|| ಹರೇ ರಾಮ ||
ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ – ಶ್ರೀಸಂಸ್ಥಾನಗೋಕರ್ಣ
ಶ್ರೀರಾಮಚಂದ್ರಾಪುರಮಠ
ಶಾಖೆ : ತೀರ್ಥಹಳ್ಳಿ

ಶ್ರೀಮದ್ರಾಮಚಂದ್ರಾಪುರಮಠದ ಇಪ್ಪತ್ತನೆಯ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ರಘುನಾಥಭಾರತೀ ಮಹಾಸ್ವಾಮಿಗಳವರು ಪೀಠಾರೋಹಣ ಮಾಡಿದ್ದು ಕ್ರಿ.ಶ. ೧೫೬೫ರ ಕ್ರೋಧನ ಸಂವತ್ಸರದಲ್ಲಿ. ಪೂಜ್ಯಶ್ರೀಗಳಿಂದಲೇ ಆ ಕಾಲದಲ್ಲಿ ತೀರ್ಥರಾಜಪುರದ ಪರಿಸರದ ಅರವತ್ತೆರಡು ಶಿಷ್ಯಕುಟುಂಬಗಳ ಧಾರ್ಮಿಕ ಮಾರ್ಗದರ್ಶನಕ್ಕಾಗಿ ತೀರ್ಥರಾಜಪುರದಲ್ಲಿ ಶ್ರೀಮಠದ ಶಾಖೆಯು ಸ್ಥಾಪನೆಗೊಂಡಿತು. ತುಂಗಾನದಿಯ ತಟದ ಸುಂದರ ಪರಿಸರದಲ್ಲಿ ರಥಬೀದಿಯಲ್ಲಿರುವ ಈ ಮಠದ ಆರಾಧ್ಯ ದೇವರು ಶ್ರೀ ಲಕ್ಷ್ಮೀನೃಸಿಂಹ. ಶ್ರೀಮಠದ ಪಕ್ಕದಲ್ಲಿ ಕ್ಷತ್ರಿಯ ಕುಲಾಂತಕ ಪರಶುರಾಮರಿಂದ ಸಂಸ್ಥಾಪಿತನಾದ ಶ್ರೀರಾಮೇಶ್ವರನ ಗುಡಿಯಿದೆ. ಕ್ರಿ.ಶ. ೧೮೫೦-೫೧ರಲ್ಲಿ ಈ ಮಠದ ಮೂವ್ವತ್ತೆರಡನೆಯ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ರಾಘವೇಂದ್ರಭಾರತೀಮಹಾಸ್ವಾಮಿಗಳು ಶ್ರೀ ಅಮರೇಂದ್ರ ಪುರಿಯವರಿಗೆ ಸನ್ಯಾಸದೀಕ್ಷೆಯನ್ನಿತ್ತು ಶ್ರೀಮಠದ ಆಡಳಿತ ವ್ಯವಸ್ಥೆಯನ್ನು ಅವರಿಗೆ ನೀಡಿದ್ದರು. ಅದೇ ೧೮೫೮ರಲ್ಲಿ ಶ್ರೀ ಶ್ರೀಅಮರೇಂದ್ರಪುರಿಗಳು ಶ್ರಿಮಠದ ಸರ್ವಾಧಿಕಾರವನ್ನೂ ತಮ್ಮ ದೀಕ್ಷಾಗುರುಗಳಾದ ಶ್ರೀ ಶ್ರೀಮದ್ರಾಘವೇಂದ್ರಭಾರತೀ ಶ್ರೀಗಳವರಿಗೇ ಸಮರ್ಪಿಸಿದ್ದರಿಂದ ಈ ಮಠವು ಶ್ರೀರಾಮಚಂದ್ರಾಪುರಮಠದಲ್ಲಿ ವಿಲೀನವಾಯಿತು. ನಂತರ ಈ ಮಠಕ್ಕೆ ಪ್ರತ್ಯೇಕವಾಗಿ ಪೀಠಾಧಿಪತಿಗಳ ನಿಯುಕ್ತಿಯಾಗಲಿಲ್ಲ. ಇದೇ ಪರಿಸರದಲ್ಲಿ ತುಂಗಾನದಿಯ ತಟದಲ್ಲಿರುವ ಕುರುವಳ್ಳಿಯ ಶ್ರೀ ಗಂಗಾ-ವಿಶ್ವೇಶ್ವರ ದೇವಾಲಯದ ನಿರ್ವಹಣಾಧಿಕಾರವೂ ಸಹ ಇದೇ ಮಠಕ್ಕೆ ಸೇರಿದ್ದಾಗಿದೆ. ಪಶ್ಚಿಮಾಭಿಮುಖವಾಗಿ ನಿರ್ಮಿತವಾಗಿರುವ ಶ್ರೀದೇವಾಲಯದ ಸಮೀಪ ಪ್ರಾಕ್ತನಗುರುಗಳ ಮೂರು ಸಮಾಧಿಗಳಿವೆ. ಕಾರ್ತಿಕ ಅಮಾವಾಸ್ಯೆಯಂದು ವಿಶೇಷ ದೀಪೋತ್ಸವ, ಶ್ರೀ ನೃಸಿಂಹಜಯಂತಿ ಉತ್ಸವ ಹಾಗೂ ಶ್ರೀ ಶ್ರೀ ಅಮರೇಂದ್ರಪುರಿಗಳ ಆರಾಧನೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ವಾರ್ಷಿಕವಾಗಿ ನಡೆಯುತ್ತವೆ. ವಿಶೇಷವಾಗಿ ಚಾತುರ್ಥಿಕಜ್ವರದ ಪರಿಹಾರಕ್ಕಾಗಿ ಶ್ರೀ ದೇವರಲ್ಲಿ ಹರಕೆಯನ್ನು ಹೇಳಿಕೊಳ್ಳುವ ಕ್ರಮವಿದೆ.
ಶ್ರೀಮಠದ ಮೂವ್ವತ್ತೈದನೆಯ ಪೀಠಾಧಿಪತಿಗಳಾಗಿದ್ದ ಬ್ರಹ್ಮಲೀನರಾದ ಶ್ರೀಗುರುಪರಂಪರೆಯ ಎರಡನೆಯ ಶ್ರೀ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರು ಕಾಶೀಕ್ಷೇತ್ರದಲ್ಲಿ ಕ್ರಿ.ಶ. ೧೯೫೨ ರಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಮೊಟ್ಟಮೊದಲು ಆಗಮಿಸಿದ್ದು ಇದೇ ಮಠಕ್ಕೆ. ನಂತರವೂ ಕೂಡಾ ಸಮಾಜದ ಎಲ್ಲಾ ಪ್ರಾಂತದ ಶಿಷ್ಯರೊಂದಿಗೆ ನಿಕಟವಾದ ಸಂಪರ್ಕವನ್ನು ಏರ್ಪಡಿಸಿಕೊಳ್ಳುವ ಆಶಯದಿಂದ ಪೂಜ್ಯಶ್ರೀಗಳು ತೀರ್ಥಹಳ್ಳಿಮಠದಲ್ಲಿಯೇ ಹೆಚ್ಚಾಗಿ ವಸತಿಮಾಡಿದ್ದರು. ಶ್ರೀಸಂಸ್ಥಾನ ಗೋಕರ್ಣ ರಾಮಚಂದ್ರಾಪುರಮಠದ ಸರ್ವತೋಮುಖವಾದ ಅಭಿವೃದ್ಧಿಯ ಬಗ್ಗೆ ಯೋಜನೆಗಳೆಲ್ಲವೂ ಈ ಮಠದಲ್ಲಿಯೇ ರೂಪುಗೊಂಡವು ಎಂದರೆ ಅತಿಶಯೋಕ್ತಿಯಲ್ಲ. ಶೃಂಗೇರಿ, ಪೇಜಾವರ, ಕಾಂಚೀ ಮೊದಲಾದ ಅನೇಕ ಪೀಠಾಧಿಪತಿಗಳು ತೀರ್ಥಹಳ್ಳಿಯ ಈ ಮಠಕ್ಕೆ ಆಗಮಿಸಿ ಮೊಕ್ಕಾಂ ಮಾಡಿ ತಮ್ಮ ಮಠದ ಆರಾಧ್ಯದೇವತಾನಿವಹಗಳ ಪೂಜಾದಿಗಳನ್ನು ಇಲ್ಲಿಯೇ ನಡೆಸಿರುವುದೂ ಕೂಡಾ ವಿಶೇಷವೇ. ನಮ್ಮ ಶ್ರೀಮಠದ ಧ್ಯೇಯವಾದ ಸಮಾಜ ಸಂಘಟನೆಗಾಗಿ ಪೂಜ್ಯ ಶ್ರೀ ಶ್ರೀಮದ್ರಾಘವೇಂದ್ರಭಾರತೀ ಶ್ರೀಗಳು ಮೊಟ್ಟಮೊದಲ ಅಖಿಲ ಹವ್ಯಕ ಮಹಾಧಿವೇಶನವನ್ನು ಸಂಘಟಿಸಿದ್ದು ಇದೇ ತೀರ್ಥಹಳ್ಳಿಯ ಮಠದಲ್ಲಿಯೇ. ಅತ್ಯಂತ ಜೀರ್ಣಗೊಂಡಿದ್ದ ಶ್ರೀಮಠದ ಮೂರು ಪಾರ್ಶ್ವಗಳ ಚಂದ್ರಶಾಲೆಗಳನ್ನು ೧೯೭೩ರಲ್ಲಿ ಭದ್ರವಾದ ಶಿಲೆಗಲ್ಲಿನಲ್ಲಿ ನಿರ್ಮಾಣ ಮಾಡಿಸಿದ ಶ್ರೀಗಳು ಆರಾಧ್ಯ ಶ್ರೀ ಲಕ್ಷ್ಮೀನೃಸಿಂಹ ದೇವರ ಗುಡಿಯನ್ನು ಹಾಗೂ ಅತ್ಯಂತ ಸುಂದರವಾದ ಶೈಲಿಯಲ್ಲಿ ಮನಮೋಹಕ ರೀತಿಯಲ್ಲಿ ಶ್ರೀಮಠದ ಮುಂಭಾಗವನ್ನು ೧೯೯೨ರಲ್ಲಿ ನೂತನವಾಗಿ ನಿರ್ಮಾಣ ಮಾಡಿಸಿದರು. ಶ್ರೀ ಶ್ರೀಮದ್ರಾಘವೇಂದ್ರಭಾರತೀ ಶ್ರೀಗಳವರು ನಲವತ್ತನಾಲ್ಕು ಚಾತುರ್ಮಾಸ್ಯವ್ರತಗಳನ್ನು ಈಮಠದಲ್ಲಿಯೇ ಆಚರಿಸಿದ್ದು, ಲಭ್ಯವಿರುವ ದಾಖಲೆಗಳಂತೆ ಈ ಸಂಖ್ಯೆಯ ಚಾತುರ್ಮಾಸ್ಯವ್ರತಗಳು ನಿರಂತರವಾಗಿ ಬೇರಾವ ಶಾಖಾಮಠಗಳಲ್ಲಿಯೂ ಸಂಪನ್ನಗೊಂಡಿದ್ದಿಲ್ಲ. ಉತ್ತರಾಧಿಕಾರಿಗಳಾಗುವ ಮೂವ್ವತ್ತಾರನೆಯ ಪೀಠಾಧಿಪತಿಗಳ ಸ್ಥಾನಕ್ಕಾಗಿ ನೂತ ಶಿಷ್ಯಪರಿಗ್ರಹಸಮಾರಂಭದ ಸಮಾಲೋಚನೆಗಾಗಿ ಶ್ರೀಮಠದ ಸರ್ವಶಿಷ್ಯರ ಮಹಾಸಭೆಯೂ ಸಹ ಈ ಮಠದ ರಾಜಾಂಗಣದಲ್ಲಿಯೇ ನಡೆದಿದ್ದು ಉಲ್ಲೇಖನೀಯವಾದ ವಿಷಯ.

|| ಹರೇ ರಾಮ ||

ವಿಳಾಸ :
ಶ್ರೀರಾಮಚಂದ್ರಾಪುರಮಠ,
ರಥಬೀದಿ, ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ ೫೭೭ ೪೩೨
ದೂರವಾಣಿ : 08181 – 228271

Facebook Comments Box