ಮುಜಂಗಾವು,
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ನಿರ್ದೇಶನದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲದ ಮಾಸಿಕ ಸಭೆಯು ಶ್ರೀ ಭಾರತಿ ವಿದ್ಯಾ ಪೀಠ ಮುಜಂಗಾವಿನಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ ಶ್ರೀ ಬಿ.ಜಿ. ರಾಂ ಭಟ್ ವಹಿಸಿದರು.
ಮೊದಲಿಗೆ ಶಂಖಧ್ವನಿಯೊಂದಿಗೆ ಧ್ವಜಾರೋಹಣವಾಯಿತು. ಗುರುವಂದನೆಯ ಬಳಿಕ ಮಂಡಲ ಕಾರ್ಯದರ್ಶಿ ಸತ್ಯನಾರಾಯಣ ಭಟ್ಬ ಮೊಗ್ರ ಗತ ಸಭೆಯ ವರದಿ ನೀಡಿ ಸಭಾ ಸಂಯೋಜನೆ ಮಾಡಿದರು.

ಶಿಷ್ಯ ವರ್ಗದವರಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಸೂಕ್ತ ಮಾರ್ಗದರ್ಶನಗಳ್ನಿತ್ತು ಸಮಾಜದ ಸರ್ವಾಂಗೀಣ ಪ್ರಗತಿಯಲ್ಲಿ ಕಾರ್ಯವೆಸಗುತ್ತಿರುವ ವೇದಮೂರ್ತಿ ಶ್ರೀ ಪಳ್ಳತ್ತಡ್ಕಪರಮೇಶ್ವರ ಭಟ್ಟ ಅವರನ್ನು ಶಾಲು ಹೊದೆಸಿ ಸನ್ಮಾನ ಪತ್ರವನ್ನಿತ್ತು ಫಲನೀಡಿ ಗೌರವಿಸಲಾಯಿತು . ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಕೆ ಯನ್ ಕೃಷ್ಣ ಭಟ್ , ಬ್ಲಾಕ್ ಪಂಚಾಯತ್ ಸದಸ್ಯರಾಗಿ ಚುನಾಯಿತರಾಗಿರುವ ಹಿಳ್ಳೆಮನೆ ಸತ್ಯಶಂಕರ ಭಟ್ , ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಸಾಧನಾ ಪುರಸ್ಕಾರಕ್ಕೆ ಭಾಜನರಾಗಿರುವ ಕು |ಮಾನಸಾ ಮುಂಚಿಕ್ಕಾನ ಇವರನ್ನು ಶಾಲು ಹೊದೆಸಿ ಫಲ ನೀಡಿ ಸನ್ಮಾನಿಸಲಾಯಿತು. ಶ್ರೀ ಬಿ. ಜಿ. ರಾಮ ಭಟ್, ಕಕ್ಕಳ ಗೋಪಾಲಕೃಷ್ಣ ಭಟ್ , ಶಿವಪ್ರಸಾದ ವರ್ಮುಡಿ, ಶಂಕರ ಪ್ರಸಾದ್ ಕುಂಚಿನಡ್ಕ ಇವರು ಸನ್ಮಾನಿತರ ಪರಿಚಯ ಭಾಷಣ ಮಾಡಿದರು. ಸನ್ಮಾನಿತರಾದ ಶ್ರೀ ಕೆ. ಯನ್. ಕೃಷ್ಣ ಭಟ್ ಅವರು ಮಾತನಾಡುತ್ತಾ ಮಂಡಲವು ಎಸಗುತ್ತಿರುವ ಸಮಾಜಮುಖೀ ಕಾರ್ಯಗಳಿಗೆ ಪೂರ್ಣವಿಧದ ಸಹಕಾರಗಳ ಭರವಸೆಯನ್ನಿತ್ತರು.
ವಿಶೇಷ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ಮಂಡಲ ಅಧ್ಯಕ್ಷರಾದ ಶ್ರೀ ಕೆ.ಪಿ. ಭಟ್ ಮತ್ತು ಭಾರತಿ ಕಾಲೇಜು ನಂತೂರಿನ ಕಾರ್ಯದರ್ಶಿ ಡಾ| ಜತ್ತಿ ಈಶ್ವರ ಭಟ್ ಅವರು ಕಾಲೇಜಿನ ವಿವಿಧ ಕಾರ್ಯ ಯೋಜನೆ , ಶೈಕ್ಷಣಿಕ ವ್ಯವಸ್ಥೆಗಳ ಕುರಿತು ಸರ್ವ ಮಾಹಿತಿಗಳನ್ನಿತ್ತರು. ವಿಭಾಗ ಪ್ರಮುಖರು , ವಲಯ ಪದಾಧಿಕಾರಿಗಳು ವರದಿಗಳನ್ನಿತ್ತರು. ಶ್ರೀ ಗುರುಗಳ ಮಾರ್ಗದರ್ಶನದಲ್ಲಿ ಸರ್ವಕಾರ್ಯಗಳು ಕಾರ್ಯಪ್ರವೃತ್ತವಾದಾಗ ಅವು ಸಮಾಜಕ್ಕೆ ಹಿತವನ್ನುಂಟುಮಾಡುತ್ತವೆ ಎಂಬುದಾಗಿ ವೇದಮೂರ್ತಿ ಶ್ರೀ ಪಳ್ಳತ್ತಡ್ಕಪರಮೇಶ್ವರ ಭಟ್ಟ ಅವರು ಹಿತವಚನಗಳನ್ನಿತ್ತರು. ಬಳಿಕ ಕು| ಮನಸಾ ಇವಳಿಂದ ಶಾಸ್ತ್ರೀಯ ಸಂಗೀತ ಗಾಯನ ನಡೆಯಿತು.
ರಾಮತಾರಕ ಮಂತ್ರ , ಶಾಂತಿಮಂತ್ರ, ಧ್ವಜಾವರೋಹಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.

(ಸಚಿತ್ರ ವರದಿ: ಗೋವಿಂದ ಬಳ್ಳಮೂಲೆ. ಪ್ರಸಾರ ಪ್ರಧಾನರು – ಮುಳ್ಳೇರ್ಯ ಮಂಡಲ)

Facebook Comments