ನೀರ್ಚಾಲು, 07.01.2016 :
ಭಗವಾನ್ ಶ್ರೀಕೃಷ್ಣನು ಬಾಲ್ಯ ಕಾಲದಲ್ಲಿ ಊಟ ಮಾಡದೆ ಹಠಮಾಡುವ ಸಂದರ್ಭದಲ್ಲಿ ಗೋವುಗಳನ್ನು ತೋರಿಸಿ ಊಟ ಮಾಡಿಸುತ್ತಿದ್ದರು ಎಂಬುದು ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಅನಾದಿ ಕಾಲದಿಂದಲೇ ನಾವು ಪೂಜಿಸಿಕೊಂಡು ಬಂದ ಗೋಮಾತೆ ರಾಷ್ಟ್ರಮಾತೆ, ರಾಷ್ಟ್ರೀಯ ಪ್ರಾಣಿಯಾಗಬೇಕು ಎಂದು ಚಲಿಸುವ ಗೋ ಆಲಯದ ರೂವಾರಿ ಗಣೇಶ್ ಭಟ್ ಮುಣ್ಚಿಕ್ಕಾನ ಹೇಳಿದರು.
ಅವರು ಮಂಗಳವಾರ ಸಂಜೆ ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾಮಂದಿರದಲ್ಲಿ ಸೇರಿದ್ದ ಭಕ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಧರ್ಮಶಾಸ್ತಾ ಸೇವಾ ಸಮಿತಿಯ ವತಿಯಿಂದ ಚಲುಸುವ ಗೋ ಆಲಯಕ್ಕೆ ಅಯ್ಯಪ್ಪ ಭಕ್ತರು ಹಾಗೂ ಊರವರು ಆರತಿಯನ್ನು ಬೆಳಗಿ ಗೋಗ್ರಾಸವನ್ನಿತ್ತರು. ಮಂದಿರದ ಗುರುಸ್ವಾಮಿ ರಮೇಶ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಧರ್ಮಶಾಸ್ತಾ ಸೇವಾಸಮಿತಿಯ ಅಧ್ಯಕ್ಷ ನಾರಾಯಣ ಮಣಿಯಾಣಿ ಸ್ವಾಗತಿಸಿದರು. ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ ಧನ್ಯವಾದವನ್ನಿತ್ತರು. ನೀರ್ಚಾಲು ಹವ್ಯಕ ವಲಯ ಕಾರ್ಯದರ್ಶಿ ಮಹೇಶ ಸರಳಿ ಪ್ರಸ್ತಾವನೆಗೈದರು.

ಕುಮಾರಮಂಗಲ ಧನುಪೂಜೆಯಲ್ಲಿ ಗೋಪೂಜೆ : ಬೆಳಗಿನ ಜಾವ ಧನುಪೂಜೆಯ ಸಂದರ್ಭದಲ್ಲಿ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಲ್ಲಿ ಸೇರಿದ ಭಕ್ತಜನರು ಚಲಿಸುವ ಗೋ ಆಲಯಕ್ಕೆ ಆರತಿಯನ್ನು ಬೆಳಗಿದ್ದರು. ಸಂಜೆ ನೀರ್ಚಾಲು ಪೇಟೆಯಲ್ಲಿ ವ್ಯಾಪಾರಿಗಳು ಹಾಗೂ ನೀರ್ಚಾಲು ಹವ್ಯಕ ವಲಯದ ವತಿಯಿಂದ ಪೂಜೆಯನ್ನು ಸಲ್ಲಿಸಲಾಯಿತು.

ಸಚಿತ್ರ ವರದಿ:
ಶ್ಯಾಮಪ್ರಸಾದ ಸರಳಿ, ಅಶ್ವಿನಿ ಸ್ಟುಡಿಯೋ ಬದಿಯಡ್ಕ – ಮುಳ್ಳೇರ್ಯ ಮಂಡಲ

ಫೋಟೋ:
ಗೋ ಆಲಯದಲ್ಲಿ ಪೂಜಿಸಲ್ಪಡುತ್ತಿರುವ `ಕಬರಿಯಾ’ ಎಂದು ಕರೆಯಲ್ಪಡುವ ಕಾಸರಗೋಡು ಗಿಡ್ಡತಳಿಯ ಗೋವು. ಈ ಬಣ್ಣದ ಗೋವುಗಳು ಕಾಣಸಿಗುವುದು ತುಂಬಾ ವಿರಳ.  ಮೂಲ ಬಣ್ಣಗಳಾದ ಕಪ್ಪು, ಬಿಳಿ, ಕಂದು, ಕೆಂಪು ಹಾಗೂ ಈ ಬಣ್ಣಗಳ ಮಿಶ್ರಣಗಳಿಂದ ಕೂಡಿದ ಹಸುಗಳು ಕಾಸರಗೋಡು ಗಿಡ್ಡ ತಳಿಯಲ್ಲಿರುತ್ತವೆ.

Facebook Comments