LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಹೇ ರಾಮ..! ನೀ ಸರ್ವೋತ್ತಮ..!!

Author: ; Published On: ಗುರುವಾರ, ಜೂನ್ 3rd, 2010;

Switch to language: ಕನ್ನಡ | English | हिंदी         Shortlink:

ಹರೇರಾಮ


ರಕ್ಷಿತಾ ಜೀವಲೋಕಸ್ಯ :-

ಕುಟುಂಬಿಯೊಬ್ಬ ತನ್ನ ಕುಟುಂಬವನ್ನು ಪಾಲಿಸುತ್ತಾನೆ..

ಈತನೋ ‘ವಿಶ್ವಕುಟುಂಬಿ’…!!

ತಾನು..

ತನ್ನವರು…

ತನ್ನೂರು…

ತನ್ನ ಜಾತಿ…

ತನ್ನದೇಶ…

ಸಕಲ ಮಾನವಕುಲ….

ಈ ಸೀಮೆಗಳನ್ನೆಲ್ಲ ದಾಟಿ ಸಕಲ ಜೀವಿಗಳ ಸಂರಕ್ಷಕನಾದವನು..

ಇಲ್ಲೊಂದು ಶಂಕೆ…

ಸಕಲ ಜೀವ ಸಂರಕ್ಷಕನೆಂದ ಮೇಲೆ ದುಷ್ಟರಿಗೂ ರಕ್ಷಕನೆಂದಂತಾಗಲಿಲ್ಲವೇ..?

ಖಂಡಿತವಾಗಿಯೂ ಹೌದು..!!

ದುಷ್ಟತನವೆಂಬುದೊಂದು ಖಾಯಿಲೆ…!

ಶಿಕ್ಷೆ ಯೆಂಬ ಚಿಕಿತ್ಸೆಯನ್ನು ಕೊಟ್ಟು ಆ ಖಾಯಿಲೆಯನ್ನು ಗುಣಪಡಿಸಬೇಕಾಗುತ್ತದೆ..

ಗುಣವಾಗದ ದೋಷವಾಗಿದ್ದಾಗ ಕೆಲವೊಮ್ಮೆ ಶಸ್ತ್ರಚಿಕಿತ್ಸೆಯನ್ನೂ ಮಾಡಬೇಕಾಗುತ್ತದೆ..

ಮಿತಿಮೀರಿದ ದೋಷಗಳಿಂದ ಜನ್ಮವೇ ಕಳಂಕಿತವಾದಾಗ ಶಸ್ತ್ರಚಿಕಿತ್ಸೆಯಿಂದ ದೇಹವನ್ನೇ ಕಳೆದು ಜೀವಕ್ಕೆ ಒಳಿತು ಮಾಡಬೇಕಾಗುತ್ತದೆ..!!
ಆ ಶಿಕ್ಷೆ  ಶಿಕ್ಷೆಯಲ್ಲ…ಅದು ರಕ್ಷೆ…

ದೇಹ ನಶ್ವರ ಜೀವ ಶಾಶ್ವತ..!

ಧರ್ಮಸ್ಯ ಪರಿರಕ್ಷಿತಾ

ಧರ್ಮವೆಂದರೆ ಧಾರಕ ಶಕ್ತಿ…

ಬದುಕು ನಿಂತಿರುವುದೇ ಧರ್ಮದ ಮೇಲೆ..

ಬ್ರಹ್ಮಾಂಡ ಭವನದ ಮೂಲಾಧಾರ ಶಿಲೆ ಅದು..!!

ಜೀವಿಗಳು ಎಲ್ಲೆಲ್ಲಿ ಸುಖಪಡುವವೋ ಅಲ್ಲಲ್ಲಿ ಹಿನ್ನೆಲೆಯಲ್ಲೆಲ್ಲೋ ಧರ್ಮವಿದ್ದೇ ಇದೆ..!

ಧರ್ಮದ ಉಳಿವಿನಲ್ಲಿಯೇ ಸುಖದ ಉಳಿವು..

ಧರ್ಮದ ಉಳಿವಿನಲ್ಲಿಯೇ ಜೀವಗಳ ಉಳಿವು..

ಧರ್ಮದ ಉಳಿವಿನಲ್ಲಿಯೇ ವಿಶ್ವದ ಉಳಿವು…

ಧರ್ಮವನ್ನುಳಿಸುವ ಮಹೋನ್ನತ ಉದ್ದೇಶಕ್ಕಾಗಿ ತನ್ನೆಲ್ಲವನ್ನೂ ತೆತ್ತವನವನು..

ರಕ್ಷಿತಾ ಸ್ವಸ್ಯ ಧರ್ಮಸ್ಯ

ಇತರರಿಗೆ ಧರ್ಮವನ್ನು ಹೇಳುವಾಗ ಪಂಡಿತರಲ್ಲದವರಾರು..?

ತಮ್ಮ ಬದುಕಿನಲ್ಲಿಯೇ  ಧರ್ಮವನ್ನು ಅನುಷ್ಠಾನಿಸುವಾಗ ಮಹಾಮುನಿಗಳೂ ಅಜ್ಞಾನಿಗಳಂತಾಗುವುದುಂಟು..

ಆದರೆ ರಾಮ ಹಾಗಲ್ಲ..

ಆತನು ಯಾವ ಧರ್ಮದ ರಕ್ಷಣೆಯ ಸಂದೇಶವನ್ನು ಜಗತ್ತಿಗೆ ನೀಡಿದನೋ..

ಸಂಕಟಪರಂಪರೆಯ ಮಧ್ಯದಲ್ಲಿಯೂ ತಾನು ಆ ಧರ್ಮವನ್ನು ಬಿಡಲಿಲ್ಲ..

ಸ್ವಜನಸ್ಯ ರಕ್ಷಿತಾ

ಸಕಲರನ್ನೂ ರಕ್ಷಿಸುವನೆಂದಮೇಲೆ ತನ್ನವರನ್ನು ರಕ್ಷಿಸುವನೆಂದು ಬೇರೆ ಹೇಳಬೇಕೇ..?

ತನ್ನೊಡಲ ಅಂಗಾಂಗಗಳಿಗಿಂತ ಮಿಗಿಲಾದ ಮಮತೆಯಿಂದ ತನ್ನವರನ್ನು ಪೊರೆಯುತ್ತಿದ್ದನವನು..

ವೇದ ವೇದಾಂಗ ತತ್ವಜ್ಞ

ಋಗ್ವೇದ, ಯಜುರ್ವೇದ, ಸಾಮವೇದ , ಅಥರ್ವವೇದ ಎಂಬ ನಾಲ್ಕು ವೇದಗಳು,

ಆಯುರ್ವೇದ,ಧನುರ್ವೇದ, ಗಾಂಧರ್ವವೇದ ಮತ್ತು ಅರ್ಥಶಾಸ್ತ್ರವೆಂಬ ನಾಲ್ಕು ಉಪವೇದಗಳು,

ಶಿಕ್ಷಾ , ವ್ಯಾಕರಣ, ಛಂಧಸ್ಸು, ನಿರುಕ್ತ, ಜ್ಯೌತಿಷ ಮತ್ತು ಕಲ್ಪಗಳೆಂಬ ಆರು ವೇದಾಂಗಗಳು..

ಚಿತ್ರ – ಶಿಲ್ಪ ಮೊದಲಾದ ಅರವತ್ನಾಲ್ಕು ಕಲೆಗಳು….

ಇವೇ ಮೊದಲಾದ ಆರ್ಷೇಯವಾದ ಸಕಲ ವಿದ್ಯೆಗಳ ಸಾರ-ಮರ್ಮಗಳನ್ನು ಆತನು  ಅರಿತಿದ್ದನು.

.

ಧನುರ್ವೇದೇ ನಿಷ್ಠಿತಃ

ಎಲ್ಲಾ ವಿದ್ಯೆಗಳನ್ನು ಬಲ್ಲವನಾದರೂ ಕ್ಷಾತ್ರೋಚಿತವಾದ ಧನುರ್ವೇದದಲ್ಲಿ ಆತನಿಗೆ ಅಸಾಧಾರಣವಾದ ಪರಿಣಿತಿ ಇದ್ದಿತು…

ಓಂಕಾರವೇ ಧನುಸ್ಸು…

ಜೀವವೇ ಬಾಣ..

ಪರಬ್ರಹ್ಮವೇ ಲಕ್ಷ್ಯ..

ಪ್ರಮಾದವಿಲ್ಲದೆ ಪ್ರಯೋಗಿಸಿದರೆ ಅದು ಕೇವಲ ಬಿಲ್ವಿದ್ಯೆ ಆಗಿರದೇ ಧನುರ್ವೇದವೇ ಆದೀತು..!

ಯುದ್ಧವೂ ಉಪಾಸನೆಯಾದೀತು..!

ಮೃತ್ಯುವೂ ಮೋಕ್ಷವಾದೀತು..!!

ಸರ್ವಶಾಸ್ತ್ರಾರ್ಥ ತತ್ವಜ್ಞ :-

ಈಶ್ವರನ ಶಾಸನಗಳಿಗೆ ಶಾಸ್ತ್ರವೆಂದು ಹೆಸರು ..

ಜೀವಿಗಳನ್ನು ಸೃಷ್ಟಿಸಿದಮೇಲೆ ಅವುಗಳು ಚೆನ್ನಾಗಿ ಬದುಕಲೆಂದು,

ಬದುಕಿನ ಪರಮಗಮ್ಯವನ್ನು ತಲುಪಲೆಂದು.. ಪರಮ ಕಾರುಣಿಕನಾದ ಪ್ರಭುವು ಕೆಲವು ನಿಯಮಗಳನ್ನು ರೂಪಿಸಿ,

ಅವುಗಳನ್ನು ಮನು-ಮುನಿಗಳ ಮುಖದಿಂದ ಹೊರಪಡಿಸಿದನು..

ಅವುಗಳೇ ಶಾಸ್ತ್ರಗಳು..

ಮಾತಾಪಿತೃಸಹಸ್ರೇಭ್ಯೋ ವತ್ಸಲತರಂ ಶಾಸ್ತ್ರಮ್” |

ಶ್ರೀಶಂಕರಾಚಾರ್ಯರು ಹೇಳುವಂತೆ ತಾಯ್ತಂದೆಗಳ ಮಮತೆಯ ಸಹಸ್ರಗುಣ ಮಿಗಿಲಾದ ಮಮತೆ ಶಾಸ್ತ್ರಗಳದ್ದು..!!

ಸೃಷ್ಟಿ ನಿಯಮಗಳ ಅರ್ಥವೇನು..? ತತ್ವವೇನು..? ಎಂಬುದನ್ನು ಶ್ರೀರಾಮನು ಚೆನ್ನಾಗಿತಿಳಿದಿದ್ದನು..!

ಸ್ಮೃತಿಮಾನ್

ಜೀವಿ ತನ್ನ ಜೀವನದ ಪ್ರತಿಕ್ಷಣದಲ್ಲಿಯೂ ಬಗೆಬಗೆಯ ಅನುಭವಗಳನ್ನು ಪಡೆದುಕೊಳ್ಳುತ್ತಲೇ ಇರುತ್ತಾನೆ.

ಆದರೆ ಕಾಲವು ಮುಂದೆ ಸರಿದಂತೆ ಅವುಗಳೆಲ್ಲವೂ  ಮರೆವಿನ ಮರೆಯಲ್ಲಿ ಕಳೆದೇ ಹೋಗಿಬಿಡುತ್ತವೆ…!!

ಬದುಕಿನ ಅನೇಕ ಅನುಭವಗಳು ಅಮೂಲ್ಯ ಆಸ್ತಿಗಳು..!

ಜೋಪಾನವಾಗಿ ಕಾಪಿಡಬೇಕಾದ ಭವಿಷ್ಯದ ಸೋಪಾನಗಳು..!

ಅನುಭವಗಳು ಅಳಿಯುವುದಕ್ಕೆ ಹೆಸರು ಮರೆವು….

ಅವು ಉಳಿದರೆ ಅದೇ ನೆನಪು..

ಭವಿಷ್ಯತ್ತಿನ ಭವನಕ್ಕೆ ಭಿತ್ತಿಯಾಗಬಲ್ಲ ಭವ್ಯಭಾವಗಳನ್ನು ಹೃದಯಕೋಶದಲ್ಲಿ ಶಾಶ್ವತವಾಗಿ ಕಾಪಿಡಲು ಬೇಕಾದ ಸ್ಮೃತಿಶಕ್ತಿಯುಳ್ಳವನಾಗಿದ್ದವನು ಶ್ರೀರಾಮ..

ಪ್ರತಿಭಾನವಾನ್

ವಿಷಯವು ಅರ್ಥವಾಗುವುದಕ್ಕೆ ಗ್ರಹಣ’ವೆಂದು ಹೆಸರು….

ಅರ್ಥವಾದ ವಿಷಯವು ಅಂತರಂಗದಲ್ಲಿ   ಉಳಿದುಕೊಳ್ಳುವುದಕ್ಕೆಧಾರಣಎಂದು ಹೆಸರು…

ಅರ್ಥವಾದುದು ಮತ್ತೆ ವ್ಯಕ್ತವಾಗುವುದಕ್ಕೆಸ್ಮರಣಎಂದು ಹೆಸರು..

ಕೇಳಿದ, ಕೇಳದ ವಿಷಯಗಳು ಅಗತ್ಯ ಸಮಯದಲ್ಲಿ ಮನಸ್ಸಿಗೆ ಬರುವುದಕ್ಕೆ ‘ಪ್ರತಿಭಾನ’ವೆಂದು ಹೆಸರು..!!

ಇದನ್ನೇಸಮಯಸ್ಫೂರ್ತಿಎಂತಲೂ ಕರೆಯುತ್ತಾರೆ..

ಈ ಗುಣಗಳು ಶ್ರೀರಾಮನಲ್ಲಿ ಧಾರಾಳವಾಗಿದ್ದವು..

ಸರ್ವಲೋಕ ಪ್ರಿಯ

ಕೆಲವರಿಗೆ ಹಲವು ಕಾಲ ಪ್ರಿಯರಾಗಿರಬಹುದು,

ಹಲವರಿಗೆ ಕೆಲವು ಕಾಲ ಪ್ರಿಯರಾಗಿರಬಹುದು,

ಹಲವರಿಗೆ ಹಲವು ಕಾಲ ಪ್ರಿಯರಾಗಿರುವುದು ಸಾಧಾರಣರಿಗೆ ಸಾಧ್ಯವಲ್ಲ ….!

ಎಲ್ಲರಿಗೂ ಎಲ್ಲ ಕಾಲದಲ್ಲಿಯೂ ಪ್ರೀತಿಯನ್ನು ಕೊಟ್ಟು ಪ್ರೀತಿಯನ್ನು ತೆಗೆದುಕೊಳ್ಳಬೇಕೆಂದರೆ,

ಅದು ಮನುಷ್ಯಮಾತ್ರರಿಗೆ ಮೀರಿದ ಮಾತು..!

ಪ್ರೀತಿಯೇ ಮನುಷ್ಯಾಕಾರವಾಗಿ ಬಂದರೆ ಅದು ಸಾಧ್ಯವೇನೋ..?

ಹೀಗಿದ್ದನು ಶ್ರೀರಾಮ..!

ಸಾಧುಃ

ಭುವಿಗೆ ಹಗಲು – ರಾತ್ರಿಗಳೆಂಬ ಎರಡು ಪಾಶ್ವ೯ಗಳಿದ್ದಂತೆ…

ಬೆಂಕಿಗೆ ಬಿಸಿ-ಬೆಳಕುಗಳೆಂಬ ಎರದು ಪರಿಣಾಮಗಳಿದ್ದಂತೆ..

ಬದುಕಿಗೆ ಒಳಿತು – ಕೆಡುಕುಗಳೆಂಬ ಎರಡು ಮುಖಗಳಿವೆ..

ಮನುಷ್ಯನಲ್ಲಿ ಕೆಡುಕು ಹೆಚ್ಚಾದರೆ ಆತ ನರರಾಕ್ಷಸ..

ಒಳಿತು – ಕೆಡುಕುಗಳು ಸಮನಾದರೆ ಹುಲುಮಾನವ…

ಒಳಿತೇ ಮಿಗಿಲಾದರೆ ದೇವಮಾನವ…!!

ವಿಶ್ವದ ಒಳಿತೆಲ್ಲವನ್ನೂ ಒಂದೆಡೆ  ರಾಶಿ ಹಾಕಿದಂತಿದ್ದನು ಶ್ರೀರಾಮ..

ಅದೀನಾತ್ಮಾ

ಆಪತ್ತುಗಳು ಬಂದಾಗಲೇ ವ್ಯಕ್ತಿಯ ಅಂತಃಸತ್ವವೇನೆಂಬುದು ಪ್ರಕಟವಾಗುವುದು..

ಆಪತ್ತುಗಳ ಆಕ್ರಮಣವಾದಾಗ ಹಲವರು ದೈನ್ಯ ತಾಳುವರು..

ಕೆಲವರು ಧೈರ್ಯ ತಾಳುವರು..

ದೀನನಲ್ಲ …!! ಧೀರರಲ್ಲಿ ಧೀರ ಶ್ರೀರಾಮ.. !!!

ವಿಚಕ್ಷಣ :-

ಕ್ಲಿಷ್ಟದಲ್ಲಿ ಕ್ಲಿಷ್ಟವೆನಿಸುವ ಕರ್ಮಗಳನ್ನು ಅತ್ಯಂತ  ಸರಳವಾಗಿ ಮಾಡಿ ಮುಗಿಸಬಲ್ಲ ಕುಶಲತೆಯುಳ್ಳವನು…

ಸತ್ಪುರುಷರು ನದಿಗಳಂತಾದರೆ ಶ್ರೀರಾಮನು ಸಮುದ್ರದಂತೆ..

ಜಗದ ಎಲ್ಲೆಡೆಗಳಿಂದ ನದಿಗಳು ಸಮುದ್ರವನ್ನೇ ಲಕ್ಷ್ಯವಾಗಿರಿಸಿಕೊಂಡು ನಿರಂತರ ಹರಿಯುವಂತೆ..

ಸತ್ಪುರುಷರೆಲ್ಲರ ಮನೋನದಿಗಳು ಸತತವಾಗಿ ರಾಮಸಮುದ್ರದೆಡೆಗೆ ಹರಿಯುತ್ತಿದ್ದವು..

ಒಳಿತು ಹಿರಿದಾದ ಒಳಿತಿನೆಡೆಗೆ ಆಕರ್ಷಿತವಾಗುವುದು,ಕೆಡುಕು ಕೆಟ್ಟಕೆಡುಕಿನೆಡೆಗೆ ಸೆಳೆಯಲ್ಪಡುವುದು ಸೃಷ್ಟಿಸಹಜ..

ಆರ್ಯ

ಸರ್ವಪೂಜ್ಯನಾದವನು…

ಸರ್ವಸಮ :-

ಬೆಳಕೀಯುವ ಸೂರ್ಯನಿಗೆ ಜಾತಿ-ವೃತ್ತಿ-ಗುಣಗಳ ತಾರತಮ್ಯವುಂಟೇ..?

ಹಾಗೆಯೇ ಸರ್ವಸಮನವನು..

ನಮ್ಮ ಮನೆಯ ಕಿಟಕಿ ಚಿಕ್ಕದಾಗಿದ್ದರೆ ಅದಕ್ಕೆ ಸೂರ್ಯ ಹೊಣೆಗಾರನಾಗುವುದುಂಟೇ..?

ಪ್ರೇಮ ಕಾರುಣ್ಯಗಳ ಸಾಗರ ಶ್ರೀರಾಮ..

ಅವರವರ ಹೃದಯದ ಪಾತ್ರೆಗಳ ಹಿರಿತನ – ಕಿರಿತನಗಳಿಗೆ ತಕ್ಕಂತೆ ಜೀವಿಗಳು ಅವನ ಪ್ರೇಮ – ಕರುಣೆಗಳನ್ನು ಮೊಗೆದರು..

ಸದೈವಪ್ರಿಯದರ್ಶನಃ :-

“ತದೇವ ರೂಪಂ ರಮಣೀಯತಾಯಾಃ ಕ್ಷಣೇ ಕ್ಷಣೇ ಯತ್ ನವತಾಂ ಉಪೈತಿ” ||

ಕ್ಷಣ ಕ್ಷಣವೂ ಯಾವುದು ಹೊಚ್ಚ ಹೊಸದಾಗುತ್ತಲೇ ಇರುವುದೋ ಅದೇ ಅಲ್ಲವೇ ರಮಣೀಯ ರೂಪವೆಂದರೆ..?

ಪೂರ್ಣ ಚಂದ್ರನನ್ನದೆಷ್ಟು ಬಾರಿ ನೋಡಿದರೂ ಬೇಸರ ಬರುವುದುಂಟೇ.?

ಪೂರ್ಣಚಂದ್ರನಿಗಿಂತ ಮಿಗಿಲು ನಮ್ಮ ರಾಮಚಂದ್ರ..!

ಅದೆಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುವ, ನೋಡಿ…ನೋಡಿ…ನೋಡಿದಷ್ಟೂ

ನವನವೀನ ಸುಂದರವಾಗಿಯೇ ತೋರುವ ಅದ್ಭುತ ವಿಸ್ಮಯದರ್ಶನನವನು..!

ಸಮುದ್ರ ಇವ ಗಾಂಭೀರ್ಯೇ :-

ಸಾಗರದಂತೆ ಗಂಭೀರ..

ಸಾಗರವನ್ನು ನೋಡದವರು ಯಾರೂ ಇಲ್ಲ..

ಸಾಗರದ ಆಳ – ಅಗಲಗಳನ್ನು ತಿಳಿದವರೂ ಯಾರೂ ಇಲ್ಲ..!!

ರಾಮನ ಹೆಸರನ್ನು ಕೇಳದವರಾರು..?

ರಾಮನ ಆಳವನ್ನು ಬಲ್ಲವರಾರು..!!?

ಧೈರ್ಯೇಣ ಹಿಮವಾನ್ ಇವ :-

ಧೈರ್ಯದಲ್ಲಿ ಹಿಮಾಲಯದಂತೆ..!

ಬಿರುಗಾಳಿ ಬೀಸಲಿ, ಸಿಡಿಲುಗಳು ಬಡಿಯಲಿ, ಭೂಮಿಯೇ ನಡುಗಲಿ,

ಹಿಮಾಲಯ ಚಲಿಸುವುದಂಟೇ..?

ಇದಲ್ಲವೇ ಧೈರ್ಯವೆಂದರೆ..?

ರಾಮನ ಬದುಕಿನಲ್ಲಿ ಬೀಸಿದ ಬಿರುಗಾಳಿಗಳಿಗೆ ಲೆಖ್ಖವೇ ಇಲ್ಲ ,ಆದರೆ ಆತನೆಂದೂ ತನ್ನ ನೆಲೆ-ನಿಲುವುಗಳಿಂದ ಚಲಿಸಲಿಲ್ಲ..!

ವಿಷ್ಣುವಿನಂತೆ ವೀರ

ಸಾಟಿಯಿಲ್ಲದ ಪರಾಕ್ರಮ ರಾಮನಲ್ಲಿದ್ದರೂ ಅದು ಎಂದಿಗೂ ದುರುಪಯೋಗವಾಗಲಿಲ್ಲ…

ಆತ್ಮರಕ್ಷಣೆಗೆ, ಆತ್ಮೀಯರ ರಕ್ಷಣೆಗೆ, ಅತ್ಮಬಂಧುಗಳ ರಕ್ಷಣೆಗೆ ಅದು ವಿನಿಯೋಗವಾಯಿತು..!

ಪರಾಕ್ರಮ ರಾವಣನಲ್ಲಿಯೂ ಇತ್ತು.

ಆದರೆ ಅದು ಬಳಕೆಯಾದದ್ದು ತನ್ನ ಸ್ವಾರ್ಥಕ್ಕಾಗಿ, ವಿಶ್ವವನ್ನು ಹಾಳುಗೆಡವಲು..

ಒಳ್ಳೆಯವರನ್ನು ಗೋಳು ಹೊಯ್ದುಕೊಳ್ಳಲು…!!

ಕಾಲಾಗ್ನಿ ಸದೃಶಃ ಕ್ರೋಧೇ :-

ಪಂಚಭೂತಗಳು ಪ್ರಪಂಚವನ್ನು ತಾಯಿಯಂತೆ ಪಾಲಿಸುತ್ತವೆ..

ನಮ್ಮೆಲ್ಲರ ಬದುಕಿಗೆ ಆಶ್ರಯವಿತ್ತಿರುವ ಭೂಮಿ- ಅದು ತಾಯಿಯ ಮಡಿಲು..

ನಮ್ಮೆಲ್ಲರ ದಾಹವನ್ನು ತಣಿಸುವ ಜಲ- ಅದು ತಾಯಿಯ ಹಾಲು.

ಅಮ್ಮನಾಗಿ ಅಡಿಗೆಮನೆಯನ್ನು ಪ್ರವೇಶಿಸಿ ನಮಗಾಗಿ ಬಿಸಿ ಬಿಸಿ ಅನ್ನ ಸಿದ್ಧಪಡಿಸುವ ಅಗ್ನಿ- ಅದು ಅಮ್ಮನ ಬೆಚ್ಚಗಿನ ಅಪ್ಪುಗೆ..

ಇವುಗಳು ನಮ್ಮನ್ನು ಪಾಲಿಸುತ್ತವೆ – ಪೋಷಿಸುತ್ತವೆ..

ನಮ್ಮ ತಪ್ಪುಗಳನ್ನು ಮನ್ನಿಸುತ್ತವೆ..

ಆದರೆ ನಮ್ಮ ತಪ್ಪುಗಳು ಮಿತಿಮೀರಿದಾಗ ಕುಪಿತಗೊಂಡು ದಂಡಿಸುತ್ತವೆ..

ಭೂಕಂಪವಾಗುವುದುಂಟು..

ಪ್ರವಾಹವೇರಿ ಬರುವುದುಂಟು..

ವಿಶ್ವಪ್ರಳಯ ಕಾಲದಲ್ಲಿ ಮಹಾಗ್ನಿಯೊಂದು ಆವಿರ್ಭವಿಸಿ ಸಕಲವನ್ನೂ ಸುಟ್ಟುರುಹುವುದುಂಟು..

ಪಂಚಭೂತಗಳ ಈ ಸ್ವಭಾವವನ್ನು ಶ್ರೀರಾಮನಲ್ಲಿಯೂ ಕಾಣಬಹುದು…

ಉಪಕರಿಸುವಲ್ಲಿ-ಉಪಚರಿಸುವಲ್ಲಿ ತಾಯಿಗಿಂತ ಮಿಗಿಲವನು..

ತಪ್ಪು ಮಾಡಿದರೆ ತಾಯಿಯಂತೆ ಮನ್ನಿಸುವನು..

ಸಹಜವಾಗಿಯೇ ಶಾಂತ-ಮಧುರ ಸ್ವಭಾವ ಅವನದು..

ಅದು ಭಂಗಗೊಳ್ಳುವಂತೆ, ತಪ್ಪಿ ನಡೆದರೆ, ಆತ ಕ್ರುದ್ಧನಾದನಾದರೆ ಮತ್ತೆ ಪ್ರಳಯಕಾಲದ ಅಗ್ನಿಯೇ ಅವನು..!

ಮತ್ತೆ ಅವನೆದುರು ನಿಂತವರು ಭಸ್ಮೀಭೂತರಾಗಲು ಬೇಕಾಗುವುದು ಕ್ಷಣಗಳುಮಾತ್ರ..!

ಕ್ರೋಧದಲ್ಲಿ ಕಾಲಾಗ್ನಿ.. ಆದರೆ ಕ್ಷಮಯಾ ಧರಿತ್ರೀ.!.

ಕೋಪಿಷ್ಠರು ಕ್ಷಮಾಶೀಲರಾಗಿರುವುದಿಲ್ಲ..

ಕ್ಷಮಾಶೀಲರನೇಕರಲ್ಲಿ ಕೆಚ್ಚು ಇರುವುದೇ ಇಲ್ಲ..

ರಾಮನೆಂದರೆ ಉತ್ತರ-ದಕ್ಷಿಣ ಧ್ರುವ ಸಂಗಮ..

ಹಿಮ – ಸಿಡಿಲುಗಳ ಸಮನ್ವಯ..

ತ್ಯಾಗದಲ್ಲಿ ಕುಬೇರನಂತೆ

ಬ್ರಹ್ಮಾಂಡದಲ್ಲಿರುವ ಸಕಲಸಂಪತ್ತಿಗೂ ಕುಬೇರನೇ ಅಧಿಪತಿ..

ಹಾಗೆಂದ ಮಾತ್ರಕ್ಕೆ ಆತನೇನೂ ಸಂಪತ್ತೆಲ್ಲವನ್ನೂ ತನ್ನಮನೆಯಲ್ಲಿ ಗುಡ್ಡೆಹಾಕಿಕೊಂಡು ಕುಳಿತುಕೊಂಡಿರುವುದಿಲ್ಲ..

ಎಲ್ಲೆಲ್ಲಿ ಅದರ ಅಗತ್ಯವಿದೆಯೋ, ಯಾರು ಯಾರಿಗೆ ಅರ್ಹತೆಯಿದೆಯೋ ಅಲ್ಲಲ್ಲಿಗೆ  – ಅವರವರಿಗೆ ತನ್ನ ಸಂಪತ್ತನ್ನು ಹರಿಬಿಡುವವನವನು..

ಹಾಗಾಗಿ ಆತನನ್ನು ಧನೇಶನೆಂದು ಮಾತ್ರವಲ್ಲ ಧನದನೆಂದೂ ಕರೆದರು..(ಧನೇಶ = ಧನದ ಅಧಿಪತಿ, ಧನದ = ಧನವನ್ನು ವಿತರಿಸುವವನು)

ಸೀತಾಲಕ್ಷ್ಮಿಯ ಅರಸನಲ್ಲಿ ಎಲ್ಲ ಸದ್ಗುಣಗಳಿದ್ದರೂ, ಎಲ್ಲಾಬಗೆಯ ಸಂಪತ್ತುಗಳಿದ್ದರೂ ನಕ್ಷತ್ರಗಳ ಮಧ್ಯೆ ಚಂದ್ರನ ಹಾಗೆ ಅವುಗಳೆಲ್ಲವನ್ನೂ ಮೀರಿಸುವ ತ್ಯಾಗ ಎಂಬ ಮಹಾಗುಣವಿದ್ದಿತು..

ತನ್ನ ಬದುಕಿನುದ್ದಕ್ಕೂ ಆಗಾಗ ಆಗಾಗ ಶ್ರೀರಾಮ ವಿರಾಟ್ ಪುರುಷನಾಗಿ ಗೋಚರಿಸುವುದು ತನ್ನ ತ್ಯಾಗದಿಂದಾಗಿ..!

ಸತ್ಯ – ಧರ್ಮವೆಂಬ ಎರಡೇ ಎರಡು ಪದಗಳು ಭಾರತೀಯ ಸಂಸ್ಕೃತಿಯ ಸಾರಸರ್ವಸ್ವವನ್ನೂ ಪ್ರತಿಪಾದಿಸುತ್ತದೆ..

ಸತ್ಯವನ್ನು ಬಿಟ್ಟು ಧರ್ಮವಿರದು.. ಧರ್ಮವನ್ನು ಬಿಟ್ಟು ಸತ್ಯವಿರದು..

ಸತ್ಯವೆಂಬುದು ದೇವರ ಹೆಸರು..

||ಸತ್ಯಂ ಶಿವಂ ಸುಂದರಮ್ ||

ಧರ್ಮವೆಂದರೆ ದೇವನನ್ನು ಕಾಣಲು – ಪಡೆಯಲು ಬೇಕಾದ,ಅನಂತ ಜನ್ಮಗಳ ಸಾಧನೆಯಿಂದ ಮತ್ತು ದೈವಕೃಪೆಯಿಂದ ನಮ್ಮ ಮನೋಬುದ್ಧೀಂದ್ರಿಯ ಶರೀರಗಳಲ್ಲಿ ಏರ್ಪಡುವ ಅಪರೂಪದ ಒಂದುಸ್ಥಿತಿ..

ಸತ್ಯವೆಂದರೆ ಬದುಕಿನ ಗುರಿ..

ಧರ್ಮವೆಂದರೆ ಅದರ ದಾರಿ..

ಸತ್ಯವೆಂದರೆ ಬದುಕಿನ ತಿರುಳು..

ಧರ್ಮವೆಂದರೆ ಅದರ ಕವಚ..

ಸತ್ಯವೆಂಬುದು ದೇವಸ್ಥಾನ..

ಧರ್ಮವದರ ಸೋಪಾನ..

ಸತ್ಯವೆಂದರೆ ಸುಖದ ತುತ್ತ ತುದಿ..

ಧರ್ಮವೆಂದರೆ ಅದನ್ನು ಪಡೆದುಕೊಳ್ಳಲು ಅಳವಡಿಸಿಕೊಳ್ಳಬೇಕಾದ ಜೀವನ ವಿಧಾನ..

ಸತ್ಯವೇ ಜೀವಗಳು ತನ್ನನ್ನು ಪಡೆದುಕೊಳ್ಳಲಿ ‘ ಎಂಬ ಕರುಣೆಯಿಂದ ಧರ್ಮವಾಗಿ ಮಾರ್ಪಡುತ್ತದೆ..

ಧರ್ಮವೇ ನಮ್ಮಿಂದ ಪೂರ್ಣವಾಗಿ ಆಶ್ರಯಿಸಲ್ಪಟ್ಟಾಗ ಇನ್ನೊಂದು ಮೆಟ್ಟಿಲೇರಿ ಸತ್ಯವಾಗಿ ಬೆಳಗುತ್ತದೆ..

ಧರ್ಮವೆಂದರೆ ಅರುಣೋದಯ..

ಸತ್ಯವೆಂದರೆ ಸೂರ್ಯೋದಯ..

ಬರಿಗಣ್ಣಿಗೆ ಕಾಣದ ಆದರೆ ಅನುಭವಕ್ಕೆ ಬರುವ ಈ ಎರಡು ಜೀವನದ ಮೂಲಾಧಾರ ಶಕ್ತಿಗಳ ಮೂರ್ತರೂಪವೇ ಶ್ರೀರಾಮ..!

ಕಿನಾರೆಯಲ್ಲಿ ನಿಂತು ಸಾಗರದ ಅಲೆಗಳನ್ನು ಎಣಿಸಿ ಎಣಿಸಿ ಎಣಿಸಿ ಎಣಿಸಿ…

ಕೊನೆಗೂ ಎಣೆಕೆ ಮುಗಿಯದೆಯೇ… ಸಾಗರದಲ್ಲಿಯೇ ಇಳಿದು ಬಿಡುವಂತೆ…

ನಾರದರು ಶ್ರೀರಾಮನ ಗುಣಗಳನ್ನು ಎಣಿಸಿ…ಎಣಿಸಿ…ಎಣಿಸಿ…ಎಣಿಸಿ , ಕೊನೆಗೂ ಎಣಿಕೆ ಮುಗಿಯದೆಯೇ…

ಆತನ ಕಥೆಯನ್ನು ಹೇಳತೊಡಗಿದರು..


ಹರೇರಾಮ

7 Responses to ಹೇ ರಾಮ..! ನೀ ಸರ್ವೋತ್ತಮ..!!

 1. Raghavendra Narayana

  ಅದ್ಭುತ
  .

  “ಕಿನಾರೆಯಲ್ಲಿ ನಿಂತು ಸಾಗರದ ಅಲೆಗಳನ್ನು ಎಣಿಸಿ ಎಣಿಸಿ ಎಣಿಸಿ ಎಣಿಸಿ…

  ಕೊನೆಗೂ ಎಣೆಕೆ ಮುಗಿಯದೆಯೇ… ಸಾಗರದಲ್ಲಿಯೇ ಇಳಿದು ಬಿಡುವಂತೆ…”

  [Reply]

 2. Madhu Dodderi

  ಓಂಕಾರವೇ ಧನುಸ್ಸು…
  ಜೀವವೇ ಬಾಣ..
  ಪರಬ್ರಹ್ಮವೇ ಲಕ್ಷ್ಯ..
  ಪ್ರಮಾದವಿಲ್ಲದೆ ಪ್ರಯೋಗಿಸಿದರೆ ಅದು ಕೇವಲ ಬಿಲ್ವಿದ್ಯೆ ಆಗಿರದೇ ಧನುರ್ವೇದವೇ ಆದೀತು..!

  ಓಹ್! ಎಂತಹ ಅದ್ಭುತ ಚಿಂತನೆ!

  [Reply]

 3. Sharada Jayagovind

  Harerama Samsthana

  This article slowly unfolds the magnitude of Srirama’s personality which cannot be grasped easily by the human mind.

  Superb portrayal of Vishwaroopa Darshana- we need a special inner vision to experience Sri Rama sagara ‘s power and majesty… Only Sriguru can grant us this…Pranamagalu

  [Reply]

 4. Ashwini Bhat

  ಸಂಸ್ಠಾನದ ಗುಣಗಳಗಳನ್ನೇ ವರ್ಣನೆ ಮಾಡಿದಂತೆ ಅನ್ನಿಸುತ್ತಿದೆ !!

  [Reply]

 5. Raghavendra Narayana

  ರಾಮ ಎ೦ಬ ನಾಮ, ಕಾಮವನ್ನು ತೊರೆದು, ಶ್ಯಾಮನನ್ನು ಸ್ಥಾಪಿಸುತ್ತಾ ಹರಡಿಸುತ್ತದೆ..
  ರಾಮ ತನ್ನ ಪ್ರಕೃತಿಗಣುಗುಣವಾಗಿ ಸಾಗಿದ, ಅದರಲ್ಲಿ ವೀಶೇಷವೇನಿದೆ ಎ೦ದು ಕೇಳಬಹುದೆ? ಪ್ರಕೃತಿಯಲ್ಲಿ ಸ್ವಯ೦ಪ್ರಭೆಯ ಕಳೆದುಕೊ೦ಡು ಪರಪ್ರಭೆಯಲ್ಲಿ ಪರಿತಪಿಸುತ್ತಿರುವವರಿಗೆ ರಾಮ ಶ್ಯಾಮನೊ, ಅ೦ತರಜ್ಯೋತಿಯೊ, “ನಾನು” ಎ೦ಬ ಪುರುಷ ಪ್ರಕೃತಿಯೊ, ನಾನೊ

  [Reply]

 6. nandaja haregoppa

  ಹರೇ ರಾಮ

  ರಾಮ ಎನ್ನುವ ಎರಡು ಅಕ್ಷರದಲ್ಲಿ ಏನೆಲ್ಲಾ ಇದೆ ,

  ಸೂರ್ಯೋದಯ ಹಾಗು ಅರುಣೋದಯದ ನಡುವೆ ವ್ಯತ್ಯಾಸಗಳೇನು

  pranamagalu

  [Reply]

 7. shobha lakshmi

  ಹರೇರಾಮ,,,,,ಗುರುದೇವಾ…..ಇದರ ಓದಿದವಕ್ಕೆ ಧರ್ಮ ಮಾರ್ಗಲ್ಲಿ ನಡೆಯದ್ದಿಪ್ಪಲೆ ಸಾಧ್ಯ ಇಲ್ಲೆ….ಎ೦ತಹ ಕಲ್ಲು ಹ್ರುದಯವೂ ಮ್ರುದುವಾದ ಹೂವಿನ ಹಾ೦ಗೆ ಅಕ್ಕು…..ಹಾ೦ಗಿದ್ದು ಈ ಲೇಖನ…..ಆನು ಮತ್ತೂ ಮತ್ತೂ ಹೇಳುದು ಒ೦ದೇ …..ಹೀಗೆ ಬರಯಕಾರೆ ಸಾಮಾನ್ಯರಿಗೆ ಸಾಧ್ಯ ಇಲ್ಲೆ…..ಶ್ರೀರಾಮನೇ ಗುರು ರೂಪಲ್ಲಿ ಹೀಗೆ ಬರೆಸುತ್ತಿಪ್ಪದು….ಅಲ್ಲ್ಲದಾ…..

  [Reply]

Leave a Reply

Highslide for Wordpress Plugin