https://www.facebook.com/samsthanam/posts/585658901529371

ಗುರುಗಳೆ,
ನಮಸ್ಕಾರಗಳು

ನಾನೊಬ್ಬ ನಿಮ್ಮ ಭಕ್ತ. ನಾನೇನು ಶ್ರೀಮಠಕ್ಕಾಗಿ ದುಡಿದು(ಸೇವೆ) ದಣಿದವನಲ್ಲ. ಆದರೆ ರಾಮಕಥಾ ಮುಂತಾದ ಕಾರ್ಯಕ್ರಮದಲ್ಲಿ ಪ್ರೇಕ್ಷಕನಾಗಿ ಕುಳಿತು, ಕೇಳಿ, ಮಿಡಿದು ತಣಿದವನು !! ಸೇವೆಯಲ್ಲಿ ಭಾಗವಹಿಸದಿದ್ದರೂ ಮಠದ ಆಗು – ಹೋಗುಗಳನ್ನು ಅನೇಕರ ಮುಖಾಂತರ ನಿರಂತರ ತಿಳಿದುಕೊಳ್ಳುತ್ತಿದ್ದೇನೆ.
ಸರಿಯೋ ತಪ್ಪೋ ಗೊತ್ತಿಲ್ಲ !

ಒಂದಿಷ್ಟು ನಿಮ್ಮೆದುರು ಉಲಿಯುವ ಇರಾದೆ ಇದೆ. ಈ ಭಕ್ತನ ಭಾವವೇಧನೆಯ ನಿವೇದನೆಯನ್ನು ಆಲಿಸುವರೆಂದು ನಂಬುತ್ತಾ. . . . . .
ಅದು ಹಲವು ವರ್ಷಗಳ ಹಿಂದಿನ ಸಮಯ. ಗೋಕರ್ಣವೆಂದಕೂಡಲೆ ಮಹಾಬಲನೊಬ್ಬನನ್ನು ಬಿಟ್ಟು ಉಳಿದೆಲ್ಲವೂ ಕಣ್ಮುಂದೆ ಬರುತ್ತಿದ್ದವು. ಅದಕ್ಕೆ ಕಾರಣ ಅಲ್ಲಿನ ಪರಿಸ್ಥಿತಿ. ಅದನ್ನು ಈಗ ನೆನಪಿಸಿಕೊಂಡರೂ ಒಂತರ ಹೇವರಿಕೆ – ವಾಕರಿಕೆ !
ಏಕೆಂದರೆ ಹಿಮದ ತಪ್ಪಲಿನಲ್ಲಿ ಪವಡಿಸುವ ಮಹಾಬಲನಿಗೆ ಕೊಚ್ಚೆಯ ಘಮ. ಬರುವ ಭಕ್ತರಿಗೆ ಮಾರ್ಗದರ್ಶಿಗಳಾಗಬೇಕಿದ್ದ ಹಲವು ಪಂಡಿತರು ಪುಂಡರಾಗಿ ಲೂಟಿಗಿಳಿದಿದ್ದರು ! ದೇವಸ್ಥಾನದ ಅಭಿವೃದ್ಧಿಗೆ ವಿನಿಯೋಗವಾಗಬೇಕಿದ್ದ ದೇವಸ್ಥಾನದ ಸಂಪತ್ತು ಕೆಲವು ‘ಪಂಡ’ಪೋಕರಿಗಳ ಬ್ಯಾಂಕ್ ನಲ್ಲಿರುವ ಮೊತ್ತದ ವೃದ್ಧಿಗೆ ಕಾರಣವಾಗುತ್ತಿತ್ತು.
ಇದು ಅಲ್ಲಿಯ ಆಗಿನ ‘ಸುವ್ಯವಸ್ಥೆ’ಯ ಮಬ್ಬುಗನ್ನಡಿಯಷ್ಟೇ !

ಇವೆಲ್ಲವನ್ನು ಗಮನಿಸಿದ ಸಜ್ಜನ ಉಪಾಧಿವಂತರು ಮೊದಲು ಮಠದ್ದೆ ಆಗಿದ್ದ ದೇವಸ್ಥಾನವನ್ನು ಮಠದ ಆಡಳಿತಕ್ಕೆ ವಹಿಸುವ ನಿರ್ಧಾರಕ್ಕೆ ಬಂದರು; ಮತ್ತು ತಮ್ಮ ಸನ್ನಿಧಿಗೆ ಅವರೇ ಬಂದರು ! ಎಷ್ಟೋ ಪ್ರಯತ್ನಗಳ ಅನಂತರ ಗೋಕರ್ಣದ ಅಭಿವೃದ್ಧಿಗಾಗಿ ಅಂತೂ ಒಪ್ಪಿದಿರಿ, ಅಲ್ಲಲ್ಲ ಒಪ್ಪಿಸಿದರು !

ಆಮೇಲಿನದ್ದು ಇತಿಹಾಸ !! ಸರ್ಕಾರ ದೇವಸ್ಥಾನವನ್ನು ನಿಮ್ಮ ಸುಪರ್ದಿಗೆ ವಹಿಸಿತು !

ಎಂದು ಗೋಕರ್ಣ ದೇವಸ್ಥಾನ ಮಠದ ಆಡಳಿತಕ್ಕೊಳಪಟ್ಟಿತೋ, ಅಂದಿನಿಂದ ತಮ್ಮ ತೀಟೆ ತೀರಿಸಿಕೊಳ್ಳಲು ದೇವಸ್ಥಾನದ ಹಣ ಬಳಸುತ್ತಿದ್ದ ಖದೀಮರು ಇನ್ನು ಮುಂದೆ ಹಿಂದಿನಂತೆ ನುಂಗಲಾಗದೆಂಬ ಒಂದೇ ಕಾರಣಕ್ಕೆ ಹೇಗಾದರೂ ಮಾಡಿ ನಿಮ್ಮನ್ನು ಮಟ್ಟ ಹಾಕಬೇಕೆಂದು ನಿಂತು ಬಿಟ್ಟರು. ನೀವು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಅಭಿವೃದ್ಧಿಯ ಕನಸಿಗೆ ಜೀವತುಂಬಲಾರಂಭಿಸಿದಿರಿ !

ನೀವು ಬಂದ ಮೇಲೆ. . .

* ದೇವಸ್ಥಾನದ ಆಡಳಿತದಲ್ಲಿ ಪಾರದರ್ಶಕತೆ ತಂದಿರಿ. . .
* ದೇವಸ್ಥಾನದಲ್ಲಿ ಸ್ವಚ್ಛತೆ – ಶಿಸ್ತುಗಳನ್ನು ಯೋಜಿಸಿದಿರಿ.
* ಭಕ್ತರಿಗಾಗಿ ಪ್ರತಿನಿತ್ಯ ಉಚಿತ ಅನ್ನ ಸಂತರ್ಪಣೆ ಏರ್ಪಡಿಸಿದಿರಿ.
* ಆಂಜನೇಯನ ಜನ್ಮಸ್ಥಳವಾದ್ದರಿಂದ ಬಾಲ ಮಾರುತಿಯ ಅತಿದೊಡ್ಡ ಏಕಶಿಲಾವಿಗ್ರಹದ ಸ್ಥಾಪನೆಗೆ ನಿಶ್ಚಯಿಸಿದಿರಿ.
* ಭಕ್ತರ ಅನ್ನಸಂತರ್ಪಣೆಗೆ ಸಭಾಭವನವನ್ನು ಕಟ್ಟಲು ಅಣಿವಾದಿರಿ.
* ಇನ್ನೆಷ್ಟೋ ಕಾರ್ಯಗಳನ್ನು ಹಮ್ಮಿಕೊಂಡಿರಿ.
ಆದರೆ ಆ ದುರುಳರು ಮಾಡಿದ್ದೇನು.. . . ?
* ದೊಡ್ಡ ದೊಡ್ಡ ಯೋಜನೆ ಹಾಕಿಕೊಂಡಾಗಲೆಲ್ಲ ಕೋರ್ಟ್ ನಿಂದ ತಡೆಯಾಜ್ಞೆ ತಂದರು. ಗೋಕರ್ಣ ಅಭಿವೃದ್ಧಿಯನ್ನು ಮತ್ತು ನಿಮ್ಮ ಸಮಾಜಮುಖೀ ಕಾರ್ಯಗಳಿಗೆ ಅಡ್ಡಗಾಲು ಹಾಕಲು ಒಂದು ತಂಡ ಕಟ್ಟಿದರು. ಅದಕ್ಕೆ ‘ ಗೋಕರ್ಣಹಿತರಕ್ಷಣಾವೇದಿಕೆ’ ಎಂದು ಹೆಸರಿಟ್ಟರು !
ಆದರೆ ನೀವು ಆ ಕಿರಿಕಿರಿಗಳನ್ನು ಸಹಿಸಿಕೊಂಡಿರಿ ಮತ್ತು ಶಾಂತವಾಗಿ ಎದುರಿಸಿದಿರಿ.
* ಮತ್ತೆ ಅಭಿವೃದ್ಧಿಯ ಸಹಿಸದ ಖದೀಮರು ನಿಮ್ಮ ಶಿಷ್ಯನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನಿಸಿದರು.
ಆ ಶಿಷ್ಯನನ್ನು ಸಂತೈಸಿ ಸುಮ್ಮನಾದಿರಿ ; ಸಿಡಿದು ನಿಲ್ಲಲು ಅಣಿಯಾಗಿದ್ದ ಇತರ ಶಿಷ್ಯರನ್ನು ಸುಮ್ಮನಾಗಿಸಿದಿರಿ !
ಕೊಲ್ಲಲು ಬಂದವರ ಮೇಲೂ ಕರುಣೆ !! ಆ ಕರುಣೆಯ ಭಿಕ್ಷೆಯನ್ನುಂಡ ಖದೀಮರು ಕರಗುವ ಬದಲು ಮತ್ತಷ್ಟು ಕೊಬ್ಬಿದರು !
ಅನಂತರ ನಡೆದದ್ದು ಸಿಡಿ ಪ್ರಕರಣ. . . .!

ನಿಮ್ಮನ್ನು ಹೋಲುವ ವ್ಯಕ್ತಿಯೊಬ್ಬನನ್ನಿಟ್ಟುಕೊಂಡು ನೀಚ – ಅಸಹ್ಯ ಚಿತ್ರವನ್ನು ಚಿತ್ರಿಸಿ, ಮಾಧ್ಯಮದ ಮೂಲಕ ಪಸರಿಸಿ, ಎಲ್ಲಕ್ಕೂ ಮಿಗಿಲಾದ ಚಾರಿತ್ರ್ಯಕ್ಕೇ ಮಸಿ ಬಳಿಯುವ ಪ್ರಯತ್ನ ನಡೆಯಿತು. ಆದರೆ ದೇವರು ದೊಡ್ಡವನು !! ವಿಷಯ ಮೊದಲೇ ತಿಳಿದು, ಪೋಲೀಸರು ಅವರನ್ನು ಜೈಲಿಗಟ್ಟಿದರು.

ಇನ್ನು ಐದಾರು ವರ್ಷ ಅವರೆಲ್ಲ ಕಂಬಿ ಎಣಿಸಬೇಕಾಗುತ್ತದೆಂದು ಭಾವಿಸುತ್ತಿರುವಾಗಲೇ, ಅವರನ್ನೂ ಕ್ಷಮಿಸಿಬಿಟ್ಟಿರಿ !!

ಹಿಂದೆ ಅನೇಕ ಪ್ರಕರಣದಲ್ಲಿ ಪಕ್ವ ವ್ಯಕ್ತಿತ್ತ್ವದ ಮೂಲಕ ಸಂನ್ಯಾಸಿಗೂ – ಸಂಸಾರಿಗೂ ಇರುವ ವ್ಯತ್ಯಾಸವನ್ನು ಮನದಟ್ಟು ಮಾಡಿಸಿದ್ದ ನೀವು ಈ ಬಾರಿ ಎಷ್ಟು ವ್ಯತ್ಯಾಸ ಎನ್ನುವುದನ್ನೂ ತಿಳಿಸಿಬಿಟ್ಟಿರಿ !

ಹೀಗೆ ಅದೆಷ್ಟು ಮಾನಸಿಕ ದಾಳಿ ನಮಗೆ ಗೊತ್ತಾಗದೇ ನಡೆದವೋ ಗೊತ್ತಿಲ್ಲ !!

ಮತ್ತೆ ಮೊನ್ನೆ ನಡೆದದ್ದು ಭಯಾನಕ ಬ್ಲಾಕ್ ಮೇಲ್ !!!

ಇನ್ನು ಸಾಕು ಗುರುಗಳೆ ! ನಾವು ಸಹಿಸಲಾರೆವು !!

ನೀವು ರಾಜಸಂನ್ಯಾಸಿಗಳು ! ಆ ಪುಂಡರು ಕೊಡುವ ಕೀಟಲೆಗಳನ್ನೆಲ್ಲವನ್ನೂ ಉಂಡೂ, ಏನೂ ಆಗದಂತೆ ಪುಂಡರೀಕಾಕ್ಷರಾಗಿ ಎಂದಿನಂತೆ ಶೊಭಿಸಿಬಿಡಬಲ್ಲಿರಿ ಅಥವಾ ” ಈ ಶಿಷ್ಯರಿಗಾಗಿ ಎಷ್ಟು ಮಾಡಿದರೂ ಅಷ್ಟೆ’ ಎಂದಂದುದುಕೊಂಡು ಈ ಜಂಜಡವನ್ನು ಕೊಡವಿ, ಜಂಗಮರಾಗಿ ನಶ್ವರದಿಂದ ಈಶ್ವರನತ್ತ ಮುಖಮಾಡಿಬಿಡಬಲ್ಲಿರಿ !

ಆದರೆ . . . .ನಾವು ಸಂಸಾರಿಗಳು ! ನಮ್ಮದು ಉಪ್ಪು – ಖಾರ ತಿಂದು ಬದುಕುವ ಬದುಕು ! ನಾವಿನ್ನೆಷ್ಟು ಬಾರಿ ನಮ್ಮ ಗುರುವಿನ ಮೇಲಾಗುತ್ತಿರುವ ಅಪಚಾರಕೃತ್ಯವನ್ನು ಸಹಿಸಿಕೊಳ್ಳುವುದು? ಕಳಂಕರಹಿತ ಜೀವನ ನಡೆಸಿದ ಶ್ರೇಷ್ಠಗುರುವನ್ನು ವಿಧಿ ಕೊಟ್ಟರೂ, ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ, ಗೌರವಿಸಲಿಲ್ಲವೆಂಬ ಕಳಂಕದ ಕಲೆ ನಮ್ಮ ತಲೆಮಾರಿಗೆ ಅಂಟಿಕೊಂಡರೆ, “ಏಕೆ ಹೀಗೆ ಮಾಡಿದಿರಿ?” ಎಂದು ಮುಂದಿನ ಪೀಳಿಗೆ ಪ್ರಶ್ನಿಸಿದರೆ ಉತ್ತರಕೊಡುವುದೆಂತು?
ಹಾಗಾಗಿ ಇನ್ನು ನಮ್ಮನ್ನು ದಯವಿಟ್ಟು ತಡೆಯಬೇಡಿ !

ಪ್ರಿಯ ಗುರುಗಳೆ,

ನಿಮ್ಮ ಅಂತರಂಗದಲ್ಲಿ ಮಡುಗಟ್ಟಿದ ಆನಂದವನ್ನು ಒಬ್ಬರೆ ಅನುಭವಿಸುವ ಬದಲು, ಎಲ್ಲರಿಗೂ ಸಿಗಬೇಕೆಂದು, ರಾಮಕಥಾ ಮುಂತಾದ ಕಾರ್ಯಕ್ರಮಗಳ ಮೂಲಕ ಆ ಆನಂದದಲ್ಲಿ ನಮಗೂ ಪಾಲುಕೊಡುವಿರಾದರೆ, ನಿಮಗೆದುರಾಗುವ ಆತಂಕದಲ್ಲಿ ನಮಗೆ ಪಾಲೇಕಿಲ್ಲ? ಈ ಪ್ರಶ್ನೆ ದೂರದಲ್ಲಿರುವ ನನಗೇ ಇಷ್ಟು ಕಾಡುವುದಾದರೆ, ನಿಮ್ಮೊಡನೆ ಒಡನಾಡುವ ಶಿಷ್ಯರ ಮನಸ್ಥಿತಿ ಹೇಗಿರಬಹುದು ? ಅಂದಹಾಗೆ ಇಷ್ಟೆಲ್ಲ ಆತಂಕವನ್ನು ನೀವು ಎದುರಿಸಿದ್ದು, ನಮ್ಮ ಉದ್ಧಾರದ ಹೊಣೆ ಹೊತ್ತುಕೊಂಡಿದ್ದರಿಂದಲೇ ಅಲ್ಲವೇ?

ಇನ್ನು ನಾನಂತೂ ಸುಮ್ಮನಿರಲಾರೆ !! ಜಗತ್ತಿನ ಏಕೈಕ ಅವಿಚ್ಛಿನ್ನಪರಂಪರೆಯ ಶಿಷ್ಯಕೋಟಿಯಲ್ಲೊಬ್ಬನಾಗಿ ಏನೂ ಮಾಡದಿರಲು ಹೇಗೆ ಸಾಧ್ಯ ಹೇಳಿ ಗುರುಗಳೆ?

ಗುರುಬಂಧು,

ನಾಡಿದ್ದು ಏಪ್ರಿಲ್ ಆರರಂದು ಗೋಕರ್ಣದಲ್ಲಿ ಬ್ಲಾಕ್ ಮೇಲ್ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದಾರೆಂದುಕೇಳಲ್ಪಟ್ಟೇ. ನಾನಂತೂ ಅದರಲ್ಲಿ ಭಾಗವಹಿಸುವವನಿದ್ದೇನೆ. ಶಿಷ್ಯನಾಗಿ ಅದರಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಶಿಷ್ಯನ ಕರ್ತವ್ಯ ಕೂಡ ! !! ಈ ಆಂದೋಲನ ನಮ್ಮ ಗುರುವಿನ ಆನಂದದಲ್ಲಿ ಪಾಲುಂಡ ನಮಗೆ ಅವರ ಆತಂಕಕ್ಕೂ ಪಾಲುದಾರರಾಗಲು ಅಥವಾ ಗುರುವಿಗೆ ಎದುರಾಗುವ ಕಷ್ಟಗಳಿಗೆ ಎದೆಯೊಡ್ಡಲು ಸದವಕಾಶವೆಂದಂದುಕೊಂಡಿದ್ದೇನೆ ! ನೀವೂ ಭಾಗವಹಿಸುತ್ತೀರೆಂದು ನಂಬಿದ್ದೇನೆ !!

ಜಾಗವಿಲ್ಲ ಹದ್ದಿಗೆ. . . . .
ಇದು ಮಹಾಬಲನ ಗದ್ದುಗೆ. . . .ಎಂಬ ಕೂಗು ಗೋಕರ್ಣದ ತುಂಬೆಲ್ಲ ಮಾರ್ದನಿಸಲಿ !!!

-ಕೃಷ್ಣಮೂರ್ತಿ ಹೆಗಡೆ
Facebook Comments