ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಸ್ವಾಮಿಗಳವರ ಬ್ರಹ್ಮೀಭಾವ ಹಾಗೂ ಪ್ರಥಮ ಆರಾಧನೆ -ಶ್ರೀ ವಿ.ಆರ್.ಹೆಗಡೆ, ಹೆಗಡೆಮನೆ, ಬೆಂಗಳೂರು

||ಹರೇರಾಮ||

ತಪಸ್ವಿನೇ ಬ್ರಹ್ಮವಿಧೇ ನಿಗಮಾಗಮ ಬೋಧಿನೇ |
ಗುರವೇ ರಾಘವೇಂದ್ರಾಯ ಮಹತೇ ಯೋಗಿನೇ ನಮಃ||

ಇಂದು ಬ್ರಹ್ಮೈಕ್ಯ ಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ದಿನ.
ಶ್ರೀರಾಮಚಂದ್ರಾಪುರ ಮಠದ ಸಮಸ್ತ ಶಿಷ್ಯವರ್ಗದ ಕಲ್ಯಾಣಕ್ಕಾಗಿ ಹಗಲಿರುಳು ದುಡಿದು, ಶಿಷ್ಯಸಮುದಾಯದ ಉದ್ಧಾರಕ್ಕಾಗಿ, ಸಂಘಟನೆಗಾಗಿ ಕನಸು ಕಂಡು ಸಾಕ್ಷಾತ್ಕರಿಸಿದ ಪರಮಪೂಜ್ಯ ಪೂರ್ವಗುರುಗಳು ಬ್ರಹ್ಮೀಭಾವ ಹೊಂದಿದ ವರ್ಷ ಶ್ರೀಗುರುಗಳ ಸಂಸ್ಮರಣೆಗಾಗಿ ಶ್ರೀ ಭಗವತ್ಪಾದ ಶ್ರೀರಾಘವೇಂದ್ರಭಾರತೀ ಸನಾತನ ಧರ್ಮಪೋಷಿಣೀ(ರಿ) ಪ್ರತಿಷ್ಠಾನಂ ಹೊರತಂದ ಸಂಸ್ಮರಣಾ ಗ್ರಂಥ “ಶ್ರೀಗುರುಭಾರತೀ”.

ಭವ್ಯಮಠದ ದಿವ್ಯಗುರುಗಳ ಬಗೆಗಿನ ಎಲ್ಲ ವಿವರಗಳನ್ನು ಹೊಂದಿದ ಈ ಅಮೂಲ್ಯ ಗ್ರಂಥದಿಂದ, ಭಕ್ತಿಸುಮ ವಿಭಾಗದಲ್ಲಿ ಶ್ರೀ ವಿ. ಆರ್ ಹೆಗಡೆ, ಹೆಗಡೆಮನೆ ಬೆಂಗಳೂರು ಇವರು ಬರೆದ “ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಸ್ವಾಮಿಗಳವರ ಬ್ರಹ್ಮೀಭಾವ ಹಾಗೂ ಪ್ರಥಮ ಆರಾಧನೆ” ಯೆಂಬ  ಲೇಖನವನ್ನು ಶ್ರೀಮಠದ ಶಿಷ್ಯರಿಗಾಗಿ ಇಂದಿನ ಪುಣ್ಯದಿನದ ಘನತೆಯನ್ನು ನೆನಪಿಸುವುದಕ್ಕಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.
ಶ್ರೀಪೀಠದ ಅನುಗ್ರಹ ಎಲ್ಲಾ ಶಿಷ್ಯವರ್ಗದ ಮೇಲೆ ಸದಾಕಾಲ ಇರಲಿ..

~

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಮದ್ರಾಘವೇಂದ್ರ ಭಾರತೀ ಸ್ವಾಮಿಗಳವರ ಬ್ರಹ್ಮೀಭಾವ ಹಾಗೂ ಪ್ರಥಮ ಆರಾಧನೆ

         ಶ್ರೀ ವಿ.ಆರ್.ಹೆಗಡೆ, ಹೆಗಡೆಮನೆ, ಬೆಂಗಳೂರು

ಮನುಷ್ಯಕೋಟಿಯ ಜೀವನಚಕ್ರದಲ್ಲಿ ಸಹಸ್ರಾರು ದಿನಗಳು ನಿರಂತರವಾಗಿ ಸರಿಯುತ್ತಲೇ ಇರುತ್ತದೆ. ಅವುಗಳಲ್ಲಿ ಕೆಲವೇ ದಿನಗಳು ಘಟಿಸಿದ ಮಹತ್ವದ ಘಟನೆಗಳಿಂದ ಅಜರಾಮರವೆನಿಸುತ್ತವೆ. ಕಳೆದ ಬಹುಧಾನ್ಯ ಸಂವತ್ಸರದ ಮಾರ್ಗಶೀರ್ಷ ಶುದ್ಧ ಸಪ್ತಮಿಯುಕ್ತ ಅಷ್ಟಮೀ ಗುರುವಾರ (ದಿನಾಂಕ 26-11-1998) ಅಂತಹ ಅವಿಸ್ಮರಣೀಯ ಪುಣ್ಯದಿನ. ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠ ಶ್ರೀಮಹಾಸಂಸ್ಥಾನದ ಮೂವತ್ತೈದನೇ ಧರ್ಮಾಚಾರ್ಯರಾದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರು, ಬೆಂಗಳೂರಿನ ಗಿರಿನಗರದ ವಿದ್ಯಾಮಂದಿರದಲ್ಲಿ ಬ್ರಹ್ಮೀಭಾವ ಹೊಂದಿದ ಅವಿಸ್ಮರಣೀಯ ಪವಿತ್ರದಿನವದು.

ಅವಿಚ್ಛಿನ್ನ ಪರಂಪರೆಯ ಪ್ರತಿಬಿಂಬ

ಅವಿಚ್ಛಿನ್ನ ಪರಂಪರೆಯ ಪ್ರತಿಬಿಂಬ

ಶ್ರೀಶಾಂಕರ ಮಠಗಳು ಧಾರ್ಮಿಕ ಕೇಂದ್ರಗಳಾಗಿರುವುದರ ಜೊತೆಗೆ ಶ್ರೀಶಾಂಕರ ತತ್ತ್ವಪ್ರಸಾರಕ ಕೇಂದ್ರಗಳೂ ಆಗಿವೆ. ಶ್ರೀಆದಿಶಂಕರಾಚಾರ್ಯರು ಯೋಜಿಸಿದ ಹಿಂದೂ ಸಮಾಜದ ಪುನರ್ನಿರ್ಮಾಣದಲ್ಲಿ ಸನಾತನ ಧರ್ಮಪ್ರಸಾರ ಕಾರ್ಯದಲ್ಲಿ ಮಠಾಯತನಗಳಿಗೆ ವಿಶಿಷ್ಟ ಸ್ಥಾನವಿದೆ. ಜನರನ್ನು ಸನ್ಮಾರ್ಗಕ್ಕೆ ಹಚ್ಚುವ ಹಾಗೂ ಅವರು ದಾರಿ ತಪ್ಪದಂತೆ ಎಚ್ಚರಿಸುವ ಕೇಂದ್ರಗಳು ಮಠಾಯತನಗಳು. ಒಂದೊಂದು ಪ್ರಾಂತ್ಯದಲ್ಲಿರುವ ಶಿಷ್ಯ ಜನತೆ ಮತ್ತು ಭಕ್ತವೃಂದ ಸೇರಿ ಈ ಮಠಗಳ ರಚನೆಯಾಗುವುದರಿಂದ ಅವು ಘನತೆಯ ಕೇಂದ್ರಗಳು. ಶ್ರೀಮಠದ ನವ್ಯತೆ-ಭವ್ಯತೆಗಳು, ಶಿಷ್ಯ-ಭಕ್ತ ಸಮುದಾಯದ ಕರ್ತವ್ಯಪ್ರಜ್ಞೆಯ, ದೂರದೃಷ್ಟಿಯ, ಸಂಘಟನೆಯ ಹಾಗೂ ಆಢ್ಯತೆಯ ಪ್ರತೀಕಗಳು. ಈ ಎಲ್ಲಾ ಆದರ್ಶಗಳನ್ನೂ, ಕಳೆದ ಶತಮಾನಗಳಿಂದ ಪರಿಪೋಷಿಸಿಕೊಂಡು ಬಂದ ಕೀರ್ತಿ-ಹೆಗ್ಗಳಿಕೆ, ಶ್ರೀಸಂಸ್ಥಾನಗೋಕರ್ಣ- ಶ್ರೀರಾಮಚಂದ್ರಾಪುರಮಠಕ್ಕೆ ಇದೆ. ಆದಿಶಂಕರಾಚಾರ್ಯರು ಸಂಸ್ಥಾಪಿಸಿದ ಆಚಾರ್ಯ ಪೀಠಗಳಲ್ಲಿ ಅನಿತರ ಸಾಧಾರಣವಾದ ಅವಿಚ್ಛಿನ್ನ ಗುರುಪರಂಪರೆಯಿಂದ ಮುಂದುವರೆದು ಬರುತ್ತಿರುವ ಭವ್ಯ ಪರಂಪರೆಯುಳ್ಳ ಶ್ರೀರಾಮಚಂದ್ರಾಪುರಮಠ, ಹವ್ಯಕ ಸಮಾಜದ ಅತ್ಯಂತ ಪ್ರತಿಷ್ಠಿತ ಮಠ. ಭವ್ಯ ಪರಂಪರೆಯುಳ್ಳ ಈ ಆಚಾರ್ಯಪೀಠದ ಮೂವತ್ತನಾಲ್ಕನೇ ಪೀಠಾಧಿಪತಿಗಳು ಬ್ರಹ್ಮೈಕ್ಯ ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳವರು. ಅವರ ದಿವ್ಯಕರಕಮಲಸಂಜಾತರು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ರಾಘವೇಂದ್ರಭಾರತೀ ಮಹಾಸ್ವಾಮಿಗಳವರು. (ಪಾರ್ಥಿವ ಸಂ|ಕ್ರಿ.ಶ. 1945) ಇವರು ಶ್ರೀರಾಮಚಂದ್ರಾಪುರಮಠದ ಅಭಿಷಿಕ್ತ ಧರ್ಮಸಾಮ್ರಾಟರಾಗಿ ಸುಮಾರು ಐದುವರೆ ದಶಕಗಳ ಕಾಲ ಶ್ರೀಸಂಸ್ಥಾನದ ದಿವ್ಯಪರಂಪರೆಯನ್ನು ಭದ್ರವಾಗಿ ನೆಲೆಗೊಳಿಸಿದ ಮಹಾನುಭಾವರು.

ಶ್ರೀಸ್ವಾಮೀಜಿಯವರು ಮಹಾವಿದ್ವಾಂಸರಾಗಿದ್ದರು. ಎಳೇ ವಯಸ್ಸಿನಲ್ಲಿಯೇ ಕಂಠಸ್ಥವಾದ ಪೂರ್ಣ ಕೃಷ್ಣಯಜುರ್ವೇದ ಶಾರದೆ ಅವರ ದೇಹಾಂತ್ಯದವರೆಗೂ ಅವರ ನಾಲಿಗೆಯಲ್ಲಿ ನಲಿದು ನರ್ತಿಸುತ್ತಿದ್ದಳು. ಸಂಸ್ಕೃತ, ಸಾಹಿತ್ಯ, ವ್ಯಾಕರಣ, ನ್ಯಾಯ, ತರ್ಕ, ಮೀಮಾಂಸ, ವೇದಾಂತ ಧರ್ಮಶಾಸ್ತ್ರಾದಿಗಳಲ್ಲಿ ಪ್ರಾವೀಣ್ಯ ಪಡೆದಿದ್ದರು. ಅವರು ಲೌಕಿಕ ವಿಷಯಗಳಾದ ಸಾಹಿತ್ಯ, ಶಿಕ್ಷಣ, ಶಿಲ್ಪ, ಕೃಷಿ, ಅರ್ಥಶಾಸ್ತ್ರ, ಜ್ಯೋತಿಷ್ಯ, ಇತಿಹಾಸ ಕೋವಿದರೂ ಆಗಿದ್ದರು. ಮಾತೃಭಾಷೆ ಕನ್ನಡ, ದೇವಭಾಷೆ ಸಂಸ್ಕೃತ, ರಾಷ್ಟ್ರಭಾಷೆ ಹಿಂದೀ, ಪ್ರಾಂತೀಯ ಭಾಷೆಗಳಾದ ತಮಿಳು, ತೆಲುಗು ಮುಂತಾದ ಬಹುಭಾಷೆಗಳಲ್ಲಿ ಅವರು ಪ್ರಾಜ್ಞರಾಗಿದ್ದರು. ‘ಆತ್ಮವಿದ್ಯಾ ಆಖ್ಯಾಯಿಕಾ’, ‘ಸ್ತುತಿಮಂಜರೀ’ ಎಂಬ ಕೃತಿಗಳನ್ನು ಸಂಸ್ಕೃತದಲ್ಲಿ ವಿರಚಿಸಿದ – ಪೀಠಾಧಿಪತಿಗಳಾಗಿದ್ದರು.

ಶ್ರೀಸಂಸ್ಥಾನದ ಮೂಲಮಠ ಶ್ರೀರಘೂತ್ತಮ ಮಠ ಗೋಕರ್ಣ, ಪ್ರಧಾನಮಠ ಶ್ರೀರಾಮಚಂದ್ರಾಪುರ ಮಠ, ಹೊಸನಗರ, ಶಾಖಾಮಠಗಳಾದ – ಶ್ರೀರಘೂತ್ತಮ ಮಠ ಕೆಕ್ಕಾರು ಹೊನ್ನಾವರ ತಾ|, ಶ್ರೀಭಾನ್ಕುಳೀ ಮಠ ಸಿದ್ಧಾಪುರ ತಾ|, ಶ್ರೀರಾಮಚಂದ್ರಾಪುರಮಠ ತೀರ್ಥಹಳ್ಳಿ ಇತ್ಯಾದಿ ಮಠಗಳ ಕಟ್ಟಡ ನಿರ್ವಹಣಾದಿಗಳಿಂದ ಪುನರುಜ್ಜೀವನಗೊಳಿಸಿದರು. ಮಂಗಳೂರು ಹೋಬಳಿಯ ಶಿಷ್ಯಜನರೊಂದಿಗೆ ಸಂಪರ್ಕ ಸಂವರ್ಧನೆಗಾಗಿ ಪೆರಾಜೆ-ಮಾಣಿಯಲ್ಲಿ ಶ್ರೀಸಂಸ್ಥಾನದ ಶಾಖಾಮಠವನ್ನು ಸ್ಥಾಪಿಸಿ (1973), ಅಲ್ಲಿ ಗುರುಕುಲಪದ್ಧತಿಯ ವೇದ ಸಂಸ್ಕೃತ ಪಾಠಶಾಲೆಯನ್ನು ಪ್ರಾರಂಭಿಸಿದರು. ಶ್ರೀಸಂಸ್ಥಾನಕ್ಕೆ ಸೇರಿದ ಎಲ್ಲ ಮಠಾಯತನಗಳಲ್ಲಿ ನಿತ್ಯನೈಮಿತ್ತಿಕ ಪೂಜೆ, ನಂದಾದೀಪ, ನೈವೇದ್ಯ ಇತ್ಯಾದಿಗಳು ನಿರಂತರವಾಗಿ ನೆರವೇರುವಂತೆ ವ್ಯವಸ್ಥೆಯನ್ನು ಕಲ್ಪಿಸಿದವರು ಅವರು.

ಕ್ರಿ.ಸ್ಜ. 1955 ರಲ್ಲಿಯೇ ಪ್ರಥಮಬಾರಿಗೆ ತೀರ್ಥಹಳ್ಳಿಯಲ್ಲಿ ಅಖಿಲ ಹವ್ಯಕ ಮಹಾಧಿವೇಶನ, ಸಂಘಟನೆ, ಧಾರ್ಮಿಕಪಂಚಾಂಗದ ಪ್ರಕಾಶನ, ವೇದ, ಸಂಸ್ಕೃತ ಪಾಠಶಾಲೆಗಳ ಸ್ಥಾಪನೆ. ವಿವಿಧ ಧಾರ್ಮಿಕ ವಿನಿಯೋಗಗಳ ಪ್ರವರ್ತನ. ಶ್ರೀಕಂಚಿ ಕಾಮಕೋಟಿ ಪೀಠಾಧಿಪತಿಗಳು, ಶ್ರೀಶೃಂಗೇರಿ ಪೀಠಾಧಿಪತಿಗಳು, ಉಡುಪಿಯ ಶ್ರೀಪೇಜಾವರ ಮಠಾಧೀಶರು, ಕಾಸರಗೋಡಿನ ಎಡನೀರು ಮಠಾಧಿಪತಿಗಳು ಮೊದಲಾದವರೊಂದಿಗೆ ಸೌಹಾರ್ದಭಾವ ಸಂವರ್ಧನೆ ಇತ್ಯಾದಿಗಳು – ಶ್ರೀಸ್ವಾಮೀಜಿಯವರ ಸಾಧನೆಯ ಕೆಲವು ಅಂಶಗಳು.

ಪ್ರಭು “ಶ್ರೀರಾಮಚಂದ್ರನ ಚರಮೂರ್ತಿ” “ಶ್ರೀಗುರುಭಗವತ್ಪಾದರು” ಎಂದೇ ಶಿಷ್ಯಸಮುದಾಯದ ಹಾಗೂ ಅಪಾರ ಭಕ್ತವೃಂದದ ವಿಶ್ವಾಸಕ್ಕೆ ಗೌರವಗಳಿಗೆ ಪಾತ್ರರಾಗಿದ್ದ ಶ್ರೀಸ್ವಾಮೀಜಿಯವರ ಲೌಕಿಕಜೀವನ ಅನುಪಮವಾದುದು. ಶಿಷ್ಯಕೋಟಿಯ ಹೃದಯಸಿಂಹಾಸನವನ್ನು ಅಲಂಕರಿಸಿದ್ದ ಅವರ ಜ್ಞಾನ, ಮೇಧಾ, ಅಧ್ಯಾತ್ಮಿಕಶಕ್ತಿ, ಪ್ರೌಢಿಮೆಗಳು, ಆದರ್ಶಪ್ರಾಯ. ರಾಜಕೀಯ ಮುತ್ಸದ್ದಿತನದೊಂದಿಗಿದ್ದ ಅವರ ವ್ಯವಹಾರ ಚತುರತೆ “ರಾಜಗುರು” ಗಳಾಗಿದ್ದ ಅವರ ಸ್ಥಾನಮಾನಗಳನ್ನು ಅತ್ಯುನ್ನತ ಶಿಖರಕ್ಕೇರಿಸಿದ್ದಿತು. ಚಂಡಕಿರಣ ಭಾಸ್ಕರನಂತೆ ತೇಜಃಪುಂಜವಾಗಿದ್ದ ಅವರ ಮುಖಕಮಲದಲ್ಲಿ ಅಪರೂಪಕ್ಕೆ ಮಿನುಗುವ ಮುಗ್ಧಮಗುವಿನ ಮಂದಸ್ಮಿತವನ್ನು ಸವಿದು ಅನುಭವಿಸಿದವರೇ ಭಾಗ್ಯವಂತರು. ಶ್ರೀಗಳವರ ವಾಕ್ಪಟುತ್ವದ ಒರೆಗಲ್ಲಿನಿಂದ ತಮ್ಮ ನಿಶಿತಮತಿತ್ವದ ಪರೀಕ್ಷೆಗೊಳಗಾಗದಿದ್ದವರು ಅತಿವಿರಳ. ಕ್ರಮಿಸಿದ ದಿಕ್ಕನ್ನೇ, ಹೆದ್ದಾರಿಯನ್ನಾಗಿಸಿದ ಅವರು ಮಹಾಧೀರ ದಿಗ್ಗಜ.

ತಮ್ಮ ನಿತ್ಯಾನುಷ್ಠಾನ:

ಬ್ರಹ್ಮೈಕ್ಯ ಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು

ಬ್ರಹ್ಮೈಕ್ಯ ಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು

ಶ್ರೀಸಂಸ್ಥಾನದ ಶ್ರೀಸೀತಾರಾಮಚಂದ್ರ, ಚಂದ್ರಮೌಳೀಶ್ವರ ಹಾಗೂ ಶ್ರೀರಾಜರಾಜೇಶ್ವರೀ ಪೂಜೆ, ತಮ್ಮ ಗುರುಗಳೂ ಹಾಗೂ ಪರಮಗುರುಗಳ ಆರಾಧನಾ ಕಾರ್ಯಗಳನ್ನು ತಾವು ನಿಷ್ಠೆಯಿಂದ ನೆರವೇರಿಸಿದ್ದಲ್ಲದೆ ಇತರ ಧಾರ್ಮಿಕಾನುಷ್ಠಾನಗಳನ್ನೂ ವಿಧಿಬದ್ಧವಾಗಿ ಆಚರಿಸಿ, ಶಿಷ್ಯಜನತೆಯೂ ಈ ಪವಿತ್ರಕಾರ್ಯದಲ್ಲಿ ಭಾಗಿಗಳಾಗುವಂತೆ ಮಾಡಿ ಅವರೆಲ್ಲರನ್ನೂ ಪುನೀತರನ್ನಾಗಿಸುತ್ತಿದ್ದ ಶ್ರೀಶ್ರೀಗಳವರು, ತಮ್ಮ ಪರಮಗುರುಗಳನ್ನು ಆರಾಧಿಸಿ, ಪ್ರಸಾದಭಾಗಿಗಳಾದ ಎರಡೇ ದಿನಗಳಿಗೆ ಬ್ರಹ್ಮೀಭಾವ ಹೊಂದಿದರೆಂಬುದು ಇಲ್ಲಿ ಸ್ಮರಣೀಯ.
ವಿಧಿನಿಯಮಕ್ಕೆ ವಿಧಾತನೂ ಹೊರತಲ್ಲವಷ್ಟೆ!

ಅಸ್ವಸ್ಥತೆಯ ನಿಮಿತ್ತದಿಂದಾಗಿ ಬೆಂಗಳೂರಿನ ಗಿರಿನಗರ ವಿದ್ಯಾಮಂದಿರದಲ್ಲಿ ವಾಸ್ತವ್ಯ ಮಾಡಿ, ಪರಿಣತ ವೈದ್ಯರಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದ ಶ್ರೀಶ್ರೀಗಳವರು, ತಮ್ಮ ಉತ್ತರಾಧಿಕಾರಿಗಳೂ, ಮೈಸೂರಿನಲ್ಲಿ ಉನ್ನತ ಶಾಸ್ತ್ರವ್ಯಾಸಂಗಾಸಕ್ತರೂ ಆಗಿದ್ದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರನ್ನು ತಮ್ಮಲ್ಲಿಗೆ ಕರೆಯಿಸಿಕೊಂಡು, ಶ್ರೀಸಂಸ್ಥಾನದ ಆರಾಧ್ಯ ಶ್ರೀಸೀತಾರಾಮಚಂದ್ರಾದಿ ದೇವತಾ ಪೂಜಾಧಿಕಾರವನ್ನು ಅವರಿಗೆ ಸಮಸ್ತ ಪೂಜಾಸಾಧನ ಸಲಕರಣೆಗಳೊಂದಿಗೆ ನೀಡಿ, ಜುಲೈ 1997 ರಲ್ಲಿಯೇ ಜವಾಬ್ದಾರಿಯುಳ್ಳ ವ್ಯಕ್ತಿಗಳೊಂದಿಗೆ ಶ್ರೀಸಂಸ್ಥಾನದ ಪ್ರಧಾನ ಮಠ- ಶ್ರೀರಾಮಚಂದ್ರಾಪುರ ಮಠಕ್ಕೆ ಕಳುಹಿಸಿಕೊಟ್ಟರೆಂಬುದು ಇಲ್ಲಿ ಉಲ್ಲೇಖನೀಯ.

ಶಿಷ್ಯಾನುಗ್ರಹನಿಮಿತ್ತ ಸಂಚಾರ ಕೈಗೊಂಡು ಕಡಲತಡಿಯ ಅಪ್ಸರಕೊಂಡ ಶ್ರೀಮಠದಲ್ಲಿ ಧಾರ್ಮಿಕಕಾರ್ಯ ನಿರತರಾಗಿದ್ದ ಪೂಜ್ಯಶ್ರೀ ರಾಘವೇಶ್ವರಭಾರತೀ ಸ್ವಾಮಿಗಳವರು, ತಮ್ಮ ಗುರುವರ್ಯರ ಆರೋಗ್ಯ ವಿಷಮಿಸುತ್ತಿದ್ದ ವಾರ್ತೆ ತಿಳಿದ ತಕ್ಷಣ ತಮ್ಮ ಕಾರ್ಯಕ್ರಮ ಮೊಟಕುಗೊಳಿಸಿ, ಬೆಂಗಳೂರಿನ ಗಿರಿನಗರ ವಿದ್ಯಾಮಂದಿರಕ್ಕೆ ಧಾವಿಸಿದರು. ಶ್ರೀಶ್ರೀರಾಘವೇಶ್ವರಭಾರತಿಗಳು ತಮ್ಮ ಗುರುವರೇಣ್ಯರ ಅಂತಿಮದರ್ಶನ ಲಾಭ ಪಡೆದರು. ಸೇರಿದ ಸಮಾಜದ ಹಿರಿಯರೊಂದಿಗೆ ಸಮಾಲೋಚಿಸಿ ಶ್ರೀಶ್ರೀಗಳ ಅಂತಿಮದಿನಗಳಲ್ಲಿ ಶ್ರೀಮಠದ ನಿರ್ವಹಣಾ ಜವಾಬ್ದಾರಿಯನ್ನು ಹೊತ್ತಿದ್ದ ಶ್ರೀ ಟಿ.ಜಿ ರಾಯರಲ್ಲಿ ಬ್ರಹ್ಮೈಕ್ಯ ಶ್ರೀಗಳವರು ವ್ಯಕ್ತಪಡಿಸಿದ್ದ ಅಭಿಪ್ರಾಯ ತಿಳಿದು, ವಿದ್ಯಾಮಂದಿರದ ಆವರಣದಲ್ಲಿಯೇ ಮುಂದಿನ ಕಾರ್ಯವನ್ನು ನೆರವೇರಿಸಲು ಅಪ್ಪಣೆ ಕೊಡಿಸಿದರು.

ಮರುದಿನ 27-11-1999 ರಂದು ಬ್ರಹ್ಮೈಕ್ಯ ಶ್ರೀಗಳವರ ಪಾರ್ಥಿವ ದೇಹದ ಸಮಾಧಿ ಮಾಡಿ, ಶ್ರೀಮಠೀಯ ಪರಂಪರಾ ಸಂಪ್ರದಾಯಾನುಗುಣವಾಗಿ ಪೂಜಾ, ಆರಾಧನಾದಿ ಕಾರ್ಯಗಳು ಕ್ರಮಬದ್ಧವಾಗಿ ನೆರವೇರಿದವು. ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳವರಿಂದ ಆರಾಧನಾ ತೀರ್ಥ-ಪ್ರಸಾದ ಮಂತ್ರಾಕ್ಷತೆಗನ್ನು ಸ್ವೀಕರಿಸಿ, ಸುದೂರದಿಂದ ಈ ಕಾರ್ಯಕ್ಕಾಗಿಯೇ ಆಗಮಿಸಿದ ಶಿಷ್ಯಜನತೆ, ಭಕ್ತವೃಂದ ಧನ್ಯತಾಭಾವ ವ್ಯಕ್ತಪಡಿಸಿತು.

ಬ್ರಹ್ಮೈಕ್ಯ ಪರಮಪೂಜ್ಯ ಗುರುವರ್ಯರ ಪ್ರಥಮ ಆರಾಧನಾ ಸಂದರ್ಭದಲ್ಲಿ ನೆರವೇರಿದ ವಿಧಿ-ವಿಧಾನಗಳು:

1. 26.11.1999 ಗುರುವಾರ ಸಂಜೆ 7.35ಕ್ಕೆ ಬ್ರಹ್ಮೀಭಾವ ಹೊಂದಿದ ಶ್ರೀಗುರುವರ್ಯರ ಪಾರ್ಥಿವ ದೇಹಕ್ಕೆ ಪುರುಷಸೂಕ್ತ ಪಾರಾಯಣಪೂರ್ವಕ ಗಂಗಾಭಿಷೇಕ ಮಾಡಿಸಿ, ಸಾಂಪ್ರದಾಯಿಕ ಉಡುಪು ತೊಡಿಸಿ, ಅಲಂಕರಿಸಿ, ಪೀಠದಲ್ಲಿ ಆಸೀನರನ್ನಾಗಿ ಮಾಡಿಸಲಾಯಿತು.

2. ‘ಓಂ ನಮೋ ಭಗವತೇ ವಾಸುದೇವಾಯ’ ಮಂತ್ರದ ಸಾಮೂಹಿಕ ಪಠನ, ಭಜನೆಗಳು ಅಖಂಡವಾಗಿ ನೆರವೇರಿದವು.

3. ಮರುದಿನ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಮದ್ರಾಘವೇಶ್ವರ ಭಾರತೀ ಸ್ವಾಮಿಗಳವರ ಮಾರ್ಗದರ್ಶನದಲ್ಲಿ, ಮಹಾಸಂಕಲ್ಪ ನೆರವೇರಿ, ಪಾರ್ಥಿವದೇಹದ ಸಮಾಧಿಕಾರ್ಯದ ತಯಾರಿ ನಡೆಯಿತು.

4. ಸಿಂಗರಿಸಿದ ವಾಹನದಲ್ಲಿ ಶ್ರೀಶ್ರೀಗಳವರ ಅಲಂಕೃತ ಪಾರ್ಥಿವ ದೇಹದ ರಾಜಬೀದಿ ಮೆರವಣಿಗೆ, ವೇದಘೋಷ, ವಾದ್ಯ ಘೋಷಗಳೊಡನೆ ಸಕಲ ರಾಜಗುರು ಮರ್ಯಾದೆಯಿಂದ ನೆರವೇರಿತು.

5. ಸಮಾಧಿಸ್ಥಳದ ಸಮೀಕರಣ ಶುದ್ಧೀಕರಣ, ಶ್ರೀಶ್ರೀಗಳವರ ಪಾರ್ಥಿವ ಶರೀರಕ್ಕೆ ಪಂಚಾಮೃತಾಭಿಷೇಕಪೂರ್ವಕ ಕಲ್ಪೋಕ್ತಪೂಜೆಯನ್ನು ವಿಧಿವತ್ತಾಗಿ ನೆರವೇರಿಸಿ, ದಿವ್ಯದೇಹವನ್ನು ಸಮಾಧಿಯೊಳಗೆ ಇಳಿಸಿ ಆಚ್ಛಾದಿಸಿದಾಗ ಶ್ರೀಶ್ರೀಗಳವರ ಜಯಕಾರದೊಂದಿಗೆ ಜನಸಮುದಾಯದ ರೋದನ ಧ್ವನಿಯೂ ಮುಗಿಲುಮುಟ್ಟಿತ್ತು.

6. ಸಮಾಧಿಸ್ಥಳದಲ್ಲಿ ಮೃಣ್ಮಯ ಲಿಂಗಪತಿಷ್ಠಾಪನೆ, ನಿತ್ಯಪುರುಷಸೂಕ್ತದಿಂದ ಕ್ಷೀರಾಭಿಷೇಕ ಸಹಿತಪೂಜೆ, ಪಾಯಸ ನೈವೇದ್ಯ ಇವೆಲ್ಲ ಹತ್ತು ದಿನಗಳವರೆಗೆ ವಿಧಿಪೂರ್ವಕವಾಗಿ ನೆರವೇರಿದವು.

7. ಮುಂದಿನ ಹನ್ನೊಂದು, ಹನ್ನೆರಡು, ಹದಿಮೂರನೇ ದಿನಗಳಲ್ಲಿ ಬ್ರಾಹ್ಮಣಾರ್ಚನೆ, ಯತಿನಾರಾಯಣ ಬಲಿ, ಆರಾಧನಾ ಕಾರ್ಯಗಳು ಸಾಂಗವಾಗಿ ನೆರವೇರಿದವು.

8. ಯಾಜಮಾನ್ಯ ವಹಿಸಿದ ವೇ|ಬ್ರ| ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿಗಳು, ಅಧ್ವರ್ಯುಗಳಾದ ವೇ|ಬ್ರ| ಶ್ರೀ ಶಿವರಾಮ ಭಟ್ಟರು ಹಿರೇ– ಗೋಕರ್ಣ ಇವರ ಮಾರ್ಗದರ್ಶನದಲ್ಲಿ ವೇ|ಬ್ರ| ಶ್ರೀ ಮಂಜುನಾಥ ಭಟ್ಟರ(ಹುಲೀಮನೆ) ಸಹಾಯ-ಸಹಕಾರಗಳಿಂದ ಎಲ್ಲ ಧಾರ್ಮಿಕ ವಿಧಾನಗಳನ್ನು ಕ್ರಮಭದ್ಧವಾಗಿ ನೆರವೇರಿಸಿದರು.

9. ದಿನಾಲೂ ಬೆಳಿಗ್ಗೆ ವಿದ್ಯಾಮಂದಿರದಲ್ಲಿ ವಿದ್ವಾಂಸರಿಂದ- ವೇದಗಳು, ಪ್ರಸ್ಥಾನತ್ರಯ ಭಾಷ್ಯ, ಶ್ರೀಮದ್ಭಾಗವತ ಗ್ರಂಥಗಳ ಪಾರಾಯಣ ಪೂಜೆ, ಧರ್ಮಸಭಾ ವೇದಿಕೆಯಲ್ಲಿ ಆಧ್ಯಾತ್ಮಿಕ ವಿಷಯಕ ಉಪನ್ಯಾಸ ಕಾರ್ಯಕ್ರಮಗಳು ಕ್ರಮಬದ್ಧವಾಗಿ ನಡೆದವು.

10. ಆರಾಧನಾ ದಿವಸ ಸಂಜೆ-ನಡೆದ ಸಭಾಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠಾಧೀಶರಾದ ಶ್ರೀಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ದಿವ್ಯಸಾನ್ನಿಧ್ಯ ಪರಿಸರವನ್ನು ಪಾವನಗೊಳಿಸಿತ್ತು.

11. ಮಾನ್ಯ ಶ್ರೀ ಬಿ. ಕೃಷ್ಣ ಭಟ್ಟರು ಹಾಗೂ ಅವರ ಕುಟುಂಬದವರು ಗಿರಿನಗರದಲ್ಲಿ ‘ವಿದ್ಯಾಮಂದಿರ’ವನ್ನು ನಿರ್ಮಿಸಿ, ಬ್ರಹ್ಮೈಕ ಪರಮಪೂಜ್ಯ ಗುರುವರ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರಿಗೆ ಶ್ರೀಗುರುಸೇವಾರೂಪದಲ್ಲಿ ಸಮರ್ಪಿಸಿದವರು (ದಿನಾಂಕ 12-12-1984)ಅಲ್ಲದೇ ಬ್ರಹ್ಮೈಕ್ಯ ಶ್ರೀಶ್ರೀಗಳವರಿಗೆ ಅನನ್ಯ ರೀತಿಯಿಂದ ಸೇವೆಯನ್ನು ಸಲ್ಲಿಸಿದವರು. ಅಂತಹ ಮಾನ್ಯ ಶ್ರೀ ಬಿ, ಕೃಷ್ಣ ಭಟ್ಟರಿಗೆ ಶ್ರೀಶ್ರೀರಾಘವೇಶ್ವರ ಭಾರತೀ ಸ್ವಾಮಿಗಳವರು, ರಜತದೀಪಸ್ಥಂಭಗಳನ್ನು ಇತ್ತು ಶಾಲು ಹೊದೆಸಿ, ಅನುಗ್ರಹಿಸಿದ ಕ್ಷಣ ಸಂಸ್ಮರಣೀಯವಾಗಿತ್ತು.

12. ಆರಾಧನಾ ಕಾರ್ಯದ ಯಾಜಮಾನ್ಯವನ್ನು ವಹಿಸಿ, ಶ್ರೀಗುರುಸೇವಾ ಕೈಂಕರ್ಯವನ್ನು ಭಕ್ತಿ-ಶ್ರದ್ಧೆಗಳಿಂದ ನಿರ್ವಹಿಸಿದ ವೇ|ಬ್ರ| ಶ್ರೀ ಉಂಚಗೇರಿ ಸುಬ್ರಹ್ಮಣ್ಯ ಶಾಸ್ತ್ರಿಗಳಿಗೆ, ಶ್ರೀಶ್ರೀಗಳವರು ಶ್ರೀಗುರು ಪ್ರಸಾದ ರೂಪೀ ಪಂಡಿತ ಶಾಲು ಹೊದೆಯಿಸಿ, ರಜತ ಆಂಜನೇಯ ವಿಗ್ರಹವನ್ನು ಇತ್ತು ಸನ್ಮಾನಿಸಿದುದು ಮತ್ತು ಅಂದಿನವರೆಗೆ ಬ್ರಹ್ಮೈಕ್ಯ ಶ್ರೀಶ್ರೀಗಳವರ ಸಮಗ್ರ ಆರಾಧನಾ ಕಾರ್ಯವನ್ನು ಸಮರ್ಥವಾಗಿ ಸಂಘಟಿಸಿದ ವೇ|ಬ್ರ| ಶ್ರೀ ಮಂಜುನಾಥ ಭಟ್ಟ(ಹುಲಿಮನೆ) ಅವರಿಗೆ ಶಾಲುಹೊದೆಸಿ, ರಜತಪೂಜಾ ಪರಿಕರಗಳನ್ನು ಇತ್ತು ಗೌರವಿಸಿದುದು ಸಮಯೋಚಿತ ಕಾರ್ಯಗಳಾಗಿದ್ದವು.

13. ಬ್ರಹ್ಮೈಕ್ಯ ಶ್ರೀಗುರುವರ್ಯರ ಸಾನ್ನಿಧ್ಯದಲ್ಲಿದ್ದು ಬಹುಕಾಲದಿಂದ ಅವರನ್ನು ಎಲ್ಲಾ ಸಂದರ್ಭಗಳಲ್ಲಿ ಸೇವಿಸಿದ ಪರಿವಾರದವರನ್ನು ಶ್ರೀಶ್ರೀಗಳವರು ಗೌರವಪೂರ್ವಕ ಆಶೀರ್ವದಿಸಿದ್ದು ಕಾಲೋಚಿತ ಕಾರ್ಯವಾಗಿತ್ತು.

14. ಕಳೆದ ಅನೇಕ ಸಂವತ್ಸರಗಳಿಂದ ಬ್ರಹ್ಮೈಕ್ಯ ಪರಮಪೂಜ್ಯ ಗುರುವರ್ಯರ ಸೇವಾಶುಶ್ರೂಷೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಗಿರಿನಗರ ನಿರ್ಮಾಪಕ ಮಾನ್ಯ ಶ್ರೀ ಕೃಷ್ಣ ಭಟ್ಟರ ಕುಟುಂಬದ ಸದಸ್ಯರು ಹಾಗೂ ಅವರ ಸಮೀಪವರ್ತಿ ಸಹಕಾರಿಗಳೂ, ಶ್ರದ್ಧೆಯಿಂದ ಸೇವೆ ಸಲ್ಲಿಸಿ ಶ್ರೀಗುರುಪ್ರಸಾದದಲ್ಲಿ ಭಾಗಿಗಳಾದರು – ಎಂಬುದು ಸಂತಸಜನಕ ಸಂಗತಿ.

15. ಬ್ರಹ್ಮೈಕ್ಯ ಪರಮಪೂಜ್ಯ ಗುರುವರ್ಯರ ಪ್ರಥಮ ಆರಾಧನಾ ಪವಿತ್ರಕಾರ್ಯಕ್ಕೆ ಸುದೂರದಿಂದ ಬಂದ ಎಲ್ಲ ಶಿಷ್ಯ, ಭಕ್ತ ಸಮುದಾಯಕ್ಕೆ ಶ್ರೀಮಜ್ಜಗದ್ಗುರು-ಶಂಕರಾಚಾರ್ಯ ಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಪ್ರಸಾದ ಮಂತ್ರಾಕ್ಷತೆಗಳನ್ನಿತ್ತು ಆಶೀರ್ವದಿಸಿದರು.

ಸ್ವಾರಸ್ಯಕರ ಸಂಗತಿಗಳು:

1. ಮಾರ್ಗಶೀರ್ಷ ಶುದ್ಧ ಸಪ್ತಮೀ(ದಿನಾಂಕ 26.11.1998) ಗುರುವಾರ ಬೆಳಿಗ್ಗೆ ಪೂಜ್ಯಗುರುವರ್ಯರು ತಮ್ಮ ಎರಡೂ ಕರಗಳನ್ನು ಪ್ರಯಾಸದಿಂದ ಜೋಡಿಸಿ ತಮ್ಮೆದುರಿಗಿದ್ದ ಶ್ರೀರಾಮ, ಶ್ರೀಕೃಷ್ಣ, ಶ್ರೀಶಂಕರಭಗವತ್ಪಾದರು ಹಾಗೂ ತಮ್ಮ ಗುರುಗಳು, ಪರಮಗುರುಗಳು ಇವರ ಭಾವಚಿತ್ರಗಳಿಗೆ ಭಕ್ತಿಭಾವದಿಂದ ಪ್ರಣಾಮಗಳನ್ನು ಸಮರ್ಪಿಸಿ, ಬ್ರಹ್ಮೀಭಾವ ಹೊಂದಲು ಅನುಮತಿಯನ್ನು ಕೋರಿದ್ದರು.

2. ತದನಂತರ ತಮ್ಮ ದಂಡ, ಕಮಂಡಲು, ಕಾಷಾಯವಸನಗಳನ್ನು ತಮ್ಮ ಸನಿಹದಲ್ಲಿ ಇರಿಸಿಕೊಂಡು ಮಹಾಪ್ರಸ್ಥಾನ ಕಾಲವನ್ನು ನಿರೀಕ್ಷಿಸುತ್ತಿದ್ದರು.

3. ಅಂತಿಮವಾಗಿ ದರ್ಶನಕ್ಕೆ ಬಂದವರಿಗೆ ಕೃಪಾಪೂರ್ಣ ದೃಷ್ಟಿ ಬೀರಿ ಆಶೀರ್ವದಿಸುತ್ತಿದ್ದರು.

4. ದೂರದೃಷ್ಟಿಯುಳ್ಳ ಶ್ರೀಶ್ರೀಗಳವರು ತಮ್ಮ ಬ್ರಹ್ಮೀಭಾವದ ನಂತರ ನೆರವೇರಿಸಬೇಕಾದ ಪಾರ್ಥಿವ ದೇಹದ ಸಮಾಧಿ, ಆರಾಧನಾ ವಿಧಿವಿಧಾನಗಳನ್ನು, ಯಾರಿಂದ, ಹೇಗೆ, ನೆರವೇರಿಸಬೇಕು ಎನ್ನುವ ಬಗ್ಗೆ ವೇ. ಮೂ. ಮಂಜುನಾಥ ಭಟ್ಟರು ಹುಲಿಮನೆ (ಶ್ರೀಮಠದ ಪುರೋಹಿತರು) ಇವರಿಗೆ ಮೊದಲೇ ನಿರ್ದೇಶಿಸಿದ್ದರು.

5. ತಾವು ವಸತಿ ಮಾಡಿದ ವಿದ್ಯಾಮಂದಿರದ ಆವರಣದಲ್ಲಿ ತಮ್ಮ ಸಮಾಧಿ ಸ್ಥಾನವನ್ನು ಗುರುತಿಸಿ, ಅಲ್ಲಿ ನಿರ್ಮಿಸಬೇಕಾದ ಸಮಾಧಿ ಕಟ್ಟಡದ ನೀಲಿನಕ್ಷೆಯನ್ನೂ ಸಹ ಪೂಜ್ಯಗುರುವರ್ಯರು ಸಿದ್ಧಮಾಡಿಸಿದ್ದರು.

6. ಬ್ರಹ್ಮೈಕ್ಯ ಗುರುವರ್ಯರು ಅಪೇಕ್ಷೆಪಟ್ಟಂತೆ – ಶ್ರೀಕ್ಷೇತ್ರ ಗೋಕರ್ಣದ ವೇ. ಬ್ರ. ಶ್ರೀ ಶಿವರಾಮ ಭಟ್ಟರು ಹಿರೇ ಇವರು ಸಕಾಲಕ್ಕೆ ಆಗಮಿಸಿ, ಅಧ್ವರ್ಯುಗಳಾಗಿ ಸಕಲ ಧಾರ್ಮಿಕ ಕಾರ್ಯಕಲಾಪಗಳನ್ನು ನೆರವೇರಿಸಿಕೊಟ್ಟರು.

7. 45 ವರ್ಷಗಳಷ್ಟು ಸುದೀರ್ಘ ಶ್ರೀಗುರುಚರಣಾಶ್ರಿತರಾಗಿ ಸೇವೆಯನ್ನು ಸಲ್ಲಿಸಿದವರೂ, ವಯೋವೃದ್ಧರೂ ಆದ ವೇ. ಬ್ರ. ಶ್ರೀ ಉಂಚಗೇರಿ ಸುಬ್ರಹ್ಮಣ್ಯ ಶಾಸ್ತ್ರಿಗಳವರು ಆರಾಧನಾ ಧಾರ್ಮಿಕ ಕಾರ್ಯಗಳ ಯಾಜಮಾನ್ಯವನ್ನು ವಹಿಸಿಕೊಂಡು ಶ್ರದ್ಧಾಭಕ್ತಿಗಳಿಂದ ಸೇವಾಕೈಂಕರಗಳನ್ನು ನಿರ್ವಹಿಸಿ ತಮ್ಮ ‘ಶ್ರೀಗುರುಸೇವಾಧುರಂಧರತ್ವ‘ವನ್ನು ಸಾಬೀತುಪಡಿಸಿದರು.

8. “ಐವತ್ನಾಲ್ಕು ಚಾತುರ್ಮಾಸ್ಯ ವ್ರತಗಳನ್ನು ಪೂರೈಸಿ ಮಹಾತ್ಮರಾದ ಬ್ರಹ್ಮೈಕ್ಯ ಶ್ರೀಗುರುವರ್ಯರ ಪ್ರಥಮ ಆರಾಧನಾ ಸಂದರ್ಭದಲ್ಲಿ ಐವತ್ನಾಲ್ಕು ಸುವರ್ಣನಾಣ್ಯಗಳನ್ನು ದಾನ ಮಾಡಬೇಕು” ಎಂಬುದು ಆರಾಧನಾ ಕಾರ್ಯದ ಯಾಜಮಾನ್ಯವನ್ನು ವಹಿಸಿಕೊಂಡ ವೇ. ಬ್ರ. ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿಯವರ ಅಪೇಕ್ಷೆ. ತತ್ಕಾಲದಲ್ಲಿ ಪೂರ್ಣ ಆರ್ಥಿಕ ನೆರವು ನೀಡಿ ಅವರ ಅಪೇಕ್ಷೆಯನ್ನು ಈಡೇರಿಸಿದವರು ಈಗ ಅಮೆರಿಕಾ ನಿವಾಸಿಗಳಾದ ವಿದ್ವಾನ್ ಗಜಾನನ ಜೋಶೀ, ಗೋಕರ್ಣ, ಎಂಬುದು ಈಗಲೂ ಬಹುಜನರಿಗೆ ವಿದಿತವಾಗದ, ತಿಳಿಸಬೇಕಾದ ವಿಷಯ.

9. “ಶ್ರೀಗುರವೇನಮಃ” – ಎಂದರೆ ‘ಶ್ರೀಸಹಿತನಾದ ಗುರುವಿಗೆ ನಮಸ್ಕಾರ’ ಎಂದು ಅರ್ಥ. ಲೌಕಿಕ ದೃಷ್ಟಿಯಲ್ಲಿ ಶ್ರೀಃ ಎಂದರೆ -ಧನ-ಕನಕ, ನಗ-ನಾಣ್ಯ, ವಸ್ತುವೈಢೂರ್ಯಾದಿಗಳು ಇಂತಹ ಶ್ರೀಯಿಂದ ಪರಮಹಂಸ ಪರಿವ್ರಾಜಕರಾದ ಗುರುಗಳಿಗೆ ಆಗಬೇಕಾದುದು ಏನೂ ಇಲ್ಲ. ಅಲ್ಲದೇ ಇಂತಹ ಶ್ರೀಯುತರು ಎಷ್ಟೊಂದು ಜನರಿಲ್ಲ? ಅಂತಹವರೆಲ್ಲ ಶ್ರೀಗುರುವು ಆಗಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ.

“ಋಚಃ ಸಾಮಾನಿ ಯಜೂಗೂಂಷಿ | ಸಾಹಿಶ್ರೀರಮೃತಾ ಸತಾಂ|” ಎಂದು ಘೋಷಿಸಿದೆ – ವೇದಮಾತೆ. ಋಗ್ವೇದ, ಯಜುರ್ವೇದ, ಸಾಮವೇದ- ಈ ವೇದತ್ರಯಗಳೇ – ಸಾಧುಸತ್ಪುರುಷರ, ಪರಮಹಂಸ ಪರಿವ್ರಾಜಕರ ನೈಜವೂ, ಅಕ್ಷಯ್ಯವೂ ಆದ ಸಂಪತ್ತು. ಇಂತಹ ಎಂದೆಂದಿಗೂ ಕರಗದ ಶ್ರೀಯಿಂದ ಯುತವಾದ ಗುರು-ಶ್ರೀಗುರು. ಶ್ರೀಗುರವೇ ನಮಃ ಅಂದರೆ “ಅಮೃತಜ್ಞಾನನಿಧಿ ಸಂಯುತನಾದ ಗುರುವಿಗೆ ನಮಸ್ಕಾರ” ಎಂದು ಅರ್ಥ. “ಬ್ರಹ್ಮೀಭಾವ ಹೊಂದಿದ ನಮ್ಮ ಗುರುವರ್ಯರು ಇಂತಹ ಶ್ರೀಗುರುಗಳಲ್ಲಿ ಪ್ರಪ್ರಥಮರಾಗಿದ್ದರು ಎಂಬುದು ನಮಗೆಲ್ಲರಿಗೆ ಹೆಮ್ಮೆಯ ವಿಷಯ” ಎಂಬ ವಿದ್ವಾನ್ ರಂಗನಾಥ ಶರ್ಮರ ಅಭಿವಂದನಾ ಭಾಷಣದ ಮುತ್ತಿನಂತಹ ಮಾತು ವಿದ್ವಾಂಸರೂ ತಲೆತೂಗುವಂತೆ ಮಾಡಿತು.

10. “ಬ್ರಹ್ಮೈಕ್ಯರಾದ ನಮ್ಮ ಗುರುವರೇಣ್ಯರ ಅರಳಿದ ದಿವ್ಯಮುಖಾರವಿಂದದಲ್ಲಿ ಗೋಚರಿಸಿ ಕ್ಷಣಕಾಲ ಮಿನುಗಿ ಮಾಯವಾಗುವ ಮುಗ್ಧಮಗುವಿನ ಮಂದಹಾಸ ಅತ್ಯಪೂರ್ವವಾದುದು. ಈ ಅಲಭ್ಯಲಾಭವನ್ನು ಪಡೆಯುವ ಸಲುವಾಗಿ ನಾನು ಬಹುಕಾಲ ಅವರ ದಿವ್ಯಸನ್ನಿಧಿಯಲ್ಲಿ ಕಾಯ್ದು ಕುಳಿತಿದ್ದೇನೆ. ಅಪರೂಪಕ್ಕೆ ಮಿಂಚಿನಂತೆ ಮಿನುಗಿದ ಅವರ ದಿವ್ಯ ಮಂದಹಾಸದ ಸವಿಯನ್ನು ಸವಿದು, ಅನುಭವಿಸಿ, ಕೃತಾರ್ಥರಾದವರಲ್ಲಿ ನಾನೂ ಓರ್ವನಾಗಿದ್ದೇನೆ” ಎಂದು ತುಂಬು ಮನದಿಂದ ನುಡಿದ ಶ್ರೀ ಕೆ ಹೆಚ್ ಶ್ರೀನಿವಾಸ್ ಎವರ ಅಭಿವಂದನಾ ವಚನಗಳನ್ನು ಆಲಿಸಿದ ಸಹೃದಯರ ಮನಸ್ಸು ತುಂಬಿಬಂದಿತ್ತು.

ಬ್ರಹ್ಮೈಕ್ಯ ಪೂಜ್ಯಗುರುವರ್ಯರ ಪ್ರಥಮ ವಾರ್ಷಿಕ ಆರಾಧನೆ:

ಬ್ರಹ್ಮೀಭಾವ ಹೊಂದಿದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರ ಪ್ರಥಮ ವಾರ್ಷಿಕ ಆರಾಧನೆಯು ಪ್ರಮಾಥಿ ಸಂ|ದ ಮಾರ್ಗಶೀರ್ಷ ಶುದ್ಧ ಅಷ್ಟಮೀ ಗುರುವಾರ (ದಿನಾಂಕ 16-12-1999) ಶ್ರೀಮಠೀಯ ಪದ್ಧತಿ ಪರಂಪರೆಗೆ ಅನುಗುಣವಾಗಿ ನೆರವೇರಲಿದೆ.

ಮೊದಲವರ್ಷದ ಆರಾಧನಾ ಪೂರ್ವಭಾವಿ ಶ್ರೀಗುರುಮೂರ್ತಿ ಸಂಸ್ಥಾಪನಾ ಸಂಬಂಧಿ ಧಾರ್ಮಿಕ ವಿನಿಯೋಗಗಳು ಪ್ರಮಾಥಿ ಸಂ|ದ ಮಾರ್ಗಶೀರ್ಷ ಶುದ್ಧ ಪಂಚಮೀ ಸೋಮವಾರ (13-13-1999) ಶ್ರೀಗುರುಗಣೇಶ ಪ್ರಾರ್ಥನೆಗಳೊಂದಿಗೆ ಶುಭಾರಂಭಗೊಳ್ಳಲಿವೆ. ಅದೇ ಸಪ್ತಮೀ ಬುಧವಾರ (15-12-1999) ಗಿರಿನಗರದ ನಿರ್ಮಾಪಕ ಶ್ರೀ ಬಿ. ಕೃಷ್ಣ ಭಟ್ಟರು ಮತ್ತು ಕುಟುಂಬದವರು ನಿರ್ಮಾಣ ಮಾಡಿಸಿ, ಸೇವಾರೂಪದಲ್ಲಿ ಸಮರ್ಪಿಸಿದ ಭವ್ಯ ಶಿಲಾದೇಗುಲದಲ್ಲಿ, ಶ್ರೀಮತಿ ರಾಧಮ್ಮ ಮತ್ತು ಶ್ರೀ ಬಿ ಕೃಷ್ಣ ಭಟ್ಟ್ಟರ ಯಜಮಾನತನದಲ್ಲಿ ಶ್ರೀಗುರುಮೂರ್ತಿ ಸಂಸ್ಥಾಪನಾ ಕಾರ್ಯವು ನೆರವೇರಿ ‘ಗಿರಿನಗರ’ವನ್ನು ‘ಶ್ರೀಗುರುನಗರ’ವನ್ನಾಗಿಸಲಿದೆ.

ಆರಾಧನಾ ದಿನ (16-12-1999) ಸಂಜೆ ನಡೆಯಲಿರುವ ಧಾರ್ಮಿಕ ಮಹಾಸಭೆಯಲ್ಲಿ ಶ್ರೀ ಭಗವತ್ಪಾದ ಶ್ರೀರಾಘವೇಂದ್ರ ಭಾರತೀ ಸನಾತನ ಧರ್ಮಪೋಷಿಣೀ (ರಿ) ಪ್ರತಿಷ್ಠಾನದ ವತಿಯಿಂದ “ಶ್ರೀಗುರುಭಾರತೀ” ಎಂಬ ಆರಾಧನಾ ಸಂಸ್ಮರಣ ಗ್ರಂಥದ ಬಿಡುಗಡೆಯು ಜರುಗಲಿದೆ.

ಈ ಎಲ್ಲ ಆರಾಧನಾ ಕಾರ್ಯಗಳ ಮಾರ್ಗದರ್ಶಕರು ನಮ್ಮ ಇಂದಿನ ಶ್ರೀಗುರುವರೇಣ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು.

~*~

Facebook Comments