ಸಂತರು ಗೋವಿನ ಕುರಿತು ಜಾಗ್ರತರಾದರೆ ಗೋರಕ್ಷಣೆ ಸಾಧ್ಯ : ಶ್ರೀಸಂಸ್ಥಾನ

ಬೆಂಗಳೂರು, ಜು. 27 : ಗೋವು ಹಾಗೂ ಸಂತರು ಚಲಿಸುವ ದೇವರ ರೂಪಗಳು, ಕುಲನಾಶದ ಆಪತ್ತಿನಲ್ಲಿರುವ ಗೋವು ತನ್ನ ರಕ್ಷಣೆಗಾಗಿ ಸಂತರನ್ನು ಕರೆಯುತ್ತಿದೆ, ಸಂತರು ಗೋರಕ್ಷಣೆಗೆ ಮುಂದಾಗಬೇಕು. ಸಂತರು ಗೋವಿನ ಕುರಿತು ಜಾಗ್ರತರಾದರೆ ಗೋರಕ್ಷಣೆ ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು.

 

ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀಗಳು, ಗೋಪ್ರೇಮಿ ಲೆಕ್ಕಪರಿಶೋಧಕ ಸಿಎ. ಅನಂತರಾವ್ ಅವರಿಗೆ ಗೋಸೇವಾಪುರಸ್ಕಾರವನ್ನು  ಅನುಗ್ರಹಿಸಿ, ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿಯೂ ಗೋಸೇವೆಯಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ. ಪ್ರತಿಯೊಬ್ಬ ಭಾರತೀಯರೂ ಮನೆಯಲ್ಲಿ ಗೋವನ್ನು ಸಾಕಬೇಕು. ಮನೆಯಲ್ಲಿ ಕಷ್ಟಸಾಧ್ಯ ಎಂದಾದರೆ, ಮನಸ್ಸಿನಲ್ಲಿ ಗೋವಿಗೆ ಸ್ಥಾನಕೊಟ್ಟು, ಗೋಶಾಲೆಯಲ್ಲಿರುವ ಗೋವುಗಳನ್ನು ದತ್ತು ತೆಗೆದುಕೊಂಡು ಪರೋಕ್ಷವಾಗಿ ಗೋಸಾಗಾಣೆಗೆ ಮುಂದಾಗಿ ಎಂದು ಆಶಂಸಿದರು.

ಹಿಂದೆ ಗೋವುಗಳಿಗೆ ರಾಜಾಶ್ರಯವಿತ್ತು, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ವಡೆಯರ್ ಮುಂತಾದ ಮಹಾರಾಜರುಗಳು ಕೂಡ ಗೋವಿಗೆ ಗ್ರಾಸ ಸಮರ್ಪಿಸಿದನಂತರವಷ್ಟೇ ತಾವು ಆಹಾರವನ್ನು ಸ್ವೀಕರಿಸುತ್ತಿದ್ದರು ಎಂದು ಶ್ರೀಗಳು ತಿಳಿಸಿದರು.

 

ಅಳ್ಳೋಳ್ಳಿ ಸಾವಿರದೇವರಮಠದ ಶ್ರೀ ಸಂಗಮನಾಥ ಶಿವಾಚಾರ್ಯ ಸ್ವಾಮೀಜಿಗಳು ಸಂತಸಂದೇಶವನ್ನು ನೀಡಿ, ಸಂತರು ಗೋರಕ್ಷಣೆಗೆ ಮುಂದಾಗುವುದರ ಜೊತೆಗೆ, ಗೋಪ್ರೇಮಿ ಸಂತರಿಗೆ ಸಂಕಟಗಳು ಎದುರಾದಾಗಲೂ ಒಟ್ಟಾಗಬೇಕು. ಗೋರಕ್ಷಣೆಗಾಗಿ ಸಂತರನ್ನು ಸಂಘಟಿಸುತ್ತಿರುವ ರಾಘವೇಶ್ವರಶ್ರೀಗಳ ಕಾರ್ಯ ಅಭಿನಂದನೀಯ ಎಂದರು. ಶ್ರೀ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಯರಗೋಳ ಹಾಗೂ ಶ್ರೀ ಗುರುಸಿದ್ಧ ಶಿವಾಚಾರ್ಯ ಸ್ವಾಮೀಜಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 

ವೃತ್ತಿಯಲ್ಲಿ  ಚಾರ್ಟೆಡ್ ಅಕೌಂಟೆಂಟ್ ಆಗಿದ್ದರೂ 12 ವರ್ಷಗಳಿಂದ ಗೋಸೇವೆಯಲ್ಲಿ ತೊಡಗಿಕೊಂಡಿರುವ, ಗೋಆಧಾರಿತ ಪದ್ಧತಿಯಲ್ಲಿ ರಾಜಮುಡಿ ಭತ್ತ, ಸಾವಯವ ತರಕಾರಿ ಬೆಳೆದು ಮಾದರಿಯಾಗಿರುವ ಮಂಡ್ಯದ ಅನಂತರಾವ್ ಅವರಿಗೆ ಶ್ರೀಗಳು ಗೋಸೇವಾಪುರಸ್ಕಾರವನ್ನುಅನುಗ್ರಹಿಸಿದರು. ಗೋಸೇವಾಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ  ಸಿಎ.ಅನಂತರಾವ್ ಅವರು, ಗೋವಿನ ಕಡಗಣನೆಯಿಂದ ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ಕೃಷಿಯಲ್ಲಿ ಗೋವಿನ ಕಡೆಗಣನೆಯಿಂದ ಹಾಗೂ ರಾಸಾಯನಿಕ ಬಳಕೆಯಿಂದ ಜನರಲ್ಲಿ ರೋಗರುಜನೆಗಳು ಹೆಚ್ಚಾಗಿದೆ ಮತ್ತು ಪರಿಸರಕ್ಕೂ ಹಾನಿಯಾಗಿದೆ. ಗೋಆಧಾರಿತ ಜೀವಾಮೃತ ಇತ್ಯಾದಿಗಳ ಬಳಕೆಯಿಂದ ಕೃಷಿಯನ್ನು ಸಮೃದ್ಧಗೊಳಿಸಬಹುದು ಎಂದು ಅಭಿಪ್ರಾಯಪಟ್ಟರು.

 

ಶ್ರೀಮಠದ ಸಾಹಿತ್ಯಸುರಭಿ ವಿಭಾಗ ಸಂಗ್ರಹಿಸಿ, ಶ್ರೀಭಾರತೀಪ್ರಕಾಶನವು ಹೊರತಂದ ‘ಗೋಸಂಪ್ರದಾಯ ಗೀತೆಗಳು’ ಎಂಬ ಪುಸ್ತಕ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ಧ್ವನಿಮುದ್ರಿಕೆಯನ್ನು ರಾಘವೇಶ್ವರಶ್ರೀಗಳು ಲೋಕಾರ್ಪಣೆ ಮಾಡಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮದಲ್ಲಿ ಕು. ಸೌರಭಾ ಭಟ್ ಮತ್ತು ಶ್ರೀಮತಿ ಅನನ್ಯಾ ಭಟ್ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ತೀರ್ಥರಾಜಪುರ, ಶಿವಮೋಗ್ಗ, ಹೊಸನಗರ ವಲಯದವರು ಸರ್ವಸೇವೆಯನ್ನು ನೆರವೆರಿಸಿದರು. ಶ್ರೀಮಠದ ಅಂಗ ಸಂಸ್ಥೆಗಳಾದ ಶ್ರೀಭಾರತೀ ಗುರುಕುಲ, ಮಹಾನಂದಿಗೋಲೋಕ ಹಾಗೂ ಪ್ರಧಾನಮಠ ತಮ್ಮ ಸೇವೆಯನ್ನು ಸಮರ್ಪಿಸಿದವು. ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು,  ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಸತ್ಯನಾರಾಯಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

 

 28.07.2016ರ ಕಾರ್ಯಕ್ರಮ::

ಬೆಳಗ್ಗೆ 8.00 : ಕಾಮಧೇನು ಹವನ, ವೇದಪಾರಾಯಣ, ರಾಮಾಯಣ ಪಾರಾಯಣ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಬೆಳಗ್ಗೆ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ

ಅಪರಾಹ್ನ 3.00 :

ಗೋಸಂದೇಶ : ಹಾಲು ಮತ್ತು ಮಜ್ಜಿಗೆ – ಡಾ. ಪ್ರಸನ್ನ ವೆಂಕಟೇಶ್ ಮೈಸೂರು

ಲೋಕಾರ್ಪಣೆ : ಪರಾಶರ – ಪುಸ್ತಕ : ಲೇಖಕರು – ವಿದ್ವಾನ್ ಗುರುಪ್ರಸಾದ್ ಮೈಸೂರು

ಸಾಧನಾಪಂಚಕ ಪ್ರವಚನಮಾಲಿಕೆ – ಧ್ವನಿಮುದ್ರಿಕೆ

ಗೋಸೇವಾಪುರಸ್ಕಾರ : ಭಾಜನರು – ಡಾ. ಪ್ರಸನ್ನ ವೆಂಕಟೇಶ್ ಮೈಸೂರು

ಸಂತ ಸಂದೇಶ :   ಷ| ಬ್ರ| ಶ್ರೀ ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮೀಜಿಗಳು, ಗುಲ್ಬರ್ಗಾ

ಉಪಸ್ಥಿತಿ :       ಷ| ಬ್ರ| ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು, ದೇವಾಪುರ, ಯಾದಗಿರಿ

ಷ| ಬ್ರ| ಶ್ರೀ ಶಿವಲಿಂಗರಾಜೇಂದ್ರ  ಶಿವಾಚಾರ್ಯ ಮಹಾಸ್ವಾಮೀಜಿಗಳು,

ಚಿಕ್ಕಮಠ, ದೋನಹಳ್ಳಿ, ಶಹಾಪುರ

ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ

ಸಂಜೆ 5.00 : ಕಲಾರಾಮ : ಗಾಯನ – ಭೂಮಾ ಭಾರದ್ವಾಜ್ ಮತ್ತು ಬಿಂಜು ನಾಯಕ್

ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ

ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

Gousevaa puraskara - CA Anantha rao Mandya gou janapada haadu - book releaseGou premi santharige srimatahada gaurava

Facebook Comments