ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 33:

ಗುರುಕುಲ ಪದ್ಧತಿ

                 ನೀರ್ಚಾಲ ನಾರಾಯಣ ಮಧ್ಯಸ್ಥ

 ಗುರುಕುಲ ಪದ್ಧತಿಯು ಜಗತ್ತಿನಲ್ಲೇ ಅತ್ಯಂತ ಪ್ರಾಚೀನವಾದ, ಇಂದಿಗೂ ಸ್ವೀಕಾರಾರ್ಹವಾದ ಭಾರತೀಯ ಶಿಕ್ಷಣ ಪದ್ಧತಿ. ನಮ್ಮ ಸನಾತನ ಧರ್ಮದಲ್ಲಿ ಇದೊಂದು ಅವಿಭಾಜ್ಯವಾದ ಅಂಗ. ಅನೇಕರು ಈ ಕಾಲಕ್ಕೆ ಅಪ್ರಕೃತವೆಂದರೂ, ಅದನ್ನೆ ವಿಕೃತಗೊಳಿಸಿ ಗೌರವಿಸುತ್ತಿರುವುದು ನಮ್ಮ ಸುಶಿಕ್ಷಿತಂಮನ್ಯರ ದಾಸ್ಯ ಅಥವಾ ಅನುಕರಣ ಪ್ರಜ್ಞೆಗೆ ಸಾಕ್ಷಿಯಾಗಿದೆ. ಈಗಿನ ವಸತಿ ಶಾಲೆಗಳೆಂದರೆ ಹೆತ್ತವರಿಗೆ ಇನ್ನಿಲ್ಲದ ಆಕರ್ಷಣೆ. ಎಷ್ಟೋ ವರ್ಷ ಮೊದಲೇ-ಕೂಸುಹುಟ್ಟುವ ಮೊದಲೇ ಕುಲಾವಿ ಹೊಲಿಸಿದ ಗಾದೆಯಂತೆ ತಮ್ಮ ಕುಲಸಂತಾನಕ್ಕೆ ವಸತಿ-ಶಾಲೆಗಳಲ್ಲಿ ಸ್ಥಳವನ್ನು ಕಾದಿರಿಸುವುದುಂಟು. ಪ್ರಸಿದ್ಧ ಸಂಸ್ಥೆಗಳಲ್ಲಿ ಅವಕಾಶ ಸಿಗುವುದೇ ಜನ್ಮ ಸಾಫಲ್ಯವೆನಿಸಿದೆ. ಬುದ್ಧಿ ಜೀವಿ (?)ಗಳು, ಜನನಾಯಕರು, ಜನಸಾಮಾನ್ಯರೂ ಕೂಡ, ಹೊಸ ಸಹಸ್ರಮಾನದ, ಇಪ್ಪತ್ತೊಂದನೆ ಶತಮಾನದ ಸುಖಾಗಮನವನ್ನು ಎಲ್ಲ ದೃಷ್ಟಿಯಿಂದಲೂ ಹಾರೈಸುತ್ತಿದ್ದಾರೆ.ಈ ದೇಶದ ಕಾಲಮಾನವೊಂದು ಇವರಿಗೆ ತಿಳಿಯದು ! ಅವರು ಹೇಳುವ ಹೊಸ ಸಹಸ್ರಮಾನ, ಎರಡು ಸಾವಿರ ವರ್ಷಗಳಿಂದಷ್ಟೇ ಈಚಿನದು. ಇಪ್ಪತ್ತುಸಾವಿರ ವರ್ಷಗಳಿಗಿಂತಲೂ ಪ್ರಾಚೀನವಾದ ಹಾಗೂ ಅಧಿಕೃತವಾದ ಭಾರತದೇಶದ ಪ್ರಾಚೀನ ಕಾಲ ಗಣನೆಯನ್ನೇ ಅರಿಯದವರಿಗೆ ವಸತಿ ಶಾಲೆಗಳು ನಮ್ಮ ಗುರುಕುಲ ಪದ್ಧತಿಯ ವಿಕೃತಾನುಕರಣೆಯೆಂದರೆ ದಿಗ್ಭ್ರಮೆಯಾದೀತು ! ಆದರೂ, ಪರಿಶೀಲಿಸುವ ವಿವೇಚನಾ ಬುದ್ಧಿ ಬಾರದು ! ಅಂಥವರಿಗೂ ಬುದ್ಧಿ ಕಲಿಸುತ್ತದೆ ನಮ್ಮ ಪ್ರಾಚೀನ ಗುರುಕುಲ ಪದ್ಧತಿ. ಎರಡು ಶತಮಾನಗಳ ಹಿಂದೆ ಈಗಿನಂತೆ ಶಾಲೆಗಳು ಇರಲಿಲ್ಲ. ಪ್ರತಿ ಹಳ್ಳಿಯಲ್ಲಿ ಐಗಳ ಮಠವಿತ್ತು. ಅಯ್ಯಗಳು ಎಂಬುದು ಕಲಿಸುವ ಗುರುವಿಗೆ ನೀಡಲಾದ ಗೌರವ ಸೂಚಕಪದ. ಆಗಲೂ ಎಲ್ಲರಿಗೂ ವಿದ್ಯಾಭ್ಯಾಸವಿಲ್ಲ. ಇಷ್ಟವುಳ್ಳವರು ಗುರು ಸಮೀಪಕ್ಕೆ ಹೋಗಿ ಕಲಿಯುತ್ತಿದ್ದರು. ವೇದ-ಶಾಸ್ತ್ರಪಾಠಕ್ಕೂ ಇದೇ ಕ್ರಮ. ಯಥಾಶಕ್ತಿ ಗುರುದಕ್ಷಿಣೆ ಕೊಡಬಹುದಾಗಿತ್ತು. ಕಡ್ಡಾಯ ಶಿಕ್ಷಣವೂ ಅಲ್ಲ; ಕಡ್ಡಾಯ ಶುಲ್ಕವೂ ಇಲ್ಲ. ಸಾವಿರ ವರ್ಷಗಳ ಹಿಂದೆ ಗುರುಕುಲಗಳು (ಗುರುಗಳು ನೆಲೆ ನಿಂತು ಕಲಿಸುವ ಆಶ್ರಮಗಳು) ಅರಣ್ಯದ ಏಕಾಂತ ಪ್ರಶಾಂತ ಸ್ಥಾನಗಳಲ್ಲಿದ್ದವು. ಇಂದಿಗೂ ಸುವ್ಯವಸ್ಥಿತವಾಗಿ, ಆದರ್ಶಪ್ರಾಯವಾಗಿ ನಡೆಯುತ್ತಿರುವ ಶ್ರೀರವೀಂದ್ರನಾಥ ಠಾಕೂರರ ಶಾಂತಿನಿಕೇತನ-ಶ್ರೀನಿಕೇತನಗಳು ಇದೇ ಮಾದರಿಯವು. ಅವರು ಪ್ರಕೃತಿಯಲ್ಲೇ ಪಾಠಶಾಲೆ ನಡೆಸುವ ಪ್ರೇರಣೆಯನ್ನು ವಿದೇಶದಿಂದ ಪಡೆದರೆನ್ನುತ್ತಾರೆ. ವಿದೇಶದಿಂದ ಬಂದುದೇ ಸರ್ವಶ್ರೇಷ್ಠ ಎಂಬ ಭಾವನೆ ಈಗಲೂ ಬಲವಾಗಿಯೇ ಇದೆಯಲ್ಲ? ಮೆಕಾಲೆಯ ಶಿಕ್ಷಣ ಪದ್ಧತಿಯೇ ಸ್ವಾತಂತ್ರ್ಯ ಪಡೆದು ಅರ್ಧಶತಮಾನವಾದರೂ ಮುಂದುವರಿದೇ ಇದೆ. ಇನ್ನೊಂದು ಶತಮಾನದವರೆಗೂ ಇದರಲ್ಲಿ ಬದಲಾವಣೆಯಾಗುವ ಸಂಭವ ಇಲ್ಲ. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಅಲ್ಲಲ್ಲಿ ಗುರುಕುಲಗಳು ಹಿಂದಿನ ಪದ್ಧತಿಯಲ್ಲೇ ಮುಂದುವರಿದಿರುವುದು ಇದರ ಅನನ್ಯವಾದ ಹಿರಿಮೆಯನ್ನು ಸಮರ್ಥಿಸುತ್ತದೆ.

  ಭಾರತದೇಶವು ಮತ್ತೆ “ಜಗದ್ಗುರು” ಎನ್ನಿಸಬೇಕಾದರೆ, ನಮ್ಮ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಯಾಗಬೇಕು. ಗಿಡವನ್ನೇ ಬಾಗಿಸಬೇಕು. ಹೊಸ ಪೀಳಿಗೆಗೆ ಸುಯ್ಯೋಗ ಶಿಕ್ಷಣವನ್ನು ಸರಿಯಾದ ಕ್ರಮದಲ್ಲಿ ನೀಡಿ, ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡಬೇಕು. ಈ ‘ಸಂಸ್ಕಾರ’ ಎಂಬುದು ಗುರುಕುಲ ಪದ್ಧತಿಯ ಮುಖ್ಯಕಾರ್ಯ.

ಈಗ ಮತ್ತೆ ಹಿಂದಿನ ಗುರುಕುಲ ಪದ್ಧತಿಯನ್ನೇ, ಅಂದು ಕಲಿಸುತ್ತಿದ್ದುದನ್ನೇ ಪ್ರಾರಂಭಿಸಬೇಕೆಂದು ಯಾರೂ ಹೇಳಲಾರರು. ಅವಧಿರಹಿತವಾದ ಕಾಲ ಮುಂದುವರಿಯುತ್ತದೆ. ಅದನ್ನು ಹಿಂದಕ್ಕೆ ಸರಿಸುವುದು ಸಾಧ್ಯವೂ ಅಲ್ಲ; ಸಾಧುವೂ ಅಲ್ಲ. ಆದರೆ ಈ ಕಾಲಕ್ಕೆ ತಕ್ಕಂತೆ, ಬೇಕಾದ ವಿಷಯಗಳ ಶಿಕ್ಷಣಕ್ಕೆ, ಅಂದಿನ ಶೈಕ್ಷಣಿಕ ಮೌಲ್ಯಗಳನ್ನು-ಪರಿಣಾಮಕಾರಿ ವಿಧಾನಗಳನ್ನು ಅಳವಡಿಸಿ ಕೊಂಡರಾಯಿತು.

ಒಂದು ದೃಷ್ಟಿಯಿಂದ ಇಂದಿನ ವಸತಿಶಾಲೆಗಳಿಗೂ ಗುರುಕುಲ ಪದ್ಧತಿಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಗುರುಕುಲಗಳು ಹಿಂದೆ ಅರಣ್ಯಗಳಲ್ಲಿದ್ದು, ಜನ ಜಂಗುಳಿಯಿಂದ ದೂರವಾಗಿದ್ದರೆ,ಇಂದು ಅಂತಹುದೇ ಪ್ರಶಾಂತ ನಿವೇಶನಗಳಲ್ಲಿ (ಅತಿದೊಡ್ಡ ಪಟ್ಟಣಗಳಲ್ಲಿಯೂ ಕೂಡ) ಇರುತ್ತದೆ. ಹೆಚ್ಚಿನವು ಸಂನ್ಯಾಸಿ ಮಹಾತ್ಮರ ಆಶ್ರಮಗಳೇ ಆಗಿರುತ್ತದೆ.ಅಲ್ಲಿಗೆ ಸೇರಿದ ಮಕ್ಕಳು ಅಭ್ಯಾಸ ಮುಗಿಯುವ ತನಕ, ನಿಯಮಿತವಾದ ವರ್ಷಗಳಷ್ಟು ಕಾಲ ಅಲ್ಲಿಯೇ ಇರಬೇಕಾಗುತ್ತದೆ. ಇತರ ಶಾಲೆಗಳಂತೆ, ಪ್ರೌಢಶಾಲೆ-ಮಹಾವಿದ್ಯಾಲಯಗಳಂತೆ ಪಾಠಪ್ರವಚನದ ದಿನಗಳಲ್ಲಿ ಅದು ಗರಿಷ್ಠ ಐದು ಘಂಟೆ, ಕನಿಷ್ಠ ಕೆಲವೇ ನಿಮಿಷ ಗುರುಗಳ ಬಳಿಯಿದ್ದರೆ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿ, ಅಭ್ಯಾಸದಲ್ಲಿ ಪರಿಪೂರ್ಣತೆ ಮುಖ್ಯವಾಗಿ ಚಾರಿತ್ರ್ಯ ನಿರ್ಮಾಣ ಅಸಂಭವ ಎನ್ನುವುದೇ ವಸತಿ ಶಾಲೆಗಳಿಗೆ ಪ್ರೇರಣೆ. ಹಾಗಾಗಿ ವಿದ್ಯಾರ್ಥಿಗಳು ಆ ಶಾಲೆಗಳಲ್ಲಿಯೇ ನೆಲಸಿದ್ದು, ದಿನದ 24 ಘಂಟೆಯೂ ನಿಯಮಿತವಾದ ಆಚಾರ-ವಿಚಾರ-ಆಹಾರ-ವ್ಯವಹಾರಗಳ ಕ್ರಿಯಾಶೀಲತೆಯನ್ನು ಹೊಂದಿರುತ್ತಾರೆ. ವಿಧೇಯತೆಯಿಂದಲೇ ಅಲ್ಲಿ ವಿದ್ಯಾಭ್ಯಾಸ. ಅನುಶಾಸನ ಅನಿವಾರ್ಯ. ಶಕ್ತರಿಗಷ್ಟೇ ಅಲ್ಲಿ ಪ್ರವೇಶವೆಂಬುದೊಂದು ವಿಪರ್ಯಾಸ ! ಹಿಂದಿನ ಗುರುಕುಲಗಳಲ್ಲಿ ಮೇಲುವರ್ಗದವರಿಗೆ ಮಾತ್ರ ಶಿಕ್ಷಣಾವಕಾಶ, ಜಾತಿಭೇದದ ಮೂಲಕ ಬಹುಸಂಖ್ಯಾತರಿಗೆ ವಿದ್ಯಾಭ್ಯಾಸವಿಲ್ಲದೆ ದಾಸ್ಯಕ್ಕೆ ಹಚ್ಚುತ್ತಿದ್ದರೆಂಬ ಇಂದಿನ ಮುಂದಾಳುಗಳೆನ್ನಿಸಿದವರ ಆಕ್ಷೇಪ ಈ ಶ್ರೀಮಂತ ವಿದ್ಯಾಲಯಗಳಿಗೆ ಅನ್ವಯಿಸುವುದಿಲ್ಲವೇನೋ. ಸರ್ವಸಮಾನತೆಯ ಸರಕಾರಿ ಶಾಲೆಗಳಲ್ಲಿ ಅಕ್ಕಿ-ಬಟ್ಟೆ-ಪುಸ್ತಕ ಕೊಟ್ಟು ಕಲಿಸುವುದಾದರೂ, ಖಾಸಗಿ-ಶಾಲೆಗಳಿಗೆ ಹೇಗೋ ಶುಲ್ಕ ತುಂಬಿ ಹೋಗಬಯಸುತ್ತಾರೆ. ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಜಾತಿಭೇದವನ್ನು ಆರೋಪಿಸುತ್ತಿರುವವರಿಗಾಗಿ ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿದೆ. ಸಂಪೂರ್ಣ ಸಾಕ್ಷರತೆ ಸಾಧಿಸಿದರೆ ಸಂತೋಷ. ಆದರೆ, “ಸಾಕ್ಷರಾ ವಿಪರೀತಾಶ್ಚೇತ್ ರಾಕ್ಷಸಾ ಏವ ಕೇವಲಂ” ಆಗುತ್ತಿರುವುದೂ ಒಂದು ವಿಪರ್ಯಾಸವೇ.

ಪ್ರಾಚೀನ ಗುರುಕುಲ ಪದ್ಧತಿಯಲ್ಲಿ ಸಾಕ್ಷರತ್ವಕ್ಕಿಂತ ರಾಕ್ಷಸತ್ವ ನಿವಾರಣೆ ಮುಖ್ಯವಾಗಿತ್ತು. ವೇದ, ಶಾಸ್ತ್ರ, ಆಗಮ, ಪುರಾಣ-ಹೀಗೆ ಆತ್ಮಸಂಸ್ಕಾರವನ್ನು ಸಾಧಿಸುವುದು ಅಂದಿನ ವಿದ್ಯಾಭ್ಯಾಸದ ಗುರಿ. ವಿದ್ಯಾರ್ಥಿಯ ಆಸಕ್ತಿ ಹಾಗೂ ಧಾರಣಾಶಕ್ತಿ (ಧನಶಕ್ತಿಯಲ್ಲ) ಯನ್ನು ಗಮನಿಸಿ, ಕಾಲಮಿತಿಯಿಲ್ಲದೆ ಪರಿಪೂರ್ಣತೆಯತ್ತ ಗುರುಗಳು ಶಿಷ್ಯರನ್ನು ಮುನ್ನಡೆಸುತ್ತಿದ್ದರು. ಒಮ್ಮೆ ಗುರುಕುಲದಲ್ಲಿ ಪ್ರವೇಶ ಪಡೆದರೆ, ಗುರುವು ಪೂರ್ಣ ವಿದ್ಯಾಪ್ರಾಪ್ತಿಯಾಯಿತೆಂದು ಅನುಮತಿಸಿದ ಮೇಲೆಯೇ ಅಲ್ಲಿಂದ ನಿರ್ಗಮನ. ಹತ್ತಿಪ್ಪತ್ತು ವರ್ಷಗಳ ಕಾಲ ಗುರುಕುಲವಾಸ !  ಆ ಪರಿಸರದ ಪ್ರಭಾವ ಪಶುವನ್ನು ವಿದ್ಯೆಯ ಮೂಲಕ ಮುನುಷ್ಯನನ್ನಾಗಿ ಮಾಡುತ್ತದೆ. ಅರ್ಹತೆಯಿದ್ದವರು ಪುರುಷೋತ್ತಮರೂ ಆಗುತ್ತಾರೆ. (ಪ್ರಭವತಿ ಶುಚಿರ್ಬಿಂಬಗ್ರಾಹೇ ಮಣಿರ್ನ ಮೃದಾದಯಃ-ಒಬ್ಬನೇ ಗುರು ಸಮಾನವಾಗಿ ಎಲ್ಲರಿಗೂ ಕಲಿಸಿದರೂ, ರತ್ನದಲ್ಲಿ ಪ್ರತಿಬಿಂಬ ಮೂಡಿತೇ ವಿನಾ ಮಣ್ಣುಗಳಲ್ಲಿ ಮೂಡಲಾರದು.)

  ಗುರುಕುಲದ ವಿದ್ಯಾರ್ಥಿಗಳನ್ನು ಅಂತೇವಾಸಿಗಳೆನ್ನುತ್ತಾರೆ. ಗುರುವಿನ ಬಳಿಯಲ್ಲೇ ಅವರು ಇರಬೇಕು, ವಾಸಿಸಬೇಕು. ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ ಇವು ಮೂರು ನಮಗೆ ದೊರೆತ ಆದೇಶಗಳು. ಮಾತಾಪಿತರನ್ನು ಬಿಟ್ಟು ಜ್ಞಾನದ ಗುರಿ ಸಾಧಿಸಲು ಗುರುಕುಲಕ್ಕೆ ತೆರಳಿದ ಉಪನೀತನು (ಹತ್ತಿರಕ್ಕೆ ಒಯ್ಯಲ್ಪಟ್ಟವನು, ಉಪನಯನ ಸಂಸ್ಕಾರ ಪಡೆದವನು) ಗುರುವನ್ನೂ ಗುರುಪತ್ನಿಯನ್ನೂ, ಗುರುಕುಲದ ಎಲ್ಲಾ ಹಿರಿಯರನ್ನೂ ಗೌರವಿಸಬೇಕು. ತಾಯಿ, ತಂದೆ, ಗುರು ಇವರ ಸೇವೆಯೇ ಶ್ರೇಷ್ಠ ಎಂದು ಮನುಸ್ಮೃತಿ ಹೇಳುತ್ತದೆ. (“ತೇಷಾಂ ತ್ರಯಾಣಾಂ ಶುಶ್ರೂಷಾ ಪರಮಂ ತಪ ಉಚ್ಯತೇ || ನ ತೈರಭ್ಯನನುಜ್ಞಾತೋ ಧರ್ಮಮನ್ಯಂ ಸಮಾಚರೇತ್ ||“) ಅವರ ಅನುಮತಿ ಪಡೆಯದೆ ಯಾವ  ಧರ್ಮಾಚರಣೆಯೂ ಇಲ್ಲ. ಗುರುವಿನ ಜಾತಿಯನ್ನು ನೋಡಬೇಕಾಗಿಲ್ಲ. ವಿಷದಿಂದಲೂ ಅಮೃತವನ್ನು ಎತ್ತಿಕೊಳ್ಳಬೇಕು. ಮಕ್ಕಳ ಸುಭಾಷಿತವನ್ನು ಕೇಳಬೇಕು. ವರ್ಣಮಾತ್ರವನ್ನು ಕಲಿಸಿದವನೂ ಗುರುವೇ. ಗುರುಸೇವೆಯಿಂದಲೇ ಜನ್ಮ ಸಾರ್ಥಕ. ಈ ಅವಧಿಯಲ್ಲಿ ಬ್ರಹ್ಮಚರ್ಯ ವಿಧಿಗಳೊಂದಿಗೆ ಗುರುವಿಗೆ ಅವಶ್ಯಕವಾದ ನೀರು, ಹೂವು, ಗೋಮಯ,ಮಣ್ಣು, ದರ್ಭೆ ಮುಂತಾದವುಗಳನ್ನು ತಂದುಕೊಡಬೇಕು. ಎಲ್ಲೆಲ್ಲಿ ಹೇಗೆ ‘ಭಿಕ್ಷ’ ಗ್ರಹಣ ಎಂಬುದನ್ನು ಹೇಳಿದೆ. ಸಮಿತ್ತುಗಳನ್ನು ತಂದು ಹೋಮ ಮಾಡಬೇಕು. ಆರೋಗ್ಯವಾಗಿದ್ದೂ ಏಳುದಿನ ಇದಕ್ಕೆ ತಪ್ಪಿದರೆ, ಅವಕೀರ್ಣಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ನಿತ್ಯದ ಊಟ ಭೈಕ್ಷದಿಂದ, ಭೈಕ್ಷಾನ್ನಭೋಜನ ಉಪವಾಸಕ್ಕೆ ಸಮ. ಈಗ ಗುರುಕುಲಗಳಲ್ಲಿ ಉಚಿತ ಭೋಜನ ಇದೆ. ಅಲ್ಪಸ್ವಲ್ಪ ಶ್ರಮಕಾರ್ಯಗಳೂ ಇರಬಹುದು.

   ಆಚಾರ್ಯನ ಪ್ರೇರಣೆಯಂತೆ ಅಥವಾ ಅಪ್ರಚೋದಿತವಾಗಿಯೇ ಅಧ್ಯಯನವನ್ನು ಶಿಷ್ಯರು ನಡೆಸಬೇಕು. ಶರೀರ,ಮಾತು,ಬುದ್ಧಿ, ಇಂದ್ರಿಯಗಳು ಮತ್ತು ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು, ಗುರುವಿನ ಮುಖವನ್ನೇ ನೋಡುತ್ತಾ ಕುಳಿತಿರಬೇಕು. ಗುರು ಹೇಳುವವರೆಗೆ  ನಿಂತೇ ಇದ್ದು, ಆಮೇಲೆ ಕುಳಿತುಕೊಳ್ಳಬೇಕು. ಗುರುವಿಗಿಂತ ಕೆಳಮಟ್ಟದ ಅನ್ನವಸ್ತ್ರದೊಂದಿಗೆ, ಸದಾ ಗುರು ಸನ್ನಿಧಿಯಲ್ಲಿರುತ್ತಾ, ಗುರುವಿಗೆ ಮೊದಲೇ ಎದ್ದು, ಗುರು ಮಲಗಿದ ಮೇಲೆ  ಮಲಗಬೇಕು. ಹೀಗೆ ಶಿಷ್ಯವೃತ್ತಿಯ ನಿಯಮಗಳನ್ನು ಮನುಸ್ಮೃತಿಯ ಎರಡನೆ ಅಧ್ಯಾಯ ಹಲವಾರು ಶ್ಲೋಕಗಳಲ್ಲಿ ನಿರೂಪಿಸಿದೆ. ಧೌಮ್ಯಮಹರ್ಷಿಗಳ ಶಿಷ್ಯರಾದ ಉಪಮನ್ಯು,ಆರುಣಿ ಮುಂತಾದವರು ಗುರುಕುಲದಲ್ಲಿ ನಾನಾವಿಧ ಪರೀಕ್ಷಾ ಕ್ಲೇಶಗಳನ್ನು ಸಹಿಸಿ ಉತ್ತೀರ್ಣರಾಗಿ ಸಿದ್ಧಿ ಪಡೆದ ಕಥೆಗಳು ಪ್ರಸಿದ್ಧವಾಗಿವೆ.

   ಗುರುವು ಅನುಮತಿಸಿದ ಮೇಲೆಯೇ ಗುರುಕುಲದಿಂದ ನಿರ್ಗಮನ. ಆಗ ಗುರುವಿಗೆ ತನ್ನಿಂದ ಸಾಧ್ಯವಾಗಬಲ್ಲ ಗುರುದಕ್ಷಿಣೆಯನ್ನು ಕೊಡಬೇಕು. ಇದಕ್ಕೆ ಮೊದಲು ಆತನು ಏನನ್ನೂ ಶುಲ್ಕರೂಪದಲ್ಲಿ ಕೊಡಕೂಡದು. ವಿದ್ಯೆಯು ದಾನವೇ ಹೊರತು ವ್ಯಾಪಾರವಾಗಬಾರದು. (ಈ ಕಾಲದಲ್ಲಿ ಪ್ರವೇಶಕ್ಕೆ ಮುಂಚೆಯೇ ದಾನ, ಶುಲ್ಕ ಮುಂತಾದುವನ್ನು ತುಂಬಲೇ ಬೇಕಾಗಿರುವುದು ಕಡ್ಡಾಯ. ಅಭ್ಯಾಸ ಮುಗಿಸಿ ಅಥವಾ ಮುಂಚಿತವಾಗಿ ಹೊರಡುವಾಗ ಕಾಣಿಕೆ ಕೊಡುವುದು ಶಿಷ್ಟಾಚಾರ.) ಶ್ರೀ ಕೃಷ್ಣನು ಗುರುದಕ್ಷಿಣೆಯಾಗಿ ಸಾಂದೀಪನಿ ಮುನಿಗಳಿಗೆ, ಕಳೆದು ಹೋದ ಗುರುಪುತ್ರನನ್ನು ತಂದೊಪ್ಪಿಸಿದನು. ದ್ರುಪದ ರಾಜನನ್ನೇ ಗುರುದಕ್ಷಿಣೆಯಾಗಿ ಪಾಂಡವ ಕೌರವರಿಂದ ಹಿಡಿತರಿಸಿದ ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನೇ ಕತ್ತರಿಸಿ ಕೊಡುವಂತೆ ಮಾಡಿದರಂತೆ! 

ಗುರುಕುಲ ಪದ್ಧತಿಯನ್ನು ಕ್ರಮಬದ್ಧವಾಗಿ ತಿಳಿಸುವ ಗ್ರಂಥಗಳು ಉಪಲಬ್ದವಿಲ್ಲದಿದ್ದರೂ, ಅವುಗಳ ಸೂಚನೆ ಧರ್ಮಶಾಸ್ತ್ರಗಳಲ್ಲಿ ನಿರೂಪಿತವಾಗಿದೆ. ಪುರಾಣ ಕಥೆಗಳಲ್ಲಿ ಬಂದಿದೆ. ಕಾವ್ಯಗಳಲ್ಲೂ ಸಮಯೋಚಿತವಾಗಿ ನಿರೂಪಿತವಾಗಿದೆ. ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲ  ನಾಟಕದಲ್ಲಿ ಶಾರ್ಙ್ಗರವ, ಶಾರದ್ವತ, ಅನಸೂಯಾ ಪ್ರಿಯಂವದಾ, ಗೌತಮೀ ಮುಂತಾದ ಆಶ್ರಮವಾಸಿಗಳನ್ನು ಹೆಸರಿಸಿದೆ. ಲವಕುಶರು ಹುಟ್ಟಿಬೆಳೆದ ವಾಲ್ಮೀಕಿಯ ಆಶ್ರಮವೂ ಗುರುಕುಲವೇ.ಅರವತ್ತು ಸಾವಿರ ಶಿಷ್ಯರಿಗೆ ಆಶ್ರಯವಿತ್ತು ವಿದ್ಯಾಭ್ಯಾಸ ಮಾಡಿಸುವವನನ್ನು ಕುಲಪತಿಯೆಂದೂ, ಈ ಗುರುಕುಲದ ವೆಚ್ಚವನ್ನು ಆಯಾ ಪ್ರದೇಶದ ರಾಜನು ನಿರ್ವಹಿಸುತ್ತಿದ್ದನೆಂದೂ ಹೇಳಲಾಗುತ್ತದೆ.

     ಕಾಳಿದಾಸ ಮಹಾಕವಿಯ ರಘುವಂಶ ಮಹಾಕಾವ್ಯದ ಐದನೆಯ ಸರ್ಗದಲ್ಲಿ ‘ವರತಂತು‘ ಶಿಷ್ಯನಾದ ‘ಕೌತ್ಸ‘ನೆಂಬವನು ಗುರುದಕ್ಷಿಣೆ ನೀಡಿದ ಕಥೆ ಹೆಚ್ಚು ಪ್ರಚಾರದಲ್ಲಿದೆ. “ತ್ಯಾಗಾಯ ಸಂಭೃತಾರ್ಥಾನಾಂ” (ತ್ಯಾಗಕ್ಕಾಗಿಯೇ ಧನಸಂಗ್ರಹಿಸುವ) ಯಶಸೇವಿಜಿಗೀಷೂಣಾಂ” (ಕೀರ್ತಿಗಾಗಿ ವಿಜಯಿಗಳಾಗುವ ) ರಘುವಂಶದಲ್ಲಿ ಹುಟ್ಟಿದ ರಘುಮಹಾರಾಜ (ಇವನ ಹೆಸರೇ ವಂಶಕ್ಕೆ ಬಂದಿದೆ) ವಿಶ್ವಜಿದ್ಯಾಗ ಮಾಡಿ ಬರಿಗೈಯಾದ ಹೊತ್ತಿಗೆ, ಅವನಿಂದ ಗುರುದಕ್ಷಿಣೆಗಾಗಿ ಧನಸಹಾಯ ಪಡೆಯಲು ಕೌತ್ಸನು ಬರುತ್ತಾನೆ. ಅವನಿಗೆ ಮಣ್ಣಿನ ಪಾತ್ರೆಯಲ್ಲಿ ರಘುಮಹಾರಾಜನು ಅರ್ಘ್ಯಜಲವನ್ನು ತಂದಾಗಲೇ ಕೌತ್ಸನಿಗೆ ಪರಿಸ್ಥಿತಿಯ ಅರಿವಾಗಿತ್ತು. ಇಂಥಾ ಬಡತನದಲ್ಲಿಯೂ ರಘುಮಹಾರಾಜನು ಅತಿಥಿಯನ್ನು ಯಥಾವಿಧಿಯಾಗಿ ಸತ್ಕರಿಸಿದನು. ಅವನನ್ನು ಪೀಠದಲ್ಲಿ ಕುಳ್ಳಿರಿಸಿ ಕೇಳುವ ಮಾತುಗಳಲ್ಲಿ ಪ್ರಾಚೀನ ಗುರುಕುಲ ಪದ್ಧತಿಯಲ್ಲಿ ಗುರುತಿಸಬಹುದಾಗಿದೆ. “ಎಲೈ ಕುಶಾಗ್ರಬುದ್ಧಿಯ ಬ್ರಹ್ಮಚಾರಿಯೇ, ಮಂತ್ರಗಳ ಸೃಷ್ಟಿಕರ್ತರಲ್ಲಿ ಶ್ರೇಷ್ಠನಾದ ನಿನ್ನ ಗುರು ಕ್ಷೇಮವೇ ? ಆತನಿಂದ ಸಮಗ್ರವಾದ ಜ್ಞಾನವನ್ನು ಜಗತ್ತು ಸೂರ್ಯನಿಂದ ಚೈತನ್ಯ ಪಡೆದಂತೆ-ಪಡೆದಂತೆ-ಪಡೆದಿರುವಿಯಷ್ಟೆ? (ಉಪಮಾ ಕಾಳಿದಾಸಸ್ಯ-ಎಷ್ಟೊಂದು ಅರ್ಥವತ್ತಾದುದು !) ಆ ಮಹರ್ಷಿ ನಡೆಸುವ ಮನೋವಾಕ್ಕಾಯಗಳ ತಪಸ್ಸಿಗೆ ಯಾವುದೇ ವಿಘ್ನವಿಲ್ಲವಷ್ಟೆ ? ಕಟ್ಟೆಕಟ್ಟಿ, ನೀರು ಹಾಕಿ ಮಕ್ಕಳಂತೆ ಬೆಳೆಸಿದ ಆಶ್ರಮ ವೃಕ್ಷಗಳಿಗೆ ಬಿರುಗಾಳಿ ಮುಂತಾದ ಪ್ರಾಕೃತಿಕ ಅಪಾಯಗಳಿಲ್ಲವಷ್ಟೆ? (ವೃಕ್ಷಾರೋಪಣ-ರಕ್ಷಣೆಗಳೂ ಗುರುಕುಲದ ಕರ್ತವ್ಯಗಳು ) ಮುನಿಗಳ ಮಗ್ಗುಲಲ್ಲೇ ಮಲಗುವಷ್ಟು ವಿಶ್ವಾಸವುಳ್ಳ ಜಿಂಕೆಗಳ ಬಳಗ ಬೆಳೆಯುತ್ತಿದೆಯಲ್ಲ ? (ವನ್ಯಜೀವಿಗಳ ರಕ್ಷಣೆಯೂ ಗುರುಕುಲದ ಹೊಣೆ) ನಿತ್ಯಸ್ನಾನ, ಪಾನ,ಅರ್ಘ್ಯಾದಿ ದಾನಗಳಿಗೆ ಉಪಯುಕ್ತವಾದ ತೀರ್ಥಜಲಾಶಯಗಳು ಮಂಗಳ ಕರವಾಗಿವೆಯಷ್ಟೇ ? ಜಾನಪದರ ವ್ಯವಸಾಯಕ್ಕೆ ಧಕ್ಕೆ ಇಲ್ಲವಲ್ಲ ? (ಇವೆಲ್ಲ ಪರಿಸರದ ಪೋಷಣೆಯ ಕುರಿತಾದ ಪ್ರಶ್ನೆಗಳು.)

 ಮುಖ್ಯವಾದ ಪ್ರಶ್ನೆಯೆಂದರೆ “ನಿನಗೆ ಸರಿಯಾದ ಶಿಕ್ಷಣ ನೀಡಿ, ಇನ್ನು ನೀನು ಗೃಹಸ್ಥನಾಗೆಂದು ಪ್ರಸನ್ನತೆಯಿಂದ ಗುರುವು ಆಶೀರ್ವದಿಸಿರುವನೇ ? ಸರ್ವೋಪಕಾರಿಯಾದ ಗೃಹಸ್ಥಾಶ್ರಮವನ್ನು ನೀನು ಪಡೆಯಲು ಇದು ಸರಿಯಾದ ವಯಸ್ಸು. ನೀನು ನನ್ನ ಬಳಿ ಬಂದುದರಿಂದ ನಾನು ಸಂತುಷ್ಟನಾದೆ,ಧನ್ಯನಾದೆ. ಆದರೆ ಇಷ್ಟೇ ಸಾಲದು. ನಿನ್ನ ಅಥವಾ ಗುರುವಿನ ಯಾರ ಸೇವೆಯಿಂದ ನನ್ನ ಜನ್ಮ ಸಾರ್ಥಕವಾಗಬಹುದೆಂದು ಬಂದಿರುವೆ ?”

ತನ್ನ ಆಸೆ ಈಡೇರದೆಂದು ನಿರಾಶನಾದ ಕೌತ್ಸನು ಹೇಳಿದನು-“ನಾವೆಲ್ಲರೂ ಕ್ಷೇಮ. ನೀನು ರಾಜನಾಗಿರುವಾಗ ಪ್ರಜೆಗಳಿಗೆ ಯಾವುದೇ ಅಶುಭ ಹೇಗಾದೀತು ? ಸೂರ್ಯನು ಬೆಳಗುತ್ತಿರುವಾಗ ಕತ್ತಲೆ ತಲೆಯೆತ್ತಲಾರದು. ನಿನ್ನ ಸೇವಾಭಾವ ಶ್ಲಾಘ್ಯ. ಆದರೆ, ನಾನು ಕಾಲಮೀರಿ ಬಂದೆನೆನ್ನಿಸುತ್ತದೆ. ಮಳೆಸುರಿಸಿ ಬರಿದಾದ ಶರತ್ಕಾಲದ ಮೋಡವನ್ನು ಚಾತಕವೂ ಬೇಡಲಾರದು. ಗುರುದಕ್ಷಿಣೆ ತರಲು ನಾನು ಬೇರೆಲ್ಲಾದರೂ ಪ್ರಯತ್ನಿಸುತ್ತೇನೆ.”

ಕೌತ್ಸನು ತೀರಾ ಬಡವ. ಅನಾಥ. ಅಂಥವನಿಗೂ ವಿದ್ಯಾಭ್ಯಾಸ ಮಾಡಿಸಿದ ಗುರು ವರತಂತು. ತನಗೆ “ನೀನು ಕಲಿತುದೇ ಗುರುದಕ್ಷಿಣೆ. ಬೇರೇನೂ ಬೇಡ” ವೆಂದನು. ಆದರೆ ಕೌತ್ಸನಿಗೆ ಸಮಾಧಾನವಿಲ್ಲ. “ಗುರುದಕ್ಷಿಣೆ ಹೇಗಾದರೂ ಕೊಟ್ಟೇ ತೀರುತ್ತೇನೇ, ಏನನ್ನು ಕೊಡಬೇಕು ?” ಎಂದು ಹಟಮಾಡಿದನು. ಈ ನಿರ್ಬಂಧಕ್ಕೆ ಸಿಟ್ಟಾದ ಗುರು ಹೇಳಿದರು-“ನೀನು ನನ್ನಿಂದ ಹದಿನಾಲ್ಕು ವಿದ್ಯೆಗಳನ್ನು ಕಲಿತಿದ್ದೀ. ಪ್ರತಿಯೊಂದಕ್ಕೂ ಒಂದು ಕೋಟಿಯಂತೆ ಹದಿನಾಲ್ಕು ಕೋಟಿ ಹೊನ್ನನ್ನು ನನಗೆ ತಂದು ಕೊಡು.”

  ಸಕಲವಿದ್ಯಾಪಾರಂಗತನಾದವನು ಗುರುದಕ್ಷಿಣಾರ್ಥಿಯಾಗಿ ಬಂದಿದ್ದಾಗ, ನಿರಾಶನಾಗಿ ಹಿಂದಿರುಗುವುದು ರಘುಮಹಾರಾಜನಿಗೆ ತೀರಾ ಅಪಮಾನಕರ. ಕೌತ್ಸನನ್ನು ವಿಶ್ರಮಿಸಲು ಹೇಳಿ, ರಾತ್ರಿಯೆಲ್ಲಾ ಯೋಚಿಸಿದನು. ಭೂಮಿಯ ಸಂಪತ್ತೆಲ್ಲವನ್ನೂ ಗೆದ್ದು ಯಾಗದಲ್ಲಿ ವಿನಿಯೋಗಿಸಿರುವುದರಿಂದ, ಕುಬೇರನನ್ನು ಗೆದ್ದು ಧನವನ್ನು ತರಬೇಕೆಂದು ನಿರ್ಧರಿಸುತ್ತಿದ್ದಂತೆಯೆ, ಕೋಷಾಗಾರದಲ್ಲಿ ಸುವರ್ಣ ವೃಷ್ಟಿಯಾಯಿತು. ಒಂಟೆ,ಕುದುರೆಗಳ ಮೇಲೆ ಹೊನ್ನ ಮೂಟೆಗಳನ್ನು ಹೊರಿಸಿ ಕೌತ್ಸನನ್ನು ಕಳುಹಿಸಿಕೊಟ್ಟನು. (ಈಗಿನ ಸರಕಾರ, ಅದರ ಹೊಣೆಯಾದ ರಕ್ಷಣ-ಶಿಕ್ಷಣಕ್ಕೆ ಇದೊಂದು ಮಾರ್ಗದರ್ಶಿ.)     ಗುರುಕುಲದ ಪರಿಚಯಕ್ಕಾಗಿ ಈ ಕಥೆ. ಗುರುದಕ್ಷಿಣೆಯ ವಿಚಾರ ಅಪ್ರಸ್ತುತ. ಈಗಂತೂ ಮನೆಗಳಲ್ಲಿ ದೃಶ್ಯಮಾಧ್ಯಮಾದಿ ಆಕರ್ಷಣೆಗಳು, ಜನಸಮ್ಮರ್ದ- ವಾಹನಾದಿಗಳ ಶಬ್ದಮಾಲಿನ್ಯ-ವಿದ್ಯಾಭ್ಯಾಸಕ್ಕೆ ಪೋಷಕವಾಗಿಲ್ಲ. ಮಕ್ಕಳೂ ಹೆತ್ತವರು ಹೇಳಿದ್ದನ್ನು ಕೇಳುವುದಿಲ್ಲ.ಹಿರಿಯರೂ ಹೇಳುವ ಸ್ಥಿತಿಯಲ್ಲಿಲ್ಲ. ಆದುದರಿಂದ ಗುರುಕುಲ ಪದ್ಧತಿಯು ಕಾಲೋಚಿತವಾಗಿ ಎಲ್ಲಾ ಕಡೆಯೂ ಮನುಷ್ಯ ಮಾತ್ರರೆಲ್ಲರಿಗೆ ಸಿಗುವಂತಾದರೆ ದೇಶ ಸುಶಿಕ್ಷಿತವಾದೀತು, ಸುಭಿಕ್ಷವಾದೀತು, ಸುರಕ್ಷಿತವಾದೀತು.

 

                               **************

  

Facebook Comments