ಕೆಕ್ಕಾರು, 09, ಸೆಪ್ಟಂಬರ್, 2014: ಜಯಚಾತುರ್ಮಾಸ್ಯದ ಸೀಮೋಲ್ಲಂಘನದ ದಿನ ಶ್ರೀ ಸಂಸ್ಥಾನದವರು ಕೊಟ್ಟ ಐತಿಹಾಸಿಕ ಆಶೀರ್ವಚನದ ಫೋಟೋ, ಅಕ್ಷರ, ಧ್ವನಿ ಮತ್ತು ವೀಡಿಯೋ ಸಂಗ್ರಹಗಳು. ಸಂಪಾದನೆಯಲ್ಲಿ ಸಹಕರಿಸಿದ ಹರೇರಾಮ ತಂಡಕ್ಕೆ ಅನಂತ ಕೃತಜ್ಞತೆಗಳು
~
ಸಂ.

~

ವೀಡಿಯೋ:
ಕೃಪೆ: ಶ್ರೀ ಭಾರತೀ ಪ್ರಕಾಶನ

ಧ್ವನಿ:
ಕೃಪೆ: ಶ್ರೀ ಭಾರತೀ ಪ್ರಕಾಶನ

ಅಕ್ಷರರೂಪ
ಸೇವೆ: ಶ್ರೀದೇವಿ ವಿಶ್ವನಾಥ್, ಸ್ವಪ್ನಾ ಸೇಡಿಯಾಪು, ಜ್ಯೋತ್ಸ್ನಾ ದೋಳ
~

 • ಹರೇ ರಾಮ
  ಎಲ್ಲೆಲ್ಲಿ ಅಡ್ಡಾಡುವುದೆನ್ನ ಮನವೋ –
  ಅಲ್ಲಲ್ಲಿ ಕಾಣಲೈ ಗುರು ನಿನ್ನ ತನುವು
  ಎಲ್ಲಿ ತಲೆ ಬಾಗಿಸುವೆನಲ್ಲಲ್ಲಿ ನಿತ್ಯ
  ಕಾಣಲೈ ಗುರು ನಿನ್ನ ಪದ ಕಮಲ ಸತ್ಯ
  ಮಾತಾ ರಾಮೋ ಮತ್ಪಿತಾ ರಾಮಚಂದ್ರಃ
  ಸ್ವಾಮೀ ರಾಮೋಮತ್ಸಖಾ ರಾಮಚಂದ್ರಃ
  ಸರ್ವಸ್ವಂ ಮೇ ರಾಮಚಂದ್ರೋ ದಯಾಲುಃ
  ನಾನ್ಯಂ ಜಾನೇ ನೈವ ಜಾನೇ ನ ಜಾನೇ
  ರಾಕ್ಷಸಾಂತಕ ರಾಮ ಸೇವಕ ನಿನ್ನ ಮಂಗಲ ಮೂರುತಿ
  ರಾಮ ಲಕ್ಷ್ಮಣ ಜಾನಕಿಯ ಜೊತೆ ಎದೆಯೊಳಿರಲೈ ಮಾರುತಿ
  ಎದೆಯೊಳಿರಲೈ ಮಾರುತಿ
  ಎದೆಯೊಳಿರಲೈ ಮಾರುತಿ
 • ಕೆಕ್ಕಾರಿನ ಪುಣ್ಯದ ಮಣ್ಣಿಗೆ, ನಿನ್ನೆಯ ನೆನಪು ಮಾಡಿಕೊಂಡು ಹೇಳೋದಾದ್ರೆ ಅನಂತ ನಮನಗಳು. ಇಂದಿನ ನೆನಪು ಮಾಡಿಕೊಂಡು  ಹೇಳೋದಾದ್ರೆ ಪೂರ್ಣ ನಮನಗಳು.
  ನಿನ್ನೆಯು ಚೆನ್ನವೇ, ಇಂದೂ ಚೆನ್ನವೇ. ನಿನ್ನೆ ಚತುರ್ದಶಿ, ಆದ್ರೆ ಅನಂತ ಚತುರ್ದಶಿ ಅದು. ಇಂದು? ಇಂದು ಪೂರ್ಣಮೆ. ಪೂರ್ಣಿಮೆ.
  ಹೀಗೆ ಪೂರ್ಣದಿಂದ ಪ್ರಾರಂಭವಾದ ಚಾತುರ್ಮಾಸ ಪೂರ್ಣದಲ್ಲೇ ಪರ್ಯಾವಸಾನಗೊಂಡಿದೆ. ಪರಿಪೂರ್ಣವನ್ನ ಕಾಯ್ತಾ ಇದೆ.
 • ಹಾಗೆ ನೋಡಿದರೆ ಈ ಚಾತುರ್ಮಾಸ್ಯ ಪೂರ್ಣವಾಯ್ತು ಎನ್ನುವುದೇ ಒಂದು ಪವಾಡ.
  ಹೇಗೆ ಸತ್ಪುರುಷರು ತಪಸ್ಸು ಮಾಡ್ಬೇಕೂಂತ ಸಂಕಲ್ಪ ಮಾಡ್ತಾರೋ, ಹಾಗೇ ಇನ್ನೊಂದು ಬಗೆಯ ಪುರುಷರು ಆ ತಪಸ್ಸನ್ನು ಭಂಗ ಮಾಡ್ಬೇಕೂಂತ ಸಂಕಲ್ಪ ಮಾಡ್ತಾರೆ ಪಕ್ಕ ಪಕ್ಕದಲ್ಲಿಯೇ.
  ಹಾಗಾಗಿ ಚಾತುರ್ಮಾಸ್ಯ ವ್ರತದ ಸಂಕಲ್ಪ ನಮ್ಮದು ಹೇಗಿತ್ತೋ ಹಾಗೇ ಇನ್ನೊಂದು ಪಾರ್ಶ್ವದಲ್ಲಿ ಈ ವ್ರತವನ್ನ ಮೃತ್ಯು ಭಂಗ ಮಾಡ ಬೇಕು ಅನ್ನೋ ಸಂಕಲ್ಪ.
  ನಮ್ಮಿಂದ ಕಡಿಮೆ ಘಟ್ಟಿ ಏನಲ್ಲ ಆ ಸಂಕಲ್ಪ..
  ನಮ್ಮ ಯಾತ್ರಾ ವ್ಯವಸ್ಥಾಪಕನಿಗೊಂದು ದೂರವಾಣಿ ಕರೆ ಬರುತ್ತದೆ. ಆ ದೂರವಾಣಿ ಕರೆ ಮಾಡಿದವನು ಹೇಳ್ತಾನೆ, ಗುರುಗಳಿಗೆ ತಿಳಿಸಿ- ಈ ಚಾತುರ್ಮಾಸ್ಯ ಪೂರ್ತಿ ಆಗೋದಿಲ್ಲ, ಮಧ್ಯದಲ್ಲಿ ನಿಂತು ಹೋಗುತ್ತದೆ, ಇಂಥದ್ದೊಂದು ಕೇಸು ಬರುತ್ತದೆ ಮಧ್ಯದಲ್ಲಿ.  ಅದರ  ಪರಿಣಾಮವಾಗಿ ಮಧ್ಯೆ ಚಾತುರ್ಮಾಸ್ಯ ತುಂಡಾಗಿ ಹೋಗ್ತದೆ – ಅಂತ ದೂರವಾಣಿ ಕರೆ ಬರುತ್ತದೆ.
  ನಾವು ನಕ್ಕೆವು.  ಮತ್ತೇನು ಮಾಡುವುದು?
  ಚಾತುರ್ಮಾಸ್ಯ ಪೂರ್ಣ ಮಾಡೋದ್ ನಿನ್ನ ಕೈಯಲ್ಲಿಲ್ಲ. ಭಂಗ ಮಾಡೋದು ನಿನ್ನ ಕೈಯ್ಯಲ್ಲಿಲ್ಲ. ಅದಿರೋದು ರಾಮನ ಕೈಯಲ್ಲಿ.
  ಇವತ್ತು ಚಾತುರ್ಮಾಸ್ಯ ಪೂರ್ಣವಾಗಿದೆ. ಒಂದು ಬಗೆಯ ಪ್ರಶ್ನೋತ್ತರಗಳು, ಸವಾಲುಗಳು, ಚಾತುರ್ಮಾಸ್ಯ ಪೂರ್ಣ ಆಗೋಕೆ ಬಿಡೋದಿಲ್ಲ. ಅದಕ್ಕೆ ಜವಾಬು ಚಾತುರ್ಮಾಸ್ಯ ಪೂರ್ಣ ಆಯ್ತು.
  ಸವಾಲು, ನಿಮ್ಮನ್ನು ಸೀಮೆಯೊಳಗೆ ಬಂಧಿಸ್ತೇವೆ. ಅದಕ್ಕೆ ಜವಾಬು ಸೀಮೋಲ್ಲಂಘನವಾಯ್ತು.
 • ಚಾತುರ್ಮಾಸ್ಯಕ್ಕೆ ಬರುವಾಗ – ಒಂದು ಚಕ್ರವ್ಯೂಹದ ಮಧ್ಯೆ ಇದ್ದೆವು. ಚಾತುರ್ಮಾಸ್ಯ ಆರಂಭ ಆಗುವಾಗ.
  ಆಗ ಎಲ್ಲಿಯೂ ಹೊರಗೆ ಹೋಗ್ಲಿಕ್ಕೆ ದಾರಿ ಇರ್ಲಿಲ್ಲ. ಅತಿ ವಿಚಿತ್ರವಾದ, ಅತಿ ಕ್ರೂರವಾದ ಚಕ್ರವ್ಯೂಹದ ಮಧ್ಯದಲ್ಲಿ ನಾವಿದ್ದೆವು ಆಗ. ಅದು ಈವತ್ತು ಏನಾಗಿದೆಯೆಂದರೆ, ಸೀಮೋಲ್ಲಂಘನ ಆಗಿದೆ.
  ಚಕ್ರವ್ಯೂಹದ ಭೇದನವಂತೂ ಆಗಿದೆ. ಚಕ್ರವ್ಯೂಹದ ಭೇದನದ
  ನಂತರ ಸಂಗ್ರಾಮ ಇದೆ. ಸಂಗ್ರಾಮ ಒಪ್ಪಿಗೆ.
  ಯಾಕೆಂದರೆ ಸತ್ತರೆ ವೀರ ಸ್ವರ್ಗ; ಬದುಕಿದ್ರೆ ಭೂಮಿಯೇ ಸ್ವರ್ಗ. ಅದಕ್ಕೆ ಸಂಗ್ರಾಮ ಅಂತ ಹೇಳುವುದು. ಬದುಕಿ ಉಳಿದ್ರೆ ಭೂಮಿಯನ್ನೇ ಸ್ವರ್ಗ ಮಾಡ್ಬಹುದು. ಅದಿಲ್ಲದಿದ್ರೆ, ಒಂದು ಮಹತ್ಕಾರ್ಯಕ್ಕಾಗಿ ಅಸುನೀಗಿದ ಪುಣ್ಯ ಬರುತ್ತದೆ. ಹಾಗಾಗಿ, ಎಂದೆಂದೂ ಸಂಗ್ರಾಮ ಯಜ್ಞಕ್ಕೆ ಕಡಿಮೆಯಲ್ಲ.
 • ಸಂತನನ್ನು ಯಾವತ್ತೂ ಒಬ್ಬ ಯೋಧನಿಗೆ ಹೋಲಿಸುತ್ತಾರೆ.
  ಯೋಧ ಮತ್ತು ಯೋಗಿಗಳ ಮಧ್ಯೆ ಹೋಲಿಕೆ ಇದೆ:
  ದ್ವಾದವೋ ಪುರುಷೋ ಲೋಕೇ ಸೂರ್ಯ ಮಂಡಲ ಭೇದಿನೌ
  ಪರಿವ್ರಾಟ್ ಯೋಗಯುಕ್ತಶ್ಚ ನೀಚ ಅಭಿಮುಖೋಗತಾ ||
  ಅದರ ಅರ್ಥ – ಇಬ್ಬರೇ ಇಬ್ಬರು ಪುರುಷರು ಜಗತ್ತಿನಲ್ಲಿ ಸೂರ್ಯಮಂಡಲವನ್ನು ಭೇದಿಸಿ ಆ ಕಡೆ ಹೋಗುತ್ತಾರೆ.  ಪರಮ ಪುರುಷನನ್ನು ಸೇರುತ್ತಾರೆ. ಪರಮ ಪದವನ್ನು ಪಡೆಯುತ್ತಾರೆ. ಇಬ್ಬರೇ ಇಬ್ಬರು ಪುರುಷರು, ಯಾರು ಅವರಿಬ್ಬರು – ಯೋಗಯುಕ್ತನಾಗಿ ದೇಹ ತ್ಯಾಗ ಮಾಡುವ ಪರಿವ್ರಾಟ್, ಒಬ್ಬ ಸಂತ ಕೂಡಾ ಸೂರ್ಯಮಂಡಲ ಭೇದನ ಮಾಡಿ ಪರಮಾತ್ಮನನ್ನು ಸೇರುತ್ತಾನೆ.
  ಹಾಗೇ ಯುದ್ಧದಲ್ಲಿ ಶತ್ರುವಿಗೆ ಬೆನ್ನು ತೋರಿಸದೆ, ಅಭಿಮುಖವಾಗಿ ಹೋರಾಡ್ತಾ ಹೋರಾಡ್ತಾ ಪ್ರಾಣ ಕೊಡುವ ಯೋಧ ಕೂಡ ಸೂರ್ಯಮಂಡಲವನ್ನು ಭೇದಿಸಿ ಆತ ಪರಮಾತ್ಮನನ್ನು ಸೇರುತ್ತಾನೆ.
  ನಾವೂ ಒಂದು ನಿರ್ಧಾರ ಮಾಡಿದೆವು. ‘ ರಣೇಚ ಅಭಿಮುಖೋ ಹತಃ’ ಬೆನ್ನು ತೋರಿಸುವುದಿಲ್ಲ, ಪಲಾಯನ ಮಾಡುವುದಿಲ್ಲ, ಅಭಿಮುಖವಾಗಿ ಹೋರಾಡ್ಬೇಕು. ಆ ನಿಶ್ಚಯ ಮಾಡಿದೆವು. ಹಾಗಾಗಿ, ಯಾರೋ ನಮ್ಮ ಮೇಲೆ ದೂರು ಕೊಟ್ಟಿದ್ದಲ್ಲ. ಅಂಥವ್ರನ್ನು ನಾವು ಬಯಲಿಗೆಳೆದ ಮೇಲೆ ಬೇರೆ ದಾರಿಯಿಲ್ಲದೆ ಮಾಡದೇ ಇದ್ದದ್ದನ್ನು ಹೇಳಿದ್ದು. ಸತ್ಯವನ್ನ ಇವತ್ತು ಸಮಾಜ ಅರ್ಥ ಮಾಡಿಕೊಳ್ಳಬೇಕಾಗಿದೆ.
 • ಈ ಪ್ರಕರಣ ಬಯಲಿಗೆಳೆದದ್ದು ರಾಮಚಂದ್ರಾಪುರ ಮಠ. ನೆನಪಿನಲ್ಲಿಡಬೇಕು ಇದನ್ನು. ಗುರುಗಳ ಮೇಲೆ ಇದ್ದಕ್ಕಿದ್ದ ಹಾಗೆ ಒಂದು ದೂರು ಬರಲಿಲ್ಲ. ಒಂದು ಪ್ರಕರಣವನ್ನು ರಾಮಚಂದ್ರಾಪುರ ಮಠ ಬಯಲಿಗೆಳೆದ ಮೇಲೆ ಒಂದು ಕೌಂಟರ್ ಕಂಪ್ಲೇಂಟ್, ಪ್ರತಿ ದೂರು- ಒಂದು ದಾಖಲಾಯ್ತು. ಈ ಸಾಹಸವನ್ನು ಯಾವ ಸಂತರೂ ಮಾಡಿದ್ದಿಲ್ಲ ಭಾರತದಲ್ಲಿ.
  ಇಂಥಾ ಆಪಾದನೆಗಳು ಬಂದಾಗ ಅವರಲ್ಲಿ ಹೆಚ್ಚಿನವರು ಮುಳುಗಿ ಹೋಗಿದ್ದಾರೆ. ಮತ್ತೆ ಎದ್ದಿಲ್ಲ. ಯಾಕೇಂದರೆ, ಇದು ಬ್ರಹ್ಮಾಸ್ತ್ರ, ಮಾಯಾಸ್ತ್ರ ಇದು.
  ಇದು ಪ್ರಯೋಗ ಆದ ಮೇಲೆ ಉಳಿದವರು ಇಲ್ಲ. ಹಾಗಾಗಿ, ಇಂಥಾದ್ದು ಬಂದಾಗ ಆದಷ್ಟು ಗುಟ್ಟು ಮಾಡುವವರು, ಒಳಗೊಳಗೇ ಸಂಧಿ ಮಾಡ್ಕೊಳ್ಳುವವರು, ರಾಜಿ ಮಾಡ್ಕೊಳ್ಳುವವರು, ಒಳಗೊಳಗೇ ಅಂಥವರೇ ಇರುತ್ತಾರೆ.
  ಆದರೆ ನಾವು ಒಂದು ನಿಶ್ಚಯ ಮಾಡಿದೆವು. ನಾವು ಬಯಲಿಗೆ ಬಂದು ಹೋರಾಟ ಮಾಡುವುದು. ಮತ್ತೆ ರಾಮನಿಚ್ಛೆ.
 • ನಮಗೆ ನಮ್ಮ ಆತ್ಮದ ಮೇಲೆ ಪೂರ್ಣ ತೃಪ್ತಿ ಇದೆ. ನಮ್ಮ ಆತ್ಮ ನಮಗೆ ತುಂಬಾ ಶುದ್ಧವಾಗಿ ಕಂಡುಬರುತ್ತಿದೆ. ನಮ್ಮ ಆತ್ಮದಲ್ಲಿ ನಮಗೆ ಯಾವ ಕಲ್ಮಶವೂ ಇಲ್ಲ.
  ಹಾಗಾಗಿ, ನಮಗೆ ಬಯಲಿಗೆ ಬರಲು ಯಾವ ಸಂಕೋಚವೂ ಇಲ್ಲ. ಇಂಥ ಸಭೆಯ ಮಧ್ಯೆ ಚರ್ಚೆ ಮಾಡಲು ನಮಗೆ ಯಾವ ಬೇಸರವೂ ಇಲ್ಲ.
  ಏಕೆಂದರೆ, ನಿಮಗೆ ನಾವೇನು ಅಂತ ಗೊತ್ತಿದೆಯೋ ಇಲ್ಲವೋ, ಆದ್ರೆ ನಮಗೆ ನಾವೇನೂಂತ ಗೊತ್ತು.
  ಆ ಭಾವ ಆವತ್ತು ಇತ್ತು. ಜನರಿಗೆ ನಾವೇನೂಂತ ಗೊತ್ತಿದೆಯೋ ಇಲ್ಲವೋ ಆದರೆ, ನಮಗೆ ನಾವೇನು ಅಂತ ಗೊತ್ತು.
  ಹಾಗಾಗಿ ನಾವು ಬಯಲಿಗೆ ಬರ್ಬೇಕು. ಇವತ್ತಿನ ಸತ್ಯ ಏನು ಅಂದರೆ ನಿಮಗೂ ನಾವು ಏನು ಅಂತ ಗೊತ್ತು. ನಮಗೆ ಗೊತ್ತಾಗಿದೆ. ಹಾಗಾಗಿ ಎರಡೂ ಪಾತ್ರವನ್ನು ಒಟ್ಟಿಗೆ ಮಾಡುವಂತಹ ಒಂದು ಪ್ರಯತ್ನ.
  ಹಾಗಾಗಿ, ಪರಿವ್ರಾಡ್ ಯೋಗಯುಕ್ತಾಶ್ಚ. ಯೋಗಯುಕ್ತನಾಗಿ ದೇಹ ತ್ಯಾಗ ಮಾಡತಕ್ಕಂತಹ ಪರಿವ್ರಾಡ್ ಅದರ ಜೊತೆಯಲ್ಲಿ ಯುದ್ಧ. ಯುದ್ಧ ಎದುರಾದಾಗ, ಧರ್ಮ ಯುದ್ಧ ಎದುರಾದಾಗ ಓಡದೇ, ಬೆನ್ನು ತೋರಿಸದೇ, ಅಭಿಮುಖವಾಗಿ, ಹೋರಾಡುತ್ತಾ ಹೋರಾಡುತ್ತಾ ಪ್ರಾಣ ಬಿಡುವವನು.
 • ಒಂದು ವೇಳೆ ನ್ಯಾಯ ಗೆದ್ದರೆ ನಾವು ಗೆಲ್ಲುತ್ತೇವೆ. ಒಂದು ವೇಳೆ ಸತ್ಯ ಗೆದ್ದರೆ ನಾವು ಗೆಲ್ಲುತ್ತೇವೆ, ಒಂದು ವೇಳೆ ಕಾನೂನು ಗೆದ್ದರೆ ನಾವು ಗೆಲ್ಲುತ್ತೇವೆ. ಅದೊಂದು ವಿಕಟ ಪ್ರಯತ್ನ ಅದು.
 • ಈ ಪ್ರಯತ್ನ ಮಾಡಿದೋರಿಗೆ ಈ ಸಮಾಜದ ಇಷ್ಟು ಮುಖಗಳು, ಇಷ್ಟು ಹೃದಯಗಳು, ಇಷ್ಟು ಭಾವಗಳು ಶೂನ್ಯ ಅವರ ಪಾಲಿಗೆ. ಸಾವಿರ ಸಾವಿರ ಬಂಧಗಳು ಈ ಹೃದಯಕ್ಕೂ ಇಲ್ಲಿನ ಸಾವಿರಾರು ಹೃದಯಕ್ಕೂ ಇರತಕ್ಕಂತಹ ಬಂಧಗಳು. ಇಲ್ಲಿಗೂ ರಾಮನಿಗೂ ಇರತಕ್ಕಂತಹ ಬಂಧ, ಅದು ನಗಣ್ಯ ಅಲ್ಲಿ.
  ಅದು ಅವರಿಗೆ ವಿಷಯ ಅಲ್ಲ. ಅವರು ಹಡಗು ಮಳುಗಿಸಲು ಹೊರಟರು, ಆದರೆ ಹಡಗು ಇನ್ನೂ ಮುಳುಗಿಲ್ಲ. ಮುಳುಗಿಲ್ಲ ಮಾತ್ರ ಅಲ್ಲ ಅದು ರಾಮನ ದಡದ ಕಡೆಗೆ ಸಾಗುತ್ತಾ ಇದೆ, ಇವತ್ತೂ ಕೂಡಾ. ಈ ಕ್ಷಣದಲ್ಲೂ ಕೂಡಾ.
  ಅವರ ಸವಾಲೇನಿತ್ತು? ಇಷ್ಟೂ ಜನರ ಮನಸ್ಸನ್ನು ಕೆಡಿಸಿ ಬಿಡುತ್ತೇವೆ. ಅದಕ್ಕೆ ಉತ್ತರ ನಿಮ್ಮ ಕಣ್ಮುಂದೇ ಇದೆ.
  ಹಾಗಾಗಿಯೇ, ನಾವು ಬಯಲಿಗೆ ಬಂದೆವು.
 • ಸೀಮೋಲ್ಲಂಘನವಾಗಿದೆ. ಇಂದು ನಾವು ಚಕ್ರವ್ಯೂಹದ ಒಳಗಿಲ್ಲ. ಚಕ್ರವ್ಯೂಹದ ಭೇದನವಾಗಿದೆ. ಇನ್ನೊಂದಷ್ಟು ಯುದ್ಧ ಬಾಕಿ ಇದೆ. ಇನ್ನೊಂದಷ್ಟು ಯುದ್ಧ ಬಾಕಿ ಇದೆ. ಒಂದು ವೇಳೆ ಧರ್ಮ ಗೆದ್ರೆ ನಾವು ಗೆಲ್ಲುತ್ತೇವೆ.
 • ನಮಗೆ ಏನೂ ದುಃಖ ಇಲ್ಲ. ಒಂದು ವೇಳೆ ಪ್ರಪಂಚ ನಮ್ಮನ್ನು ತಿರಸ್ಕರಿಸಿದರೆ, ಪರಮಾತ್ಮನ ಕಡೆಗೆ ಹೋಗುತ್ತೇವೆ.
  ಏನೂ ದುಃಖ ಇಲ್ಲ. ಸಮಾಜ ಬೇಡವೆಂದ ತಕ್ಷಣ ಆಯ್ತು ಅನ್ನುವವರು ನಾವು.
  ರಾಮ ಎಂಥವನೂ ಅಂದರೆ, ದೊಡ್ಡ ಗುರುಗಳ ಒಂದು ರಚನೆ ಇದು- ‘ರಾಜ್ಯಂ ಯೇನ ಪದಾಂತ ಲಗ್ನ ತೃಣಮತ್ಯರ್ಥಂ ’– ರಾಜ್ಯವನ್ನು ಬಿಟ್ಟನಂತೆ ರಾಮ; ಹೇಗೇಂದರೆ, ಬಟ್ಟೆ ತುದಿಗೆ ತಗುಲಿದ ಹುಲ್ಲು ಒಂದು ಕಸ, ಅದನ್ನು ಹೇಗೆ ಕೊಡವಿ ಹೋಗುತ್ತಾರೋ ಹಿಂದೆ ತಿರುಗಿ ನೋಡುತ್ತಾರಾ ಯಾರಾದರೂ? ಬಟ್ಟೆಯ ತುದಿಗಂಟಿದ ಒಂದು ಕಸವನ್ನು ಕೊಡವಿ ಹೋಗುವಾಗ ಹಿಂದಿರುಗಿ ನೋಡುತ್ತಾರಾ? ಅಯ್ಯೋ ಕಸ ಬಿದ್ದು ಹೋಯ್ತೂ ಅಂತ ಅಂದುಕೊಳ್ತಾರಾ ಯಾರಾದರೂ? ಹಾಗೇ ರಾಜ್ಯವನ್ನು ಬಿಟ್ಟು ಹೋದ ರಾಮನನ್ನು ಪೂಜೆ ಮಾಡುವವರು ರಾಜ್ಯಭಾರಕ್ಕೆ ಅಂಟಿಕೊಳ್ಳಬಾರದು.
 • ಅಧಿಕಾರಕ್ಕೆ ಆಸೆ ಪಡಬಾರದು. ನಮಗೂ ಮೋಹ ಖಂಡಿತಾ ಇಲ್ಲ. ಸಮಾಜ ನಮಗೆ ಮುಖ್ಯ. ಸಮಾಜ ಈಗ ಬೇಡ ಅಂದ್ರೆ ಈಗ ಬೇಡ ಅಷ್ಟೆ. ಪ್ರಪಂಚ ತಿರಸ್ಕರಿಸಿದರೆ, ಪರಮಾತ್ಮ ಇದ್ದಾನೆ. ಅದು ಈಗಲೂ ಇದೆ. ಯಾವಾಗಲೂ ಇದೆ. ಆದರೆ ಸಮಾಜ ಹಾಗೆ ಮಾಡಲಿಲ್ಲ, ಪ್ರಪಂಚ ಹಾಗೆ ಮಾಡಲಿಲ್ಲ.
 • ನಮಗೆ ಶ್ಯಮಂತಕಮಣಿಯ ನೆನಪಾಗುತ್ತಿದೆ. ಪೂರ್ವ ಗ್ರಂಥಗಳು ವರ್ಣನೆ ಮಾಡ್ತವೆ ಅದನ್ನು. ಕೃಷ್ಣನ ಮೇಲೆ ಅಪವಾದ ಬಂತು. ಶ್ಯಮಂತಕಮಣಿಯನ್ನ ಕದ್ದ ಅಪವಾದ ಬಂತು. ಒಂದು ಮೂರು ತಿಂಗಳು ಹೊರಗೇ ಬರಲಿಲ್ಲವಂತೆ ಕೃಷ್ಣ. ಯಾಕೆ ಅಂದರೆ, ಕಷ್ಟ ಆಯ್ತು ಕೃಷ್ಣನಿಗೆ. ಹೇಗೆ ಮುಖ ತೋರಿಸಲಿ ಸಮಾಜಕ್ಕೆ ಅಂತ ಅನ್ನಿಸಿತು ಅವನಿಗೆ. ಕೃಷ್ಣನಿಗೆ, ಕೃಷ್ಣನಂಥಾ ಕೃಷ್ಣನಿಗೆ ಹೀಗಾಯ್ತಂತೆ! ಹೇಗೆ ಸಮಾಜಕ್ಕೆ ಮುಖ ತೋರಿಸಲಿ? ಕಳ್ಳ ಅಂತಾರಲ್ಲ? ಶ್ಯಮಂತಕಮಣಿಯನ್ನು ಕದ್ದಿದ್ದಾನೆ ಅಂತಾರಲ್ಲ. ಸಮಾಜಕ್ಕೆ ಹೇಗೆ ಮುಖ ತೋರಿಸಲಿ ಅಂತ ಹೊರಗೇ ಬರಲಿಲ್ಲವಂತೆ ಅವನು.
  ಆದರೆ, ನಮಗೆ ಹೊರಗೆ ಬರದೆ ಉಪಾಯ ಇಲ್ಲ. ನಮಗೆ ಹೊರಗಡೆ ಬರದೆ ಉಪಾಯ ಇಲ್ಲ. ಯಾಕೆಂದರೆ, ನೀವು ಕಾಯ್ತಾ ಇರುತ್ತೀರಿ ಹೊರಗಡೆಗೆ. ಕಾರ್ಯಕರ್ತರು ಒಪ್ಕೊಂಡಿರ್ತಾರೆ, ಇಪ್ಪತ್ನಾಲ್ಕು ಪಾದ ಪೂಜೆ ಇದೆ. ಅವರು ಮಂಗಳಾರತಿ ತಟ್ಟೆ ಹಿಡ್ಕೊಂಡು ಕಾಯ್ತಾ ಇರ್ತಾರೆ. ಹೊರಗೆ ಬರದೇ ಇರುವುದು ಹೇಗೆ? ಭಾರತೀ ಪ್ರಕಾಶನದ ಜಗದೀಶ ಶರ್ಮರು ಅರುವತ್ತು ದಿನಕ್ಕೆ ಅರುವತ್ತು ಪುಸ್ತಕ ಬಿಡುಗಡೆ ಮಾಡ್ಬೇಕು. ಅವರು ಅಂಥಾ ಅದ್ಭುತ ಕಾರ್ಯ ಮಾಡುವಾಗ ಅಷ್ಟು ದೊಡ್ಡ ಕೆಲಸ ಮಾಡುವಾಗ, ನಮ್ಮ ಯಾವುದೋ ಕೊರಗು, ಕೊರತೆ, ಅಥವಾ ಯಾವುದೋ ಸಂಕೋಚಕ್ಕಾಗಿ ನಾವು ಹೊರಗಡೆಗೆ ಬರದೆ ಇದ್ದರೆ ಆ ಅರುವತ್ತು ದಿನದ ಆ ಮಹಾಕಾರ್ಯವನ್ನು ನಿಲ್ಲಿಸ್ಲಿಕ್ಕೆ ನಮಗೇನು ಹಕ್ಕು? ಒಂದು ದಿನ ಇಲ್ಲ ಅಂತ ಮಾಡ್ಲಿಕ್ಕೆ ನಮಗೇನು ಹಕ್ಕು? ಹಾಗಾಗಿ ಯಾವ ದಿನವೂ ಹೊರಗೆ ಬರಬೇಕಾದಾಗ ಹೊರಗೆ ಬರದೇ ನಾವು ಉಳಿಯಲಿಲ್ಲ. ಆದರೆ ನಮ್ಗೆ ಒಂದಿಷ್ಟೂ ಸಂಕೋಚ ಉಳಿಯುವಂತೆ ನೀವು ಮಾಡಲಿಲ್ಲ. ನೀವು ಹೇಗೆ ನಡೆದುಕೊಂಡಿದ್ದೀರಿ ಎಂದರೆ, ನಮಗೆ ಒಂದಿಷ್ಟೂ ಮುಜುಗರ ಆಗದೇ ಇರುವ ಹಾಗೆ ಮಾಡಿದ್ದೀರಿ ನೀವು.
 • ನಾವು ನಿಮ್ಮನ್ನು ಎಷ್ಟೋ ಸಾರಿ ಸಂತೈಸಿರಬಹುದು, ನಿಮ್ಮ ಕಷ್ಟಗಳಲ್ಲಿ ಅಥವಾ ನಿಮ್ಮ ಕ್ಲೇಶಗಳಲ್ಲಿ ಸಂತೈಸಿರಬಹುದು. ಆದರೆ, ಈ ಸಮಯದಲ್ಲಿ ನೀವು ನಮ್ಮನ್ನು ಸಂತೈಸಿದ ರೀತಿ ಮತ್ತು ನಮ್ಮ ಹತ್ತಿರದ ಕಾರ್ಯಕರ್ತರು ನಮ್ಮನ್ನು ಸಂತೈಸಿದ ರೀತಿ ಅದು ಅನನ್ಯ. ಅದನ್ನು ಮರೆಯಲು ಸಾಧ್ಯ ಇಲ್ಲ. ನಾವು ಯಾರಿಗೂ ಹೇಳಲಿಲ್ಲ ಈ ನಮ್ಮ ಕಷ್ಟವನ್ನು. ತಾನಾಗಿ ಯಾರಿಗೆ ಗೊತ್ತಾಯ್ತೋ ಗೊತ್ತಾಯ್ತು. ಅನೇಕರು ಪ್ರಾಣ ಕೊಡುವವರೂ ಇದ್ದಾರೆ ಇಲ್ಲಿ. ನಮಗೆ ಗೊತ್ತು. ಅನೇಕರು ಸರ್ವಸ್ವವನ್ನೂ ತ್ಯಾಗ ಮಾಡುವವರು ಇದ್ದಾರೆ ಇಲ್ಲಿ.
 • ನಾವು ಜೈಲಿಗೆ ಹೋಗುವುದಕ್ಕೂ ಸಿದ್ದ. ಅಂಥವರು ಇದ್ದಾರೆ ಅನೇಕರು. ಏನು ಬೇಕಾದ್ರೂ ಮಾಡುವಂಥವರು ಇದ್ದಾರೆ.
  ಆದರೆ, ಯಾರಿಗೂ ನಾವು ಹೇಳುವುದಿಲ್ಲ. ಹೇಗೆ ಹೇಳುವುದು ಈ ಕರ್ಮವನ್ನು! ಈ ಕಲ್ಮಶವನ್ನು ಹೇಗೆ ಯಾರಿಗೆ ಹೇಳುವುದು? ಅವರನ್ನು ಯಾಕೆ ನಾವು ಆಘಾತಕ್ಕೆ ಈಡು ಮಾಡ್ಬೇಕು? ಆದರೆ ತಾನೇ ಯಾರಿಗೆ ಗೊತ್ತಾಗುತ್ತದೆಯೊ ಗೊತ್ತಾಯಿತು. ಅವರು ಏನು ಮಾಡಬೇಕೋ ಅದನ್ನು ಮಾಡಿದರು. ಅವರು ಹೇಗೆ ಹೋರಾಡಿದ್ದಾರೆ ಅಂದರೆ, ಗೊತ್ತಾದವರು ಪ್ರಾಣ ಪಣಕ್ಕಿಟ್ಟು ಹೋರಾಡಿದ್ದಾರೆ. ಅವರು ಬೇರೆ ಯಾವ ಕೆಲಸವನ್ನೂ ಮಾಡಲಿಲ್ಲ. ಅವರು ಯಾರೂ ಸರೀ ನಿದ್ದೆ ಮಾಡಿಲ್ಲ, ಅವರು ಯಾರೂ ಸರೀ ಊಟ ಮಾಡಿಲ್ಲ. ಈ ಮಧ್ಯದ ಅವಧಿಯಲ್ಲಿ ಪ್ರಾಣ ಪಣಕ್ಕಿಟ್ಟು ಹೋರಾಡಿದ್ದಾರೆ ಅವರೆಲ್ಲರೂ ಕೂಡಾ. ಹಾಗಾಗಿ ಇವತ್ತು ಈಗಿರುವ ಸ್ಥಿತಿ ಇದೆ.
  ಅದ್ರಿಂದಾಗಿ ಬಹುಶಃ ಈ ಘಟನೆ ಮುಗಿದು ಹೋದ ನಂತರ ಆ ಕೆಲವರನ್ನು ನೆನಪು ಮಾಡಿಕೊಳ್ಳಬೇಕು ನಾವು.
  ಇವತ್ತು ನಾವು ಹೆಸರು ಹೇಳುವುದಿಲ್ಲ. ಅವರಿಂದಾಗಿ ಪೀಠ ಉಳಿಯಿತು, ಅವರಿಂದಾಗಿ ಸಮಾಜ ಉಳಿಯಿತು. ಅವರು ನಿಮ್ಮ ಮನಸ್ಸನ್ನು ಕೆಡಿಸಲಿಕ್ಕೆ ಉದ್ದೇಶಿಸಿದರು. ನೀವು ಏನು ಮಾಡಿದಿರಿ?
 • ನೀವು ಕಣ್ಣೀರು ಪೂಜೆ ಮಾಡಿದ್ರಿ. ಇವತ್ತು ಈಗ ನಾವು ಬರುತ್ತಾ ಬರುತ್ತಾ ಒಬ್ಬಾಕೆ ಹೆಣ್ಣುಮಗಳು, ಹೆಣ್ಮಕ್ಕಳಲ್ಲಿ ಎಷ್ಟು ಒಳ್ಳೆಯವರೂ ಇರುತ್ತಾರೆ ಅನ್ನುವುದಕ್ಕೆ ನಾವು ಹೇಳುತ್ತಾ ಇರುವುದು.
  ಒಬ್ಬಾಕೆ ಹೆಣ್ಣು ಮಗಳು ಧಾರಾಕಾರವಾಗಿ ಕಣ್ಣಿರಿಡ್ತಾ ಇದ್ದಾಳೆ, ಬಿಕ್ಕಿ ಬಿಕ್ಕಿ ಅಳುತ್ತಾಳೆ, “ಏನಾಯ್ತು? ಅಳ್ಬೇಡ” ಹೇಳಿದ್ರೆ ಅವಳ ಬಾಯಲ್ಲಿ ತೊದಲ್ತಾ ತೊದಲ್ತಾ ಬರೋ ಮಾತು “ಸಂಸ್ಥಾನ, ನಾವು ನಿಮ್ಮನ್ನ ಬಿಡೋದಿಲ್ಲ, ಸಂಸ್ಥಾನ ನಾವು ನಿಮ್ಮನ್ನ ಬಿಡೋದಿಲ್ಲ. ಯಾವತ್ತೂ ನಾವು ನಿಮ್ಮನ್ನ ಬಿಡೋದಿಲ್ಲ”. ಈ ಪ್ರಕರಣದ ಸೃಷ್ಟಿಕರ್ತರು ಯಾರೋ? ಇಂಥಾ ಕೆಟ್ಟ ಯೋಚನೆ ಯಾರಿಗೆ ಬಂತೋ ಅವರಿಗೆ ನಾವು ಒಂದೇ ಮಾತು ಹೇಳೋದಿಕ್ಕೆ ಇಷ್ಟ ಪಡುತ್ತೇವೆ. ಈ ಸಭೆಯಲ್ಲಿ ನಿಮ್ಮೆಲ್ಲರ ಮುಂದೆ- ನಿಮಗೆ ನಾವು ಅಮೃತ ಕೊಟ್ಟೆವು, ಯಾಕೆಂದರೆ ನಮ್ಮಲ್ಲಿ ಅಮೃತ ಇತ್ತು. ನೀವೂ ಅಮೃತ ಕೊಟ್ಟಿರಿ. ಯಾಕೆಂದರೆ, ನಿಮ್ಮಲ್ಲೂ ಅಮೃತ ಇತ್ತು. ಹಾಗಾಗಿ ನೀವೂ ಅಮೃತ ಕೊಟ್ಟಿರಿ. ಆದರೆ, ಯಾರಲ್ಲಿ ಅಮೃತ ಇಲ್ಲ ಅವರು ತಮ್ಮಲ್ಲಿ ಏನಿದೆಯೋ ಅದನ್ನೇ ಕೊಡಬೇಕೋ ಬೇಡವೋ? ಅದೊಂದು ರೀತಿ ಭಕ್ತಿಯೇ ಅದು.
 • ಯಕ್ಷಗಾನದಲ್ಲಿ ಅತಿಕಾಯ ಪೂಜೆ ಮಾಡುತ್ತಾನೆ. ಲಕ್ಷ್ಮಣನಲ್ಲಿಯೇ ರಾಮನನ್ನು ಕಂಡು ಪೂಜೆ ಮಾಡುತ್ತಾನೆ. ಷೋಡಶೋಪಚಾರ ಪೂಜೆ.  ಪೂಜೆ ಮಾಡುವುದು ಅಂದರೆ ಬಾಣದಿಂದ ಲಕ್ಷ್ಮಣನನ್ನು ಭೇದಿಸ್ತಾನೆ. ಇದೋ ನಿನಗೆ ಧ್ಯಾನ ಇದು. ಇದೋ ನಿನಗೆ ಆವಾಹನೆ, ಇದೋ ನಿನಗೆ ಪಾದ್ಯ. ಅರ್ಘ್ಯ, ಆಚಮನೀಯ, ನೈವೇದ್ಯ, ನಿವೇದನ ಎಲ್ಲ. ಒಂದೊಂದು ಬಾಣಕ್ಕೆ ಒಂದೊಂದು. ಆತ ಹೇಳುತ್ತಾನೆ- ನಾನು ರಾಕ್ಷಸ, ನಾವು ಪೂಜೆ ಮಾಡೋ ಕ್ರಮವೇ ಹೀಗೇ ಅಂತ. ನಾವು ಪೂಜೆ ಮಾಡೋದಾದರೆ, ನಮ್ಮದು ಸರಳ ಭಕ್ತಿ ಮತ್ತು ಉಳಿದವರದ್ದೂ ಕೂಡ ಸರಳ ಭಕ್ತಿಯೇ.
  ಈ ಸರಳ ಭಕ್ತೀ ಅಂದ್ರೆ, ಸರಳವಾದ ಭಕ್ತಿ ಅಂತ ಒಂದರ್ಥ. ಇನ್ನೊಂದು ಸರಳು ಅಂದ್ರೆ ಬಾಣ.
  ಅತಿಕಾಯ, ಅತೀ ಕಾಯುವವ, ಅತಿ ಕಾಯ, ಅತಿ ಬುದ್ಧಿ, ಅತಿಭಕ್ತಿ, ಅತಿ ವಿನಯ, ಇವ್ರೆಲ್ಲ ಪೂಜೆ ಮಾಡೋದೇ ಹೀಗೇ!
  ಅತಿ ಪ್ರೀತಿ, ಅತಿ ಭಕ್ತಿ ಇವರ ಕೊನೆಗೆ ಪೂಜೆ ಮಾಡೋದು ಹೀಗೇ.
  ಒಂದು ಕಾಲದಲ್ಲಿ ಇವರ ಪ್ರೀತಿಯನ್ನು ನೋಡಿದರೆ, ಭಕ್ತಿಯನ್ನ ನೋಡಿದರೆ, ಇವರ ಶ್ರದ್ಧೆಯನ್ನ ನೋಡಿದರೆ ಈ ಜಗತ್ತಿನಲ್ಲಿ ಇವರಂತೆ ಇನ್ನೊಬ್ಬರು ಇಲ್ಲ. ಆದರೆ ಅತಿಯಾಗುವುದು ಎಲ್ಲ ಏನು ಅಂತ ಈ ಘಟನೆ ತೋರಿಸುತ್ತದೆ ಅಂತ ಅಂದ್ಕೊಳ್ತೇವೆ ನಾವು.
  ಹಾಗಾಗಿ ಅಮೃತ ಇತ್ತು ಅಮೃತ ಕೊಟ್ಟೆವು. ಇವರಲ್ಲೇನೂ ಅಮೃತ ಇರಲಿಲ್ಲ; ಇವರೊಳಗೆ ವಿಷ ಇತ್ತು. ನೀ ವಿಷವನ್ನು ಕೊಟ್ಟೆ.
  ಸರಿ; ನಿನ್ನ ಜಾಗದಲ್ಲಿ ನಿಂತು ನೀನು ಮಾಡಿದ್ದೇ ಸರಿ. ನೀ ಮತ್ತೇನು ಮಾಡ್ತಿದ್ದೆ? ನೀ ಅದನ್ನೇ ಮಾಡ್ತಿದ್ದೆ. ಇನ್ನೇನು ಮಾಡ್ಲಿಕ್ಕೆ ಸಾಧ್ಯ?
  ಕೊಡುವುದಕ್ಕೆ ಇನ್ನೇನಿದೆ ನಿನ್ನತ್ರ? ಆದ್ರೆ ಒಂದು ನೆನಪಿಟ್ಟು ಕೊಳ್ಬೇಕು. ಈ ಲಕ್ಷ್ಮಣ ಪೂಜೆ ಸ್ವೀಕಾರ ಮಾಡ್ತಾನೆ. ಅರ್ಘ್ಯ, ಪಾದ್ಯ, ಆಚಮನ, ಪುಷ್ಪ, ಧೂಪ, ದೀಪ, ನೈವೇದ್ಯ, ಎಲ್ಲ ಬಾಣ ಮುಖೇನ ಪೂಜೆ ಲಕ್ಷ್ಮಣನಿಗೆ. ಎಲ್ಲ ಮುಗಿದ ಮೇಲೆ ತಗೋ ಪ್ರಸಾದ ಅಂತ ಒಂದು ಬಾಣ ಬಿಡ್ತಾನಂತೆ ಲಕ್ಷ್ಮಣ. ಮುಗಿಯಿತು ಅಲ್ಲಿಗೆ.
 • ನೀವು ಎಂಥಾ ಪೂಜೆ ಮಾಡ್ತೀರೋ ಅಂಥಾ ಪ್ರಸಾದ ಕೊಡ್ಬೇಕು ತಾನೇ? ಹೇಗೆ ಅಂದ್ರೆ, ಯಾರು ನಿಷ್ಕಳಂಕವಾದ ಪೀಠವನ್ನು ಸೆರೆಮನೆಯೊಳಗೆ ಇಡಬಯಸಿದರೋ ಅವರು ಅಲ್ಲೇ ಇದ್ದಾರೆ ಈಗ. ಅದು ಅವರ ಕರ್ಮದ ಫಲ. ಬೇರೇನಲ್ಲ. ಅವರ ಕರ್ಮದ ಫಲ ಅದು. ಈ ಘಟನೆ ಮೊಟ್ಟ ಮೊದಲು ನಮ್ಮ ಗಮನಕ್ಕೆ ಬಂದಾಗ, ನಮ್ಮ ಕಣ್ಮುಂದೆ ಮತ್ತೆ ಮತ್ತೆ ಬರ್ತಾ ಇದ್ದ ಉದಾಹರಣೆ ಏನಂದರೆ, ನಾವು ಈ ಗೋ ರಕ್ಷಣೆಯ ಕಾರ್ಯದಲ್ಲಿ ಆಗಾಗ ಹೇಳಿಕೊಳ್ತಾ ಇದ್ದೆವು. ಒಂದು ಗೋವು ನಮ್ಮನ್ನ ಎಷ್ಟು ಪ್ರೀತಿ ಮಾಡ್ತದೆ, ಎಷ್ಟು ಸೇವೆ ಮಾಡ್ತದೆ. ಅದು ಉಸಿರಾಡಿದ್ರೆ ಗಾಳಿ ಶುದ್ಧ ಆಗ್ತದೆ, ಅದು ಹಾಲು ಕೊಟ್ರೆ ನಮಗೆ ಹೊಟ್ಟೆ ತುಂಬ್ತದೆ, ಅದು ಸಗಣಿ ಹಾಕಿದ್ರೆ, ಗೋಮೂತ್ರ ಕೊಟ್ರೆ ನಮ್ಮ ಜೀವನ ಹಸನಾಗ್ತದೆ. ಜೀವನ ಇಡೀ ನಮಗೆ ಕೊಡ್ತಾ ಇರ್ತದೆ ಅದು ಗೋವು. ಜೀವನ ಇಡೀ ನಮಗೆ ನಮಗೆ ಬಗೆ ಬಗೆಯ ಉಪಕಾರಗಳನ್ನ ಮಾಡ್ತದೆ ಗೋವು. ಅದು ಇನ್ನೂ ಉಪಕಾರ ಮಾಡೋ ಹಾಗಿರುವಾಗಲೇ ಅದನ್ನು ಕಟುಕರಿಗೆ ಕೊಡುವವರಿಗೆ ಏನು ಅನ್ಬೇಕು?
  ಜೀವನವಿಡೀ ಉಪಕರಿಸಿದ ಗೋವು ಇನ್ನೂ ಮಾಡೋದಿಕ್ಕೆ ಸಾಧ್ಯ ಇದೆ ಇನ್ನೂ ಕೆಲಸ ಮಾಡೋದಿಕ್ಕೆ ಸಾಧ್ಯ ಇರೋವಾಗಲೇ ತತ್ಕಾಲದ ಲಾಭವನ್ನು ಅಪೇಕ್ಷಿಸಿ ಆ ಗೋವನ್ನ ಕಟುಕರಿಗೆ ಮಾರುವವರಿಗೆ ಏನು ಅನ್ಬೇಕು?
  ಗೋವಿನ ಬಗ್ಗೆ ನಾವು ಈ ಉದಾಹರಣೆ ಕೊಡ್ತಾ ಇದ್ದೆವು. ನಮಗೇ ಈ ಉದಾಹರಣೆ ಬರುತ್ತದೆ ಅಂತ ನಾವು ಅಂದ್ಕೊಳ್ಳಿಲ್ಲ. ಸಮೀಕರಣ ಮಾಡಿದಾಗ ನಿಮ್ಮ ಕತೆಯೂ ಇದೇ ತಾನೇ! ಕೊಟ್ಟೆ, ಕೊಟ್ಟೆ, ಕೊಟ್ಟೆ; ಇನ್ನೂ ಕೊಟ್ಟೆ, ಒಳ್ಳೇದಾಗೂ ಅಂದೆ, ಚೆನ್ನಾಗಿರು ಅಂದೆ. ಪ್ರತಿಯಾಗಿ ಬಂದದ್ದೇನು? ಇದು!
 • ಒಂದು ಕ್ಷಣವೂ ಕೆಡುಕು ಬಯಸಲಿಲ್ಲ, ಒಂದು ಅಲ್ಪವಾದ ಕೆಡುಕನ್ನೂ ಕೂಡಾ ಕನಸಿನಲ್ಲೂ ಮಾಡ್ಲಿಲ್ಲ.
  ಏನು ಮಾಡಿದೆ? ಎಂದು ಆ ವ್ಯಕ್ತಿಯನ್ನು ಕೇಳ್ಬೇಕು. ಏನು ಮಾಡಿದೆ? ಏನು ಮಾಡಿದೆ ಅಂದ್ರೆ, ನೀನು ಮಾಡಿದ್ದಕ್ಕೆ ಹೆಸರು- ಆತ್ಮನಾಶ; ನೀ ಮಾಡಿದ್ದಕ್ಕೆ ಹೆಸರು ಕುಟುಂಬ ನಾಶ; ನೀ ಮಾಡೋಕೆ ಹೊರಟಿದ್ದಕ್ಕೆ ಹೆಸರು ಸಮಾಜ ನಾಶ; ನೀ ಮಾಡೋದಿಕ್ಕೆ ಹೊರಟಿದ್ದಕ್ಕೆ ಹೆಸರು ಪೀಠದ ನಾಶ. ಕೊನೆಗೆ ಸರ್ವ ನಾಶ.
  ಏನು ಮಾಡಿದೆ? ಏನು ಸಾಧನೆ ಮಾಡಿದೆ? ಏನು ಗಳಿಸಿದೆ ಕೊನೆಗೆ? ನೀನಾರಿಗಾದೆಯೋ ಎಲೆ ಮಾನವ? ಗೋವು ಕೇಳುವ ಹಾಗೆ ನಾವು ಕೇಳ್ಬೇಕು ಈಗ?
  ನೀನಾರಿಗಾದೆಯೋ! ಯಾರಿಗಾದೆ ನೀನು? ನೀನು ನಿನಗಾದೆಯಾ ಕೊನೇ ಪಕ್ಷ? ನಿನ್ನ ಕತೆ ಏನು ಈವತ್ತು?
 • ಈ ಯುದ್ಧದಲ್ಲಿ ನೀನು ಗೆದ್ದರೆ ನೀನು ಸೋತೆ. ನೀನು ಸೋತರೆ ನೀನು ಸತ್ತೆ.
  ಅಂಥಾ ಯುದ್ಧ ಮಾಡ್ತಾ ಇದ್ದೀಯಲ್ಲಾ? ನೀ ಗೆದ್ದರೂ ಸೋತೆ, ಇದ್ರಲ್ಲಿ ನೀನು ಸೊತರೂ ಸೋತೆ.
  ಯಾರಿಗೆ ಒಳ್ಳೆಯದಿದು? ಇಂಥವರು ಒಬ್ಬೊಬ್ಬರು ಹುಟ್ಟಿಕೊಂಡರೆ ಅಥವಾ ಯಾರಾದ್ರೂ ಒಬ್ಬರಿಗೆ ಇಂತಹ ಬುದ್ಧಿ ಬಂದರೆ ಎಂತಹ ವಿಹ್ವಲವಾಗಬಹುದು ಅನ್ನುವುದಿಕ್ಕೆ ಈ ಕಾಲ ಸಾಕ್ಷಿ! ಈ ಸನ್ನಿವೇಶ ಸಾಕ್ಷಿ!
  ಇಂಥದ್ದನ್ನು ಮಾಡಬಾರದು ಯಾವುದರಿಂದ ತನಗೂ ಹಿತವಿಲ್ಲ, ಪರರಿಗೂ ಹಿತವಿಲ್ಲ ಇಂಥದ್ದನ್ನು ಮಾಡಬಾರದು.
  ಮತ್ತೆ ಸತ್ಯ ನನ್ನ ಮೂಗಿನ ನೇರಕ್ಕೇ ಇದೆ, ನನಗೇನನ್ನಿಸಿತೋ ಅದೇ ಸತ್ಯ ಅನ್ನುವ ಭ್ರಮೆಗೊಳಗಾಗಬಾರದು. ಇಷ್ಟು ದೊಡ್ಡ ಪ್ರಪಂಚ ಇದೆ, ಇಷ್ಟು ದೊಡ್ಡ ಸಮಾಜ ಇದೆ, ಇವರೆಲ್ಲ ಮೂರ್ಖರಾ ಹಾಗಾದ್ರೆ?  ಈಗಲೂ ಇಂಥಾ ವಿಷವನ್ನ ನಿಮ್ಮ ಮನಸ್ಸಲ್ಲಿ ಬಿತ್ತಿದ ಮೇಲೆ ಕೂಡಾ ನಿಮ್ಮ ಭಾವನೆ ಇವತ್ತು ಹೀಗಿದೆ. ಈ ಭಾವನೆ ತಪ್ಪಾ ಹಾಗಾದರೆ? ಅಸತ್ಯವಾ ಈ ಭಾವನೆ? ಹಾಗಾದರೆ ಸತ್ಯ ಯಾವುದು? ಒಂದು ವೇಳೆ ಇದು ಸುಳ್ಳು ಅಂತಾದ್ರೆ ಈ ಜಗತ್ತಿನಲ್ಲಿ ಸತ್ಯ ಮತ್ತೆ ಯಾವುದೂ ಇಲ್ಲ. ಸತ್ಯವೇ ಉಳಿಯುವುದಿಲ್ಲ ಈ ಪ್ರಪಂಚದಲ್ಲಿ. ನಮ್ಮೆದೆಯೊಳಗಿನ ರಾಮನ ಸಾಕ್ಷಿಯಾಗಿ ನಾವು ಹೆಜ್ಜೆಗಳನ್ನು ಇಟ್ಟಿದ್ದೇವೆ.
 • ನಾವಿಟ್ಟ ಹೆಜ್ಜೆಗಳು ಅದು ರಾಮನ ಹೆಜ್ಜೆಗಳು. ಅಷ್ಟು ಮಾತ್ರ ನಾವು ಹೇಳಬಲ್ಲೆವು ನಾವು. ಹಾಗಾಗಿ ಅಂತಿಮವಾಗಿ ನೀವು ಹೇಳೋದಾದ್ರೆ ರಾಮನನ್ನು ಕೇಳಬೇಕಾಗಿ ಬರಬಹುದು. ಅಲ್ಲಿದೆ ಸತ್ಯ.
  ಅವನಿಗೆ ಗೊತ್ತಿದೆ ನಾವೇನು ಅಂತ. ನಾವು ಹೇಗಿದ್ದೆವು. ನಾವು ಏನಾಗಿದ್ದೆವು. ಅದೆಷ್ಟು ಉನ್ನತ ಭಾವ ಅನ್ನೋದು ಅವನಿಗೆ ಗೊತ್ತು; ರಾಮನಿಗೆ ಗೊತ್ತು.
  ಹಾಗಾಗಿ, ನಮಗೆ ರಾಮನೆದುರು ಒಂದು ಚೂರೂ ಅಳುಕಿಲ್ಲ. ರಾಮನೆದುರು ಹೋಗಿ ನಿಲ್ಲುವಾಗ ಇಲ್ಲಿ ಒಂದಿಷ್ಟೂ ಕೂಡಾ ಕಲ್ಮಶ ಇಲ್ಲ. ಪೂರ್ಣ ತೃಪ್ತಿ ಇದೆ ನಮಗೆ.
  ಸಂಪೂರ್ಣ ಸಮಾಧಾನ ಇದೆ ನಮಗೆ. ಒಂದಿಷ್ಟೂ ಕೂಡಾ ಕಲ್ಮಶ ಇಲ್ಲ. ಹಾಗಾಗಿ ಯಾವುದಕ್ಕೂ ಅಂಜಬೇಕಾದ್ದಿಲ್ಲ. ಆದರೆ ಒಂದು ನಮಗೆ ಖಂಡಿತಾ ಯುದ್ಧ ಗೆಲ್ಲಬೇಕಾಗಿದೆ. ಯುದ್ಧವನ್ನ ಯಾಕೆ ಗೆಲ್ಲಬೇಕು ಅಂದರೆ ನಮಗೆ ನಿಮಗಾಗಿ ಯುದ್ಧವನ್ನು ಗೆಲ್ಲಬೇಕು. ನಮಗೆ ನಮಗೇನಾದರೂ ಆದರೂ ಹೋಗ್ಲಿ ಬಿಡಿ; ಅದೇನಾದ್ರೆ ಏನು? ಮಾನ ನಿನ್ನದು, ಅಪಮಾನ ನಿನ್ನದು, ಏನಾದರೆ ಏನು? ಎಲ್ಲವೂ ಬಿಟ್ಟಾಗಿದೆ. ಕಸದೊಳಗೆ ಕಸವಾಗಿ ಹೋದರೇನು? ನೀನೂಂತ ನುಸುಕದಿರು ಮಣ್ಣಿನಲಿ ಹಾಗೆ ಹೋಗುವುದೇ. ಎಲ್ಲವೂ ಹಾಗೇ, ಮಣ್ಣಲ್ಲಿ ಮಣ್ಣಾಗಿ, ಧೂಳಲ್ಲಿ ಧೂಳಾಗಿ ಹೋಗುವಂಥಾದ್ದು. ಇದೇನಾದರೆ ಏನು? ಆದರೆ, ಇಂಥಾ ನಿಷ್ಠೆ ಇದೆಯಲ್ಲ; ಇಂಥಾ ಭಾವ ಇದೆಯಲ್ಲ; ಈ ಭಾವಕ್ಕಾಗಿ ನಮಗೇನಾದರೂ ಮಾಡಬೇಕು. ನಮ್ಮನ್ನು ಬಂಧಿಸುವವರಿಗೆ ನಾವು ಕೇಳುವ ಪ್ರಶ್ನೆ ಇದು- ನಮ್ಮನ್ನು ಯಾರು ಬಂಧಿಸುವುದಕ್ಕೆ ಹೊರಟರೋ ಅವರಿಗೆ ನಾನು ಕೇಳುವ ಪ್ರಶ್ನೆ ಇದು.
 • ಈ ಸಾವಿರ ಸಾವಿರ ಜನರ ಭಾವನೆಗಳನ್ನು ಬಂಧಿಸ್ತೀರಾ ನೀವು? ಲಕ್ಷಾಂತರ ಹೃದಯಗಳನ್ನು ಬಂಧಿಸ್ತೀರಾ ನೀವು? ನಿಮ್ಮಲ್ಲಿ ಅಂಥಾ ಜೈಲಿದೆಯಾ? ನಿಮ್ಮಲ್ಲಿ ಅಂಥಾ ಅಂಥಾ ಬೇಡಿಗಳಿದ್ದಾವಾ ನಿಮ್ಮಲ್ಲಿ?
 • ಅಲೆಕ್ಸಾಂಡರ್ ಕತ್ತಿ ಎತ್ತಿದಾಗ ಒಬ್ಬ ಸಂತ, ಸನ್ಯಾಸಿ ಹೇಳಿದನಂತೆ- ನೀನು ನನ್ನನ್ನೇನೂ ಮಾಡಲಾರೆ. ಒಂದು ಕ್ಷಣ ಕಡಿದೇ ಬಿಡ್ತೇನಂದರೆ, ಕಡಿಯುವುದು ಶರೀರವನ್ನು. ನಾನು, ಆ ನಾನು ಇದ್ದೇನಲ್ಲ – ಆಚ್ಛೇದ್ಯೋಯಂ ಅದಾದ್ಯೋಯಂ, ಅಕ್ಲೇದ್ಯೋಯಂ, ಆಶೋಷ್ಯೋಯಂ. ಅದನ್ನು ವದ್ಯ ಮಾಡೋದಿಕ್ಕೆ ಸಾಧ್ಯ ಇಲ್ಲ,  ಸುಡೋದಿಕ್ಕೆ ಸಾಧ್ಯ ಇಲ್ಲ, ಒಣಗಿಸ್ಲಿಕ್ಕೆ ಸಾಧ್ಯ ಇಲ್ಲ ಅದನ್ನು. ನನ್ನನ್ನೇನೂ ಮಾಡಬಲ್ಲೆ ನೀನು. ನಮ್ಮದೂ ಸವಾಲು ಅದೇ. ನಮ್ಮನ್ನೇನು ಮಾಡಿಕೊಳ್ಳಬಲ್ಲಿರಿ ನೀವು? ಅದೇನು ಮಾಡ್ತೀರೋ ಮಾಡಿ ನೀವು. 
 • ಆದ್ರೆ ನೆನೆಪಿಡಿ, ನೀವು ಆ ಕುರ್ಚಿಗೆ ಬಂದು ಕೂತು ಹತ್ತಿಪ್ಪತ್ತು ವರ್ಷ ಆಗಿರಬಹುದು, ಆ ಕುರ್ಚಿ ಅಲ್ಲ, ಆ ಇಲಾಖೆಗೆ ಬಂದು ಹತ್ತಿಪ್ಪತ್ತು ವರ್ಷ ಆಗಿರಬಹುದು ನೀವು. ಆದರೆ, ಈ ಪೀಠಕ್ಕೆ ಸಾವಿರ ವರ್ಷದ ಇತಿಹಾಸ ಇದೆ. ನೆನೆಪಿರ್ಲಿ. ಅಧಿಕಾರದ ಅಮಲೇರಿದವರಿಗೆ ನಾವು ನೀಡಬಯಸುವ ಸಂದೇಶ ಇದು. ಪೀಠದ ಹಿಂದೆ ಮತ್ತು ಮುಂದೆ ಸಾವಿರ ವರ್ಷ ಇದೆ ಅಂತ ನೆನಪಿರ್ಲಿ. ನಿಮ್ಮಂಥಹವರನ್ನು ಬಹಳ ಜನರನ್ನು ಕಂಡಿದೆ ಪೀಠ ಈ ಅವಧಿಯಲ್ಲಿ. ಚಕ್ರವರ್ತಿಗಳು ಹುಟ್ಟಿದ್ದಾರೆ, ಹೋಗಿದ್ದಾರೆ, ಸಾಮ್ರಾಜ್ಯಗಳು ಹುಟ್ಟಿದ್ದಾವೆ ಹೋಗಿದ್ದಾವೆ, ಈ ಅವಧಿಯಲ್ಲಿ.
 • ರಾಮಚಂದ್ರಾಪುರ ಮಠ ಹುಟ್ಟಿದ ಮೇಲೆ ಎಷ್ಟು ಸಾಮ್ರಾಜ್ಯಗಳು ಹುಟ್ಟಿಲ್ಲ ಹೋಗಿಲ್ಲ, ಹೆಸರಿಲ್ಲದೇ ಹೋಗಿಲ್ಲಾಂತ. ಇವತ್ತಿಗೂ ಮಠ ಇದೆ.
  ಅದು ನೆನೆಪಿರಲಿ. ಇದೆಲ್ಲದರ ಬಳಿಕವೂ ಚಾತುರ್ಮಾಸ್ಯ ಪೂರ್ಣವಾಗುವಾಗ ಮನಸ್ಸು ಖಂಡಿತಾ ತುಂಬಿದೆ. ಯಾಕೆಂದರೆ, ಬಹುಶಃ ಇಂಥದ್ದೆಲ್ಲ ಬರದೇ ಇದ್ದಿದ್ದರೆ ನಮಗೆ ನಿಮ್ಮ ಈ ಬಗೆಯ ಪ್ರೀತಿ ಗೊತ್ತಾಗ್ತಿರಲಿಲ್ಲ. ಇಂಥಾ ನಿಷ್ಠೆ ನಮಗೆ ಗೊತ್ತಾಗುತ್ತಿರಲಿಲ್ಲ.ಖಂಡಿತವಾಗಿಯೂ. ಬಹುಶಃ ಈ ಸಂಸಾರ ಭ್ರಮೆ ಅಂತ ಹೇಳ್ತಾರೆ.
 • ಇದೆಲ್ಲ ಈ ನೀವು ಇದೇನೋ ಒಂದು ಜನ ಮತ್ತೊಂದು ಇದೆಲ್ಲ ಭ್ರಮೆ ಅಂತ ಹೇಳ್ತಾರೆ. ಆದರೆ, ಇದು ಎಷ್ಟು ಸತ್ಯ ಅನ್ನುವುದನ್ನು ನೀವೆಲ್ಲರೂ ತೋರಿಸಿಕೊಟ್ಟಿದ್ದೀರಿ ನೀವು. ಈ ಒಂದು ಈ ಸಂಕಟದ ಸಮಯದಲ್ಲಿ, ಈ ಸನ್ನಿವೇಶದಲ್ಲಿ ನೀವೆಲ್ಲರೂ ತೋರಿಕೊಟ್ಟಿದ್ದೀರಿ. ಹಾಗಾಗಿ ಚಾತುರ್ಮಾಸ್ಯ ತೋರಿದ ಸತ್ಯ ಏನು ಅಂದರೆ, ಈ ಬಂಧ ಸುಳ್ಳಲ್ಲ; ಈ ಬಂಧ ಸತ್ಯಾಂತ ತೋರಿಸಿದೆ ಚಾತುರ್ಮಾಸ್ಯ.
 • ಹಾಗಾಗಿ, ಇಂತಹ ಮಹತ್ತಾದ ರಾಗದ ಜೊತೆಗೆ ಚಾತುರ್ಮಾಸ್ಯವನ್ನ ನಾವು ಪರ್ಯಾವಸಾನ ಮಾಡ್ತಾ ಇದ್ದೇವೆ. ಸೀಮೋಲ್ಲಂಘನ ನೆರವೇರಿದೆ.
  ಬಿಳಿಯ ಮಂತ್ರಾಕ್ಷತೆಯ ಸ್ಥಾನದಲ್ಲಿ ಅರಶಿನ ಮಂತ್ರಾಕ್ಷತೆ, ಬಂಗಾರದ ಬಣ್ಣದ ಮಂತ್ರಾಕ್ಷತೆ ಇಂದಿನಿಂದ ಆರಂಭ ಆಗ್ತಾ ಇದೆ. ಈಗ ನೀವದನ್ನು ಪಡ್ಕೊಳ್ತೀರಿ ಅಂಥಾ ಮಂತ್ರಾಕ್ಷತೆಯನ್ನು. ನಾವೆಲ್ಲಾ ಜೊತೆಯಾಗಿರೋಣ, ಒಂದಾಗಿರೋಣ, ಬಂದದ್ದನ್ನೆದುರಿಸೋಣ, ಅದೇನು ಬರುತ್ತದೋ ಬಂದದ್ದನ್ನು ಎದುರಿಸೋಣ. ಬರಲಾರದು,  ಇನ್ನೇನು ಬರೋಕೆ ಸಾಧ್ಯ? ಆದ್ರೆ ಇನ್ನೇನು ಬಂದ್ರೂ, ಇದಕ್ಕಿಂತ ಹೀನವಾದ್ದು ಬಂದ್ರೂ, ಇದಕ್ಕಿಂತ ದೊಡ್ಡದಾದದ್ದು ಬಂದ್ರೂ ಒಟ್ಟಿಗಿದ್ದೆದುರಿಸೋಣ.
 • ಭ್ರಮೆಗೊಳಗಾಗಬೇಡಿ ಯಾವುದೇ ಕಾರಣಕ್ಕೂ, ಯಾಕೇಂದರೆ ಇದು ಮಾಯಾಸ್ತ್ರ, ನೆನಪಿರಲಿ; ಮಾಯಾಸ್ತ್ರ ನಮ್ಮೆದುರಿರುವವರು ಸುಳ್ಳನ್ನ ಸತ್ಯ ಮಾಡ್ಲಿಕ್ಕೆ ಹೊರಟವರು. ನಮ್ಮೆದುರಿರುವವರು ಸುಳ್ಳನ್ನು ಸತ್ಯ ಮಾಡ್ಲಿಕ್ಕೆ ಹೊರಟವರು. ಹಾಗಾಗಿ, ಬಗೆ ಬಗೆಯ ಭ್ರಮೆಗಳನ್ನು ಮೂಡಿಸುವ ಪ್ರಯತ್ನ ನಡೆಯುತ್ತಾ ನಡೆಯಬಹುದು. ಆದರೆ, ಖಂಡಿತವಾಗಿ ನಿಮಗೆ ಭ್ರಮೆಗೊಳಗಾಗ ಬೇಡೀಂತ ಹೇಳ್ಬೇಕಾದ್ದಿಲ್ಲ ನಾವು. ಖಂಡಿತಾ ಹೇಳಬೇಕಾದ ಅಗತ್ಯ ಇಲ್ಲ. ಯಾಕೆಂದರೆ, ಈ ಭ್ರಮೆ, ಸತ್ಯ, ತರ್ಕ, ಇದರ ಮೇಲೆ ನಮ್ಮ ನಿಮ್ಮ ಬಾಂದವ್ಯ ನಿಂತಿಲ್ಲ. ಅದನ್ನು ಈ ದಿನಗಳಲ್ಲಿ ತೋರ್ಸಿದ್ದಾರೆ. ನಮ್ಮ ಆಸ್ತಿ ಪ್ರೀತಿ. ನಮ್ಮ ಆಸ್ತಿ ಪ್ರೀತಿ. ಕೊನೆಗೂ ಸತ್ಯ ಅದೊಂದೇ. ಮತ್ತೆಲ್ಲ ಸುಳ್ಳು. ಅದೊಂದೇ ಸತ್ಯ. ಹಾಗಾಗಿ, ಪ್ರೀತಿಯ ನೆಲೆಯ ಮೇಲೆ ನಿಂತಿರ ತಕ್ಕಂತಹ ಭಾವದ ನೆಲೆ ಮೇಲೆ ನಿಂತಿರ ತಕ್ಕಂಥ ಭಾಂದವ್ಯ ಇದು. ಹಾಗಾಗಿ, ಈ ಬಾಂದವ್ಯದ ಮೇಲೆ ನಿಂತು ಈ ಸಾಮ್ರಾಜ್ಯವನ್ನ ಮುಂದೆ ಕೊಂಡೊಯ್ಯೋಣ.
 • ಈ ಹಡಗನ್ನ ರಾಮನ ಕಡೆಗೆ ಕೊಡೊಯ್ಯೋಣ. ಏನು ಬಂದ್ರೂ ಎದುರಿಸೋಣ. ಎಂಥದ್ದು ಬಂದ್ರೂ, ಯಾರೇ ಬಂದು ಬಿದ್ರೂ, ಇಡೀ ಪ್ರಪಂಚ ಬಂದು ಬಿದ್ರೂ ಕೂಡಾ ನಾವೆಲ್ಲ ಒಂದಾಗಿದ್ದು ಅದನ್ನು ಎದುರಿಸೋಣ.
 • ಸತ್ಯಮೇವ ಜಯತೇ ನಾನೃತಂ
  ಸತ್ಯಮೇವ ಜಯತೇ ನಾನೃತಂ
  ಸತ್ಯಮೇವ ಜಯತೇ ನಾನೃತಂ
 • ಹರೇರಾಮ

ಈ ಜಯ ಚಾತುರ್ಮಾಸ್ಯವನ್ನ ಈ ಜಯ ಚಾತುರ್ಮಾಸ್ಯ ಭವನವನ್ನು ಇಟ್ಟಿಗೆ ಇಟ್ಟಿಗೆಯಾಗಿ ಯಾರು ಕಟ್ಟಿ ನಿಲ್ಲಿಸಿದರೋ ಆ ಕಾರ್ಯಕರ್ತರನ್ನು ನಾವು ಮನಸಾರೆ ಹರಸುವಂಥಾ ಒಂದು ಕ್ಷಣ. ಆ ಒಂದು ಕ್ಷಣ ಇದು. ಈ ಚಾತುರ್ಮಾಸ್ಯವನ್ನು ಹೀಗೆ ಯಾರು ಸಂಪನ್ನ ಮಾಡಿದ್ರು, ಇಲ್ಲಿ ಬಂದ ಕ್ಲೇಶಗಳನ್ನ ಯಾರು ಎದೆಗೊಟ್ಟು ಎದುರಿಸಿದ್ರೋ ಅವರೆಲ್ಲರನ್ನ ಒಂದೇ ಒಂದು ಕ್ಷಣ ತುಂಬು ಹೃದಯದಿಂದ ಪ್ರೀತಿಯಿಂದ ನಾವು ನೆನೆಸಿಕೊಳ್ತೇವೆ.

~*~*~

ಫೋಟೋ: ಗೌತಮ್ ಬಿ.ಕೆ

Facebook Comments