ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 32:

ಉಪನಯನ ಸಂಸ್ಕಾರ  

ವಿದ್ವಾನ್ ತಾಳ್ತಜೆ ಕೃಷ್ಣ ಭಟ್

ಯಜ್ಞೋಪವೀತಧಾರಣೆ ಮತ್ತು ಗಾಯತ್ರೀ ಮಂತ್ರೋಪದೇಶ ಸಂಸ್ಕಾರವನ್ನು ಉಪನಯನ ವಿಧಿ ಎನ್ನುತ್ತಾರೆ. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಈ ಮೂರು ವರ್ಣದ ಬಾಲಕರಿಗೆ ಉಪನಯನ ಸಂಸ್ಕಾರದ ವಿಧಿಯು ಇಂದು ರೂಢಿಯಲ್ಲಿದೆ. ಇತ್ತೀಚೆಗೆ ಕೆಲವರು ಉಪನಯನದ ಆಮಂತ್ರಣ ಪತ್ರದಲ್ಲಿ ಬ್ರಹ್ಮೋಪದೇಶವೆಂದೂ ಹೇಳುವುದಿದೆ. ಯಜ್ಞೋಪವೀತಧಾರಣೆ ಮಾಡಿ ಗಾಯತ್ರೀಮಂತ್ರವನ್ನುವಿಧಿಪ್ರಕಾರವಾಗಿ ಅನುಷ್ಠಾನಿಸಿದರೆ ಆತನಿಗೆ ಬುದ್ಧಿಪ್ರಚೋದನೆಯಾಗುತ್ತದೆ. ಈ ಕುರಿತು ಅನೇಕ ವಿದ್ವಾಂಸರು ಶಾಸ್ತ್ರಸಮ್ಮತವಾದ ವಿವರಣೆಗಳನ್ನು ನೀಡಿರುತ್ತಾರೆ. ಅನಂತ ಶ್ರೀ ವಿಭೂಷಿತ ಶೃಂಗೇರಿ ಮಠಾಧೀಶ್ವರ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಸ್ವಾಮೀ ಅಭಿನವ ವಿದ್ಯಾತೀರ್ಥ ಮಹಾರಾಜರು ತಮ್ಮ ಒಂದು ಲೇಖನದಲ್ಲಿ ಉಪನಯನದ ಕುರಿತು ಹೀಗೆ ಹೇಳಿದ್ದಾರೆ-
“ಗಾಯತ್ರೀ ಮಂತ್ರೋಪದೇಶವನ್ನು ಪಡೆದಾಗ ಆ ವ್ಯಕ್ತಿಯು ಒಂದು ನವೀನ ನಯನವನ್ನೇ ಪಡೆದಂತಾಗುತ್ತದೆ. ಅರ್ಥಾತ್ ಆತನಿಗೆ ಬೌದ್ಧಿಕ ಪ್ರಕಾಶವಾಗುತ್ತದೆ.ಈ ಕಾರಣದಿಂದ ಗಾಯತ್ರೀ ಮಂತ್ರೋಪದೇಶದ ಸಂಸ್ಕಾರವನ್ನು ಉಪನಯನ ಸಂಸ್ಕಾರವೆನ್ನುತ್ತೇವೆ. ಬ್ರಾಹ್ಮಣ ಕುಮಾರಕನಿಗೆ ಎಂಟನೇ ವಯಸ್ಸಿನಲ್ಲಿ ಉಪನಯನ ಸಂಸ್ಕಾರವನ್ನು ಶಾಸ್ತ್ರದಲ್ಲಿ ಹೇಳಿದೆ. ವಸ್ತುತಃ ಇದರಿಂದ ಅವನ ಪುನರ್ಜನ್ಮವಾದಂತೆಯೇ ಆಗುತ್ತದೆ. ಆ ಕಾರಣದಿಂದ ಉಪನಯನ ವಿಧಿಯನ್ನು ಪಡೆದವನು ದ್ವಿಜನೆಂದು ಕರೆಯಲ್ಪಡುತ್ತಾನೆ. ಈ ಸಂಸ್ಕಾರವನ್ನು ಪಡೆದವನಿಗೆ ಗಾಯತ್ರಿಯು ಎರಡನೇ ಮಾತೆ ಎನಿಸುತ್ತಾಳೆ. ವೈದಿಕ ವಾಙ್ಮಯದಲ್ಲಿ ಗಾಯತ್ರಿಯನ್ನು ಛಂದಸಾಂಮಾತಾ ಎಂದು ವರ್ಣಿಸಲಾಗಿದೆ. ವೇದಜನನೀ ಗಾಯತ್ರೀಮಂತ್ರವು ಅದ್ವಿತೀಯ ಮಂತ್ರವಾಗಿದೆ ‘ಗಾಯತ್ರ್ಯಾನಾಪರೋ ಮಂತ್ರಃ.’

ಉಪನಯನ ಸಂಸ್ಕಾರದಲ್ಲಿ ಗಾಯತ್ರೀ ಮಂತ್ರೋಪದೇಶಕ್ಕೆ ಮೊದಲು ಯಜ್ಞೋಪವೀತವನ್ನು ಧಾರಣೆ ಮಾಡಿಸಲಾಗುತ್ತದೆ. ಯಜ್ಞೋಪವೀತವು ಹೋರನೋಟಕ್ಕೆ ಆ ವ್ಯಕ್ತಿಯ ಧ್ಯೇಯನಿಷ್ಠೆಗಳ ಸೂಚಕವೂ ಹೌದು. ಅಧಿಕಾರದ ಸ್ಥಾನದ್ಯೋತಕವೂ ಹೌದು. ಸರಕಾರದ ಉದ್ಯೋಗಗಳಲ್ಲಿರುವವರಿಗೆ ಆ ಉದ್ಯೋಗದ ಸ್ಥಾನದ್ಯೋತಕವಾದ ಕೆಲವು ಚಿನ್ಹೆಗಳಿರುತ್ತದೆ. ಪೋಲೀಸ್  ಹುದ್ದೆಗಳಲ್ಲಿ ಹಾಗೂ ಸೈನ್ಯದಲ್ಲಿ ಆತನ ಪದ (ಸ್ಥಾನ) ಸೂಚಕವಾದ ಕೆಲವು ಚಿನ್ಹೆಗಳಿರುತ್ತವೆ. ಹೀಗೆಯೇ ಶೈವ, ವೈಷ್ಣವ  ತತ್ವಾನುಯಾಯಿಗಳ ಮುಖದಲ್ಲಿ ಗಂಧ, ಚಂದನಗಳ, ಅಡ್ಡ, ನೀಟ ಗೆರೆಗಳು ಆ ಪಂಥದ ಗುರುತುಗಳನ್ನು ತೋರಿಸುತ್ತವೆ. ಕ್ರೈಸ್ಥ ಸಂಪ್ರದಾಯಿಗಳು ಒಂದು ಚಿಕ್ಕ ಶಿಲುಬೆಯ ಚಿನ್ಹೆಯನ್ನು ನೂಲಲ್ಲಿ ಕಟ್ಟಿ ಕುತ್ತಿಗೆಗೆ ಹಾಕಿಕೊಂಡಿರುವುದಿದೆ. ಹಾಗೆಯೇ ಅಧಿಕಾರ ಕರ್ತವ್ಯ. ನಂಬುಗೆಯ ಸಂಪ್ರದಾಯ ಸೂಚಿಗಳಾದ ಅನೇಕ ಚಿನ್ಹೆಗಳಿಂದ ಬೇರೆ ಬೇರೆ ವರ್ಗದ ಜನರನ್ನು ಗುರುತಿಸುವಂತೆ ಯಜ್ಞೋಪವೀತದಿಂದ ಆತನು ಯಜ್ಞಕ್ಕೆ ಅಧಿಕಾರ ಉಳ್ಳವನೆಂದು ಗುರುತಿಸಬಹುದಾಗಿದೆ. ಆದರೆ ಇದು ಬರಿಯ ಗುರುತಿಗಾಗಿ ಮಾತ್ರವಿರುವ ವಸ್ತುವಲ್ಲ. ಈ ಮೂರೆಳೆಯ ನೂಲಪಟ್ಟಿಮನಬಂದಂತೆ ಚಿಕ್ಕದು ದೊಡ್ಡದಾಗಿ ಮಾಡಿ ಧರಿಸುವಂತಿಲ್ಲ. ಅದಕ್ಕೊಂದು ನಿಶ್ಚಲವಾದ ಲೆಕ್ಕವಿದೆ. ನಾಲ್ಕು ವೇದಗಳಲ್ಲಿ ಒಟ್ಟಿಗೆ ಒಂದು ಲಕ್ಷ ಮಂತ್ರಗಳಿವೆ. ಅವುಗಳಲ್ಲಿ ಕಡೆಯ ನಾಲ್ಕುಸಾವಿರ ಮಂತ್ರಗಳು ಕೇವಲ ಜ್ಞಾನಕ್ಕೆ ಸಂಬಂಧಿಸಿದವುಗಳು.ಸರ್ವಸಂಗಪರಿತ್ಯಾಗ ಮಾಡಿದ ಸನ್ಯಾಸಿಗೆ ಆತ್ಮ ಪರಮಾತ್ಮ ಚಿಂತನೆಗೆ ಅವು ಉಪಯೋಗವಾಗತಕ್ಕವು.  ಉಳಿದ ತೊಂಬತ್ತಾರುಸಾವಿರ ಮಂತ್ರಗಳು ಉಪಾಸನೆ ಹಾಗೂ ಕರ್ಮಗಳಿಗೆ ಸಂಬಂಧಿಸಿರುವವುಗಳಾಗಿವೆ. ಇದರ ದ್ಯೋತಕವಾಗಿಯೆ ಎಡಕೈಯ ನಾಲ್ಕು ಬೆರಳುಗಳಿಗೆ (ನಾಲ್ಕುವೇದಗಳ ಪ್ರತೀಕವೆಂದು ) ತೊಂಬತ್ತಾರ ಸಲ ಸುತ್ತುವುದಾಗಿದೆ. ಹೀಗೆ ಸುತ್ತಿದ ನೂಲನ್ನು ಮತ್ತೆ ಮೂರು ಸಮವಾಗಿ ಹಿಡಿದು ಎಡಗಡೆಗೆ ತಿರುಪಿ ಆಮೇಲೆ ಆ ನೂಲನ್ನು ಇನ್ನೊಮ್ಮೆ ಮೂರು ಸಮಾನ ಉದ್ದಕ್ಕೆ ಹಿಡಿದು ಬಲಗಡೆಗೆ  ತಿರುಪಿದಾಗ ಯಜ್ಞೋಪವೀತವಾಗುತ್ತದೆ. ಅದನ್ನು ಮೂರು ಸಮ ಸುತ್ತಿನಿಂದ ಸುತ್ತಿ ಎರಡೂ ತುದಿಗಳನ್ನು ಕಟ್ಟಬೇಕು. ಹೀಗೆ ಕಟ್ಟುವಾಗ ಮೊದಲು ಸುತ್ತಿದ ಮೂರು ಎಳೆಗಳಿಗೆ ಈ ತುದಿಗಳನ್ನು ಸೇರಿಸಿ ಕಟ್ಟಬೇಕು. ಈ ಕಟ್ಟಿಗೆ ಬರುವಂತೆ ಆ ಮೂರೂ ಎಳೆಗಳನ್ನು ವೃತ್ತಾಕಾರ ಬರುವಂತೆ ಮಾಡಿ ಮೆಲ್ಲನೆ ಎಳೆದಾಗ ಆ ಮೊದಲು ಗಂಟಿಗೆ ಅದು ಸೇರುತ್ತದೆ. ಇದನ್ನು ಬ್ರಹ್ಮಗ್ರಂಥಿ ಎನ್ನುತ್ತಾರೆ. ಇದು ತೊಡುವುದಕ್ಕೆ ಸಿದ್ಧವಾದ ಜನಿವಾರ.

ಈ ಬ್ರಹ್ಮದ ಗಂಟನ್ನು ಓಂಕಾರವೆಂದು ತಿಳಿಯಲಾಗುತ್ತದೆ. ಉಳಿದವುಗಳಲ್ಲಿ ಅಗ್ನಿ, ನಾಗ, ಸೋಮ, ಪಿತೃ, ಪ್ರಜಾಪತಿ, ವಾಯು, ಸೂರ್ಯ, ವಿಶ್ವೇದೇವತೆಗಳು ಇರುತ್ತಾರೆ. ಆದ್ದರಿಂದ ದೇವತೆಗಳನ್ನೂ ಅರ್ಚಿಸಿ ಜನಿವಾರ ತೊಡುವುದು ಕ್ರಮ. ಋಷಿಗಳಿಗೆ ಧ್ಯಾನದಲ್ಲಿ ಪ್ರಜಾಪತಿಯು ಯಜ್ಞೋಪವೀತವನ್ನು ಧರಿಸಿ ಗೋಚರವಾದವನು. ಅದು ಆಯುಷ್ಯ, ಬಲ, ತೇಜವನ್ನು ಕೊಡತಕ್ಕದ್ದೆಂದು ನಂಬಲಾಗಿದೆ. ಯಜ್ಞೋಪವೀತದ ಮೂರೆಳೆಗಳು ಪಿತೃ, ಋಷಿ, ಆಚಾರ್ಯ ಋಣಗಳನ್ನು ಸದಾ ನೆನಪಿಸುವವುಗಳು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥಗಳೆಂಬ ಮೂರು ಆಶ್ರಮ ಧರ್ಮಗಳನ್ನೂ ನೆನಪಿಸುವವುಗಳು. ಅದನ್ನು ಕುತ್ತಿಗೆಯಲ್ಲಿ ಹಾಕಿ ಬಲಗೈಯ ಕೆಳಗಡೆ ನಿಲ್ಲುವಂತೆ ಧರಿಸುವುದು ಕ್ರಮ. ಪಿತೃಕಾರ್ಯಗಳಲ್ಲಿ ಎಡಗೈ ಕೆಳಗೆ ಅದನ್ನು ಮಾಡಬೇಕು. ಇದನ್ನು ಪ್ರಾಚೀನಾವೀತಿ ಎನ್ನುತ್ತಾರೆ. ಬರೇ ಕುತ್ತಿಗೆಯಲ್ಲಿ ಜನಿವಾರ  ಧರಿಸುವುದನ್ನು ಉಪವೀತಿ ಎಂದು ಹೇಳುತ್ತಾರೆ. ಗಾಯತ್ರೀ ಮಂತ್ರದ ಸ್ತುತಿಯೂ ಹೌದು. ಪ್ರಾರ್ಥನೆಯೂ ಹೌದು.
ಓಂ ಭೂರ್ಭುವಃಸ್ವಃ=ಓಂ ಎಂಬುದು ಭೂಮಿ, ಮೇಘಮಂಡಲ ಮತ್ತು ಆಕಾಶವ್ಯಾಪ್ತವಾದ ತತ್ ಸವಿತುರ್ವರೇಣ್ಯಂ=ಸಕಲವನ್ನೂ ಸೃಷ್ಟಿಸುವ ಶ್ರೇಷ್ಠವಾದ ಭರ್ಗೋದೇವಸ್ಯ = ಪಾಪನಾಶಕನಾದ ದೇವನ ತೇಜಸ್ಸನ್ನೂ-ಧೀಮಹಿ = ಧ್ಯಾನಮಾಡೋಣ.ಧಿಯುಃ,ಯಃ, ನಃ, ಪ್ರಚೋದಯಾತ್=ನಮ್ಮ ಬುದ್ಧಿಗಳನ್ನು ಆ ದೇವನು ಪ್ರಚೋದಿಸಲಿ.
ಅಂದರೆ ಸಕಲವನ್ನೂ ಸೃಷ್ಟಿಮಾಡಿದ ಅತ್ಯಂತ ಶ್ರೇಷ್ಠನೂ ಪಾಪನಾಶಕನೂ ಆದ ಪರಮಾತ್ಮನನ್ನು ನಾವು ಧ್ಯಾನಿಸೋಣ. ಆತನು ನಮ್ಮ ಬುದ್ಧಿ ಪ್ರೇರೇಪಣೆ ಪಡೆಯುವಂತೆ ಮಾಡಲಿ ಎಂಬುದು ಗಾಯತ್ರೀಮಂತ್ರದ ಸಾಮಾನ್ಯವಾದ ಅರ್ಥ. ಗಾಯತ್ರೀ ಮಂತ್ರದಲ್ಲಿ ಕೇವಲ ಬುದ್ಧಿಪ್ರಚೋದನೆಯನ್ನು ಮಾತ್ರ ನಾವು ಬಯಸುತ್ತೇವೆ. ಪ್ರಚೋದಿತವಾದ ಬುದ್ಧಿಯು ಎತ್ತ ಸಾಗಬೇಕೆಂಬುದು ತೋರಿಕೆಗೆ ಇಲ್ಲವಾದರೂ ಸವಿತೃ, ವರೇಣ್ಯ, ಭರ್ಗ ಈ ಗುಣಗಳನ್ನು ದೇವರಲ್ಲಿ ನಾವು ಕಲ್ಪಿಸಿದ್ದೇವೆ. ದೇವನನ್ನು ಗುಣ ಕಲ್ಪಿಸಿ ನಾವು ಆರಾಧಿಸುವಾಗ ಆತನ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂಬುದು ತಿಳಿದವರ ಮತವಾಗಿದೆ. ‘ಶಿವೋಭೂತ್ವಾಶಿವಂಯಜೇತ್’ ಈ ರೀತಿ ನಾವು ಆ ದೇವನ ಉಚ್ಚಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಆಮೇಲೆ ಬುದ್ಧಿಯು ಪ್ರಚೋದನೆ ಪಡೆಯುವುದು ನಮ್ಮ ಪ್ರಾರ್ಥನೆಯಾಗಿದೆ. ಲೌಕಿಕವಿರಲಿ ಪಾರಲೌಕಿಕವಿರಲಿ ಎಲ್ಲವನ್ನೂ ಸಂಪಾದಿಸಲು ಬುದ್ಧಿಪ್ರಖರತೆಯು ತೀರಾ ಅಗತ್ಯ. ಸದಸದ್ವಿವೇಕವು ಬುದ್ಧಿಗತವೆಂಬುದನ್ನು ಪರಮಾತ್ಮವಾಣಿಯಾದ ವೇದವು ಪ್ರತಿಪಾದಿಸುತ್ತದೆ.

ಗಾಯತ್ರೀ ಮಂತ್ರವನ್ನು ಅಂತರ್ಬಾಹ್ಯ ಶುದ್ಧಿಯಿಂದಲೇ ಉಚ್ಚರಿಸಬೇಕು. ಆ ಶುದ್ಧತ್ವವಿಲ್ಲದಾಗ ಕೇವಲ ಮನಸ್ಸಿನಲ್ಲಿ ಮಾತ್ರ ನೆನೆದುಕೊಳ್ಳಬೇಕು-‘ಮನಸಸ್ತು ಜಪೇನ್ಮಂತ್ರಂಜಿಹ್ವಾಮೂಲಂ ಚಾಲಯೇತ್‘ ಎಂದು ತಿಳಿದವರು ಹೇಳಿರುತ್ತಾರೆ. ಶೌಚಾಚಾರದ ಸಮಯದಲ್ಲಿ ಜನಿವಾರವನ್ನು ಎಡಗಡೆಗೆ ಮಾಡಬೇಕು. ಇಲ್ಲವೇ ತಲೆಯಲ್ಲಿ ಧರಿಸಬೇಕೆಂದು ಬೋಧಾಯನಾಚಾರ್ಯರು ಹೇಳಿದ್ದಾರೆ. ಗಾಯತ್ರೀ ಮಂತ್ರವನ್ನು ಅಂತರ್ಬಾಹ್ಯ ಶುದ್ಧಿಯಿಂದಲೇ ಉಚ್ಚರಿಸಬೇಕು. ಆ ಶುದ್ಧತ್ವವಿಲ್ಲದಾಗ ಕೇವಲ ಮನಸ್ಸಿನಲ್ಲಿ ಮಾತ್ರ ನೆನೆದುಕೊಳ್ಳಬೇಕು-‘ಮನಸಸ್ತು ಜಪೇನ್ಮಂತ್ರಂಜಿಹ್ವಾಮೂಲಂ ಚಾಲಯೇತ್’ ಎಂದು ತಿಳಿದವರು ಹೇಳಿರುತ್ತಾರೆ. ಶೌಚಾಚಾರದ ಸಮಯದಲ್ಲಿ ಜನಿವಾರವನ್ನು ಎಡಗಡೆಗೆ ಮಾಡಬೇಕು. ಇಲ್ಲವೇ ತಲೆಯಲ್ಲಿ ಧರಿಸಬೇಕೆಂದು ಬೋಧಾಯನಾಚಾರ್ಯರು ಹೇಳಿದ್ದಾರೆ.

ಉಪನಯನ ಕಾಲದಲ್ಲಿ ಯಜ್ಞೋಪವೀತದ ತತ್ವ ಮತ್ತು ಗಾಯತ್ರೀ ಮಂತ್ರದ ಅರ್ಥವನ್ನು ವಟುವಿಗೆ ತಿಳಿಯುವಂತೆ ಮಾಡಬೇಕು. ಅದರ ಪರಿಶುದ್ಧತ್ವವನ್ನು ಆತನು ತಿಳಿದು ಉಳಿಸಿಕೊಳ್ಳುವಂತೆ ಮಾಡುವುದು ತೀರಾ ಅಗತ್ಯ. ಈ ಸಂಸ್ಕಾರವು ಜೀವನದ ಪ್ರಾರಂಭದ ಆಶ್ರಮದ ದೀಕ್ಷಾವಿಧಿಯಾಗಿದೆ. ಇಡೀ ಜೀವನಕ್ಕೆ ಬೇಕಾದ ಶಾರೀರಿಕ ಮಾನಸಿಕ ಶಕ್ತಿ. ಕಲಾಕೌಶಲ, ಒಟ್ಟಾರೆಯಾಗಿ ಆತ್ಮಬಲವನ್ನು ಪಡೆಯುವ ಪ್ರೇರಣೆಯನ್ನು ಇದು ನೀಡುತ್ತದೆ.

ಈ ಉಪನಯನ ಸಂಸ್ಕಾರವು ಹೆಣ್ಣು ಮಕ್ಕಳಿಗೆ ಈಗ ಮಾಡುವುದಿಲ್ಲ. ಅವರು ಮಂತ್ರಗಳನ್ನು ಕೇಳಲೇ ಬಾರದು ಎಂಬಲ್ಲಿವರೆಗೂ ಹೇಳುವವರಿದ್ದಾರೆ. ನಮ್ಮ ಪುರಾಣ ಕಥೆಗಳಲ್ಲಿ ಮತ್ತು ರಾಮಾಯಣದಲ್ಲಿ ಹೆಂಗಸರು ಪೂಜೆ ಮಾಡಿದ್ದು ರಾಜಸಭೆಯಲ್ಲಿ ಜ್ಞಾನೀ ಋಷಿಗಳೊಡನೆ ವಾದ ಮಾಡಿದ್ದು ಎಲ್ಲ ವರ್ಣಿತವಾಗಿವೆ. ಪಟ್ಟಾಭಿಷೇಕದ ದಿನದಂದು ರಾಮನು ಕಾಡಿಗೆ ಹೋಗುವುದು ನಿರ್ಣಯವಾದ ಮೇಲೆ ಆತನು ಕೌಸಲ್ಯಾದೇವಿಯಲ್ಲಿಗೆ ಬರುವಾಗ ಆಕೆಯು ದೇವಪೂಜೆ ಮಾಡಿ ಹೊರಗೆಬಂದಿದ್ದಳೆಂದು ರಾಮಾಯಣದಲ್ಲಿದೆ. ಜನಕರಾಜನ ಆಸ್ಥಾನದಲ್ಲಿ ಯಾಜ್ಞವಲ್ಕ್ಯರಂತಹ ದಿವ್ಯಜ್ಞಾನಿಗಳೊಡನೆ ತರ್ಕಕ್ಕಿಳಿದ ಗಾರ್ಗಿಯು ಸಮಸ್ತವಿದ್ಯೆಗಳನ್ನೂ ತಿಳಿದ ಬ್ರಹ್ಮವಾದಿನಿಯಾಗಿದ್ದಳೆಂಬುದರಲ್ಲಿ ಎಲ್ಲರೂ ಸಮ್ಮತಿಸುವವರೆ. ಇಷ್ಟೇ ಅಲ್ಲ ಶಲಭಾ ಮೈತ್ರೇಯಿ, ಅನಸೂಯಾ ಲೋಪಾಮುದ್ರಾ ಮೊದಲಾದ ಅನೇಕ ವಿದುಷಿಯರ ಕಥೆಗಳು ಪುರಾಣಗಳಲ್ಲಿವೆ. ಈಗ ಇತ್ತೀಚೆಗೆ ನಮ್ಮ ಮಾಣೀಮಠದಲ್ಲಿ ಪೂಜ್ಯ ಶ್ರೀ ರಾಘವೇಂದ್ರಭಾರತೀ ಸ್ವಾಮಿಗಳು ಮೊಕ್ಕಾಂ ಇದ್ದಾಗ ಒಬ್ಬರು ಉತ್ತರಕನ್ನಡದ ಮಹನೀಯರು ತಮ್ಮ ಮಗಳೊಂದಿಗೆ ಗುರುಗಳ ಭೇಟಿಗೆ ಬಂದಿದ್ದರು. ಅವರ ಮಗಳು ಅಥರ್ವವೇದದಲ್ಲಿ ಡಾಕ್ಟರೇಟ್ ಮಾಡುತ್ತಿದ್ದಳೆಂದೂ ಹೇಳಿದ್ದರು. ಕುಂದಾಪುರದ ಕಡೆ ಇತ್ತೀಚೆಗೆ ಹೆಂಗುಸು ಪೌರೋಹಿತ್ಯ ಮಾಡಿದುದನ್ನೂ ಬಾಲಿಕೆಗೆ ಉಪನಯನ ಮಾಡಿದುದನ್ನು ವಾರ್ತಾಪತ್ರದಲ್ಲಿ ಓದಿದ್ದೇನೆ. ಸ್ತ್ರೀಯು ಋತುಮತಿಯಾದಾಗ ಅಶುದ್ಧಳು. ಐದನೇ ದಿನ ಮಿಂದು ಶುದ್ಧಗೊಳ್ಳಬೇಕು. ಆ ಅಶುದ್ಧದಲ್ಲಿ ಆಕೆಯು ಮಂತ್ರೋಚ್ಚಾರ ಮಾಡಕೂಡದು. ಮಿಂದಮೇಲೆ ಹೊಸ ಜನಿವಾರವನ್ನು ತೊಟ್ಟುಕೊಳ್ಳಬೇಕು.ಇಂತಹ ರಗಳೆಗಳೆಲ್ಲಾ ಏಕೆ ಎಂದು ವೇದಾಧ್ಯಯನವನ್ನು ಬಿಟ್ಟಿರಬೇಕು. ಆಕೆಗೆ ಮಂಗಲಸೂತ್ರವೇ ಜನಿವಾರಕ್ಕೆ ಸಮವಾಗಿದೆ ಎಂದೂ ತಿಳಿದವರು ಹೇಳುವುದಿದೆ. ಏನೇ ಇರಲಿ, ಬಾಲಿಕೆಗೆ ಉಪನಯನದ ಕುರಿತು ನಮ್ಮ ಸಮಾಜದ ವಿದ್ವಾಂಸರು ಹೆಚ್ಚಿನ ಮಾಹಿತಿ ನೀಡಬೇಕು. ಇಷ್ಟೇ ಅಲ್ಲ ಶಲಭಾ ಮೈತ್ರೇಯಿ, ಅನಸೂಯಾ ಲೋಪಾಮುದ್ರಾ ಮೊದಲಾದ ಅನೇಕ ವಿದುಷಿಯರ ಕಥೆಗಳು ಪುರಾಣಗಳಲ್ಲಿವೆ.

ಉಪನಯನ ಸಂಸ್ಕಾರವು ವಟುವಿಗೆ ಬ್ರಹ್ಮಚರ್ಯವ್ರತದ ದೀಕ್ಷೆಯನ್ನು ನೀಡುತ್ತದೆ. ಬಾಲ್ಯದಲ್ಲಿಯೇ ಬುದ್ಧಿವಿಕಾಸ ಮಾರ್ಗವನ್ನು ತೋರಿಸಿಕೊಡುತ್ತದೆ. ಸುತ್ತಮುತ್ತಲ ವಿಲಾಸ ವಿಭ್ರಮಗಳಿಗೆ ಮನಸ್ಸೆಳೆಯದಂತೆ ಅದನ್ನು ಒಂದು ಪವಿತ್ರವಾದ ವಸ್ತುವಿನಲ್ಲಿ ನೆಲೆಗೊಳಿಸುವ ವೈದಿಕ ಉಪದೇಶಗಳನ್ನೂ ಉಪನಯನ ಸಂಸ್ಕಾರದಲ್ಲಿ ವಟುವಿಗೆ ನೀಡಲಾಗುತ್ತಿದೆ. ಮುಂದಿನ ಗೃಹಸ್ಥ, ವಾನಪ್ರಸ್ಥ ಆಶ್ರಮಗಳ ವ್ಯವಹಾರಕ್ಕೆ ಬೇಕಾದ ಎಲ್ಲ ಶಕ್ತಿಯನ್ನೂ ಈ ಬ್ರಹ್ಮಚರ್ಯ ಆಶ್ರಮದಲ್ಲಿ ನಡೆದುಕೊಳ್ಳುವಂತೆ ಸಂಪ್ರದಾಯವಿದೆ. ಆರೋಗ್ಯ ಆಯಸ್ಸು ಪರಿಪೂರ್ಣವಾದ ಇಹಪರಗಳ ಜ್ಞಾನವನ್ನು ಈ ಪ್ರಾರಂಭದ ಉಪನಯನ ಸಂಸ್ಕಾರದಿಂದ ಬಾಲಕನ ಬುದ್ಧಿಯು ಪ್ರೇರಣೆ ಪಡೆಯುತ್ತದೆ.

                                            ~*~

Facebook Comments