ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 30:

ಪಂಚಾಯತನ ಪೂಜೆ

              ಪಾದೆಕಲ್ಲು ನರಸಿಂಹ ಭಟ್ಟ, ಎಂ.ಎ.

ಭಾರತದ ಹೆಚ್ಚಿನ ಬ್ರಾಹ್ಮಣರ ಮನೆಗಳಲ್ಲಿ ನಿತ್ಯಾಚರಣೆಯಾಗಿ ನಡೆಯುವ ಒಂದು ಧಾರ್ಮಿಕ ಕ್ರಿಯೆಯೆಂದರೆ “ಪಂಚಾಯತನ ಪೂಜೆ.” ವೈದಿಕರ ನಿತ್ಯವಿಧಿಯಾದ ಸಂಧ್ಯೋಪಾಸನೆಗೆ ಅತಿಸಮೀಪವರ್ತಿಯಾದ ಒಂದು ಉಪಾಸನೆಯೆಂದು ಈ ಕ್ರಿಯೆಯನ್ನು ನಿರ್ದೇಶಿಸಬಹುದು. “ಆಯತನ” ಎಂಬ ಶಬ್ದಕ್ಕೆ ಆಶ್ರಯ ಎಂದು ಅರ್ಥ. ಆಶ್ರಯಾತೀತವಾದ ಪರಮಬ್ರಹ್ಮಶಕ್ತಿಯನ್ನು ಐದು ಆಶ್ರಯಗಳಲ್ಲಿ ಆವಾಹಿಸಿ ಪೂಜಿಸುವುದೇ ಈ ಪೂಜೆ. ಆಶ್ರಯಾತೀತವಾದುದನ್ನು ಆಶ್ರಯಗಳಲ್ಲಿ ಆವಾಹಿಸುವುದು ಹೇಗೆ ಸಾಧ್ಯ? ಎಂಬ ಪ್ರಶ್ನೆ ಏಳುವುದು ಸಹಜ. ಆಶ್ರಯಾತೀತವಾದುದು “ನಿರಾಶ್ರಯ.” ಆಯತನಗಳಲ್ಲಿ ಆವಾಹಿತವಾದುದು “ಸಾಶ್ರಯ”. ಇವೆರಡು ಪರಸ್ಪರ ವಿರುದ್ಧ ಕಲ್ಪನೆಗಳಲ್ಲವೆ? ತನ್ನ ಗುರಿಗೆ ವಿರುದ್ಧವಾದ ದಿಕ್ಕಿನಲ್ಲಿ ಸಂಚರಿಸಿದವನು ಗುರಿತಲಪುವ ಬದಲು ಗುರಿಯಿಂದ ದೂರಕ್ಕೇ ಸರಿಯುತ್ತಾನಲ್ಲವೆ? ಎಂದು ವೈಚಾರಿಕರು ಪ್ರಶ್ನಿಸುವುದರಲ್ಲಿ ಆಶ್ಚರ್ಯವಿಲ್ಲ. ಅಲ್ಲದೆ, ಸಾಕಾರೋಪಾಸನೆ ಆಸ್ತಿಕರಲ್ಲೇ ಕೆಲವು ವರ್ಗದವರನ್ನು ಇಂದಿಗೂ ತೃಪ್ತಿಪಡಿಸಿಲ್ಲ.

 ಆದರೆ ಪರಂಪರಾಗತ ಅನುಭವ ಸಾಕಾರ-ನಿರಾಕಾರಗಳೆಂಬ ಎರಡೂ ಸ್ವರೂಪಗಳ ಉಪಾಸನೆಯೂ ಸರಿಯಾದುದೇ ಎಂದು ತೋರಿಸಿಕೊಡುತ್ತದೆ. ಸಾಕಾರ-ನಿರಾಕಾರಗಳ ಪರಸ್ಪರ ವಿರೋಧ ಜೀವನದ ಒಂದು ಮಟ್ಟಕ್ಕೆ ಅನ್ವಯಿಸುತ್ತದೆಯೇ ವಿನಾ ಎಲ್ಲಾ ಮಟ್ಟಗಳಿಗೂ ಅಲ್ಲ. ಲೌಕಿಕ ವ್ಯವಹಾರದಲ್ಲಿ  ಕಲ್ಪನೆಗಳ ಪರಸ್ಪರ ಸಂಬಂಧಗಳು ಆಧ್ಯಾತ್ಮಿಕ ಸ್ತರದಲ್ಲಿಯ ಕಲ್ಪನೆಗಳಿಗೆ ಅನ್ವಯಿಸುವುದಿಲ್ಲ. ವಸ್ತುತಃ ಲೌಕಿಕ ಸ್ತರದಲ್ಲಿಯ ಅನುಭವಾಂಶಗಳ ಸೀಮಿತತೆಯನ್ನು ಎತ್ತಿತೋರಿಸುವುದೇ ಆಧ್ಯಾತ್ಮಿಕತೆಯ ಉದ್ದೇಶ. ಲೌಕಿಕಸ್ತರದ ಒಳಗೇ ಯೋಚಿಸುವುದಿದ್ದರೂ ಒಂದು ವಸ್ತುವಿನ ಕ್ರಿಯಾ-ಪ್ರತಿಕ್ರಿಯೆಗಳಂತೆ ಇನ್ನೊಂದು ವಸ್ತುವಿನದು ಇರುವುದಿಲ್ಲ.

ಪರಮಾತ್ಮ ತತ್ತ್ವವನ್ನು ಅತ್ಯಂತ ಸಮರ್ಪಕವಾಗಿ ವಿಶ್ಲೇಷಿಸಿದ ಪ್ರಮುಖ ಭಾರತೀಯ ವಿಚಾರಧಾರೆ ಎಂದರೆ ವೇದಾಂತ. ಋಷಿಪರಂಪರೆಗೆ ವ್ಯವಸ್ಥಿತವಾಗಿ ನಿಲ್ಲುವ ವಿಚಾರಧಾರೆ ಅದ್ವೈತ ವೇದಾಂತವೆಂದೇ ಹೇಳಬಹುದು. ಅದ್ವೈತ ವೇದಾಂತದ ಪ್ರಕಾರ ವಿಶ್ವಾತೀತವಾದ ಪರಮಾತ್ಮತತ್ತ್ವಕ್ಕೂ ಅತಿಸೀಮಿತವಾದ ಜೀವತತ್ತ್ವಕ್ಕೂ ಅಭೇದ. ಜೀವತತ್ತ್ವದ ಉದ್ದೇಶವೇ ಈ ಅಭೇದವನ್ನು ಸಾಕ್ಷಾತ್ಕರಿಸುವುದು. ಈ ಸಾಕ್ಷಾತ್ಕಾರ ಪ್ರಕ್ರಿಯೆಯ ಸಂದರ್ಭದಲ್ಲಿ ಸಾಧಕರು ಕಂಡುಕೊಂಡ ಉಪಾಯಗಳೇ ವಿಭಿನ್ನ ಉಪಾಸನಾ ಮಾರ್ಗಗಳು. ಸ್ಥೂಲವಾಗಿ ಕೆಲವು ಉಪಾಸನಾ ಮಾರ್ಗಗಳು ಬಹುಜನರಿಂದ ಆದೃತವಾಗಿ ಉಳಿದು ಬಂದಿರುವುದನ್ನು ಕಾಣಬಹುದು. ಈ ಸ್ಥೂಲಮಾರ್ಗದಲ್ಲಿ ಶಿವ ಮತ್ತು ವಿಷ್ಣು ಎಂಬುವರು ಮುಖ್ಯ ಸಾಕಾರದೇವತೆಗಳಾಗಿ ರೂಪುಗೊಂಡರು. ವಿಷ್ಣುವಿನೊಂದಿಗೆ ಅಭಿನ್ನನಾದ ಸೂರ್ಯನಾರಾಯಣನೂ ಶಿವತತ್ತ್ವದ ಉಪದೇವತೆಗಳಾದ ದುರ್ಗಾ-ಗಣಪತಿಗಳೂ ಆರಾಧನಾ ಪದ್ಧತಿಯ ಅಂಶಗಳಾಗಿ ರೂಪುಗೊಂಡರು. ಹೀಗೆ ಐದು ಮುಖ್ಯ ದೇವತೆಗಳು ಜನಪ್ರಿಯರಾಗಿ ಪಂಚಾಯತನಪೂಜೆಯ ಉಪಾಸ್ಯ ಸಂಕೇತಗಳಾದರು. ಈ ವ್ಯವಸ್ಥೆಯನ್ನು ರೂಪಿಸಿ ಭದ್ರಗೊಳಿಸಿದವರು ಆದಿಶಂಕರಾಚಾರ್ಯರೆಂದು ನಂಬಲಾಗುತ್ತದೆ. ಪಂಚಾಯತನ ಪೂಜೆಯಂತಹದರಲ್ಲಿ ಉಪಯುಕ್ತವಾಗುವ ಪ್ರತಿಮೆಗಳ ಬಗೆಗೂ ಸ್ವಲ್ಪ ವಿವರಣೆ ಅಗತ್ಯ. ಸಗುಣೋಪಾಸನೆಯಲ್ಲಿ ಶಿವ-ವಿಷ್ಣುಗಳೇ ಪ್ರಮುಖದೇವತೆಗಳೆಂಬುದನ್ನು ಹಿಂದೆ ಸೂಚಿಸಲಾಗಿದೆ. ಈ ಎರಡು ದೇವತೆಗಳನ್ನು ಪ್ರಕೃತಿಯ ಗುಣವಿಶೇಷಗಳೊಂದಿಗೆ ಸಮೀಕರಿಸಿ ನೋಡಿದಲ್ಲಿ ವಿಷ್ಣುವು ಸತ್ತ್ವಗುಣಪ್ರಧಾನನೂ ಶಿವನು ತಮೋಗುಣ ಪ್ರಧಾನನೂ ಆಗಿರುತ್ತಾರೆ. ನಮ್ಮ ದೈನಂದಿನ ಅನುಭವದಿಂದ ನೋಡುವುದಾದರೆ ಬೆಳಕು ಸತ್ತ್ವಪ್ರತೀಕವೆಂದೂ ಕತ್ತಲೆ ತಮಃ ಪ್ರತೀಕವೆಂದೂ ಇಟ್ಟುಕೊಳ್ಳಬಹುದು.  ಎರಡೂ ಜೀವನಕ್ಕೆ ಅಗತ್ಯವಾದವುಗಳೇ.ಸಂಧ್ಯೋಪಾಸನೆಯಲ್ಲಿಯ ಸೂರ್ಯ-ವರುಣರ ಆರಾಧನೆಗಳು ಪ್ರಕೃತಿ ಶಕ್ತಿಗಳ ನೇರ ಆರಾಧನೆಗಳಾಗಿದ್ದರೆ ಪಂಚಾಯತನ ಪೂಜೆಯಂತಹವುಗಳಲ್ಲಿ  “ಪ್ರತೀಕ” ಗಳನ್ನಿಟ್ಟು ಪೂಜಿಸಲಾಗುತ್ತದೆ.  ವಿಷ್ಣುವಿಗೆ ಸಾಲಗ್ರಾಮ ಎಂಬ ಶಿಲೆಯನ್ನೂ ಶಿವನಿಗೆ ಶಿವಲಿಂಗ ಎಂಬ ಶಿಲೆಯನ್ನೂ ಪ್ರತೀಕವಾಗಿ ಇಟ್ಟುಕೊಳ್ಳಲಾಗುತ್ತದೆ. ಈ ಎರಡೂ ಶಿಲೆಗಳು ಆಕಾರದಲ್ಲಿ ಯಾವುದೇ ವ್ಯಕ್ತಿ ಅಥವಾ ವಸ್ತುವನ್ನು ಹೋಲುವುದಿಲ್ಲ. ಇವುಗಳ ಆಯ್ಕೆಗೆ ಸಾಧಕರ ಪರಂಪರೆಯೇ ಆಧಾರ. ಈ ಪ್ರತೀಕಗಳನ್ನು ಪೂಜಿಸುವುದರ ಕುರಿತು ಪೌರಾಣಿಕ ಕಥೆಗಳು ಹುಟ್ಟಿಕೊಂಡಿವೆಯಾದರೂ ಅವು ಅರ್ಥವಾದಗಳೇ ಹೊರತು ಐತಿಹಾಸಿಕ ಪ್ರಾಮುಖ್ಯ ಅಥವಾ ಕಾರ್ಯಕಾರಣ ಸಂಬಂಧ ಇರುವಂತಹವುಗಳಲ್ಲ. ವಿಷ್ಣುವಿಗೂ ಸೂರ್ಯನಿಗೂ ಇರುವ ಅಭೇದ ಕಲ್ಪನೆಯ ಕುರಿತು ಹಿಂದೆ ಸೂಚಿಸಲಾಗಿದೆ. ಆದ್ದರಿಂದ ಅವನಿಗೆ ಪ್ರತ್ಯೇಕ ಪ್ರತೀಕವನ್ನಿಡುವ ಸಂಪ್ರದಾಯವಿಲ್ಲ. ದುರ್ಗೆ-ಗಣಪತಿಯರಿಗೆ ಪ್ರತಿಮೆಗಳನ್ನಿಟ್ಟು ಪೂಜಿಸುವ ರೂಢಿ ಇದೆ.

“ಪಂಚಾಯತನ” ಪೂಜೆಯಲ್ಲಿ ಸೂರ್ಯ, ಗಣಪತಿ, ದುರ್ಗೆ, ಶಿವ ಮತ್ತು ವಿಷ್ಣು ಇವರು ಪೂಜೆಗೊಳ್ಳುವ ದೇವತೆಗಳು. ಈ ಐವರು ದೇವತೆಗಳು ಅನುಕ್ರಮವಾಗಿ ಆರೋಗ್ಯ, ನಿರ್ವಿಘ್ನತೆ, ಐಶ್ವರ್ಯ, ಜ್ಞಾನ ಮತ್ತು ಮೋಕ್ಷಗಳನ್ನು ಕೊಡತಕ್ಕವರೆಂದು ಪರಂಪರಾಗತವಾದ ಕಲ್ಪನೆಯಿದೆ. “ಈ ಐದು ಫಲಗಳಿಗಾಗಿ ಈ ಐವರು ದೇವತೆಗಳನ್ನು ಪೂಜಿಸುತ್ತೇವೆ” ಎಂಬುದು ಸಂಕಲ್ಪವಾಕ್ಯ. ಇಲ್ಲಿ ಜ್ಞಾನ-ಮೋಕ್ಷಗಳನ್ನು ಕೊನೆಗೆ ಹೇಳಲಾಗಿದ್ದು ಅವುಗಳ ಅಂತಿಮತೆ ಸೂಚಿತವಾಗುತ್ತದೆ. ಅಭಿಷೇಕಕ್ಕೆ ಉಪಯೋಗಿಸಲಾಗುವ ಮಂತ್ರಗಳಲ್ಲಿ ಮುಖ್ಯವಾದುದು ಪುರುಷಸೂಕ್ತ. ಈ ಸೂಕ್ತದಲ್ಲಿ ಸೃಷ್ಟಿಕ್ರಮವನ್ನು ವಿವರಿಸಲಾಗುತ್ತದೆ.ವಿರಾಟ್ ಪುರುಷನ ದೇಹಾಂಶಗಳೇ ಚರಾಚರಗಳೆಂದು ಸೂಚಿತವಾಗುತ್ತದೆ. ಇಲ್ಲಿಯೂ ಯಾವನು ಇದೆಲ್ಲವನ್ನೂ ತಿಳಿಯುತ್ತಾನೋ ಅವನು ಅಮೃತತ್ತ್ವವನ್ನು ಹೊಂದುತ್ತಾನೆ ಎಂಬ ಸೂಚಕವಾಕ್ಯವಿರುವುದರಿಂದ ಜ್ಞಾನಪಾರಮ್ಯವು ಸೂಚಿತವಾಗಿ ವೇದಾಂತದಲ್ಲಿ ಮಂತ್ರಾರ್ಥವು ಸಮನ್ವಯಗೊಳ್ಳುತ್ತದೆ.

ಪಂಚಾಯತನಪೂಜೆಯಲ್ಲಿ ಅರ್ಚನ ವಿಧಾನವು ಐದು ದೇವತೆಗಳಿಗೂ ಸಮಾನವಾಗಿದ್ದು ನಾಮನಿರ್ದೇಶನಗಳು ಮಾತ್ರ ಬೇರೆಬೇರೆ ಇರುತ್ತವೆ. ಈ ವಿಧಾನದಲ್ಲಿ ನವಶಕ್ತಿ ಪೂಜೆ, ಆವಾಹನೆ, ಸಂಸ್ಥಾಪನಾದಿ ಮುದ್ರಾಭಿನೇಯ ಕ್ರಿಯೆಗಳು, ಮೂಲಮಂತ್ರೋಚ್ಚಾರ, ಅರ್ಘ್ಯ, ಋಷಿದೇವತಾಛಂದಸ್ಸುಗಳ ನಿರ್ದೇಶನದೊಂದಿಗೆ ಷಡಂಗನ್ಯಾಸ, ಧ್ಯಾನ, ಪ್ರಾಣಪ್ರತಿಷ್ಠೆ, ಪಂಚೋಪಚಾರ, ದ್ವಾದಶನಾಮಪೂಜೆ-ಇಷ್ಟು ಅಂಶಗಳಿರುತ್ತವೆ. ಇದರ ಅನಂತರ ಈ ಎಲ್ಲಾ ದೇವತೆಗಳಿಗೂ ಒಟ್ಟಿಗೆ ಧ್ಯಾನಾವಾಹನಾದಿ ಉಪಚಾರಗಳನ್ನು ನಡೆಸಲಾಗುತ್ತದೆ.ಅನಂತರ “ಪ್ರಸನ್ನಪೂಜೆ” ಎಂಬ ಹೆಸರಿನಲ್ಲಿ ಈ ಎಲ್ಲಾ ದೇವತೆಗಳನ್ನು ದ್ವಾದಶನಾಮಗಳಿಂದ ಅರ್ಚಿಸಿ ಬ್ರಹ್ಮಾರ್ಪಣವನ್ನು ನಡೆಸಲಾಗುತ್ತದೆ.  ಇಲ್ಲಿ ಉಪಾಸಿತ ದೇವತೆಗಳು ಯಾರೇ ಇದ್ದರೂ ಅವರು ಪರಬ್ರಾಹ್ಮಾಂಶಗಳೇ ಎಂಬ ಮುಖ್ಯ ವಿಚಾರವು ಸೂಚಿತವಾಗುತ್ತದೆ. ಎಲ್ಲಾ ಕರ್ಮಗಳ ಅಂತಿಮ ಫಲವು ಆತ್ಮಶುದ್ಧಿ ಅಥವಾ ಈಶ್ವರ ಸಮರ್ಪಣೆ ಎಂಬ ಭಗವದ್ಗೀತೋಕ್ತ ಅಂಶದಲ್ಲಿ ಸಮಗ್ರಪೂಜೋದ್ದೇಶವು ಸಮನ್ವಯಗೊಳ್ಳುತ್ತದೆ. ಅನಂತರ ಪ್ರಸಾದ ಸ್ವೀಕಾರ ಮತ್ತು ಉದ್ವಾಸನೆಗಳು ಆಚರಿಸಲ್ಪಡುತ್ತವೆ. ಉದ್ವಾಸನೆಯ ಸಂದರ್ಭದಲ್ಲಿ ಪ್ರತೀಕದಲ್ಲಿ ಆವಾಹಿತವಾದ ಶಕ್ತಿಯನ್ನು ತನ್ನಲ್ಲೇ ಲೀನಗೊಳಿಸುವುದು ಮತ್ತು ದೇಹವೇ ದೇವಾಲಯವೆಂದೂ ಜೀವನೇ ಈಶ್ವರನೆಂದೂ ಪುನರುಚ್ಚರಿಸುವುದೂ ಆಚಾರ್ಯಶಂಕರರ ನಿಲುವಿಗೆ ಸಂಪೂರ್ಣ ಹೊಂದುವಂತಿರುತ್ತದೆ.

ಪಂಚದೇವತೆಗಳಲ್ಲೊಬ್ಬನಾದ ಶಿವನನ್ನು ಪಂಚಬ್ರಹ್ಮಾತ್ಮಕನೆಂದು ಪುನಃ ವಿಶೇಷ ರೀತಿಯಿಂದ ಪೂಜಿಸುವ ಪರಿಪಾಠವೂ ಕೆಲವೆಡೆ ರೂಢಿಯಲ್ಲಿದೆ. ಈ ಐದು ದೇವತೆಗಳಲ್ಲಿ ಒಬ್ಬನೋ ಇಬ್ಬರೋ ತಮ್ಮ ಇಷ್ಟದೇವತೆಯೋ ಕುಲದೇವತೆಯೋ ಆಗಿದ್ದಲ್ಲಿ ಅವರನ್ನು ನೈಮಿತ್ತಿಕವಾಗಿ ವಿಶೇಷರೀತಿಯಿಂದ ಅರ್ಚಿಸುವ ಸಂದರ್ಭಗಳಿವೆ. ನವಗ್ರಹಪೂಜೆ, ಸತ್ಯಗಣಪತಿವ್ರತ, ತ್ರಿಕಾಲದುರ್ಗಾ ಪೂಜೆ,ಏಕಾದಶರುದ್ರ, ಶತರುದ್ರಾದಿಗಳು, ಸತ್ಯನಾರಾಯಣ ವ್ರತ-ಇತ್ಯಾದಿಗಳು ಪಂಚಾಯತನ ಪೂಜೆಯ ವಿಸ್ತರಣೆಗಳೆಂದು ತತ್ತ್ವತಃ ಒಪ್ಪಬಹುದು.

ಪಂಚದೇವತೆಗಳು ಪಂಚಭೂತಗಳ ಅಧಿಪತಿಗಳಾದುದರಿಂದ “ಪಂಚ” ಎಂಬ ಸಂಖ್ಯೆ ವಿಶಿಷ್ಟವಾಗುತ್ತದೆ. ಪಂಚಭೂತಗಳಲ್ಲಿ ಆಕಾಶಕ್ಕೆ ವಿಷ್ಣುವೂ, ಅಗ್ನಿಗೆ ದುರ್ಗೆಯೂ, ವಾಯುವಿಗೆ ಸೂರ್ಯನೂ, ಭೂಮಿಗೆ ಶಿವನೂ, ನೀರಿಗೆ ಗಣೇಶನೂ ಅಧಿಪತಿಗಳಾಗುತ್ತಾರೆ. ಸೂರ್ಯನು ವಾಯುವಿನ ಅಧಿಪತಿಯಾದುದರಿಂದ ಮತ್ತು ವಾಯು ಆಯುರ್ವೇದೀಯ ತ್ರಿದೋಷಗಳಲ್ಲಿ ಪ್ರಮುಖವಾಗಿರುವುದರಿಂದ ಅವನು ವಾಯು ನಿಯಾಮಕನಾಗಿ ಆರೋಗ್ಯಕಾರಕನಾಗುತ್ತಾನೆ. ಸೂರ್ಯಾರಾಧನೆಯಿಂದ ಆರೋಗ್ಯ ಪಡೆದ ಬಗ್ಗೆ ಕಥೆಗಳು ಇವೆ. ಗಣೇಶನು ನೀರಿನ ಅಧಿಪತಿ. ನೀರು ಪಂಚಭೂತಗಳಲ್ಲಿ ಮೊದಲನೆಯ ಸೃಷ್ಟಿಯೆಂದು ಮನುಸ್ಮೃತಿ ತಿಳಿಸುತ್ತದೆ. ಇದರಿಂದಲೇ ಅವನಿಗೆ ಮೊದಲ ಪೂಜೆ. ಅವನನ್ನು ನೀರಿನಲ್ಲಿ ವಿಸರ್ಜಿಸುವುದರ ರಹಸ್ಯವೂ ಇದೇ ಆಗಿದೆ. ಶಿವನು ಪೃಥ್ವೀತತ್ತ್ವದ ಅಧಿಪತಿಯಾದುದರಿಂದ ಅವನಿಗೆ ಪಾರ್ಥಿವಲಿಂಗವೇ ಇಷ್ಟವಾದುದು. ವಿಷ್ಣುವು ಆಕಾಶತತ್ತ್ವದ ಅಧಿಪತಿ. ಆಕಾಶವು ಶಬ್ಧವನ್ನು ತನ್ನ ಗುಣವನ್ನಾಗಿ ಹೊಂದಿರುವಂತಹುದು. ಶಬ್ಧವೆಂದರೂ ನಾಮರೂಪ ಪ್ರಪಂಚವೆಂದರೂ ಒಂದೇ. ಆದ್ದರಿಂದಲೇ ವಿಷ್ಣುವಿಗೆ ನಾಮಸಂಕೀರ್ತನೆಯು ಇಷ್ಟವಾದುದು. ಹೀಗೆಯೇ “ನವಶಕ್ತಿ” ಎಂಬಲ್ಲಿ ಸತ್ತ್ವ, ರಜಸ್ ಮತ್ತು ತಮಸ್ ಎಂಬ ಮೂರು ಗುಣಗಳ ತ್ರಿವೃತ್ಕರಣದಿಂದ ಸಿದ್ಧಿಸುವ “ನವ”ಸಂಖ್ಯೆ ಅವುಗಳ ಸಂಕೀರ್ಣತೆಯನ್ನು ಪ್ರತಿನಿಧಿಸುತ್ತದೆ. “ದ್ವಾದಶನಾಮ” ಎಂಬಲ್ಲಿಯ ಸಂಖ್ಯೆ ದ್ವಾದಶಾತ್ಮಕನಾದ ಸೂರ್ಯನಿಗೆ ಸಂಬಂಧಿಸಿದ್ದು ಇತರ ನಾಲ್ವರ ಮೇಲೂ ಆರೋಪಿತವಾಗುತ್ತದೆ.

ಪಂಚದೇವತೆಗಳನ್ನು ಸೂರ್ಯ, ಗಣಪತಿ, ದುರ್ಗೆ, ಶಿವ ಮತ್ತು ವಿಷ್ಣು ಎಂಬ ಅನುಕ್ರಮದಲ್ಲಿಯೇ ಪೂಜಿಸಬೇಕೆಂದು ಪರಂಪರಾಗತವಾದ ನಂಬಿಕೆ ಇದೆ. ಸೂರ್ಯನು ಸಂಧ್ಯೋಪಾಸನೆಯಂತಹ ನಿತ್ಯಾನುಷ್ಠಾನದ ನೇರ ವಿಸ್ತರಣೆಯಂತಿರುವುದರಿಂದ ಅವನಿಗೆ ಪ್ರಾಥಮ್ಯ. ಇಷ್ಟದೇವತೆಗಳೋ ಕುಲದೇವತೆಗಳೋ ಆಗುವವರ ಮಧ್ಯದಲ್ಲಿ ಗಣೇಶನಿಗೇ ಅಗ್ರಸ್ಥಾನ.

“ಇಡೀ ವಿಶ್ವದಲ್ಲಿ ಪರತತ್ತ್ವದ ಅಸ್ತಿತ್ವವಿದ್ದು ಅದರಿಂದೊದಗುವ ಪ್ರಾಶಸ್ತ್ಯವು ದೇಶಕಾಲ ಸೀಮಿತವಲ್ಲದಿದ್ದರೂ ಅಂತಹ ವಿಶಾಲತೆಯನ್ನು ಜನಸಾಮಾನ್ಯರು ಗ್ರಹಿಸಲು ಅಸಮರ್ಥರಾದುದರಿಂದ ದೇಶಕಾಲಗಳ ಪ್ರಾಶಸ್ತ್ಯವನ್ನು ಕಲ್ಪಿಸುವ ಅಗತ್ಯಬೀಳುವುದು. ಎಲ್ಲೆಲ್ಲೂ ಪರತತ್ತ್ವವನ್ನು ಕಾಣುವ ಮಹಾಜ್ಞಾನಿಗೆ ಸಗುಣತತ್ತ್ವದ ಕಲ್ಪನೆಯಂತಹದರ ಅವಶ್ಯಕತೆ ಬೀಳದು” ಎಂಬುದನ್ನು ಸಂದರ್ಭ ಒದಗಿದಾಗಲೆಲ್ಲಾ ಜನಸಾಮಾನ್ಯರಿಗೆ ಮನದಟ್ಟು ಮಾಡಿಸಬೇಕು. ಹೀಗೆ ಮಾಡಿದರೆ ಪರಂಪರಾಗತಪೂಜಾ ವಿಧಾನಗಳಲ್ಲಿ ಹಿಂದಿನ ಸಾಧಕರ ಸಿದ್ಧಿಯ ಪ್ರಭಾವದಿಂದ ಅಧ್ಯಾತ್ಮಿಕತೆ ಕಿಂಚಿತ್ತಾದರೂ ಉಳಿದುಕೊಂಡು ಜನಸಾಮಾನ್ಯರ ಮೇಲೆ ಪ್ರಭಾವ ಬೀರಿ ಅವರ ಭ್ರಾಂತಿಗಳನ್ನು ಹೋಗಲಾಡಿಸಿ ಸಾಮಾಜಿಕ ಅನ್ಯಾಯಗಳನ್ನು ದೂರಮಾಡುವ ಸಾಧ್ಯತೆಯಿದೆ.

ಪೂಜಾದಿಗಳಿಗೆ ಸಂಬಂಧಿಸಿದ ವಿದ್ವತ್ತ್ವವನ್ನು ಸಂಪಾದಿಸುವಾಗ ಕೆಲವು ಎಚ್ಚರಿಕೆಗಳನ್ನು ವಹಿಸಬೇಕು. ಪೂಜಾದಿಗಳು ಕರ್ಮಕಾಂಡ ಸಂಬಂಧಿಗಳಾಗಿದ್ದರೂ ಜ್ಞಾನಕಾಂಡವನ್ನು ದೂರ ಇಟ್ಟು ಕರ್ಮಕಾಂಡವನ್ನಷ್ಟೇ ಅಧ್ಯಯನ ಮಾಡುವುದರಿಂದ ವಿದ್ವಾಂಸರೆನ್ನಿಸಿಕೊಂಡವರೂ ಕೂಡ ಅಪಾಯಗಳಿಗೆ ಬಲಿಬೀಳುವ ಸಾಧ್ಯತೆಯಿದೆ. ಕರ್ಮಕಾಂಡ-ಜ್ಞಾನಕಾಂಡಗಳು ಪರಸ್ಪರ ಪೂರಕಗಳಾಗಿದ್ದರೂ ಜ್ಞಾನಕಾಂಡದ್ದೇ ಪಾರಮ್ಯವೆಂಬುದನ್ನು ಮರೆಯಬಾರದು. ಧರ್ಮಾಚರಣೆಗೆ ಧರ್ಮಶಾಸ್ತ್ರ ಗ್ರಂಥಗಳಂತೆ ವೇದಾಂತ ಗ್ರಂಥಗಳೂ ಆವಶ್ಯಕ ಎಂಬ ಹಿನ್ನೆಲೆಯಲ್ಲಿ ವೈದಿಕಾಧ್ಯಯನ ನಡೆಯಬೇಕು. ವೈದಿಕ ವಾಂಙ್ಮಯದುದ್ದಕ್ಕೂ ಆಧಿಭೌತಿಕ, ಆಧಿದೈವಿಕ ಹಾಗೂ ಆಧ್ಯಾತ್ಮಿಕ ಎಂಬ ಮೂರು ಸ್ತರಗಳಲ್ಲಿ ಶಬ್ದಾರ್ಥಶಕ್ತಿಯು ಕೆಲಸಮಾಡುತ್ತದೆ ಎಂಬ ವೇದಾಂಗಕಾರರ ನಿಲುವು ಗಮನಾರ್ಹ. ಈ ಕಾರಣದಿಂದ ಆಧ್ಯಾತ್ಮಿಕ ಸ್ತರವನ್ನು ತಲುಪದ ವೈದಿಕಾಂಶ ಅಪೂರ್ಣ. ಪೂಜೆ-ಹವನದಂತಹ ಯಾವುದೇ ಕರ್ಮಕಾಂಡೋಕ್ತಕ್ರಿಯೆ ಇದ್ದರೂ ಅದರ ಅಂತಿಮ ಲಕ್ಷ್ಯ ಆಧ್ಯಾತ್ಮಿಕ ಸಾಕ್ಷಾತ್ಕಾರವೇ ಎಂಬ ಅಂಶ ಸದಾ ಜಾಗೃತವಾಗಿದ್ದಲ್ಲಿ ಮಾತ್ರ ವೈದಿಕಕ್ರಿಯಾಭಾಗವು ಅರ್ಥಪೂರ್ಣವಾಗಬಹುದು; ಜ್ಞಾನಪಾರಮ್ಯವನ್ನು ಬೋಧಿಸಿದ ಆಚಾರ್ಯಶಂಕರರ ನಿಲುವಿಗೆ ಅವರ ಶಿಷ್ಯಪರಂಪರೆಯವರು ನ್ಯಾಯ ಒದಗಿಸಿದಂತಾಗಬಹುದು.

~*~

Facebook Comments Box