LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಇದು ಭಾಗ್ಯ….. ಶ್ರೀ ಚರಣ ಸೇವೆ ಪರಮ ಸುಖವಯ್ಯ…… – ಕೆ. ನಾರಾಯಣ ಭಟ್ಟ ಬೆಳ್ಳಿಗೆ

Author: ; Published On: ಸೋಮವಾರ, ನವೆಂಬರ 22nd, 2010;

Switch to language: ಕನ್ನಡ | English | हिंदी         Shortlink:

ಪ್ರಥಮ ದರ್ಶನ :

ಸುಮಾರು ಹದಿನೇಳು ವರ್ಷಗಳ ಹಿಂದೆ ೨೦.೦೪.೧೯೯೪ರ ಅಪರಾಹ್ನ; ನಾವು ಹಲವು ಸಮಾನ ಮನಸ್ಕರು ಸೇರಿ ಉಕ್ಕಿನಡ್ಕದ ಪರಿಸರದಲ್ಲಿ ಶ್ರಮದಾನ ಮಾಡುತ್ತಿದ್ದ ಸಂದರ್ಭ ಅದಾಗಿತ್ತು. ಆ ನಡುವೆ ಅದೇನೋ ಒಮ್ಮೆಲೆ ಸಂಚಲನವೊದು ಘಟಿಸಿದ ಅನುಭವ. ನಮ್ಮ ಪೀಠದ ಉತ್ತರಾಧಿಕಾರಿ ‘ಶಿಷ್ಯ’ರಾಗಿ ಆಯ್ಕೆಯಾದ ಶ್ರೀ ಶ್ರೀಗಳು ತಮ್ಮ ಪೂರ್ವಾಶ್ರಮದ ಆಪ್ತೇಷ್ಟರ ಕೊನೆಯ ಭೇಟಿಗಾಗಿ ಹೊರಟವರು (ಕಾರ್ಯಾಡಿಗೆ) – ನಾವು ಶ್ರಮದಾನ ಮಾಡುತ್ತಿದ್ದಲ್ಲಿಗೂ ಆಗಮಿಸಿದ ಅಪೂರ್ವ ಕ್ಷಣ. ಸೇರಿದ್ದ ಎಲ್ಲರನ್ನೂ ಮಾತಾಡಿಸಿದ ಶುಭ್ರ ಶ್ವೇತವಸನಧಾರಿ, ಹೊಳೆವ ಕಂಗಳ, ಹಸನ್ಮುಖಿ; ಎಲ್ಲರೊಡನೆ ಕ್ಷಣಮಾತ್ರದಲ್ಲಿ ಒಂದಾಗುವ ಸ್ನೇಹ ಜೀವ. ಸ್ವಲ್ಪ ಸಮಯದನಂತರ ನಿರ್ಗಮಿಸುವಾಗ ನಾವೆಲ್ಲ ಸ್ತಬ್ಧ; ಅದೇನೋ ಅವರ್ಣನೀಯ ಆನಂದ. ಮುಂದಿನ ಸಂಬಂಧಗಳಿಗೆಲ್ಲ ಅಂದೇ ಬೀಜಾರೋಪ ಆಯಿತೋ ಏನೋ!!

ಚಿತ್ತಾಪಹಾರಕ ‘ಗುರು’:

ಶ್ರೀ ಶ್ರೀಗಳವರ ‘ಶಿಷ್ಯ ಪರಿಗ್ರಹ’ ಹಾಗೂ ‘ಪೀಠಾರೋಹಣ’ ಕಾರ್ಯಕ್ರಮದಲ್ಲಿ ಭಾಗವಹಿಸಲಾಗದ ನತದೃಷ್ಟನಾದರೂ; ಹೋಗಿ ಬಂದವರ ಅನುಭವ ಕೇಳಿ, ಪೀಠಾರೋಹಣದ ಅಮೃತವಾಣಿಯನ್ನು ಧ್ವನಿ ಸುರುಳಿ ಮೂಲಕ ಸವಿದಾಗ ಅದನ್ನು ಮತ್ತೆ ಮತ್ತೆ ಕೇಳಬೇಕೆಂದು ಮನಸ್ಸು ಹಂಬಲಿಸಿತು. ನಂತರ ಚಾತುರ್ಮಾಸ್ಯದ ದಿನಗಳಲ್ಲಿ ದರ್ಶನಕ್ಕೆಂದು ಹೋದಾಗ ಎಷ್ಟೋ ವರ್ಷಗಳ ಹಿಂದಿನ ಪರಿಚಯವೋ ಎಂಬಂತೆ ಮಾತನಾಡಿಸಿ ಶ್ರೀಗಳು ಆಶೀರ್ವದಿಸಿದ್ದರು. ಮುಂದೆ ಸೀಮಾ ಪ್ರವಾಸದ ಸಂದರ್ಭ; ಬದಿಯಡ್ಕದ ಪುರಪ್ರವೇಶದ ಸಭಾಕಾರ್ಯಕ್ರಮದಲ್ಲಿ ಶ್ರೀಗಳವರ ಅಮೃತವಾಣಿಯನ್ನು ಕೇಳುವ ಭಾಗ್ಯ. ನಂತರದ ದಿನಗಳಲ್ಲಿ ಶ್ರೀ ಸವಾರಿ ಹೋದಲ್ಲೆಲ್ಲ (ಹೆಚ್ಚು ಕಡಿಮೆ ಪ್ರತಿದಿನ) ಆಶೀರ್ವಚನದ ಸಮಯಕ್ಕೆ ಸರಿಯಾಗಿ ನಾನು ಹಾಜರಾಗುತ್ತಿದ್ದೆ. ಕೇಳಿದಷ್ಟು ದಿನದಿಂದ ದಿನಕ್ಕೆ ಅದೇನೋ ರೋಮಾಂಚನದ ಹೊಸ ಅನುಭವ; ಇನ್ನೂ ಕೇಳಬೇಕೆಂದೆನಿಸುವ, ಶ್ರೀಗಳ ದರ್ಶನ ಬೇಕೆಂಬ ಅದಮ್ಯ ಹಂಬಲ. ಸ್ವಂತ ಕಾರ್ಯಾಲಯ ಹಾಗೂ ಗೃಹಕಾರ್ಯಗಳ ಒತ್ತಡವೂ ಇತ್ತು. ಆದರೂ ಹೋಗದಿರಲಾಗುತ್ತಿರಲಿಲ್ಲ. ಹಾಗೆ ಹೋದಾಗ ಹಿಂದೆಲ್ಲೋ ಓದಿದ್ದ ವಾಕ್ಯ ನೆನಪಾಗುತ್ತಿತ್ತು. ಯಾರ ದರ್ಶನಕ್ಕೆ, ಯಾರ ವಾಣಿಗಾಗಿ ಮನಸ್ಸು ಮತ್ತೆ ಮತ್ತೆ ಹಂಬಲಿಸುವುದೋ ಯಾರ ದರ್ಶನದಿಂದ, ವಾಣಿಯಿಂದ ಮೈಯಲ್ಲಿ ರೋಮಾಂಚನವಾಗುವುದೋ ‘ಅವನೇ ಗುರು’.  ಶ್ರೀಗಳ ದರ್ಶನ, ವಾಣಿಯಿಂದ ನನ್ನಲ್ಲಿ ಅದೇನೋ ರೋಮಾಂಚನದ ಹೊಸ ಹೊಸ ಅನುಭವವಾದಾಗ, ಬಾಳ ಕತ್ತಲೆಯನ್ನು ಹೋಗಲಾಡಿಸುವ ‘ಗುರು’ ಸಿಕ್ಕಿದ ಭಾವತರಂಗಗಳೆದ್ದವು.

ಸೇವಾ ಕೈಂಕರ್ಯಕ್ಕೆ ನಾಂದಿ :

ಶ್ರೀಸವಾರಿಯ ಅಂಗವಾಗಿ ಕುಂಟಿಕಾನ ಶ್ರೀಶಂಕರನಾರಾಯಣ ಮಠದಲ್ಲಿ ಒಂದು ಮೊಕ್ಕಾಂ ಇತ್ತು. ಅದಕ್ಕಾಗಿ ಅಂದಿನ ಆಡಳಿತ ಸಮಿತಿಯವರು ನನ್ನಲ್ಲಿ ಶ್ರೀಸವಾರಿಯ ಮೊಕ್ಕಾಂ ಸೌಕರ್ಯಗಳಿಗನುಗುಣವಾಗಿ ಅಲ್ಲಿಯ ಗೋಪುರದಲ್ಲಿ ಕೆಲವೊಂದು ಮಾರ್ಪಾಡುಗಳ ಕಾಮಗಾರಿಯನ್ನು ಮಾಡಿಸಿಕೊಡಲು ಹೇಳಿದರು. ನನ್ನ ವೃತ್ತಿಪರ ಸೇವೆಯ ನಂತರ ನನ್ನಲ್ಲಿ ಸಂಭಾವನೆ ಬಗ್ಗೆ ಕೇಳಿದಾಗ ನಾನು ಏನು ಹೇಳಬೇಕೆಂದು ತಿಳಿಯದ ಸ್ಥಿತಿಗೆ ಬಂದೆ. ಮರುಕ್ಷಣವೇ ಈ ಕೆಲಸಕ್ಕೆ ನನಗೆ ಏನೂ ಬೇಡ ಎಂದೆ. ಮುಂದೆ ಶೀಸವಾರಿ ಬಂದು ಮೊಕ್ಕಾಂ ಹೂಡಿದಾಗ ಶ್ರೀಗಳವರ ದರ್ಶನದ, ಆಶೀರ್ವಚನ ಕೇಳುವ ಹಂಬಲದಲ್ಲಿ ಹೋದ ನನ್ನನ್ನು ಆಡಳಿತ ಸಮಿತಿಯವರು ಶ್ರೀಗಳೊಂದಿಗೆ ವೈಯುಕ್ತಿಕವಾಗಿ ಭೇಟಿ ಮಾಡಿಸಿ ಪರಿಚಯಿಸಿದರು. ಮಂತ್ರಾಕ್ಷತೆಯನ್ನು ಅನುಗ್ರಹಿಸುತ್ತಾ ಶ್ರೀಗಳು ಒಂದು ಕ್ಷಣ ಕಣ್ಮುಚ್ಚಿ ತೆರೆದು, ನಿನ್ನ ಸೇವೆ ಪೀಠಕ್ಕೆ ಇನ್ನೂ ಬೇಕು ಎಂದರು. ನಾನು ಮೂಕನಾಗಿಬಿಟ್ಟೆ. ಶ್ರೀಗಳವರಲ್ಲಿ ಹೇಗೆ ಮಾತಾಡಬೇಕು, ಏನು ಹೇಳಬೇಕು ಎಂದು ಅರಿಯದ ಮಂದಮತಿ. ಕೊನೆಗೂ ಹೇಳಿದೆ ‘ಎನ್ನಂದ ಎಡಿಗಾದ್ದರ ಮಾಡುತ್ತೆ.’ ಆಗ ಶ್ರೀ ಸಂಸ್ಥಾನದವರ ಮನಸ್ಸಿನಲ್ಲಿ ಏನಿತ್ತೋ? ಅವರ ಯೋಜನೆಗಳ ಬಗ್ಗೆ ಆಗ ಏನೂ ತಿಳಿದಿರಲಿಲ್ಲ. ಆದರೆ ಈಗ ಅನಿಸುವುದಿಷ್ಟು – ಅವರು ಎಲ್ಲರ, ಎಲ್ಲವನ್ನೂ ಬಲ್ಲವರು. ಎಲ್ಲರನ್ನು ನೋಟದಿಂದಲೇ ಪರೀಕ್ಷಿಸಿ ಅನುಗ್ರಹಿಸಬಲ್ಲವರು.

ಶ್ರೀಗಳ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಕಾರ್ಯಕರ್ತನಾಗಿ :

ಮುಂದೆ ಶ್ರೀಗಳವರ ನಿರಂತರ ದರ್ಶನ, ಸಂಪರ್ಕದಲ್ಲಿದ್ದ ಸೀಮಾ ಪರಿಷತ್ತಿನ ಹಾಗೂ ಸೀಮೆಯ ಸೇವಾಯೋಜನೆಗಳಾದ ಶ್ರೀಭಾರತೀ ವಿದ್ಯಾಪೀಠ, ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯಗಳಲ್ಲಿ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತ್ತಿದ್ದ ನನಗೆ ಒಂದು ದಿನ ದೊರೆತ ಪೂಚೆಕ್ಕಾಡಿಗೆ ಬರಬೇಕೆಂಬ ಸಂದೇಶಕ್ಕೆ ಸ್ಪಂದಿಸಿ ಹೋದೆ. ಪುರಪ್ರವೇಶದ ಸಂದರ್ಭದಲ್ಲಿ ನನ್ನನ್ನು ಹೆಸರು (ಕೆ. ಎನ್.) ಕರೆದು ಮಾತಾಡಿದಾಗ ಎಲ್ಲರಿಗೂ ಆಗುವಂತೆ ನನಗೂ ಆಶ್ಚರ್ಯ-ಆನಂದವಾಯ್ತು. ಮತ್ತೆ ಶ್ರೀಗಳವರು ‘ತಕ್ಷಶಿಲಾ’ ಮಾದರಿಯ ವಿಶ್ವಯೋಜನೆಯ ಕನಸನ್ನು ಬಿಚ್ಚುತ್ತಾ ‘ನೀನು ಈ ಯೋಜನೆಯ ಜವಾಬ್ದಾರಿವಹಿಸೆಕ್ಕು’ ಎಂದಾಗ ನಾನು ಕುಗ್ಗಿಯೇ ಹೋದೆ. ಇಷ್ಟು ದೊಡ್ಡ ಜವಾಬ್ದಾರಿ ನನ್ನಿಂದ ಸಾಧ್ಯವೇ ಎಂದು ಯೋಚಿಸತೊಡಗಿದೆ. ಮತ್ತೆ  ಶ್ರೀಗಳವರೇ ‘ನೀನೊಬ್ಬನೇ ಅಲ್ಲ, ನಿನ್ನ ಹಾಂಗಿಪ್ಪವರ ಒಂದು ತಂಡ ಮಾಡಿ ಬಾ. ಹೊಸನಗರದಲ್ಲಿ ಸಭೆ ಮಾಡುವ°’ ಎಂದಾಗ ಸ್ವಲ್ಪ ಧೈರ್ಯ ಬಂದು ಶ್ರೀಗಳ ಅನುಗ್ರಹದಿಂದ ಯಾವುದೂ ಅಸಾಧ್ಯವಲ್ಲ ಎಂದು ನಂಬಿ ಆತು ಸಂಸ್ಥಾನ ಎಂದೆ. ನಂತರ ಸಮಾನ ಮನಸ್ಕ ನಾಲ್ಕು ಇಂಜಿನಿಯರುಗಳನ್ನು, ವಾಸ್ತುಶಿಲ್ಪಿ, ಜ್ಯೋತಿಷಿಗಳನ್ನೊಳಗೊಂಡ ತಂಡದೊಂದಿಗೆ ಶ್ರೀಮಠಕ್ಕೆ ಹೋದೆ. ಅಲ್ಲಿ ಪೂರ್ವಭಾವಿ ಸಭೆಯಲ್ಲಿ ಗೌರವಾನ್ವಿತ ಶ್ರೀ ಶಂಕರನಾರಾಯಣ ಜೋಯ್ಸರ ಪರಿಚಯವಾಯಿತು. ನಂತರ ಶ್ರೀಗಳವರ ಜೊತೆಗೆ ನಡೆದ ಸಭೆ ಅದೆಷ್ಟು ದೀರ್ಘ ಅವಧಿಗೆ ವಿಸ್ತರಿಸಿತ್ತೆಂದರೆ ನಮಗೆ ಹಸಿವಿನ ನೆನಪಿರಲಿಲ್ಲ. ಶ್ರೀಗಳವರ ಜೊತೆಗೆ ‘ಮೀಟಿಂಗ್’ ಎಂದರೆ ‘Mind’ಗೆ ಹೆಚ್ಚು ‘Eating’. ಮೀಟಿಂಗ್‌ನಲ್ಲಿ ‘ವಿಶ್ವವಿದ್ಯಾಲಯ’ ಸ್ವರೂಪವನ್ನು, ಅವರ ಆಶಯಗಳನ್ನು ಎಳೆ ಎಳೆಯಾಗಿ ಬಿಡಿಸಿ ವಿವರಿಸಿದರು. ಗುರುಕುಲ, ಚತುರ್ವೇದಗಳು, ವೇದಾಂಗಗಳು, ಚತುಷಷ್ಠಿ ಕಲೆಗಳು, ಶಾಸ್ತ್ರ, ಉಪನಿಷತ್ತುಗಳು ಹೀಗೆ ಎಲ್ಲದರ ವಿವರಣೆ ಕೇಳಿ ಸಭೆ ಮುಗಿಸಿ ಹೊರಬಂದಾಗ ನನಗೆ ಇವೆಲ್ಲ ಹೊಸ ವಿಷಯಗಳು. ‘ಇಂಜಿನಿಯರ್’ ಎಂಬಂತೆ ಹೋದ ನನಗೆ ನಾನೇ ವಿಶ್ವವಿದ್ಯಾಲಯದ ಮೊದಲ ‘ವಿದ್ಯಾರ್ಥಿ’ ಎನಿಸಿತು. ಮುಂದೆ ಶ್ರೀಗಳವರ ಗೌರವಾಧ್ಯಕ್ಷತೆಯಲ್ಲಿ ಶ್ರೀ ಶಂಕರನಾರಾಯಣ ಜೋಯಿಸರ ‘ಮಾರ್ಗದರ್ಶನ’, ಸಹಕಾರ್ಯಕರ್ತರ ಹಾಗೂ ಶ್ರೀಮಠದ ಆಡಳಿತ ವರ್ಗದವರ ಸಹಯೋಗದಿಂದ ನೀಲಿನಕ್ಷೆಗಳನ್ನು ತಯಾರಿಸಿ, ಕಾರ್ಯಾನುಷ್ಠಾನಗೊಳಿಸುವಾಗ ಆದ ಪ್ರಾಮಾಣಿಕ ಅನಿಸಿಕೆ ಇಷ್ಟೆ. ನಾವೇನೂ ಅಲ್ಲ, ಎಲ್ಲವೂ ಗುರುಸಂಕಲ್ಪದಂತೆ ನಡೆಯುತ್ತದೆ. ಹೇಗೂ ಅವರು ಸಂಕಲ್ಪಿತಕಾರ್ಯ ‘ಸಿದ್ಧಿಪ್ರವೀಣ’ರಲ್ಲರೇ.

ಹೊಸ ನಗರದ ವಿಶ್ವವಿದ್ಯಾಲಯ ಯೋಜನೆ ಅಲ್ಲಿಗೆ ಸೀಮಿತವಾಗದೆ ಸೀಮಾತೀತವಾದ ಜಗದ್ಗುರುವಿನ ವ್ಯಾಪ್ತಿಯಾದ ವಿಶ್ವವನ್ನು ವ್ಯಾಪಿಸಿದೆ ಎಂದರೆ ಅತಿಶಯೋಕ್ತಿಯಾಗದು. ಅವನಿಗೆ ಇಡಿಯ ವಿಶ್ವವೇ ನಾಟ್ಯರಂಗ. ಇಡೀ ಭೂಮಿಯೇ ರಂಗಭೂಮಿ. ಅದಕ್ಕೆ ಇರಬೇಕು ಅದೆಷ್ಟೋ ಗಾಯಕರು, ಚಿತ್ರಕಾರರು, ಕಲಾವಿದರು ಶ್ರೀಗಳ ಮುಂದೆ ತಮ್ಮ ಕಲೆಗಳನ್ನು ಪ್ರದರ್ಶಿಸಿ ಸಾರ್ಥಕತೆಯನ್ನು ಅನುಭವಿಸುತ್ತಾರೆ.

ನಂತರದ ದಿನಗಳಲ್ಲಿ ಶ್ರೀಗಳ ವಿಶ್ವರೂಪ ದರ್ಶನ ಭಾಗ್ಯ ‘ಕಾಮಾದುಘಾ’ ಯೋಜನೆ, ಗೋಶಾಲೆಗಳ ನಿರ್ಮಾಣ, ದೃಷ್ಟಿಗಾಗಿ ನೇತ್ರಾಲಯ ಸೃಷ್ಟಿ, ರಾಮಾಯಣ ಮಹಾಸತ್ರ, ಗೋಯಾತ್ರೆ, ಕೋಟಿ ನೀರಾಜನ, ಗೋಸಮ್ಮೇಳನ, ಚಂದ್ರಮೌಳೀಶ್ವರ ದೇವಾಲಯ……ಗೋಕರ್ಣ………..ಕೋಟಿರುದ್ರ………..ಒಂದೇ…….. ಎರಡೇ…………… ಅಲ್ಲ……………………… ಅನಂತ. ಎಲ್ಲಾ ಯೋಜನೆಗಳಲ್ಲಿ ಹತ್ತಿರದಿಂದ ಭಾಗವಹಿಸುವ ಯಥಾಸಾಧ್ಯ ಸೇವೆಗೈಯ್ಯುವ ಭಾಗ್ಯ ಲಭಿಸಿದ್ದು ಪೂರ್ವ ಸುಕೃತವೇ ಸರಿ.

ಬೆಳಕಿನ ಪಥದಲ್ಲಿ ಆತ್ಮಸುಖ :

ಶ್ರೀ ಚರಣ ಸೇವೆಯ ಸಂದರ್ಭದಲ್ಲಾದ ಕೆಲವೊಂದು ಅಲೌಕಿಕ ಅನುಭವಗಳನ್ನು ಹೇಳಬಾರದ್ದಾದರೂ ಸಮ್ಮುಖದಲ್ಲಿ ಹಂಚಿಕೊಳ್ಳುತ್ತಿದ್ದೇನೆ.

*           ಶ್ರೀಗಳು ನಮ್ಮ ‘ಗೃಹ’ಕ್ಕೆ ಪ್ರಥಮವಾಗಿ ವಿಜಯಂಗೈದ ಸಂದರ್ಭ. ನನ್ನ ಮಗ ಜ್ವರಪೀಡಿತನಾಗಿದ್ದ. ಶ್ರೀಗಳ ಆಶೀರ್ವಾದದಿಂದ ಗುಣಮುಖನಾಗಿ ನಂತರ ಎರಡು ಮೂರು ಬಾರಿ ಬೇರೆ ಬೇರೆ ಸಂದರ್ಭಗಳಲ್ಲಿ ನನ್ನ ಜೊತೆಗಿದ್ದ ಅವನನ್ನು ಕಂಡಾಗ ಇವಂ ಜ್ವರದ ಮಾಣಿ ಅಲ್ಲದೋ ಎನ್ನುತ್ತಿದ್ದರು. ಅದೇನೋ ಗೊತ್ತಿಲ್ಲ. ಹಿಂತಿರುಗಿದಾಗ ಅವನಿಗೆ ಆಗಾಗ ಜ್ವರ ಬರುತ್ತಿತ್ತು. ಮತ್ತೆ ನಾಲ್ಕನೇ ಸಲ ಅವನನ್ನು ನೋಡಿದಾಗ ನಾನೇ ಹಿಂದಿನ ಸಂದರ್ಭಗಳನ್ನು ನೆನಪಿಸಿದಾಗ ಅವರು ಮುಗುಳ್ನಕ್ಕು ಅವನನ್ನು ತಬ್ಬಿ ‘ಇಂವ ಇನ್ನು ಜ್ವರದ ಮಾಣಿ ಅಲ್ಲ’ ಎಂದು ಹರಸಿದರು. ಗುರುಕೃಪೆಯಿಂದ ಇಂದಿನವರೆಗೂ ಅವನಿಗೆ ಮತ್ತೆ ಜ್ವರ ಬರಲಿಲ್ಲ. (ಗುರುವಚನ ಯಾವತ್ತೂ ಸತ್ಯವೇ!)

*           ನನಗೆ ಒಂದು ಸಂದರ್ಭದಲ್ಲಿ ಜ್ಯೋತಿಷಿಗಳಿಂದ ಸಾಡೇ ಸಾತ್ ಶನಿ ದೋಷವಿದೆ, ಜಾಗೃತೆಯಿಂದಿರಬೇಕು ಎಂಬ ಸಲಹೆ ಬಂತು. ನಾನು ಇದನ್ನು ಶ್ರೀಗಳಲ್ಲಿ ಅರಿಕೆ ಮಾಡಿಕೊಂಡಾಗ ನಗುತ್ತಾ ‘ನೀನೆಂತ ಭಯಪಡೇಡ, ಶನಿಗೆ ಎಂಗೊ ಹೇಳುತ್ತೇಯೋ ನಿನಗೆಂತ ತೊಂದರೆ ಆಗ’ ಎಂದು ಅಭಯ ಮಂತ್ರಾಕ್ಷತೆಯನ್ನಿತ್ತರು. ಮುಂದೆ ಏಳೂವರೆ ವರ್ಷವೂ ನನಗೆ ಯಾವುದೇ ಕಷ್ಟ ಅನುಭವಕ್ಕೆ ಬರಲಿಲ್ಲ. ಆದರೆ ಶನಿ ಊರೂರು ಸುತ್ತಿಸುತ್ತಾನೆ ಎನ್ನುವುದು ಮಾತ್ರ ಅನುಭವಕ್ಕೆ ಬಂತು. ನಾನು ತುಂಬಾ ಸುತ್ತಿದೆ. ಆದರೆ ಗುರುವಿನ ಸುತ್ತಮುತ್ತ, ಹಿಂದೆ ಮುಂದೆ ಹಾಗಾಗಿ ಬಳಲಿಕೆಯೇ ಗೊತ್ತಾಗಲಿಲ್ಲ (‘ಗುರು’ವಿನ ಮುಂದೆ ಶನಿಯ ಆಟವೂ ಸಾಗದು).

*           ನಾನು ಶ್ರೀಮಠದ ಕಾರ್ಯನಿಮಿತ್ತ ಊರ ಹೊರಗೆ ಆಗಾಗ ಹೋಗುತ್ತಿರುವುದರಿಂದ ನನ್ನ ಅರ್ಧಾಂಗಿಗೆ ಕೆಲವೊಮ್ಮೆ ದುಗುಡ ದುಮ್ಮಾನಗಳಾಗುತ್ತವೆ. ಬೇರೇನೂ ಅಲ್ಲ, ತನಗೆ ಆ ಭಾಗ್ಯ ಇಲ್ಲವಲ್ಲ ಎಂದು. ಒಂದು ಬಾರಿ ಶ್ರೀಗಳ ಭೇಟಿಗೆ ನಾವಿಬ್ಬರೂ ಜತೆಯಾಗಿ ಹೋದಾಗ ನನ್ನ ಅರ್ಧಾಂಗಿಗೆ ಶ್ರೀಗಳವರಿಗೆ ಹಾರಾರ್ಪಣೆ ಮಾಡಬೇಕೆಂಬ ಹಂಬಲ. ಆದರೆ ಅದೇನೋ ಸಾಧ್ಯವಾಗಲಿಲ್ಲ. ಆದರೂ ಅದೇನೋ ಗೊತ್ತಿಲ್ಲ. ಕಾರ್ಯಕ್ರಮದ ಸಮಯ ವಿಶೇಷವಾಗಿ ಶ್ರೀಗಳವರು ಸೇರಿದ ಎಲ್ಲರೂ ಶ್ರೀ ಪಾದುಕೆಗಳಿಗೆ ಪುಷ್ಪಾರ್ಚನೆ ಮಾಡಲು ಅವಕಾಶಕೊಟ್ಟು ಅನುಗ್ರಹಿಸಿದ್ದರಿಂದ ನನಗೂ ನನ್ನ ಶ್ರೀಮತಿಗೂ ಪುಷ್ಪಾರ್ಚನೆಯ ಸೌಭಾಗ್ಯ ದೊರಕಿತು (ಬೇಡಿದ್ದು ನೀಡುವ ಕರುಣಾಳು).

*           ನನ್ನ ವೃತ್ತಿ ಜೀವನದಲ್ಲಿ ಎಂದೂ ಅಸಾಧ್ಯವೇ ಆದ ಕಾರ್ಯವೊಂದು ಸಂಭವವಾದದ್ದು ಗೋ ಯಾತ್ರೆ ಕೊನೆಯ ಹಂತದಲ್ಲಿದ್ದಾಗ. ಶ್ರೀಗಳವರಿಂದ ನಿರ್ದೇಶನ ಬಂತು, ಅಗಸ್ತ್ಯತೀಥದ ಸಮೀಪ ‘ಗುರುನಿವಾಸ’ ಒಂದು ಆಗಬೇಕಿತ್ತು. ಗೋಯಾತ್ರೆ ಮುಗಿಸಿಬಂದು ಅಲ್ಲಿಗೆ ಪ್ರವೇಶ. ನಾನು ಸಾಷ್ಟಾಂಗ ನಮಸ್ಕರಿಸಿ ಅರಿಕೆ ಮಾಡಿಕೊಂಡೆ. ಇನ್ನು ೪೫-೫೦ ದಿನ ಮಾತ್ರ ಬಾಕಿ ಇಪ್ಪದು, ಹೇಂಗೆ ಸಾಧ್ಯ? ಶ್ರೀಗಳ ಅಪ್ಪಣೆಯಾಯಿತು. ‘ಎಂತ ಇಲ್ಲೆ. ಮಾಡಲೇಬೇಕು’ ನಾನು ಮರುಮಾತಾಡದೆ ಪ್ರಯತ್ನ ಮಾಡುತ್ತೆ ಎಂದು ಒಪ್ಪಿಕೊಂಡೆ. ಹೇಗೆ ಆಯಿತೋ ಗೊತ್ತಿಲ್ಲ. ಐವತ್ತು ದಿನಗಳಲ್ಲಿ ‘ಕುಲಗುರು’ ಪ್ರವೇಶಯೋಗ್ಯ ಸಿದ್ಧವಾಗಿ ಶ್ರೀಗಳ ‘ಮೊಕ್ಕಾಂ’ ಅಲ್ಲಿಯೇ ಆಯಿತು. (ಎಲ್ಲವೂ ಸೂತ್ರಧಾರನ ಆಟ, ನಾವು ನೆಪ ಮಾತ್ರ)

*           ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದ ಲೋಕಾರ್ಪಣೆಯ ಸಂದರ್ಭ ಶ್ರೀಗಳವರ ಸವಾರಿ ನಮ್ಮ ಗೃಹಕ್ಕೆ ಚಿತ್ತೈಸಿ ಮೊಕ್ಕಾಂ. ಮರುದಿನ ಪ್ರಾತಃಕಾಲ ಪೂಜೆ ಮುಗಿಸಿ ಮುಜುಂಗಾವಿಗೆ ಹೋಗಲು ತಯಾರಾದ ಶ್ರೀಗಳನ್ನು ಕಾರಿನವರೆಗೆ ಬೀಳ್ಕೊಡಲು ಹೋದೆ. ಮೊಕ್ಕಾಂ ನಮ್ಮಲ್ಲಿದ್ದಾಗ ಮನೆಯವರು ಅಲ್ಲಿಂದ ಹೋಗಬಾರದಲ್ಲ. ನಾನು ಆ ದಿನದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಹೇಗೆಂಬ ಚಿಂತೆ ಮನಸ್ಸಿನಲ್ಲಿತ್ತು. ಅದನ್ನು ಮುಖದಲ್ಲಿ ಕಂಡರೋ ಏನೋ ಶ್ರೀಗಳು. ಕಾರು ಹತ್ತು. ಮುಜಂಗಾವಿಗೆ ಬಾ ಎಂದು ಅಪ್ಪಣೆಯಿತ್ತರು. ನಾನು ಅವರ ಜೊತೆಯಲ್ಲಿ ಹೋಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಾರ್ಥನಾದೆ. (ನೋಟದಿಂದಲೇ ಅರಿತು ಅನುಗ್ರಹಿಸುವ ‘ಗುರು’)

*           ಚಾತುರ್ಮಾಸ್ಯದ ಒಂದು ಸಂದರ್ಭ – ನಾವು ಮನೆಯವರೆಲ್ಲರೂ ಒಟ್ಟಿಗೆ (ಅಪರೂಪಕ್ಕೆ) ಶ್ರೀಮಠಕ್ಕೆ ಹೋಗಿದ್ದೆವು. ಮೊದಲ ದಿನವೇ ಶ್ರೀಗಳ ದರ್ಶನ, ಪೂಜೆ ಎಲ್ಲಾ ಆನಂದಿಸಿದ್ದೆವು. ಎರಡನೆಯ ದಿನ ಪರಿವಾರದವರ ಮೂಲಕ ನನಗೆ ಶ್ರೀಗಳ ಅಪ್ಪಣೆಯಾಗಿದೆ, ‘ಒಳಗೆ ಬರಬೇಕು’ ಎಂಬ ಸಂದೇಶ ಬಂತು. ನಾನು ಗಲಿಬಿಲಿಗೊಂಡೆ. ಆಗ ರಜನೀಶ, ನಿಮ್ಮ ಕುಟುಂಬ ಸಮೇತ ಬರಬೇಕಂತೆ ಎಂದು ಹೇಳಿದಾಗ ಎಲ್ಲರೂ ಜೊತೆಯಲ್ಲೇ ಹೋದೆವು. ನನ್ನ ಮನೆಯವರೊಂದಿಗೆ ಭೇಟಿಮಾಡಿ ಹೊರಡುವಾಗ ಶ್ರೀಗಳು, ‘ನಾಳೆ ಹೋದರೆ ಸಾಲದೋ? ಇಂದು ನಿಂದು ನಾಳೆ ಹೋಗಿ’ ಎಂದರು. ನಾವಿಬ್ಬರೂ, ನಾವು ಎಲ್ಲರೂ ಬಂದಿದ್ದೇವೆ, ಮನೆಯಲ್ಲಿ ಯಾರೂ ಇಲ್ಲ, ಎರಡು ದಿನ ಆಯಿತು ಎಂದಾಗ ಶ್ರೀಗಳವರು ‘ಅಲ್ಲಿ ಏನೂ ತೊಂದರೆ ಆಗ, ನೋಡಲೇ ಒಬ್ಬ°, ಅವಂ ಎಲ್ಲ ನೋಡುತ್ತ°’ ಎಂದು ಅಪ್ಪಣೆಯನ್ನಿತ್ತರು. ನಾವು ಹಿಂತಿರುಗಿದ ನಂತರ ಮನೆಯ ಮುಂಬಾಗಿಲ ಬೀಗವನ್ನು ತೆರದು ಒಳಗೆ ಹೋಗಿ ಎಲ್ಲ ವ್ಯವಸ್ಥಿತವಾಗಿದೆ ಎಂದು ಖಾತ್ರಿಪಡಿಸಿ ಹಿಂಬಾಗಿಲನ್ನು ತೆರೆಯಲೆಂದು ಹೋದಾಗ ಆಶ್ಚರ್ಯ. ಅಲ್ಲಿ ಬೀಗ ಹಾಕಿರಲೇ ಇಲ್ಲ. ನನ್ನ ಕಣ್ಣಾಲಿಗಳು ತೇವಗೊಂಡವು, ಆನಂದ ಭಾಷ್ಪದಿಂದ ಶ್ರೀಗಳನ್ನು ಮನದಲ್ಲೇ ನೆನೆದಾಗ ಮಂದಹಾಸ ಬೀರುತ್ತಿದ್ದ ಅನುಭವ. ನಾನು ನನ್ನ ಶ್ರೀಮತಿಯಲ್ಲಿ ಹೇಳಿದೆ ನಮ್ಮ ಅಜಾಗೃತೆಯಿಂದಾಗಿ ನಾವು ಆ ‘ಒಬ್ಬಂಗೆ’ ಎಷ್ಟು ತೊಂದರೆ ಕೊಟ್ಟ ಹಾಂಗೆ ಆತೋ ಮರುಕ್ಷಣದಲ್ಲೇ ಅನಿಸಿತು. ಎಲ್ಲಾ ಭಾರವನ್ನು ಹೊರುವ ಆತನಿಗೇನು ಕಷ್ಟ ಇದು. (….ಹೂವ ತರುವರ ಮನೆಗೆ ಹುಲ್ಲ ತರುವ…..)

*           ಇತ್ತೀಚೆಗೆ ೧೦-೧೧-೨೦೧೦ರ ಭೇಟಿಯ ಸಂದರ್ಭ. ಮನಸ್ಸೇನೋ ವ್ಯಾಕುಲವಾಗಿತ್ತು. ಶ್ರೀಗಳವರ ಸನ್ನಿಧಿಯಲ್ಲಿ ನಿವೇದನೆ ಮಾಡಲು ಕಷ್ಟವೆನ್ನುವ ರೀತಿ. ಹಾಗಾಗಿ ಶ್ರೀರಾಮದೇವರ ಪೂಜೆಯ ಸಂದರ್ಭದಲ್ಲಿಯೇ ಫಲ ಸಮರ್ಪಿಸಿ ಮನಸ್ಸಿನಲ್ಲೇ ನನ್ನ ಪ್ರಾರ್ಥನೆಯನ್ನು ಮೌನವಾಗಿ ಸಲ್ಲಿಸಿ ನಮಸ್ಕಾರ ಮಾಡಿದೆ. ನಂತರ ಸಭೆಗೆ ಶ್ರೀಗಳವರ ಆಗಮನಕ್ಕಾಗಿ ಕಾಯುತ್ತಾ ಇದ್ದಾಗ ಹೊರಬಂದ ಶ್ರೀಗಳು ದೂರದಿಂದಲೇ ನನ್ನನ್ನು ನೋಡಿ ಮಂದಹಾಸ ಬೀರಿ, ಮುಂದೆ ಬರುತ್ತಾ ನನ್ನ ಸಮೀಪಕ್ಕೆ ಬಂದಾಗ ಶ್ರೀಮುಖದಿಂದ ಬಂದ ವಾಣಿ ನನ್ನ ಮನಸ್ಸಿನ ದುಗುಡವನ್ನೆಲ್ಲಾ ದೂರಮಾಡುವ ಅನುಗ್ರಹದ ಉತ್ತರ. ದಿನವಿಡೀ ಅದೇ ಆನಂದ. ಸ್ಮರಿಸಿದಾಗ ಈಗಲೂ ಅದೇ ಅನುಭವ. (…….ಸಂಸ್ಥಾನ ಸ್ಥಾನದೋ ಧ್ರುವ……).

ಸಮ್ಮುಖದಲ್ಲಿ ನನ್ನ ಕೆಲವು ಅನುಭವಗಳನ್ನು ಹಂಚಿಕೊಂಡಿದ್ದೇನೆ. ಸಿಹಿಯ ಸವಿ ಹಂಚಿದಷ್ಟು ಹೆಚ್ಚುವುದಂತೆ, ಹಾಗಾಗಿ.

ಮುಗಿಸುವ ಮುನ್ನ:

ಇಕ್ಷಾಕುವಂಶದ ೩೬ನೇ ತಲೆಮಾರಿನಲ್ಲಿ ಶ್ರೀರಾಮನ ರೂಪದಲ್ಲಿ ಶ್ರೀಮನ್ನಾರಾಯಣನೇ ಅವತರಿಸಿ ರಾಮಾಯಣದ ನಾಟಕವನ್ನಾಡಿಸಿದನಂತೆ. ಎಷ್ಟೋ ಪಾತ್ರಧಾರಿಗಳಂತೆ. ನಾವೆಲ್ಲ ಏನಾದರೂ ಪಾತ್ರ ವಹಿಸಿದ್ದೇವೋ ಏನೋ? ನನಗಂತೂ ನಾನೇನಾದರೂ ‘ಅಳಿಲು’ ಆಗಿದ್ದೆನೋ ಎನ್ನುವ ಭಾವ. ಆ ಕಾರಣಕ್ಕಿರಬಹುದು. ಈ ಕಾಲದಲ್ಲಿ ಶ್ರೀಶಂಕರರ ೩೬ನೇ ತಲೆಮಾರಿನಲ್ಲಿ ಅವನೇ ಪುನಃ ಶ್ರೀಗಳ ರೂಪದಲ್ಲಿ ಅವತರಿಸಿ ಆಡಿಸುತ್ತಿರುವ ಗೋಕರ್ಣದ ಅಶೋಕೆಯ ‘ಮೂಲಮಠ ಪುನರುತ್ಥಾನ’ದಲ್ಲಿ ‘ಇಂಜಿನಿಯರ್’ನ ಪಾತ್ರವನ್ನು ನೀಡಿ ನಿರ್ದೇಶಿಸುತ್ತಿದ್ದಾನೆ. ನನ್ನ ಮೊದಲಿನಿಂದಲೂ ಇದ್ದ ಆಸೆಯಂತೆ ನಮ್ಮೆಲ್ಲರ ‘ಇಂಜಿನ್’ಗೆ ನಿಯರ್ ಆಗುವಕಾಲ ಸನ್ನಿಹಿತವಾಗಿದೆ. ಸಹೃದಯ ಬಂಧುಗಳೇ ನನಗೆ ಮಾತ್ರ ಅಲ್ಲ ನಮಗೆಲ್ಲರಿಗೂ Near, Nearer, Nerest ಆಗುವ ಭಾಗ್ಯ, ಅಲ್ಲ- ‘ಯೋಗ’ ಒದಗಿದೆ. ಹಿಂದಿನವರಿಗೆ ಸಿಗದ, ಮುಂದಿನವರಿಗೆ ಸಿಗಲಾರದ ನಮಗೆ ಮಾತ್ರ ಲಭ್ಯವಾದ ‘ಯೋಗ’. ಗುರು ಸಂಕಲ್ಪದಂತೆ ನಮ್ಮ ನಮ್ಮ ಪಾತ್ರವನ್ನು ಚೆನ್ನಾಗಿ ನಡೆಸಿ ರಾಮಕಾರ್ಯ ಪೂರೈಸಿ ಕೃತಾರ್ಥನಾದ ಆಂಜನೇಯನಂತೆ ಗುರುಸಂಕಲ್ಪ ಈಡೇರಿಸಿ ನಾವೆಲ್ಲ ಕೃತಾರ್ಥರಾಗೋಣ.

ಇದು ‘ಅಕ್ಷರ’ನ ಶ್ರೀ ಚರಣಗಳಿಗೆ ‘ಸಮ್ಮುಖ’ ದ್ವಾರಾ ಅಕ್ಕರೆಯ ‘ಅಕ್ಕರ’ಗಳ ಪುಷ್ಪಾರ್ಚನೆಯ ಸೇವೆ.

ಶ್ರೀ ಸದ್ಗುರು ಚರಣಾರವಿಂದಾರ್ಪಣಮಸ್ತು.

ಕೆ. ನಾರಾಯಣ ಭಟ್ಟದ ಕುಟುಂಬದ  ಶ್ರೀಮಠದೊಂದಿಗಿನ ಮಧುರ ನೆನಪುಗಳು.

ಪರಿಚಯ

ಶ್ರೀಮತಿ ಶಾರದಾ ಮತ್ತು ಶ್ರೀಯುತ ಗಣಪತಿ ಶರ್ಮ ದಂಪತಿಗಳ ದ್ವಿತೀಯ ಪುತ್ರರಾಗಿ ೧೯೫೯ ಜನವರಿಯಲ್ಲಿ ಕಾಸರಗೋಡಿನ ಪೆರುಂಬಾರು ಎಂಬಲ್ಲಿ ಜನಿಸಿದ ಶ್ರೀಯುತರು ಪ್ರಾಥಮಿಕ ಶಿಕ್ಷಣವನ್ನು ಕರ್ನಾಟಕದ ಗಡಿ ಪ್ರದೇಶದ ಪಂಜಿಕಲ್ಲು ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ, ಧರ್ಮಸ್ಥಳದಲ್ಲಿ ಪ್ರೌಢಶಿಕ್ಷಣವನ್ನು ಪಡೆದ ಇವರು ದಕ್ಷಿಣ ಕನ್ನಡದ ಉಜಿರೆಯಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದಿರುತ್ತಾರೆ. ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಂಗಳೂರು ವಿಶ್ವ ವಿದ್ಯಾಲಯದಿಂದ ತರಬೇತಿ ಪಡೆದ ಶ್ರೀಯುತರು ೧೯೮೦ ರಿಂದ ೧೯೯೦ ರ ವರೆಗೆ ಭೋಪಾಲದಲ್ಲಿ ಮಧ್ಯಪ್ರದೇಶ ಗೃಹ ನಿರ್ಮಾಣ ಮಂಡಳಿಯಲ್ಲಿ ಕಿರಿಯ ಅಭಿಯಂತರರಾಗಿ ಅರೆ ಸರಕಾರಿ ಸೇವೆಯಲ್ಲಿದ್ದವರು, ಸೇವೆಗೆ ರಾಜೀನಾಮೆಯನ್ನಿತ್ತು ೧೯೯೧ ರಿಂದ ಕುಂಬಳೆ ಸೀಮೆಯ ಬದಿಯಡ್ಕದಲ್ಲಿ ನಿರ್ಮಾಣ್ ಅಸೋಸಿಯೇಟ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಗೃಹ ವಾಸ್ತು ಮತ್ತು ತಾಂತ್ರಿಕ ಸಲಹೆಗಳನ್ನು ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಪ್ರಸಿದ್ಧ ಕಿಳಿಂಗಾರು ಮನೆತನಕ್ಕೆ ಸೇರಿದ ಇವರು ೧೯೮೮ರಲ್ಲಿ ಪೊಸವಣಿಕೆಯ ಉಷಾರನ್ನು ವರಿಸಿ ಗೃಹಸ್ಥ ಜೀವನಕ್ಕೆ ಕಾಲಿರಿಸಿರುತ್ತಾರೆ.

ಶ್ರೀಮಠದ ವಿವಿಧ ಯೋಜನೆಗಳಲ್ಲಿ ದಶಕದಿಂದ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಇವರು ಮೂಲಮಠ ಪುನರುತ್ಥಾನ ಯೋಜನೆಯಲ್ಲಿ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೂ ಕುಟುಂಬಕ್ಕೂ ಶ್ರೀಗುರುದೇವತಾನುಗ್ರಹ ಸದಾ ಇರಲೆಂದು ಹಾರೈಸುತ್ತೇವೆ

13 Responses to ಇದು ಭಾಗ್ಯ….. ಶ್ರೀ ಚರಣ ಸೇವೆ ಪರಮ ಸುಖವಯ್ಯ…… – ಕೆ. ನಾರಾಯಣ ಭಟ್ಟ ಬೆಳ್ಳಿಗೆ

 1. ಮಂಗ್ಳೂರ ಮಾಣಿ...

  ಮನಸ್ಸಿಗೆ ಹತ್ತಿರವಾಯಿತು ಬರಹ.
  ಧನ್ಯವಾದ.

  [Reply]

 2. jagadisha sharma

  ಸರಳ-ಸುಂದರವಾಗಿ ಭಾವ ತುಂಬಿ ಬರೆದಿದ್ದೀರಿ…

  ನಿಮ್ಮೊಡನೆ ಒಡನಾಡಿದ ವಿಶ್ವವಿದ್ಯಾಲಯ ನಿರ್ಮಾಣದ ಆ ದಿನಗಳು ನೆನಪಾದವು…

  [Reply]

 3. gopalakrishna pakalakunja

  ಭಾಷ್ಪಾಂಜಲಿಯೇ ಪುಷ್ಪಾಂಜಲಿಯಾದಾಗ ಪೂರ್ಣಾಂಜಲಿಯ ಆಶೀರ್ವಾದಾನುಗ್ರಹವಾಗಿರುವ

  ವಿಚಾರ ಓದಿ ರೋಮಾಂಚನವಾಯಿತು.

  ಸಂಪೂರ್ಣ ಸೇವೆಯನ್ನರ್ಪಿಸುತ್ತಾ ಅಳಿಲ ಸೇವೆಯೆಂದು ಬಗೆದು ಶ್ರೀ ಗುರುಗಳನ್ನು ಸೇವಿಸುವ ನೀವೇ ಧನ್ಯರು.

  [Reply]

 4. Anuradha Parvathi

  ತುಂಬಾ ಭಾವಪೂರ್ಣ ಬರಹ. ಓದಿ ಖುಷೀ ಆತು. ಮನಸ್ಸಿಲಿ ಕಂಡದರ ಹಾಂಗೇ ಬರವದೂ ಒಂದು ಕಲೆಯೆ. ಇಂಥಾ ದೊಡ್ಡ ಸೇವೆ ಮಾಡಿಯೂ, ಅಳಿಲು ಸೇವೆ ಹೇಳಿ ಗ್ರೇಶಿಗೊಂಬದು ನಿಂಗಳ ದೊಡ್ಡತನ.

  [Reply]

 5. seetharama bhat

  ಹರೇರಾಮ್,

  ಗುರುಸೇವೆಯ ಗುರುತರಯೋಗ ಪಡೆದ ತಾವು ಧನ್ಯರು,
  ಅನುಭವದ ಅನುಬಾವ ಓದಿ ನಾವು ಧನ್ಯರು

  ಹರೇರಾಮ್

  [Reply]

 6. Ganesh Bhat Madavu

  ಸುಂದರ ಬರಹ.ಹದಿನೇಳು ವರ್ಷಗಳ ಹಿಂದಿನ ಚಿತ್ರಣವನ್ನು ಚೆನ್ನಾಗಿ ವಿವರಿಸಿದ್ದೀರಿ.ಪ್ರಥಮ ದರ್ಶನದಿಂದ ಅಕ್ಷರಗಳ ಪುಷ್ಪಾರ್ಚನೆಯವರೆಗೆ ವಿವರಣೆ ಕೊಟ್ಟು ಲೇಖನಕ್ಕೆ ವಿಶಿಷ್ಟ ಕಳೆ ನೀಡಿದ್ದೀರಿ…ಧನ್ಯವಾದಗಳು..

  [Reply]

 7. Raghavendra Narayana

  ಜಗದಾತ್ಮ ರಾಮ
  .
  ಗುರುಗ್ರಹದ ಸುತ್ತ ಸುತ್ತುವ ಉಪಗ್ರಹಗಳು ಎಲ್ಲಾ…
  ಗುರು ಆಕರ್ಷಣೆ ಎ೦ದು ಕಡಿಮೆಯಾಗದು ಸುತ್ತುತ್ತಲೆ ಇರುವುದು..
  ಉಪಗ್ರಹಗಳಲ್ಲೂ ಆಕರ್ಷಣೆ ಹೆಚ್ಚಾದರೆ, ಹತ್ತಿರ, ತೀರ ಹತ್ತಿರ, ನ೦ತರ ಗುರುಲೀನ.. ಇದುವೆ ಗುರುದೇವನ ಲೀಲೆ, ಐಕ್ಯವೇ ಮ೦ತ್ರ.
  .
  ಶ್ರೀ ಗುರುಭ್ಯೋ ನಮಃ

  [Reply]

 8. Raghavendra Narayana

  ವಿಭಿನ್ನವಾಗಿ ಮೂಡಿಬ೦ದಿದೆ, ಗುರು ತತ್ವದೆಡೆಗಿನ ಆಕರ್ಷಣೆಯನ್ನು ಹೆಚ್ಚಿಸುತ್ತದೆ..
  .
  ಶ್ರೀ ಗುರುಭ್ಯೋ ನಮಃ, ಪರಮ ಗುರುಭ್ಯೋ ನಮಃ

  [Reply]

 9. chs bhat

  ತುಂಬಾ ಸುಂದರವಾಗಿ,ಆತ್ಮೀಯವಾಗಿ ಬರೆದಿದ್ದೀರಿ.ಬರವಣಿಗೆ ಕೈ ಹಿಡಿದು ಮುನ್ನಡೆಸುತ್ತದೆ. ಹರೇರಾಮ.

  [Reply]

 10. Sharada Jayagovind

  Hareraama

  Bhat’s article echoes the emotions of Samsthana’s devotees.
  Thank you

  [Reply]

 11. Venkateshwara KT Nooji

  ಹರೇ ರಾಮ,
  ಶ್ರೀಗುರುವೇನೆಂಬುದನ್ನು ಇಲ್ಲಿ ನೋಡಬಹುದು,ನಿಜವಾದ ಭಕ್ತನು ದೇವರನ್ನು ಕಾಣುತ್ತಾನೆ.ನಾರಾಯಣಣ್ಣ ಅಂತಹವರಲ್ಲಿ ಒಬ್ಬ ಅದೃಷ್ಟವಂತರು.

  [Reply]

 12. Raghava Hegde

  ಹರೇರಾಮ

  ಕೆ ಎನ್ ಭಟ್ರೆ

  [Reply]

 13. K.N.BHAT

  ಮೂಲ ವಸ್ತು ಸು೦ದರವಾಗಿದ್ದು ನೋಡುವ ದೃಷ್ಟಿ ಚೆನ್ನಾಗಿದ್ದಾಗ ನೋಟ ಇನ್ನಷ್ಟು ಸು೦ದರ…
  ಹಾಗಾಗಿಯೇ ಎಲ್ಲ ಪ್ರತಿಕ್ರಿಯೆಗಳು ಸು೦ದರ.. ಆತ್ಮೀಯ….
  ಎಲ್ಲವು ಸರ್ವಾ೦ಗ ಸು೦ದರನ ಶ್ರೀಚರಣಗಳಿಗೆ ಸಮರ್ಪಿತ…..

  [Reply]

Leave a Reply

Highslide for Wordpress Plugin