ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 25:

ಕೌಟಿಲ್ಯನ ಅರ್ಥಶಾಸ್ತ್ರ

               ವಿದ್ವಾನ್ ಗಂಗಾಧರ ವಿ. ಭಟ್ಟ, ಅಗ್ಗೆರೆ

ಭಾರತೀಯರ ಚಿಂತನೆಯ ಕೇಂದ್ರ ಪುರುಷಾರ್ಥ. ಈ ಚಿಂತಕರ ಆಧಾರ ಭೂಮಿ ಧರ್ಮವಾದರೆ ಗುರಿ ‘ಮೋಕ್ಷ’. ‘ಧರ್ಮ ಮೋಕ್ಷಗಳ’ ಎಲ್ಲೆಯಲ್ಲಿ ಮಾತ್ರ ‘ಅರ್ಥಕಾಮ’ಗಳ ಪ್ರವಹನ. ಇದು ಭಾರತೀಯ ಚಿಂತನೆಯ ಸ್ವರೂಪ. ಇವುಗಳಲ್ಲಿ ‘ಅರ್ಥಕ್ಕೆ ತನ್ನದೇ ಆದ ಹೆಗ್ಗಳಿಕೆ ಇದೆ. ಸರಸ ಬದುಕಿಗೆ ‘ಅರ್ಥ’ ಅನಿವಾರ್ಯ. ಅಂಥ ಬದುಕಿಗೆ ಸಾಧನವಾದ ‘ಅರ್ಥತತ್ತ್ವ’ ವಿವೇಚನೆ ‘ಅರ್ಥಶಾಸ್ತ್ರ’ದ ವಿಷಯ.’ಅರ್ಥ’ವೆಂದರೇನರ್ಥ? ಪ್ರಯೋಜನ ಸಾಧನವೇ ಅರ್ಥ” (ಯತಃಸರ್ವ ಪ್ರಯೋಜನ ಸಿದ್ಧಿಃ ಸೋsರ್ಥಃ)” ಪ್ರಯೋಜನ ಸಾಧನವಾಗದಿದ್ದರೆ ಯಾವುದೂ ಅರ್ಥವಲ್ಲ. ಪ್ರಯೋಜನ ಸಾಧನವಾದರೆ ಎಲ್ಲವೂ ಅರ್ಥವೇ. ಒಟ್ಟಿನಲ್ಲಿ ಅರ್ಥವು ಪ್ರಯೋಜನವನ್ನು ಅವಲಂಬಿಸಿ ನಿರ್ಣೀತವಾಗುತ್ತದೆ. ಕೌಟಿಲ್ಯನ ಅರ್ಥದರ್ಶನ-ಕೌಟಿಲ್ಯನು ಮನುಷ್ಯರ ವೃತ್ತಿಯನ್ನೇ ‘ಅರ್ಥ’ ಎಂದು ವಿವೇಚಿಸಿದ್ದಾನೆ. “ಮನುಷ್ಯಾಣಾಂ ವೃತ್ತಿರರ್ಥಃ ಮನುಷ್ಯವತೀ ಭೂಮಿರಿತ್ಯರ್ಥಃ”ಎಂದು ಅರ್ಥವನ್ನು ಲಕ್ಷಿಸಿದ್ದಾನೆ. ಈ ದೃಷ್ಟಿಕೋನದಲ್ಲಿ ಪ್ರಯೋಜನ ಸಾಧನವಾದ ಅರ್ಥ ಶ್ರಮ ಸಾಧ್ಯ ಎಂಬ ಅಂಶವಿದೆ.

ಅಂದರೆ ‘ಅರ್ಥ’ಎಂದಾಗ ಬೇಕಾದರೆ ಅದು ಇಷ್ಟವಾಗಬೇಕು. ಇಷ್ಟವಾಗಬೇಕಾದರೆ ಸಂತುಷ್ಟಿಗೆ ಸಾಧನವಾಗಬೇಕು. ಇಡೀ’ಅರ್ಥಶಾಸ್ತ್ರದ ವಿಷಯವ್ಯಾಪ್ತಿ. ಬೇಡಿಕೆ, ಸಾಧನ, ತೃಪ್ತಿ ಈ ಮೂರು ಅಂಶಗಳನ್ನು ‘ಅರ್ಥಶಾಸ್ತ್ರ’ದಲ್ಲಿ ವಿವೇಚಿಸಬೇಕಾಗುತ್ತದೆ. ಆಧುನಿಕ ಅರ್ಥಶಾಸ್ತ್ರವೂ ಬೇಡಿಕೆ, ಸಾಧನ ಎಂಬ ಮೂರು ಆವರ್ತಕಾಂಶಗಳನ್ನು ಒಳಗೊಂಡಿದೆ. ಈ ದೃಷ್ಟಿಯಲ್ಲಿ ಯಾವುದೇ ವಸ್ತು ಅಥವಾ ಸೇವೆ ‘ಅರ್ಥ’ಎಂದು ಆಗುವುದು ‘ತಪರ್ಕ’ ಶಕ್ತಿಯಿಂದ. ಇಲ್ಲಿ ವಸ್ತುನಿಷ್ಠ ವಿಚಾರಧಾರೆ ಪ್ರಧಾನವಾಗಿದೆ.

ಕೌಟಿಲ್ಯನು ವ್ಯಕ್ತಿನಿಷ್ಠ ವಿಚಾರಧಾರೆಗೆ ಮಹತ್ವನೀಡಿದ್ದಾನೆ. ಈ ಎರಡೂ ವಿಚಾರಧಾರೆಯಲ್ಲಿ ‘ವ್ಯಕ್ತಿ’ ಹಾಗೂ ‘ವಸ್ತು’ ಇವೆರಡೂ ಇಬ್ಬಗೆಯ ದೃಷ್ಟಿಯಲ್ಲಿ ಅನಿವಾರ್ಯ ಅಂಶ.

ಆಧುನಿಕ ‘ಅರ್ಥಶಾಸ್ತ್ರ’ವು ವ್ಯಕ್ತಿ ಸಮಾಜ ನಿರಪೇಕ್ಷವಾಗಿ ಅರ್ಥವನ್ನು ಬಿಡಿಯಾಗಿ ವಿಶ್ಲೇಷಿಸುತ್ತದೆ. ಕೌಟಿಲ್ಯನು ‘ವ್ಯಕ್ತಿ’ ಹಾಗೂ ‘ಸಮಾಜ’ ಸಾಪೇಕ್ಷವಾಗಿ ಸಮಾಜಾಂಗವಾದ ‘ಅರ್ಥ’ವನ್ನು ಪರಿಗ್ರಹಿಸುತ್ತಾನೆ. ಸಮಾಜಶಾಸ್ತ್ರದ ಅಂಗವಾದ ‘ಅರ್ಥಶಾಸ್ತ್ರವನ್ನು ಅಧ್ಯಯನದ ಸೌಕರ್ಯಕ್ಕಾಗಿ ಬೇರ್ಪಡಿಸಿದರೂ ಸಾಮಾಜಿಕ ನೀತಿನಿಯಮಗಳ ಮೇರೆ ಮೀರಿ ಅರ್ಥಶಾಸ್ತ್ರಕ್ಕೆ ಅಸ್ತಿತ್ವವೇ ಇಲ್ಲ. ಇದನ್ನು ಗಮನಿಸಿದ ಕೌಟಿಲ್ಯನು ‘ಅರ್ಥಶಾಸ್ತ್ರ’ವನ್ನು ‘ಧರ್ಮಶಾಸ್ತ್ರ’ದ ಅಂಗ ಎಂದು ನಿರ್ಣಯಿಸಿದ್ದಾನೆ.

ಕೌಟಿಲ್ಯ ಹಾಗೂ ಆಧುನಿಕಶಾಸ್ತ್ರದ ಪ್ರಮುಖ ತಿರುವಿರುವುದೇ ಇಲ್ಲಿ. ಕೌಟಿಲ್ಯನು ಧರ್ಮಾಂಗವಾದ ‘ಅರ್ಥ’ಚಿಂತಕ, ಆಧುನಿಕ ಅರ್ಥಶಾಸ್ತ್ರಜ್ಞರು ‘ಕಾಮಾಂಗ’ ಅರ್ಥಚಿಂತಕರು. ಕೌಟಿಲ್ಯನು, ‘ಜಿತಾತ್ಮನು’ ಸವಾರ್ಥಸಂಪನ್ನ ಎನ್ನುತ್ತಾನೆ.(ಜಿತಾತ್ಮಾ ಸರ್ವಾಥೈಃ ಸಂಯುಜ್ಯತೇ) ಆದರೆ ಆಧುನಿಕ ಅರ್ಥಶಾಸ್ತ್ರವು ಆಸೆಯ ದಾಸ್ಯವನ್ನು ಅಂಗೀಕರಿಸುತ್ತದೆ. ಆಸೆಯನ್ನೇ ಗೆಲ್ಲುವುದು ಕೌಟಿಲ್ಯನ ವಿಕ್ರಮ. ಆಸೆಯನ್ನು ತಣಿಸುವುದು ಆಧುನಿಕರ ಕೈಂಕರ್ಯ. ಹೀಗೆ ಆರ್ಥಿಕ ಚಿಂತನೆಗೆ ಆಧ್ಯಾತ್ಮಿಕ ಸಿಂಚನಗೈದದ್ದು ಕೌಟಿಲ್ಯನ ಅರ್ಥಶಾಸ್ತ್ರದ ವಿಶೇಷ.

‘ಅರ್ಥ’ ಹಾಗೂ ಅಧ್ಯಾತ್ಮ:

ಅಧ್ಯಾತ್ಮ ಸಿಂಚಿತ ಅರ್ಥಶಾಸ್ತ್ರದ ಆಧಾರ ಸ್ತಂಭಗಳು ನಾಲ್ಕು. ಅವು ‘ಅಲಬ್ಧಲಾಭ’, ‘ಲಬ್ಧ ಪರಿರಕ್ಷಣ’, ‘ರಕ್ಷಿತ ವಿವರ್ಧನ’, ‘ವೃದ್ಧಸ್ಯ ತೀರ್ಥೇಷು ಪ್ರತಿಪಾದನ’.

‘ಅಲಬ್ದಲಾಭವು’ ಉತ್ಪಾದನೆಯ ಅಂಶವನ್ನು ಅವಲಂಬಿಸಿದೆ. ‘ಲಬ್ದಪರಿರಕ್ಷಣೆಯ’ಯು ಉತ್ಪತ್ತಿಯ ಪರಿಪಾಲನೆಗೆ ಸೇರಿದೆ. ‘ರಕ್ಷಿತ ವಿವರ್ಧನೆ’ಯು ಪರಿಪಾಲಿತ ಉತ್ಪಾದನೆಯ ಪುನರುತ್ಪಾದನಾ ಸಾಮರ್ಥ್ಯವನ್ನು ಹೇಳುತ್ತದೆ. ‘ವೃದ್ಧಸ್ಯ ತೀರ್ಥೇಷು ಪ್ರತಿಪಾದನೆ’ ಎಂಬುದು ಉತ್ಪತ್ತಿಯ ವಿತರಣೆಯಲ್ಲಿ ಸಾಮಂಜಸ್ಯವನ್ನು ಪ್ರತಿಪಾದಿಸುತ್ತದೆ. ‘ತೀರ್ಥ’ ಎನ್ನುವುದು ‘ಸತ್ಪಾತ್ರ’ ಎಂಬುದಕ್ಕೆ ಸಂವಾದೀ ಪದ.

 ಕೌಟಿಲ್ಯನ ಈ ‘ಅರ್ಥತತ್ತ್ವ’ ಚಿಂತನೆಯನ್ನು ಗೊಡ್ಡು ವೇದಾಂತವೆಂದು ಪರಿಭಾವಿಸಬೇಕಾಗಿಲ್ಲ. ಪ್ರಾಯೋಗಿಕವಲ್ಲವೆಂದು ಉಪೇಕ್ಷಿಸಲೂ ಸಾಧ್ಯವಿಲ್ಲ. ಏಕೆಂದರೆ ಕೌಟಿಲ್ಯನು ತಾನು ನಡೆದದ್ದನ್ನೇ ನುಡಿದಿದ್ದಾನೆ. ಅವನ ಮಾತಿನಲ್ಲೇ ಹೇಳುವುದಾದರೆ ಈ ನುಡಿ ಸಾಕ್ಷಿ.

ಸರ್ವಶಾಸ್ತ್ರಾಣ್ಯನುಕ್ರಮ್ಯ ಪ್ರಯೋಗಮುಪಲಭ್ಯಚ |
ಕೌಟಿಲ್ಯೇನ ನರೇಂದ್ರಾರ್ಥೇ ಶಾಸನಸ್ಯ ವಿಧಿಃ ಕೃತಃ ||

ಕಾಮಾರ್ಥಗಳನ್ನು ಕಡೆಗಣಿಸಿ ಧರ್ಮವನ್ನೊಂದನ್ನೇ ಅನುಸರಿಸುವುದೆಂದರೆ ಫಲವತ್ತಾದ ಭೂಮಿಯನ್ನು ಉಳುವುದನ್ನು ಬಿಟ್ಟು ಬರಡು ಭೂಮಿಯನ್ನು ಉಳುವಂತೆ ಎನ್ನುತ್ತಾನೆ.

“ಯಃಕಾಮಾರ್ಥಾವನುಪಹತ್ಯ ಧರ್ಮಮೇವ ಉಪಾಸ್ತೇ ಸಃ ಪಕ್ವಂ ಕ್ಷೇತ್ರಂ ಪರಿತ್ಯಜ್ಯೋಷರಂ ಕೃಷತಿ.”

ಇದು ಸುಖವಿಮುಖ ಆರ್ಥಿಕ ಚಿಂತನೆಯೆಂಬ ಭ್ರಾಂತಿಗೂ ಎಡೆ ಇಲ್ಲ. ಸುಖ ವಂಚಿತರಾಗಬಾರದು. ‘ಧರ್ಮ’ ಮತ್ತು ‘ಅರ್ಥ’ಕ್ಕೆ ವಿರೋಧ ವಿಲ್ಲದಂತೆ ‘ಕಾಮ’ವನ್ನು ಪಳಗಿಸಬೇಕೆನ್ನುತ್ತಾನೆ.(‘ಧರ್ಮಾರ್ಥಾವಿರೋಧೇನ ಕಾಮಂ ಸೇವೇತ ನ ನಿಸ್ಸುಖಃ ಸ್ಯಾತ್”)

           ಆದ್ದರಿಂದ ‘ಅರ್ಥ’ಅಪೇಕ್ಷಣೀಯ, ಅಪೇಕ್ಷಿತ ಅರ್ಥದ ಜೋಪಾಸನೆಗೆ ಶ್ರಮ, ಜಾಗ್ರತೆ, ಯುಕ್ತಿ ಹಾಗೂ ನೀತಿ ಅತ್ಯಗತ್ಯ. ಅಲಬ್ಧ ಲಾಭಕ್ಕೆ ಶ್ರಮ ಅನಿವಾರ್ಯ. ಲಬ್ಧ ಪರಿರಕ್ಷಣೆಗೆ ‘ಯುಕ್ತಿ’ ಉಪಯುಕ್ತ. ‘ವೃದ್ಧಸ್ಯ ತೀರ್ಥೇಷು ಪ್ರತಿಪಾದನಂ’ ಎಂಬ ತತ್ತ್ವಾಚರಣೆಗೆ ‘ನೀತಿ’ ತಳಹದಿ. ಹೀಗೆ ಕೌಟಿಲ್ಯನ ಅರ್ಥಶಾಸ್ತ್ರದ ಸುಭದ್ರ ಸ್ತಂಭಗಳು ಸುಭದ್ರ ರಾಷ್ಟ್ರದ ಆಧಾರಸ್ತಂಭಗಳೂ ಹೌದು. ಈ ನಾಲ್ಕು ತತ್ತ್ವಗಳ ಆಮೂಲಾಗ್ರ ಚಿಂತನೆಯು ಕೌಟಿಲ್ಯನ ಅರ್ಥಶಾಸ್ತ್ರದ ಹದಿನಾಲ್ಕು ಅಧಿಕರಣದಲ್ಲಿ ಹರಡಿದೆ. ಹದಿನೈದನೆಯ ಅಧಿಕರಣ ಚಿಂತನೆಯನ್ನು ಅನಾವರಣಗೊಳಿಸುವ ನಿರೂಪಣಾ ತಂತ್ರವನ್ನು ಬಿತ್ತರಿಸುತ್ತದೆ. ಈ ಅಧಿಕರಣಗಳ ಸಿಂಹಾವಲೋಕನ ಕೌಟಿಲ್ಯನ ಆರ್ಥಿಕ ವಿಚಾರಧಾರೆಯ ಅಚ್ಚುಕಟ್ಟುತನವನ್ನು ತಿಳಿಸುತ್ತದೆ.

ವೃತ್ತಿ ಹಾಗೂ ವಿನಯ :
ಮನುಷ್ಯನ ವೃತ್ತಿಯನ್ನು ಕೌಟಿಲ್ಯನು ಅರ್ಥ ಎಂದು ಗುರುತಿಸಿದ್ದಾನಷ್ಟೆ. ಪ್ರವೃತ್ತಿಯಲ್ಲಿ ‘ಸಹಜ’ಹಾಗೂ ‘ಕೃತಕ’ ಎಂಬ ಎರಡು ಬಗೆ ಇದೆ. ಕೃತಕ ಪ್ರವೃತ್ತಿಗೆ ಪ್ರೇರಣೆ ಬೇಕು. ಶಿಕ್ಷಣವು ಅಂಥ ಪ್ರೇರಣೆಯನ್ನು ನೀಡುತ್ತದೆ. ಕೌಟಿಲ್ಯನು ಶಿಕ್ಷಣವನ್ನು ‘ವಿನಯ’ಎಂದು ಪರಿಭಾಷಿಸಿದ್ದಾನೆ. ವ್ಯಕ್ತಿಯನ್ನು ಮುನ್ನಡೆಸುವುದರಿಂದ ಈ ಪರಿಭಾಷೆ ಅನ್ವರ್ಥವಾಗಿದೆ. ಮನುಷ್ಯ ಪ್ರವೃತ್ತಿಗೆ ‘ವಿನಯ’ವೇ ಮೂಲಧಾತು. ಇದರಿಂದ ವ್ಯಕ್ತಿತ್ವ ವಿಕಾಸವಾಗುತ್ತದೆ. ವ್ಯಕ್ತಿತ್ವ ವಿಕಾಸವಾದರೆ ಧನ ಲಭ್ಯವಾಗುತ್ತದೆ. ಲಬ್ಧ ಧನವನ್ನು ಧರ್ಮ ಸಂಗ್ರಹಕ್ಕಾಗಿ ವ್ಯಯಿಸಬೇಕು. ಧರ್ಮಕ್ಕಾಗಿ ವ್ಯಯಿಸಿದ ಧನ ‘ಅವ್ಯಯಸುಖ’ದ ಸೋಪಾನ. ಹೀಗೆ ಕೌಟಿಲ್ಯನ ‘ಅರ್ಥ’ಚಿಂತನೆಯಲ್ಲಿ ವಿನಯಕ್ಕೆ ಆದ್ಯ ಸ್ಥಾನ.

ವಿನಯದ ಮಹತ್ವ:
ಸಾಮಾಜಿಕರಲ್ಲಿ ‘ವಿನಯ’ಮೂಡಬೇಕಾದರೆ ಮುಂದಾಳುಗಳು ‘ವಿನಯ’ಸಂಪನ್ನರಾಗಬೇಕು. ಅದಕ್ಕಾಗಿ ಮುಂದಾಳುಗಳ ವೃತ್ತಿಯನ್ನು ನಿಯಂತ್ರಿಸಬೇಕು. ನಾಯಕನ ವೃತ್ತಿ ನಿಯಂತ್ರಿತವಾದರೆ ಮಾತ್ರ ಪ್ರಜೆಗಳ ವೃತ್ತಿ ನಿಯಂತ್ರಿತವಾಗುತ್ತದೆ. ಹೀಗೆ ರಾಜ್ಯ ವ್ಯವಸ್ಥೆಯಲ್ಲಿ ನಾಯಕರ ವ್ಯವಸ್ಥಿತ ವೃತ್ತಿ ಮೈದಳೆದರೆ ಮಾತ್ರ ‘ರಾಜ್ಯ’ ಸರ್ವಾಂಗ ಸುಂದರವಾಗುತ್ತದೆ. ಈ ಉದ್ದೇಶದಿಂದ ‘ರಾಜವೃತ್ತಿ’ ಎಂಬ ಮೊದಲನೆಯ ಅಧಿಕರಣ ಪ್ರವೃತ್ತವಾಗಿದೆ.

ವಿಕೇಂದ್ರೀಕರಣ:
ವಿನೀತ ರಾಜನು ಏಕಾಂಗಿಯಾಗಿ ರಾಜ್ಯ ವ್ಯವಹಾರವನ್ನು ನಿರ್ವಹಿಸಲಾರ. ವಿನಯ ಹಾಗೂ ವಿನಯದ ಫಲ ರಾಜ್ಯವ್ಯಾಪ್ತಿಯಾಗಿ ಪ್ರವಹಿಸಬೇಕಾದರೆ ಪರರ ಸಹಾಯ ಅತ್ಯಗತ್ಯ. ಪರರ ಸಹಾಯವನ್ನು ಪಡೆದು ಜವಾಬ್ದಾರಿಯನ್ನು ಹಂಚಿ ವಿಕೇಂದ್ರೀಕೃತ ಅಧಿಕಾರ ಹಾಗೂ ಅದರ ಸಮರ್ಪಕ ನಿಯಂತ್ರಣದ ತಂತ್ರವನ್ನು ‘ಅಧ್ಯಕ್ಷ ಪ್ರಚಾರಾಧಿಕರಣ’ದಲ್ಲಿ ವಿವರಿಸಿದ್ದಾನೆ.

ಅರ್ಥದ ನಿರ್ವಹಣೆ :
ಸಹಾಯ ಸಾಧ್ಯವಾದ ರಾಜ್ಯ ವ್ಯವಹಾರದಲ್ಲಿ ಅರ್ಥದ ನಿರ್ವಹಣೆ ಅತ್ಯಂತ ಸೂಕ್ಷ್ಮ ವಿಷಯ. ಸದಾ ಜಾಗ್ರತೆ ಇಲ್ಲಿ ಅತ್ಯಗತ್ಯ. ‘ಅರ್ಥ’ಕೌಟಿಲ್ಯನ ದೃಷ್ಟಿಯಲ್ಲ ರಾಜ್ಯದ ಸ್ವಾದಿಷ್ಠ ರಸ. ಇದು ಅನೇಕ ಅಧಿಕಾರಿಗಳ ಮೂಲಕ ಕೋಶ ಸೇರಬೇಕು. ಅದೇ ಅಧಿಕಾರಿಗಳ ಮೂಲಕ ಪ್ರಜೆಗಳಿಗೆ ತಲುಪಬೇಕು. ಈ ಅಧಿಕಾರಿಗಳು ರಾಜನ ನಾಲಿಗೆ ಇದ್ದಂತೆ. ಈ ನಾಲಿಗೆಯ ಮೂಲಕವೇ ಪರರಿಗೆ ಅರ್ಥ ಸೇರಬೇಕಾದದ್ದೇ ಆರ್ಥಿಕ ಅವ್ಯವಹಾರದ ಅನಿವಾರ್ಯತೆಗೆ ಕಾರಣ. ಆದ್ದರಿಂದ ಬಿಡಿಯಾಗಿ ಹಾಗೂ ಇಡಿಯಾಗಿ ‘ಅರ್ಥವ್ಯವಹಾರ’ವನ್ನು ಪರೀಕ್ಷಿಸಬೇಕು. (“ಆಯವ್ಯಯೌ ವ್ಯಾಸಸಮಾಸಾಭ್ಯಾಂ ಆಚಕ್ಷೀತ”) ರಾಜ್ಯದ ಎಲ್ಲ ವ್ಯವಹಾರವೂ ಕೋಶವನ್ನೇ ಅವಲಂಬಿಸಿರುವುದರಿಂದ ರಾಜನ ದೃಷ್ಟಿ ಇಲ್ಲಿ ತೀಕ್ಷ್ಣವಾಗಿ ಇರಬೇಕು. ಇಷ್ಟಾದರೂ ಅಧಿಕಾರಿಗಳು ಧನವನ್ನು ಕಬಳಿಸುವುದನ್ನು ಪತ್ತೆಹಚ್ಚುವುದು ಅಸಾಧ್ಯ ಎಂದು ಕೌಟಿಲ್ಯನು ವಸ್ತುಸ್ಥಿತಿಯನ್ನು ತಿಳಿಸುತ್ತಾನೆ. ನಾಲಿಗೆಯಲ್ಲಿ ಜೇನಿರಲಿ ವಿಷವಿರಲಿ ಅದನ್ನು ಆಸ್ವಾದಿಸದಿರಲು ಸಾಧ್ಯವೇ?

ಯಥಾ ಹ್ಯನಾಸ್ಪಾದಯಿತುಂ ನ ಶಕ್ಯಂ
ಜಿಹ್ವಾತಲಸ್ಥ ಮಧು ವಾ ವಿಷಂ ವಾ |
ಅರ್ಥಃ ತಥಾ ಹ್ಯರ್ಥಚರೇಣ ರಾಜ್ಞಃ
ಸ್ವಲ್ಪೋಪ್ಯನಾಸ್ಪಾದಯಿತುಮಶಕ್ಯಃ ||

ನೀರಿನಲ್ಲಿ ಸಂಚರಿಸುವ ಮೀನು ನೀರು ಕುಡಿಯುವುದನ್ನು ತಿಳಿಯಲಾದೀತೇ? ಅದರಂತೆ ಅಧಿಕಾರಿಗಳು ಧನವನ್ನು ಅಪಹರಿಸುವುದನ್ನು ತಿಳಿಯಲು ಸಾಧ್ಯವಿಲ್ಲ. ಹಾರುವ ಹಕ್ಕಿಗಳ ಹೆಜ್ಜೆಯನ್ನಾದರೂ ಗುರುತಿಸಬಹುದು. ಅಧಿಕಾರಿಗಳ ಹೆಜ್ಜೆಯನ್ನು ಗುರುತಿಸುವುದು ಸಾಧ್ಯವಿಲ್ಲ. ಅದಕ್ಕಾಗಿ ಪುರುಷ ಸಾಮರ್ಥ್ಯಕ್ಕೆ ಅನುಗುಣವಾಗಿ ಅಧಿಕಾರಿಗಳನ್ನು ನಿಯಮಿಸಬೇಕು.

ಸಮಾಜ ಸ್ವಾಸ್ಥ್ಯ :
ವ್ಯವಹಾರವಿದ್ದಲ್ಲಿ ವಿವಾದ ಅನಿವಾರ್ಯ. ವಿವಾದವು ಸಮಾಜದ ಸ್ವಾಸ್ಥ್ಯವನ್ನು ತಿಳಿಸುತ್ತದೆ. ಇದರಿಂದ ಪಾರಾಗಲು ನ್ಯಾಯ ವ್ಯವಸ್ಥೆ ಅತ್ಯಗತ್ಯ. ಈ ವಿಷಯದಲ್ಲಿ ಧರ್ಮಾಧಾರಿತ ವಿಧಿ ವಿಧಾನ ಬೇಕು. ಇಂಥ ಸಂವಿಧಾನವನ್ನು ಧರ್ಮಸ್ಥೀಯಾಧಿಕರಣದಲ್ಲಿ ವಿವೇಚಿಸಿದೆ.

ಕಂಟಕೋದ್ಧಾರಃ :
ಜನರ ವೃತ್ತಿಗೆ ಯಾವುದೇ ತೊಡಕು ತಡೆಯೊಡ್ಡಬಾರದು.ಮುನ್ನಡೆಯ ಮಾರ್ಗದಲ್ಲಿ ಕಂಟಕವಿರಬಾರದು.ಅಂತಹ ಕಂಟಕಗಳ ಸಂಶೋಧನೆ ಹಾಗೂ ನಿವಾರಣೆಯ ಉಪಾಯವನ್ನು ಮುಂಗಾಣಬೇಕು.ಅಂತಹ ಮುನ್ನೋಟ ಕಂಟಕ ಶೋಧನಾಧಿಕರಣದಲ್ಲಿ ಅಳವಟ್ಟಿದೆ.

ಸಹಯೋಗ :
ಸ್ವಸ್ಥ ಸಮಾಜಕ್ಕೆ ಸಾಮಾಜಿಕರಲ್ಲಿ ಸಹಯೋಗವಿರಬೇಕು.ಅಂಥ ಸಹ ಸಂಬಂಧಗಳ ಸೂಕ್ಷ್ಮ ಪರಿಶೀಲನೆಯನ್ನು ಯೋಗಾವೃತ್ತಾಧಿಕರಣದಲ್ಲಿ ನೋಡುತ್ತೇವೆ.

ಕೇಂದ್ರ ಮಾಹಾತ್ಮ್ಯ:
ಒಂದು ರಾಜ್ಯ ಹಾಗೂ ಅದರ ಘಟಕಗಳು ವೃತ್ತದಂತಿರಬೇಕು.ರಾಜ್ಯ ಕೇಂದ್ರಿತ ಘಟಕಗಳಾದ ಮಂಡಳಗಳು ಕೇಂದ್ರದಿಂದ ಎಷ್ಟೇ ದೂರ ಸರಿದರೂ ಕೇಂದ್ರದ ಸೆಳೆತಕ್ಕೆ ಒಳಪಟ್ಟಿರಬೇಕು.ಕೇಂದ್ರ ಬದಲಾದರೆ ವೃತ್ತಿ ವಿರೂಪಗೊಳ್ಳುವಂತೆ ರಾಜ್ಯ ವಿರೂಪಗೊಳ್ಳುತ್ತದೆ.ರಾಜ್ಯದ ಸ್ವರೂಪ ಬದಲಾಗದಂತೆ ತಡೆಯುವ ಯುಕ್ತಿಗಳನ್ನು ‘ಮಂಡಲಯೋನಿ’ ಎಂಬ ಅಧಿಕರಣದಲ್ಲಿ ಕಾಣುತ್ತೇವೆ.

ಸಂಧಿ ಸಮರ ಕೃತ್ಯ :
ಸಂಧಿ ಸಮರಗಳ ಲಾಭನಷ್ಟ ವಿವೇಚನೆಯ, ಯುಕ್ತವಾದುದನ್ನು ಯೋಜಿಸುವ ಮಾರ್ಗದರ್ಶನ ಅಭಿಯಾಸ್ಯತ್ಕರ್ಮ ಅಧಿಕರಣ’ದಲ್ಲಿ ಇದ್ದರೆ ಸಮರ ಸನ್ನಾಹದ ಸುಳಿವು ‘ಸಾಂಗ್ರಾಮಿಕ ಅಧಿಕರಣ’ದಲ್ಲಿ ಸಿಗುತ್ತದೆ. ‘ಸಂಘ ವೃತ್ತಾಧಿಕರಣ’ವು ರಾಜ್ಯಾಡಳಿತಕ್ಕೊಳಪಡದ ಬಲಿಷ್ಠ ಸಂಘಗಳ ನಿಯಂತ್ರಣವನ್ನು ತಿಳಿಸಿದರೆ ವೈರಿಗಳನ್ನು ಹಿಮ್ಮೆಟ್ಟಿಸುವ ಹಾಗೂ ರಾಜ್ಯವಿಸ್ತರಣೆಯ ಮೆಟ್ಟಿಲುಗಳನ್ನು ‘ದುರ್ಗಾಲಂಭೋಪಾಯಾಧಿಕರಣ’ದಲ್ಲಿ ಕಾಣುತ್ತೇವೆ. ಕುತಂತ್ರಿಗಳನ್ನು ವಿನಾಶಗೊಳಿಸುವ ರಹಸ್ಯಮಯ ಕುಟಿಲ ತಂತ್ರಗಳನ್ನು ‘ಔಪನಿಷದ್ ಎಂಬ ಅಧಿಕರಣದಲ್ಲಿ’ಕಾಣುತ್ತೇವೆ.

ಅರ್ಥದ ಯೋಗಕ್ಷೇಮ :
ಹೀಗೆ ಹದಿನಾಲ್ಕು ಅಧಿಕರಣದಲ್ಲಿ ಅರ್ಥದ ಯೋಗಕ್ಷೇಮೋಪಾಯಗಳನ್ನು ಕೌಟಿಲ್ಯನು ಪ್ರತಿಪಾದಿಸಿದ್ದಾನೆ. ಹದಿನೈದನೆಯ ಅಧಿಕರಣವು ಅರ್ಥಶಾಸ್ತ್ರದ ರಚನೆಯ ಕ್ರಮವನ್ನು ತಿಳಿಸುವ ನೆಪದಿಂದ ಭಾರತೀಯ ನಿರೂಪಣಾ ಕೌಶಲ್ಯದ ಮೇಲೆ ಬೆಳಕು ಚೆಲ್ಲಿದೆ. ಆದ್ದರಿಂದ ಇದನ್ನು ‘ತಂತ್ರಯುಕ್ತಿ’ಎಂದು ಹೆಸರಿಸಿದ್ದಾನೆ. ಇದು ಕೌಟಿಲ್ಯನ ಅರ್ಥಶಾಸ್ತ್ರದ ನಡೆಯ ವಿಹಂಗಮನೋಟ.

ನಿಯುಕ್ತಿಯ ಯುಕ್ತಿ:
ಕೌಟಿಲ್ಯನು ಪ್ರಜೆಯೇ ರಾಜ್ಯದ ಸಂಪತ್ತು, ಪ್ರಜೆಯೇ ರಾಜ್ಯದ ಆಪತ್ತು, ಎನ್ನುತ್ತಾನೆ. ಪ್ರಭು ಪ್ರಜೆಯನ್ನು ರಾಷ್ಟ್ರದ ಸಂಪತ್ತಾಗಿ ಹೇಗೆ ಯೋಜಿಸಬಲ್ಲ ಎಂಬುದೇ ರಾಷ್ಟ್ರದ ಆರ್ಥಿಕ ಸಮುನ್ನತಿಗೆ ಕಾರಣ. ಯಾರೂ ಅನುಪಯುಕ್ತರಲ್ಲ. ನಿಯೋಜಕರು ಮಾತ್ರ ದುರ್ಲಭರು. ಈ ದಿಸೆಯಲ್ಲಿ ಸಮಗ್ರ ಪ್ರಜೆಗಳನ್ನು ಆರ್ಥಿಕವಾಗಿ ಬಳಸುವ ಕಲೆ ಕರಗತವಾಗಬೇಕೆನ್ನುತ್ತಾನೆ ಕೌಟಿಲ್ಯ. ಇವನ ದೃಷ್ಟಿಯಲ್ಲಿ ಮನುಷ್ಯರು ಆರು ವಿಧ. ಅವರ ಸಾಮರ್ಥ್ಯಕ್ಕೆತಕ್ಕಂತೆ ಕಾರ್ಯದಲ್ಲಿ ನಿಯೋಜಸಿದರೆ ರಾಷ್ಟ್ರ ಅರ್ಥ ಸಂಪನ್ನವಾಗುತ್ತದೆ. ಅವನ ಈ ನಿಯೋಜನೆ ಎಂದೆಂದಿಗೂ ಪ್ರಕೃತ. ಅವನು ಮಾಡಿದ ಪ್ರಜಾ ವಿಭಾಗ ಹೀಗಿದೆ.

ಧರ್ಮೋಪಧಾ ಶುದ್ಧರು :
ಯಾರೂ ಧಾರ್ಮಿಕ ಪ್ರವೃತ್ತಿ ಉಳ್ಳವರೋ ಅವರನ್ನು ನ್ಯಾಯ ನಿರ್ಣಾಯಕರನ್ನಾಗಿ ನಿಯಮಿಸಬೇಕು. ಅರ್ಥಶೌಚ ಇರುವವರನ್ನು ಅರ್ಥೋಪಧಾಶುದ್ಧರೆಂದು ಹೇಳುತ್ತಾನೆ. ಅವರನ್ನೇ ಆರ್ಥಿಕ ಸಂಬಂಧೀ ವ್ಯವಹಾರಗಳಲ್ಲಿ ನಿಯೋಜಿಸಬೇಕು. ಕಾಮವನ್ನು ನಿಯಂತ್ರಿಸಿದವರನ್ನು ‘ಕಾಮೋಪಧಾ ಶುದ್ಧ’ರೆಂದು ಹೇಳುತ್ತಾನೆ. ಇವರನ್ನು ಬಾಹ್ಯಾಭ್ಯಂತರ ವಿಹಾರ ರಕ್ಷಣೆಯಲ್ಲಿ ತೊಡಗಿಸಬೇಕು. ಸರ್ವೋಪಧಾ ಶುದ್ಧರನ್ನು ಮಾತ್ರ ಮಂತ್ರಿಗಳನ್ನಾಗಿ ನಿಯೋಜಿಸಬೇಕು. ಸರ್ವತ್ರ ಅಶುದ್ಧರನ್ನು ಖನಿ, ದ್ರವ್ಯ ಮುಂತಾದ ಕರ್ಮದಲ್ಲಿ ತೊಡಗಿಸಬೇಕು. ಹೀಗೆ ವ್ಯಕ್ತಿಯ ವಿಶೇಷತೆಯನ್ನು ಗುರುತಿಸಿ ಅದಕ್ಕೆ ತಕ್ಕಂತೆ ವೃತ್ತಿಯನ್ನು ನಿಯಮಿಸುವುದೇ ಸುವ್ಯವಸ್ಥಿತ ಆರ್ಥಿಕ ನಿರ್ವಹಣೆ. “ಕಾರ್ಯ ಸಾಮರ್ಥ್ಯಾದ್ಧಿ ಪುರುಷಸಾಮರ್ಥ್ಯಂ”. ಇದು ಕೌಟಿಲ್ಯನ ಉದ್ಘೋಷ. ಇದೇ ಆರ್ಥಿಕ ಸಂಪನ್ನತೆಯ ರಾಜಮಾರ್ಗ.

ಕ್ರೋಧ ಹಾಗೂ ನಿರ್ಮಿತ :
ಕೌಟಿಲ್ಯನ ಅರ್ಥಶಾಸ್ತ್ರದ ಹುಟ್ಟು ಆಕಸ್ಮಿಕ. ಅವನ ಕೋಪಭಾವ ಭಾಷೆಯಾಗಿ ಮೈದಾಳಿತು. ರಾಜ್ಯದ ಹೀನಸ್ಥಿತಿಯ ಮೇಲಿನ ಕೋಪ ಸುವ್ಯವಸ್ಥೆಯ ಮೇಲಿನ ರಾಗವನ್ನು ಹೆಚ್ಚಿಸಿತು. ಹಾಗಾಗಿ ಕೌಟಿಲ್ಯನು ಸಮಗ್ರವಾದ ಅರ್ಥಶಾಸ್ತ್ರವನ್ನು ರಚಿಸಿದನು. ಸಾಮಾನ್ಯರ ಕೋಪ ನಿರ್ನಾಮ ಕಾರ್ಯದಲ್ಲಿ ತೊಡಗಿಸುತ್ತದೆ ಮಹಾತ್ಮರ ಕೋಪ ನಿರ್ಮಾಣದಲ್ಲಿ. ಅಂಥ ಅದ್ವಿತೀಯ ನಿರ್ಮಿತಿ ಕೌಟಿಲ್ಯನ ಅರ್ಥಶಾಸ್ತ್ರ.

~*~

 

Facebook Comments