ವಾಲ್ಮೀಕಿ ರಾಮಾಯಣ: ಭಾಗ – 37
ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ.

ನಿಮ್ಮ ಭಾಗ್ಯ ದೊಡ್ಡದೋ..ನಮ್ಮ ಭಾಗ್ಯ ದೊಡ್ಡದೋ..” ಎಂಬುದನ್ನು ಸಮ್ಮತಿಯಿಂದ ಸಾಟಿ ಮಾಡಿ ನೋಡೋಣ ಎಂಬುದಾಗಿ ಪುರಂದರದಾಸರು ತಮ್ಮ ಪದಗಳ ಮೂಲಕ ಹೇಳುತ್ತಾರೆ. ಸಿರಿ-ಲಕ್ಷ್ಮಿಯ ಹಿಂದೆ ಹೋಗುವವರು ಕೆಲವರು, ಹರಿ-ನಾರಾಯಣನ ಹಿಂದೆ ಹೋಗುವವರು ಕೆಲವರು. ಈ ಎರಡು ಪಕ್ಷದ ಹಿಂಬಾಲಕರಲ್ಲಿ ಯಾರು ಹೆಚ್ಚು ಭಾಗ್ಯವಂತರು ಎಂಬುದೇ ವಿಷಯವಾಗಿದೆ. ಹಾಗಾಗಿ ಅವರಿಬ್ಬರ ಮಧ್ಯೆ ಚರ್ಚೆ. ಅದು, ‘ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೋ’. ಹೇಮ-ಹೊನ್ನು-ಹಣಗಳಿಗೆ ಹೇರಳ ಭಯಗಳುಂಟು. ಯಾಕೆಂದರೆ, ಅವು ಚೋರಹಾರ್ಯಂ, ರಾಜಹಾರ್ಯಂ. ಚೋರರ ಭಯ, ರಾಜ ಸಿಬ್ಬಂದಿಗಳ ದೃಷ್ಟಿಯ ಭಯವು ನಮ್ಮ ಬೊಕ್ಕಸದಲ್ಲಿ ಇದ್ದೇ ಇರುತ್ತದೆ. ಅಷ್ಟೇ ಅಲ್ಲದೆ ಅವು ಭಾರ ಕೂಡಾ ಹೌದು. ಆದರೆ ರಾಮನಾಮ ದ್ರವ್ಯಕ್ಕೆ ಯಾರ ಭಯವೂ ಇಲ್ಲ ಎಂಬುದು ಪುರಂದರದಾಸರ ಪದ. ನಮ್ಮ ಹೃದಯದಲ್ಲಿ ಹರಿ ಇದ್ದಾನೆ, ಅವನ ಸ್ಮರಣೆ ಮಾಡುತ್ತೇವೆ. ಅದನ್ನು ಯಾರೂ ಕದಿಯುವವರಿಲ್ಲ, ಪಾಲು ಕೇಳುವವರಿಲ್ಲ, ಅಂತಹ ಭಾಗ್ಯ ನಮ್ಮದು. ಹೀಗೆ ಹರಿ-ಸಿರಿಯ ಚರ್ಚೆಯನ್ನು ನಮ್ಮ ಮುಂದೆ ಇಡುತ್ತಾರೆ ಪುರಂದರದಾಸರು.


*ಸಿರಿ-ಹರಿ: ಲಕ್ಷ್ಮೀನಾರಾಯಣರು*ಸಿರಿ-ಹರಿ ಇವರು ಸತಿ-ಪತಿಯರು, ಜಗದಾದಿ ದಂಪತಿಯರು. ಹರಿ ಎಂದರೆ ಏನು? – ಆನಂದ, ಸಿರಿ ಎಂದರೆ – ಸಂಪದ. ಇದು ಬೇಕೋ ಅದು ಬೇಕೋ ಎಂದು ಪ್ರಶ್ನಿಸುವಾಗ ನೆನಪಿಗೆ ಬರುವುದು ವಿಕಟಕವಿ ತೆನಾಲಿರಾಮ. ದೇವರು ಕೈಯ್ಯಲ್ಲಿ ಹಾಲು, ಮೊಸರು ಹಿಡಿದು ಯಾವುದು ಬೇಕೆಂದಾಗ ಎರಡನ್ನೂ ಕುಡಿದುಬಿಟ್ಟನಂತೆ. ಸಿರಿ-ಹರಿಯ ನಡುವೆ ಸಿರಿಗೆ ಯಾಕೆ ಬೆಲೆ ಎಂದರೆ, ಸಿರಿ ಆನಂದದ ದಾರಿಯನ್ನು ಕಾಣಿಸಿಕೊಡುತ್ತಾಳೆ. ಆನಂದವೆಂದರೆ ಹರಿಯೇ. ನ್ಯಾಯವಾಗಿ ಹರಿ-ಸಿರಿ ಎರಡೂ ಬೇಕು. ಸಂಪತ್ತು ಮತ್ತು ಸಂತೋಷವೂ ಬೇಕು. ಕೇವಲ ಸಂಪತ್ತಿನ ಹಿಂದೆ ಓಡುತ್ತಾ ಇರಬಾರದು.

ನಡು ಮಧ್ಯಾಹ್ನ ಸಂನ್ಯಾಸಿಯೊಬ್ಬ ಸಮುದ್ರ ತೀರದಲ್ಲಿ ಮಲಗಿದ್ದ ಕಥೆ: ಸಂನ್ಯಾಸಿಯೊಬ್ಬ ಹಗಲುಹೊತ್ತು ನಿದ್ರಿಸುತ್ತಿದ್ದುದನ್ನು ಕಂಡು ಒಬ್ಬ ಬಂದು ಕೇಳಿದನಂತೆ, ನಡುಹಗಲು ನಿದ್ರಿಸುವ ಬದಲು ದುಡಿಯಬಹುದಲ್ಲವೇ ಎಂದು. ದುಡಿದರೆ ಏನು ಪ್ರಯೋಜನವೆಂದು ಸಂನ್ಯಾಸಿ ಪ್ರಶ್ನಿಸಿದಾಗ, ಕೆಲಸ ಮಾಡಿದರೆ ಸಂಪಾದನೆಯಾಗುತ್ತದೆ ಎಂದನಂತೆ. ಸಂಪಾದಿಸಿ ಏನು ಪಡೆಯುವುದಿದೆ? ಎಂಬುದು ಸಂನ್ಯಾಸಿಯ ಪುನಃಪ್ರಶ್ನೆ. ಸಂಪಾದಿಸಿದರೆ ಧನಕನಕ ಪಡೆಯಬಹುದು ಎಂದಾಗ, ಧನಕನಕದಿಂದ ಏನು ಲಾಭ ಎಂದರಂತೆ. ಧನಕನಕಗಳನ್ನು ಗಳಿಸಿದರೆ, ಬಳಿಕ ಆರಾಮವಾಗಿರಬಹುದು ಎಂದು ಆ ಮನುಷ್ಯನು ಉತ್ತರಿಸಿದ. “ಅರೆ ಮೂರ್ಖ, ನಾನೀಗ ಹಾಗೆಯೇ ಇದ್ದೇನೆ” ಎಂಬುದಾಗಿ ಸಂನ್ಯಾಸಿ ಹೇಳಿದರಂತೆ. 
ಹಣ ಯಾಕೆ ಎಂದು ಗೊತ್ತಿಲ್ಲದೆ, ನಾವು ಅದರ ಹಿಂದೆ ಓಡಿದರೆ ತುಂಬಾ ಸಮಸ್ಯೆಗಳುಂಟು.ಯೌವನ ಕಾಲದಲ್ಲಿ ದುಡಿಮೆಗೆ ಯೋಗ್ಯವಾದ ವಯಸ್ಸು ಎನ್ನುತ್ತಾ ಆರೋಗ್ಯ, ನೆಮ್ಮದಿಗಳನ್ನು ಬಿಟ್ಟು ದುಡಿಮೆಗೆ ಮಾತ್ರವೇ ಗಮನಕೊಟ್ಟು ಹಣ ಸಂಪಾದನೆ ಮಾಡುತ್ತಾರೆ. ಹಣದ ಗೀಳು, ಹುಚ್ಚು ಹಿಡಿದವರು ಆರೋಗ್ಯ ಮತ್ತು ನೆಮ್ಮದಿ ಎರಡನ್ನೂ ತ್ಯಾಗ ಮಾಡುತ್ತಾರೆ. ಕೊನೆಗೆ ಇಳಿವಯಸ್ಸಿನಲ್ಲಿ ಹಣ ಧಾರಾಳವಾಗಿದ್ದರೂ, ನೆಮ್ಮದಿಯೂ ಇಲ್ಲ ಆರೋಗ್ಯವೂ ಇಲ್ಲ. ಬಳಿಕ ಅವುಗಳಿಗಾಗಿ ಹಣವನ್ನು ಖರ್ಚು ಮಾಡುವುದು. ಇದೊಂದು ರೀತಿ ಜೀವನದಲ್ಲಿನ ವಿಷಚಕ್ರ.


*ಹರಿಯ ಹಿಂದೆ ಹೋದರೆ ಸಿರಿ ಬರುವಳು*ಸಿರಿ-ಹರಿಯರು ಸತಿಪತಿಯರು. ಅವರು ಜೊತೆಗೆ ಇರಬೇಕು. ಸಿರಿಯನ್ನು ಹರಿಯಿಂದ ದೂರ ಮಾಡಿದರೆ ಇಬ್ಬರಿಗೂ ವಿರಹವೇದನೆ. ಹರಿಯಿಲ್ಲದಲ್ಲಿ ಸಿರಿ ನಿಲ್ಲುವುದಿಲ್ಲ. ಹರಿಯಿಂದ ದೂರ ಮಾಡಿದ್ದಕ್ಕೆ ಸಿರಿಯು ಶಾಪವನ್ನು ನೀಡುತ್ತಾಳೆ ಹಾಗೂ ಇರುವುದನ್ನೂ ಕೊಂಡು ಹೋಗುತ್ತಾಳೆ. ಸಾಮಾನ್ಯವಾಗಿ ಮನೆಗಳಲ್ಲಿ ತಿಜೋರಿಯಲ್ಲಿ ಸಿರಿ, ದೇವರಕೋಣೆಯಲ್ಲಿ ಹರಿ ಎಂಬ ವ್ಯವಸ್ಥೆ ಇರುತ್ತದೆ. ಆದರೆ ಇತ್ತೀಚೆಗೆ ಹೊಸ ಮನೆಗಳಲ್ಲಿ ತಿಜೋರಿಗಾಗಿ ಜಾಗವಿಟ್ಟಿರುತ್ತಾರೆ ಆದರೆ ದೇವರಕೋಣೆಗೆ ಜಾಗವಿರಿಸಿರುವುದಿಲ್ಲ. ಕೊನೆಗೆ ದೇವರಮನೆಯನ್ನು ಮೂಲೆಗೆ ಸರಿಸಿದರೆ, ಹರಿಯನ್ನು ಮೂಲೆಗೆ ಸರಿಸಿದರೆ ಸಿರಿ ಸಿಟ್ಟುಗೊಳ್ಳುತ್ತಾಳೆ. ಹರಿಸಿರಿಯರಿಗೆ ವಿರಹ ಸಲ್ಲದು.”ಹರಿಯ ಹಿಂದೆ ಹೋದರೆ, ಸಿರಿಯು ತಾನೇ ಬರುವಳು”, ಇದಕ್ಕೆ ಉದಾಹರಣೆ ಸುಧಾಮ. ಕೃಷ್ಣ-ಸುಧಾಮರಲ್ಲಿ, ಸುಧಾಮ ಕಡುಬಡವ. ಆತ ಸಿರಿಯನ್ನು ತಿರುಗಿಯೂ ನೋಡಿದವನಲ್ಲ. ಆತನಿಗೆ ಹರಿಯ ಧ್ಯಾನವೊಂದೇ ಆಗಿತ್ತು. ಹರಿಯ ಮೊರೆ ಹೋಗಿ ಆತನು ಸಮೃದ್ಧಿಯನ್ನು ಕಾಣುತ್ತಾನೆ, ಸಿರಿ ತಾನಾಗಿಯೇ ಬರುತ್ತಾಳೆ. ಧರ್ಮರಾಯನಿಗೆ ವನವಾಸ, ರಾಜ್ಯಭ್ರಂಶ ಆದರೂ ಅವನು ಹರಿಯನ್ನು ಬಿಡಲಿಲ್ಲ. ಕೊನೆಗೆ ಅವನ ಬಳಿಗೆ ಸಿರಿ ತಾನಾಗಿಯೇ ಬಂದಳು. ಭರತನಿಗೆ ತಾನಾಗಿಯೇ ರಾಜ್ಯ ಬಂದಿತ್ತು. ಆದರೆ ಅವನಿಗೆ ಹರಿ ಬೇಕು. ಹರಿಯನ್ನು ಬಿಟ್ಟು ಸಿರಿಯನ್ನು ಒಲ್ಲನವನು. ಮುಂದೆ ರಾಮನು ರಾಜನಾದಾಗ, ಭರತನಿಗೆ ಯುವರಾಜ ಪಟ್ಟ ದೊರೆಯಿತು. ಸಿರಿ ಬಿಡಲಿಲ್ಲ ಅವನನ್ನು. ಹಾಗಾಗಿ ಧರ್ಮರಾಜ, ಭರತ ಇವರು ಹರಿಭಕ್ತಿಯಿಂದ ಸಿರಿಯನ್ನು ಪಡೆದರು.

ಸಿರಿಯ ಹಿಂದೆ ಹೋದರೆ ಹರಿ ಬರುವನು!*”ಸಿರಿಯ ಹಿಂದೆ ಹೋದರೆ ಹರಿಯೇ ಅರಿಯಾಗುವನು”. ಹರಿ ಹಿಂದೆಯೇ ಬರುವನು, ಆದರೆ ಆಯುಧಗಳನ್ನು ಹಿಡಿದುಕೊಂಡು ಯುದ್ಧ ಸಾರುವ ಉದ್ದೇಶದಿಂದ. ಉದಾಹರಣೆ ರಾಮಾಯಣದಲ್ಲಿದೆ.ಸೀತೆಯನ್ನು ಅಂದರೆ ಸಿರಿಯನ್ನು ಲಂಕೆಗೆ ಕೊಂಡೊಯ್ದುದರ ಫಲವಾಗಿ ರಾಮ ಅಂದರೆ ಹರಿಯೂ ಲಂಕೆಗೆ ಹೋಗಿ ರಾವಣನ ಅಂತ್ಯ ಮಾಡಿದುದನ್ನು ತಿಳಿದಿದ್ದೇವೆ. ಸಿರಿಯ ಕೋಪದ ಫಲವಾಗಿ ಲಂಕೆಯು ಪೂರ್ತಿ ಉರಿದು ಹೋದದ್ದು. ಉರಿಯದ ಭಾಗ ಕೇವಲ ವಿಭೀಷಣ ಹಾಗೂ ಸೀತೆ ಇದ್ದ ಸ್ಥಳ. ಯಾಕೆಂದರೆ ಅವರು ಹರಿಯನ್ನು ಪೂಜಿಸುವವರು.ಜೀವನದಲ್ಲೂ ಅಷ್ಟೇ, “ಹರಿಯನ್ನು ಲೆಕ್ಕಿಸದೆ ಸಿರಿಯ ಹಿಂದೆ ಹೋದರೆ ಜೀವನವೇ ಉರಿಯಾಗುವುದು”.


*ಸಿರಿ-ಹರಿ : ಧರ್ಮ-ಅರ್ಥ*ನಮ್ಮ ಆಲೋಚನೆಗಳನ್ನು ಕೇವಲ ನಗನಾಣ್ಯಗಳಿಗೆ ಸೀಮಿತವಾಗಿಡಬಾರದು. ಹರಿ ಎಂದರೆ ಧರ್ಮ, ಸಿರಿಯೆಂದರೆ ಅರ್ಥ. ಧರ್ಮದಿಂದ ಅರ್ಥ ಬರಬೇಕು. ಅರ್ಥವನ್ನು ಧರ್ಮಕ್ಕೆ ಸಲ್ಲಿಸಬೇಕು. ಧರ್ಮದ ದಾರಿಯಲ್ಲಿ ಸಂಪಾದನೆ ಮಾಡಬೇಕು.


ಪುರಂದರ ದಾಸರ ಪದವಿದೆ:
ಹೆಜ್ಜೆಯ ಮೇಲೊಂದ್ಹೆಜ್ಜೆಯ ನಿಕ್ಕುತ ಗೆಜ್ಜೆಕಾಲ್ಗಳ ದನಿಯಾ ಮಾಡುತಸಜ್ಜನ ಸಾಧು ಪೂಜೆಯ ವೇಳೆಗೆಮಜ್ಜಿಗೆಯೊಳಗಿನ ಬೆಣ್ಣೆಯಂತೆಭಾಗ್ಯದ ಲಕ್ಷ್ಮೀ ಬಾರಮ್ಮಾ.. ಎಂಬುದಾಗಿ. ಲಕ್ಷ್ಮೀ ಬರಬೇಕು, ಹೆಜ್ಜೆ ಹೆಜ್ಜೆಗಳನ್ನಿಡುತ್ತಾ ಕ್ರಮಕ್ರಮವಾಗಿ ಬರಲಿ. ಗೆಜ್ಜೆಕಾಲ್ಗಳ ದನಿಯನ್ನು ಮಾಡಬೇಕು, ಗುಟ್ಟಾಗಿ ಬರಬಾರದು. ಬರುವಿಕೆಯನ್ನು ಪ್ರಕಟಗೊಳಿಸಬೇಕು. ಹೀಗೆ ಬಂದ ಲಕ್ಷ್ಮಿ-ಸಿರಿಯನ್ನು ಸದ್ವಿನಿಯೋಗ ಮಾಡಬೇಕಾಗಿ ದಾಸರು ಹೇಳುತ್ತಾರೆ. ಸಜ್ಜನ ಸಾಧು ಪೂಜೆಯ ವೇಳೆಗೆ ಬರಬೇಕು, ಬರೇ ಮೋಜುಮಸ್ತಿಗಾಗಿ ಅಲ್ಲ ಎಂಬುದು ಇಲ್ಲಿ ತಿಳಿಸುತ್ತಾರೆ.

ಧರ್ಮದಿಂದ ಅರ್ಥವನ್ನು ಸಂಪಾದಿಸಿ, ಅರ್ಥವನ್ನು ಧರ್ಮಕ್ಕಾಗಿ ವಿನಿಯೋಗಿಸಬೇಕು. ಧರ್ಮರಾಯನು ಧರ್ಮವನ್ನು ಪಾಲಿಸಿದನು, ಹರಿಯ ಹಿಂದೆ ಹೋದನು. ಅರ್ಥವು-ಸಿರಿಯು ತಾನಾಗಿಯೇ ದೊರಕಿತು. ಬಳಿಕ ಅರ್ಥವನ್ನು ಧರ್ಮಕಾರ್ಯಕ್ಕೆ, ರಾಜಸೂಯ ಯಾಗಕ್ಕೆ ಬಳಸಿಕೊಂಡನು. ಅರ್ಥವನ್ನು ಸಂಪಾದಿಸಿ ಶ್ರೀರಾಮ ತ್ರಯಾಶ್ವಮೇಧ ಯಾಗಗಳನ್ನು ಮಾಡುತ್ತಾನೆ. ಸುವಿಚಾರಗಳಲ್ಲಿ ಅರ್ಥವನ್ನು ವಿನಿಯೋಗಿಸುವುದು ಕಾಣುತ್ತೇವೆ. 

*ಶ್ರೀಮತಿ ಅಯೋಧ್ಯೆ*
ಅಯೋಧ್ಯೆಯನ್ನು ‘ಶ್ರೀಮತಿ’ ಎಂದು ಹೇಳುತ್ತಾರೆ. ಶ್ರೀಮಂತ ನಗರಿ ಎನ್ನುವುದು ಇಲ್ಲಿಯ ಉದ್ದೇಶ. ಅಯೋಧ್ಯೆ ಇಕ್ಷ್ವಾಕು ವಂಶದವರದ್ದು. ಇಕ್ಷ್ವಾಕುವು ಹರಿಯ ಹಿಂದೆ ಇದ್ದವನು. ಇದರ ಫಲವಾಗಿ ಸಿರಿಯು ಹರಿಗಿಂತ ಮುಂಚಿತವಾಗಿ, ತಾನಾಗಿಯೇ ಬಂದು ಅಯೋಧ್ಯೆಯಲ್ಲಿ ನೆಲೆಸಿದಳು. ಮಹಾಲಕ್ಷ್ಮಿಯು, ನಾರಾಯಣನು ಬರುವುದಕ್ಕೂ ಮುನ್ನ ಅಯೋಧ್ಯೆಯಲ್ಲಿ ಸ್ಥಿರವಾಗಿ ನೆಲೆಸಿದಳು. ಹರಿಯದ್ದು ದಶಾವತಾರಗಳಾದರೆ ಸಿರಿಯದ್ದು ಸಹಸ್ರ ಸಹಸ್ರ ಅವತಾರಗಳು. ಅಯೋಧ್ಯೆಯಲ್ಲಿ ವ್ಯಾಪಾರಕ್ಕಾಗಿ ಇಡೀ ಜಗತ್ತಿನಿಂದ ಜನರು, ಸಾಮಂತ ರಾಜರು ಮೊದಲಾದವರು ಬರುತ್ತಿದ್ದರು, ಅತ್ಯಂತ ಬೆಲೆ ಬಾಳುವ ವಸ್ತುಗಳನ್ನು ಮಾರುವವರು ಬರುತ್ತಿದ್ದರು. ಈ ವಿಚಾರವು ಅಯೋಧ್ಯೆಯ ಜನರ ಸಾಮರ್ಥ್ಯವನ್ನು ಸೂಚಿಸುತ್ತದೆ. ಅಯೋಧ್ಯಾನಗರಿಯು ಪ್ರಮುಖ ವ್ಯಾಪಾರಕೇಂದ್ರವಾಗಿತ್ತು. ಅಲ್ಲಿ ರಾಜನ ಮುಕುಟದಲ್ಲಿ ಮಾತ್ರವಲ್ಲ, ಮನೆಮನೆಗಳಲ್ಲಿ ರತ್ನಗಳಿತ್ತು. ಅಲ್ಲಲ್ಲಿ ರತ್ನಗಿರಿಗಳೇ ಇದ್ದವು. ಇವುಗಳೆಲ್ಲಾ ಇಕ್ಷ್ವಾಕುವಿನಸೇವೆಯ ಫಲ. 

ನೇಗಿಲಗೆರೆಯೇ..ಬಾಗಿಲ ತೆರೆಯೇ..ಬರುವಳು ಸಿರಿದೇವಿ..”ಎನ್ನುತ್ತಾ ಸಿರಿದೇವಿಯನ್ನು ಬರಮಾಡಿಕೊಳ್ಳಬಹುದು.ಅವಳಿದ್ದಲ್ಲಿ ಸಂಪೂರ್ಣ ಸಮೃದ್ಧಿ. ಇಲ್ಲವಾದಲ್ಲಿ ಭಸ್ಮೀಭೂತ. ಹರಿಯನ್ನು ಮರೆಯಬಾರದು. ಹರಿಯನ್ನು ಪೂಜಿಸಿದರೆ ಸಿರಿ ತಾನಾಗಿಯೇ ಬರುತ್ತಾಳೆ. ದುರ್ಯೋಧನನು ಕೇವಲ ಸಿರಿ ಬಯಸಿದವನು. ಕೊನೆಗೆ ಏನನ್ನೂ ಪಡೆಯಲಾರದೆ ಹೋದನು. ರಾವಣನು ಸಿರಿಯನ್ನು ಬಯಸಿದವನು. ರಾಮನನ್ನೇ ಅರಿಯಾಗಿಸಿಕೊಂಡವನು. ಅದೇ ಹರಿಯನ್ನು ಬಯಸಿ, ಬರಮಾಡಿಸಿ ಪೂಜಿಸುತ್ತಿದ್ದರೆ ಸಿರಿ ತಾನಾಗಿಯೇ ಹೋಗಿ ಆಶೀರ್ವದಿಸುತ್ತಿದ್ದಳು. ನಮ್ಮ ಭಕ್ತಿ, ಶ್ರದ್ಧೆ, ಶ್ರಮವೇ ಹರಿ. ಹರಿಯನ್ನು ಪೂಜಿಸಿ ಸಿರಿಯನ್ನು ಪಡೆಯಬೇಕು. ಶ್ರಮ ಪಟ್ಟು ಸಿರಿಯನ್ನು ಗಳಿಸಬೇಕು. ಯಾರನ್ನೋ ನೋಯಿಸಿ ಸಂಪಾದಿಸುವುದು ಅಲ್ಲ. ಊಟ ಮಾಡುವಾಗ, ಊಟ ಬೇಯಿಸಿದ ನೀರು, ಬೆವರಿನ ನೀರೋ ಅಥವಾ ಇನ್ನೊಬ್ಬರ ಕಣ್ಣೀರೋ ಎಂಬುದನ್ನು ತಿಳಿದುಣ್ಣಬೇಕು.

|| ಹರೇರಾಮ ||
Jagadguru Shankaracharya Sri Sri Raghaveshwara Bharati Mahaswamiji – Ramayana sessions – Akshararoopa 

ಶ್ರೀಸಂಸ್ಥಾನದವರು ಅನುಗ್ರಹಿಸುತ್ತಿರುವ – ಧರ್ಮಭಾರತೀ ಪ್ರಕಟಿಸುತ್ತಿರುವ  *’ಭಾವ~ರಾಮಾಯಣ’* ವೇ ರಾಮಾಯಣ ಪಾಠದ ಪಠ್ಯ.
*ಶ್ರೀಸಂಸ್ಥಾನದವರು ಧರ್ಮಭಾರತೀ ಮೂಲಕ ಮರ್ಯಾದಾ ಪುರುಷೋತ್ತಮನ ದಿವ್ಯವ್ಯಕ್ತಿತ್ವವನ್ನು ಮತ್ತೆ ಕಟ್ಟಿಕೊಡುತ್ತಿದ್ದಾರೆ.* 
ವಿ.ಸೂ: ಚಂದಾ ಮಾಡಲು ಸಂಪರ್ಕಿಸಿ – 9449595254

Facebook Comments Box