ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.
ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,

ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ ಶ್ರೀಗುರುಚರಣಕೆ....

ಶ್ರದ್ಧಾಸುಮ ಶ್ರೀಗುರುಚರಣಕೆ….

ಶ್ರದ್ಧಾಸುಮ 1:

ಆದ್ಯ ಜಗದ್ಗುರು ಶ್ರೀ ಶಂಕರ ಭಗವತ್ಪಾದರು 

ಶಿರಂಕಲ್ಲು ಈಶ್ವರ ಭಟ್ಟ, ಸಂಸ್ಕೃತ ವಿಶಾರದ, ರಾ.ಭಾ.ಪ್ರವೀಣ

ಸನಾತನ ಧರ್ಮದ ಅಂದಿನರೂಪ
ಸುಮಾರು ಕ್ರಿಸ್ತಶಕ ಆರನೆಯ ಶತಮಾನದ ಕೊನೆಯ ಕಾಲ. ಸನಾತನವಾದ ವೈದಿಕ ಧರ್ಮವು ವಿಶಾಲವಾದ ಹಳೆಯ ಆಲದ ಮರದಂತೆ ಸಾವಿರಾರು ಬೀಳಲುಗಳನ್ನು ಬಿಟ್ಟು ಭಾರತದೇಶದಾದ್ಯಂತ ವ್ಯಾಪಿಸಿದ್ದಿತು. ಮರದ ಶರೀರವು ಜರೆಯಿಂದ ಜರ್ಜರಿತವಾಗಿದ್ದಿತು. ಅದರ ಕೆಲವು ಬೀಳಲುಗಳು ಮರದ ತಿರುಳಿನಲ್ಲಿ ಒಸರುತ್ತಿರುವ ಅಮೃತ ಸಮಾನವಾದ ರಸವನ್ನು ಹೀರಿ ಬೆಳೆಯುತ್ತಿದ್ದರೂ ಸ್ವತಂತ್ರವೃಕ್ಷಗಳಂತೆ ವರ್ತಿಸುತ್ತಿದ್ದವು. ಅಮರವಾದ ಸನಾತನ ಧರ್ಮದ ಮೂಲ ಮರದ ಹೊರಗಿನ ತೊಗಟೆಯು ಸತ್ವಹೀನವಾಗಿ ಕಾಣುತ್ತಿದ್ದಿತು. ಆದುದರಿಂದ ಅದು ಗೆದ್ದಲಿನ, ಗೂಡಾಗಿದ್ದಿತು: ಕ್ಷುದ್ರಜೀವಿಗಳಾದ ಕ್ರಿಮಿ-ಕೀಟಗಳಿಗೆ ಆಶ್ರಯವಾಗಿದ್ದಿತು. ಆದರೂ ಮರದ ತಿರುಳು ಬಲವಾಗಿದ್ದಿತು.   ಆ ಸಮಯದಲ್ಲಿ ಭಾರತ ದೇಶವು ವಿವಿಧ ಮತಗಳ ತವರು ಮನೆಯಾಗಿದ್ದಿತು. ಸನಾತನವಾದ ವೈದಿಕ ಧರ್ಮದಿಂದಲೇ ಸ್ಫೂರ್ತಿ ಪಡೆದು ಬೆಳೆದಿದ್ದ ಬೌದ್ಧ, ಜೈನ, ಚಾರ್ವಾಕ ಮೊದಲಾದ ಮತಗಳು ಕ್ರಮೇಣ ವಿಕೃತ ರೂಪವನ್ನು ಪಡೆದು, ನಿರಾಶಾವಾದ, ನಿರೀಶ್ವರವಾದ, ಅನಾತ್ಮವಾದಗಳನ್ನು ಆಶ್ರಯಿಸಿ,ಅವೈದಿಕ ಮತ್ತು ನಾಸ್ತಿಕ ಪಂಥಗಳಾಗಿ ಪರಿವರ್ತಿತವಾದವು.

ಆಸ್ತಿಕತೆಯನ್ನು ಆಶ್ರಯಿಸಿದ ಅನಾದಿಯಾದ ವೈದಿಕ ಮತವೂ ಸಹ  ಸೌರ, ಗಾಣಪತ್ಯ, ಶಾಕ್ತ,ಶೈವ, ವೈಷ್ಣವ, ಕಾಪಾಲಿಕ, ತಾಂತ್ರಿಕ ಮುಂತಾದ ವಿವಿದ ಮತಗಳಾಗಿ ಪರಿವರ್ತನೆಗೊಂಡು ತಮ್ಮೊಳಗೆ ಜಗಳಾಡುವ ಪರಿಸ್ಥಿತಿಯು ಪ್ರಾಪ್ತವಾಯಿತು. ಆಗಾಗ ದೂರದ ಪಾಶ್ಚಾತ್ಯ ಪ್ರದೇಶಗಳಿಂದ ಮ್ಲೇಚ್ಛ ಮತ್ತು ಯವನ ಮತಗಳ ಗಾಳಿಯೂ ಭರತಭೂಮಿಯ ಬಳಿಗೆ ಬಲವಾಗಿ ಬೀಸುತ್ತಿತ್ತು. ಆದುದರಿಂದ ಅದು ವಿವಿದ ಮತಗಳ ಸಂಘರ್ಷಮಯವಾದ ಕ್ರಾಂತಿಯ ಕಾಲವಾಗಿ ಪರಿಣಮಿಸಿತು. ಹೊರಗಿನಿಂದ ವಿಕೃತ ರೂಪದಂತೆ ತೋರುತ್ತಿದ್ದ ಸನಾತನವಾದ ವೈದಿಕ ಧರ್ಮದ ಯಥಾರ್ಥವಾದ ಸ್ವರೂಪವನ್ನು ಎತ್ತಿ ತೋರಿಸುವ ವ್ಯಕ್ತಿಯ ಅಗತ್ಯವು ಆಗ ಉಂಟಾಯಿತು. ಆ ಧರ್ಮದ ಅಮರತ್ವವನ್ನು ಮಾನವ ಸಮಾಜಕ್ಕೆ ಮನಗಾಣಿಸುವ ಮಹಾತ್ಮನ ಆಗಮನವು ಆಗಬೇಕಾಯಿತು. ಪೃಥ್ವಿಯಲ್ಲಿ ಮತ್ತೊಮ್ಮೆ ತಲೆಯೆತ್ತಿ ಅತ್ತಿತ್ತ ಸುತ್ತುತ್ತಿರುವ ಕತ್ತಲೆಯ ಮೊತ್ತವನ್ನು ಮಾಯ ಮಾಡಲು ಅತ್ಯಂತ ತೇಜಸ್ವಿಯಾದ ಭಾಸ್ಕರನ ಉದಯವಾಗಬೇಕಾಯಿತು. ಅದು ಆಯಿತು !

ಭಾರತದ ಬಾಂದಳದಲ್ಲಿ ಬಾಲ ಭಾನುವಿನ ಉದಯ
“ವಿವಿಧ ಮತಗಳ ಮೂಲವು ಒಂದೇ ಆಗಿದೆ. ಒಬ್ಬನೇ ಪರಮಾತ್ಮನು ಆರಾಧಕರ ಬಹುವಿಧದ ಭಾವನೆಗಳಿಗೆ ಅನುಗುಣವಾಗಿ, ಸೂರ್ಯ, ಗಣಪತಿ, ಶಕ್ತಿ, ಶಿವ, ವಿಷ್ಣು, ಸುಬ್ರಹ್ಮಣ್ಯ ಮೊದಲಾದ ವಿವಿಧ ನಾಮ ಮತ್ತು ರೂಪಗಳಿಂದ ಉಪಾಸನೆ ಮಾಡಲ್ಪಡುವನು. ಸ್ಥಿರಚರಾತ್ಮಕವಾದ ಪ್ರಪಂಚದ ಪ್ರತಿಯೊಂದು ಪ್ರಾಣಿ ಮತ್ತು ವಸ್ತುವಿನಲ್ಲಿ ಪರಮಾತ್ಮನು ವ್ಯಾಪಿಸಿರುವನು. ಉಪನಿಷತ್ತುಗಳು ಉಪದೇಶಿಸಿದ ಪವಿತ್ರವಾದ ವೇದಾಂತ ತತ್ವಗಳ ಅನುಷ್ಥಾನದಿಂದ ಸನಾತನವಾದ ವೈದಿಕಧರ್ಮದ ಉದ್ಧಾರವು ಸಾಧ್ಯವಾಗಬಹುದು”  ಈ ತತ್ವದ ಮೂಲ ತಿಳುವಳಿಕೆಯ ತಿರುಳನ್ನು ತಿಳಿಸುವ ಸಲುವಾಗಿ, ಭಾರತದ ದಕ್ಷಿಣ ಭಾಗದಲ್ಲಿ “ಆದ್ಯ ಜಗದ್ಗುರು-ಶ್ರೀ ಶಂಕರಭಗವತ್ಪಾದ”ರ ಪ್ರಾದುರ್ಭಾವವಾಯಿತು.

     ಭಾರತದ ಬಾಂದಳದಲ್ಲಿ ಉದಯಿಸಿ, ಭವ್ಯವಾಗಿ ಬೆಳಗುತ್ತಿರುವ ಬಾಲ ಭಾನುವಿನ ದಿವ್ಯ ತೇಜಸ್ಸು, ವಿಶ್ವವನ್ನು ವ್ಯಾಪಿಸಿತು. ಶ್ರೀ ಶಂಕರ ಭಗವತ್ಪಾದರೆಂಬ ನಾಮಧೇಯವನ್ನು ಧರಿಸಿ, ಅವತರಿಸಿದ ಪರಮೇಶ್ವರನು ಸರ್ವಮತಸಮನ್ವಯವನ್ನು ಸಾಧಿಸಿದನು. ಮೂಡಣ ದಿಗಂತದಲ್ಲಿ ಉದಯಿಸಿದ ಬಾಲಭಾಸ್ಕರನು ಬಹುಬೇಗ ಗಗನದಲ್ಲಿ ಮೇಲೇರಿದನು. ನಭದ ಮಧ್ಯದಲ್ಲಿ ನೆಲೆಸಿ, ಪ್ರಕಾಶಿಸಿದನು. ಅವನ ಪ್ರಭಾವಳಿಯ ವಲಯದಿಂದ ಹೊರ ಹೊರಟ ಕಿರಣಗಳ ತಿಳಿಬೆಳಕು ಇಳೆಯನ್ನು ಬೆಳಗಿಸಿತು. ಅಜ್ಞಾನದ ಕತ್ತಲೆಯ ಬಲೆಯೊಳಗೆ ಸಿಲುಕಿ,ತತ್ತರಿಸುತ್ತಿದ್ದ ಪೃಥ್ವಿಯ ಜನತೆಯು ಉಜ್ವಲವಾಗಿ ಜ್ವಲಿಸುತ್ತಿರುವ ಜ್ಞಾನದ ಪ್ರಭೆಯಿಂದ ಪ್ರಭಾವಿತವಾಯಿತು. ಪ್ರಕಾಶದಿಂದ ಆಕರ್ಷಿತವಾಗಿ, ಆಕಾಶದ ಕಡೆಗೆ ಕತ್ತೆತ್ತಿ ನೋಡಿತು. ಅಚ್ಚರಿಯಿಂದ ಚೈತನ್ಯವನ್ನು ತಾಳಿತು.

ಜಗದ್ಗುರುಗಳ ಜೀವನದ ಮಿಂಚುನೋಟ
ಪ್ರಗಲ್ಬ ಪಾಂಡಿತ್ಯಕ್ಕೆ ಪ್ರಸಿದ್ಧಿ ಪಡೆದ ಕೇರಳ ದೇಶದ ಕಾಲಟಿಯಲ್ಲಿ ಜಗದ್ಗುರುಗಳ ಜನನ. ಅವರ ಹಿರಿಯರು ಮಹಾಮೇಧಾವಿಗಳು, ಭವ್ಯ ಭಗವದ್ಭಕ್ತರೂ ಆದ ನಂಬೂದಿರೀ ಬ್ರಾಹ್ಮಣರು. ಆದ್ಯ ಜಗದ್ಗುರುಗಳಾದ ಶ್ರೀ ಶಂಕರ ಭಗವತ್ಪಾದರು ಎಳೆಯ ವಯಸ್ಸಿನಲ್ಲಿಯೇ ಬಲವಾದ ಮೊಸಳೆಯ ಸೆಳೆತಕ್ಕೆ ಸಿಕ್ಕಿ ಬಸವಳಿದರು. ನಿಮಿಷ ಮಾತ್ರದಲ್ಲಿ ಮರಣದ ಸಮಯವು ಸಮೀಪಿಸುತ್ತಿರುವುದನ್ನು ಗಮನಿಸಿದ ಭಗವತ್ಪಾದರು ಮಾತೆಯ ಅನುಮತಿಯಂತೆ ಮಾನಸಿಕವಾಗಿ ಸಂನ್ಯಾಸವನ್ನು ಸ್ವೀಕರಿಸಿದರು. ಅನಂತರ ವಿಮುಕ್ತಸಂಗರಾಗಿ ಉತ್ತರಭಾರತದತ್ತ ಪ್ರಸ್ಥಾನ ಗೈದರು. ಮಧ್ಯಭಾರತದಲ್ಲಿರುವ ನರ್ಮದಾ ನದಿಯ ಪಾವನ ಜಲದಲ್ಲಿ ಮಿಂದು, ಮಾಂಧಾತಾಗಿರಿಯನ್ನು ಏರಿದರು. ಆ ಗಿರಿಯ ಗುಹೆಯಲ್ಲಿರುವ ಗೋವಿಂದಯೋಗೀಂದ್ರರನ್ನು ಸಂದರ್ಶಿಸಿದರು. ಅವರಿಂದ ಶಾಸ್ತ್ರೋಕ್ತವಾದ ಸಂನ್ಯಾಸದೀಕ್ಷೆಯನ್ನು ಹೊಂದಿದರು.ಗುರುಗಳಾದ ಗೋವಿಂದ ಯೋಗಿಂದ್ರರಿಂದ ಅದ್ವೈತಸಿದ್ಧಾಂತದ ಸಂದೇಶವನ್ನು ಉಪದೇಶರೂಪದಲ್ಲಿ ಪಡೆದರು. ಅಲ್ಲಿಂದ ಮುಂದುವರಿದು, ಹಿಮಾಲಯದ ಮಡಿಲಿನಲ್ಲಿ ನೆಲೆಸಿದರು. ಅಲ್ಲಿರುವ ಪ್ರಶಾಂತವಾದ ಏಕಾಂತ ವಾತಾವರಣದಲ್ಲಿ ವೇದಾಂತಚಿಂತನೆ ಮಾಡುತ್ತಾ ತಪೋನಿರತರಾದರು.

ಅಪಾರವಾದ ತಪಸ್ಸಿನಿಂದ ಪೂರ್ವವಾದ ಆತ್ಮಶಕ್ತಿಯನ್ನು ಪರಿಶ್ರಮಪೂರ್ವಕ ಸಂಪಾದಿಸಿದ ಶ್ರೀ ಶಂಕರ ಭಗವತ್ಪಾದರು ಹಿಮಾಲಯದಿಂದ ಹಿಂದಿರುಗಿದರು. ಪರಿವ್ರಾಜಕರಾಗಿ ತಿರುಗುತ್ತಾ ಭಾರತದಾದ್ಯಂತ ಸಂಚರಿಸಿದರು. ಕ್ರಾಂತಿಕಾರಕವಾದ ಮತ ಭ್ರಾಂತಿಯಿಂದ ಮದೋನ್ಮತ್ತರಾದ ಜನತೆಗೆ ಮತ-ಧರ್ಮಗಳ ಯಥಾರ್ಥಸ್ವರೂಪವನ್ನು ತಿಳಿಸಿ, ಏಕತೆಯನ್ನು ಸಾಧಿಸಿದರು.

ಶ್ರೀ ಶಂಕರ ಭಗವತ್ಪಾದರು, ಬೌದ್ಧರಿಗೆ ಬುದ್ಧದೇವನ ಬೋಧನೆಯ ತಿರುಳನ್ನು ತಿಳಿಸಿದರು. ಜೈನರಿಗೆ ಜಿನಮುನಿಯ ಸಂದೇಶದ ಸೂಕ್ಷ್ಮವನ್ನು ಸೂಚಿಸಿದರು. ಅವರಿಗೆ ಧರ್ಮದ ಮೂಲವನ್ನು ಮನಗಾಣಿಸಿದರು. ಈ ರೀತಿಯಾಗಿ ಮಹಾಮೇಧಾವಿಗಳಾದ ಆದ್ಯ ಜಗದ್ಗುರುಗಳು ಸಮಗ್ರವಾದ ಧಾರ್ಮಿಕ ಸಮಾಜವನ್ನು ಸಮನ್ವಯಗೊಳಿಸಿದರು. ಅದ್ವೈತತತ್ತ್ವ ಪ್ರತಿಪಾದಕರಾದರು.ಈ ವಿಧದಿಂದ ಧರ್ಮ ದಿಗ್ವಿಜಯವನ್ನು ಸಾಧಿಸಿದರು. ತಮ್ಮ ಅವತಾರದ ಪ್ರಧಾನ ಉದ್ದೇಶವನ್ನು ಪೂರ್ಣಗೊಳಿಸಿದರು. ತಮ್ಮ ಅನುಪಮವಾದ ಜ್ಞಾನದ ನೆನಪು ಸಮಾಜದಲ್ಲಿ ಶಾಶ್ವತವಾಗಿ ನೆಲೆಸುವಂತೆ ವರ್ತಿಸಿದರು. ಅನಂತರ ತಮ್ಮ ಮೂವತ್ತೆರಡನೆಯ ವಯಸ್ಸಿನಲ್ಲಿ ಮಹಿಮಾಮಯವಾದ ಹಿಮಾಲಯದ ಕೇದಾರಧಾಮದ ಪಾವನ ಪರಿಸರದಲ್ಲಿ ಶರೀರವನ್ನು ತೊರೆದು ಪರಮಾತ್ಮನಲ್ಲಿ ಲೀನವಾದರು. ಉದಯಿಸಿದ ದಿನಕರನ ಹೊರಗಿನ ರೂಪವು ಮನೆಯಾಯಿತು. ಪ್ರಜ್ವಲಿಸಿದ ದಿವ್ಯ ಜ್ಯೋತಿಯ ಉಜ್ವಲವಾದ ಜ್ಞಾನ ಪ್ರಕಾಶವು ಪ್ರಪಂಚದಲ್ಲಿ ಶಾಶ್ವತವಾಗಿ ನೆಲೆಸಿತು. ಜಗದ್ಗುರುಗಳ ಜೀವನವು ಸಾರ್ಥಕವಾಯಿತು. ಸನಾತನವಾದ ವೈದಿಕ ಧರ್ಮದ ಪುನರುದ್ಧಾರವಾಯಿತು.

ಭಗವತ್ಪಾದರ ಆದರ್ಶ ವ್ಯಕ್ತಿತ್ವ
ಆದ್ಯ ಜಗದ್ಗುರು ಶ್ರೀ ಶಂಕರ ಭಗವತ್ಪಾದರು ವಿಶ್ವಕ್ಕೆ ಶುಭವನ್ನು ಒದಗಿಸುವ ವಿಶಾಲ ಹೃದಯದವರಾಗಿದ್ದರು. ಆದುದರಿಂದಲೇ ಅವರು “ಲೋಕಶಂ-ಕರ” ರಾದರು. ಅನ್ವರ್ಥವಾದ “ಶಂಕಾರಾಚಾರ್ಯ”ರೆಂಬ ಹೆಸರನ್ನು ಸಾರ್ಥಕಗೊಳಿಸಿದರು. ಅವರ ಮನಸ್ಸು ಬೆಣ್ಣೆಯಂತೆ ಬಹಳ ಮೃದುವಾಗಿದ್ದಿತು. ದೀನ-ದಲಿತರ ದುಃಸ್ಥಿತಿಯನ್ನು ಗಮನಿಸಿ, ಮನಸ್ಸಿನಲ್ಲಿ ಮರುಗುತ್ತಿದ್ದರು. ಅಶಕ್ತರು, ರೋಗಿಗಳು, ದರಿದ್ರರು ಮೊದಲಾದವರನ್ನು ಸಂದರ್ಶಿಸಿದಾಗ ಅವರ ಹೃದಯವು ದಯೆಯಿಂದ ದ್ರವಿಸುತ್ತಿದ್ದಿತು. ಅವರಲ್ಲಿ ಅನುಕಂಪಿತರಾಗಿ ಅವರ ಆರ್ತತೆಯ ನಿವಾರಣೆಗಾಗಿ ಶಕ್ತಿಮೀರಿ ಶ್ರಮಿಸುತ್ತಿದ್ದರು. ಅವರ ಜೀವನದಲ್ಲಿ ಇದರ ನಿದರ್ಶನಗಳು ಹಲವಾರು ದೊರೆಯುತ್ತವೆ. ಭಿಕ್ಷೆ ಬೇಡಲು ಬಡ ಗುಡಿಸಲಿಗೆ ಬಂದ ಬಾಲ ಬ್ರಹ್ಮಚಾರಿಗೆ ಭಿಕ್ಷೆ ನೀಡಲು ಅಶಕ್ತಳಾಗಿ ಮರುಗಿದ ಮುದುಕಿಗೆ ಶಾಶ್ವತವಾದ ಅಪಾರಸಂಪತ್ತನ್ನು ಅನುಗ್ರಹಿಸಿದುದು; ಕುಷ್ಟರೋಗದ ಭೀಕರ ಪರಿಣಾಮದಿಂದ ಕೈಕಾಲುಗಳ ಬೆರಳುಗಳು ಕರಗಿಗೋಗಿ, ಬೀದಿಯಲ್ಲಿ ಬಿದ್ದು ಬಸವಳಿದು ನರಳುತ್ತಿರುವ ರೋಗಿಯ ಅವಯವಗಳನ್ನು ಮೃದುವಾಗಿ ಸವರಿ, ಶುಶ್ರೂಷೆ ಮಾಡಿ, ಗುಣಪಡಿಸಿದುದು; ಇಂತಹ ಹಲವಾರು ಉದಾಹರಣೆಗಳು ಮಹಾತ್ಮರಾದ ಭಗವತ್ಪಾದರ ಜೀವನದಲ್ಲಿ ಜರುಗಿರುವುದು ಅವರ ವ್ಯಕ್ತಿತ್ವದ ಮಹತ್ವವಾಗಿದೆ.

ಶ್ರೀ ಶಂಕರ ಭಗವತ್ಪಾದರಿಗೆ ಮಾತೆಯ ಮೇಲಿರುವ ಮಮತೆಯು ಅನುಪಮವಾದದು. ಪತಿಯು ಮೃತಹೊಂದಿದಾಗ ಮಾತೆಯ ಮರುಕವನ್ನು ಗಮನಿಸಿದ ಮಗುವಾದ ಭಗವತ್ಪಾದರು ವೇದಾಂತದ ಮಾತುಗಳಿಂದ ಸಂತೈಸಿದ ರೀತಿಯು ಅಮೋಘವಾದುದು. ಮುದುಕಿಯಾದ ಮಾತೆಗೆ ಮೀಯಲು ಅನುಕೂಲವಾಗುವಂತೆ ನದಿಯ ದಾರಿಯನ್ನೇ ಬದಲಾಯಿಸಿದ ಭಗವತ್ಪಾದರ ಬದುಕು ಆದರ್ಶವಾದುದು. ಮಾತೆಯು ಮರಣದ ಸಮಯದಲ್ಲಿ ಸ್ಮರಿಸಿದೊಡನೆ ಅವಳ ಗುಡಿಸಲಿಗೆ ಆಗಮಿಸಿ, ಪರಮಾತ್ಮನ ನಾಮಸ್ಮರಣೆಯಿಂದ ಜಗದ್ಗುರುಗಳು ಅವಳ ಜೀವನವನ್ನು ಪಾವನಗೊಳಿಸಿದ್ದಾರೆ. ಸರ್ವಸಂಗ ಪರಿತ್ಯಾಗಿಗಳಾದ ಯತಿಗಳಾದರೂ, ಮಾತೆಯ ಅಂತ್ಯಸಂಸ್ಕಾರವನ್ನು ಸ್ವತಃ ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾರೆ. ಅವರ ಮಾತೆಯ ಪ್ರೀತಿಯು ಇತರರಿಗೆ ಆದರ್ಶವಾದುದು.

  ಪೂಜನೀಯ ಜಗದ್ಗುರುಗಳು ಸಮಾಜದಲ್ಲಿ ಮಹಿಳೆಯರಿಗೆ ಉತ್ತಮಸ್ಥಾನವನ್ನು ಪ್ರದಾನ ಮಾಡಿದ್ದಾರೆ. ಸ್ತ್ರೀಯರ ಸ್ವಾತಂತ್ರ್ಯ, ಶಿಕ್ಷಣ ಮೊದಲಾದವುಗಳಿಗೆ ಮಹತ್ವವನ್ನಿತ್ತಿದ್ದಾರೆ.  ಇದಕ್ಕೆ ಬಹುವಿಧದ ಉದಾಹರಣೆಗಳು ದೊರೆಯುತ್ತವೆ. ವಾದದಲ್ಲಿ ತನ್ನ ಪ್ರತಿವಾದಿಯಾದ ಪ್ರಕಾಂಡ ಪಂಡಿತ ಮಂಡನಮಿಶ್ರನ ಮಡದಿಯನ್ನೇ ನ್ಯಾಯ ನಿರ್ಣಯಕ್ಕೆ ನಿಯಮಿಸಿದುದು ಮಾನನೀಯ ಭಗವತ್ಪಾದರ ಹೃದಯ ವೈಶಾಲ್ಯಕ್ಕೆ ಭವ್ಯವಾದ ಒಂದು ನಿದರ್ಶನವಾಗಿದೆ.

ಲೇಖಕನ ನಿವೇದನೆ
ಪೂಜ್ಯರಾದ ಆದ್ಯ ಜಗದ್ಗುರು-ಶ್ರೀ ಶಂಕರ ಭಗವತ್ಪಾದರ ಅಪೂರ್ವವಾದ ತತ್ತ್ವಪ್ರತಿಪಾದನೆ; ಮನೋಹರವಾದ ವೇದಾಂತಚಿಂತನೆ; ರಮಣೀಯವಾದ ಆಧ್ಯಾತ್ಮಿಕ ಅನುಭವ; ವಿಶೇಷವಾದ ವ್ಯಾವಹಾರಿಕ ತಿಳುವಳಿಕೆ; ಪ್ರತಿಭಾ ಪ್ರಪೂರ್ಣವಾದ ಪ್ರಕಾಂಡ ಪಾಂಡಿತ್ಯ; ತರ್ಕ ಕರ್ಕಶವಾದ ಶಾಸ್ತ್ರೀಯಶೈಲಿ; ಭಕ್ತಿಭಾವಭರಿತವಾದ ಸ್ತೋತ್ರಸಂಗ್ರಹ; ರಸಪೂರ್ಣವಾದ ಸಾಹಿತ್ಯಸಮೂಹ; ವಿಶದವಾದ ವಿಷಯ ನಿರೂಪಣಾ ನೈಪುಣ್ಯ; ಆಧಾರ ಸಹಿತವಾದ ವಾದದ ವಿಧಾನ; ಅದ್ವೈತ ತತ್ವಬೋಧನೆಯಲ್ಲಿ ಅವರದೇ ಆದ ನವೀನ ಕ್ರಮ ಮೊದಲಾದವುಗಳನ್ನು ಸಂಕ್ಷೇಪವಾಗಿಯಾದರೂ ನಿರೂಪಿಸಲು, ಈ ಲೇಖನದಲ್ಲಿ ಸಾಧ್ಯವಾಗಲಿಲ್ಲವೆಂದು ವಾಚಕರಲ್ಲಿ ವಿನಯಪೂರ್ವಕ ವಿನಂತಿಸುತ್ತೇನೆ. ಆ ಪ್ರತಿಯೊಂದು ವಿಷಯವನ್ನೂ ವಿಶದವಾಗಿ ವಿವರಿಸಲು ವಿಸ್ತಾರವಾದ ಪ್ರತ್ಯೇಕ ಲೇಖನದ ಅವಶ್ಯಕತೆಯಿದೆ. ವಿಭೂತಿ ಪುರುಷರಾದ ಶ್ರೀ ಶಂಕರ ಭಗವತ್ಪಾದರ ಭಾವನೆಗಳ ಭವ್ಯತೆಯು ಬಹುವಿಧವಾದುದು.  

      ಸ್ಮರಣಿಕೆಯ ಲೇಖನವು ಸೀಮಿತವಾಗಿರಬೇಕೆಂಬ ನಿಯಮವು ನನ್ನ ನೆನಪಿನಲ್ಲಿದೆ. ನನ್ನ ಈ ಪ್ರಯತ್ನವು ವಿಶಾಲವಾದ ಆನೆಯ ಸ್ವರೂಪವನ್ನು ಸಣ್ಣ ಕನ್ನಡಿಯಲ್ಲಿ ಕಾಣಿಸಿದಂತಾಗಿದೆ. ಪೂಜ್ಯರಾದ ಆದ್ಯ ಜಗದ್ಗುರು-ಶ್ರೀ ಶಂಕರ ಭಗವತ್ಪಾದರ ಭವ್ಯ ಪರಂಪರೆಯನ್ನು ಸ್ಮರಿಸುತ್ತಾ ವಿರಮಿಸುತ್ತೇನೆ.

        “ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್”

            ||  ಭದ್ರಂ-ಶುಭಂ-ಮಂಗಲಮ್  ||

                   ~*~

 

 

 

Facebook Comments