ಚಿ. ಕೃಷ್ಣಾನಂದ ಶರ್ಮ ಯುವ ಚಿಂತಕ, ಉತ್ಸಾಹಿ ಸಾಹಿತಿ.

ಲೇಖಕ ಕೃಷ್ಣಾನಂದ ಶರ್ಮ

ಲೇಖಕ ಕೃಷ್ಣಾನಂದ ಶರ್ಮ


ತಮ್ಮ ವಿಶಿಷ್ಟ ಬರವಣಿಗೆ ಶೈಲಿಯಿಂದ ಸಮಾಜವನ್ನು ತಲುಪುತ್ತಿದ್ದಾರೆ.
ವೇದ, ಜ್ಯೋತಿಷ್ಯ, ಸಂಸ್ಕೃತ ಅಧ್ಯಯನವನ್ನು ಪೂರೈಸಿ ಪ್ರಸ್ತುತ ಶ್ರೀಮಠದ “ಧರ್ಮಭಾರತೀ” ಪತ್ರಿಕೆಯ ಉಪಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹನುಮ ಜಯಂತಿಯ ಪ್ರಯುಕ್ತ ಧರ್ಮಭಾರತೀ ಪತ್ರಿಕೆಯಲ್ಲಿ ಪ್ರಕಟವಾದ “ಹನುಮ ಚರಿತೆ” ಎಂಬ ಲೇಖನವನ್ನು ಹರೇರಾಮದ ಆಸ್ತಿಕ ಓದುಗರಿಗಾಗಿ ಕಂತುಗಳಲ್ಲಿ ಮರುಪ್ರಕಟಿಸುತ್ತಿದ್ದೇವೆ.
ಲೇಖನದ ಕರ್ತೃ ಚಿ. ಕೃಷ್ಣಾನಂದ ಶರ್ಮರಿಗೂ, ಪ್ರಕಟಣೆಯ ಕೃಪೆಯಿತ್ತ ಧರ್ಮಭಾರತಿಗೂ ಕೃತಜ್ಞತೆಗಳು.

~

ಹನುಮ ಚರಿತೆ : ಭಾಗ 01

ಛೆ!! ಅದು ಸಾದ್ಯವೇ ಇಲ್ಲ? ಎಂಬ ಭಾವ, ಎಷ್ಟೇ ಧೈರ್ಯ ತಂದು ಕೊಂಡರೂ ಮನದಲ್ಲಿ ಕಂಡರೂ ಕಾಣದಂತೆ, ಕಾಣದಿದ್ದರೂ ಕಂಡಂತೆ ಕೂಕಿ ಹಾಕುತಿತ್ತು; ಸಾಧ್ಯತೆಯ ಸಕಾರಾತ್ಮಕ ಚಿಂತನೆಯನ್ನು ಕುಹಕವಾಡುತಿತ್ತು.
ಅದು ದಕ್ಷಿಣ ದಿಶೆಯ ಕಡಲ ಕಿನಾರೆ. ಅಲ್ಲಿ ಕಡಲ ಒಡಲ ಆಳ-ಅಗಲಗಳನ್ನು ನೋಡಿ ಕಕ್ಕಾಬಿಕ್ಕಿಯಾಗಿದ್ದ ಕಪಿ ಸೈನ್ಯ. ಅವರೆಲ್ಲರ ಮನದ ಮೈದಾನದಲ್ಲಿ ಮೇಲೆ ಉಲಿದಂತೆ ಭಾವವೆರಡರ ಹೊಯ್ದಾಟ. ಒಂದೆಡೆ ಸೀತೆಯನ್ನು ಹುಡುಕಿ ಬರಬೇಕೆಂಬ ತನ್ನೊಡೆಯನ ಆದೇಶ ಈಡೇರಿಸಿ ಬಿಡುವ ಭಾವಾವೇಶ; ಇನ್ನೊಂದೆಡೆ ಒಡನೆಯೇ ವಾರಿಧಿ ವೈಶಾಲ್ಯವನ್ನು ಕಂಡು ಎದೆಯಲ್ಲಿ ಢುಕಿಢುಕಿ!
ಜಾನಕಿಯ ಅನ್ವೇಷಣೆಗೆ ನೂರು ಯೋಜನ ವಿಸ್ತೀರ್ಣದ ಸಮುದ್ರದಂತಹ ಸಮುದ್ರದ ಮೇರೆ ಮೀರಿ ಮೆರೆಯುವ ಮೋರೆ ಯಾರದ್ದೆಂದು ಕೇಳಲು ವಾನರಪತಿಸುತ ಅಂಗದ ಆ ಸಭೆಯಲ್ಲಿ ಮೇಲೆದ್ದು, ಇಂತೆಂದ . . .

ಕಪಿವರರೇ,
ಯಾರು?….. ಯಾರು?…… ಯಾರು?
ನಮ್ಮ ಬದುಕನ್ನು ಬದುಕಿಸುವ ಬಲವಂತನಾರು?
ಒಡೆಯ ಸುಗ್ರೀವನನ್ನು ಸತ್ಯಸಂಧನನ್ನಾಗಿಸುವ ಬಂಧುವದಾರು?
ಬಂದ ಕಾರ್ಯ ಸಾಧಿಸಿ ರಾಮಾದಿಗಳ ದುಗುಡಕೆ ವಿರಾಮವಿಡುವವರಾರು?
ಯಾರು?….. ಯಾರು?…… ಯಾರು?

ಬಹುಶಃ ವಾನರರಿಗೆ ಈ ಪ್ರಶ್ನೆಗಳಿಗಿಂತ ಸಮುದ್ರದ ತಿಮಿಂಗಿಲಗಳೇ ಸಾಚಾದಂತೆ ಕಂಡಿರಬಹುದು!
ಹಾಗಾಗಿ ಆ ಪ್ರಶ್ನೆಗಳಿಗೆ ಉತ್ತರ ಹುಟ್ಟಲಿಲ್ಲ. ಮತ್ತಷ್ಟು ಪ್ರಶ್ನೆಗಳೇ ಹುಟ್ಟಿದವು.
ಮತ್ತೆ ಮುಂದುವರಿದ ಅಂಗದ….
ನೀವು ಸತ್ಕುಲ ಪ್ರಸೂತರು, ಗೌರವಾರ್ಹರು, ಸಾಮರ್ಥ್ಯಶಾಲಿಗಳು. ನೀವು ಈ ಸಮುದ್ರವನ್ನು ಎಷ್ಟು ದೂರ ಹಾರಬಲ್ಲಿರಿ?” ಎಂದು ತನ್ನ ಕಪಿಸೈನ್ಯವನ್ನು ಪ್ರಶ್ನಿಸಿದ.
ಸಗರ ಜಂತುಗಳಿಂದ ತುಂಬಿದ್ದ ಆ ಸಾಗರದ ಗಾಂಭೀರ್ಯವನ್ನೂ, ತನ್ನಲ್ಲಿಗೆ ಬಂದವರನ್ನು ಮತ್ತು ಎಂದೂ ಮನೆಗೆ ಕಳುಹಿಸದ ಅದರ ಆತಿಥ್ಯದ ಔದಾರ್ಯವನ್ನೂ ಕಂಡು, ಹಾರುತ್ತೇನೆಂದರೆ ಅದಕ್ಕೆ ಎಂಟೆದೆ ಬೇಕು!
ಪ್ರಾಯಶಃ ಕಪಿಗಳ ಎದೆಯಲ್ಲಿ ಅಂಗದನ ಸ್ಫೂರ್ತಿಯುತ ಮಾತುಗಳು ಭಾವವಾಗಿ ಸ್ಫುರಣೆಗೊಂಡಿರಬೇಕು. ಹಾಗಾಗಿ ಒಬ್ಬೊಬ್ಬರೇ, ತಮ್ಮ ಪ್ರಾಬಲ್ಯದ ಗೆರೆಯನ್ನು ತೆರೆದಿಡಲಾರಂಬಿಸಿದರು.
ಗಜ ? ’ಹತ್ತು ಯೋಜನ ಹಾರಬಲ್ಲೆ? ಎಂದ
ಗವಾಕ್ಷ ? ’ಇಪ್ಪತ್ತು’
ಗವಯ ? ’ಮೂವತ್ತು’
ಶರಭ ? ’ನಲವತ್ತು’
ಗಂಧಮಾದನ ? ’ಐವತ್ತು’
ಮೈಂದ ? ’ಅರುವತ್ತು’
ದ್ವಿವಿದ ? ’ಎಪ್ಪತ್ತು’
ಸುಷೇಣ ? ’ಎಂಭತ್ತು’
ಹೀಗೆ ಸಾಗಿತು ಹಾರುವವರ ಯಾದಿ.

ಇವರಲ್ಲಿ ಯಾರನ್ನಾದರೂ ಕಳುಹಿಸಿದ್ದರೆ ಇನ್ನಿತರ ಕಪಿಗಳಿಗೆ ಸೀತೆಯನ್ನು ಹುಡುಕುವ ಕಾರ್ಯದ ಜೊತೆ, ಸಮುದ್ರದಲ್ಲಿ ಆ ಕಪಿಯ ಅಸ್ಥಿ ಹುಡುಕುವ ಅನಿವಾರ್ಯತೆಯೂ ಎದುರಾಗುತ್ತಿತ್ತು!! ಪುಣ್ಯ, ಕಳುಹಿಸಲಿಲ್ಲ! ದೇವರು ದೊಡ್ಡವನು!
ಗಂಭೀರವಾಗಿ ಯೋಚಿಸಿದರೆ ಅವರಂದು ಬಿಚ್ಚಿಟ್ಟದ್ದು ತಮ್ಮ ಬಲವನ್ನಲ್ಲ; ಅಂದಿನವರೆಗೆ ಬಚ್ಚಿಟ್ಟಿದ್ದ ರಾಮಪ್ರೇಮವನ್ನು!
ಆ ಕಾರ್ಯ ಪೂರೈಸಲು ತಮಗಿದ್ದ ಛಲವನ್ನು!
ಎಷ್ಟು ಚೆನ್ನು ಅವರ ಭಾವ!! ಅಬ್ಬಾ!!
ಈಗ ವೃದ್ಧ ಜಾಂಬವಂತನ ಸರದಿ ….
ಆತ ತನ್ನ ಯೌವನದಲ್ಲಿದ್ದ ಬಲದ ವೈಭವನ್ನು ವರ್ಣಿಸಿ, ತಾನು ಈಗ “ತೊಂಭತ್ತು ಯೋಜನ ಹಾರಬಲ್ಲೆ” ಎಂದ.
ಅವನಿಗೆ ಹಾರಲು ಮನವಿತ್ತು; ವಯಸ್ಸಿರಲಿಲ್ಲ!

ಪ್ರಶ್ನಿಸಿದ್ದ ಯುವರಾಜ ಅಂಗದ ತಾನೇ ಎದ್ದು ನಿಂತು….
“ನಾನು ನೂರು ಯೋಜನೆ ಹಾರಬಲ್ಲೆ. ಹಿಂದಿರುಗಿ ಬರುವ ವಿಶ್ವಾಸವಿಲ್ಲ” ಎಂದ.
ಜಾಂಬವಂತ….. ಅಂಗದನಿಗೆ “ನೀನು ಸಾವಿರ ಯೋಜನ ಬೇಕಾದರೂ ಹಾರಬಲ್ಲೆ. ಯುವರಾಜನಾಗಿ ನೀನು ಹೋಗುವುದು ನೀತಿಶಾಸ್ತ್ರಕ್ಕೆ ಅಸಮ್ಮತ. ನೀನೆಂದೂ ದೂತನಾಗಬಾರದು” ಎಂದರುಹಿದ.
ಈಗ ಮತ್ತದೇ ಪ್ರಶ್ನೆ!
ಮತ್ತದೇ ಉತ್ತರ!
ಮತ್ತದೇ ದುಗುಡ!
ಅಂಗದನನ್ನು ಸಮಾಧಾನಪಡಿಸಿದ ಜಾಂಬವಂತ ಅನಂತರ “ನಾನು ಈ ಕಾರ್ಯಸಾಧನೆಗೆ ಒಬ್ಬ ಸಮರ್ಥನಾದವನನ್ನು ಪ್ರಚೋದಿಸುತ್ತೇನೆ’ ಎಂದ
~*~

’ಧರ್ಮಭಾರತೀ’ಯಲ್ಲಿ ಪ್ರಕಟಗೊಂಡ ಲೇಖನ "ಹನುಮ ಚರಿತೆ"

’ಧರ್ಮಭಾರತೀ’ಯಲ್ಲಿ ಪ್ರಕಟಗೊಂಡ ಲೇಖನ “ಹನುಮ ಚರಿತೆ”

ಆಂಜನೇಯ!!!
ಅದು, ಎಲ್ಲ ಕಪಿಗಳು ದಿಕ್ಕು ತೋಚದೇ ಕಕ್ಕಾಬಿಕ್ಕಿಯಾಗಿ ಕುಳಿತಿದ್ದಾಗ, ಅಲ್ಲಿ ಚಿಂತೆಯ ಕಾರ್ಮೋಡವೇ ಕವಿದಿದ್ದಾಗ, ಜಾಂಬವಂತನ ಮನದ ಆಗಸದಲ್ಲಿ ಮಿಂಚಿದ ಹೆಸರು.
ಅದು ನೇಸರನ ಬೇಸರ ಕಳೆದ ಹೆಸರು; ಸಾಸಿರ ಜೀವಗಳಿಗೆ ಆಸರೆಯಾದ ಹೆಸರು!
ಎಲ್ಲ ವಾನರರು ಆ ಭಯಂಕರ ಪ್ರಶ್ನೆಗೆ ಉತ್ತರ ಹುಡುಕುವಾಗ, ಹನುಮನೂ ’ಏನನ್ನೋ’ ಹುಡುಕುತ್ತಾ ಏಕಾಂತವನ್ನಾಶ್ರಯಿಸಿ ಮುನಿಭಾವದಲ್ಲಿ ಕುಳಿತಿದ್ದ!
ಅವನೂ ಉತ್ತರ ಹುಡುಕುತ್ತಿದ್ದಿರಬಹುದಾ!
ಬಹುಶಃ!
ಪ್ರಶ್ನೆಯೇ ಉತ್ತರವನ್ನರಸುವುದು ಸಹಜ. ಆದರೆ ಯಾವ ಭಯಂಕರ ಪ್ರಶ್ನೆಗೆ ಯಾರು ಉತ್ತರವೋ, ಆ ಉತ್ತರವೇ ಉತ್ತರವನ್ನರಸಿ ಹೊರಟರೆ, ಪ್ರಶ್ನೆಯಲ್ಲದೆ ಮತ್ತೇನು ಸಿಗಬೇಕು?
ಇತರ ವಾನರರು ಉತ್ತರಕ್ಕಾಗಿ ಸುತ್ತೆಲ್ಲ ಹುಡುಕಿದರೆ, ಅದು ಸರಿ. ಹಾಗೆ ಹನುಮ ಅರಸಿದರೆ? ಅದಕ್ಕೆ ಉತ್ತರ ಸಿಗದು. ಏಕೆಂದರೆ ಸಮುದ್ರೋಲ್ಲಂಘನೆಯ ಪ್ರಶ್ನೆಗೆ ಉತ್ತರವಾಗುವ ವೀರ್ಯ ಮತ್ತು ಶೌರ್ಯಗಳು ಹನುಮನ ಹೃದಯಬಾಂದಳದಲ್ಲಿ ತಳವೂರಿ ಕುಳಿತಿದ್ದವು! ತನ್ನೊಳಗಿರುವ ಉತ್ತರ, ಸುತ್ತೆಲ್ಲ ನೆತ್ತರ ಬಸಿದು ಹುಡುಕಿದರೂ ಸಿಗದು.
ಆದರೆ ವೃದ್ಧ ಜಾಂಬವಂತನಿಗೆ ಸಿಕ್ಕಿತು! ಅವನು ಹನುಮನನ್ನು ಸಂಧಿಸಿದ ಮತ್ತು ಇಂತೆಂದ….
“ಓ ವಾಯುಪುತ್ರ, ನೀನು ಕಸುವು ಮತ್ತು ಬಿರುಸುಗಳಲ್ಲಿ ಆ ವೈನತೇಯನಿಗಿಂತಲೂ ಲೇಸು.
ತೇಜಸ್ಸಿನಲ್ಲಿ ರಾಮನಿಗೆ ಸಮ. ಬುದ್ಧಿ ಮತ್ತು ಸತ್ತ್ವಗಳಲ್ಲಿ ನಿನಗೆ ಇದಿರಿಲ್ಲ….
ಇಷ್ಟೆಲ್ಲ ನಿನ್ನಲ್ಲಿದ್ದರೂ ಹೀಗೇಕೆ ಮೌನದಿಂದ ಕುಳಿತಿರುವೆ? ನಿನ್ನಲ್ಲಿರುವ ಸಾಮರ್ಥ್ಯದ ಅರಿವು ನಿನಗೇ ಏಕೆ ಆಗಿಲ್ಲ?”
ಜಾಂಬವಂತ ಈ ಪ್ರಶ್ನೆ ಕೇಳಿದ್ದು ಹನುಮನಿಗೋ ಅಥವಾ ಹನುಮನನ್ನು ನೆಪವಾಗಿಟ್ಟುಕೊಂಡು ಇಡೀ ಲೋಕಕ್ಕೋ ಎನ್ನುವ ಸಂಶಯವಿದೆ.
ಏಕೆಂದರೆ ನಮ್ಮ ಸಾಮರ್ಥ್ಯವನ್ನು ನಾವರಿಯದಿರುವ ಸಮಸ್ಯೆ ಕೇವಲ ಆ ವಾನರನದಲ್ಲ; ನರರದ್ದೂ ಕೂಡ!
ಈ ಸಮಸ್ಯೆ ಒಂದು ಕಾಲ, ಒಂದು ದೇಶಕ್ಕೆ ಸೀಮಿತವಲ್ಲ. ಏಕೆಂದರೆ ಎಲ್ಲೆಲ್ಲೂ, ಎಂದೆಂದಿಗೂ ಇರುವ ಸಮಸ್ಯೆಯದು. ಈ ಸಮಸ್ಯೆಯ ಬಗೆಹರಿಸುವಿಕೆಗೆ ಬಗೆಬಗೆಯ ಉಪಾಯ ಬೇಡ. ಜಾಂಬವಂತನ ಪ್ರಶ್ನೆಯನ್ನು ಅನ್ವಯಿಸಿಕೊಳ್ಳಬೇಕಷ್ಟೆ.

* * * *

ಜಾಂಬವಂತ ಹನುಮನ ಹುಟ್ಟು ಮತ್ತು ಅಂತವಿಲ್ಲದ ವೃತ್ತಾಂತವನ್ನು ಹೇಳಲು ಉಪಕ್ರಮಿಸಿದ…..

(ಸಶೇಷ)

~

  • ಲೇಖನ ಕೃಪೆ: ಧರ್ಮಭಾರತೀ
  • ಲೇಖಕರ ಸಂಪರ್ಕ ಪುಟ
Facebook Comments Box