು ಕೊಟ್ಟ ದೇಶಕ್ಕೆ ಎಲ್ಲವನ್ನೂ ಕೊಡಲು ನಾವು ಸಿದ್ಧರಿರಬೇಕು.
ಎರಡು ಶ್ರೇಷ್ಠ ವರ್ಗವಿದೆ. ದೇಶಕ್ಕಾಗಿ ಜೀವನವನ್ನು ಕೊಡುವವರು, ಈ ವರ್ಗದಿಂದ ದೇಶ ನಡೆಯುತ್ತಿದೆ. ಇನ್ನೊಂದು ದೇಶಕ್ಕಾಗಿ ಜೀವವನ್ನೇ ಕೊಡುವವರು. ಈ ವರ್ಗದಿಂದಾಗಿ ದೇಶ, ದೇಶದ ವ್ಯವಸ್ಥೆ ಉಳಿದಿದೆ. ಕ್ಷತ್ರ ಧರ್ಮ ಇಲ್ಲಿ ಬರುತ್ತದೆ. ದೇಶಕ್ಕಾಗಿ, ಸಮಾಜಕ್ಕಾಗಿ, ಒಳಿತಿಗಾಗಿ ತಮ್ಮ ಜೀವವನ್ನೇ ಕೊಡುವುದಕ್ಕೆ ಸಿದ್ಧವಿರುವಂತಹ ವರ್ಗ. ಜೀವವನ್ನೇ ಕೊಡುವುದು ಎಂದರೆ ಸಣ್ಣ ವಿಷಯವಲ್ಲ. ನಮಗೆ ಯಾವುದು ಮುಖ್ಯ? ಎಂದು ಆಲೋಚನೆ ಮಾಡಿದರೆ, ಹಣವನ್ನು, ಮನೆಯನ್ನು, ಬಟ್ಟೆಯನ್ನು ತ್ಯಾಗ ಮಾಡಿದರೆ ಪುನಃ ಕೊಳ್ಳಬಹುದು, ಗಳಿಸಬಹುದು. ಆದರೆ ಪ್ರಾಣ ತ್ಯಾಗ ಮಾಡಿದರೆ? ಅದು ತಿರುಗಿ ಬರುವುದೇ? ಒಂದು ಬದುಕಿಗೆ ಒಂದೇ ಜೀವ ಎಂಬುವುದು ಇರುವಂತದ್ದು, ಅದು ಅಷ್ಟು ಅಮೂಲ್ಯ. ಈ ದೇಹದಲ್ಲಿ ಒಂದು ವಿದ್ಯುತ್ ಹರಿಯುತ್ತಿರುತ್ತದೆ. ಅದಕ್ಕೆ ಜೀವ ಎಂದು ಹೆಸರು. ಅದು ದೇಹದಲ್ಲಿ ಹರಿಯುತ್ತಿರುವಷ್ಟು ಸಮಯ ಉಸಿರಾಟ, ನಾಡಿಮಿಡಿತ, ಹೃದಯಬಡಿತ, ಊಟ, ಭಾವನೆಗಳು ಎಲ್ಲ ಇರುತ್ತವೆ. ಆದರೆ ಯಾವ ಕ್ಷಣಕ್ಕೆ ಆ ವಿದ್ಯುತ್ ಹೋಗುತ್ತದೆಯೋ ಅಲ್ಲಿಗೆ ಮುಗಿಯಿತು. ಧ್ಯಾನ, ಸಮಾಧಿ ವಿಷಯವನ್ನು ಹೊರತು ಪಡಿಸಿದರೆ ಬೇರೆ ಯಾವುದಾದರೂ ಕಾರಣಕ್ಕೆ ಉಸಿರು ನಿಂತರೆ ಅದು ತಿರುಗಿ ಬರುವುದೇ ಇಲ್ಲ. ಜೀವವನ್ನು ತ್ಯಾಗ ಮಾಡಿದರೆ ಎಲ್ಲವನ್ನು ತ್ಯಾಗ ಮಾಡಿದಂತೆ. ಕಣ್ಣು, ಕಿವಿ, ನಾಲಿಗೆ, ಕಾಲು ಇವುಗಳೆಲ್ಲ ಹೋದರೆ ಬದುಕಬಹುದು. ಆದರೆ ಪ್ರಾಣವೇ ಹೋದರೆ ಉಳಿದದ್ದೆಲ್ಲ ಇದ್ದರೂ ಪ್ರಯೋಜನವಿಲ್ಲ. ಹಣ-ಕಾಸು, ಮನೆ-ಮಾರು, ಸಂಬಂಧ, ವಿಶ್ವಾಸ, ಎಲ್ಲಾ ಇಂದ್ರಿಯಗಳನ್ನು ಒಟ್ಟಿಗೇ ಕಳೆದುಕೊಳ್ಳುತ್ತೇವೆ.
ಉಪನಿಷತ್ತಿನಲ್ಲಿ ಒಂದು ಪ್ರಸಿದ್ಧವಾದ ಕಥೆ ಇದೆ. ನಮ್ಮ ದೇಹದೊಳಗಿನ ಪ್ರಾಣಶಕ್ತಿಗಳಲ್ಲಿ ಯಾವುದು ಮುಖ್ಯ ಎನ್ನುವ ಬಗ್ಗೆ. ಕಣ್ಣು, ಕಿವಿ, ಮೂಗು, ನಾಲಿಗೆ, ಪ್ರಾಣ ಇವುಗಳ ಮಧ್ಯೆ ಚರ್ಚೆ ಆರಂಭವಾಯಿತು. ಚರ್ಚೆಯ ಕೊನೆಯಲ್ಲಿ ಒಂದು ತೀರ್ಮಾನಕ್ಕೆ ಬಂದರು. ಯಾರು ಹೋದರೆ ಉಳಿದವರು ಇರಲು ಸಾಧ್ಯವಿಲ್ಲವೋ ಅವರು ಶ್ರೇಷ್ಠ ಎಂದು. ಕಣ್ಣು ಎದ್ದು ಹೋಯಿತು, ಅವನು ಕುರುಡನಾಗಿ ಬದುಕಿದ. ಕಿವಿ ಎದ್ದು ಹೋಯಿತು, ಅವನು ಕಿವುಡನಾಗಿ ಬದುಕಿದ. ನಾಲಗೆ ಹೋದಾಗ ಮೂಗನಾಗಿ ಬದುಕಿದ. ಕಾಲು ಹೋದಾಗ ಕುಂಟನಾಗಿ ಬದುಕಿದ. ಆದರೆ ಪ್ರಾಣ ತನ್ನ ಜಾಗ ಬಿಟ್ಟು ಏಳುವಾಗ, ಎಲ್ಲವೂ ಒಟ್ಟಿಗೆ ಎದ್ದವು. ಆಗ ಯಾವ ಇಂದ್ರಿಯಗಳೂ ಕೆಲಸ ಮಾಡಲು ಸಾಧ್ಯವಿಲ್ಲ. ಪ್ರಾಣ ಎಂಬುದು ಜೀವನಯಾತ್ರೆಗೆ ಹೇಗೆ ಮುಖ್ಯವೋ ಹಾಗೆ ಮೋಕ್ಷಕ್ಕೂ ಅಷ್ಟೇ ಮುಖ್ಯ. ಪ್ರಾಣದ ನಿಯಂತ್ರಣದ ಮೂಲಕ ಜ್ಞಾನವನ್ನು, ಮೋಕ್ಷವನ್ನು ಸಾಧಿಸಬಹುದು. ಯೋಗಶಾಸ್ತ್ರವು ಅದನ್ನೇ ನಿರೂಪಿಸುತ್ತದೆ. ಉಸಿರಿನ ಮೇಲೆ ಹತೋಟಿ ಬಂದರೆ ಮನಸ್ಸಿನ ಮೇಲೆ, ಜೀವನದ ಮೇಲೆ ಹತೋಟಿ ಬರುತ್ತದೆ. ಇಂತಹ ಜೀವವನ್ನು ಕೊಡುವುದಕ್ಕೆ ಯಾರು ಸಿದ್ಧನಿದ್ದಾನೋ ಅವನು ಶ್ರೇಷ್ಠ.
ಶ್ರೀರಾಮನು ವನವಾಸದಲ್ಲಿದ್ದಾಗ ಒಮ್ಮೆ ತಪಸ್ವಿಗಳು ಬಂದು ರಕ್ಷಣೆಯನ್ನು ಕೇಳುತ್ತಾರೆ. ರಾಕ್ಷಸರನ್ನು ಸಂಹರಿಸಿ ನಿಮ್ಮನ್ನು ರಕ್ಷಿಸುತ್ತೇನೆ ಎಂಬ ಅಭಯವನ್ನು ಶ್ರೀರಾಮನು ತಪಸ್ವಿಗಳಿಗೆ ನೀಡುತ್ತಾನೆ. ಅವರು ಹೋದ ಮೇಲೆ ಸೀತೆ ರಾಮನೊಂದಿಗೆ ಸಂವಾದವನ್ನು ನಡೆಸುತ್ತಾಳೆ. “ನಮಗೇಕೆ ಬೇಕು ಇದೆಲ್ಲಾ? ನಾವು ನಮ್ಮ ಪಾಡಿಗೆ ಇದ್ದೇವೆ. ರಾಕ್ಷಸರು ಅವರ ಪಾಡಿಗೆ ಅವರಿದ್ದಾರೆ. ನಾವಾಗಿ ಏಕೆ ಜಗಳಕ್ಕೆ ಹೋಗಬೇಕು, ಹಾಗೆ ಹೋದರೆ ಶಸ್ತ್ರಗಳ ಬಳಕೆಯಾಗುವ ಸಂದರ್ಭ ಬರುವುದುಂಟು, ಅಲ್ಲಿ ಹಿಂಸೆ, ಯುದ್ಧ ಉಂಟಾಗಬಹುದು. ಇದೆಲ್ಲ ಬೇಕೇ?” ಎಂದು ಸೀತೆ ಕೇಳುತ್ತಾಳೆ. ಯುದ್ಧ ಯಾಕೆ ಬೇಕು? ಎಂದು ರಾಮನು ಸೀತೆಗೆ ಸಕಾರಣವಾಗಿ ನಿರೂಪಿಸುತ್ತಾನೆ. ಕೊನೆಯಲ್ಲಿ ರಾಮನು ಸೀತೆಗೆ ಒಂದು ಮಾತನ್ನು ಹೇಳುತ್ತಾನೆ. “ಪ್ರತಿಯೊಂದು ಜೀವಿಗೂ ಪ್ರಾಣ ಅತಿಮುಖ್ಯ, ಅದನ್ನಾದರೂ ಬಿಟ್ಟೇನು, ಹಾಗೆ ಪ್ರಾಣಕ್ಕಿಂತ ನೀನು ಮುಖ್ಯ. “ಪ್ರಾಣೇಭ್ಯೋಪಿ ಗರೀಯಸೀ” ನಿನ್ನನ್ನಾದರೂ ಬಿಟ್ಟೇನು. ನಿನಗಿಂತ ಮಿಗಿಲು ಲಕ್ಷ್ಮಣ. ಅವನನ್ನಾದರೂ ಬಿಟ್ಟೇನು, ಆದರೆ ತಪಸ್ವಿಗಳಿಗೆ ಕೊಟ್ಟ ಅಭಯ, ಕೊಟ್ಟ ಮಾತನ್ನು ತಪ್ಪಲಾಗದು. ಅದನ್ನು ನೆರವೇರಿಸುತ್ತೇನೆ”. ಇದು ಕ್ಷತ್ರ ಧರ್ಮ, ಎಂತಹ ತ್ಯಾಗಕ್ಕೂ ಸಿದ್ಧ. ಎಲ್ಲಿ ಆಪತ್ತು ಬರುತ್ತದೆಯೋ ಅಲ್ಲಿ ಕ್ಷತ್ರ ಧರ್ಮಕ್ಕೆ ಪಾತ್ರ ಬರುತ್ತದೆ. ಕಾಳಿದಾಸನು ರಘುವಂಶದಲ್ಲಿ “ಯಾವುದು ನಮ್ಮನ್ನು ಕ್ಷತಿಯಿಂದ (ಆಪತ್ತಿನಿಂದ) ರಕ್ಷಣೆ ಮಾಡಲು ಬರುತ್ತದೆಯೋ ಅದು ಕ್ಷಾತ್ರ” ಎಂಬುದಾಗಿ ಹೇಳಿದ್ದಾನೆ.
ದಿಲೀಪನ ಸಂದರ್ಭ: ಆತನು ತನ್ನ ಗುರುಗಳ ಗೋವನ್ನು ಕಾಯುತ್ತಿರುವಾಗ ಆ ಗೋವನ್ನು ತಿನ್ನಲು ಸಿಂಹವೊಂದು ಬರುತ್ತದೆ. ಆಗ ಅವರಿಬ್ಬರ ನಡುವೆ ಸಂವಾದ ನಡೆಯುತ್ತದೆ. ಸಿಂಹ ದಿಲೀಪನಿಗೆ “ನಿನಗೆ ನಿನ್ನ ಸಮೃದ್ಧ ರಾಜ್ಯವಿರುವಾಗ ಈ ಗೋವನ್ನು ಕಾಪಾಡಲು ಏಕೆ ಸಮಯ ವ್ಯರ್ಥ ಮಾಡುವೆ?” ಎಂದಿತು. ಆಗ ದಿಲೀಪ ಹೇಳಿದ ಮಾತಿದು, “ಗೋವಿಗೆ ಪ್ರಾಣಾಪತ್ತು ಬಂದಾಗ ಅದನ್ನು ಕಾಪಾಡಬೇಕು. ನಾನು ಮೊದಲು ಕ್ಷತ್ರಿಯ, ಮತ್ತೆ ರಾಜ್ಯಾಧಿಪತಿ”. ಅಲ್ಲಿ ಕ್ಷತ್ರ ಶಬ್ದದ ಬಗ್ಗೆ ವಿವರಣೆ ಕೊಟ್ಟಿದೆ. ಆಪತ್ತು ಬಂದಾಗ ತನ್ನ ಬಲಿದಾನವನ್ನು ಕೊಟ್ಟು, ಆಪತ್ತಿನಿಂದ ಗುರುತರವಾದುದನ್ನು, ಶ್ರೇಷ್ಠವಾದುದನ್ನು ಕಾಪಾಡುವುದು, ಅಂದರೆ ಗುರುಗಳು, ಹಿರಿಯರು, ಗೋವುಗಳು, ಪತಿವ್ರತೆಯರು, ರಾಷ್ಟ್ರ, ಸಮಾಜ, ದೇವಸ್ಥಾನ ಹೀಗೆ ಯಾವುದೆಲ್ಲ ನಮ್ಮ ಜೀವ, ಜೀವನದ ಉತ್ಥಾನಕ್ಕೆ, ಉದ್ಧಾರಕ್ಕೆ ಬೇಕೋ, ಶ್ರೇಷ್ಠವಾಗಿವೆಯೋ, ಅಂತಹದ್ದನ್ನು ಉಳಿಸಲು, ರಕ್ಷಿಸಲು ತನ್ನ ಪ್ರಾಣವನ್ನಾದರೂ ಅರ್ಪಣೆ ಮಾಡುವುದು.
ಒಂದು ಸಣ್ಣ ವಿವರಣೆ “ಹಿರಿದಾದುದನ್ನು ಕಾಯಲು ಕಿರಿದಾದುದರ ಬಲಿದಾನ”, ಅದು ಕ್ಷತ್ರ. ಉದಾಹರಣೆಗೆ ಶಿರಸ್ತ್ರಾಣ. ಹಿಂದಿನಕಾಲದಲ್ಲಿ ಯುದ್ಧ ಮಾಡುವಾಗ ತಲೆಗೆ ಶಿರಸ್ತ್ರಾಣವನ್ನು ಧರಿಸಿ ಯುದ್ಧವನ್ನು ಮಾಡುತ್ತಿದ್ದರು. ಈಗ ದ್ವಿಚಕ್ರ ವಾಹನವನ್ನು ಚಲಾಯಿಸುವಾಗ ಕೂಡ ಅದರ ಉಪಯೋಗವಿದೆ. ಶಿರಸ್ತ್ರಾಣದ ಕೆಲಸ ತಲೆಯನ್ನು ಕಾಯುವುದು. ಕ್ಷತ್ರ ಕೂಡ ಹಾಗೆ. ರಾಷ್ಟ್ರಕ್ಕೆ ಬೀಳಬಹುದಾದ ಪೆಟ್ಟನ್ನು ತಾನು ಸ್ವೀಕರಿಸಿ ರಾಷ್ಟ್ರವನ್ನು ಉಳಿಸುವ ಕಾರ್ಯವನ್ನು ಮಾಡುತ್ತದೆ. ಕವಚ ಧಾರಣೆ ಮಾಡಿ ಒಬ್ಬ ಕ್ಷತ್ರಿಯ ಯುದ್ಧ ಮಾಡುತ್ತಾನೆ. ಕವಚ ಎದೆಗೆ ಬೀಳುವ ಪೆಟ್ಟನ್ನು ತಾನು ತೆಗೆದುಕೊಳ್ಳುತ್ತದೆ. ಹೃದಯವನ್ನು ಕಾಪಾಡಿ, ಪ್ರಾಣವನ್ನು ಉಳಿಸುತ್ತದೆ. ಕವಚಕ್ಕೆ, ಶಿರಸ್ತ್ರಾಣಕ್ಕೆ ಪೆಟ್ಟಾಗಬಹುದಲ್ಲವೇ? ಅದು ನ್ಯಾಯವೇ? ಎಂಬ ಪ್ರಶ್ನೆ ಬರಬಹುದು. ಶಿರಸ್ತ್ರಾಣವೋ, ಕವಚವೋ ಹೋದರೆ ನೂರು ಹೊಸದನ್ನು ಕೊಂಡುಕೊಳ್ಳಬಹುದು. ಆದರೆ ಪ್ರಾಣವೇ ಹೋದರೆ ಎಲ್ಲಾ ಕೊಂಡಿಗಳು ಕಳಚಿಕೊಳ್ಳುತ್ತದೆ. ನಾವು ಮನೆ ಕಟ್ಟುತ್ತೇವೆ, ಸಂಬಂಧಗಳನ್ನು ಕಟ್ಟುತ್ತೇವೆ ಆದರೆ ಜೀವ ಹೋದರೆ ಅದು ಯಾವುದೂ ನಮಗೆ ಸಂಬಂಧವೇ ಇರುವುದಿಲ್ಲ. ಪುನಃ ಅದೇ ಮನೆಯಲ್ಲಿ ನಾವು ನಾಯಿಯಾಗಿ ಹುಟ್ಟಿದರೂ ನಮಗೆ ಮೊದಲಿನದ್ದೆಲ್ಲಾ ತಿಳಿದಿರುವುದಿಲ್ಲ. ಪ್ರಾಣ ಹೋದ ಕ್ಷಣದಿಂದ ಯಾವುದೂ ನಮ್ಮದಲ್ಲ ಹಾಗಾಗಿ “ಇರುವಾಗಲೇ ಅನುಭವಿಸಬೇಕು ಮತ್ತು ದಾನ ಮಾಡಬೇಕು”. ಹಾಗೆಂದು ಹತ್ತು ತುತ್ತು ಊಟ ಮಾಡುವಲ್ಲಿ ಮೂವತ್ತು ತುತ್ತು ಊಟ ಮಾಡಬಾರದು. ಏಕೆಂದರೆ ಹೆಚ್ಚು ಊಟ ಮಾಡಿದ್ದೆಲ್ಲ ರೋಗ. ಅದು ನಮ್ಮ ಶರೀರದ ಶತ್ರು. ಬಟ್ಟೆ ಉಡುವುದು ಕೂಡ ಹಾಗೆ. ಎಷ್ಟು ಬೇಕು ಅಷ್ಟು ಮಾತ್ರ ನಾವು ಉಪಯೋಗಿಸಿ ಉಳಿದದ್ದನ್ನು ದಾನ ಮಾಡಬೇಕು.
ಕ್ಷತ್ರ ಧರ್ಮ ಅದ್ಬುತವಾದ ಧರ್ಮ. ‘ಕ್ಷತಾತ್ ತ್ರಾಯತೇ’, ‘ಕಾರ್ಮುಕಃ’. ಕಾರ್ಮುಕ ಎಂದರೇನು? “ತತ್ಕಾರ್ಮುಕಂ ಕರ್ಮಸು ಯಸ್ಯ ಶಕ್ತಿಃ” ಧರ್ಮ ರಕ್ಷಣೆಯಲ್ಲಿ ಯಾವುದಕ್ಕೆ ಶಕ್ತಿ ಇದೆಯೋ ಅದು ಕಾರ್ಮುಕ, ಧನುಸ್ಸು. ಒಬ್ಬ ಕ್ಷತ್ರಿಯ ವೀರ ಕ್ಷತ್ರಿಯ ಎಂದು ಕರೆಯಿಸಿಕೊಳ್ಳಲು ತುಂಬಾ ಎಳವೆಯಲ್ಲೇ ತಯಾರಿಯನ್ನು ಪ್ರಾರಂಭ ಮಾಡಬೇಕು. ಗುರುಕುಲಗಳಲ್ಲಿ ಸಮರ ವಿದ್ಯೆಯನ್ನು ಅಭ್ಯಾಸ ಮಾಡಬೇಕು. ಅದು ಸುಲಭವಲ್ಲ. ಬಾಹುಯುದ್ಧ, ಧನುರ್ವಿದ್ಯೆ, ಖಡ್ಗ ವಿದ್ಯೆಗಳ ಅಭ್ಯಾಸ ಮಾಡಬೇಕೆಂದರೆ ಅದರ ಹಿಂದೆ ಕಠಿಣ ತಪಸ್ಸಿದೆ. ನಿತ್ಯ ನಿರಂತರ ಅಭ್ಯಾಸಬೇಕು. ನಾವು ಡಿಗ್ರಿ ಪಡೆದು ಉದ್ಯೋಗ ದೊರೆತ ನಂತರ ನಾವು ಓದಿದ ಪುಸ್ತಕಗಳನ್ನು ಮುಟ್ಟಿಯೂ ನೋಡುವುದಿಲ್ಲ. ಈ ಪುಸ್ತಕ ವಿದ್ಯೆಗಳು ಪ್ರಶಸ್ತವಾದವಲ್ಲ. ಯಾವಾಗಲೂ ನಿಮ್ಮೊಂದಿಗೆ ಇಟ್ಟುಕೊಳ್ಳಬೇಕಾದ ವಿದ್ಯೆಗಳು ವೇದಾಧ್ಯಯನ. ಆದರೆ ಸದಾ ಅದನ್ನು ಅಭ್ಯಾಸ ಮಾಡುತ್ತಾ ಇರಬೇಕು. ಇಲ್ಲವಾದರೆ ಅದು ಉಳಿಯುವುದಿಲ್ಲ. ಸಂಗೀತಾಭ್ಯಾಸ ಮಾಡಿದರೆ ಸ್ವಲ್ಪ ಸಮಯ ಬಿಟ್ಟು ಹಾಡುತ್ತೇನೆ ಎಂದರೆ ಅದು ಬರುವುದಿಲ್ಲ, ನಿತ್ಯ ಅಭ್ಯಾಸ ಮಾಡುತ್ತಿರಬೇಕು. ಯುದ್ಧ ವಿದ್ಯೆಗಳನ್ನು ಕೂಡ ಪ್ರತಿನಿತ್ಯ ಎಡೆಬಿಡದೆ ಅಭ್ಯಸಿಸಬೇಕು. ಬೆವರು, ರಕ್ತ ಹರಿಯಬೇಕು. ಪೆಟ್ಟುಗಳನ್ನು ತಿನ್ನಬೇಕು. ಬಲ-ಪರಾಕ್ರಮಗಳ ಆರ್ಜನೆಯ ಮಹಾತಪಸ್ಸು ಅದು. ಅದೆಲ್ಲವೂ ಒಂದು ದಿನ ರಾಷ್ಟ್ರಾರ್ಪಣ. ವರ್ಷಾನುವರ್ಷ ಮಾಡಿದ ಯುದ್ಧಾಭ್ಯಾಸ, ಸಾಧನೆಗಳು, ಕುಟುಂಬ, ಗಳಿಕೆ ಎಲ್ಲವೂ ಸೇರಿ ಒಂದು ಯುದ್ಧದಲ್ಲಿ ರಾಷ್ಟ್ರಾಯ ಸ್ವಾಹ, “ಇದಂ ನ ಮಮ” ಎನ್ನುವ ಹಾಗೆ ಅರ್ಪಣೆಯಾಗಿಬಿಡುತ್ತದೆ.
ಇಷ್ಟೆಲ್ಲ ಮಾಡಿದವನ ಗತಿ ಏನಾಯಿತು? ರಾಷ್ಟದ ಮೇಲೆ ಪರಕೀಯರ ಆಕ್ರಮಣವಾದಾಗ, ಕ್ಷತ್ರಿಯನೊಬ್ಬ ಕತ್ತಿ ಹಿಡಿದು ಹೋರಾಡಿ ಯುದ್ಧದಲ್ಲಿ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ. ಆಗ ಅವನ ಕುಟುಂಬ ಅನಾಥವಾಗುತ್ತದೆ. ಎಲ್ಲವನ್ನೂ ಕಳೆದುಕೊಂಡ ಕ್ಷತ್ರಿಯನಿಗೇನು ದೊರೆಯಿತು? ಎಂಬುದು ದೊಡ್ಡ ಪ್ರಶ್ನೆ. ನಮ್ಮ ದೇಶದಲ್ಲಿ ಸುಮಾರು 30 ಲಕ್ಷ ಸೈನಿಕರಿದ್ದಾರೆ. ಪ್ರಾಣವನ್ನು ಅರ್ಪಣೆ ಮಾಡಲು ಯಾಕೆ ಹೋಗುತ್ತಾರೆ? ಅವರಿಗೆ ಕೊನೆಯಲ್ಲಿ ಏನು ಸಿಗುತ್ತದೆ? ಅಂದರೆ ಸರ್ವಾರ್ಪಣೆ ಮಾಡಿದವನ ಗತಿ ಅದು ಅಧೋಗತಿ ಅಲ್ಲ, ಊರ್ಧ್ವಗತಿಯದು. ಅತ್ಯಂತ ದುರ್ಲಭವಾದುದು ಅವನಿಗೆ ಸಿಗುತ್ತದೆ.
ಕೃಷ್ಣ ಅರ್ಜುನನಿಗೆ ಗೀತೆಯಲ್ಲಿ ಹೇಳುತ್ತಾನೆ.ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಂ |ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಪ್ರತಿನಿಶ್ಚಯಃ ||
“ಯುದ್ದಕ್ಕಾಗಿ ನಿಶ್ಚಯ ಮಾಡಿ ಎದ್ದು ನಿಲ್ಲು ಅರ್ಜುನ, ಯಾಕೆಂದರೆ ಯುದ್ಧದಲ್ಲಿ ಉಭಯತಃ ಶ್ರೇಯಸ್ಸಿದೆ. ಯುದ್ಧದಲ್ಲಿ ಗೆದ್ದರೆ ಈ ಭೂಮಿ ನಿನ್ನದು, ಯುದ್ಧದಲ್ಲಿ ಸತ್ತರೆ ವೀರಸ್ವರ್ಗ ನಿನ್ನದು”. ಹಾಗಾಗಿ ಒಬ್ಬ ಯೋಧ ಮತ್ತು ಯೋಗಿ, ಇಬ್ಬರನ್ನು ಕೂಡ ಒಂದೇ ತಕ್ಕಡಿಯಲ್ಲಿ ತೂಗುವುದುಂಟು. ಯೋಗಿಗಳು ಸರ್ವಶ್ರೇಷ್ಠರು, ದೇವರಂತೆ ನಾವು ಅವರನ್ನು ಪೂಜಿಸುತ್ತೇವೆ. ಇದೇ ಸ್ತರದಲ್ಲಿ ಯೋಧರನ್ನು ಕೂಡ ಶಾಸ್ತ್ರಗಳಲ್ಲಿ ನೋಡಿದ್ದೇವೆ. ಎರಡು ಬಗೆಯ ಜೀವಗಳು ಮಾತ್ರವೇ ಸೂರ್ಯಮಂಡಲಗಳನ್ನು ಭೇದಿಸಿ ಮುಂದಕ್ಕೆ ಹೋಗುತ್ತವೆ. ಒಬ್ಬ ಯೋಗಿ ಇನ್ನೊಬ್ಬ ಯೋಧ. ಒಬ್ಬ ಯೋಗಿ ಯೋಗಯುಕ್ತನಾಗಿ ದೇಹ ತ್ಯಾಗ ಮಾಡಿ ಸೂರ್ಯಮಂಡಲವನ್ನು ಭೇದಿಸಿ ಮೋಕ್ಷ ಮಾರ್ಗದ ಕಡೆಗೆ ಸಾಗುತ್ತಾನೆ. ಯುದ್ಧದಲ್ಲಿ ಬೆನ್ನು ತೋರಿಸದೆ, ಪಲಾಯನ ಮಾಡದೆ, ಶಸ್ತ್ರಗಳನ್ನು ಕೆಳಗಿಡದೆ, ಶರಣಾಗತನಾಗದೇ, ಅಭಿಮುಖನಾಗಿ ಹೋರಾಡುತ್ತಾ ಯಾರು ಪ್ರಾಣಾರ್ಪಣೆ ಮಾಡುತ್ತಾನೋ ಅವನು ಸೂರ್ಯಮಂಡಲವನ್ನು ಭೇದಿಸಿ ಯೋಗಿ ಎಲ್ಲಿ ಹೋಗಿ ಸೇರುತ್ತಾನೋ ಅಲ್ಲಿಯೇ ಹೋಗಿ ಸೇರುತ್ತಾನೆ. ಹಾಗಾಗಿ ವೀರಸ್ವರ್ಗ ಎಂದರೆ ಅದು ವಿಮುಕ್ತಿಯೇ.
ಸಪ್ತಶತಿಯಲ್ಲಿ ದೇವಿಯ ವರ್ಣನೆ ಇದೆ. ರಾಕ್ಷಸರನ್ನು ಕಂಡ ಕೂಡಲೇ ಅವರ ನಾಶ ಮಾಡಬಹುದಲ್ಲವೇ? ಶಸ್ತ್ರಗಳ ಪ್ರಯೋಗ ಯಾಕೆ ರಾಕ್ಷಸರ ಮೇಲೆ? ಎಂಬ ಪ್ರಶ್ನೆಗೆ ಸಪ್ತಶತಿಯಲ್ಲಿ ಈ ರೀತಿಯಾಗಿ ವರ್ಣನೆಯನ್ನು ಮಾಡಿದ್ದಾರೆ. ಶಸ್ತ್ರಗಳಿಂದ ಆಗುವ ವಧೆ, ಅದು ಉತ್ತಮ ಗತಿಗೆ ಕಾರಣವಾಗುವುದು. ರಾಕ್ಷಸರಿಗೆ ಅವರ ಜೀವಕ್ಕೆ ಶ್ರೇಯಸ್ಸಾಗಲಿ ಎಂಬ ಕಾರಣಕ್ಕೆ ರಾಕ್ಷಸರ ಮೇಲೆ ಶಸ್ತ್ರಗಳನ್ನು ಪ್ರಯೋಗ ಮಾಡುವುದು. ಶಸ್ತ್ರಗಳು ರಾಕ್ಷಸರ ಮೇಲೆ ತಾಗಿ ಅವರು ಮಾಡಿರುವ ಜನ್ಮಾಂತರದ ಪಾಪವೆಲ್ಲ ಕಳೆದು ಶುದ್ಧರಾಗಿ ಮುಕ್ತಿಯನ್ನು ಹೊಂದಲಿ ಎಂದು ಶಸ್ತ್ರಗಳನ್ನು ಉಪಯೋಗ ಮಾಡುವುದು. ಹಾಗಾಗಿ ಶಸ್ತ್ರದಿಂದ ಬರುವ ಮರಣ ತುಂಬಾ ಶ್ರೇಷ್ಠವಾಗಿರುವಂತಹದು. ಧರ್ಮಕ್ಕಾಗಿ, ದೇಶಕ್ಕಾಗಿ, ದೇವರಿಗಾಗಿ, ಗುರುವಿಗಾಗಿ, ನಾರಿಯರ ಮಾನಕ್ಕಾಗಿ ಇಂತಹ ಒಳ್ಳೆಯ ಉದ್ದೇಶಕ್ಕೋಸ್ಕರ ಶಸ್ತ್ರಗಳನ್ನು ಪ್ರಯೋಗ ಮಾಡಿ ಏನು ರಕ್ತ ಹರಿಯುತ್ತದೆಯೋ ಅಥವಾ ಪ್ರಾಣವೇ ಹೋಗುತ್ತದೆಯೋ ಅದೆಲ್ಲವೂ ಅವರ ಆತ್ಮೋದ್ಧಾರಕ್ಕಾಗಿ ಆಗುವಂತಹದು. ಎಲ್ಲಾ ಬಹುಮಾನಗಳಿಂದಲೂ ಆತ್ಮಕ್ಕೆ ಶ್ರೇಯಸ್ಸಾಗುವಂತಹ ಬಹುಮಾನ ತುಂಬಾ ದೊಡ್ಡದು, ಶ್ರೇಷ್ಠವಾಗಿರುವಂತಹದು.
*ಅಯೋಧ್ಯೆ:*ಅಯೋಧ್ಯೆಯು ಈ ಪರಿಯ ಕ್ಷತ್ರಿಯರಿಂದ ತುಂಬಿತ್ತು. ಇಂತಹ ವೀರರಿಂದ ಸುಸಂಪೂರ್ಣವಾಗಿತ್ತು. ಅಂದರೆ ಅಯೋಧ್ಯೆಯಲ್ಲಿ ಕೊರತೆ ಇಲ್ಲದಂತೆ ಈ ಪರಿಯ ವೀರ ಕ್ಷತ್ರಿಯರು ತುಂಬಿಕೊಂಡಿದ್ದರು. ಅಯೋಧ್ಯೆಯಲ್ಲಿ ಒಬ್ಬೊಬ್ಬ ಸೈನಿಕನು ಬೆಂಕಿಯ ಚೆಂಡು ಇದ್ದಂತೆ ಇದ್ದರು. ಹಾಗಾಗಿ ಶತ್ರುಗಳ ಪಾಲಿಗೆ ಯಮನಾಗಿ, ಮಿತ್ರರ ಪಾಲಿಗೆ ರಾಮನಾಗಿ ಇದ್ದರು. ಇದಕ್ಕೆ ಬಹಳ ಮುಖ್ಯವಾದ ಕಾರಣವೇನೆಂದರೆ ಆ ಯೋಧರುಗಳಿಗೆ ರಕ್ತದಲ್ಲಿಯೇ ಕ್ಷಾತ್ರವಿತ್ತು. ಯಾಕೆಂದರೆ ಅವರ ಹಿರಿಯರೆಲ್ಲರೂ ಯೋಧರುಗಳೇ ಆಗಿದ್ದರು. ಈ ಕ್ಷತ್ರಿಯರು ಯುಗ ಯುಗಗಳಿಂದಲೇ ಕ್ಷತ್ರಿಯರಾಗಿದ್ದವರು. ಹಾಗಾಗಿ ಅವರ ವಂಶವಾಹಿನಿಯಲ್ಲಿಯೇ ಕ್ಷಾತ್ರ ಧರ್ಮವಿತ್ತು. ಯೋಧನ ಮಗ ಚಿಕ್ಕಂದಿನಿಂದಲೇ ಬಿಲ್ಲು, ಬಾಣ, ಕತ್ತಿ, ಗದೆ, ಎಲ್ಲವನ್ನು ನೋಡುತ್ತಾ ಬೆಳೆಯುತ್ತಾನೆ. ತಂದೆ ಯುದ್ಧಕ್ಕೆ ಹೋಗಿ ಬರುತ್ತಾರೆ, ಮನೆಯಲ್ಲಿಯೂ ಅಭ್ಯಾಸ ಮಾಡುತ್ತಾರೆ, ಅದನ್ನು ನೋಡುತ್ತಾ, ಆಯುಧಗಳನ್ನು ಮುಟ್ಟುತ್ತಾ, ಹಾಗೆ ಕಲಿಯುತ್ತಾನೆ. ಅಂತಹ ಕಲಿಕೆ ತುಂಬಾ ಶ್ರೇಷ್ಠವಾದಂತಹ ಕಲಿಕೆಯಾಗಿರುತ್ತದೆ. ಯಾವ ಕಲಿಕೆ ನಾವು ಕಲಿತದ್ದು ಗೊತ್ತಾಗಿರುವುದಿಲ್ಲವೋ, ವಾತಾವರಣದಿಂದ ನಾವು ಜ್ಞಾನವನ್ನು ಹೀರಿಕೊಳ್ಳುತ್ತಾ ಇರುತ್ತೇವೆಯೋ ಆ ಕಲಿಕೆ ಮರೆತು ಹೋಗುವಂತಹದಲ್ಲ.
*ತೆನಾಲಿ ರಾಮಕೃಷ್ಣನ ಕಥೆ:*ಒಂದು ಬಾರಿ ಬೇರೆ ದೇಶದಿಂದ ಯಾವುದೋ ಒಬ್ಬ ಪಂಡಿತ ಆಸ್ಥಾನಕ್ಕೆ ಬಂದ. ಬಹುಭಾಷಾ ಕೋವಿದನಾಗಿದ್ದ. ತನ್ನ ಮಾತೃ ಭಾಷೆ ಯಾವುದು ಎಂದು ಕಂಡುಹಿಡಿಯಿರಿ ಎಂದನು. ಯಾರಿಗೂ ಕಂಡುಹಿಡಿಯಲು ಸಾಧ್ಯವೇ ಆಗಲಿಲ್ಲ. ಎಲ್ಲ ಭಾಷೆಗಳನ್ನೂ ಚೆನ್ನಾಗಿ ಮಾತನಾಡುತ್ತಿದ್ದನು. ತೆನಾಲಿ ರಾಮನು ಒಂದು ಉಪಾಯ ಮಾಡಿದನು. ಆತ ರಾತ್ರಿ ಮಲಗಿಕೊಂಡಿರುವಾಗ ತೆನಾಲಿ ರಾಮನು ಬಂದು ಅವನ ಮುಖಕ್ಕೆ ಬಿಸಿನೀರು ಹಾಕಿದನು. ಅವನು ಅಮ್ಮಾ ಎಂದು ಕೂಗಿದಾಗ ಅವನ ಮಾತೃಭಾಷೆ ಯಾವುದು ಎಂದು ತಿಳಿಯಿತು.
ಹಾಗೆಯೇ ಮಾತೃಭಾಷೆ ಯಾವತ್ತಿಗೂ ಮರೆಯುವುದಿಲ್ಲ ಅದು ಸಹಜವಾದ ಕಲಿಕೆ. ಅದೇ ಕ್ಷತ್ರಿಯ ಪರಂಪರೆಯಲ್ಲಿ ಹುಟ್ಟಿದರೆ ಅವರ ಸುತ್ತಮುತ್ತ ಅದೇ ವಾತಾವರಣ ಇರುವ ಕಾರಣ ಅವರು ಸಹಜವಾಗಿ ಕಲಿತುಕೊಳ್ಳುತ್ತಾರೆ. ಹಾಗಾಗಿ ಒಂದು, ರಕ್ತದಲ್ಲಿಯೇ ಇರುವಂತದ್ದು, ಇನ್ನೊಂದು ಅವರು ಬೆಳೆದ ವಾತಾವರಣ ಹಾಗೆ ಇರುವಂತದ್ದು, ಮೂರನೆಯದ್ದು ಅಯೋಧ್ಯೆಯ ಗುರುಕುಲಗಳಲ್ಲಿ ಅವರು ಕ್ಷತ್ರ ವಿದ್ಯಾಭ್ಯಾಸ ಮಾಡಿರುವಂತಹದ್ದು, ಇದೆಲ್ಲ ಸೇರಿ ಅವರು ಜಗ-ಜಟ್ಟಿಗಳಾಗಿದ್ದರು.
ಅದಕ್ಕೆ ರಾಮಾಯಣ ಏನು ಹೇಳುತ್ತದೆ ಅಂದರೆ ಅಯೋಧ್ಯೆಯ ಕ್ಷತ್ರಿಯರು ಕಾಡಿಗೆ ಹೋಗಿ ದುಷ್ಟ ಮೃಗಗಳನ್ನು ಆಯುಧಗಳ ಸಹಾಯವಿಲ್ಲದೆ ಬರೇ ಕೈಗಳಲ್ಲಿ ಬೇಟೆಯಾಡುತ್ತಿದ್ದರು. ಅಷ್ಟು ಶಕ್ತಿವಂತರಾಗಿದ್ದರು ಹಾಗೆಯೇ ಶಬ್ದವೇದಿಯಲ್ಲಿಯೂ ಪರಿಣಿತರಾಗಿದ್ದರು. “ಮಹಾರಥ” ಎಂದರೆ 10,000 ವೀರರೊಂದಿಗೆ ಹೋರಾಡಬಲ್ಲ ಒಬ್ಬ ವೀರ. ತನ್ನ ರಥ, ಕುದುರೆಗಳು, ಸಾರಥಿ, ಚಕ್ರ ರಕ್ಷಕರು, ಪಾರ್ಶ್ವ ರಕ್ಷಕರು, ಪೃಷ್ಟ ರಕ್ಷಕರು ಇವೆಲ್ಲವನ್ನು ರಕ್ಷಿಸಿಕೊಂಡು 10,000 ವೀರರೊಂದಿಗೆ ಹೋರಾಡಬಲ್ಲವನು. ಇಂತಹ ಮಹಾರಥರು ಅಯೋಧ್ಯೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದರು.
ರಾಜ ದಶರಥ ಅತಿರಥನಾಗಿದ್ದನು. 10,000 ವೀರರೊಂದಿಗೆ ಹೋರಾಡಬಲ್ಲವರು ಮಹಾರಥರು. ಅಂತಹ 10,000 ಮಹಾರಥರೊಂದಿಗೆ ಯುದ್ಧವನ್ನು ಮಾಡಬಲ್ಲ ಚೈತನ್ಯವನ್ನು ದಶರಥನು ಹೊಂದಿದ್ದನು. “ಇಕ್ಷ್ವಾಕೂಣಾಂ ಅತಿರಥಃ ಪ್ರತಾಪಃ ತ ಕಂಟಕಃ” ತನ್ನ ಪ್ರತಾಪದಿಂದ ಕೋಸಲಕ್ಕೆ ಅಥವಾ ಧರ್ಮಕ್ಕೆ ಬಂದ ಕಂಟಕವನ್ನು ಅವನು ನಿರಸ್ತಗೊಳಿಸಿದವನು. ಅವನ ಕಾಲದಲ್ಲಿ ಶತ್ರುಗಳು ಯಾರೂ ದಶರಥನಿಗೆ ಸಮ ಅಥವಾ ಮಿಗಿಲು ಎನ್ನುವಂತಹವರು ಇರಲಿಲ್ಲ. ಇದೆಲ್ಲ ಸೇರಿ ಶತ್ರುಗಳ ಪಾಲಿಗೆ ಅಯೋಧ್ಯೆಯು ಸಿಂಹಗಳು ಇರುವ ಗುಹೆಯಾಗಿತ್ತು ಹಾಗಾಗಿ ಪ್ರವೇಶ ಮಾಡುವುದು ಶತ್ರುಗಳಿಗೆ ಅಸಾಧ್ಯವಾದ ಮಾತಾಗಿತ್ತು.
ಇಷ್ಟೆಲ್ಲ ಸಮರ್ಥ ಜನರು ಎಲ್ಲರೂ ನಾಯಕರಾಗಿದ್ದರು, ಯಾರೂ ಖಳ ನಾಯಕರಾಗಿರಲಿಲ್ಲ. ಯಾರು ನಾಯಕ? ಯಾರು ಖಳನಾಯಕ? ರಾಮನಿಗೂ ಶಕ್ತಿ ಇದೆ, ರಾವಣನಿಗೂ ಶಕ್ತಿ ಇದೆ. ಆದರೆ ಏನು ವ್ಯತ್ಯಾಸ? ಶೌರ್ಯ ಇಬ್ಬರಿಗೂ ಸಮಾನ. ರಾಮನ ಕಡೆ ಶೌರ್ಯ ಮತ್ತು ಧರ್ಮ, ಹಾಗಾಗಿ ಅವನು ನಾಯಕ. ರಾವಣನ ಕಡೆ ಶೌರ್ಯ ಮತ್ತು ಅಧರ್ಮ, ಹಾಗಾಗಿ ಅವನು ಖಳನಾಯಕ. ಅಯೋಧ್ಯೆಯ ವೀರರು ಯುದ್ಧ ಧರ್ಮವನ್ನು ಪರಿಪಾಲನೆ ಮಾಡುತ್ತಿದ್ದರು. ಯುದ್ಧ ಧರ್ಮ ಅಂದರೆ ಯಾರಾದರೂ ಬಂದು ಯುದ್ಧದ ಮಧ್ಯೆ ಶರಣಾಗತರಾದರೆ, ಪಲಾಯನ ಮಾಡುತ್ತಿದ್ದರೆ, ಒಬ್ಬಂಟಿಯಾಗಿದ್ದರೆ, ಅಸಹಾಯಕನಾಗಿದ್ದರೆ, ಆಯುಧಗಳನ್ನು ಕಳೆದುಕೊಂಡಿದ್ದರೆ, ಕೂದಲು ಬಿಚ್ಚಿ ಹರಡಿದ್ದರೆ, ಕವಚ ಕಳೆದುಕೊಂಡಿದ್ದರೆ ಅವನ ಮೇಲೆ ಶಸ್ತ್ರವನ್ನು ಎತ್ತುತ್ತಿರಲಿಲ್ಲ. ಯಾಕೆಂದರೆ ಭಾರತದ ಯುದ್ಧ ಧರ್ಮವೇ ಹಾಗಿತ್ತು. ವಂಚನೆ ಇರುತ್ತಿರಲಿಲ್ಲ. ಇದೆಲ್ಲವನ್ನು ಪಾಲನೆ ಮಾಡುತ್ತಿದ್ದ ಧರ್ಮವೀರರ ನಾಡು ಈ ಅಯೋಧ್ಯೆಯಾಗಿತ್ತು. ಇಂತಹ ಕ್ಷಾತ್ರ ನಮಗೆ ಬೇಕು. ಆದರೆ ಇವತ್ತು ಅಂತಹ ಕ್ಷಾತ್ರ ಇಲ್ಲ. ಇವತ್ತು ಯುದ್ಧಗಳು ಧರ್ಮಕ್ಕಾಗಿ ಅಲ್ಲ, ಹಣಕ್ಕಾಗಿ, ಲಾಭಕ್ಕಾಗಿ ಆಗುವಂತಹದು. ಅವತ್ತು ಸೇಡಿಗಾಗಿ, ಲಾಭಕ್ಕಾಗಿ ಅಲ್ಲ, ಧರ್ಮಕ್ಕಾಗಿ ರಾಮನು ಹೋರಾಡಿದನು. ಇಂತಹ ಯುದ್ಧ ಯಾಗಕ್ಕೆ, ಯೋಗಕ್ಕೆ ಸಮಾನ. ಯುದ್ಧ ಮರ್ಯಾದೆಯನ್ನು ಮೀರದೆ ಇದ್ದಾಗ ಅವನು ಸತ್ತರೂ ಲಾಭ, ಗೆದ್ದರೂ ಲಾಭ. ಸತ್ತರೆ ಅವನು ದೈವತ್ವವನ್ನು ಪಡೆಯುತ್ತಾನೆ, ಗೆದ್ದರೆ ಮನುಷ್ಯರ ಮಧ್ಯೆ ದೇವರಾಗುತ್ತಾನೆ. ಅಂತಹವರ ನಾಡು ಅಯೋಧ್ಯೆಯಾಗಿತ್ತು. ಇದೇ ಕಾರಣಕ್ಕಾಗಿ ಅಯೋಧ್ಯೆ ಅಯೋಧ್ಯೆಯಾಗಿತ್ತು. “ಯೋದ್ಧುಂ ಅಶಕ್ಯಾ ಇತಿ ಅಯೋಧ್ಯಾ” ಆ ನಾಡಿನ ಮೇಲೆ ಯುದ್ಧ ಮಾಡುವುದೇ ಅಸಾಧ್ಯ, ನಾಡನ್ನು ಸಮೀಪಿಸುವುದೇ ಕಷ್ಟ, ಹಾಗಾಗಿ “ಅಯೋಧ್ಯಾ”.
ಕೊನೆಯದಾಗಿ, ದೇಶಕ್ಕಾಗಿ ನಾವು ಸರ್ವಾರ್ಪಣೆ ಮಾಡಬೇಕು. ದೇಶವು ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ಎಲ್ಲವನ್ನೂ ಕೊಟ್ಟಿದೆ. ನಾವು ಇವತ್ತು ಏನಾಗಿದ್ದೇವೆಯೋ ಅದು ದೇಶದ ಕಾರಣಕ್ಕೆ ಆಗಿರುವಂತದ್ದು. ತಿಳಿದೋ ತಿಳಿಯದೆಯೋ ತುಂಬ ಲಾಭವನ್ನು ಗಳಿಸಿದ್ದೇವೆ. ಆ ಋಣಕ್ಕಾಗಿಯಾದರೂ ನಾವು ದೇಶಕ್ಕಾಗಿ ಸರ್ವಸ್ವವನ್ನು ಅರ್ಪಣೆ ಮಾಡಲು ಸಿದ್ಧರಿರಬೇಕು. ಹೃದಯದಲ್ಲಿ ರಾಷ್ಟ್ರಕ್ಕಾಗಿ ‘ಸರ್ವಾರ್ಪಣಂ’ ಎಂಬ ಭಾವದಲ್ಲಿ ಬದುಕಿ ಬಾಳೋಣ.
|| ಹರೇರಾಮ ||
Jagadguru Shankaracharya Sri Sri Raghaveshwara Bharati Mahaswamiji – Ramayana sessions – Akshararoopa
ಶ್ರೀಸಂಸ್ಥಾನದವರು ಅನುಗ್ರಹಿಸುತ್ತಿರುವ – ಧರ್ಮಭಾರತೀ ಪ್ರಕಟಿಸುತ್ತಿರುವ *’ಭಾವ~ರಾಮಾಯಣ’* ವೇ ರಾಮಾಯಣ ಪಾಠದ ಪಠ್ಯ.
*ಶ್ರೀಸಂಸ್ಥಾನದವರು ಧರ್ಮಭಾರತೀ ಮೂಲಕ ಮರ್ಯಾದಾ ಪುರುಷೋತ್ತಮನ ದಿವ್ಯವ್ಯಕ್ತಿತ್ವವನ್ನು ಮತ್ತೆ ಕಟ್ಟಿಕೊಡುತ್ತಿದ್ದಾರೆ.*
ವಿ.ಸೂ: ಚಂದಾ ಮಾಡಲು ಸಂಪರ್ಕಿಸಿ – 9449595254
Leave a Reply