ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ19:

ಅದ್ವೈತ ವೇದಾಂತ

           ವಿದ್ವಾನ್ ಆರ್. ಪಿ. ಬೈಲಕೇರಿ, ಗೋಕರ್ಣ

ಶ್ರುತಿಸ್ಮೃತಿಪುರಾಣಾನಾಮಾಲಯಂ ಕರುಣಾಲಯಂ ।
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್॥

“ವೇದಾಂತ” ಎನ್ನುವುದು ಭಾರತ ದೇಶಕ್ಕಿರುವ ಅಪೂರ್ವ ಅನರ್ಘ್ಯ ರತ್ನವಾಗಿದೆ. ಬೇರೆಲ್ಲಾ ಸಂಪನ್ಮೂಲಗಳನ್ನು ಇತರರು ಭಾರತದಿಂದ ಕೊಂಡೊಯ್ಯಬಹುದು. ಆದರೆ ವೇದಾಂತವು ಯಾರೂ ಅಪಹರಿಸಲಾರದ ಅಮೂಲ್ಯ ನಿಧಿ. ನಾವು ನೋಡುವ, ಅನುಭವಿಸುವ ಈ ಜಗತ್ತು ಎಲ್ಲಿಂದ ಬಂದಿತು? ಯಾರ ಸೃಷ್ಟಿಯಿದು? ನನಗೂ ಈ ಜಗತ್ತಿಗೂ ಇರುವ ಸಂಬಂಧವೇನು? ಇತ್ಯಾದಿ ಜಿಜ್ಞಾಸೆಗಳಿಗೆ ಉತ್ತರ ಹುಡುಕುವ ಕೆಲಸವನ್ನು ವೇದಾಂತ ಮಾಡುತ್ತದೆ. ಭೌತಿಕ ಜಗತ್ತಿಗೆ ಹೊರತಾಗಿ ಅಧ್ಯಾತ್ಮ ಜಗತ್ತೊಂದಿದೆ ಎಂಬ ಅರಿವನ್ನು ಮೂಡಿಸುವುದೇ ವೇದಾಂತದ ಗುರಿ. ಚರಾಚರ ಜಗತ್ತಿಗೆ ಮೂಲವಾದ “ಬ್ರಹ್ಮ” ಎಂಬ ತತ್ವವಿದೆ. ಅದೇ ಪರಮತತ್ವ. ಪರಮಾರ್ಥವೂ ಅದೇ ಆಗಿರುತ್ತದೆ. ಹಾಗೂ “ಬ್ರಹ್ಮ ಒಂದೇ ಸತ್ಯ; ಕಾಣುವ ಈ ಜಗತ್ತು ಮಿಥ್ಯಾ” ಎಂಬ ರಹಸ್ಯವನ್ನು ವೇದಾಂತ ತಿಳಿಸುತ್ತದೆ. ಈ ಬ್ರಹ್ಮವನ್ನು ಅರಿತಾಗಲೇ ಸಂಸಾರದ ಬಂಧನದಿಂದ ಮುಕ್ತಿ ಸಿದ್ಧ. “ನಾನು ಯಾವಾಗಲೂ ಸುಖಿಯಾಗಿರಬೇಕು. ನನಗೆಂದೂ ದುಃಖಬರಬಾರದು” ಎಂಬುದು ಪ್ರತಿಯೊಬ್ಬ ಜೀವಕೋಟಿಯ ಆಕಾಂಕ್ಷೆ. ಸುಖಕ್ಕಾಗಿಯೇ ಮನುಷ್ಯ ಯತ್ನಿಸುತ್ತಾನೆ. ಕಷ್ಟಪಡುತ್ತಾನೆ. ಭ್ರಮರವೊಂದು ಮಕರಂದಕ್ಕಾಗಿ ಹೂವಿನಿಂದ ಹೂವಿಗೆ ಹಾರಾಡುವಂತೆ ಮಾನವನ ಮನಸ್ಸು ಸುಖವನ್ನು ಲೌಕಿಕ ವಸ್ತುಗಳಲ್ಲಿ ಹುಡುಕುತ್ತಾ ಕೊನೆಗೂ ನಿಜವಾದ ಸುಖವನ್ನು ಹೊಂದದೇ ಬಳಲುತ್ತದೆ. ಆದರೆ “ಸುಖ” ಹೊರಗಿನ ವಸ್ತುವಿನಲ್ಲಿಲ್ಲ. ಅದು ಅಂತರಾತ್ಮನಲ್ಲೇ ಇದೆ. ಬ್ರಹ್ಮಸಾಕ್ಷಾತ್ಕಾರದಿಂದಲೇ ನಿರತಿಶಯ ಆನಂದ ಲಭ್ಯ” ಎನ್ನುವುದನ್ನು ವೇದಾಂತ ಸ್ಪಷ್ಟಪಡಿಸುತ್ತದೆ. ವೇದಾಂತದ ಬ್ರಹ್ಮವಿಚಾರಕ್ಕೆ ಪ್ರಾಶಸ್ತ್ಯಕೊಡುತ್ತದೆ. ಶ್ರುತಿ,ಸ್ಮೃತಿ, ಬ್ರಹ್ಮಸೂತ್ರವೆಂದು ಪ್ರಸ್ಥಾನತ್ರಯ ವೇದಾಂತದ ಆಧಾರಸ್ತಂಭ. ವೇದಾಂತಗಳಲ್ಲೆಲ್ಲಾ “ಅದ್ವೈತ “ ಸಿದ್ಧಾಂತ ಭಾರತಾದ್ಯಂತ ವ್ಯಾಪಕವಾಗಿದೆ. ಅದ್ವೈತ ವೇದಾಂತವೇ ಪ್ರಾಚೀನದಿಂದಲೂ ವೇದಾಂತವೆಂದು ಪರಿಗಣಿಸಲ್ಪಟ್ಟಿದ್ದು, ಇತರ ಶಾಸ್ತ್ರಕಾರರು ಮಾಡುವ ವೇದಾಂತಿಮತ ಖಂಡನವೆಂದರೆ ಅದ್ವೈತ ಮತ ಖಂಡನವೇ ಆಗಿತ್ತು. ಈಗಲೂ ಮುಂದೂ ಸಹ ಅದರ ಜ್ಯೇಷ್ಠತೆ-ಶ್ರೇಷ್ಠತೆಗೆ ವ್ಯತ್ಯಾಸವಾಗಲು ಸಾಧ್ಯವಿಲ್ಲ.

ನಮಗೆ ಕಾಣಿಸುವ ಜಗತ್ತು ಭ್ರಾಮಕ. ಇದರ ಮೂಲ ರೂಪ ಬೇರೆಯೇ ಇದೆ. ಅದು ಮನಸ್ಸು ಇಂದ್ರಿಯಗಳಿಗೆ ಗೋಚರವಾಗದ ತತ್ವ; ಬ್ರಹ್ಮ. “ತತ್ತ್ವಮಸಿ”, “ಅಹಂಬ್ರಹ್ಮಾಸ್ಮಿ”, “ಏಕಮೇವಾದ್ವಿತೀಯಂ ಬ್ರಹ್ಮ”, “ನೇಹನಾನಾಸ್ತಿಕಿಂಚನ” “ಅದ್ವೈತಂ ಪರಮಾರ್ಥತಃ” ಇತ್ಯಾದಿ ಶ್ರುತಿಸ್ಮೃತಿ ವಾಕ್ಯಗಳ ಬಲದಿಂದ ಪರಬ್ರಹ್ಮವೊಂದೇ ನಿತ್ಯ-ಸತ್ಯ. ಮತ್ತೆಲ್ಲವೂ ಇರುವಂತೆ ಭಾಸವಾಗುತ್ತವೆ. ಅವು ಸತ್ತೂ ಅಲ್ಲ, ಅಸತ್ತೂ ಅಲ್ಲ. ಸದಸತ್ತೂ ಅಲ್ಲದ ಅನಿರ್ವಚನೀಯ. ಅವು ಬ್ರಹ್ಮದ ವಿವರ್ತ. ಹಗ್ಗವನ್ನು ಹಾವೆಂದು ತಿಳಿಯುವಂತೆ ಈ ಜಗತ್ತು ಕಾಣಿಸುತ್ತದೆ- ಎಂಬ ಅದ್ವೈತ ತತ್ತ್ವವನ್ನು ಆದ್ಯ ಶ್ರೀ ಶಂಕರಾಚಾರ್ಯರು ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗಳೆಂಬ ಪ್ರಸ್ಥಾನತ್ರಯಕ್ಕೆ ಭಾಷ್ಯ ಬರೆಯುವ ಮೂಲಕ ಜಗತ್ತಿಗೆ ಸಾರಿದ ಮಹಾನ್ ವಿಭೂತಿಪುರುಷರು. ವಿವೇಕ ಚೂಡಾಮಣಿ ಮುಂತಾದ ಸ್ವತಂತ್ರ ಮೌಲಿಕ ಗ್ರಂಥಗಳಿಂದಲೂ ಅದ್ವೈತ ಸಿದ್ಧಾಂತವನ್ನವರು ಶ್ರುತಪಡಿಸಿದರು. ಶ್ರೀಗೌಡಪಾದರ ಮಾಂಡೂಕ್ಯಕಾರಿಕೆಯಲ್ಲಿ ಅದ್ವೈತ ಸಿದ್ಧಾಂತದ ಮೂಲಸೆಲೆ ಕಂಡು ಬರುವುದಾದರೂ, ಶ್ರುತಿ ಮತ್ತು ಯುಕ್ತಿಗಳಿಂದ ಅದಕ್ಕೆ ಪರಿಪೂರ್ಣರೂಪ ಕೊಟ್ಟವರು ಶ್ರೀ ಶಂಕರಭಗವತ್ಪಾದರು. ಇತರ ಮತಗಳನ್ನು ಖಂಡಿಸಿ, ತನ್ನ ಮತವನ್ನು ಸಮರ್ಥಿಸುವಲ್ಲಿ ಶ್ರೀ ಶಂಕರರ ಪ್ರತಿಭೆ ಪರಿಪೂರ್ಣ. ಅವರು ಇದಕ್ಕಾಗಿ ಬಳಸುವ ಉಕ್ತಿಯುಕ್ತಿ ವೈಚಿತ್ರ್ಯಗಳು ಸತ್ಯಾನ್ವೇಷಣಕ್ಕಾಗಿಯೇ ಹೊರಟಿವೆ. ಜನರ ಅಭ್ಯುದಯ ನಿಃಶ್ರೇಯಸ ಸತ್ಯವನ್ನೇ ಅವಲಂಬಿಸಿವೆ-ಎನ್ನುವುದು ನಿತ್ಯಸತ್ಯವಾದದ್ದು.

ವ್ಯಕ್ತಿ-ವ್ಯಕ್ತಿಗಳಲ್ಲಿ, ವಸ್ತು-ವಸ್ತುಗಳಲ್ಲಿ ಭೇದ ನಮ್ಮ ದಿನನಿತ್ಯ ಜೀವನದಲ್ಲಿ ಕ್ಷಣ-ಕ್ಷಣಕ್ಕೂ ತೋರಿ ಬರುತ್ತಿರುವಾಗ, ಅನಾದಿ ಕಾಲದಿಂದ ಬಂದ ಈ ಸಂಸಾರ ನಿತ್ಯ, ಸತ್ಯವೆಂಬ ಅನುಭವವಿರುವಾಗ ಅದ್ವೈತವನ್ನು ಸ್ಥಾಪಿಸುವುದು ಅಸಾಮಾನ್ಯ ಕಾರ್ಯ. ದ್ವೈತದಲ್ಲೇ ವ್ಯವಹರಿಸುವ ಎಲ್ಲ ಜನರನ್ನೂ ಅದ್ವೈತದತ್ತ ಸೆಳೆದುಕೊಳ್ಳುವ ಹಾಗೂ ದ್ವೈತವನ್ನು ಪ್ರತಿಪಾದಿಸುವ ಇತರ ಶಾಸ್ತ್ತ್ರಕಾರರನ್ನು ಸಮರ್ಥವಾಗಿ ಎದುರಿಸುವ ಪಾಂಡಿತ್ಯ ಶ್ರೀ ಶಂಕರಭಗವತ್ಪಾದರದು ಆಗಿರುತ್ತದೆ. ಆದ್ದರಿಂದಲೇ ಇದೇ ತಳಹದಿಯ ಮೇಲೆ ಇಂದಿನ ವೈಜ್ಞಾನಿಕ ಯುಗದಲ್ಲೂ ಅದ್ವೈತ ಸಿದ್ಧಾಂತವೇ ಪ್ರಸಿದ್ಧಿ ಹೊಂದುತ್ತಾ, ಅಚ್ಚಳಿಯದೆ ಉಳಿದಿದೆ.

ನಾನು ಎಂಬ ವ್ಯವಹಾರದಿಂದಲೇ “ಆತ್ಮ” ಸ್ವಯಂ ಸಿದ್ಧನಾಗುತ್ತಾನೆ. ಪ್ರಪಂಚದಲ್ಲಿ “ನಾನು ಇಲ್ಲ” ಎಂಬ ವ್ಯವಹಾರ ಇಲ್ಲವಷ್ಟೇ ? ಆತ್ಮ ಒಬ್ಬ ಇದ್ದಾನೆಯೇ? ಅಥವಾ ಇಲ್ಲವೇ? ಎಂಬ ಚರ್ಚೆಗೆ ಇಲ್ಲಿ ಆಸ್ಪದವೇ ಇಲ್ಲ. ಚಾರ್ವಾಕ ದೇಹಕ್ಕಿಂತ ಭಿನ್ನವಾದ ಆತ್ಮನನ್ನು ಒಪ್ಪುವುದಿಲ್ಲ. ಇಂದ್ರಿಯ ಅಥವಾ ಮನಸ್ಸು “ಆತ್ಮ” ಎಂಬುದು ಕೆಲವರ ವಾದ. ದೇಹ, ಇಂದ್ರಿಯ, ಮನಸ್ಸುಗಳಿಗಿಂತ ಭಿನ್ನವಾಗಿ ಚೈತನ್ಯರೂಪಿ “ಆತ್ಮ” ಇದ್ದಾನೆ. ಸುಷುಪ್ತಿಯಲ್ಲಿ ಅದರ ಅರಿವು ಚೆನ್ನಾಗಿ ಆಗುತ್ತದೆ.

ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿ ಈ ಮೂರು ಅವಸ್ಥೆಗಳು ನಮಗೆ ತಿಳಿಯುತ್ತವೆ. ಜಾಗ್ರತ್ತಿನಲ್ಲಿ ಹೊರಗಿನವಸ್ತುಗಳು ಅರಿವಾಗುತ್ತವೆ. ಸ್ವಪ್ನದಲ್ಲಿ ಆಂತರಿಕ ಕಲ್ಪನೆಗಳು ಮೂಡಿಬರುತ್ತವೆ. ಸುಷುಪ್ತಿಯಲ್ಲಿ ಶುದ್ಧ ಅರಿವು ಇರುತ್ತದೆ. ಕಾರಣ “ಗಾಢ ನಿದ್ರೆಯಿಂದ ಎಚ್ಚತ್ತ ವ್ಯಕ್ತಿ” “ಚೆನ್ನಾಗಿ ನಿದ್ರಿಸಿದೆನು”ಎನ್ನುತ್ತಾನೆ. ನಿದ್ರಿಸುವಾಗಲೂ ಜ್ಞಾನ ಅಥವಾ ಚೈತನ್ಯ ಇರುತ್ತದೆ- ಎನ್ನುವುದು ಇದರಿಂದ ತಿಳಿಯುತ್ತದೆ. ಇದರಿಂದ ಆತ್ಮನ ಅಸ್ತಿತ್ವ ಸ್ವಯಂ ಸಿದ್ಧ ಎಂದ ಮೇಲೆ ಬ್ರಹ್ಮತತ್ವವೂ ಸ್ವಯಂ ಸಿದ್ಧವೇ ಎಂಬುದಕ್ಕೆ “ಆತ್ಮಾಚ ಬ್ರಹ್ಮ” “ಸರ್ವಂಖಲ್ಪಿದಂ ಬ್ರಹ್ಮ””ಬ್ರಹ್ಮವಿದಾಪ್ನೋತಿಪರಮ್” ಇತ್ಯಾದಿ ಶ್ರುತಿವಾಕ್ಯಗಳ ಪ್ರಾಮಾಣ್ಯದಿಂದ “ಅದ್ವೈತ”ವು ಸಿದ್ಧವಾಗುತ್ತದೆ.

ಭಿದ್ಯತೇ ಹೃದಯಗ್ರಂಥಿಃ ಛಿದ್ಯಂತೇ ಸರ್ವಸಂಶಯಾಃ ।
ಕ್ಷೀಯಂತೇ ಚಾಸ್ಯ ಕರ್ಮಾಣಿ ತಸ್ಮಿನ್ ದೃಷ್ಟೇ ಪರಾವರೇ॥

॥ ಇತಿ ಶಮ್ ॥

~*~

Facebook Comments