|| ಹರೇ ರಾಮ ||

ಸಾವು ಸರ್ವರಿಗೂ ಸಮಾನ.
ಆದರೆ ಸಾವಿನ ಆಚರಣೆಯಲ್ಲಿ ಮಾತ್ರ ಬಹುವಾಗಿ ಭಿನ್ನತೆಗಳಿವೆ!
ಗೃಹಸ್ಥನೊಬ್ಬನ ದೇಹಾಂತವಾದರೆ ಪಾರ್ಥಿವ ಶರೀರಕ್ಕೆ ದಹನ ಸಂಸ್ಕಾರ ಮಾಡುತ್ತಾರೆ. ಆದರೆ ಸನ್ಯಾಸಿ ತ್ಯಜಿಸಿದ ಶರೀರವನ್ನು ಭೂಮಿಯೊಳಗಿಟ್ಟು ವೃಂದಾವನ ಕಟ್ಟುತ್ತಾರೆ.

ಭೋಗಿಯೊಬ್ಬ ಸತ್ತರೆ ಸೂತಕವನ್ನು ಆಚರಿಸುತ್ತಾರೆ, ಆದರೆ ಯೋಗಿಯ ದೇಹಾಂತದಲ್ಲಿ ಸೂತಕ ಆಚರಣೆ ನಿಷಿದ್ಧ.

Prabha

ಸಂತ - ಜ್ಯೋತಿಸ್ವರೂಪ

ಭೋಗಿಯ ಶರೀರ ಅಪವಿತ್ರವೆನಿಸುತ್ತದೆ, ಮುಟ್ಟಿದರೆ ಮೈಲಿಗೆಯೆಂದು ಭಾವಿಸುವ ಸಂಪ್ರದಾಯವಿದೆ. ಯೋಗಿಯ ಶರೀರವೋ, ಪರಮ ಪವಿತ್ರ. ದರ್ಶನ ಸ್ಪರ್ಶನಗಳಿಂದ ಪಾಪ ಪರಿಹಾರ.

ಸಾಮಾನ್ಯರು ಗತಿಸಿದರೆ ಆದಷ್ಟು ಬೇಗನೆ ಸ್ಮಶಾನಕ್ಕೆ ಕೊಂಡೊಯ್ದು ದಹಿಸುವುದಲ್ಲದೆ, ಅಸ್ಥಿ-ಭಸ್ಮಗಳಂಥಹ ಅವಶೇಷಗಳನ್ನು ಕೂಡ ಪುಣ್ಯ ತೀರ್ಥಗಳಲ್ಲಿ ವಿಸರ್ಜಿಸಿ ಗುರುತೇ ಇಲ್ಲದಂತೆ ಮಾಡುತ್ತಾರೆ.ಆದರೆ ಯೋಗಿಯ ಶರೀರವನ್ನಾದರೋ ಆಶ್ರಮದಿಂದ ಅನತಿದೂರದಲ್ಲಿಯೇ ವೃಂದಾವನದಲ್ಲಿರಿಸಿ ಅಜರಾಮರಗೊಳಿಸುತ್ತಾರೆ.

ಏನಿದರ ಮರ್ಮ? ಯಾಕೀ ತಾರತಮ್ಯ? ಚಿಂತಿಸೋಣ…

ಬದುಕಿನುದ್ದಕ್ಕೂ ಪರೋಪಕಾರ ಮಾಡುತ್ತಲೇ ಇರುವವರು ಜಗತ್ತಿನಲ್ಲಿ ಹಲವರು ಸಿಗಬಹುದು.
ಸಾವಿನಲ್ಲೂ ಪರೋಪಕಾರವನ್ನು ಮಾಡುವವರು ಕೆಲವರು ಮಾತ್ರ ಸಿಕ್ಕಿಯಾರು.

ಆದರೆ ಸಾವಿನ ನಂತರವೂ ಜೀವ ಕೋಟಿಗಳ ಕಲ್ಯಾಣವನ್ನು ಸಾಧಿಸುತ್ತಲೇ ಇರುವವರು ಅತ್ಯಂತ ವಿರಳ.
ಇವರೇ ಸಂತರು – ದೈವಸ್ವರೂಪಿಗಳು.

ಸಂತರ ಶರೀರ ದೇವಾಲಯಕ್ಕೆ ಸಮಾನ.
ಗಾಳಿ ಎಲ್ಲೆಡೆ ಇದ್ದರೂ ಪಂಖ (Fan) ಇರುವಲ್ಲಿ ವಿಶೇಷವಾಗಿ ಪ್ರಕಟವಾಗುವಂತೆ…
ತಂತಿಗಳಲ್ಲಿ ವಿದ್ಯುತ್ ಹರಿಯುತ್ತಿದ್ದರೂ ವಿದ್ಯುದ್ದೀಪದೊಳಗಿನಿಂದ ಮಾತ್ರವೇ ಅದುಬೆಳಗಿ ಬರುವಂತೆ…
ಪರಮಾತ್ಮನೆಲ್ಲೆಡೆ ಇದ್ದರೂ ಅನುಗ್ರಹವೀಯಲು ಮಾಧ್ಯಮವಾಗಿ ಮಾಡಿಕೊಳ್ಳುವುದು ಸಂತರ ಶರೀರವನ್ನೇ..!
ತಿಳಿಯಾದ, ತೆರೆಯಿಲ್ಲದ ಸರೋವರದಲ್ಲಿ ಸೂರ್ಯನ ಪ್ರತಿಬಿಂಬ ಸ್ಪಷ್ಟವಾಗಿ ಮೂಡುವುದೇ ಹೊರತು – ಕಲುಷಿತವಾದ ಉಲ್ಲೋಲಕಲ್ಲೋಲವಾದ ಜಲರಾಶಿಯಲ್ಲಿ ಅಲ್ಲ, ಅಲ್ಲವೇ?

ಸಂತರ ಶರೀರವೆಂಬುದು ಮಹಾಯೋಗಾಲಯವಿದ್ದಂತೆ.

ಅದೆಷ್ಟು ಮಹಾ ಸಾಧನೆಗಳು..!!
ಅದೆಷ್ಟು ಮಹಾ ದರ್ಶನಗಳು..!!

ಅದೆಷ್ಟು ದಿವ್ಯ ಶಕ್ತಿಗಳು ಆ ದಿವ್ಯ ಮಂಗಲ ವಿಗ್ರಹದಲ್ಲಿ ಹರಿದಾಡುತ್ತವೆ..!!!?
ಸುಟ್ಟುಬಿಡಬಹುದೇ ಇಂತಹಾ ಶರೀರವನ್ನು..?!!

ಸೃಷ್ಟಿಯ ಎರಡು ನಿಯಮಗಳನ್ನು ನೆನಪಿಸಿಕೊಳ್ಳೋಣ,
1. ಯಾವುದೇ ವಸ್ತುವಿನ ಸಾಮೀಪ್ಯ – ಸಂಪರ್ಕಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ.
ಹಿಮಾಚಲದ ಹತ್ತಿರ ಹೋಗುತ್ತಿದ್ದಂತೆಯೇ ಚಳಿ ಎನಿಸುವ ಹಾಗೆ…
೨. ಸಂಪರ್ಕವೇರ್ಪಡುತ್ತಿದ್ದಂತೆಯೇ ಶಕ್ತಿಯು ಹೆಚ್ಚು ಇರುವಲ್ಲಿಂದ ಕಡಿಮೆ ಇರುವಲ್ಲಿಗೆ ಹರಿಯುತ್ತದೆ.
ಹೆಚ್ಚು ರೇತಕ(Voltage)ವಿದ್ಯುತ್ ಕಡಿಮೆ ರೇತಕದ  ಎಡೆಗೆ ಹರಿದಂತೆ

ಇದು ನಿಜವೇ ಆಗಿದ್ದಲ್ಲಿ, ಸಂತರಿಗೆ ಸಹಜವೆನಿಸಿದ ಪರಮಾತ್ಮಸಮಾಗಮದ ಪ್ರಭಾವ ಆ ಶರೀರದ ಮೇಲೆ ಎಷ್ಟಾಗಿರಹುದೆಂದು ಅಳೆಯಲು ಸಾಧ್ಯವೇ…?
ಸಿಂಧುವಿನಲ್ಲಿ ಒಂದಾಗುವ ಬಿಂದುವಿನಂತೆ ಸಂತ ಭಗವಂತನಲ್ಲಿ ಒಂದಾಗಿ ಆನಂದಿಸುವಾಗ ಅದೆಂಥ ಮಹಾ ಶಕ್ತಿಯು ಭಗವಂತನಿಂದ ಸಂತನೆಡೆಗೆ ಹರಿದಿರಬಹುದೆಂದು ಊಹಿಸಲು ಸಾಧ್ಯವೇ..!!?
ಇಂತಹ ಶರೀವನ್ನು ಕಾಪಿಟ್ಟುಕೊಳ್ಳಬೇಡವೇ..?

ಮೃತ್ಯುವಿನಲ್ಲಿಯೇ ಅಮೃತತ್ತ್ವವನ್ನು ಕಂಡುಕೊಳ್ಳುವಂತಹ ಸಂತನ ಶರೀರವು ಅಜರಾಮರಗೊಳ್ಳುವ ಸ್ಥಾನವೇ ವೃಂದಾವನ.
’ವೃಂದ’ವೆಂದರೆ ಸಮೂಹ. ’ಅವನ’ ಎಂದರೆ ರಕ್ಷಣೆ.
ಸಂತನೊಬ್ಬ ಸಾವಿನ ನಂತರವೂ ಭಕ್ತ ಸಮೂಹವನ್ನು ಶರೀರ ಮಾತ್ರದಿಂದಲೇ ಪೊರೆಯುವ ಸ್ಥಾನ – ಅದುವೇ ವೃಂದಾವನ.

ಬದುಕು ಪರಿಪೂರ್ಣವೆನಿಸಬೇಕಾದರೆ, ಸಾರ್ಥಕವೆನಿಸಬೇಕಾದರೆ ಕಣ್ಣು ಕೊಟ್ಟವನನ್ನು -ಭಗವಂತನನ್ನು- ಕಾಣಬೇಕು.
ಅದು ಸಾಧ್ಯವಾಗದಿದ್ದರೆ…???
ಭಗವಂತನನ್ನು ಕಂಡ ಸಂತರನ್ನು ಕಾಣಬೇಕು.

ಸಂತ ಭಗವಂತನನ್ನು ಸೇರಿದ ಮೇಲೆ…?
ಆತ ಭುವಿಯಲ್ಲಿ ಬಿಟ್ಟು ಹೋಗುವ ಪಾರ್ಥಿವ ಶರೀರವೇ ಆ ಕಾರ್ಯವನ್ನು ಮುಂದುವರೆಸುತ್ತದೆ. ಭಗವಂತನ ಪ್ರಭಾವ ಸಂತನಮೇಲೆ, ಸಂತನ ಪ್ರಭಾವ ಆತ ಧರಿಸಿದ ಶರೀರದಮೇಲೆ,  ಸಂಪರ್ಕ -ಸಾನ್ನಿಧ್ಯ ಮಾತ್ರದಿಂದಲೇ ಆ ಶರೀರದ ಪ್ರಭಾವ ನಮ್ಮಂಥವರಮೇಲೆ ಆಗಿ ಮಾನವತೆಯಿಂದ ಮಾಧವತೆಗೆ ನಮ್ಮನ್ನು ಏರಿಸಿ ಬಿಡುವುದಲ್ಲವೇ !!?

ಸಂತನೊಬ್ಬ ಭೂಮಿಗೆ ಬರುವಾಗ ಅಥವಾ ಭೂಮಿಯನ್ನು ಬಿಟ್ಟು ಹೋಗುವಾಗ ಕಾಲ ದೇಶಗಳಮೇಲೆ ಬೀರುವ ಪರಿಣಾಮ ಅಗಾಧವಾದದ್ದು!
ಆದುದರಿಂದಲೇ ಸಂತನ ಜನ್ಮ ಭೂಮಿ ತೀರ್ಥಕ್ಷೇತ್ರವೆನಿಸುತ್ತದೆ. ಅಂಥವರ ಜನ್ಮದಿನವನ್ನು “ಜಯಂತಿ” ಎಂದು ನಾವು ಆಚರಿಸುತ್ತೇವೆ.
ಸಂತ ಚೇತನ ವಿಶ್ವ ಚೇತನದಲ್ಲಿ ವಿಲೀನವಾದ ದಿನ – ಅದು ’ಅಮೃತ ತಿಥಿ’, ಅದನ್ನೇ “ಆರಾಧನೆ” ಎಂದು ಆಚರಿಸುತ್ತೇವೆ.  ಸಾಮಾನ್ಯರ ವಿಷಯದಲ್ಲಿ ವ್ಯವಹರಿಸುವಂತೆ ’ಮೃತ ತಿಥಿ’ಯಲ್ಲ.
ಶ್ರಾದ್ಧ ಮಾಡುವುದು ಗತಿಸಿದವನ ಶ್ರೇಯಸ್ಸಿಗಾಗಿ, ಆದರೆ ಆರಾಧನೆ ಹಾಗಲ್ಲ, ನಮ್ಮ ಶ್ರೇಯಸ್ಸಿಗಾಗಿ. ಸಂತರು ಆಪ್ತ ಕಾಮರು,  ಪೂರ್ಣತೃಪ್ತರು. ಅಂಥಹವರಿಗೆ ನಾವು ಕೊಡಲು ಏನಿದೆ?

ಅಂತರಂಗದ ಕಣ್ಣು ತೆರೆದು ಸಂತರ ಪ್ರಭಾವವಿರುವ ಕಾಲ-ದೇಶಗಳನ್ನು ಹುಡುಕೋಣ….
ಹೃದಯದ ಬಾಗಿಲು ತೆಗೆದು ಸಂತರ ಸತ್ಯ, ಸತ್ವ ಸಾಗರದಿಂದ ಮೊಗೆಮೊಗೆದು ತುಂಬಿಕೊಳ್ಳೋಣ..

(ನಿನ್ನೆ ತಾನೇ ನೆರವೇರಿದ ಬ್ರಹ್ಮಲೀನ ಜಗದ್ಗುರು ಶಂಕರಾಚಾರ್ಯ ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಹನ್ನೊಂದನೇ ವಾರ್ಷಿಕ ಆರಾಧನೆಯ ಸಂದರ್ಭದ ಲೇಖನ)

Facebook Comments