ಗೋಕರ್ಣ – ಸಾಕ್ಷಾತ್ ಭೂಕೈಲಾಸ ಎಂದೇ ಖ್ಯಾತವಾದ, ಪರಶಿವನ ಆತ್ಮಲಿಂಗವನ್ನು ಹೊಂದಿದ ಏಕೈಕ ಕ್ಷೇತ್ರ. ತ್ರಿಲೋಕದಲ್ಲಣನಾದ ರಾವಣನ ಭುಜಬಲಗರ್ವವನ್ನು ಅಪಹರಿಸಿದ ಶಕ್ತಿಸ್ಥಲ. ಸಿಕ್ಕಿದ್ದನ್ನು ದಕ್ಕಿಸಿಕೊಳ್ಲುವುದೂ ಸುಲಭದ ಮಾತಲ್ಲ.ಅದಕ್ಕೂ ಶಿವಸಂಕಲ್ಪವೇಬೇಕೆಂಬುದನ್ನು ಲೋಕಕ್ಕೆ ಸಾರುತ್ತಿರುವ ಈ ಈಶಸನ್ನಿಧಿ ಅವಿಚ್ಛಿನ್ನ ಪರಂಪರೆಯ ಲೋಕಶಂಕರ ರಾಜಗುರುಪೀಠವಾದ ಈಗ ಶ್ರೀ ರಾಮಚಂದ್ರಾಪುರಮಠ ಎಂದೇ ಕರೆಯಲ್ಪಡುವ ರಘೂತ್ತಮ ಮಠದ ಜನ್ಮಸ್ಥಳವೂ ಹೌದು. ಸನಾತನ ವೈದಿಕಧರ್ಮಪ್ರತಿಷ್ಠಾಪನಾಚಾರ್ಯ ಎಂದೇ ಪ್ರಸಿದ್ಧರಾದ ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ತಮ್ಮ ಶಿಷ್ಯ-ಪ್ರಶಿಷ್ಯರೊಂದಿಗೆ ಗೋಕರ್ಣಕ್ಷೇತ್ರಕ್ಕೆ ಬಂದು ವಿಧಿವತ್ತಾಗಿ ಸಾರ್ವಭೌಮ ಶ್ರೀ ಮಹಾಬಲನನ್ನು ಅರ್ಚಿಸಿದರು.ಆಸ್ತಿಕಮತೋಜ್ಜೀವನಕಾರ್ಯದಲ್ಲಿ ಕಟಿಬದ್ಧರಾಗಿದ್ದ ಶ್ರೀಮದಾಚಾರ್ಯರು ಸನಿಹದ ಅಶೋಕೆಯಲ್ಲಿ ಮಠವೊಂದನ್ನು ಸ್ಥಾಪಿಸಿದರು. ತಮ್ಮಿಂದಲೇ ಶಾಸ್ತ್ರಾಭ್ಯಾಸವನ್ನು ಮಾಡಿದ ಆಚಾರ್ಯಸುರೇಶ್ವರರಿಂದ ಸನ್ಯಾಸವನ್ನು ಸ್ವೀಕರಿಸಿದ ಶ್ರಿ ವಿದ್ಯಾನಂದರನ್ನು ಈ ಪೀಠಕ್ಕೆ ಅಧಿಪತಿಯನ್ನಾಗಿ ಮಾಡಿದರು. ಅಗಸ್ತ್ಯ ಸಂಪೂಜಿತವಾಗಿ ಶ್ರೀವರದ ಮುನಿಗಳಿಂದ ಪ್ರಾಪ್ತವಾದ ತಪೋರಾಮಾದಿ ವಿಗ್ರಹಗಳನ್ನೂ, ಶ್ರೀ ಚಂದ್ರಮೌಳೀಶ್ವರಲಿಂಗ, ಶ್ರೀಪಾದುಕೆಗಳನ್ನೂ ನೀಡಿ ಕ್ಷೇತ್ರಾಧೀಶ ಶ್ರೀ ಮಹಾಬಲನನ್ನು ನಿತ್ಯವೂ ವಿಧಿವತ್ತಾಗಿ ಅರ್ಚಿಸಿ. ಮಾಂಡವೀ ನದಿಯಿಂದ ಕೇರಳದ ಪಯಸ್ವಿನೀ ನದಿಯವರೆಗೂ ವ್ಯಾಪಿಸಿದ ಗೋಕರ್ಣಮಂಡಲಾಚಾರ್ಯತ್ವವನ್ನುವಹಿಸಿ ಧರ್ಮಸಾಮ್ರಾಜ್ಯನೇತರರಾಗಿ ಎಂದು ಆದೇಶಿಸಿದ್ದಲ್ಲದೆ ರಘುಕುಲ ಶ್ರೇಷ್ಠನಾದ ಶ್ರೀ ರಾಮಚಂದ್ರನೇ ಇಲ್ಲಿ ಆರಾಧ್ಯನಾದುದರಿಂದ ಈ ಮಠವು ರಘೂತ್ತಮ ಮಠ ಎಂದೆ ಪ್ರಸಿದ್ಧವಾಗಲಿ ಎಂದು ಆಶೀರ್ವದಿಸಿ ಜಗನ್ನಾಥಕ್ಕೆ ತೆರಳಿದರು.

ಹೀಗೆ ಈ ಪೀಠದ ಪ್ರಥಮಾಧಿಪತಿಯಾದ ಶ್ರೀ ವಿದ್ಯಾನಂದಾಚಾರ್ಯರ ಪರಂಪರೆಯ ಶ್ರೀಚಿದ್ಘನೇಂದ್ರ ಭಾರತೀ ಶ್ರೀಗಳ ಕಾಲದಲ್ಲಿ ಸುಮಾರು ಹತ್ತನೆಯ ಶತಮಾನದಲ್ಲಿ ಅಶೋಕೆಯಿಂದ ಗೋಕರ್ಣದ ಕೋಟಿತೀರ್ಥ ಕಟ್ಟೆಯ ಈಗಿನ ಶ್ರೀಮಠದ ಸ್ಥಳಕ್ಕೆ ಮಠವು ಸ್ಥಾನಾಂತರಗೊಂಡಿತು. ಕ್ರಿ.ಶ.1490 ರವರೆಗೂ ಎಲ್ಲ ಪೀಠಾಧಿಪತಿಗಳೂ ಈ ಮಠದಲ್ಲಿಯೇ ಉಳಿದು ಮಹಾಬಲೇಶ್ವರದೇವಾಲಯದ ಆಡಳಿತವನ್ನು ನಿರ್ವಹಿಸುತ್ತಿದ್ದರು. ಶ್ರೀಪೀಠದ ಹತ್ತನೆಯ ಪೀಠಾಧೀಶರಾದ ಪರಂಪರೆಯ ಮೊದಲ ರಾಘವೇಶ್ವರಭಾರತೀಶ್ರೀಗಳ ಕಾಲದಲ್ಲಿ ಅವರ ಶಿಷ್ಯರಾದ ಶ್ರೀ ರಾಮಚಂದ್ರ ಭಾರತೀ ಶ್ರೀಗಳು ಕೆಳದಿಸಂಸ್ಥಾನದ ಅರಸು ಚೌಡಪ್ಪನಾಯಕರ ಭಕ್ತಿಪೂರ್ವಕ ಪ್ರಾರ್ಥನೆಯನದನ್ನು ಅಂಗೀಕರಿಸಿ ಹೊಸನಗರದ ಅಗಸ್ತ್ಯಾಶ್ರಮದ ಸಮೀಪ ನೂತನ ಮಠವೊಂದನ್ನು ಸ್ಥಾಪಿಸಿದರು. ಇದೇ ಈಗಿನ ರಾಮಚಂದ್ರಾಪುರಮಠ. ಶ್ರೀರಾಘವೇಶ್ವರ ಭಾರತೀ ಶ್ರೀಗಳ ಮತ್ತೋರ್ವ ಶಿಷ್ಯ ಶ್ರೀರಘೂತ್ತಮ ಭಾರತೀಶ್ರೀಗಳು ಹೊನ್ನಾವರಸಮೀಪದ ಕೆಕ್ಕಾರಿನಲ್ಲಿ ಮಠವೊಂದನ್ನುನಿರ್ಮಿಸಿ ಅಲ್ಲಿಯೇ ಉಳಿದರು. ಆ ಮಠವೂ ಸಹ ರಘೂತ್ತಮ ಮಠವೆಂದೇ ಪ್ರಸಿದ್ಧವಾಯಿತು. ಆದರೆ ಗೋಕರ್ಣಮಠವು ಮೊದಲ ಮಠವಾದ್ದರಿಂದ ಈ ಮಠಕ್ಕೆ ಆದ್ಯರಘೂತ್ತಮ ಮಠವೆಂದೇ ಹೆಸರು. ಹನ್ನೊಂದನೆಯ ಶ್ರೀ ರಾಮಚಂದ್ರಭಾರತೀ ಶ್ರೀಗಳವರ ಕಾಲದಿಂದ ಗೋಕರ್ಣಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಗಳೂ ಹೊಸನಗರದ ಶ್ರೀ ರಾಮಚಂದ್ರಾಪುರಮಠದಿಂದಲೇ ನಡೆಯತೊಡಗಿತು. ಅಗಸ್ತ್ಯಸಂಪೂಜಿತ ಶ್ರೀರಾಮಾದಿಗಳ ಅರ್ಚನೆ ಇಲ್ಲಿ ನಿತ್ಯ ನಡೆಯುತ್ತಿದೆ. ಮೂವ್ವತ್ತೆರಡನೆಯ ಪೀಠಾಧಿಪತಿಗಳಾದ ಪರಮತಪಸ್ವಿಗಳೂ, ನಿಗ್ರಹಾನುಗ್ರಹಸಮರ್ಥರೂ ಆದ ಶ್ರೀರಾಘವೇಶ್ವರ ಭಾರತೀ ಶ್ರೀಗಳವರು ತಮ್ಮ ದೇಹತ್ಯಾಗ ಮಾಡಿದ್ದು ಇಲ್ಲಿಯೇ. ಶ್ರೀರಾಮದೇವರ ಬಲಭಾಗದಲ್ಲಿ ಪೂಜ್ಯರ ಸಮಾಧಿಯಿದೆ. ಪೂಜ್ಯ ಶ್ರೀಗಳವರು ತ್ರಿಣ್ಣವಲ್ಲಿ, ಕಾಂಚೀಕ್ಷೇತ್ರಗಳಲ್ಲಿ ಶಾಸ್ತ್ರಾದ್ಯಯನ ನಡೆಸಿ ತಮ್ಮ ವಿದಗ್ಧತೆಯಮೂಲಕ ಕಾಂಚಿಯ ಮಹಾರಾಜನಿಂದ ಸಮ್ಮಾನಪೂರ್ವಕವಾಗಿ ಗಜರಾಜನನ್ನು ಪಡೆದ ಮಹಾಮಹಿಮರು. ಕೊಡಚಾದ್ರಿಯ ಚಿತ್ರಮೂಲದಲ್ಲಿ ಉಗ್ರತಪಸ್ಸನ್ನು ಮಾಡಿ ನಷ್ಟವಾಗಿದ್ದ ದೃಷ್ಟಿಶಕ್ತಿಯನ್ನು ಮರಳಿಪಡೆದು ದುರವಾಪತಪಃಪ್ರಾಪ್ತಚಕ್ಷುಷೇ ಪರಮಾತ್ಮನೇ ಎಂದು ಸಂಸ್ತುತರಾದ ಶ್ರೀಗಳು ಶಿಷ್ಯರಾದ ಶ್ರೀ ರಾಮಚಂದ್ರಭಾರತಿಗಳಿಗೆ ಎಲ್ಲ ಆಡಳಿತವನ್ನು ವಹಿಸಿ ತಾವು ದಕ್ಷಿಣಕಾಶಿ ಎಂದೇಪ್ರಸಿದ್ಧವಾದ ಗೋಕರ್ಣದಲ್ಲಿ ದೇಹತ್ಯಾಗ ಮಾಡುವುದಾಗಿ ಹೇಳಿ ಶಾ.ಶ.ವರ್ಷ1831. ಕೀಲಕ ಸಂವತ್ಸರದ ಮಾರ್ಗಶೀರ್ಷ ಶುಕ್ಲಪಂಚಮಿಯಂದು ಮುಕ್ತರಾದರು. ಪೂಜ್ಯರು ತಂದ ಗಜರಾಜ ರಾಮಭದ್ರನು ಇಂದೂ ಸಹ ಜಗತ್ಪ್ರಸಿದ್ದ ದಂತಸಿಂಹಾಸನರೂಪದಲ್ಲಿ ಶ್ರೀಪೀಠದ ಸೇವೆಗೈಯ್ಯುತ್ತಿದ್ದಾನೆ.

ಹಿಂದಿನ ಪೀಠಾದಿಪತಿಗಳಾದ ಬ್ರಹ್ಮಲೀನ ಶ್ರಿ ರಾಘವೇಂದ್ರಭಾರತೀಶ್ರೀಗಳವರು ಈಮಠದ ಆಡಳಿತವ್ಯವಸ್ಥೆಗಾಗಿ ಟ್ರಸ್ಟ್ ಒಂದನ್ನು ರಚಿಸಿದ್ದು ಇದು ಮಠದ ದೈನಂದಿನ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದೆ. ನಿತ್ಯಪೂಜೆಯ ಜೊತೆ ಸಮಾಧಿಸ್ಥಶ್ರೀಗಳವರ ಆರಾಧನೆ, ಶಿವರಾತ್ರಿಯ ವಿಶೇಷವಿಧಿ, ಮೊದಲಾದ ನೈಮಿತ್ತಿಕ ಕಲ್ಪಗಳನ್ನು ಶ್ರೀ ಶ್ರೀಗಳವರ ಆದೇಶದಂತೆ ನಡೆಸಿಕೊಂಡು ಬರಲಾಗುತ್ತಿದ್ದು 1997ರಿಂದ ಶ್ರೀರಾಘವೇಂದ್ರಭಾರತೀವೈದಿಕವಿದ್ಯಾಲಯವೆಂಬ ಕೃಷ್ಣಯಜುರ್ವೇದಪಾಠಶಾಲೆಯನ್ನೂ ಸಹ ನಡೆಸಲಾಗುತ್ತಿದೆ.ಇಪ್ಪತ್ತುಮಂದಿ ವಿದ್ಯಾರ್ಥಿಗಳು ವಿವಿಧ ತರಗತಿಗಳಲ್ಲಿ ವೇದಾಧ್ಯಯನ ಮಾಡುತ್ತಿದ್ದಾರೆ. ಕೋಟಿತೀರ್ಥದ ದಕ್ಷಿಣಭಾಗದಲ್ಲಿರುವ ಈ ಮಠಕ್ಕೆ ಸಂಬಂಧಿಸಿದಂತೆ ನೂತನವಾದ ವಿಸ್ತೃತ ಕಟ್ಟಡವು ನಿರ್ಮಾಣದಹಂತದಲ್ಲಿದೆ. ಶ್ರೀಮಠದ ಎಲ್ಲ ಪೀಠಾಧಿಪತಿಗಳೂ ಕೂಡಾ ಇಲ್ಲಿಗೆ ಬಂದಾಗ ಶ್ರೀರಾಮಾದಿದೇವತೆಗಳು ಮತ್ತು ಶ್ರೀಗುರುಸನ್ನಿಧಿಗೆ ಸ್ವತಃ ಶ್ರೀಕರಾರ್ಚನೆ ನಡೆಸುವುದು ಇಲ್ಲಿಯ ವಿಶೇಷ.

Facebook Comments Box