ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~
ಜ್ಞಾನಸುಮ 16:

ಪ್ರಸ್ಥಾನತ್ರಯ

ವಿದ್ವಾನ್ ಅನಂತಶರ್ಮಾ, ಭುವನಗಿರಿ

ಭಾರತೀಯದರ್ಶನಗಳಲ್ಲೆಲ್ಲ ವೇದಾಂತದರ್ಶನಕ್ಕೆ ಪ್ರಮುಖ ಸ್ಥಾನ. ಅದು ದರ್ಶನಗಳ ರಾಜ.“ತಾವದ್ಗರ್ಜಂತಿ ಶಾಸ್ತ್ರಾಣಿ ಜಂಬುಕಾ ವಿಪಿನೇ ಯಥಾ। ನ ಗರ್ಜತಿ ಮಹಾಶಕ್ತಿಃ ಯಾವದ್ವೇದಾಂತಕೇಸರಿ॥ ಎಂಬ ಉಕ್ತಿ ಪ್ರಸಿದ್ಧವಾದದ್ದು. ಕಾಡಿನಲ್ಲಿ ಸಿಂಹದ ಗರ್ಜನೆಯನ್ನು ಕೇಳಿದೊಡನೆಯೇ ಇತರ ಪ್ರಾಣಿಗಳು ಬಾಯಿ ಮುಚ್ಚಿಕೊಳ್ಳುತ್ತವೆ. ಅದೇ ರೀತಿ ವೇದಾಂತದರ್ಶನವು ರಂಗಪ್ರವೇಶ ಮಾಡಿದೊಡನೆಯೇ ಇತರ ದರ್ಶನಗಳು ಹಿಂದೆ ಸರಿಯುತ್ತವೆ. ಇದು ಈ ದರ್ಶನದ ಹಿರಿಮೆ. ಈ ದರ್ಶನವು ಮುಖ್ಯವಾಗಿ ಮೂರು ಗ್ರಂಥಗಳ ಆಧಾರದ ಮೇಲೆ ನಿಂತಿದೆ. ಜಗದ್ಗುರು ಶಂಕರಾಚಾರ್ಯರು ಈ ಮೂರು ಗ್ರಂಥಗಳಿಗೆ ಭಾಷ್ಯವನ್ನು ಬರೆಯುವುದರ ಮೂಲಕ ಅದ್ವೈತವೇದಾಂತದ ದರ್ಶನಕ್ಕೆ ಭದ್ರವಾದ ಅಡಿಪಾಯವನ್ನು ಹಾಕಿದರು.
೧.ಉಪನಿಷತ್ತುಗಳು  ೨.ಭಗವದ್ಗೀತೆ ೩.ಬ್ರಹ್ಮಸೂತ್ರಗಳು ಇವೇ ಆ ಮೂರು ಗ್ರಂಥಗಳು. ಅದ್ವೈತವೇದಾಂತ ಪರಂಪರೆಯಲ್ಲಿ ಇವುಗಳನ್ನು ಪ್ರಸ್ಥಾನತ್ರಯಗಳೆಂದು ಕರೆಯುತ್ತಾರೆ. ಪ್ರಸ್ಥಾನವೆಂದರೆ ಮಾರ್ಗವೆಂದರ್ಥ. ತತ್ತ್ವಜ್ಞಾನವನ್ನು ಪರಿಚಯ ಮಾಡಿಕೊಳ್ಳುವ ಮೂರು ಮಾರ್ಗಗಳಿವು. ಆದರೆ ಈ ಮೂರು ಪರಸ್ಪರನಿರಪೇಕ್ಷವಾದ ಮೂರು ಪ್ರತ್ಯೇಕಮಾರ್ಗಗಳಲ್ಲ. ಈ ಮೂರು ಮಾರ್ಗಗಳೂ ಪರಸ್ಪರ ಸಹಾಯಕವಾಗಿಯೇ ತತ್ತ್ವಜ್ಞಾನವನ್ನು ದೊರಕಿಸಿಕೊಡುತ್ತವೆ. ಅದನ್ನೇ ವಿವರವಾಗಿ ತಿಳಿದುಕೊಳ್ಳೋಣ.

   ಹೆಸರೇ ಹೇಳುವಂತೆ ವೇದಾಂತಗಳಲ್ಲಿ ಕಂಡುಬರುವ ದರ್ಶನವೇ ವೇದಾಂತದರ್ಶನ. ವೇದಾಂತವೆಂದರೆ ವೇದಗಳ ಅಂತ, ಕೊನೆಯ ಭಾಗ ಉಪನಿಷತ್ತುಗಳು ಎಂದರ್ಥ. ನಾಲ್ಕೂ ವೇದಗಳ ಕೊನೆಯ ಭಾಗಗಳು ಉಪನಿಷತ್ತುಗಳೆಂದೇ ಪ್ರಸಿದ್ಧವಾಗಿದೆ. ಇಂದು ಉಪನಿಷತ್ತುಗಳೆಂಬ ಹೆಸರಿನಿಂದ ಸುಮಾರು ಇನ್ನೂರಕ್ಕೂ ಹೆಚ್ಚು ಗ್ರಂಥಗಳು ಲಭ್ಯವಾಗುತ್ತಿದ್ದರೂ ಅವುಗಳಲ್ಲಿ ಕೇವಲ ಹದಿಮೂರೋ ಹದಿನಾಲ್ಕೋ ಉಪನಿಷತ್ತುಗಳು ಮಾತ್ರ ಪ್ರಾಚೀನವೆಂಬ ಗೌರವಕ್ಕೆ ಪಾತ್ರವಾಗಿದೆ. ಇವುಗಳಲ್ಲಿ ಹತ್ತಕ್ಕೆ ಶಂಕರಾಚಾರ್ಯರೇ ಸ್ವತಃ ಭಾಷ್ಯವನ್ನು ಬರೆದಿದ್ದಾರೆ. ಇನ್ನು ಮೂರು ನಾಲ್ಕು ಉಪನಿಷತ್ತುಗಳಿಂದ ವಾಕ್ಯಗಳನ್ನು ಅಲ್ಲಲ್ಲಿ ಉದ್ಧರಿಸಿದ್ದಾರೆ. ಆದ್ದರಿಂದ ಈ ಪ್ರಾಚೀನ ಉಪನಿಷತ್ತುಗಳೇ ವೇದಾಂತದರ್ಶನದ ಬುನಾದಿ.

  ವೇದಗಳ ಪೂರ್ವಭಾಗವೆಲ್ಲ ದೇವತಾಸ್ತೋತ್ರಾದಿಗಳಿಗೆ ಯಜ್ಞಯಾಗಾದಿಗಳಿಗೆ ಮೀಸಲಾಗಿರುವುದರಿಂದ ಅದಕ್ಕೆ ಕರ್ಮಕಾಂಡವೆಂದು ಹೆಸರು. ಉಪನಿಷತ್ತುಗಳು ತತ್ತ್ವವಿಚಾರಕ್ಕೆ ಮೀಸಲಾದವುಗಳು. ಈ ವಿಶ್ವದ ಸ್ವರೂಪವೇನು? ಇದರ ಮೂಲವೆಲ್ಲಿ ? ಆ ಮೂಲದ ಸ್ವರೂಪವೇನು? ಇದನ್ನೆಲ್ಲ ಅನುಭವಿಸುವ ಜೀವನ ವಾಸ್ತವಿಕತೆಯೇನು? ಅವನಿಗೂ ಆ ವಿಶ್ವಮೂಲಕ್ಕೂ ಏನು ಸಂಬಂಧ? ಜೀವನದ ಪರಮ ಗುರಿ ಏನು ?…ಇತ್ಯಾದಿ ಹತ್ತು ಹಲವು ವಿಚಾರಗಳು ಉಪನಿಷತ್ತುಗಳಲ್ಲಿ ಚರ್ಚಿತವಾಗಿದೆ. ಆದ್ದರಿಂದ ಇದನ್ನು ಜ್ಞಾನಕಾಂಡವೆಂದೂ ಕರೆಯಲಾಗುತ್ತದೆ. ಜೀವ, ಜಗತ್ತು, ಈಶ್ವರ ಈ ಮೂರನ್ನೂ ಕುರಿತಾದ ವಿಚಾರವನ್ನು ನಾವು ಸ್ಥೂಲವಾಗಿ ದರ್ಶನವೆಂದು ಕರೆಯುತ್ತೇವೆ. ವೇದಾಂತಗಳಲ್ಲಿ (ಉಪನಿಷತ್ತುಗಳಲ್ಲಿ)ವಿವರಿಸಲ್ಪಟ್ಟ ಈ ವಿಚಾರಗಳನ್ನು ನಾವು ವೇದಾಂತದರ್ಶನವೆಂದು ಕರೆಯುತ್ತೇವೆ. ಉಪನಿಷತ್ತುಗಳ ಅಭಿಪ್ರಾಯದಂತೆ ಈ ವಿಶ್ವದಲ್ಲಿ ಇರುವುದೆಲ್ಲ ಒಂದೇ ಒಂದು ಮಾಹಾಚೇತನ. ಅದು  ಸಚ್ಚಿದಾನಂದಸ್ವರೂಪಿ. ಅದರಿಂದಲೇ ಈ ತೋರುವ ವಿಶ್ವವು ಹುಟ್ಟಿ ಅದರಲ್ಲೇ ಇದ್ದು ಅದರಲ್ಲೇ ಲಯ ಹೊಂದುತ್ತದೆ. ಈ ಸಿದ್ಧಾಂತವು ಉಪನಿಷತ್ತುಗಳಿಂದ ಮಾತ್ರವೇ ತಿಳಿಯಲ್ಪಡುವುದಾದ್ದರಿಂದ ಉಪನಿಷತ್ತುಗಳೇ ಇದಕ್ಕೆ ಪರಮ ಪ್ರಮಾಣ. ಆದ್ದರಿಂದಲೇ ಉಪನಿಷತ್ತಿಗೆ ಶ್ರುತಿಪ್ರಸ್ಥಾನವೆಂಬ ಪ್ರಸಿದ್ಧಿ. ಆದರೆ ಉಪನಿಷತ್ತುಗಳ ಪರಮ ತಾತ್ಪರ್ಯವೇನು ಎಂದು ತಿಳಿಯುವುದು ಅಷ್ಟು ಸುಲಭವೇನಲ್ಲ. ಭಿನ್ನ ಭಿನ್ನ ಉಪನಿಷತ್ತುಗಳಲ್ಲಿ ವಿಷಯ ಪ್ರತಿಪಾದನೆ ಭಿನ್ನಭಿನ್ನವಾಗಿದೆ. ಕೆಲವು ವಾಕ್ಯಗಳು ಪರಸ್ಪರ ವಿರುದ್ಧವಾದ ಅರ್ಥವನ್ನು ಕೊಡುವಂತೆ ಭಾಸವಾಗುತ್ತದೆ. ಸೃಷ್ಟಿಕ್ರಮದ ನಿರೂಪಣೆಯಲ್ಲಿ ಭಿನ್ನತೆಯಿದೆ. ಉಪನಿಷತ್ತುಗಳಲ್ಲಿ ಅಲ್ಲಲ್ಲಿ ಉಪಯೋಗಿಸಿದ ಪ್ರಾಣ, ಆಕಾಶ, ಜ್ಯೋತಿ ಮುಂತಾದ ಪದಗಳು ಯಾವ ಅರ್ಥವನ್ನಿಟ್ಟುಕೊಂಡು ಹೊರಟಿವೆ ಎಂಬುದನ್ನು ತಿಳಿಯುವುದು ಕಷ್ಟ. ಹೀಗಿರುವಾಗ ಉಪನಿಷತ್ತುಗಳ ಪರಮತಾತ್ಪರ್ಯವನ್ನು ತಿಳಿಯುವುದೆಂತು? ಈ ಕುರಿತು ಪ್ರಾಚೀನ ವಿದ್ವಾಂಸರು ಸಾಕಷ್ಟು ವಿಚಾರ ಮಾಡಿರಬೇಕು. ಅದರ ಪರಿಣಾಮವೇ ಬಾದರಾಯಣರ ಶಾರೀರಕಮೀಮಾಂಸಾಸೂತ್ರಗಳು.

      ಶಾರೀರಕಮೀಮಾಂಸಾ ಗ್ರಂಥವು 555 ಸೂತ್ರಗಳ (ಚಿಕ್ಕ ಚಿಕ್ಕ ವಾಕ್ಯಗಳ) ಸಂಗ್ರಹ. ಇವುಗಳಿಗೆ ಬ್ರಹ್ಮಸೂತ್ರಗಳೆಂದೂ ಹೆಸರು. ಈ ಸೂತ್ರಗಳಲ್ಲಿ ಉಪನಿಷತ್ತುಗಳ ಪರಮ ತಾತ್ಪರ್ಯವನ್ನು ನಿರ್ಣಯಿಸಲಾಗಿದೆ. ಇದಕ್ಕಾಗಿ ಬಾದರಾಯಣರು ಕೆಲವು ಮಾರ್ಗಗಳನ್ನು ಅನುಸರಿಸಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಕರ್ಮಕಾಂಡದ ತಾತ್ಪರ್ಯವನ್ನು ನಿರ್ಧರಿಸಲು ಕೈಗೊಂಡ ನಿಯಮಗಳೇ ಆಗಿವೆ. ಒಂದು ಪರಿಚ್ಛೇದದ ತಾತ್ಪರ್ಯವನ್ನು ನಿರ್ಧರಿಸುವಾಗ ಆರು ಅಂಶಗಳನ್ನು ಗಮನಿಸಬೇಕಾಗುತ್ತದೆ.
೧. ಉಪಕ್ರಮ-ಉಪಸಂಹಾರಗಳಲ್ಲಿಯ ಏಕರೂಪತೆ, ೨. ಒಂದು ವಿಷಯವನ್ನು ಮತ್ತೆ ಮತ್ತೆ ಹೇಳುವುದು. ೩. ಬೇರೆ ಪ್ರಮಾಣಗಳಿಂದ ತಿಳಿಯಲಾಗದ ಹೊಸ ವಿಷಯ,೪. ಫಲಕಥನ,೫. ಹೊಗಳಿಕೆ ಅಥವಾ ತೆಗಳಿಕೆ,೬. ಸಮರ್ಥನೆ.
ಈ ಆರೂ ಅಂಶಗಳನ್ನೂ ಗಮನದಲ್ಲಿರಿಸಿಕೊಂಡು ಉಪನಿಷತ್ತಿನ ಒಂದು ಪರಿಚ್ಛೇದವನ್ನು ವಿಮರ್ಶಿಸಿದಾಗ ನಮಗೆ ಅದರ ತಾತ್ಪರ್ಯವೇನು ಎಂಬುದು ತಿಳಿದು ಬರುತ್ತದೆ. ಹೀಗೆ ಎಲ್ಲ ಪರಿಚ್ಛೇದಗಳ ತಾತ್ಪರ್ಯವನ್ನು ತಿಳಿದಾಗ ಉಪನಿಷತ್ತುಗಳ ಮಹಾತಾತ್ಪರ್ಯ ತಿಳಿದುಬರುತ್ತದೆ. ಈ ಮಾರ್ಗದಲ್ಲಿ ವಿಚಾರ ಮಾಡಿದ ಬಾದರಾಯಣರು ಸಚ್ಚಿದಾನಂದಸ್ವರೂಪಿಯಾದ ಪರಬ್ರಹ್ಮವೆ ಉಪನಿಷತ್ತುಗಳ ಪರಮತಾತ್ಪರ್ಯವೆಂದು ನಿರ್ದರಿಸಿದರು . ಇದಕ್ಕಾಗಿ ಅವರು ಇನ್ನೂ ಅನೇಕ ಯುಕ್ತಿಗಳನ್ನು ಆಶ್ರಯಿಸಿದ್ದಾರೆ. ಅವೆಲ್ಲವನ್ನೂ ಈ ಪುಟ್ಟ ಗ್ರಂಥದಲ್ಲಿ ಅಡಕ ಮಾಡಿದ್ದಾರೆ. ಈ ಗ್ರಂಥವು ನಾಲ್ಕು ಅಧ್ಯಾಯಗಳಾಗಿ ವಿಂಗಡಿಸಲ್ಪಟ್ಟಿದೆ. ಮೊದಲನೆಯ ಅಧ್ಯಾಯದಲ್ಲಿ ಎಲ್ಲ ಉಪನಿಷತ್ತುಗಳೂ ವಿಶ್ವದ ಮೂಲಕಾರಣವಾದ ಪರಬ್ರಹ್ಮವನ್ನೇ ವರ್ಣಿಸುತ್ತವೆಯೆಂದು ತೋರಿಸಿಕೊಡಲಾಗಿದೆ. ಎರಡನೆಯ ಅಧ್ಯಾಯದಲ್ಲಿ ವೇದಾಂತವಾಕ್ಯಗಳಲ್ಲಿ ಮೇಲ್ನೋಟಕ್ಕೆ ತೋರಿಬರುವ ಪರಸ್ಪರ ವಿರೋಧಗಳನ್ನು ಪರಿಹರಿಸಲಾಗಿದೆ. ಮುಕ್ತಿಯ ಸಾಧನಗಳ ಬಗ್ಗೆ ಮೂರನೆಯ ಅಧ್ಯಾಯದಲ್ಲಿಯೂ, ಮುಕ್ತಿಯ ಬಗ್ಗೆ ನಾಲ್ಕನೆಯ ಅಧ್ಯಾಯದಲ್ಲಿಯೂ ವಿವರಿಸಲಾಗಿದೆ. ಇಲ್ಲಿ ಬಾದರಾಯಣರು ಕೈಗೊಂಡ ಇನ್ನೊಂದು ವಿಶೇಷವೆಂದರೆ ಪರಪಕ್ಷನಿರಾಕರಣೆ. ವಿಶ್ವದ ಸ್ವರೂಪವನ್ನು ನಿರ್ಣಯಿಸುವ ವಿಷಯದಲ್ಲಿ ಉಪನಿಷತ್ ಸಿದ್ಧಾಂತವೇ ನಿರ್ದುಷ್ಟವಾದದ್ದು. ಕೇವಲ ಯುಕ್ತಿಗಳಿಂದ ಸ್ಥಾಪಿಸಿದ ಇತರ ಯಾವುದೇ ಸಿದ್ದಾಂತಗಳು ವಿರುದ್ದಯುಕ್ತಿಯ ಆಘಾತಕ್ಕೆ ನಿಲ್ಲಲಾರವು ಎಂಬುದನ್ನು ಅವರು ಎರಡನೆಯ ಅಧ್ಯಾಯದಲ್ಲಿ ತೋರಿಸಿಕೊಟ್ಟಿದ್ದಾರೆ. ಹೀಗೆ ಉಪನಿಷತ್ ಸಿದ್ದಾಂತವನ್ನು ಶ್ರುತಿಸಮ್ಮತವಾದ ನ್ಯಾಯಗಳ ಮೂಲಕ ಪ್ರತಿಷ್ಟಾಪಿಸಿದ್ದರಿಂದ ಬ್ರಹ್ಮಸೂತ್ರಗಳಿಗೆ ನ್ಯಾಯಪ್ರಸ್ಥಾನ ಅಥವಾ ಸೂತ್ರಪ್ರಸ್ಥಾನವೆಂಬ ಹೆಸರು ಬಂದಿತು.

ಬಾದರಾಯಣರು ಯುಕ್ತಿಗಳಿಂದ ಉಪನಿಷತ್ ಸಿದ್ಧಾಂತವನ್ನು ‘ಇದಮಿತ್ಥಂ’ಎಂದು ಪ್ರತಿಪಾದಿಸುವಾಗ ಸ್ಮೃತಿಯ ಉದಾಹರಣೆಗಳನ್ನೂ ಕೊಡುತ್ತಾರೆ. ಭಗವಂತನು ‘ಶ್ರುತಿಸ್ಮೃತಿಗಳೆರಡೂ ನನ್ನ ಆಜ್ಞೆಗಳೆ’ ಎನ್ನುತ್ತಾನೆ. ಅಂದ ಮೇಲೆ ಶ್ರುತಿಯ ಅಭಿಪ್ರಾಯವೇ ಸ್ಮೃತಿಯಲ್ಲಿ ಮೂಡಿರಬೇಕು. ಆದ್ದರಿಂದ ಸಂದಿಗ್ಧಶ್ರುತಿವಾಕ್ಯಗಳ ಅರ್ಥವನ್ನು ನಿರ್ಣಯಿಸುವುದರಲ್ಲಿ ಅಥವಾ ಬೇರೆ ಯುಕ್ತಿಗಳಿಂದ ನಿರ್ಣಯಿಸಲ್ಪಟ್ಟ ಅರ್ಥವನ್ನು ಸಮರ್ಥಿಸುವುದರಲ್ಲಿ ಸ್ಮೃತಿಯ ಪಾತ್ರ ದೊಡ್ಡದು. ಆದ್ದರಿಂದಲೇ ಬಾದರಾಯಣರು ತಮ್ಮ ಸಿದ್ಧಾಂತದ ಸಮರ್ಥನೆಗಾಗಿ ಅಲ್ಲಲ್ಲಿ ಸ್ಮೃತಿವಾಕ್ಯಗಳನ್ನು ಉದ್ಧರಿಸುತ್ತಾರೆ. ಹೀಗೆ ಅವರು ಸಮರ್ಥನೆಗಾಗಿ ಸೂಚಿಸಿದ್ದು ಹೆಚ್ಚಾಗಿ ಭಗವದ್ಗೀತೆಯನ್ನು. ಯಾವ ಸ್ಮೃತಿಗಳು ಉಪನಿಷತ್ತತ್ತ್ವವನ್ನು ಸರಳವಾಗಿ ಸ್ಪಷ್ಟವಾಗಿ ಪ್ರತಿಪಾದಿಸುತ್ತವೋ ಆ ಸ್ಮೃತಿಗಳೆಲ್ಲ ಉಪಾದೇಯವೇ ಆದರೂ ಭಗವದ್ಗೀತೆಗೆ ಅವುಗಳಲ್ಲಿ ವಿಶೇಷ ಸ್ಥಾನವಿದೆ. ಇದು ಸ್ವತಃ ಭಗವಂತನ ಮುಖಾರವಿಂದ ಬಂದದ್ದು ಹಾಗೂ ಸಂಪೂರ್ಣವಾಗಿ ಆತ್ಮತತ್ತ್ವವನ್ನು ಪರಿಚಯ ಮಾಡಿಕೊಡುವುದರ ಮೂಲಕ ಅರ್ಜುನನ ಮೋಹನಾಶಕ್ಕೆ ಕಾರಣವಾದದ್ದು. ಇದರಿಂದಾಗಿ ಅದು ಉಪನಿಷತ್ತುಗಳಿಗೆ ತೀರ ಹತ್ತಿರವಾಯಿತು. ಈ ಗೀತೆಯನ್ನು ಸೂತ್ರಕಾರರಾದ ಬಾದರಾಯಣರು ಮಾತ್ರವಲ್ಲ ಶ್ರೀ ಶಂಕರಾಚಾರ್ಯರೂ ಸಹ ತಮ್ಮ ಸೂತ್ರಭಾಷ್ಯದಲ್ಲಿ ಸುಮಾರು ಐವತ್ತು ಬಾರಿ ಉದ್ಧರಿಸಿದ್ದಾರೆ. ಸ್ವತಃ ಭಗವದ್ಗೀತೆಗೆ ಭಾಷ್ಯವನ್ನೂ ಬರೆದಿದ್ದಾರೆ. ಹೀಗೆ ಉಪನಿಷತ್ತುಗಳು ,ಭಗವದ್ಗೀತೆ ಹಾಗೂ ಬ್ರಹ್ಮಸೂತ್ರಗಳು ತತ್ತ್ವಜ್ಜಾನಸಂಪಾದನೆಯ ಮೂರು ದಾರಿಗಳು. ಇವುಗಳಲ್ಲಿ ಶ್ರುತಿಪ್ರಸ್ಥಾನವೆಂದು ಕರೆಯಲ್ಪಡುವ ಉಪನಿಷತ್ತೇ ನೇರವಾದ ಮಾರ್ಗ ಹಾಗೂ ಪರಮಪ್ರಮಾಣ. ಸ್ಮೃತಿ ಪ್ರಸ್ಥಾನವೆನ್ನಿಸಿಕೊಂಡ ಭಗವದ್ಗೀತೆಯು ಅದರ ಅರ್ಥಗ್ರಹಣಕ್ಕೆ ಸಹಕಾರಿ. ನ್ಯಾಯಪ್ರಸ್ಥಾನವೆನಿಸಿಕೊಂಡ ಬ್ರಹ್ಮಸೂತ್ರಗಳು ಶ್ರುತಿಯ ತಾತ್ಪರ್ಯವನ್ನು ನಿರ್ಣಯಿಸುವುದರಲ್ಲಿ ಸಹಕಾರಿ. ಈ ಗ್ರಂಥಗಳ ಮಹತ್ತ್ವವನ್ನು ಮನಗಂಡ ಶಂಕರಾಚಾರ್ಯರು ಈ ಮೂರಕ್ಕೂ ಭಾಷ್ಯವನ್ನು ಬರೆದು ಇವುಗಳಲ್ಲಡಗಿದ್ದ ಅದ್ವೈತತತ್ತ್ವವನ್ನು ಸ್ಪಷ್ಟವಾಗಿ ಪ್ರಕಾಶಪಡಿಸಿ ತಮ್ಮೆಲ್ಲರ ಗೌರವಾದರಗಳಿಗೆ ಪಾತ್ರರಾಗಿದ್ದಾರೆ.

            ಭಾಷ್ಯತ್ರಯಶರೀರಾಯ  ಶಂಕರಾಚಾರ್ಯಾಯ ತೇ ನಮಃ।

~*~

Facebook Comments