ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ರಾಜನಂದಿಯಾಗಿ ತನ್ನ ಗಾಂಭೀರ್ಯದಿಂದ  ಎಲ್ಲರ ಗಮನ ಸೆಳೆದು ಪ್ರೀತಿ ಗಳಿಸಿದ್ದ ‘ರಾಜನಂದಿ’ ಇಂದು ಬೆಳಿಗ್ಗೆ ಇಹಲೋಕ ತೊರೆದು ಶಿವನ ಪಾದ ಸೇರಿತು. ತುಂಬಾ ಸಾಧುವಾಗಿದ್ದ ಈ ನಂದಿ, ದಿನವೂ ಶ್ರೀ ಮಹಾಬಲೇಶ್ವರ ದೇವರ ಉತ್ಸವದ ಜೊತೆ ಪ್ರದಕ್ಷಿಣೆ ಬರುತ್ತಿತ್ತು . ತನ್ನ ಸಾಧು ನಡವಳಿಕೆಯಿಂದ, ಸದಾ ಜೀವ  ಚೈತನ್ಯದಿಂದ ತುಂಬಿ ತುಳುಕುತ್ತಿದ್ದ ‘ ರಾಜನಂದಿ’ಯು  ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ  ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ   ಅಚ್ಚು-ಮೆಚ್ಚಿನದಾಗಿತ್ತು . ಶ್ರೀಗಳವರು ದೇವಾಲಯಕ್ಕೆ ಆಗಮಿಸಿದಾಗಲೆಲ್ಲ ಗೋಶಾಲೆಗೆ ತೆರಳಿ ನಂದಿಯನ್ನು ಆತ್ಮೀಯವಾಗಿ ಮಾತನಾಡಿಸಿ , ಸಿಹಿ ತಿನ್ನಿಸುತ್ತಿದ್ದರು.
ರಾಜನಂದಿಯ ಕುರಿತಾಗಿ ಪಶುವೈದ್ಯರೂ, ಹವ್ಯಕ ಮಹಾಮಂಡಲದ ಅಧ್ಯಕ್ಷರೂ ಆದ ಡಾ. ವೈ. ವಿ. ಕೃಷ್ಣಮೂರ್ತಿಯವರ ನೆನಪು ಬರಹ:

ಮಹಾಬಲನೊಂದಿಗೆ ಐಕ್ಯನಾದ ಮಹಾ – ರಾಜಾ

ಲೇಖನ: ಡಾ. ವೈ.ವಿ.ಕೃಷ್ಣಮೂರ್ತಿ,
ಅಧ್ಯಕ್ಷರು – ಹವ್ಯಕ ಮಹಾಮಂಡಲ

ಅಂದು ಬೆಳಿಗ್ಗೆ ಗೋಕರ್ಣಕ್ಕೆ ಹೋಗುವುದಕ್ಕಾಗಿ ಉಡುಪಿಯಲ್ಲಿದ್ದೆ. ಗೋಕರ್ಣಕ್ಕೆ ಹೋಗುತ್ತಿದ್ದುದು ಶಿವರಾತ್ರಿಯ ಸಮಯವಾಗಿದ್ದರೂ ಮೂಲದಲ್ಲಿ ರಾಜಾ ನಂದಿಯನ್ನು ನೋಡುವುದಕ್ಕಾಗಿ ಆಗಿತ್ತು. ಅಷ್ಟೊತ್ತ್ತಿಗಾಗಲೇ ಗೋಕರ್ಣದಿಂದ ದೂರವಾಣಿ ಬಂತು. ರಾಜಾ ನಂದಿಯು ಇಂದು ಪ್ರಾತಃ ಕಾಲ ಶಿವನ ಪಾದ ಸೇರಿದ ಎಂದರು. ಈ ಮಾತು ಕಳೆದ ಕೆಲವು ದಿನಗಳಿಂದ ನಿರೀಕ್ಷಿತವಾಗಿದ್ದರೂ, ಮನಸ್ಸಿಗೆ ಮಂಕು ಕವಿಸಿತ್ತು. ಉಡುಪಿಯಿಂದ ಗೋಕರ್ಣದ ವರೆಗೂ ರಾಜಾನ ಗತಜೀವನವು ಮತ್ತೆ ಮತ್ತೆ ಮನಃಪಲ್ಲಟದಲ್ಲಿ ಹಾದು ಹೋಗುತ್ತಿತ್ತು.

ಅದು ೨೦೦೭ರ ಘಟನೆ. ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ಗೋಯಾತ್ರೆಯ ಅಂಗವಾಗಿ ಗೋಭಕ್ತರ ಬೃಹತ್ ಸಮಾವೇಶ. ಅದೇ ಸಂದರ್ಭದಲ್ಲಿ ಆಂಧ್ರದಿಂದ ಭಟ್ಕಳಕ್ಕೆ ಕಸಾಯಿಗಾಗಿ ಸಾಗಿಸುತ್ತಿದ್ದ ೧೩ ಓಂಗೋಲ್ ತಳಿಯ ಹೋರಿಗಳನ್ನು ತಡೆದ ಗೋಭಕ್ತರ ತಂಡ ಅವುಗಳಲ್ಲೆವನ್ನು ಹೊಸಾಡಕ್ಕೆ ತಂದಿಳಿಸಿದ್ದರು. ಇದರ ಕಾನೂನು ಹೋರಾಟ ನಡೆದಿತ್ತು. ಬೆಳವಣಿಗೆಗೆಳ ಬಗ್ಗೆ ಹೊಸಾಡ ಗೋಶಾಲೆಯಿಂದ ನಿರಂತರ ದೂರವಾಣಿಗಳು ಬರುತ್ತಲಿದ್ದವು. ಶ್ರೀಶ್ರೀಗಳವರು ಸಮಾವೇಶದಲ್ಲಿ ಸನ್ನಿಧ್ಯವಹಿಸಲು ಹೊರಡುತ್ತಿರುವಾಗ ಶ್ರೀಮಠದ ಪ್ರಮುಖರೊಬ್ಬರ ದೂರವಾಣಿ ಬಂತು. ಹೊಸಾಡದಲ್ಲಿ ಇರುವ ಅಷ್ಟೂ ಹೋರಿಗಳನ್ನು ಅವರಿಗೆ ಬಿಟ್ಟುಬಿಡಬೇಕೆಂದು ನ್ಯಾಯಾಲಯದ ತೀರ್ಪು ಬಂದಿದೆ. ಸ್ಥಾನೀಯ ಪೋಲಿಸ್ ಅಧಿಕಾರಿಗಳು ಈ ಹಸ್ತಾಂತರಕ್ಕಾಗಿ ಗೋಶಾಲೆಗೆ ಬರುತ್ತಿದ್ದಾರೆ. ಈ ಪೋಲಿಸ್ ಅಧಿಕಾರಿಯವರು ವೈಯುಕ್ತಿಕವಾಗಿ ಶ್ರೀಶ್ರೀಗಳವರಗೆ ಮಾಹಿತಿ ತಿಳಿಸಲು ಹೇಳಿದ್ದಾರೆ ಎಂದು. ಈ ಬಗ್ಗೆ ಶ್ರೀಶ್ರೀಗಳವರಲ್ಲಿ ವಿಷಯ ಹೇಳಿದಾಗ ಸಭೆ ಮುಗಿದ ಮೇಲೆ ತೀರ್ಮಾನ ಹೇಳುತ್ತೇವೆ ಎಂದರು. ಆದರೆ ಆ ತೀರ್ಮಾನ ಸಭೆಯ ಕೊನೆಯವರೆಗೆ ಕಾಯದೆ ನೆರೆದ ೧೦ ಸಾವಿರಕ್ಕೂ ಮಿಕ್ಕಿ ಗೋಭಕ್ತರ ಎದುರು ಘೋಷಣೆಯಾಗಿತ್ತು. ನಿಮ್ಮೂರಿನಿಂದ ನಮ್ಮೂರಿಗೆ ಕಸಾಯಿಗಾಗಿ ಓಂಗೋಲ್ ಹೋರಿಗಳನ್ನು ತಂದಿದ್ದಾರೆ. ಅದೃಷ್ಟವಶಾತ್ ನಮ್ಮ ಸುಪರ್ದಿಯಲ್ಲಿ ಈಗ ಇದೆ. ಎಷ್ಟೇ ಬೆಲೆ ತೆತ್ತಾದರೂ ಅವುಗಳೆಲ್ಲವೂ ಅವುಗಳ ಜೀವನ ಕೊನೆಯ ಉಸಿರಿನ ವರೆಗೆ ನಮ್ಮಲ್ಲಿಯೇ ಇರುತ್ತವೆ. ಈ ಹೋರಾಟಕ್ಕೆ ನಾವೆಲ್ಲ ಸಜ್ಜಾಗೋಣ ಎಂದು ಶ್ರೀಶ್ರೀಗಳವರು ಕರೆ ನೀಡಿದ್ದರು. ಊಹೆಗೆ ನಿಲುಕದ ಘಟನಾವಳಿಗಳ ಕೊಂಡಿ ಅದು. ಹೈದರಾಬಾದ್‌ನಿಂದ ಕಸಾಯಿಗೆ ಹೊರಟ ಹೋರಿಗಳು ಶ್ರೀಶ್ರೀಗಳವರ ಗೋಶಾಲೆಯಲ್ಲಿ. ರಾಷ್ಟ್ರ ಮಟ್ಟದಲ್ಲಿ ಗೋಸಂರಕ್ಷಣೆಯ ಕಹಳೆಯೂದಲು ಹೊರಟ ಶ್ರೀಶ್ರೀಗಳವರು ಹೈದರಾಬಾದ್‌ನಲ್ಲಿ. ಅಲ್ಲಿದ್ದುಕೊಂಡೇ ಇಲ್ಲಿನ ಗೋಭಕ್ತರಿಗೆ ಸ್ಪಷ್ಟ ಸಂದೇಶ ಅದೂ ಹತ್ತು ಸಾವಿರ ಗೋಭಕ್ತರ ಎದುರು. ಭಾಗವಹಿಸಿದವರೆಲ್ಲ ರೋಮಾಂಚನಗೊಂಡ ಕ್ಷಣಗಳವು.

ಆದರೆ ಇತ್ತ ಹೊಸಾಡದಲ್ಲಿ ಮೈನವಿರೇಳಿಸುವ ಘಟನೆಗಳಿಗೆ ಗೋಭಕ್ತರು ಸಾಕ್ಷಿಯಾಗಿದ್ದರು. ಕಳೆದ ೬ ತಿಂಗಳಿನ ಹಿಂದಿನಿಂದ ಈ ಹೋರಾಟ ಸುರುವಾಗಿದ್ದು ಹೈದರಾಬಾದ್‌ನಿಂದ ಭಟ್ಕಳಕ್ಕೆ ಕಸಾಯಿಗಾಗಿ ಸಾಗಿಸುತ್ತಿದ್ದ ೧೩ ಹೋರಿಗಳನ್ನು ತಡೆಹಿಡಿದಾಗ. ಮೆರವಣಿಗೆಯಲ್ಲಿ ಈ ಹೋರಿಗಳು ಹೊಸಾಡ ಗೋಶಾಲೆಗೆ ಬಂದಿಳಿದಾಗ ಅವುಗಳನ್ನು ನೋಡುವುದೇ ಹಬ್ಬ. ಆದರೆ ಕಾನೂನು ಹೋರಾಟದಲ್ಲಿ ಕಸಾಯಿಯವರಿಗೆ ಗೆಲುವು ಸಿಕ್ಕಿ ಹೋರಿಗಳನ್ನು ಬಿಡುವುದು ಅನಿವಾರ್ಯ ಎಂಬ ಸ್ಥಿತಿ. ಆಗಲೇ ಜಾಗೃತವಾದ ಗೋಪ್ರೇಮ. ಕುಮಟಾದ ಗೋಭಕ್ತರೆಲ್ಲ ಒಟ್ಟು ಸೇರಿ ಭಜನೆ ಮಾಡುತ್ತಾ, ಗೋಶಾಲೆಯಲ್ಲಿ ಜಮಾಯಿಸಿದರು. ಅಂದು ಸಾಧ್ಯವಾಗಲಿಲ್ಲ ಎಂದು ಕಸಾಯಿಯವರು ಪೋಲಿಸ್‌ನವರ ಬೆಂಬಲದೊಂದಿಗೆ ಇನ್ನೊಂದು ದಿನ ಬರಲು ಹೊರಟಾಗ ರಸ್ತೆಯನ್ನೇ ಅಗೆದು ಹಾಕಿ ತಡೆಯಲಾಯಿತು. ಕಾನೂನು ಹೋರಾಟವೂ ಮುಂದುವರಿಯಿತು. ವರ್ಷಗಳ ಕಾಲ ನಡೆದ ಹೋರಾಟದಲ್ಲಿ ಕೊನೆಗೆ ಗೋಭಕ್ತರಿಗೇ ಜಯವಾಯಿತು.

ಈ ಹೋರಿಗಳನ್ನು ನೋಡಿದಾಗ ಮೈಜುಮ್ಮೆನುತ್ತಿದ್ದರ ಜೊತೆಗೇ ಕರುಳೂ ಚುರುಕ್ಕೆನ್ನುತ್ತಿತ್ತು. ಒಂದಕ್ಕಿಂತ ಒಂದು ಬೃಹದಾಕಾರ, ಕೈತೊಳೆದು ಮೈಮುಟ್ಟಬೇಕೆನ್ನುವಂತಿದ್ದ ಶುಭ್ರ ಶ್ವೇತ ವರ್ಣ, ಹತ್ತಿರ ಹೋಗಲು ನಮಗೆ ಹೆದರಿಕೆಯಾದರೂ ಸಾಧು ಸ್ವಭಾವ, ಏರು ಯೌವನದ ಪ್ರಾಯ. ಅಯ್ಯೋ ಇಂಥಹ ಹೋರಿಗಳನ್ನೂ ಕಸಾಯಿ ಮಾಡುತ್ತಾರಲ್ಲಾ. ಎಂಥಹ ಕಟುಕರಿವರು ಎಂದು ಯಾರಿಗಾದರೂ ಕಾಣದಿರದು. ಗೋಶಾಲೆಯೂ, ಗೋಸಂರಕ್ಷಣಾ ಹೋರಾಟವೂ ಸಾರ್ಥಕ್ಯವನ್ನು ಕಂಡುಕೊಂಡ ದಿನಗಳವು.

೨೦೦೯ರಲ್ಲಿ ಈ ಹೋರಿಗಳಲ್ಲಿ ಒಂದು ಗೋಕರ್ಣದ ಮಹಾಬಲೇಶ್ವರನ ಸೇವೆಗಾಗಿ ನಿಯುಕ್ತಿಗೊಂಡಿತ್ತು. ಅವನೇ ರಾಜಾ ನಂದಿ. ಶಿವ ಪುರಾಣಗಳಲ್ಲಿ ವಿವರಿಸಿದ ನಂದಿಯ ಎಲ್ಲ ಲಕ್ಷಣಗಳನ್ನೂ ಹೊಂದಿದ್ದ ರಾಜಾ ನಂದಿ ಗೋಕರ್ಣದಲ್ಲಿ ಮಹಾಬಲೇಶ್ವರನಷ್ಟೇ ಪ್ರಸಿದ್ಧಿಯನ್ನೂ ಜನಮನ್ನಣೆಯನ್ನೂ ಗಳಿಸಿಕೊಂಡಿದ್ದ. ದೇವಸ್ಥಾನದ ಒಳಗೇ ಇದ್ದುಕೊಂಡು ನಿತ್ಯ ದೇವರ ಬಲಿಯ ಸಂದರ್ಭದಲ್ಲಿ ತಾನೂ ಪಾಲ್ಗೊಳ್ಳುತ್ತಿದ್ದ. ಬೃಹದಾಕಾರವನ್ನು ಹೊಂದಿ ಮೊದಲ ನೋಟಕ್ಕೆ ನಮಗೆ ಹೆದರಿಕೆ ಹುಟ್ಟಿಸುತ್ತಿದ್ದರೂ ಅತ್ಯಂತ ಸಾಧು ಸ್ವಭಾವದವನಾಗಿದ್ದ. ದೇವಸ್ಥಾನದೊಳಗೆ ಸ್ವಚ್ಚಂದವಾಗಿ ಅಡ್ಡಾಡುತ್ತಿದ್ದು, ಒಂದೇ ಒಂದು ಬಾರಿಯೂ ಯಾರನ್ನೂ ಹೆದರಿಸಿದವನಲ್ಲ.

ಕಳೆದ ಕೆಲವು ದಿನಗಳಿಂದ ಆರೋಗ್ಯದ ಸಮಸ್ಯೆಗಳು ಕಾಡುತ್ತಲಿತ್ತು. ಮೊನ್ನೆ ಚಿಕಿತ್ಸೆಗೆಂದು ಹೋಗಿದ್ದಾಗ ಧ್ಯಾನಕ್ಕೆ ಹೋದ ಯೋಗಿಯಂತಿದ್ದ. ಈ ಗಾತ್ರದ ಹೋರಿಗಳಿಗೆ ಚಿಕಿತ್ಸೆ ನೀಡಲು ಹತ್ತಾರು ಜನ ಸೇರಿ ಬಿಗಿಯಾಗಿ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಚಿಕಿತ್ಸೆಯ ನಿಟ್ಟಿನಲ್ಲಿ ಚುಚ್ಚುಮದ್ದು ನೀಡುವಾಗ, ದೇಹದ ಕೆಳಭಾಗದಲ್ಲಿ ನೀರು ತುಂಬಿ ಮೂತ್ರ ಮಾಡಲು ತೊಂದರೆಯಗುತ್ತದೆ ಎಂದು ಅಗತ್ಯವಿರುವ ಚಿಕಿತ್ಸೆಗಳನ್ನು ಮಾಡುವಾಗ ಒಂದಷ್ಟೂ ಅಲ್ಲಾಡದೆ ಸಹಕರಿಸಿದ್ದ. ಈ ದೇಹವನ್ನು ಆಗಲೇ ಬಿಟ್ಟು ಶಿವನೆಡೆಗೆ ಯಾತ್ರೆ ಹೊಟು ಆಗಿದೆ, ಇನ್ನು ನೀನು ಯಾಕೆ ಈ ಎಲ್ಲಾ ಕಸರತ್ತುಗಳನ್ನು ಮಾಡುವೆ ಎಂದು ಪ್ರಶ್ನೆ ಮಾಡುವ ಮುಖಭಾವವನ್ನು ತೋರಿಸಿದ್ದ. ಮನುಷ್ಯ ಪ್ರಯತ್ನ ಮಾಡುವುದು ನಮಗೆ ಬಿಟ್ಟಿದ್ದು ಉಳಿದದ್ದೆಲ್ಲ ಆ ಶಿವನಿಗೆ ಎಂದು ಚಿಕಿತ್ಸೆ ನೀಡಿ ಹೊರಡುತ್ತಿರುವಾಗ ಜೊತೆಗಿದ್ದವರು ರಾಜಾ ನಂದಿ ಕಣ್ಣಲ್ಲಿ ನೀರು ಇಳಿಯುತ್ತಿದೆ, ಅಳುತ್ತಿದ್ದಾನೆಯೇ ಎಂದು ಕೇಳಿದರು. ನನ್ನ ಕಣ್ಣಂಚಿನಿಂದ ಒಂದು ಹನಿ ನೀರು ಇಳಿದದ್ದು ಸುಳ್ಳಲ್ಲ. ದೇಹದ ಮೇಲ್ಭಾಗ ಸೊರಗಿದ್ದರೂ ಕೆಳಭಾಗ ನೀರು ತುಂಬಿ ಬಾತುಕೊಂಡಿತ್ತು.

ಭಕ್ತ ಮಾರ್ಕಂಡೇಯನಂತೆ, ಆ ಪರಶಿವನನ್ನು ಅಪ್ಪಿಕೊಂಡವರಿಂದ ಯಮನೂ ದೂರವಿರುತ್ತಾನೆ ಎಂಬಂತೆ, ಕಸಾಯಿಗಳ ಕೈಗೆ ಸಿಲುಕಿ ನೂರಾರು ಮೈಲು ದೂರ ಪ್ರಯಾಣಿಸಿ ಕೊನೆಗೆ ಶಿವನ ಸೇವೆಯ ಭಾಗ್ಯವಿದ್ದುದರಿಂದ ಕಸಾಯಿಗಳಿಂದ ತಪ್ಪಿಸಿ ಬಂದನಲ್ಲ ಈ ರಾಜಾ ನಂದಿ, ಏನೆನ್ನೋಣ, ಆ ಶಿವನ ಮಹಿಮೆಗೆ. ಶಿವನ ಕೃಪೆಯಿಂದ ತಾನು ಪಾರಾಗುವುದರ ಜೊತೆಗೆ ತನ್ನೊಂದಿಗಿದ್ದವರನ್ನೂ ಪಾರು ಮಾಡಿದ ಮಹಾಮಹಿಮನೀತ.

ಹೊಸನಗರದ ಗೋಲೋಕದಲ್ಲಿದ್ದ ಮಹಾನಂದಿ ದೇಹಾಂತ್ಯ ಮಾಡಿದ್ದಾಗ ಶ್ರೀಶ್ರೀಗಳವರು ನುಡಿದ ಮುತ್ತುಗಳು ‘ಹೊರಗಣ್ಣಿಗೆ ಮರೆಯಾದ ಆ ದಿವ್ಯ ಚೇತನಕ್ಕಾಗಿ ಕಣ್ಣೀರು ಸುರಿಸೋಣವೇ, ಅಥವಾ ಒಳಗಣ್ಣು ತೆರೆದು ನಿತ್ಯ ಗೋಳಿಡುವವರ ಕಣ್ಣೀರು ಒರೆಸೋಣವೇ’ ಎಂದದ್ದು ಇಂದು ನೆನಪಾಗುತ್ತಿದೆ. ಈ ಮಾತುಗಳು ಮಹಾನಂದಿಗಿಂತ ಹೆಚ್ಚಾಗಿ ರಾಜಾನಂದಿಗೇ ಅನ್ವಯಿಸುತ್ತದೆ. ಯಾಕೆಂದರೆ ಕಸಾಯಿಗಳ ಕರಾಳ ಹಸ್ತವನ್ನೂ , ಶಿವಸಾನ್ನಿಧ್ಯದ ಸವಿಯನ್ನೂ ಉಂಡವನು ರಾಜಾನಂದಿ. ಹಾಗಾಗಿಯೇ ರಾಜಾನಂದಿಯು ಗೋಸಂರಕ್ಷಣೆಯ ನಿಟ್ಟಿನಲ್ಲಿ ಪ್ರೇರಣಾಶಕ್ತಿ.

ಗೋಕರ್ಣ ದೇವಸ್ಥಾನದ ಎಲ್ಲ ಸಿಬ್ಬಂದಿಗಳಲ್ಲಿ ಕೇಳಿ ನೋಡಿ, ರಾಜಾನಿಗೆ ಅತ್ಯಂತ ಪ್ರಿಯ ಯಾರು ಎಂದರೆ ತಾನೇ ಎನ್ನುತ್ತಾರೆ. ಅಷ್ಟು ಅವರೆಲ್ಲರೊಂದಿಗೆ ಒಡನಾಡಿಯಾಗಿದ್ದ ರಾಜಾ ನಂದಿ ಮತ್ತೆ ಜನ್ಮ ತಾಳಿ ಗೋಕರ್ಣದಲ್ಲಿ ಸೇವೆಗೆ ಬರಲಿ ಎಂಬುದೇ ಎಲ್ಲರ ಆಶಯ.

ಡಾ.ವೈ.ವಿ.ಕೃಷ್ಣಮೂರ್ತಿ

Facebook Comments