ಓಂ ಶ್ರೀ ಗುರುಭ್ಯೋ ನಮಃ ಹರಿಃ ಓಂ.

ಶ್ರೀ ಮಹಾ ಗಣಪತಿಯು ಕೋಟಿ ಸೂರ್ಯರ ಪ್ರಭೆ ಹೊಂದಿದ್ದಾನಂತೆ. ೧೨ ಜನ ಸೂರ್ಯರಲ್ಲಿ ತಾನು ವಿಷ್ಣು ಎಂದು ಶ್ರೀಮನ್ನಾರಾಯಣನೇ ಹೇಳಿಕೊಂಡಿದ್ದಾನೆ. ವಿಶ್ವಾದಿ ಮೂಲನಾದ ಆ ಮಾಯಾಲೋಲ ವಿಷ್ಣು ಎಂಬ ವಿಚಿತ್ರಕೆ ನಮಿಸಲು ಡಿ.ವಿ. ಗುಂಡಪ್ಪನವರ ಆದೇಶ. ಸೂರ್ಯನನ್ನು ಬಚ್ಚಿಡವುದಕ್ಕಾಗಲೀ, ಮುಚ್ಚಿಡುವುದಕ್ಕಾಗಲೀ ಅಥವಾ ಯಾವುದೇ ರೀತಿಯಿಂದ ಮರೆ ಮಾಚುವುದಕ್ಕಾಗಲೀ ಸಾಧ್ಯವಿಲ್ಲ. ಸೂರ್ಯ ಸ್ವಯಂ ಪ್ರಕಾಶಿತ. ಅಂತೆಯೇ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ಸಮಕಾಲೀನ ಪೀಠಾಧಿಪತಿಗಳ ನಡುವೆ ಅವರು ಸ್ವಯಂ ಪ್ರತಿಭೆಯಿಂದ ಪ್ರಕಾಶಿಸುತ್ತಿದ್ದಾರೆ. ಅವರ ಈ ಸ್ವಯಂ ಪ್ರತಿಭೆಯಿಂದ ಲೋಕಕ್ಕೆ ತಂತಾನೇ ಪರಿಚಿತರಾಗಿದ್ದಾರೆ. ಮೂಡಣ ರಂಗಸ್ಥಳದಲ್ಲಿ ನೆತ್ತರ ಕಾರುತ್ತಾ ಮೂಡುವ ರವಿ ಏರುತ್ತಾ ಚಿಕ್ಕವನಾಗಿ ಸಂಜೆ ಪಡುವಣದಲ್ಲಿ ಕತ್ತಲೊಡನೆ ಜಗಳವಾಡುತ್ತಾ ಮುಳುಗುವನು. ಇಡೀ ರಾತ್ರಿ ಜಗಳವಾಡಿದ ನಂತರ ಮತ್ತೆ ಮರುದಿನ ಪೂರ್ವ ದಿಗಂತದಿ ಮೂಡುವುದು ಇವನ ದಿನಚರಿ. ಆದರೆ ಯಾರಿಗೂ ಕೆಂಗಣ್ಣು ಬೀರದೆ, ತಮ್ಮ ನಡೆನುಡಿಯಲ್ಲಿ ಎಂದೂ ಚಿಕ್ಕವರಾಗದೆ ಯಾರೊಡನೆಯೂ ಜಗಳವಾಡದೆ ಎಲ್ಲಿಯೂ ಮರೆಯಾಗದೇ ಸದಾ ಹಸನ್ಮುಖಿಗಳಾಗಿ ಭಕ್ತ ವೃಂದವನ್ನು ಹರಸುವುದು ಶ್ರೀ ಶ್ರೀಗಳವರ ದಿನಚರಿ.

ರಾ ಮಚಂದ್ರಾಪುರ ಮಠದ ಅಧಿಪತ್ಯವನ್ನು ಶ್ರೀ ಶ್ರೀ ಗಳವರು ವಹಿಸಿಕೊಂಡ ಪ್ರಾರಂಭದ ಸಮಯ, ಆಗ ನಾನು ಶಿಕಾರಿಪುರದಲ್ಲಿ ನೌಕರಿಯಲ್ಲಿದ್ದೆ. ಶ್ರೀ ಶ್ರೀಗಳವರ ವಿಚಾರಪೂರ್ಣ ಅಭಿಪ್ರಾಯಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಅವುಗಳಿಂದ ಪ್ರಭಾವಿತನಾಗಿ ನಾನು ಅವರ ’ಏಕಲವ್ಯ’ ಶಿಷ್ಯನಾದೆ. ನಾನೇ ಏಕೆ ಅವರ ವಿಚಾರ ಲಹರಿಗಳನ್ನು ಅರಿತ ಪ್ರತಿಯೊಬ್ಬನೂ ಆ ರೀತಿ ಪರಿವರ್ತಿತರಾದುದರಲ್ಲಿ ಆಶ್ಚರ್ಯವೇನೂ ಇಲ್ಲ. ಹೀಗಾಗಿ ಶ್ರೀ ಶ್ರೀಗಳವರಿಗೆ ಭಕ್ತ ವೃಂದದ ಅಪಾರ ಬಳಗವೇ ಇಂದು ಬೆಳೆದು ನಿಂತಿದೆ ಎಂದರೆ ತಪ್ಪಾಗಲಾರದು.

ಮಘಮ ವಾಸನೆ ಬೀರುವುದು ಹೂವಿನ ಹುಟ್ಟುಗುಣ. ಮಂದಾನಿಲದಲ್ಲಿ ಬರುವ ಆ ಸುವಾಸನೆಯನ್ನು ಆಘ್ರಾಣಿಸುವರೆಷ್ಟು ಪುಣ್ಯವಂತರು? ಅದೇ ರೀತಿ ಶ್ರೀ ಶ್ರೀಗಳವರು ಇಂದು ಇಡೀ ಸಮಾಜಕ್ಕೆ ಸುವಾಸಿತರಂತೆ ತಮ್ಮ ಇರುವನ್ನು ಪ್ರಕಟಿಸುತ್ತಿದ್ದಾರೆ. ಶ್ರೀಗಂಧದ ಕೊರಡು ತನ್ನನ್ನು ತಾನು ತೇಯ್ದುಕೊಂಡು ಸುಗಂಧ ನೀಡುವ ರೀತಿಯಲ್ಲಿ ಶ್ರೀ ಶ್ರೀಗಳವರು ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಂಪಾದ ಕಂಪನ್ನು ನೀಡುತ್ತಿದ್ದಾರೆ.

ವೇ ದ ವೇದಾಂತಗಳೆಲ್ಲ ಹೇಳುತ್ತಿವೆ. ಗುರುವು ತ್ರಿಮೂರ್ತಿಗಳಿಗೆ ಸಮ ಎಂದು. ಭವ ಬಂಧನವ ಕಳಚುವ ಗುರುವಿನಿಂದಧಿಕ ಬಂಧುಗಳು ಯಾರೂ ಇಲ್ಲವೆಂದು ಸರ್ವಜ್ಞ ಸಾರಿರುವುದು ಸರ್ವಕಾಲಕ್ಕೂ ಸತ್ಯವಾದುದೇ. ಸಂಸಾರ ಸಾಗರದಲ್ಲಿ ಮುಳುಗಿ ಸೊರಗುತ್ತಿರುವ ನರರೆಂಬ ಶಿಷ್ಯರ ಏಳಿಗೆಗಾಗಿಯೇ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟು ಶ್ರೀ ಶ್ರೀಗಳವರು ಶ್ರಮಿಸುತ್ತಿದ್ದಾರೆ. ಇದರಿಂದ ಇಂದು ಶ್ರೀ ಶ್ರೀಗಳವರು ಸರ್ವ ಜನಾಧರಣೀಯರಾಗಿದ್ದಾರೆ.. ಇವರ ಭಕ್ತವೃಂದ ದಿನೇ ದಿನೇ ವೃದ್ಧಿಸುತ್ತಿದೆ.

ಶ್ವ ಪಚನಾದರೂ ಅರಿವು ಮೂಡಿಸಿದವನೇ ಗುರು ಎಂದು ಚಾಂಡಾಲನಿಗೆ ದೀರ್ಘದಂಡ ನಮಸ್ಕಾರ ಮಾಡಿದವರು ಶ್ರೀ ಶ್ರೀ‌ಆದಿಶಂಕರರು. ಅಂತಹ ವಿಶಾಲ ಹೃದಯದ ಗುರುಪರಂಪರೆ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರದು. ಶ್ರೀ ಆದಿ ಶಂಕರರಿಂದಲೇ ಸ್ಥಾಪಿತವಾದುದೆಂಬ ಹೆಗ್ಗಳಿಕೆ ಇರುವ ಗೋಕರ್ಣ ಸಂಸ್ಥಾನದ ಗುರುಪರಂಪರೆಯಲ್ಲಿ ಶ್ರೀ ಶ್ರೀಗಳವರು ೩೬ನೆಯವರು. ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳೆಂದು ಹೆಸರಾದ ಇನ್ನೂ ೧೨ಜನ ಗುರುಗಳು ಈ ಪೀಠದಲ್ಲಿ ಸಂದು ಹೋಗಿದ್ದರೂ ಅವರೆಲ್ಲರಿಗಿಂತಲೂ ಭಿನ್ನರಾದವರು ಶ್ರೀ ಶ್ರೀಗಳು. ಬ್ರಾಹ್ಮಣರ ಒಂದು ಭಾಗದ ಮಠದ ಪೀಠಾಧಿಪತಿಗಳಾದರೂ ಸಹ ಶ್ರೀ ಶ್ರೀಗಳವರು ಇಂದು ಅವರು ಅಷ್ಟಕ್ಕೇ ಸೀಮಿತವಾಗಿಲ್ಲ. ತಮ್ಮ ಚಿಂತನ ಶೀಲತೆ ವಾಕ್ಪಟುತ್ವ, ಪ್ರಾಣಿ ದಯೆ, ಮಾನವೀಯ ಗುಣಗಳು ಮತ್ತು ದ್ರಷ್ಟಾರತ್ವದಿಂದಾಗಿ ಅವರು ಬ್ರಾಹ್ಮಣರ ಒಂದು ಪಂಗಡ, ಬ್ರಾಹ್ಮಣರ ಇಡೀ ವೃಂದ, ಹಿಂದೂಗಳ ಸಂಪೂರ್ಣ ಸಮಾಜ ಭಾರತದ ಸಕಲ ಜನಾಂಗವನ್ನೂ ಮೀರಿ ವಿಶ್ವ ವ್ಯಾಪಿಯಾಗಿ ಬೆಳೆದುನಿಂತಿದ್ದಾರೆ. ಇನ್ನೂ ಬೆಳೆಯುತ್ತಲೇ ಇದ್ದಾರೆ.

ಕ್ತ ಮಾಂಸದೊಳಗಿದ್ದ ಪಾಪಗಳೆಲ್ಲವೂ ’ರಾ’ ಎಂದ ಮಾತ್ರಕ್ಕೆ ನಿರ್ನಾಮವಾಗುತ್ತದೆ ಎಂಬುದು ದಾಸವಾಣಿ. ರಾಮ ನಾಮದ ಒಂದು ಅಕ್ಷರದ ಪ್ರ್ರಭಾವವೇ ಇಷ್ಟು. ಇಂತಹ ಪರಮ ಪವಿತ್ರವಾದ ರಾಮನಾಮದ ಜಪವನ್ನು ಸದಾ ಭಕ್ತರಲ್ಲಿ ಮೂಡಿಸುವಲ್ಲಿ ಶ್ರೀಮಠ ಯಶಸ್ವಿಯಾಗಿದೆ. ಅಂತಹ ಪವಿತ್ರ ನಾಮದ ಶ್ರೀರಾಮನನ್ನು ಸದಾ ಪೂಜಿಸುವ ಸ್ಮರಿಸುವ ಮತ್ತು ಆ ರೀತಿಭಕ್ತರಲ್ಲಿ ಭಕ್ತಿಭಾವ ಮೂಡಿಸುವ ಭಕ್ತಿ ಪ್ರೇರಕ ಕಾರ್ಯ ಶ್ರೀ ಶ್ರೀಗಳವರಿಗೆ ಸದಾ ಪ್ರಿಯ, ವಿಷ್ಣು ಸಹಸ್ರನಾಮ ಜಪಕ್ಕೆ ಸಮನಾದುದು ಶ್ರೀ ರಾಮನಾಮ ಜಪ. ಅಂತಹ ಪವಿತ್ರ ರಾಮ ನಾಮ ಪಾಯಸ ಇಂದು ಶ್ರೀಗಳವರಿಂದ ಭಕ್ತಾಧಿಗಳಿಗೆ ಸದಾ ಉಣಬಡಿಸಲಾಗುತ್ತಿದೆ. ಗೋಪಾಲನೆ, ಗೋಪೋಷಣೆ, ವಿಶ್ವ ಗೋಸಮ್ಮೇಳನ, ವಿಶ್ವ ಮಂಗಳ ಗೋಗ್ರಾಮ ಯಾತ್ರೆ ಮುಂತಾದವುಗಳಿಂದ ಕೃಷ್ಣ ನಾಮ ಸಕ್ಕರೆಯೂ ಸಮಾಜಕ್ಕೆ ಲಭ್ಯವಾಗಿರುವುದು ಸಮಾಜದ ಪುಣ್ಯವೇ ಸರಿ.

ಭಾ ರತದಾದ್ಯಂತ ಶ್ರೀ ಶ್ರೀಗಳವರ ಕೀರ್ತಿ ವ್ಯಾಪಿಸಿದೆ. ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಯಶಸ್ಸು ಇದಕ್ಕೆ ಸಾಕ್ಷಿ. ನಾಮಧೇಯದಲ್ಲಿ “ಭಾರತೀ” ಎಂದು ಇರುವುದು ಅನ್ವರ್ಥವೇ ಆಗಿದೆ. ಒಂದು ರಾಜ್ಯದ ಒಂದು ಭಾಗದಲ್ಲಿ ನೆಲೆಸಿರುವ ಬ್ರಾಹ್ಮಣರ ಒಂದು ಪಂಗಡದ ಭಾಗಶಃ ಭಕ್ತರನ್ನು ಹೊಂದಿರುವ ಶ್ರೀಮಠದ ಪೀಠಾಧಿಪತಿಗಳು ಜಾತಿ ಮತ ರಾಜ್ಯ ಎಲ್ಲ ಎಲ್ಲೆಗಳನ್ನು ಮೀರಿ ರಾಷ್ಟ್ರಾದ್ಯಂತ ಪ್ರಸಿದ್ಧರಾಗಿದ್ದಾರೆ. ವಿಶ್ವಗೋಸಮ್ಮೇಳನದ ರೂವಾರಿಗಳಾಗಿ ಇಂದು ಅವರು ಪ್ರಪಂಚದಾದ್ಯಂತ ಪ್ರಸಿದ್ಧರಾಗಿ ಪ್ರಚಲಿತರಾಗುವ ಮೂಲಕ ಸ್ವಯಂ ಪ್ರಕಾಶಿತರು.

ಮಾರಮಣ ಶ್ರೀಮನ್ನಾರಾಯಣ ಸರ್ವ ಗುಣ ಗ್ರಾಹಿ ಮತ್ತು ಅಭಯ ಹಸ್ತ ಚಾಚುವುದರಲ್ಲಿ ಪ್ರಸಿದ್ಧ. ಅವನ ಆರಾದಕರಾದ ಶ್ರೀಗಳೂ ಆ ಗುಣವನ್ನು ಹೊಂದಿದವರು. ಸಹಸ್ರಾವಧಾನ, ೧೦೮ ಅಡಿ ಶ್ರೀ ಕೃಷ್ಣ ಶಿಲಾ ವಿಗ್ರಹ ಸ್ಥಾಪನೆ ಪ್ರಸ್ತಾವನೆಗಳನ್ನು ನಾನು ಅವರ ಮುಂದಿಟ್ಟಾಗ ಅಸಂಖ್ಯಾತ ಜನ ಬೆಂಬಲ ಮತ್ತು ಕೋಟಿಗಟ್ಟಲೆ ರೂಪಾಯಿ ಖರ್ಚಿನ ಈ ಪ್ರಸ್ತಾವಾನೆಗಳಿಗೆ ಶ್ರೀಗಳು ಹಿಂದು ಮುಂದು ನೋಡದೆ ಕಾರ್ಯಗತಗೊಳಿಸುವ ಉತ್ಸುಕತೆ ತೋರಿಸಿದ್ದು ಅವರ ಹೃದಯ ಶ್ರೀಮಂತಿಕೆಯ ಪ್ರತೀಕ. “ಮನುಷ್ಯ ಪ್ರಸ್ತಾಪಿಸುತ್ತಾನೆ ದೇವರು ವಿಲೇವಾರಿ ಮಾಡುತ್ತಾನೆ” ಇದು ಆಂಗ್ಲ ಗಾದೆ. ಅದೇ ರೀತಿ ನನ್ನ ಪ್ರಸ್ತಾವನೆಗಳು ಕಾರಣಾಂತರಗಳಿಂದ ಕಾರ್ಯಗತವಾಗಿಲ್ಲ ಆದರೆ ಶ್ರೀಗಳ ಅಭಯ ಹಸ್ತ ಇನ್ನೂ ಇದ್ದೇ ಇದೆ ಎಂಬುದು ಸಮಾಧಾನಕರ ಸಂಗತಿ. ಶ್ರೀಗಳವರದು ಮಾತೃ ಹೃದಯ. ನಾನು ಮತ್ತು ನನ್ನ ಶ್ರೀಮತಿ ಶ್ರೀಮಠಕ್ಕೆ ಮೊದಲು ಭೇಟಿ ನೀಡಿದ ದಿನ ಶ್ರೀಗಳವರು ನನ್ನ ಶ್ರೀಮತಿಗೆ ಶ್ರೀಮಠದ ವತಿಯಿಂದ ವಸ್ತ್ರ್ರ ನೀಡಿದಾಗ ಮದುವೆಯಾದ ಹೆಣ್ಣು ಮಕ್ಕಳಿಗೆ ತವರಿನಲ್ಲಿ ವಾತ್ಸಲ್ಯದಿಂದ ನೀಡುವಂತಹ ವಸ್ತ್ರವಿದು ಎಂದು ಆಶೀರ್ವದಿಸಿದ್ದರು. ಅದು ಸದಾ ನಮ್ಮ ನೆನಪಿನಲ್ಲಿ ಹಸಿರಾಗಿಯೇ ಇರುವಂತಹ ಘಟನೆ.

ತೀ ಡಿದಂತೆಲ್ಲ ಗಂಧದ ಕೊರಡು ಸುಗಂಧ ಸ್ರವಿಸುತ್ತದೆ. ಹಾಗೆ ಶ್ರೀಗಳು ಯಾವುದೇ ಕಾರ್ಯಕ್ರಮ ರೂಪಿಸಿದರೂ ಅದರಲ್ಲಿ ಅವರ ಶ್ರಮ ನಿರಂತರವಾಗಿ ಇರುತ್ತದೆ. ಅದರಿಂದ ಸಮಾಜಕ್ಕೆ ನಿರಂತರವಾಗಿ ಒಳ್ಳೆಯದಾಗುತ್ತಲೇ ಇದೆ ಕಾಮದುಘಾ, ಮುಷ್ಠಿ ಭಿಕ್ಷೆ ಯೋಜನೆ, ಗುರುಕುಲ ವಿದ್ಯಾಭ್ಯಾಸ, ಮುಂತಾದುವು ಈ ಸಾಲಿನಲ್ಲಿ ಬರುವ ಅವರ ಹಲವಾರು ಯೋಜನೆಗಳಲ್ಲಿ ಕೆಲವು ಮಾತ್ರ

ಸ್ವಾ ಮಿ ವಿವೇಕಾನಂದರು ’ಶಿಷ್ಯ’ ಎಂಬ ಪದಕ್ಕೆ ಅನ್ವರ್ಥ, ಒಬ್ಬ ಸಮರ್ಥ ಗುರು ಸಿಗುವುದು ಎಷ್ಟು ದುರ್ಲಭವೋ ಅದೇ ರೀತಿ ಶ್ರೇಷ್ಠ ಗುರುವಿಗೆ ಒಬ್ಬ ಸಮರ್ಥ ಶಿಷ್ಯ ಸಿಗುವುದೂ ಅಷ್ಟೇ ದುರ್ಲಭ. ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರ ಗುರುಶಿಷ್ಯ ಸಂಬಂಧ ಇದಕ್ಕೆ ಅತ್ಯಂತ ಉತ್ತಮ ಉದಾಹರಣೆ ಶ್ರೀ ರಾಮಕೃಷ್ಣ ಪರಮ ಹಂಸರು ಅದ್ವಿತೀಯ ಸಾಧಕರು ಮತ್ತು ಶ್ರೇಷ್ಠ ಗುರು ಎಂಬುದರಲ್ಲಿ ಎರಡು ಮಾತಿಲ್ಲ ಅಂತಹ ಅದೆಷ್ಟೋ ಶ್ರೇಷ್ಠರನ್ನು ನಮ್ಮ ಸಾಂಸ್ಕೃತಿಕ ಪರಂಪರೆ ಹೊಂದಿದೆ. ಆದರೆ ಶ್ರೀರಾಮಕೃಷ್ಣ ಪರಮಹಂಸರಷ್ಟು ಅವರೆಲ್ಲ ಪ್ರಸಿದ್ದಿಗೆ ಬಂದಿಲ್ಲ ಇದಕ್ಕೆ ಅವರೆಲ್ಲರಿಗೆ ಸ್ವಾಮಿ ವಿವೇಕಾನಂದರಂತಹ ಪರಮ ಶಿಷ್ಯ ದೊರೆಯದೇ ಇರುವುದು ಕಾರಣ ಸ್ವಾಮಿ ವಿವೇಕಾನಂದರ ಸತತ ಪರಿಶ್ರಮದಿಂದಾಗಿಯೇ ಇಂದು ಶ್ರೀರಾಮಕೃಷ್ಣ ಪರಮಹಂಸರ ಸಾಧನೆಗಳು, ಭೋಧನೆಗಳು ಜಗತ್ತಿಗೆ ತಿಳಿದಿದೆ ಎಂದರೆ ತಪ್ಪಾಗಲಾರದು. “ನನ್ನಂತಹ ನೂರು ಜನ ನಿಸ್ವಾರ್ಥಿ ಯುವಕರನ್ನು ನನಗೆ ಕೊಡಿ, ನಾನು ಇಡೀ ದೇಶದ ಗತಿಯನ್ನು ಬದಲಿಸುತ್ತೇನೆ.” ಎಂದು ಸ್ವಾಮಿ ವಿವೇಕಾನಂದರು ನುಡಿದಿದ್ದರೂ ಅವರಿಗೆ ಅವರಂತಹ ನೂರು ಜನ ಸಿಕ್ಕಲೇ ಇಲ್ಲ, ದೇಶದ ಗತಿಯೂ ಬದಲಾಗಲಿಲ್ಲ. ಆದರೆ ಗುರುವನ್ನು ಬೆಳಕಿಗೆ ತರುವ ಸಮರ್ಥ ಶಿಷ್ಯತ್ವ ಅವರದು ಎಂಬುದು ನಿರ್ವಿವಾದ. ಇಂದು ಶ್ರೀಗಳ ಸ್ವಯಂ ಪ್ರಕಾಶಿತ ಪ್ರತಿಭೆಯಿಂದಾಗಿ ಭಕ್ತಾಧಿಗಳ ಸಂಖ್ಯೆ ಜಾತಿ ಮತ ಪಂಥ, ದೇಶ ಭಾಷೆಗಳನ್ನು ಮೀರಿ ಬೆಳೆದಿದೆ ಬೆಳೆಯುತ್ತಲೇ ಇದೆ. ಶ್ರೀ ಶ್ರೀಗಳ ಚಿಂತನೆ ಆಲೋಚನೆ, ಅವಲೋಕನ ಮತ್ತು ಅನುಷ್ಠಾನಗಳೂ ಬೆಳೆಯುತ್ತಿವೆ. ಅವರ ಈ ಚಿಂತನೆಗಳಿಗೆ ಸ್ವಾಮಿ ವಿವೇಕಾನಂದರಂತೆ ಅಷ್ಟು ಅಲ್ಲದಿದ್ದರೂ ಸ್ವಲ್ಪ ಮಟ್ಟಿಗಾದರೂ ಪ್ರತಿಯೊಬ್ಬ ಶಿಷ್ಯರೂ ಸ್ಪಂಧಿಸುವ ಅವಶ್ಯಕತೆ ಇದೆ. ಅಂತಹ ಪ್ರಯತ್ನ ಮಾಡಲು ನಾವಿಂದು ಕಂಕಣ ಬದ್ಧರಾಗಬೇಕಿದೆ.

ಮಿ ಕ್ಕವರು ಏನೇ ಹೇಳಲಿ, ಹೇಗೇ ಇರಲಿ ಶ್ರೀ ಶ್ರೀಗಳವರದು ಮಾತ್ರ ಮಾದರಿ ನಡವಳಿಕೆ, ಸನ್ಯಾಸಿಗಳು ಸಂಸಾರಿಗಳಾಗುವುದು ಈಗೀಗ ನಡೆಯುತ್ತಿದೆ. ಮಠವೊಂದರ ಪೀಠಾಧಿಪತಿಗಳಾಗಿರುವರು ’ಸನ್ಯಾಸಿಯ ಸಂಸಾರ’ ನಡೆಸಲು ಹೆಣಗಾಡುವುದನ್ನೂ ನಾವು ನೋಡಿದ್ದೇವೆ. ಸನ್ಯಾಸಿಯ ಮುಸುಕಿನಲ್ಲಿಯೇ ಸಕಲ ಭೋಗಗಳನ್ನೂ ಅನುಭವಿಸುವ ಕಪಟ ಸನ್ಯಾಸಿಗಳನ್ನು ನೋಡಿದ್ದೇವೆ. ಆದರೆ ಶ್ರೀ ಶ್ರೀಗಳವರು ಇದಕ್ಕೆಲ್ಲ ಅಪವಾದ. ನಿಷ್ಕಳಂಕವಾದ ಅವರ ನಡೆ ನುಡಿ ಸನ್ಯಾಸತ್ವ ಒಂದು ಮಾದರಿ. ಅವರ ದೀಕ್ಷಾ ನಡವಳಿಕೆಯಲ್ಲಿ ಕಪ್ಪುಚುಕ್ಕೆ ಇಡಲು ಹೊರಟ ಕುಹಕಿಗಳು ಸರಳುಗಳ ಹಿಂದೆ ಸರಿದಿದ್ದಾರೆ ಅಷ್ಟರ ಮಟ್ಟಿಗೆ ಶ್ರೀ ಶ್ರೀಗಳವರು ಶುದ್ಧರು ಮತ್ತು ತಾಪಸಿಗರು. ಇಂತಹ ಪರಮ ಶ್ರೇಷ್ಟ.

’ಗುರು ಸಮ್ಮುಖ’ ನಮಗೆ ಸದಾ ಇರಲಿ ಎಂದು ಭಕ್ತವೃಂದ ಹಾರೈಸುವುದರಲ್ಲಿ ಆಶ್ಚರ್ಯವೇನೂ ಇಲ್ಲ

“ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ “

ಪರಿಚಯ:
ಶ್ರೀಯುತ ಲಕ್ಷ್ಮೀನಾರಾಯಣಪ್ಪನವರು   ೧೯-೦೩-೧೯೫೦ರಂದು ಶ್ರೀಮತಿ ಇಂದಿರಮ್ಮ ಮತ್ತು ಚೇಳೂರು ಶ್ರೀಕಂಠಯ್ಯ ದಂಪತಿಗಳ ಮೊದಲ ಪುತ್ರನಾಗಿ ಶಿರಾ ತಾಲೂಕಿನ ತಾಳಗುಂದದಲ್ಲಿ ಜನಿಸಿದ್ದು ಪ್ರಾಥಮಿಕ ಶಿಕ್ಷಣವನ್ನು      ತಾಳಗುಂದದಲ್ಲಿ ಪೂರೈಸಿ, ಮೈಸೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಸ್ನಾತಕ ಪದವಿಯನ್ನು ಪಡೆದು ೧೯೭೩ರಲ್ಲಿ ಸರಕಾರಿ ಸೇವೆಗೆ ಸೇರಿರುತ್ತಾರೆ.
೧೯೭೬ರಲ್ಲಿ ಮದ್ರಾಸಿನ ಐ. ಬಿ. ಎಮ್. ಸಂಸ್ಥೆಯಿಂದ ಎಮ್. ಬಿ. ಎ. ಪದವಿಯನ್ನು ಪಡೆದಿದ್ದು,  ೧೯೭೮ರಲ್ಲಿ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ  ಸ್ನಾತಕೋತ್ತರ ಪದವಿಯನ್ನು ಕೂಡಾ ಪಡೆದಿರುತ್ತಾರೆ. ಇವರು ಹಲವಾರು ಲೇಖನಗಳು / ಪುಸ್ತಕಗಳನ್ನು ಬರೆದಿದ್ದು ೨೦೦೩ರಲ್ಲಿ ಅಮೆರಿಕದ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಿಂದ  ಡಾಕ್ಟರೇಟ್ ಪದವಿಯನ್ನೂ ತಮ್ಮದಾಗಿಸಿಕೊಂಡಿರುತ್ತಾರೆ. ೧೯೭೩ ರಿಂದ ೨೦೦೮ ವರೆಗೆ ಸರಕಾರದ ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ತಾಲೂಕು ತಹಸೀಲ್ದಾರರು ಹಾಗೂ ಕಾರ್ಯ ನಿರ್ವಾಹಕ

ದಂಡಾಧಿಕಾರಿಯಾಗಿಯೂ ೮ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ಸರಕಾರಿ ಸೇವೆಯಿಂದ ನಿವೃತ್ತರಾಗಿರುತ್ತಾರೆ.
ವಿವಿಧ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಇವರ ಸರಕಾರಿ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಪ್ರಶಸ್ತಿಗಳ ಸರಮಾಲೆ ಇವರಿಗೆ ಸಂದಿರುತ್ತದೆ. ಅವುಗಳೆಂದರೆ ೨೦೦೩ರಲಿ ಸಾಹಿತ್ಯ ಸಿರಿ ಮತ್ತು ಸಾಹಿತ್ಯ ಸೌರs, ವಿಶಿಷ್ಠ ಸಮಾಜ ಸೇವೆಗಾಗಿ ೨೦೦೭ರಲ್ಲಿ ಸೇವಾ ದುರಂಧರ ಪ್ರಶಸ್ತಿ ಅಲ್ಲದೇ ಅದೇ ವರ್ಷದಲ್ಲಿ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸಿ, ಸುವರ್ಣ ಕರ್ನಾಟಕ ರತ್ನ ಪ್ರಶಸಿ ಮತ್ತು ಸುವರ್ಣ ಶ್ರೀ ಪ್ರಶಸ್ತಿಯ ಗೌರವಗಳನ್ನೂ ಕೂಡಾ ತಮ್ಮದಾಗಿಸಿಕೊಂಡಿದ್ದಾರೆ. ೨೦೦೮ನೇ ಸಾಲಿನಲ್ಲಿ ಜೀವಮಾನದ ವಿಶಿಷ್ಠ
ಸಾಧನೆಗಳಿಗಾಗಿ ಶ್ರೀ ಕೃಷ್ಣದೇವರಾಯ ಪ್ರಶಸ್ತಿಗೂ ಭಾಜನರಾಗಿರುವರು. ಶ್ರೀ ಗುರು ರಾಘವೇಂದ್ರ ಸದ್ಭಾವನಾ ಪ್ರಶಸ್ತಿಯು ಕೂಡಾ ಅದೇ ವರ್ಷ ಬಂದಿರುತ್ತದೆ. ಇವುಗಳಲ್ಲದೇ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಗೆ ದಾಖಲೆ ಸಂಖ್ಯೆಯ ಸದಸ್ಯರನ್ನು ಸೇರ್ಪಡಿಸಿದ್ದಕ್ಕಾಗಿ ೨೦೦೬ ರಲ್ಲಿ ಕರ್ನಾಟಕ ರಾಜ್ಯಪಾಲರಿಂದ ವಿಶೇಷ ಶ್ಲಾಘಗೆ ಪಾತ್ರರಾಗಿದ್ದಾರೆ ಮತ್ತು ಶ್ರೀಯುತರ ವಿಶಿಷ್ಠ ಸರಕಾರಿ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರವು ೨೦೦೭ರಲ್ಲಿ ನಾಗರಿಕ ಸೇವಾ ಪ್ರಶಸಿಯನ್ನು ಕೂಡಾ ನೀಡಿ ಗೌರವಿಸಿದೆ.
ಶ್ರೀಮಠದ ಸದ್ಭಕ್ತರಾದ ಇವರು ೨೦೦೮ರಿಂದ ಶ್ರೀಗುರು ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ರೀಕರಾರ್ಚಿತ ದೇವತಾನುಗ್ರಹ ಹಾಗೂ ಶ್ರೀಗುರುಗಳ ದಿವ್ಯಾಶೀರ್ವಾದ ಯಾವತ್ತೂ ಇವರ ಮೇಲಿರಲಿ ಎಂದು ಹಾರೈಕೆ
Facebook Comments