ಪರಮ ಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರನ್ನು ನಾನು ಮೊದಲಿಗೆ ನೋಡಿದ್ದು ಅವರ ಸಂನ್ಯಾಸಗ್ರಹಣದ ದಿನ ಬೆಂಗಳೂರಿನ ಗಿರಿನಗರದಲ್ಲಿ. ನಾನಾಗ ಮುಂಬೈಯಲ್ಲಿ ಉದ್ಯೋಗದಲ್ಲಿದ್ದೆ. ಬೆಂಗಳೂರಿಗೆ ಅಂದು ಬಂದಿದ್ದೆ. ಗಿರಿನಗರದ ಶಾಖಾಮಠದಲ್ಲಿ ಅಂದು ವಿಶೇಷ ಕಾರ್ಯಕ್ರಮಿರುವ ವಿಚಾರ ತಿಳಿದು ಸ್ವಲ್ಪ ಹೊತ್ತಿಗೆ ಅಲ್ಲಿಗೆ ಬಂದು ದೂರದಿಂದಲೇ ಅವರನ್ನು ನೋಡಿ, ಮನದಲ್ಲೇ ವಂದಿಸಿ, ಹಿಂತಿರುಗಿದ್ದೆ (ಬಹುಷಃ ಅಂದೇ ಮುಂಬೈಗೆ ಹಿಂದುರುಗಬೇಕಾಗಿತ್ತು)

ಪರಮಪೂಜ್ಯರನ್ನು ನಾನು ಎರಡನೇ ಬಾರಿಗೆ ನೋಡಿದ್ದು ದೊಡ್ಡ ಗುರುಗಳು ಮುಕ್ತರಾದ ನಂತರ, ಗಿರಿನಗರದಲ್ಲಿರುವ ವಿದ್ಯಾಮಂದಿರದ ಮೇಲ್ಮಹಡಿಯಲ್ಲಿ ಪರಮಪೂಜ್ಯರು ಕರವಸ್ತ್ರವನ್ನು ಹಿಡಿದುಕೊಂಡು, ಹಿಂದೆ ಮುಂದೆ ನಡೆಯುತ್ತಾ ಅಲ್ಲಿ ನೆರೆದಿದ್ದವರೊಂದಿಗೆ ಸಮಾಲೋಚಿಸುತ್ತಿದ್ದ ಚಿತ್ರ ಕಣ್ಣ ಮುಂದೆ ಕಟ್ಟಿದಂತಿದೆ.

ನನಗೆ ಶ್ರೀಮಠದ ಹಾಗೂ ದೊಡ್ಡ ಗುರುಗಳ ಸಂಪರ್ಕ ಬಂದದ್ದು ನಾನು ಚಿಕ್ಕವನಾಗಿರುವಾಗಲೇ. ನನಗೆ ಆಗ ಮಠವೆಂದರೆ ಗೊತ್ತಿದ್ದದ್ದು ತೀರ್ಥಹಳ್ಳಿ ಮಠ. ನನ್ನ ಪೂಜ್ಯ ತಂದೆಯವರು ಮಠಕ್ಕೆ ವರ್ಷಕ್ಕೆ ಒಂದೆರಡು ಬಾರಿಯಾದರೂ ಹೋಗುವುದಿತ್ತು. (ಅವರೂ ದೊಡ್ಡ ಗುರುಗಳೂ ನಂಜನಗೂಡಲ್ಲಿ ಒಟ್ಟಿಗೇ ವೇದಾಭ್ಯಾಸ ಮಾಡಿದ್ದರು) ಒಮ್ಮೆ ನನ್ನ ಅಜ್ಜ ದಿ. ಚೆಂಬರ್ಪು ನಾರಾಯಣ ಭಟ್ಟರು ನನ್ನನ್ನು ತೀರ್ಥಹಳ್ಳಿಗೆ ಕರಕೊಂಡು ಹೋಗಿದ್ದರು. ನನಗಾಗ ೯-೧೦ ವರ್ಷವಿರಬೇಕು. ನಾನು ಚೆನ್ನಾಗಿ ಹಾಡುತ್ತಿದ್ದೆ ಎಂದು ಎಲ್ಲರೂ ಹೇಳುತ್ತಿದ್ದರು. ನನ್ನ ದೊಡ್ಡಪ್ಪ ದಿ| ಕೃಷ್ಣಶಾಸ್ತ್ರಿಗಳು (ದೊಡ್ಡ ಸಂಸ್ಕೃತ ವಿದ್ವಾಂಸರು) ನನಗೆ ತುಂಬಾ ಶ್ಲೋಕಗಳನ್ನು, “ಗದ್ಯ”ಗಳನ್ನೂ ಕಲಿಸಿದ್ದರು. ದೊಡ್ಡಗುರುಗಳ ಮುಂದೆ ನನ್ನಜ್ಜನಿಗೆ ನಾನು ಹಾಡುವುದನ್ನು ಕೇಳಿಸಬೇಕೆಂಬಾಸೆ. ಹಾಗೇ ವಿನಂತಿಸಿಕೊಂಡರು. ಹಾಡಲು ಅನುಮತಿ ದೊರಕಿತು. ಆಗ ನಾನು “ಮಾನಸ ಸಂಚರರೇ, ಬ್ರಹ್ಮಣಿ ಮಾನಸ ಸಂಚರರೇ….” ಎಂಬ ಭಾಗವನ್ನು ಕಲಿತಂತೆ ಹಾಡಿದೆ. ದೊಡ್ಡಗುರುಗಳು ಸಂತೋಷಪಟ್ಟು “ಇದರ ಅರ್ಥ ಗೊತ್ತೇ?” ಎಂದು ಕೇಳಿದರು. ಪಕ್ಕದಿಂದ ಪಕ್ಕಕ್ಕೆ ತಲೆ ಆಡಿಸಿದ್ದೆ! ಆಮೇಲೆ ಗುರುಗಳೇ ಅದರ ಅರ್ಥ ವಿವರಿಸಿದರು ಅಂದು ಅಲ್ಲಿ ಅವರೆದುರಿಗೆ ಕುಳಿತ ಎಲ್ಲ ಹಿರಿ-ಕಿರಿಯ ಶಿಷ್ಯರನ್ನುದ್ದೇಶಿಸಿ.

ಮುಂದೆ ನಾನು ಸ್ನಾತಕೋತ್ತರ ಪದವಿಗಾಗಿ ಬೆಂಗಳೂರಲ್ಲಿ ಅಭ್ಯಾಸ ಮಾಡುತ್ತಿದ್ದಾಗ ದೊಡ್ಡಗುರುಗಳು ಅವರಿದ್ದಲ್ಲಿಗೆ (ಆಗ ಕೂಡಲೀ ಶೃಂಗೇರಿ ಮಠದಲ್ಲಿ ಮುಕ್ಕಾಂ ಇರುತ್ತಿದ್ದರು) ಕರೆಸಿಕೊಳ್ಳುತ್ತಿದ್ದರು. ನನ್ನ ಪೂಜ್ಯ ತಂದೆಯವರ ಬಗ್ಗೆ ದೊಡ್ಡಗುರುಗಳಿಗಿದ್ದ ಅಭಿಮಾನದಿಂದಾಗಿ ನನಗೂ ಗುರುಗಳ ಪ್ರೀತಿ ದೊರಕಿತ್ತು.

ಶ್ರೀಮಠಕ್ಕೂ ನನ್ನ ವೈವಾಹಿಕ ಜೀವನಕ್ಕೂ ಹತ್ತಿರದ ಸಂಬಂಧ. ನನ್ನ ಬಾಳ ಸಂಗಾತಿಯನ್ನು ನನ್ನ ಹಿರಿಯರು ಆಯ್ಕೆ ಮಾಡಿದ ನಂತರ ದೊಡ್ಡಗುರುಗಳ ಒಪ್ಪಿಗೆ ಕೇಳಿದಾಗ ಅವರು ಸಂತೋಷದಿಂದ ಆಶೀರ್ವದಿಸಿದ್ದರು. ಅನಂತರ ನನ್ನ ಮದುವೆ ನಡೆದದ್ದೂ ನಮ್ಮ ಪೆರಾಜೆಯ ಶ್ರೀರಾಮಚಂದ್ರಾಪುರಮಠ (ಮಾಣಿ ಮಠ) ದಲ್ಲಿ. ಮದುವೆಯ ನಂತರ ಅವರ ಆಶೀರ್ವಾದ ಪಡೆಯಲು ತೀರ್ಥಹಳ್ಳಿ ಮಠಕ್ಕೆ ಹೋಗಿದ್ದೆವು. ಅಲ್ಲಿ ತಲುಪಿದಾಗ ರಾತ್ರಿಯ ೮ ಗಂಟೆ. ದೊಡ್ಡಗುರುಗಳು ಅಷ್ಟರ ಮೇಲೆ ನಮಗಾಗಿ ಪಾಯಸದ ಅಡಿಗೆ ಮಾಡಿಸಿ, ಆಶೀರ್ವಾದ-ಪ್ರಸಾದ ನೀಡಿದ್ದನ್ನು  ನಾನೆಂದಿಗೂ ಮರೆಯಲಾರೆ.

ಹಿರಿಯ ಗುರುಗಳಾದ ಶ್ರೀ ಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳು ಪೂರ್ವಾಶ್ರಮದಲ್ಲಿ ನಂಜನಗೂಡಿನ ವೇದಪಾಠಶಾಲೆಯಲೆಯಲ್ಲಿ ವೇದಾಧ್ಯಯನ ಮಾಡುತ್ತಿರುವ ಸಂದರ್ಭದಲ್ಲಿ ನನ್ನ ಪೂಜ್ಯ ತಂದೆಯವರು ಅವರೂ ಒಂದಾರು ತಿಂಗಳು ಜತೆ ಜತೆಯಲ್ಲೇ ಅಧ್ಯಯನ ಮಾಡಿದ್ದರಂತೆ. ನನ್ನ ತಂದೆಯವರ ಮೇಲಿನ ಅಭಿಮಾನದಿಂದ ಮುಂದೊಂದು ದಿನ ತಂದೆಯವರನ್ನು ಕರೆಸಿಕೊಂಡು ಸಂಪೇಕಟ್ಟೆಯಲ್ಲಿರುವ ಮಠದಲ್ಲಿ ನಮ್ಮ ಕುಟುಂಬ ನೆಲೆಸುವಂತೆ ಮಾಡಿದರು

ಮೊದಲು ನನ್ನ ಪರಿಚಯ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರಿಗೆ ಇದ್ದದ್ದು ಕಡಿಮೆ. ನನ್ನ ತಮ್ಮ ಲಕ್ಷ್ಮೀನರಸಿಂಹನ ಪರಿಚಯ ಅವರಿಗೆ ಚೆನ್ನಾಗಿತ್ತು. ನಾನು ಅವರಿಗೆ ತುಂಬ ಹತ್ತಿರವಿದ್ದು ಸೇವೆ ಮಾಡುವ ಸಂದರ್ಭ ಒದಗಿ ಬಂದದ್ದು (1999) ಗಿರಿನಗರದಲ್ಲಿ ನಡೆದ ಹವ್ಯಕ ಸಮಾವೇಶದಂದು. ಆಗ ವೇದಿಕೆಯ ಮೇಲೆ ಕಾರ್ಯಕ್ರಮ ನಿರೂಪಕನ ಜವಾಬ್ದಾರಿ ನನಗೆ ಕೊಟ್ಟಿದ್ದರು. ಅಲ್ಲಿಯವರೆಗೆ ಇತರ ಕಾರ್ಯಕರ್ತರಿಗೂ ನನ್ನ ಪರಿಚಯ ಅಷ್ಟಾಗಿ ಇರಲಿಲ್ಲ.

ಮುಂದೆ ಬೆಂಗಳೂರು ಪ್ರಾಂತಪರಿಷತ್ತಿನ ರಚನೆ (2000) ಹಾಗೂ ಘೋಷಣೆಯ ಸಂದರ್ಭದಲ್ಲಿ ನನ್ನನ್ನು ಪರಮ ಪೂಜ್ಯರು ಬೆಂಗಳೂರು ಪ್ರಾಂತದ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿಗೆ ಆಯ್ಕೆ ಮಾಡಿದ್ದು ನನಗೆ ಮಾತ್ರವಲ್ಲ ಹೆಚ್ಚಿನ ಎಲ್ಲ ಶಿಷ್ಯರಿಗೂ ಆಶ್ಚರ್ಯವನ್ನುಂಟುಮಾಡಿತ್ತು. ಪರಮಪೂಜ್ಯರು ಆಶೀರ್ವದಿಸಿ ಧೈರ್ಯ ನೀಡಿದ್ದರಿಂದ ಆ ಜವಾಬ್ದಾರಿಯನ್ನೊಪ್ಪಿಕೊಂಡೆ. ಮುಂದೆ ಹಿರಿಯರಾದ ಶ್ರೀಯುತ ಮದ್ಗುಣಿ ಮಹಾಬಲೇಶ್ವರ ಭಟ್ಟರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ, ಇತರ ಎಲ್ಲ ಗುರುಬಂಧುಗಳ ಸಹಕಾರದೊಂದಿಗೆ ಶ್ರೀಮಠದ ಸೇವೆ ಮಾಡುತ್ತ ಬಂದಿರುವುದು ನನ್ನ ಸೌಭಾಗ್ಯ.

ಅಂದಿನ ದಿನಗಳಲ್ಲಿ ಪರಮಪೂಜ್ಯರೊಂದಿಗೆ ನಾವು ಕಳೆದ ಕ್ಷಣಗಳೆಲ್ಲ ಕನಸೋ ಅನಿಸತೊಡಗಿದೆ. ಶ್ರೀಗುರುಗಳು ಬೆಂಗಳೂರಿನ ವಿದ್ಯಾಮಂದಿರದಲ್ಲಿ ಆಗ ಮುಕ್ಕಾಂ ಇರುತ್ತಿದ್ದರು. ಶ್ರೀರಾಮಾಶ್ರಮದ ನಿರ್ಮಾಣ ಸಂದರ್ಭದಲ್ಲಿ, ಶ್ರೀ ರಾಮಾದಿ ವಿಗ್ರಹಗಳನ್ನು ಮೂಲ ವಿಗ್ರಹಗಳ ರೀತಿಯಲ್ಲೇ ಮಾಡುವ ಸಲುವಾಗಿ ಒಂದೊಂದೇ ಮೂರ್ತಿಗಳನ್ನು ಶ್ರೀಗಳು ವಿವರಿಸುತ್ತಿದ್ದುದು, ಹಾಗೂ ಅವುಗಳ ವಿವರಗಳನ್ನು ಮಲೆಯಾಳೀ ಶಿಲ್ಪಿಗಳಿಗೆ ಕಳುಹಿಸುವ ಸಲುವಾಗಿ ನಾನು ಬರಕೊಂಡಿದ್ದು ನೆನಪಲ್ಲುಳಿಯುವ ಮತ್ತೊಂದು ಘಟನೆ.

ಪ್ರಧಾನಮಠದಲ್ಲಿ ನಡೆದ  ಚಾತುರ್ಮಾಸ್ಯ ಸಂದರ್ಭದಲ್ಲಿ, ಶ್ರೀಗಳು ಬೆಂಗಳೂರಿನಿಂದ ಹೋಗಿದ್ದ ಶಿಷ್ಯರನ್ನೆಲ್ಲ ಕರೆದುಕೊಂಡು ಗದ್ದೆ, ಗುಡ್ಡ, ಬೆಟ್ಟಗಳನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ, ಅಗಸ್ತ್ಯ ತೀರ್ಥಕ್ಕೆ ಕರಕೊಂಡು ಹೋಗಿದ್ದು ಇನ್ನೊಂದು ಅವಿಸ್ಮರಣೀಯ ಸಂದರ್ಭ.

ಶ್ರೀರಾಮಾಯಣ ಮಹಾಸತ್ರ ಅದೊಂದು ಸಾಮಾನ್ಯರಿಂದ ಊಹಿಸಲಾಗದ, ಸಂಘಟಿಸಲಾಗದ ಕೆಲಸ. ಅಯೋಧ್ಯೆಯಿಂದಲೇ ೧೦೦೦ಕ್ಕೂ ಮಿಗಿಲಾದ ವೈದಿಕರನ್ನು(ಸಂತರನ್ನು)ಕರೆಸಿ, ವಾಲ್ಮೀಕಿರಾಮಾಯಣ ಪಾರಾಯಣ ಮಾಡಿಸುವುದು, ರಾಮತಾರಕಯಜ್ಞ, ಹಾಗೂ ಇವುಗಳೆಲ್ಲದರ ಪ್ರಭಾವ ಪ್ರಕೃತಿಯ ಮೇಲೆ ಏನಾಯ್ತು ಎನ್ನುವ ಸಂಶೋಧನೆ, ಭಾರತದ ಎಲ್ಲ ನದೀತೀರ್ಥ, ಸಾಗರಗಳ ನೀರನ್ನು ತಂದು ಶ್ರೀರಾಮನಿಗೆ ಪಟ್ಟಾಭಿಶೇಕ ಇವೆಲ್ಲವೂ “ನ ಭೂತೋ-ನ ಭವಿಷ್ಯತಿ” ಎನ್ನುವಂತೆ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಿತು.

ಶ್ರೀರಾಮಾಯಣ ಮಹಾಸತ್ರದಲ್ಲಿ ನನ್ನ ಪೂಜ್ಯ ತಂದೆಯವರಿಗೆ “ಶ್ರುತಿ ಸಾಗರ” ಎಂಬ ಬಿರುದನ್ನು ಶ್ರೀರಾಮನ ಆಸ್ಥಾನದಲ್ಲಿ ಶ್ರೀಗಳು ನೀಡಿದ್ದನ್ನು ನೆನೆದರೇ ಮೈ ರೋಮಾಂಚನವಾಗುತ್ತದೆ.

ಭಾರತೀಯ ತಳಿಯ ಗೋವಿನ ರಕ್ಷಣೆಯ ಪಣವನ್ನು ಪರಮಪೂಜ್ಯರು ತೊಟ್ಟ ನಂತರ, ಅವರು ಕೇವಲ ನಮ್ಮ ಸಮಾಜಕ್ಕೆ ಅಥವಾ ಕರ್ನಾಟಕಕ್ಕೆ ಸೀಮಿತವಾಗಿ ಉಳಿಯಲಿಲ್ಲ. ಅವರು “ಗೋ ಸ್ವಾಮಿ” ಗಳಾಗಿ ಭಾರತದಾದ್ಯಂತ ಪರಿಚಿತರಾದರು.

“ಭಾರತೀಯ ಗೋಯಾತ್ರೆ”ಯು ಕರ್ನಾಟಕದುದ್ದಗಲಕ್ಕೂ ಅಂದಾಜು ೫೦೦೦ ಕಿ.ಮೀ. ದೂರ ಮೂರು ತಿಂಗಳ ಕಾಲ ನಡೆಯುವುದೆಂದು ತೀರ್ಮಾನವಾಯ್ತು. ಅದರ ಪ್ರಾರಂಭೋತ್ಸವ ಬೆಂಗಳೂರಿನ ನ್ಯಾಶನಲ್ ಕಾಲೇಜ್ ಮೈದಾನದಲ್ಲೆಂದೂ ತೀರ್ಮಾನವಾಗಿ, ಬೆಂಗಳೂರಿನ ಮೆರವಣಿಗೆ ಹಾಗೂ ಸಭಾ ವ್ಯವಸ್ಥೆಗಳು ಬೆಂಗಳೂರು ಪರಿಷತ್ತಿನ ಪಾಲಿಗೆ ಬಂದುವು. ಆಗ ಶ್ರೀಗಳ ಜತೆ ನಿಕಟವಾಗಿ ಓಡಾಡುವ ಸಂದರ್ಭ ಬಂತು.

ಭಾರತೀಯ ಗೋಯಾತ್ರೆ ವಿಶ್ವ ಗೋ ಸಮ್ಮೇಳನಕ್ಕೆ ನಾಂದಿಯಾಯ್ತು. ವಿಶ್ವ ಗೋ ಸಮ್ಮೇಳನವಂತೂ ಶ್ರೀಗಳನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿತು. ಜನಸಾಗರ ಪ್ರಪಂಚದ ಮೂಲೆ ಮೂಲೆಗಳಿಂದ ಹರಿದು ಬಂದಿತು. ಸಂತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಂದು “ಗೋ-ಸ್ವಾಮಿ”ಗಳ ಜತೆಗೆ ನಾವಿದ್ದೇವೆಂದರು. ಗೋಮಾತೆಯ ವಿಶ್ವರೂಪ ದರ್ಶನವಾಯ್ತು. ಮೊದಲಬಾರಿಗೆ ಕಾಮಧೇನು ತುಲಾಭಾರ ನಡೆಯಿತು. ಒಂದು ಹಳ್ಳಿಯ ಮೂಲೆಯಲ್ಲಿ ವಿಶ್ವಮಟ್ಟದ ಕಾರ್ಯಕ್ರಮವನ್ನು ಹೇಗೆ ಸಂಘಟಿಸಬಹುದೆಂಬ ಮಾದರಿ ಅಲ್ಲಿ ಪ್ರಕಟಗೊಂಡಿತು.

ವಿಶ್ವ ಗೋ ಸಮ್ಮೇಳನವೇ ಮುಂದೆ ಕೋಟಿ ನೀರಾಜನಕ್ಕೆ ಕಾರಣವಾಯ್ತು, ದೀಪ ಗೋಪುರಕ್ಕೆ ಮೆಟ್ಟಿಲಾಯ್ತು, ವಿಶ್ವ ಮಂಗಲ ಗೋ ಗ್ರಾಮ ಯಾತ್ರೆಗೆ ಸ್ಫ್ಪೂರ್ತಿಯಾಯ್ತು. ನಾಲ್ಕು ತಿಂಗಳ ಕಾಲ ೨೪೦೦೦ ಕಿ.ಮೀ. ದೂರ ಪರಮಪೂಜ್ಯರ ಮಾರ್ಗದರ್ಶನದಲ್ಲಿ ನಡೆದ ವಿಶ್ವ ಮಂಗಲ ಗೋ ಗ್ರಾಮ ಯಾತ್ರೆ ಪ್ರಪಂಚದ ಇತಿಹಾಸದಲ್ಲೊಂದು ದಾಖಲೆ. ಗೋವಿನ ಉಳಿವಿಗಾಗಿ ಎಂಟೂವರೆ ಕೋಟಿ ಜನರ ಹಸ್ತಾಕ್ಷರ ಸಂಗ್ರಹವೂ ಒಂದು ವಿಶ್ವ ದಾಖಲೆಯೇ. ನನ್ನ ಪುಣ್ಯವೆಂದರೆ, ಈ ಎಲ್ಲ ಐತಿಹಾಸಿಕ ಘಟನೆಗಳಲ್ಲೂ ನಾನು ಭಾಗವಹಿಸಲು, ಸೇವೆ ಸಲ್ಲಿಸಲು ಸಾಧ್ಯವಾಗಿದ್ದು.

ವಿಶ್ವ ಮಂಗಲ ಗೋ ಗ್ರಾಮ ಯಾತ್ರೆಯಲ್ಲಿ ಶ್ರೀ ಶ್ರೀಗಳ ಜತೆಗಿದ್ದ ಅನುಭವ ಎಂದೆಂದೂ ಮರೆಯಲಾರದ್ದು. ಇಡೀ ಭಾರತದ ಉದ್ದಗಲಕ್ಕೆ ಸಂಚರಿಸಿದ ಯಾತ್ರೆಯಲ್ಲಿ “ಶಂಕರಾಚಾರ್ಯ”ರಿಗೆ ಸಂದ ಗೌರವ, ಮನ್ನಣೆಯನ್ನು ಕಣ್ಣಾರೆ ಕಾಣುವ, ಸಂತೋಷಪಡುವ, ಪಾಲ್ಗೊಳ್ಳುವ ಯೋಗ ನನ್ನದಾಯ್ತು. ಸಭೆಗಳಿಗೆ ಅವರು ಬಂದಾಗ, ಮೆರವಣಿಗೆಯಲ್ಲಿ ಅವರು ಭಾಗವಹಿಸಿದಾಗ ವಿದ್ಯುತ್ಸಂಚಾರವಾಗುತ್ತಿತ್ತು. ಅವರು ಬರುವ ನಿರೀಕ್ಷೆಯಿದ್ದು ಬಾರದಿದ್ದಾಗ ಜನರಿಗಾಗುತ್ತಿದ್ದ ನಿರಾಸೆಯನ್ನು ಶಬ್ದಗಳಲ್ಲಿ ನನ್ನಿಂದ ಹೇಳಲಾಗುತ್ತಿಲ್ಲ. ಪ್ರತಿಯೊಂದು ಸಭೆಯಲ್ಲೂ ಶ್ರೀಗಳ ಉಪನ್ಯಾಸ  ಅತ್ಯಂತ ವಿಶಿಷ್ಟವಾಗಿರುತ್ತಿತ್ತು. ಎಲ್ಲೂ “ಈ ವಿಷಯವನ್ನು ಮೊದಲೂ ಕೇಳಿದ್ದೇವೆ” ಎಂದೆನಿಸುತ್ತಿರಲ್ಲ. ಹಿಂದೀ ಭಾಷೆಯ ಮೇಲಿನ ಅವರ ಪ್ರಭುತ್ವ  ಅಸದೃಶ. ನನಗೆ ಅರುವತ್ತು ತುಂಬಿದ ಸಂದರ್ಭ (ನವೆಂಬರ ೧೬, ೨೦೦೯) ಹೈದರಾಬಾದಿನಲ್ಲಿ ನನಗೆ ಪರಮಪೂಜ್ಯರಿಂದ ದೊರೆತ ಪ್ರೀತಿ-ಆಶೀರ್ವಾದಗಳು ಸದಾ ಮನದಲ್ಲಿ ಹಸಿರಾಗಿರುವ ಚಿತ್ರಗಳು.

ಇನ್ನೊಂದು ಸದಾ ನೆನಪಿನಲ್ಲುಳಿಯುವ ಸಂದರ್ಭವೆಂದರೆ ಮಾತಾ ಅಮೃತಾನಂದಮಯೀ – ಅಮ್ಮನವರ ಒಂದು ಸಮಾರಂಭದಲ್ಲಿ ಭಾಗವಹಿಸಲು ಶ್ರೀಗಳ ಜತೆಗೇ ವಿಮಾನದಲ್ಲಿ ಪಯಣಿಸಿದ್ದು ಹಾಗೂ ಶ್ರೀಗಳ ಜತೆಗೇ ಮಾತೆಯವರನ್ನು ಭೆಟ್ಟಿಯಾದದ್ದು ಹಾಗೂ ಆಶೀರ್ವಾದ ಪಡೆದದ್ದು. ಶ್ರೀಗಳ ಇಂಗ್ಲಿಷ್ ಭಾಷಣ ತಯಾರಿಯಲ್ಲಿ ನಾನೂ ಸೇವೆ ಸಲ್ಲಿಸಲು ಸಾಧ್ಯವಾಗಿದ್ದು, ಶ್ರೀಗಳ ಅಮೃತವಾಣಿಯಲ್ಲಿ ಅಂದು ಗುರುವಿನ ಮಾತೃ ಸ್ವರೂಪದ ವರ್ಣನೆ ಇವೆಲ್ಲವೂ ನನ್ನ ಜೀವಮಾನದ ಸದಾ ನೆನಪಲ್ಲುಳಿಯುವ ಘಟನೆಗಳು.

ಶ್ರೀ ಶ್ರೀಗಳು ಲೋಕರೂಢಿಯಂತೆ ಸಂನ್ಯಾಸವನ್ನು ಗ್ರಹಣಮಾಡಿದ ಒಬ್ಬ ಮನುಷ್ಯನೆಂದು ಅನಿಸುವುದೇ ಇಲ್ಲ. ಅವರಲ್ಲಿ ನಾವು ಆದಿಗುರು ಶಂಕರರನ್ನು ಕಾಣುತ್ತೇವೆ; ಪುರುಷೋತ್ತಮ ರಾಮನನ್ನು ಕಾಣುತ್ತೇವೆ; ಹೆತ್ತ ತಾಯಿಯ ಪ್ರೀತಿ, ಕರುಣೆ, ವಾತ್ಸಲ್ಯವನ್ನು ಕಾಣುತ್ತೇವೆ. “ನಿಮಗೆ ನಿಮ್ಮ ಮಕ್ಕಳು ಅಥವಾ ಬಂಧುಗಳು ನಿಮ್ಮ ಕುಟುಂಬವಾದರೆ ಇಡೀ ಶಿಷ್ಯ-ಭಕ್ತಗಣ ನಮ್ಮ ವಿಶಾಲ ಕುಟುಂಬ” ಎಂಬ ಅರ್ಥದ ಮಾತುಗಳನ್ನು ಅವರು ಹೇಳುತ್ತಾರೆ. ನಿಜ ನಾವೆಲ್ಲ ಅವರ ವಿಶಾಲ ಕುಟುಂಬದ ಸದಸ್ಯರು.

ಒಮ್ಮೆ ಪರಿಚಯವಾದರೆ ಮತ್ತೆಂದೂ ಅವರ ಹೆಸರನ್ನು ಮರೆಯದ ಅವರ ವಿಶೇಷ ಜ್ಞಾಪಕ ಶಕ್ತಿಗೆ ಮಾರುಹೋಗದವರಿಲ್ಲ! ಅವರ ಕಣ್ಣಿನ ನೋಟದ ತೀವ್ರತೆಗೆ-ಆರ್ದ್ರತೆಗೆ ಕರಗದ ವ್ಯಕ್ತಿಗಳಿಲ್ಲ.

ಹಿಂದೆ ೩೩ನೆಯ ಪೀಠಧಿಪತಿಗಳಾದ ಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಮದವೇರಿದ ಆನೆಯೊಂದನ್ನು ಕೇವಲ ತನ್ನ ಕಣ್ಣ ನೋಟದಲ್ಲೇ ಅಂಕೆಗೆ ತಂದು ಕೇವಲ ತನ್ನ ಕೈ ವಸ್ತ್ರವನ್ನು ಅದರ ಸೊಂಡಿಲಿಗೆ ಸುತ್ತಿ ಅದನ್ನು ರಾಜಬೀದಿಯಲ್ಲಿ ನಡೆಸಿಕೊಂಡು ಬಂದ ಘಟನೆಯ ಬಗ್ಗೆ ಕೇಳಿದ್ದೇವೆ.  ಇಂದೂ ಅಂಥ ಘಟನೆಗಳು ಮರುಕಳಿಸುತ್ತಿವೆ. ಎಷ್ಟೋ ಮದವೇರಿದ “ಆನೇ” ಗಳು ಶ್ರೀ ಶ್ರೀಗಳ ಮುಂದೆ ಬಂದಾಗ, ಅವರ ಕಣ್ಣನೋಟಕ್ಕೆ ಬಿದ್ದಾಗ, ಅವರು ಪ್ರೀತಿಯಿಂದ ತಮ್ಮ ಹೆಸರ್‍ಹಿಡಿದು ಕರೆದಾಗ, ‘ಆನೆ’  ಅತ್ಯಂತ ಸಾಧು ಸ್ವಭಾವದ ‘ಗೋ’ವಾಗುವುದನ್ನು ನಾವು ನೋಡಿದ್ದೇವೆ!.

“ಹರೇರಾಮ” ಸಂಬೋಧನೆಯನ್ನು ಶ್ರೀಗಳು ಮೊದಲಿಗೆ ನಮ್ಮ ಮಠದಲ್ಲಿ ಪ್ರಾರಂಭಿಸಿದಾಗ, ಶ್ರೀಗಳು ಆ ಬಗ್ಗೆ ಅಂದಿನ ವೇದಿಕೆಯಲ್ಲಿ ನನ್ನ ಮೂಲಕ ಅದರ ಫ್ರಾರಂಭ ಮಾಡಿಸಿದ್ದು ಯಾವಾಗಲೂ ನನ್ನ ನೆನಪಲ್ಲುಳಿಯುವ ಐತಿಹಾಸಿಕ ಘಟನೆ. ಹಾಗೇ ಗೋಕರ್ಣದಲ್ಲಿ ನಡೆದ ಸೀಮೋಲ್ಲಂಘನ-ಪುರಪ್ರವೇಶ ಕಾರ್ಯಕ್ರಮದಲ್ಲಿ “ಹರ ಹರ ಮಹಾದೇವ” ಎಂಬ ಘೋಷಣೆಯನ್ನು ಮೊಳಗಿಸಿದ್ದೂ ಒಂದು ಹೃದಯ ಸ್ಪರ್ಶೀ ಸನ್ನಿವೇಶ.

ಶ್ರೀಗಳ ಹಿಂದಿನ ಎರಡು (ಸರ್ವಜಿತ್ ಮತ್ತು ಸರ್ವಧಾರೀ) ಚಾತುರ್ಮಾಸ್ಯಗಳು ಬೆಂಗಳೂರಲ್ಲಿ ನಡೆದಾಗ ಚಾತುರ್ಮಾಸ್ಯದ ವ್ಯವಸ್ಥೆಯ ಬಗ್ಗೆ ಗುರುಗಳಿಂದ ಶಹಭಾಸ್ ಸಿಕ್ಕಿದಾಗ ಒಲಂಪಿಕ್‌ನಲ್ಲಿ ಪದವಿ ಗೆದ್ದಷ್ಟು ಹರ್ಷವಾಗಿದ್ದನ್ನು ಮರೆಯಲಾರೆ. ಇನ್ನೊಂದು ಅತ್ಯಂತ ಆನಂದವನ್ನು ಕೊಟ್ಟ ಸಮಯವೆಂದರೆ ಚಾತುರ್ಮಾಸ್ಯದಲ್ಲಿ ರಾತ್ರಿಯ ಶ್ರೀರಾಮಾಯಣ ಪ್ರವಚನದ ನಂತರ ಶ್ರೀಗಳ ಎದುರಲ್ಲಿ “ಕುಸುಮದಾರತಿಯನೆತ್ತೀರೇ” ಹಾಡುತ್ತಿದ್ದ ಸಂದರ್ಭ. ನಾನು ಅದನ್ನು ಶ್ರೀಗಳಿಗೆ ಇಷ್ಟವಾಗುವಂತೆ ಹಾಡುತ್ತಿದ್ದೇನೆ ಎನ್ನುವ ಗರ್ವ ನನಗೆ ಬಂದಿತ್ತು!

ಈ ವರ್ಷದ ಚಾತುರ್ಮಾಸ್ಯ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡಿದೆ.  ಶತಮಾನಗಳ ನಂತರ ಅಲ್ಲಿ ನಡೆದಿದೆ. ಅಲ್ಲಿನ ವಾತಾವರಣ ಚಾತುರ್ಮಾಸ್ಯಕ್ಕೆ ಅತ್ಯಂತ ಸೂಕ್ತವಾಗಿದೆ. ಅಲ್ಲಿನ ವ್ಯವಸ್ಥೆಗಳ ಜವಾಬ್ದಾರಿ ಹೊತ್ತ ಶ್ರೀ ದೇವಶ್ರವ ಶರ್ಮಾ ದಂಪತಿಗಳ ಹಾಗೂ ಚಾತುರ್ಮಾಸ್ಯ ಸಮಿತಿಯ ಶ್ರಮ-ಮುತುವರ್ಜಿಯ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆಯೇ. ಪರಮಪೂಜ್ಯರ ಸಂಪೂರ್ಣ ಆಶೀರ್ವಾದ ಅವರೆಲ್ಲರಿಗೂ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಶ್ರೀಗಳ ಕಲ್ಪನೆಯ ಕೂಸಾದ ನಲಂದಾ-ತಕ್ಷ ಶಿಲಾ ಮಾದರಿಯ ಗುರುಕುಲದ ಸ್ಥಾಪನೆಯಾಗಿದೆ. ಗುರುಗಳ ಕಲ್ಪನೆಯಂತೆ ಅದು ಬೆಳೆದು ಹೆಮ್ಮರವಾಗಬೇಕಿದೆ. ಅದೇ ರೀತಿ ಶ್ರೀರಾಮಚಂದ್ರಾಪುರದಲ್ಲಿ ಶ್ರೀ ಚಂದ್ರಮೌಳೀಶ್ವರ ದೇವಾಲಯ ಅತ್ಯಂತ ವಿಶಿಷ್ಟ ವಾಸ್ತುಶಿಲ್ಪದೊಂದಿಗೆ ಸಾಕಾರವಾಗಬೇಕಿದೆ. ಅಶೋಕೆಯಲ್ಲಿ ಮೂಲ ಮಠ ಪುನರುತ್ಥಾನವಾಗಬೇಕಿದೆ. ಬೆಂಗಳೂರಲ್ಲಿ “ಪುನರ್ವಸು ನಿರ್ಮಾಣವಾಗಿ “ರಾಜ್ಯಭಾರ” ಕ್ಕೆ ಸಜ್ಜಾಗಬೇಕಿದೆ. ಗೋಕರ್ಣದ ಮಹಾಬಲೇಶ್ವರ ದೇವಾಲಯ ಸಂಪೂರ್ಣವಾಗಿ ಶ್ರೀಮಠದ ಆಡಳಿತಕ್ಕೊಳಪಟ್ಟು ಯಾತ್ರಿಕರ ಆಶೋತ್ತರಗಳನ್ನು ಪೂರೈಸಬೇಕಿದೆ. ಕೋಟಿರುದ್ರದಂತಹ ಹಲವು ವಿಶಿಷ್ಟ ಸೇವೆಗಳನ್ನು ಪೂರೈಸಬೇಕಿದೆ. ವಿದ್ಯಾನಿಧಿ-ಆರ್ತನಿಧಿ ಸ್ಥಾಪನೆಯಾಗಿ ಸಮಾಜಕ್ಕೆ ಆಸರೆಯಾಗಬೇಕಿದೆ. ಭಾರತೀಯ ಗೋವಂಶದ ರಕ್ಷಣೆ ನಿರಂತರವಾಗಿ ಆಗಬೇಕಿದೆ. ಹೀಗೇ ಶ್ರೀಗಳು ಸಮಾಜದ ಒಳಿತಾಗಿ ಹಾಕಿಕೊಟ್ಟ ಹಲವಾರು ಯೋಜನೆಗಳು ನಿರಂತರವಾಗಿ ಅನುಷ್ಠಾನವಾಗಬೇಕಿದೆ. ಇವೆಲ್ಲಕ್ಕೂ ಸಮಾಜ ಮುಂದೆ ಬಂದು ಶ್ರೀಗಳ ಮಾರ್ಗದರ್ಶನದಂತೆ ನಡೆದು ಸರ್ವತೋಮುಖ ಯಶಸ್ಸನ್ನು ಕಾಣಬೇಕಿದೆ.

ಹರೇ ರಾಮ

ಶ್ರೀಯುತ ಸತ್ಯನಾರಾಯಣ ಭಟ್ಟರ ಕುಟುಂಬದ ಶ್ರೀಮಠದೊಂದಿಗಿನ ಮಧುರ ನೆನಪುಗಳು.

ಪರಿಚಯ

ವೇದಮೂರ್ತಿ ಶಂಕರನಾರಾಯಣ ಘನಪಾಠಿಗಳು ಮತ್ತು ಶ್ರೀಮತಿ ಪಾರ್ವತಿ ಅಮ್ಮ ದಂಪತಿಗಳಿಗೆ ಜ್ಯೇಷ್ಠಪುತ್ರನಾಗಿ ೧೯೪೯ನೇ ಇಸವಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕರೋಪಾಡಿ ಗ್ರಾಮದ ಚೆಂಬರ್ಪುವಿನಲ್ಲಿ ಜನಿಸಿದ ಶ್ರೀಯುತ ಸತ್ಯನಾರಾಯಣ ಭಟ್ಟರು, ಪ್ರಾಥಮಿಕ ವಿದ್ಯಾಭ್ಯಾಸವನ್ನು ಕನ್ಯಾನ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಹೊಸನಗರ ತಾಲೂಕಿನ ನಗರದಲ್ಲಿ ಪಡೆದರು. ವಾಣಿಜ್ಯ ವಿಭಾಗದ ಪದವಿ (ಬಿ. ಕಾಂ.) ಯನ್ನು ಮೈಸೂರಿನಲ್ಲಿ ಪೂರೈಸಿದನಂತರ ಹೆಚ್ಚಿನ ವ್ಯಾಸಂಗಕ್ಕಾಗಿ ಬೆಂಗಳೂರು ಸೇರಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಮ್. ಕಾಂ. ಸ್ನಾತಕೋತ್ತರ ಪದವಿಯನ್ನು ಪಡೆದ ಶ್ರೀಯುತ ಭಟ್ಟರು ೧೯೭೨ರಲ್ಲಿ ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ಅದೇ ಸಂಸ್ಥೆಯಲ್ಲಿ ೧೯ವರ್ಷಗಳ ದೀರ್ಘ ಸೇವೆಯನ್ನು ಸಲ್ಲಿಸಿ ಮುಂದೆ ೧೯ ವರ್ಷಗಳ ಕಾಲ ವಿವಿಧ ಸಂಸ್ಥೆಗಳಲ್ಲಿ ಮಹತ್ವವಾದ ಹುದ್ದೆಯನ್ನು ನಿರ್ವಹಿಸಿರುತ್ತಾರೆ.

ಶ್ರೀಯುತರು ೧೯೭೯ರಲ್ಲಿ ಗೃಹಸ್ಥ ಜೀವನಕ್ಕೆ ಕಾಲಿಟ್ಟಿರುತ್ತಾರೆ. ನಾಟಕ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿರುವ ಮೂಲಕ ಕಲಾಸೇವೆಯನ್ನೂ ಮಾಡಿರುವ ಶ್ರೀಯುತರು ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡಿರುತ್ತಾರೆ.

೨೦೦೧ರಿಂದ ಪ್ರೇರಣಾ ಮೋಟಾರ್ಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಪ್ರಸ್ತುತ ಅದೇ ಸಂಸ್ಥೆಯ ಸೀನಿಯರ್ ಜನರಲ್ ಮೆನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಲ್ಲರ ಪ್ರೀತಿಯ ಸಿಎಚ್ಚೆಸ್ ಭಟ್ಟರಾಗಿರುವ ಇವರು ಶ್ರೀಮಠದ ವಿವಿಧ ಜವಾಬ್ದಾರಿಯುತ ಸ್ಥಾನಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಬೆಂಗಳೂರು ಮಂಡಲದ ಅಧ್ಯಕ್ಷರಾಗಿ ಶ್ರಿಗುರುಪೀಠದ ಸೇವೆ ಸಲ್ಲಿಸುತ್ತಿದ್ದು ಇವರಿಗೆ ಹಾಗೂ ಕುಟುಂಬಕ್ಕೆ ಶ್ರೀಕರಾರ್ಚಿತ ದೇವತಾನುಗ್ರಹ ಹಾಗೂ ಗುರುಕೃಪೆ ಸದಾ ಇರಲೆಂದು ಹಾರೈಸುತ್ತೇವೆ

Facebook Comments