ಗೋವು ಪ್ರೇರಕ ಶಕ್ತಿ –  ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ ಗೋಸಂದೇಶ

ಬೆಂಗಳೂರು: ಕಣ್ಣಿಗೆ ಕಾಣುವಂತಹ, ಕೈಗೆ ಸಿಗುವಂತಹ, ಹೊಟ್ಟೆ ತುಂಬಿಸುವಂತಹ ಭೌತಿಕವಾದ ಅದೆಷ್ಟೋ ಸುವಸ್ತ್ತುಗಳನ್ನು ಗೋಮಾತೆ ಕೊಡುತ್ತಾಳೆ. ಜೊತೆಗೆ ಅಭೌತಿಕವಾಗಿ ಕೂಡಾ ಹಲವನ್ನು ಕೊಡುತ್ತಾಳೆ ಗೋಮಾತೆ. ಅದರಲ್ಲೊಂದು ಮುಖ್ಯವಾದುದು ‘ಪ್ರೇರಣೆ’ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.
ಇಲ್ಲಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶಸಭೆಯಲ್ಲಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮೂಲ ಗೋವು. ಹಿಂಸೆಗೊಳಗಾಗಿ ಗತಿಸಿದ ಗೋವಿನ ಮೇಧಸ್ಸು ಸ್ವಾತಂತ್ರ್ಯ ಹೋರಾಟಕ್ಕೆ ಮೂಲ ಕಾರಣ. ಗೋವಿನ ಕೊಬ್ಬಿನಿಂದ ಭಾರತಕ್ಕೆ ಸ್ವಾತಂತ್ರ್ಯ ಬಂತು ಆದರೆ ಸ್ವಾತಂತ್ರ್ಯದಿಂದ ಜನರಿಗೆ ಕೊಬ್ಬು ಬಂತು. ಹಾಗಾಗಿ ನಾವು ಗೋವನ್ನು, ಕೃಷಿಯನ್ನು ಮರೆತಿದ್ದೇವೆ. ಸ್ವಾತಂತ್ರ್ಯಾನಂತರ ಗೋಹತ್ಯೆ ಜಾಸ್ತಿಯಾಯಿತು ಎಂದರು.
ಕಾಮದುಘಾ ಆಂದೋಲನದ ಒಂದು ಭಾಗ ಈ ಗೋಚಾತುರ್ಮಾಸ್ಯ. ಮಹಾನಂದಿಯ ಆಗಮನದಿಂದ ವೇಗಗೊಂಡ ಈ ಆಂದೋಲನ ರಾಜ್ಯ, ರಾಷ್ಟ್ರಗಳಲ್ಲಿ ಬದಲಾವಣೆ ತಂದಿತು. ಮುಂದೆ ಸಪ್ತ ರಾಜ್ಯಗಳಲ್ಲಿ ಮಹಾನಂದಿ ಗೋಯಾತ್ರೆ ನಡೆಯಲಿದ್ದು, ನಾವೆಲ್ಲ ಸೇರಿ ಆ ಯಾತ್ರೆಯನ್ನು ಸಫಲಗೊಳಿಸಬೇಕಾಗಿದೆ. ಯಾತ್ರೆ ಸಫಲಗೊಳ್ಳುವುದು ಗೋಹತ್ಯೆ ನಿಂತಾಗ. ಗೋಪ್ರೇರಣೆಯೊಂದಿಗೆ ಈ ಮಹತ್ಕಾರ್ಯದಲ್ಲಿ ನಾವೆಲ್ಲಾ ಭಾಗಿಗಳಾಗೋಣ ಎಂದು ಕರೆನೀಡಿದರು.
ಬಾಗಲಕೋಟೆ, ಕಮತಗಿ, ಹುಚ್ಚೇಶ್ವರ ಸಂಸ್ಥಾನ ಮಠದ ಮ.ನಿ.ಪ್ರ. ಶ್ರೀ ಶ್ರೀ ಹುಚ್ಚೇಶ್ವರ ಮಹಾಸ್ವಾಮೀಜಿ ತಮ್ಮ ಗೋ ಸಂದೇಶದಲ್ಲಿ, ಭಾರತ ದೇಶವನ್ನು ಪೂಜ್ಯ ಭಾವನೆ, ನ್ಯಾಯನೀತಿ, ಸಂಸ್ಕೃತಿಯಿಂದ ಅಳೆಯುತ್ತಾರೆ. ನಮ್ಮ ಸಂಸ್ಕೃತಿಯ ಮೂಲಾಧಾರ ಗೋವು. ಗೋಮಾತೆಯ ಸಂರಕ್ಷಣೆಯಿಂದ ಮಾತ್ರ ದೇಶವನ್ನು ರಕ್ಷಿಸಬಹುದು. ಹಾಗೆಯೇ ಮಾನವ ಜೀವಿಸಲೂ ಗೋಮಾತೆ ಬೇಕೇಬೇಕು. ಗೋಮಾತೆಯ ಸೇವಾಕಾರ್ಯದಲ್ಲಿ ನಾವು ಸದಾಸಿಧ್ಧ ಎಂದರು.
ಶ್ರೀಮಠದ ಗೋಆಂದೋಲನಕ್ಕೆ ಹೊಸ ಆಯಾಮ ನೀಡಿದ ಮಹಾನಂದಿ ಜನಿಸಿದ ಮನೆಯ ಸಂಸ್ಕೃತ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸೇವೆ ಮಾಡಿದ ಶ್ರೀ ಲಕ್ಷ್ಮೀತಾತಾಚಾರ್ಯ ಹಾಗೂ ಲೆಕ್ಕಪರಿಶೋಧಕರಾಗಿ ಗವ್ಯಾಧರಿತ ಕೃಷಿ ಮಾಡುತ್ತಿರುವ ದೇವೇಂದ್ರಪ್ಪ ಹೊನ್ನಾಳಿ ಇವರುಗಳಿಗೆ ಗೋ ಸೇವಾ ಪುರಸ್ಕಾರವನ್ನು ನೀಡಲಾಯಿತು.
ಶ್ರೀಭಾರತೀಪ್ರಕಾಶನ ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿಯನ್ನು ಡಿ.ಡಿ. ಶರ್ಮಾ ದಂಪತಿಗಳು ಹಾಗೂ “ರಾಜಾ ಕಾಲಸ್ಯ ಕಾರಣಮ್’ ಪುಸ್ತಕವನ್ನು ಆ. ಪು. ನಾರಾಯಣಪ್ಪ ಲೋಕಾರ್ಪಣೆ ಮಾಡಿದರು.
ಮೂಲಮಠ ಅಶೋಕೆ ನಿರ್ಮಾಣ ಸಮಿತಿಯವರು ಸರ್ವಸೇವೆಯನ್ನು ನೆರವೇರಿಸಿದರು. ಸಹಕಾರಿ ಧುರೀಣ ಆರ್. ಎಸ್. ಭಾಗವತ್, ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಮಲ್ಲೇಪುರಮ್ ಜಿ. ವೆಂಕಟೇಶ್, ಡಿ.ಡಿ. ಶರ್ಮಾ ದಂಪತಿಗಳು, ಆ. ಪು. ನಾರಾಯಣಪ, ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು ಇದ್ದರು. ಎಸ್. ಜಿ ಭಟ್ ನಿರೂಪಿಸಿದರು. ಶಿವರಾಜ್ ಭಟ್ ದಂಪತಿಗಳು ಸಭಾಪೂಜೆ ನೆರವೇರಿಸಿದರು. ಅನಂತರ ದೀಪಿಕಾ ಭಟ್ ಬಳಗದವರಿಂದ ಗಾಯನ ಕಾರ್ಯಕ್ರಮ ನಡೆಯಿತು.
ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಹಾಮೃತ್ಯುಂಜಯ ಹವನ, ಸಪ್ತಶತೀ ಪಾರಾಯಣ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

ಕಾಮದುಘಾ ಆಂದೋಲನದ ಭಾಗವಾಗಿ ಸಪ್ತ ರಾಜ್ಯಗಳಲ್ಲಿ ಮಹಾನಂದಿ ಗೋಯಾತ್ರೆ ನಡೆಯಲಿದ್ದು, ನಾವೆಲ್ಲ ಸೇರಿ ಆ ಯಾತ್ರೆಯನ್ನು ಸಫಲಗೊಳಿಸಬೇಕಾಗಿದೆ. ಯಾತ್ರೆ ಸಫಲಗೊಳ್ಳುವುದು ಗೋಹತ್ಯೆ ನಿಂತಾಗ. ಗೋಪ್ರೇರಣೆಯೊಂದಿಗೆ ಈ ಮಹತ್ಕಾರ್ಯದಲ್ಲಿ ನಾವೆಲ್ಲಾ ಭಾಗಿಗಳಾಗೋಣ.
– ಶ್ರೀರಾಘವೇಶ್ವರಶ್ರೀಗಳು, ಶ್ರೀರಾಮಚಂದ್ರಾಪುರಮಠ

• ಲಕ್ಷ್ಮೀತಾತಾಚಾರ್ಯ ಹಾಗೂ ದೇವೇಂದ್ರಪ್ಪ ಹೊನ್ನಾಳಿ ಇವರುಗಳಿಗೆ ಗೋ ಸೇವಾ ಪುರಸ್ಕಾರ ಪ್ರದಾನ
• ಶ್ರೀಭಾರತೀಪ್ರಕಾಶನದ “ರಾಜಾ ಕಾಲಸ್ಯ ಕಾರಣಮ್” ಪುಸ್ತಕ ಲೋಕಾರ್ಪಣೆ
• ಬಾಗಲಕೋಟೆ, ಕಮತಗಿ, ಹುಚ್ಚೇಶ್ವರ ಸಂಸ್ಥಾನ ಮಠದ ಮ.ನಿ.ಪ್ರ. ಶ್ರೀ ಶ್ರೀ ಹುಚ್ಚೇಶ್ವರ ಮಹಾಸ್ವಾಮೀಜಿ ಉಪಸ್ಥಿತಿ

12.08.2016 ರ ಕಾರ್ಯಕ್ರಮ:

 • ಬೆಳಗ್ಗೆ 7.00 : ಕಾಮಧೇನು ಹವನ, ರಾಮತಾರಕ ಹವನ, ಶ್ರೀದುರ್ಗಾ ಪೂಜೆ
 • ಬೆಳಗ್ಗೆ 9.00 : ಕುಂಕುಮಾರ್ಚನೆ
 • ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
 • ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
 • ಅಪರಾಹ್ನ 3.30 :
  ಗೋಸಂದೇಶ : ಪಂಚಗವ್ಯ – ಡಾ. ಗಣೇಶ್ ಕುಮಾರ್ ಪಳ್ಳತ್ತಡ್ಕ
  ಲೋಕಾರ್ಪಣೆ : ಗೋಸಂಪ್ರದಾಯಗೀತೆ ಭಾಗ 2 – ಧ್ವನಿಮುದ್ರಿಕೆ
  ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
  ಗೋಸೇವಾಪುರಸ್ಕಾರ : ಭಾಜನರು – ಡಾ. ಗಣೇಶ್ ಕುಮಾರ್ ಪಳ್ಳತ್ತಡ್ಕ
  ಸಂತ ಸಂದೇಶ :
  ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
 • ಸಂಜೆ: 5.00 : ಕಲಾರಾಮ : ಗಾಯನ – ಕುಮಾರಿ ಹರ್ಷಿತಾ, ಪಿಟೀಲು – ವಿ. ಆರಾಧ್ಯ, ಮೃದಂಗ – ನಿಕ್ಷಿತ್ ಟಿ. ಪುತ್ತೂರು
 • ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
 • ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ
Facebook Comments