LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ನನ್ನ ಬಾಳಿಗೆ ಬೆಳಕಾದ ಶ್ರೀಚರಣ : ಶಂಕರ ಭಟ್, ಪಟಿಕಲ್ಲು

Author: ; Published On: ಶನಿವಾರ, ಸೆಪ್ಟೆಂಬರ 6th, 2014;

Switch to language: ಕನ್ನಡ | English | हिंदी         Shortlink:

ಲೇಖಕರು ಮಂಗಳೂರು ಹೋಬಳಿಯ ಪಟಿಕಲ್ಲಿನವರು ಕುಟುಂಬದವರು. 1976ರಲ್ಲಿ ಗಣಿತ ಸ್ನಾತಕೋತ್ತರ – ಚಿನ್ನದ ಪದಕ / ಪ್ರಥಮ ರೇಂಕ್ ಮೂಲಕ ಗಳಿಸಿದರು. ಹದಿನಾರು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO ದಲ್ಲಿ ವಿಜ್ಞಾನಿಯಾಗಿದ್ದು, 1995ರಲ್ಲಿ ಅಮೇರಿಕಾ ದೇಶದಲ್ಲಿ ಸಾಫ್ಟ್-ವೇರ್ ತಂತ್ರಜ್ಞರಾಗಿ ಸೇವೆ ಸಲ್ಲಿಸಿದ್ದಾರೆ. 2001ರಲ್ಲಿ ಮಂಗಳೂರಿನ ನಂತೂರಿನಲ್ಲಿ ಶ್ರೀ ಭಾರತೀ ಕಾಲೇಜ್ ಆರಂಭವಾದಾಗ ಶ್ರೀಯುತರು ಪ್ರಾಂಶುಪಾಲರಾಗಿ ನಿಯುಕ್ತಿಗೊಂಡರು. 2006ರಲ್ಲಿ ಸ್ವನಿವೃತ್ತಿ ಹೊಂದಿದ ಶ್ರೀಯುತರು ಪ್ರಸ್ತುತ ಬೆಂಗಳೂರಿನ ಕಂಪೆನಿಯೊಂದರಲ್ಲಿ ತಂತ್ರಜ್ಞಾನ ಸಲಹಾಗಾರರಾಗಿ ಸೇವೆಸಲ್ಲಿಸುತ್ತಿದ್ದಾರೆ. ಅಗಾಧ ಗುರುಭಕ್ತಿಯನ್ನು ಹೊಂದಿರುವ ಶ್ರೀಯುತರಿಗೆ ಶ್ರೇಯಸ್ಸು ಉಂಟಾಗಲಿ ಎಂಬುದು ನಮ್ಮ ಆಶಯ.

ಸಂ.

ಸಮಾಜದ ವಿದ್ಯಾರ್ಥಿಗಳಿಗೆ ಶ್ರೀಗುರುಗಳ ಅನುಗ್ರಹ ರೂಪವಾಗಿ ಸ್ಥಾಪಿಸಲ್ಪಟ್ಟ ಮಂಗಳೂರಿನ ಶ್ರೀಭಾರತೀ ಕಾಲೇಜು ’ಗುರುಗಳ ಕಂಪ್ಯೂಟರ್ ಕಾಲೇಜು’ ಎಂದೇ ಪ್ರಸಿದ್ಧಿ ಪಡೆದಿರುವುದು ತಮಗೆಲ್ಲಾ ತಿಳಿದ ವಿಚಾರ. ಈ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಉತ್ತಮ ಹುದ್ದೆಗಳಲ್ಲಿ ಉದ್ಯೋಗಿಗಳಾಗಿದ್ದು ಭವಿಷ್ಯವನ್ನು ಹೊಂದಿದ್ದಾರೆ. ಪೂರ್ವದ ಜಪಾನ್ ನಿಂದ ಪಶ್ಚಿಮದ ಅಮೇರಿಕಾ ವರೆಗೆ ವಿದೇಶಗಳಲ್ಲೂ ಅತ್ಯುತ್ತಮ ಸ್ಥಾನಮಾನಗಳನ್ನು ಪಡೆದಿರುತ್ತಾರೆ. ಇಂತಹಾ ಪ್ರತಿಷ್ಠಿತ ಕಾಲೇಜಿನ ಪ್ರಥಮ ಪ್ರಾಂಶುಪಾಲನಾಗಿ ಸೇವೆ ಸಲ್ಲಿಸುವ ಸುವರ್ಣಾವಕಾಶವನ್ನು ಶ್ರೀಗುರುಗಳು ನನಗೆ ದಯಪಾಲಿಸಿ, ’ಯಶಸ್ಸು ನಿನ್ನದಾಗಲಿ’ ಅಂತ ಆಶೀರ್ವದಿಸಿದಾಗ ನನ್ನ ಸಾಮರ್ಥ್ಯದ ಬಗ್ಗೆ ನನಗೇ ಅನುಮಾನವಿತ್ತು. ಆದರೆ, ಗುರುಗಳ ಅನುಗ್ರಹ ನನ್ನ ಮೇಲೆ ಸದಾ ಇದ್ದುದರಿಂದ ಕಾಲೇಜು ಿನೇ ದಿನೇ ಪ್ರಸಿದ್ಧವಾಗುತ್ತಾ ಬಂತು. ಅಲ್ಲಿ ಕಲಿತು ಜೀವನವನ್ನು ಭದ್ರಪಡಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆ ಅತಿ ದೊಡ್ಡದು.

ಶ್ರೀಯುತ ಪಟಿಕಲ್ಲು ಶಂಕರ ಭಟ್, ಬೆಂಗಳೂರು

ಶ್ರೀಯುತ ಪಟಿಕಲ್ಲು ಶಂಕರ ಭಟ್, ಬೆಂಗಳೂರು

ನನ್ನ ಮೂಲ ಉದ್ಯೋಗವಾದ Software Development ಮತ್ತೆ ನನ್ನನ್ನು ಸೆಳೆಯತೊಡಗಿದಾಗ ಆ ಬಯಕೆಯನ್ನು ಶ್ರೀ ಗುರುಗಳಲ್ಲಿ ಅರಿಕೆ ಮಾಡಿಕೊಂಡೆ. ಆ ದಿನ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಅಮ್ಮನರ ಸನ್ನಿಧಿಯಲ್ಲಿ ಗುರುಗಳ ಮೊಕ್ಕಾಂ. ಗುರುಗಳು ಹೇಳಿದ ಮಾತುಗಳು ಇಂದಿಗೂ ನನ್ನ ಮನದಲ್ಲಿ ಅಚ್ಚಳಿಯದೆ ನೆಲೆಸಿವೆ. “ಶಂಕರಾ, ನಿನ್ನ ಭವಿಷ್ಯದ ದೃಷ್ಟಿಯಿಂದ ನೀನು ಹೋಗುವುದಾದರೆ ನಾವು ಅಡ್ಡಿಮಾಡುವುದಿಲ್ಲ. ಆದರೆ, ನಮ್ಮ ಮನಸ್ಸಿನಲ್ಲಿ ಮಾತ್ರ ನೀನು ಪ್ರಾಂಶುಪಾಲನೇ. ನಿನಗೆ ಒಳ್ಳೆಯದಾಗಲಿ’ – ಶ್ರೀಗುರುಗಳ ಅನುಮತಿ ಪಡೆದು ಅವರ ಪಾದಗಳಲ್ಲಿ ನನ್ನ ಹಣೆಯನ್ನಿರಿಸಿ ನಸ್ಕರಿಸಿದೆ. ಆಗ ನನಗಾದ ದಿವ್ಯ ಅನುಭವಗಳನ್ನು ಶಬ್ದಗಳಲ್ಲಿ ವಿವರಿಸಲು ಅಸಾಧ್ಯ.

“ಚರಣಾರವಿಂದಗಳು” ಅಂತ ಯಾಕೆ ಹೇಳುತ್ತಾರೆ ಅಂತ ನನ್ನ ಅನುಭವಕ್ಕೆ ಬಂತು. ಹಾಗೆ ಹಣೆಯ ಮೂಲಕ ನನ್ನ ಹೃದಯಕ್ಕಿಳಿದ ಶ್ರೀಚರಣ ನನ್ನ ಹೃದಯದಲ್ಲಿ ನೆಲೆಸಿದೆ. ನನ್ನ ಕೊನೆಯುಸಿರಿನ ತನಕವೂ ಅಲ್ಲೇ ಇರುತ್ತದೆ. ನನ್ನು ಎಲ್ಲೇ ಇದ್ದರೂ ನನ್ನ ಹೃದಯಸ್ಥವಾಗಿರುವ ಶ್ರೀಚರಣದ ಮೂಲಕಪ್ರತಿ ದಿನವೂ ಅನೇಕ ಬಾರಿ ಶ್ರೀಗುರುಗಳ ದರ್ಶನ ನನಗೆ ಆಗುತ್ತಲೇ ಇರುತ್ತದೆ.

ಇನ್ನು ನನ್ನ ಬಾಳಿನ ಅನೇಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶ್ರೀಗುರುಗಳು ತೋರಿದ ಮಾತೃವಾತ್ಸಲ್ಯವು ಕೂಡಾ ಮಾತುಗಳಿಗೆ ಮೀರಿದ್ದು.

ಇದು ನನ್ನ ಬಾಳ ಬೆಳಕಾದ ಶ್ರೀಚರಣ ಮಹಿಮೆ.

|| ಹರೇರಾಮ ||

5 Responses to ನನ್ನ ಬಾಳಿಗೆ ಬೆಳಕಾದ ಶ್ರೀಚರಣ : ಶಂಕರ ಭಟ್, ಪಟಿಕಲ್ಲು

 1. shobha

  hareraama

  [Reply]

 2. Ganesha Chandhalli

  ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಹಾಗೂ ಶ್ರೀಯುತ ಶಂಕರ ಭಟ್ರ ಆಶೀರ್ವಾದಗಳ ಬಗ್ಗೆ ಒಂದು ಸಣ್ಣ ಘಟನೆಯನ್ನು ನೆನಪು ಮಾಡಿಕೊಳ್ಳುತ್ತೇನೆ.

  ಶ್ರೀ ಭಾರತೀ ಕಾಲೇಜು ಪ್ರಾರಂಭವಾದ ವರ್ಷ. ಬಡ ಕುಟುಂಬದಿಂದ ಬಂದ ನಾನು, ಕಂಪ್ಯೂಟರ್ ವಿಷಯದಲ್ಲಿ ಪದವಿ (ಬಿ. ಸಿ. ಎ) ಪಡೆಯುವ ಮಹದಾಸೆ, ಪಿಯುಸಿ ಓದಿದ್ದು ಕಲಾ ವಿಭಾಗದಲ್ಲಿ. ಪ್ರಾಯಶಃ ಕರ್ನಾಟಕದ ಯಾವ ಕಾಲೇಜಿನಲ್ಲೂ ನನಗೆ ಕಂಪ್ಯೂಟರ್ ವಿಭಾಗದಲ್ಲಿ ಪ್ರವೇಶ ಕನಸಿನ ಮಾತು ಆಗಿತ್ತು. ಹೀಗಿರುವಾಗ ನನ್ನೊಬ್ಬ ಹಿತೈಷಿಗಳ ಸಲಹೆಯಂತೆ ಹೊಸನಗರ ಮಠದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳನ್ನು ಭೇಟಿ ಮಾಡಿ ಶ್ರೀಗಳಲ್ಲಿ ನನ್ನ ಸಮಸ್ಯೆಯನ್ನು ನಿವೇದಿಸಿಕೊಂಡೆ. ಶ್ರೀಗಳವರು ಆಶೀರ್ವದಿಸಿ ನಮ್ಮ ಕಾಲೇಜು ಮಂಗಳೂರಿನಲ್ಲಿ ಪ್ರಾರಂಭವಾಗಿದೆ, ಅಲ್ಲಿ ಶಂಕರ ಭಟ್ರನ್ನು ಭೇಟಿ ಮಾಡಲು ತಿಳಿಸಿದರು. ಹೊರಡುವಾಗ “ಶ್ರೀರಾಮ ನಿನಗೆ ಒಳ್ಳೆದು ಮಾಡ್ತಾ, ಏನು ಯೋಚನೆ ಮಾಡಡ” ಎಂದು ಆಶೀರ್ವಾದಿಸಿದರು.

  ಶ್ರೀ ಶಂಕರ ಭಟ್ರನ್ನು ಭೇಟಿ ಮಾಡಿ ಬಿ.ಸಿ.ಎ ಗೆ ಕಾಲೇಜಿನಲ್ಲಿ ಪ್ರವೇಶ ಕೋರಿದೆ. ಬಿ.ಸಿ.ಎಗೆ ಸೇರಬೇಕಿದ್ದರೆ ವಾಣಿಜ್ಯ ಅಥವಾ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಆಗಿರಬೇಕು ಎಂದು ಹೇಳಿದಾಗ ನನ್ನಾಸೆ ಕನಸಾಗಿಯೇ ಉಳಿಯುವ ಭಯವಿತ್ತು. ಆದರೂ ಶಂಕರ ಭಟ್ರು ಪ್ರವೇಶಕ್ಕಾಗಿ ಅರ್ಜಿ ಪಡೆದು ಮಂಗಳೂರು ವಿಶ್ವವಿದ್ಯಾಲಯ ಕಲಾ ವಿಭಾಗದವರಿಗೂ ಬಿ.ಸಿ.ಎಗೆ ಅವಕಾಶ ನೀಡುವ ಬಗ್ಗೆ ಚಿಂತಿಸುತ್ತಿದೆ. ಹಾಗೇನಾದರು ಆದಲ್ಲಿ ಪ್ರವೇಶ ನೀಡುವ ಭರವಸೆಯನ್ನಿತ್ತರು.

  ಶ್ರೀಗುರುಗಳ ಆಶೀರ್ವಾದ ಸುಳ್ಳಾಗಲು ಸಾಧ್ಯವೆ? ಕನಸು ನನಸಾಗಿಯೇ ಬಿಟ್ಟಿತು. ಮಂಗಳೂರು ವಿಶ್ವವಿದ್ಯಾಲಯ ಕಲಾ ವಿಭಾಗದವರಿಗೂ ಬಿ.ಸಿ.ಎಗೆ ಅವಕಾಶ ನೀಡಿತು. ಈ ಅವಕಾಶ ಭಾಗಶಃ ನನಗಾಗೇ ಸೃಷ್ಟಿಯಾಗಿದ್ದು ಹಾಗೂ ನಮ್ಮ ಬ್ಯಾಚ್ ಮುಗಿದಾಗ ಮುಗಿದೂ ಹೋಯಿತು.

  ನಮ್ಮ ಪ್ರಾಂಶುಪಾಲರಾಗಿ ಶಂಕರ ಭಟ್ ನಮ್ಮನ್ನು ಮಾರ್ಗದರ್ಶಿಯಾಗಿ ಮುನ್ನಡೆಸಿದರು. ಶ್ರೀಗುರುಗಳ ಕೃಪಾದೃಷ್ಟಿ ಹಾಗೂ ನಮ್ಮ ಪ್ರೀತಿಯ ಪ್ರಾಂಶುಪಾಲರ ಹಾರೈಕೆಯಿಂದ ಇಂದು ಅಮೇರಿಕದ ಪ್ರತಿಷ್ಠಿತ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.

  ನಮ್ಮ ಉನ್ನತಿಯಲ್ಲಿ ತಮ್ಮ ಸಂತೋಷವನ್ನು ಕಾಣುವ ಮನಸ್ಸಿನ ಜನರು ತುಂಬಾ ಅಪರೂಪ. ನನ್ನ ಜೀವನದಲ್ಲಿ ಶ್ರೀಗುರುಗಳು ಹಾಗೂ ಶಂಕರ ಭಟ್ ಗೆ ವಿಶೇಷ ಸ್ಥಾನ. ನಮ್ಮೊಂದಿಗೆ ಅವರು ಇರುವಾಗ ಅವರೊಂದಿಗೆ ನಾವು ಇರದೇ ಇರಲು ಹೇಗೆ ಸಾಧ್ಯ?

  || ಹರೇರಾಮ ||

  [Reply]

 3. ದೀಪಕ್ ರಾವ್ ದೇರಾಜೆ

  || ಹರೇರಾಮ ||

  ಈ ಬರಹವನ್ನು ಓದಿದಾಗ ಸರ್ ಹೇಳಿದ ಅಷ್ಟೂ ವಿಚಾರಗಳು ಚಿತ್ರ ಸಮೇತವಾಗಿ ನನ್ನ ಮುಂದೆ ಬಂದು ನಿಂತಂತೆ ಅನಿಸಿತು. ಮೇಲೆ ಹೇಳಿದ ಅಷ್ಟೂ ಸನ್ನಿವೇಶಗಳ ಪ್ರತ್ಯಕ್ಷದರ್ಶಿ ಹಾಗೂ ಅನುಭವಿ ನಾನು.
  ಭಾರತೀ ಕಾಲೇಜಿನಲ್ಲಿ ಕಲಿತು ಉತ್ತಮ ಉದ್ಯೋಗದಲ್ಲಿರುವವರ ಪೈಕಿ ನಾನು ಒಬ್ಬ ಅಂತ ಹೇಳುವದಕ್ಕೆ ನನಗೆ ನಿಜವಾಗಲೂ ಹೆಮ್ಮೆ ಅನಿಸುತ್ತದೆ.
  ಕಾಲೇಜಿಗೆ ಶ್ರೀ ಗುರುಗಳ ಭೇಟಿ ಎಂದಾಕ್ಷಣ ನಮಗೆ ಎಲ್ಲಿಲ್ಲದ ಖುಷಿ, ಕಿಂಚಿತ್ ಗುರುಸೇವೆ ಮಾಡುವ ಭಾವ.
  ದ್ವಿತೀಯ ಪೀಯುಸೀ ಬಳಿಕ ಅದೆಲ್ಲೋ ದಾರಿ ತಪ್ಪುತ್ತಿದ್ದ ನನಗೆ ಒಬ್ಬರು ಶಂಕರರು ಈ ದಾರಿಯಲ್ಲಿ ಹೋಗು ಎಂದರೆ ಇನ್ನೊಬ್ಬ ಶಂಕರರು ಅದೇ ದಾರಿಯಲ್ಲಿ ಹೋಗಲು ಮಾರ್ಗದರ್ಶನ ನೀಡಿದವರು, ಮತ್ತೆ ದಾರಿಯುದ್ದಕ್ಕೂ ಶ್ರೀ ಶಂಕರರ ದರ್ಶನ ನನ್ನ ಹಾದಿಯಿಂದ ಪಲ್ಲಟಗೊಳ್ಳದಂತೆ ಸ್ಪೂರ್ತಿ.
  ನಾನು ಇವತ್ತು ನಾನಾಗಿರಲು ಕಾರಣರಾದ ಗುರುವೃಂದಕ್ಕೆ ನನ್ನ ಸಾಷ್ಟಾಂಗ ಪ್ರಣಾಮಗಳು.

  || ಹರೇರಾಮ ||

  [Reply]

 4. ಶಂಕರ ಭಟ್ ಪಟಿಕಲ್ಲು

  ಭಾರತೀ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ನಾನೊಂದು ನಿಮಿತ್ತ ಮಾತ್ರ.
  ನಮ್ಮೆಲ್ಲರ ಬಾಳ ಬೆಳಕಾದ ಗುರು ಚರಣಾರವಿಂದಗಳಿಗೆ ನಮನಗಳು.
  ಹರೇ ರಾಮ.

  [Reply]

 5. Lana

  ಶ್ರೀಯುತ ಶಂಕರ ಭಟ್ಟರ ಮಾರ್ಗದರ್ಶನದಲ್ಲಿ ಶ್ರೀ ಭಾರತೀ ಕಾಲೇಜಿನಲ್ಲಿ ಬೆಳೆದವರಲ್ಲಿ ನಾನೂ ಒಬ್ಬ ಎನ್ನುವುದು ಹೆಮ್ಮೆಯ ವಿಚಾರ.
  ಶ್ರೀಚರಣ ಸರೋಜ ಸ್ಪರ್ಷದ ಪುಣ್ಯ ಫಲ ಶಂಕರ ಭಟ್ಟರ ಮೂಲಕವಾಗಿ ನಮಗೆಲ್ಲರಿಗೂ ಲಭಿಸಿದೆ.

  ಹರೇರಾಮ

  [Reply]

Leave a Reply

Highslide for Wordpress Plugin