ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 21:

ಭಾರತ ಸಂಸ್ಕೃತಿಯಲ್ಲಿ ಯೋಗ

ವಿದ್ವಾನ್ ಡಾ.ಕೆ.ಎಲ್.ಶಂಕರನಾರಾಯಣ ಜೋಯ್ಸ್

ಸ್ವರ್ಗಮೋಕ್ಷಗಳ ಸಾಧನೆಗೆ ದ್ವಾರವಾದ ಭೂಮಿ “ಭಾರತ”. “ಭಾ” ಎಂದರೆ ಎಲ್ಲ ಜೀವಿಗಳ ಹೃದಯದಲ್ಲಿ ನಿತ್ಯವಾಗಿ ಬೆಳಗುವ ಸತ್ಯ-ಆತ್ಮಜ್ಯೋತಿ. ಅದರಲ್ಲಿ ರತರಾದವರೇ ಭಾರತರು. ಎಲ್ಲ ಜೀವಗಳೂ ಪರಮಾತ್ಮಜ್ಯೋತಿಯಿಂದ ಹೊರಹೊಮ್ಮಿದ ವಿಸ್ಫುಲಿಂಗ(ಕಿಡಿ)ಗಳಾಗಿವೆ. ಅವುಗಳು ಅನವರತವೂ ತಮ್ಮ ಮೂಲಸ್ಥಾನವಾದ ಪರಂಜ್ಯೋತಿಯೊಡನೆ ಒಂದುಗೂಡುವ ಹಂಬಲದಿಂದ ತುಂಬಿರುತ್ತದೆ. ಆದರೆ ಜನನ ಮರಣಗಳ ಚಕ್ರದಲ್ಲಿ ಸಿಕ್ಕಿ ತಮ್ಮ ಆ ಹಂಬಲವನ್ನು ಯಥಾರ್ಥವಾಗಿ ಗ್ರಹಿಸಿಕೊಳ್ಳಲಾರದೆ ಭ್ರಮೆಗೆ ಒಳಗಾಗುವುವು. ಸೃಷ್ಟಿಚಕ್ರಕ್ಕೆ ಒಳಪಟ್ಟವರಿಗೆಲ್ಲಾ ವಿಸ್ಮೃತಿಯ ಒಂದು ತೆರೆಯು ಆವರಿಸುವುದು ಸ್ವಾಭಾವಿಕವಾಗಿದೆ. ಉದಾಹರಣೆಗೆ ಚಿಕ್ಕ ಮಗುವಿನ ಜೀವನದ ನಡೆಯನ್ನು ಗಮನಿಸಬಹುದು. ಮಗುವು ಜನ್ಮದಿಂದ ಆರಂಭಿಸಿ ಕಾಲಕಾಲದಲ್ಲಿ ಸಹಜವಾಗಿ ನಿದ್ರೆಹೋಗುವುದು. ಆ ನಿದ್ರೆಯ ಸುಖವನ್ನು ಅನುಭವಿಸಿ ನವನವೋಲ್ಲಾಸದಿಂದ ಕಣ್ತೆರೆಯುವುದು. ಆದರೆ ಮತ್ತೊಮ್ಮೆ ನಿದ್ರೆಯ ನಡೆ ಆರಂಭವಾದರೆ ಹಿಂದಿನ ನಿದ್ರೆಯ ಸುಖದ ಸ್ಮರಣೆಯೊಂದಿಗೆ ಅದನ್ನು ಸ್ವಾಗತಿಸುವುದಿಲ್ಲ. ಬದಲಾಗಿ ರೋದಿಸಲಾರಂಭಿಸುತ್ತದೆ. ಈ ನಡೆಯ ಪರಿಚಯವುಳ್ಳ ತಾಯಿ ಮಗುವಿನ ಮುಖಲಕ್ಷಣವನ್ನು ನೋಡಿ ತೊಟ್ಟಿಲಲ್ಲಿಟ್ಟು ತೂಗಿ ಜೋಗುಳಹಾಡಿ ಮಗುವು ಹಾಯಾಗಿ ನಿದ್ರಿಸುವಂತೆ ಸಹಕರಿಸುತ್ತಾಳೆ. ಇದೇ ರೀತಿ ಮಗುವಿಗೆ ಕಾಲಕಾಲದಲ್ಲಿ ಹಸಿವು ಬಾಯಾರಿಕೆಗಳು ಗೋಚರಿಸಿದಾಗಲೂ ರೋದಿಸಲಾರಂಭಿಸುವುದು. ವಿಚಿತ್ರವಾದ ಹಟವನ್ನು ತೋರುವುದು. ಯಾವುದೋ ಆಟದ ಸಾಮಾನನ್ನು ಕೇಳುವುದು. ಅದೆಲ್ಲವನ್ನೂ ಒದಗಿಸಿದರೂ ಸಮಾಧಾನವಾಗುವುದಿಲ್ಲ. ಪ್ರತಿ ಹಂತದಲ್ಲೂ ಆಹಾರಪಾನೀಯಗಳಿಂದ ತನ್ನ ಹಸಿವು ಬಾಯಾರಿಕೆಗಳನ್ನು ಪರಿಹರಿಸಿಕೊಂಡಿದ್ದರೂ ಆ ಅನುಭವವು ಪ್ರಕೃತಿಯಲ್ಲಿ ಮರೆಯಾಗಿರುತ್ತದೆ. ಆದರೆ ತಾಯಿಗೆ ಕ್ಷಣಾರ್ಧದಲ್ಲಿ ಮಗುವಿನ ಸ್ಥಿತಿಯ ಅರಿವಾಗುತ್ತದೆ. ಅವಳು ಆಹಾರವನ್ನೋ ಹಾಲನ್ನೋ ನೀಡಿ ಸಂತೈಸುತ್ತಾಳೆ. ಇದೇ ರೀತಿ ಪ್ರತಿಜೀವಕ್ಕೂ ಭಗವಂತನ ದರ್ಶನದ ಹಸಿವು ತುಂಬಿದ್ದರೂ ಅದನ್ನು ಗುರುತಿಸಿಕೊಳ್ಳುವುದಿಲ್ಲ. ಆ ಹಸಿವನ್ನು ಪರಿಹರಿಸಿಕೊಳ್ಳಲು ವಿಷಯ ಸುಖಗಳಿಗೆ ಹಂಬಲಿಸುವುದು. ಆದರೆ ಅದೆಷ್ಟೋ ವಿಷಯ ಸುಖವನ್ನು ಅನುಭವಿಸಿದರೂ ಆ ಹಸಿವು ಪರಿಹಾರವಾಗದು. ಜೀವಿಗಳ ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಜ್ಞಾನಿಗಳು ಅವ್ಯಾಜಕರುಣೆಯಿಂದ ಕೂಡಿ ಆ ಪರಮಾತ್ಮ ದರ್ಶನಕ್ಕೆ ಅನುಕೂಲವಾದ ವಿದ್ಯಾರೂಪವಾದ ಮಾರ್ಗವನ್ನು ಬೆಳೆಸಿಕೊಟ್ಟರು. ಸನಾತನ ಮಹರ್ಷಿಗಳು ತಂದ ಎಲ್ಲ ವಿದ್ಯೆಗಳೂ ಪರಮಾತ್ಮದರ್ಶನದಲ್ಲಿ ಮಂಗಳಗೊಳ್ಳುತ್ತವೆ. “ಪ್ರಾಚೀನ ಭಾರತರು ಯೋಗಬಲದಿಂದ ಹಿಂದಕ್ಕೆ ಹರಿದು (ವಿಪಶ್ಚಿತಚೇತರಾಗಿ) ತಮ್ಮ ತಮ್ಮ ಶರೀರದಲ್ಲಿ ಅಡಗಿರುವ ಚತುಷ್ಷಷ್ಟಿವಿದ್ಯೆಕಲೆಗಳನ್ನು ಆತ್ಮಬಲದಿಂದಲೂ ಜ್ಞಾನದೃಷ್ಟಿಯಿಂದಲೂ ತಾವು ಕಂಡುಕೊಂಡು ಯಥಾಸ್ಥಿತಿಯನ್ನು ಹೊರಗೆ ಹೇಳಿರುವುದೇ ಅರವತ್ನಾಲ್ಕು ಕಲೆ(ವಿದ್ಯೆ)ಗಳಾಗಿವೆ” (ಅಮರವಾಣೀ ಸಂಪುಟ ೪) ಜ್ಞಾನಿಗಳ ಅಂತರಂಗಕ್ಕೆ ಗೋಚರವಾದ ಅಂತಹ ವಿದ್ಯೆಗಳಲ್ಲಿ ಯೋಗವೂ ಒಂದು”

ಯೋಗಪದದ ಪ್ರಯೋಗವು ಪ್ರಸ್ತುತಕ್ಕೆ ಹೊಂದಿಕೊಂಡಂತೆ ಪ್ರಧಾನವಾಗಿ ಎರಡು ಅರ್ಥಗಳಲ್ಲಿದೆ. ಯುಜಿರ್ (ಯೋಗೇ)ಎಂಬ ಧಾತುವಿನಿಂದ ರೂಪವೆತ್ತ ಯೋಗಪದವು ಸಂಯೋಗವೆಂಬ ಅರ್ಥವುಳ್ಳದ್ದಾಗಿದೆ. ಯಾವುದರ ಸಂಯೋಗ? ಜೀವವು ತನ್ನ ಮೂಲನೆಲೆಯಾದ ಪರಂಜ್ಯೋತಿಯಲ್ಲಿ ಸಂಯೋಗ ಹೊಂದುವುದು – ‘ಸಂಯೋಗೋ ಯೋಗ ಇತ್ಯಾಹುಃ ಜೀವಾತ್ಮಪರಮಾತ್ಮನೋಃ’ ಇಂತಹ ಸಂಯೋಗದಲ್ಲಿ ಪರ್ಯವಸಾನವಾಗುವಂತೆ ಈ ದೇಹಯಂತ್ರದಲ್ಲಿ ನಡೆಯುವ ಶಿವಶಕ್ತಿಸಮಾಯೋಗ, ಸೂರ್ಯಚಂದ್ರ ಸಮಾಯೋಗ, ಇಡಾಪಿಂಗಳಾಸಮಾಯೋಗ ಮೊದಲಾದವುಗಳನ್ನೂ ಯೋಗವೆನ್ನುತ್ತಾರೆ. ಇನ್ನೊಂದು ಯೋಗಪದವು ಸಮಾಧಿ ಎಂಬ ಅರ್ಥದಿಂದ ಕೂಡಿದ ಯುಜ್ (ಸಮಾಧ್ವು) ಧಾತುವಿನಿಂದ ರೂಪವೆತ್ತಿದೆ. ಅಲ್ಲಿ ಯೋಗವೆಂದರೆ ಸಮಾಧಿಯೆಂದರ್ಥ. ‘ಸಮಾಧಿ’ ಎಂದರೆ ಚಿತ್ತವು ತನ್ನ ವ್ಯಪಾರ (ವೃತ್ತಿ)ಯನ್ನು ನಿಲ್ಲಿಸಿದಾಗ ಉಂಟಾಗುವ ಸ್ಥಿತಿ. ಚಿತ್ತವು ಬಹಿರ್ಮುಖವಾಗಿ ಇಂದ್ರಿಯಗಳ ದ್ವಾರಾ ಹರಿಯುವ ಬದಲು ನಿಸ್ತರಂಗ ಮಹೋದಧಿಯಂತೆ ನಿರ್ವಿಷಯವಾದಾಗ ಚಿದ್ರೂಪನಾದ ಭಗವಂತನನ್ನು ಧರಿಸುತ್ತದೆ. ಆ ಸ್ಥಿತಿಯನ್ನು ತುರೀಯವೆನ್ನುತ್ತಾರೆ.

ನಿತ್ಯಜೀವನದಲ್ಲಿ ಸಾಮಾನ್ಯವಾಗಿ ಎಲ್ಲ ಮಾನವರೂ ಮೂರು ಸ್ಥಿತಿಗಳ ಅನುಭವವನ್ನು ಹೊಂದಿದ್ದಾರೆ. ಮಾತನಾಡುವುದು, ನಡೆಯುವುದು, ಆಹಾರ ಸ್ವೀಕರಿಸುವುದು ಮೊದಲಾಗಿ ಬಾಹ್ಯವಾದ ಪ್ರಪಂಚದೊಡನೆ ಇಂದ್ರಿಯ ಮನಸ್ಸುಗಳು ವ್ಯವಹರಿಸುವುದುಂಟು. ಇದೇ ಜಾಗೃತ ಸ್ಥಿತಿ. ಎರಡನೆಯದಾಗಿ ಹೊರಪ್ರಪಂಚವನ್ನು ಮರೆತು ಕನಸಿನ ಅನುಭವವನ್ನು ಪಡೆಯುವುದುಂಟು. ಇದೇ ಸ್ವಪ್ನಾವಸ್ಥೆ. ಆಳವಾದ ನಿದ್ರೆಯು ಇದನ್ನು ಮೀರಿದ ಇನ್ನೊಂದು ಅವಸ್ಥೆ. ‘ತುಂಬಾ ಚೆನ್ನಾಗಿತ್ತು. ಪ್ರಪಂಚದ ಅರಿವೇ ಇರಲಿಲ್ಲ’ ಎಂದು ಅದರ ಅನುಭವವನ್ನು ಸ್ಮರಿಸುವುದುಂಟು. ಇದು ಸುಷುಪ್ತಿ. ಈ ಮೂರು ಸ್ಥಿತಿಗಳಿಗೂ ಮಿಗಿಲಾಗಿ ಅಪರಿಮಿತವಾದ ಆನಂದವನ್ನು ಒದಗಿಸುವ ಇನ್ನೊಂದು ಸ್ಥಿತಿಯೇ ಸಮಾಧಿ. ಜೀವಾತ್ಮ ಪರಮಾತ್ಮರ ಸಮತ್ವವು ಅನುಭವಗೋಚರವಾಗುವ ಅವಸ್ಥೆ ‘ಸಮಾಧಿಃ ಸಮತಾವಸ್ಥಾ ಜೀವಾತ್ಮಪರಮಾತ್ಮನೋಃ’.

ಸಮಾಧಿಸ್ಥಿತಿಯನ್ನು ಸಹಜಾವಸ್ಥಾ ಎಂದೂ ಕರೆಯುತ್ತಾರೆ. ಈ ಹೆಸರೇ ತಿಳಿಸುವಂತೆ ಈ ಸ್ಥಿತಿಯೂ ಮಾನವನಿಗೆ ನಿದ್ರೆಯಂತೆ ಸಹಜವಾಗಿಯೇ ಉಂಟಾಗಬೇಕು. ನಿದ್ರೆಗೆ ಅನುಕೂಲವಾದ ಆಹಾರವ್ಯವಹಾರ ಮನಃಸ್ಥಿತಿಗಳಿದ್ದರೆ ಸಕಾಲದಲ್ಲಿ ನಿದ್ರೆಯು ತಾನಾಗಿಯೇ ಗೋಚರಿಸುವುದು. ಆದಕ್ಕಾಗಿ ತರಬೇತಿಯ ಅವಶ್ಯಕತೆಯಿಲ್ಲವಷ್ಟೇ! ಅದೇ ರೀತಿ ಸಮಾಧಿಯ ಅನುಭವಕ್ಕೆ ವಿರೋಧವಿಲ್ಲದಂತೆ ಜೀವನವನ್ನು ಸಾಗಿಸಿದಾಗ ಸಮಾಧಿಯು ಸಹಜವಾಗಿಯೇ ಸಿದ್ಧಿಸುವುದು. ಈ ನೇರದಲ್ಲಿ ಅದು ಸಹಜಾವಸ್ಥೆಯೆನ್ನಿಸಿಕೊಳ್ಳುವುದು. ಆದರೆ ಎಚ್ಚರದ (ಜಾಗೃತ್)ಜೀವನದಲ್ಲಿ ನಿದ್ರೆಯ ಅನುಭವಕ್ಕೆ ವಿರೋಧಿಯಾದ ಆಹಾರ ವ್ಯವಹಾರಗಳನ್ನು ನಡೆಸಿದವನಿಗೆ ನಿದ್ರೆಯು ಮರೆಯಾಗುವುದಲ್ಲವೆ? ಹಾಗೊಮ್ಮೆ ಮರೆಯಾದಾಗ ಅದನ್ನು ಸರಿಪಡಿಸಿಕೊಳ್ಳಲು ಒಂದು ಪ್ರಯತ್ನ ಅಗತ್ಯವಷ್ಟೇ! ಅವ್ಯವಸ್ಥಿತವಾದ ಜೀವನಕ್ರಮವನ್ನು ಬದಲಾಯಿಸಿಕೊಳ್ಳುವುದು, ಪಥ್ಯ ಔಷಧಸೇವನೆ ಮೊದಲಾಗಿ ಅನೇಕ ದೋಷಪರಿಹಾರೋಪಾಯಗಳನ್ನು ಅನುಸರಿಸಬೇಕಾಗುವುದು ಮತ್ತು ಸಕಾಲದಲ್ಲಿ ನಿದ್ರೆಯ ಆಗಮನದ ನಿರೀಕ್ಷೆಯಿಂದ ತಕ್ಕ ವ್ಯವಸ್ಥೆಯೊಂದಿಗೆ ಇರಬೇಕಾಗುವುದು. ಅದೇ ರೀತಿ ಜೀವನದಲ್ಲಿ ಮರೆಯಾಗಿರುವ ಸಮಾಧಿ ಅಥವಾ ಸಹಜಾವಸ್ಥೆಯನ್ನು ಮತ್ತೊಮ್ಮೆ ತಂದುಕೊಳ್ಳಬೇಕಾದರೆ ಅದಕ್ಕಾಗಿ ಒಂದು ಸಿದ್ಧತೆಯಾಗಬೇಕಾಗಬಹುದು. ಅಲ್ಲಿ ಒಂದು ಶಿಸ್ತಿನ ಜೀವನದ ಅವಶ್ಯಕತೆಯಿದೆ. ಪ್ರಯತ್ನದ ಅವಶ್ಯಕತೆಯಿದೆ. ಸಮಾಧಿಸ್ಥಿತಿಗೆ ಅಭಿಮುಖವಾಗಿರಬೇಕಾಗುತ್ತೆ. ಹೀಗೆ ಅಭ್ಯಾಸದ ಅವಶ್ಯಕತೆಯಿದೆ.

ಕಾಶಿಯ ದರ್ಶನ ಮಾಡಬೇಕೆಂದಿದ್ದರೆ ಅವರವರು ಇರುವ ಜಾಗದಿಂದ ಹೊರಡಬೇಕು. ಅವರವರ ಸಾಮರ್ಥ್ಯ, ಕಾಲದೇಶಗಳಲ್ಲಿ ಒದಗಬಹುದಾದ ಸೌಲಭ್ಯ ಮೊದಲಾದವುಗಳಿಗೆ ತಕ್ಕಂತೆ ಪ್ರಯಾಣನಡೆಸಬೇಕಲ್ಲವೆ! ಅದೇ ರೀತಿ ಜೀವನದಲ್ಲಿ ಮರೆಯಾಗಿರುವ ಸಮಾಧಿಯ ಅನುಭವವನ್ನು ಮತ್ತೆ ಪಡೆಯಬೇಕಾದರೆ ಅವರವರ ಪ್ರಕೃತವಾದ ಸ್ಥಿತಿಯಿಂದ ಆರಂಭವಾಗಬೇಕು. ದೇಹಪ್ರಕೃತಿ, ಮನಃಪ್ರಕೃತಿಗಳಿಗೆ ತಕ್ಕಂತೆ ಸಾಧನಗಳನ್ನು ಬಳಸಿಕೊಳ್ಳಬೇಕು. ಕಾಲದೇಶಗಳಲ್ಲಿ ಒದಗಿಬರುವ ವಿಶಿಷ್ಟಸಾಧನಗಳನ್ನು ಆಶ್ರಯಿಸಿ ನೆಲೆ ತಲುಪಬೇಕು. ನಿಸರ್ಗದ ಈ ಮರ್ಮವರಿತ ಮಹರ್ಷಿಗಳು ತಮ್ಮ ಅಂತಃಪ್ರಪಂಚದ ಸಾಕ್ಷಾತ್ಕಾರದ ಹಿನ್ನೆಲೆಯಲ್ಲಿ ಹಲವಾರು ಸಾಧನಾಮಾರ್ಗಗಳನ್ನು ಲೋಕಕ್ಕೆ ಅನುಗ್ರಹಿಸಿದರು. ಆ ಸಾಧನೆಗಳನ್ನೂ ಯೋಗವೆಂಬ ಪದದಿಂದಲೇ ವ್ಯವಹರಿಸಿದರು. ಕಾರಣ ಆ ಸಾಧನಗಳು ಸಮಾಧಿರೂಪವಾದ ಯೋಗಕ್ಕೆ ತಲುಪಿಸಬಲ್ಲವು. ಪರಮಾತ್ಮಜ್ಯೋತಿರ್ದಶನ ಮಾಡಿಸಬಲ್ಲವು. ಜೀವಾತ್ಮಪರಮಾತ್ಮರ ಸಂಯೋಗವನ್ನುಂಟುಮಾಡಬಲ್ಲವು. ಸಮತಾವಸ್ಥೆಯನ್ನು ಅನುಗ್ರಹಿಸಬಲ್ಲವು. ಅಂತಹ ಸಾಧನೆಗಳನ್ನು ಮಂತ್ರಯೋಗ, ಲಯಯೋಗ ಮೊದಲಾಗಿ ಹೆಸರಿಸಿದ್ದಾರೆ.

‘ಯೋಗೋ ಹಿ ಬಹುಧಾ ಬ್ರಹ್ಮನ್ ಭಿದ್ಯತೇ ವ್ಯವಹಾರತಃ|
ಮಂತ್ರಯೋಗೋ ಲಯಶ್ಚೈವ ಹಠೋsಸೌ ರಾಜಯೋಗತಃ||

ಪರಮಾತ್ಮಜ್ಯೋತಿಯೇ ಮೂಲತಃ ಜ್ಞಾನವೆನ್ನಿಸಿಕೊಂಡಿದೆ. ಆ ಜ್ಞಾನದ ಅನುಭವವೇ ಯೋಗವಾಗಿದೆ. ಅಂತಹ ಯೋಗವು ಎಂಟು ಅಂಗಗಳಿಂದ ಕೂಡಿದೆ-

‘ಜ್ಞಾನಂ ಯೋಗಾತ್ಮಕಂ ವಿದ್ಧಿ ಯೋಗಂ ಚಾಷ್ಟಾಂಗಸಂಯುತಮ್’ ಯಮನಿಯಮಾಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ, ಸಮಾಧಿಗಳೇ ಆ ಎಂಟು ಅಂಗಗಳು. ಅಂಗಗಳಿಂದ ಅಂಗಿಯನ್ನು ಸ್ಪರ್ಶಿಸಬಹುದಷ್ಟೇ. ಅದೇ ರೀತಿ ಅವಲಂಬಿಸಿದವರನ್ನು ಅಂಗಿಗೆ ನಯನ ಮಾಡುವುದರಿಂದ ಇವು ಅಂಗಗಳು.

ಪರಮಾತ್ಮಪ್ರಕಾಶವನ್ನು ಕೇಂದ್ರವಾಗಿಟ್ಟುಕೊಂಡು ಬೆಳಗಿದ ಭಾರತೀಯ ಸಂಸ್ಕೃತಿಯಲ್ಲಿ ಯೋಗವು ಓತಪ್ರೋತವಾಗಿ ಪ್ರಾಣಪ್ರದವಾದ ವಿದ್ಯೆಯಾಗಿದೆ. ಷೋಡಶಸಂಸ್ಕಾರಗಳಲ್ಲೂ, ನಿತ್ಯನೈಮಿತ್ತಿಕಕಾರ್ಯಕರ್ಮಗಳಲ್ಲೂ ‘ಪ್ರಾಙ್ಮುಖಃ ಉದಙ್ಮುಖೋ ವಾ ಉಪವಿಷ್ಯ‘ ಎಂಬ ಆದೇಶವನ್ನು ಗಮನಿಸುತ್ತೇವೆ. ಅಲ್ಲಿ ಯೋಗಾಂಗವಾದ ಆಸನದ ಅನ್ವಯವಿದೆ. ಕುಳಿತುಕೊಳ್ಳುವಾಗ ಆಸನದ ಮರ್ಮಜ್ಞಾನವಿರಬೇಕು. ‘ಆಚಮ್ಯ ಪ್ರಾಣಾನಾಯಮ್ಯ’ಎಂದು ಪ್ರತಿಹಂತದಲ್ಲೂ ಪ್ರತಿಕರ್ಮದಲ್ಲೂ ಪ್ರಾಣಾಯಾಮದ ವಿನಿಯೋಗವಿದೆ. ‘ಅಥ ಧ್ಯಾನಂ’ ಎಂದು ಧ್ಯಾನರೂಪವಾದ ಯೋಗಾಂಗದ ವಿಧಾನವಿದೆ. ಭೋಜನದ ಪೂರ್ವಾಂಗವಾಗಿ ‘ಪ್ರಾಣಾಯ ಸ್ವಾಹಾ, ಅಪಾನಾಯ ಸ್ವಾಹಾ’-ಎಂದು ಮೊದಲಾಗಿ ಪ್ರಾಣಾಪಾನಾದಿ ಪಂಚಶಕ್ತಿಗಳಿಗೆ ಆಹುತಿಯನ್ನು ಅರ್ಪಿಸುವ ಜವಾಬ್ದಾರಿಯಿದೆ. ಅದು ಪ್ರಾಣಾದಿಗಳ ಸ್ಥಾನ ಸ್ವರೂಪ ಕಾರ್ಯಗಳ ಜ್ಞಾನವನ್ನು ಅಪೇಕ್ಷಿಸುತ್ತದೆ. ‘ಸುಲಗ್ನಾಃ ಸಾವಧಾನಾಃ, ಸುಮುಹೂರ್ತಾಃ ಸಾವಧಾನಾಃ’ ಎಂದು ಮೊದಲಾಗಿ ಸಮಾಹಿತವಾದ ಚಿತ್ತವನ್ನು ಸಾಧಿಸಿಕೊಳ್ಳುವ ವಿಚಾರವಿದೆ. ವೇದಮಾತೆಯಾದ ಗಾಯಿತ್ರಿಯಿಂದ ಆರಂಭಿಸಿ ವೇದಾನುಸಂಧಾನರೂಪವಾದ ಮಂತ್ರಯೋಗದ ಸಮಗ್ರ ಅನ್ವಯವಿದೆ. ಇದೇ ರೀತಿ ಲಯ, ನಾದ ಮೊದಲಾದ ಯೋಗಗಳ ಪ್ರಯೋಗವು ಸೇರಿಕೊಂಡಿದೆ. ಇಷ್ಟಲ್ಲದೆ ಜ್ಞಾನಿಗಳು ತಂದ ಸದಾಚಾರ, ವ್ಯವಹಾರಗಳೂ ಸಹ ಯೋಗವಿದ್ಯೆಯ ಮರ್ಮಗಳಿಂದ ಸಂಪನ್ನವಾಗಿವೆ. ಈ ನೇರದಲ್ಲಿ ಯೋಗವಿದ್ಯೆಯ ಆಮೂಲಾಗ್ರವಾದ ಪ್ರಯೋಗಾತ್ಮಕ ಜ್ಞಾನದಿಂದ ಸಂಪನ್ನರಾಗಿದ್ದ, ಇಪ್ಪತ್ತನೇ ಶತಮಾನದ ಮಹಾಪುರುಷ ಶ್ರೀರಂಗಮಹಾಗುರುವಿನ “ಯೋಗವು ಸಹಜವಾಗಿ ಬಾಳಿ ಬೆಳಗಿ ಅನುಭೂತವಾದುದು. ಸನಾತನಿಗಳಾದ ಆರ್ಯ ಭಾರತರ ಹೃದಯಾಂತರಾಳದಲ್ಲಿ…., ಒಂದೇ ಮಾತಿನಲ್ಲಿ ಹೇಳುವುದಾದರೆ, ಸನಾತನಿಗಳಾದ ಆರ್ಯಭಾರತರು ಕಾಯ, ವಾಕ್, ಮನಸ್ಸು, ಇಂದ್ರಿಯ, ಬುದ್ಧಿ, ಆತ್ಮ ಪ್ರಕೃತಿ, ಸ್ವಭಾವ ಇವುಗಳನ್ನೆಲ್ಲಾ ಪರಿಪೂರ್ಣವಾಗಿ ವಿಚಾರ ಮಾಡಿ ತಮ್ಮ ಕರ್ಮಜ್ಞಾನಕಾಂಡಗಳ ಪ್ರಯೋಗವಿಜ್ಞಾನವನ್ನು ಮಾಡಿಕೊಂಡ ಅನುಭವಿಗಳಾಗಿದ್ದರು. ಮತ್ತು ಭಾರತರು ತಮ್ಮ ಪ್ರಯೋಗವಿಜ್ಞಾನದ ರಸಾಯನವನ್ನು ವಿಶ್ವಶರೀರ (ಪ್ರಪಂಚ) ಕಲ್ಯಾಣಕ್ಕೋಸ್ಕರವಾಗಿ ತಮ್ಮ ಸಂಸ್ಕೃತಿ ನಾಗರೀಕತೆಗಳ ಮೇಲೆಲ್ಲಾ ಹರಿಯಿಸಿದ್ದಾರೆ” (ಅಮರವಾಣಿ-ಸಂಪುಟ-೪)ಎಂಬ ಮಾತು ಸ್ಮರಣೀಯವಾಗಿದೆ.

ಇಂತಹ ಯೋಗವು ಒಂದು ಪ್ರಯೋಗಾತ್ಮಕವಾದ ವಿದ್ಯೆ. ದೇಹಯಂತ್ರದ, ಪ್ರಾಣಾದಿಶಕ್ತಿಗಳ ಹಾಗೂ ಕಾಲದೇಶಗಳ ಮರ್ಮವನ್ನು ಬಲ್ಲವರಾಗಿ ಯೋಗವಿದ್ಯೆಯನ್ನು ಮೈಗೂಡಿಸಿಕೊಂಡ ಜ್ಞಾನವಿಜ್ಞಾನತೃಪ್ತಾತ್ಮರ ಮಾರ್ಗದರ್ಶನದ ಹೊರತು ಅದರ ನವನವೋಲ್ಲಾಸವನ್ನು ನಿರೀಕ್ಷಿಸಲಾಗುವುದಿಲ್ಲ. ಆದ್ದರಿಂದ ಅಂತಹ ಸುಯೋಗವು ಸನ್ನಿಹಿತವಾಗಿ ಯೋಗರೂಪವಾದ ತಾಯಿಬೇರಿನ ಬೆಳವಣಿಗೆಯೊಂದಿಗೆ ಬ್ರಹ್ಮವೃಕ್ಷವು ಪಲ್ಲವಿತವಾಗಿ ಸಂಪುಷ್ಟಿತವಾಗಿ ಬ್ರಾಹ್ಮಣ್ಯದ ಸತ್ ಫಲವನ್ನು ಸಮಸ್ತವಿಶ್ವವೂ ಅನುಭವಿಸುವಂತೆ ಸುಮುಹೂರ್ತವು ಒದಗಿ ಬರಲೆಂದು ಮನಸಾರೆ ಬಯಸೋಣ.

~*~

 

Facebook Comments