ಮಂಗಲಧ್ವನಿಯಿಲ್ಲದೊಡೆ ಅದು ಮಂದಿರವೆಂತಹುದಯ್ಯಾ?
ಮಂಗಲಧ್ವನಿಯ ಮಾಲಿನ್ಯವೆಂಬವಗೆ ಮತಿಯಿಹುದೇನಯ್ಯಾ!?

ಮಂಗಳೂರಿನ ಕದ್ರಿ ಮಂಜುನಾಥೇಶ್ವರನ ಮಂದಿರದಿಂದ ಹೊರ ಹೊಮ್ಮುವ ಮಂಗಲ~ನಾದತರಂಗಗಳನ್ನು ಮೂಕಗೊಳಿಸುವ ಪ್ರಯತ್ನಗಳನ್ನು ಕಂಡಾಗ, ಮನಮಿಡಿದು ಮೂಡಿದ ಶಬ್ದಗಳಿವು..

ಕದ್ರಿಯೊಡೆಯನ ಕರುಣದಲ್ಲಿ ಅದೆಷ್ಟು ವರುಷಗಳಿಂದ, ಅದೆಷ್ಟು ಜನರ, ಅದೆಷ್ಟು ಬಗೆಯ, ಅದೆಷ್ಟು ಕಾಯಿಲೆಗಳು ಶಮನ ಕಂಡಿವೆಯೋ… ಆದರೆ ಮಂದಿರವನ್ನು ಮೂಕಗೊಳಿಸಬೇಕೆಂದು ಆಗ್ರಹಿಸಿ, ಬರೆಯಲ್ಪಟ್ಟ ಅರ್ಜಿಯ ಈ ಸಾಲುಗಳನ್ನು ಗಮನಿಸಿ:

“…ಸ್ಥಳೀಯ ನಿವಾಸಿಗಳು, ಮಕ್ಕಳು, ವಿದ್ಯಾರ್ಥಿಗಳು, ಅಸ್ವಸ್ಥ ವೃದ್ಧರು, ಹೆಂಗಸರು, ಆರೋಗ್ಯದಲ್ಲಿ ಏರುಪೇರು  ರಕ್ತದೊತ್ತಡ, ಮೈಗ್ರೇನ್ ಗೂ, ತಲೆಸುತ್ತಿ ಬೀಳುವಾಗೆ ಈ ದಿಢೀರ್ ಧ್ವನಿವರ್ಧಕ ಕಿವಿಯ ತಮಟೆಯನ್ನಷ್ಟೇ ಅಲ್ಲ, ಎದೆಯನ್ನು ಸೀಳಿ ಹೃದಯವನ್ನೇ ಸ್ತಂಭನಗೊಳಿಸುತ್ತದೆ.”

ಇದು ನಿಜವೇ ಆಗಿದ್ದರೆ..

 • ದೇವರ ಜಾತ್ರೆ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ನಡೆದರೆ, ಊರಿನಲ್ಲಿ ಪ್ರತಿದಿನವೂ ದೇವಳದ ಪರಿಸರ-ನಿವಾಸಿಗಳ ಶವಯಾತ್ರೆ ನಡೆಯುತ್ತಿರಬೇಕಿತ್ತು!
 • ದೇವಸ್ಥಾನ ಕಟ್ಟಿ ಕೆಲವೇ ಸಮಯದಲ್ಲಿ ಜನರು ಸತ್ತು ಸತ್ತು,‌ ಊರಿಗೆ ಊರೇ ಖಾಲಿಯಾಗಿರಬೇಕಿತ್ತು!
 • ದೇವಸ್ಥಾನ ಕಟ್ಟುವ ಮೊದಲು ಅದಕ್ಕಿಂತ ದೊಡ್ಡ ಆಸ್ಪತ್ರೆಯನ್ನು ಪಕ್ಕದಲ್ಲೇ ಕಟ್ಟುವುದು ಅನಿವಾರ್ಯವಾಗಿರುತ್ತಿತ್ತು!

ವಾಸ್ತವವಾಗಿ, ದೇವಾಲಯಗಳು ಮನಃಶಾಂತಿಯನ್ನು ನೀಡುತ್ತವೆ. ಮನಃಶಾಂತಿಯು ಸಕಲ ರೋಗಗಳಿಗೂ ರಾಮಬಾಣವೆಂಬುದು ಸರ್ವವಿದಿತ.

ವಿಪರ್ಯಾಸವೆಂದರೆ ಮಂದಿರವನ್ನು ಮೂಕಗೊಳಿಸಲು ಭಾರೀ ಸದ್ದು ಮಾಡುವ ಈ ಕಂಠಗಳು ಮಸೀದಿ-ಚರ್ಚುಗಳ ವಿಷಯದಲ್ಲಿ ಅನಿರ್ವಚನೀಯ ಮೌನಕ್ಕೆ ಶರಣಾಗಿಬಿಡುತ್ತವೆ! ಅದಲ್ಲದಿದ್ದರೆ ಮಂಗಳೂರಿನಲ್ಲಿ ಮಸೀದಿಗಳೆಷ್ಟಿಲ್ಲ? ಯಾವ ಮಸೀದಿಯು ಸದ್ದು ಮಾಡುತ್ತಿಲ್ಲ? ಮೂಕಮಸೀದಿಯನ್ನು ಕಲ್ಪಿಸಿಕೊಳ್ಳಲಾದರೂ ಸಾಧ್ಯವಿದೆಯೇ!? ಮಸೀದಿ ಕಾಣದಿರಲೂಬಹುದು; ಕೇಳದಿರಲು ಸಾಧ್ಯವೇ ಇಲ್ಲ! ಆಝಾನಿನ ಅಬ್ಬರವೆಷ್ಟಿರುತ್ತದೆಯೆಂದರೆ ಸನಿಹದಲ್ಲಿ ಧ್ವನಿವರ್ಧಕಸಹಿತವಾಗಿ ನಡೆಯುವ ಸಭೆಗೂ ಅಡ್ಡಿ ಪಡಿಸುವಷ್ಟು!
ಇದು ಸ್ವಾನುಭವ; ನಿಮ್ಮೆಲ್ಲರ ಅನುಭವವೂ ಇದುವೇ ಇದ್ದೀತು.

‘ಮಂದಿರದ ಸದ್ದು ಮಂದಿರದೊಳಗಿರಲಿ’ ಎಂದು ಸರಕಾರಕ್ಕೆ ಬರೆಯುವವರು, ಅದಕ್ಕಿಂತ ಎಷ್ಟೋ ಹೆಚ್ಚು ಸದ್ದು ಮಾಡುವ ಮಸೀದಿಗಳ ಕುರಿತು ಮೌನ ತಾಳುವುದೇಕೆ?

ಏಕೆಂದರೆ‌ ‘ಹಿಂದುಗಳನ್ನು ಏನು ಬೇಕಾದರೂ ಮಾಡಬಹುದು; ಅಲ್ಪಸಂಖ್ಯಾತರ ಕುರಿತು ಉಸಿರೆತ್ತಕೂಡದು!’ ಎಂಬುದು ಈ ದೇಶದ – ಈ ಕಾಲದ ಅಲಿಖಿತ ನಿಯಮ!

ಇದಕ್ಕೆ ಇನ್ನೊಂದು ಉರಿಯುವ ಉದಾಹರಣೆ ದೀಪಾವಳಿಯ ಪಟಾಕಿನಿಷೇಧ! ಈ ದೇಶದಲ್ಲಿ ದೀಪಾವಳಿಯೆಂದರೆ ಪಟಾಕಿಗಳ ಹಬ್ಬವೆಂದೇ ಪ್ರತೀತಿ. ಪಟಾಕಿಗಳಿಲ್ಲದ ದೀಪಾವಳಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ! ಆದರೆ ಪರಿಸರದ ಮೇಲೆ ಪಟಾಕಿಯು ಬೀರುವ ಪ್ರತಿಕೂಲ ಪರಿಣಾಮವನ್ನಾಧರಿಸಿ, ದೀಪಾವಳಿಯ ಸಮಯದಲ್ಲಿ ದಿಲ್ಲಿಯಲ್ಲಿ ಪಟಾಕಿಗಳನ್ನು ನಿಷೇಧಿಸಬೇಕೆಂದು ‘ಮೂವರು ಮಕ್ಕಳು’ (ತೆರೆಮರೆಯಲ್ಲಿ ಹಿರಿಯರು!) ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸರ್ವೋಚ್ಚ ನ್ಯಾಯಾಲಯವು ಆ ಅರ್ಜಿಯನ್ನು ಮಾನ್ಯ ಮಾಡಿ, ದೀಪಾವಳಿಯ ಸಮಯದಲ್ಲಿ, ದಿಲ್ಲಿಯಲ್ಲಿ ಪಟಾಕಿಗಳ ಮಾರಾಟವನ್ನು ನಿಷೇಧಿಸಿತು.

ಪಟಾಕಿ-ನಿಷೇಧದ ತೀರ್ಪನ್ನು ಅನೇಕರು ಟೀಕಿಸಿದರು‌. ನಾವು ಆ ತೀರ್ಪನ್ನು ತೆರೆದ ಹೃದಯದಿಂದಲೇ ಅಂಗೀಕರಿಸಬಯಸುವೆವು. ಅದಕ್ಕೆ ಕಾರಣಗಳೆರಡು:
ಒಂದನೆಯದು: ನ್ಯಾಯಾಲಯಗಳ ತೀರ್ಪುಗಳನ್ನು ಮೇಲಿನ ನ್ಯಾಯಾಲಯಗಳಲ್ಲಿ ಮಾತ್ರ ಪ್ರಶ್ನಿಸಬೇಕು; ಸಾರ್ವಜನಿಕವಾಗಿ ಪ್ರಶ್ನಿಸುವುದು ಸಾಂವಿಧಾನಿಕವಲ್ಲ‌.
ಎರಡನೆಯದು: ದೀಪಾವಳಿಯು ದೀಪಗಳ ಹಬ್ಬವೇ ಹೊರತು ಸ್ಫೋಟಗಳ ಹಬ್ಬವಲ್ಲ! ಪೂರ್ವಕಾಲದಲ್ಲಿ ದೀಪಾವಳಿಯಲ್ಲಿ ಸ್ಫೋಟಗಳು ನಡೆಯುತ್ತಿದ್ದರೂ ಅವು ಶುಭಂಕರವಾಗಿರುತ್ತಿದ್ದವೇ ಹೊರತು ಭಯಂಕರವಾಗಿರುತ್ತಿರಲಿಲ್ಲ. ಉಸಿರನ್ನೇ ಹಾನಿಗೈದು ಆಚರಿಸುವ ಹಬ್ಬಕ್ಕೆ ಯಾವ ಅರ್ಥವೂ ಇಲ್ಲ!

ಪ್ರಶ್ನೆಯಿರುವುದು ಪಟಾಕಿ-ನಿಷೇಧದಲ್ಲಿ ಅಲ್ಲವೇ ಅಲ್ಲ; ನಿಷೇಧ-ನೀತಿಯ ತಾರತಮ್ಯದಲ್ಲಿ! ಹಿಂದುಗಳ ಹಬ್ಬವಾದ ದೀಪಾವಳಿಗೆ ಪಟಾಕಿಯನ್ನು ನಿಷೇಧಿಸಲಾಯಿತು; ಕ್ರೈಸ್ತರ ನವ ವರ್ಷಕ್ಕೆ ಏಕೆ ಪಟಾಕಿಯ ನಿಷೇಧವಿಲ್ಲ? ಹಿಂದುಗಳ ಹಬ್ಬದಲ್ಲಿ ಪ್ರಯೋಗಿಸಲ್ಪಟ್ಟ ಪಟಾಕಿಯು ಮಾತ್ರವೇ ಮಾಲಿನ್ಯಕಾರಕವೇ!?

ಆದರೆ, ಕ್ಯಾಲೆಂಡರ್ ನವ ವರ್ಷದ ಸಮಯದ ಪಟಾಕಿಗಳ ಪರಿಣಾಮವಾಗಿ ದಿಲ್ಲಿಯ ವಾಯುಮಂಡಲವು ಅಪಾಯದ ಮಟ್ಟ ಮೀರಿ ಕೆಟ್ಟಿದ್ದನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವರದಿಗಳು ದಾಖಲಿಸಿವೆ!

ಜನವರಿ 1 : ದೆಹಲಿಯ ವಾಯುಮಾಲಿನ್ಯದ ಕುರಿತಾದ ಅಂಕಿಅಂಶ । @Prastuti, SriRamachandrapuraMatha

ಯಾಕೀ ತಾರತಮ್ಯ!? ಯಾಕೆ ‘ಒಂದು ಕಣ್ಣಿಗೆ ಸುಣ್ಣ; ಮತ್ತೊಂದು ಕಣ್ಣಿಗೆ ಬೆಣ್ಣೆ’ ಎಂಬ ಧೋರಣೆ!?
ಇಲ್ಲಿಯೂ ನಾವು ನ್ಯಾಯಾಲಯದ ವಿಷಯದಲ್ಲಿ ದೋಷವನ್ನೆಣಿಸುವುದಿಲ್ಲ; ದೀಪಾವಳಿಯ ಹಾಗೆಯೇ ಜನವರಿ ಒಂದರ ವಿಷಯದಲ್ಲಿಯೂ ಅರ್ಜಿಯನ್ನು ಸಲ್ಲಿಸಿದ್ದರೆ, ಅಥವಾ ಅದೇ ಅರ್ಜಿಯಲ್ಲಿ ದೀಪಾವಳಿಯ ಜೊತೆಗೆ ಕ್ರೈಸ್ತ ನವ ವರ್ಷವನ್ನೂ ಪ್ರಸ್ತಾಪಿಸಿದ್ದರೆ ಖಂಡಿತವಾಗಿಯೂ ನ್ಯಾಯಾಲಯವು ಅದೇ ನಿರ್ಣಯವನ್ನೇ ಕೊಟ್ಟಿರುತ್ತಿತ್ತು. ಉದಾಹರಣೆಗೆ ಪಂಜಾಬ್-ಹರಿಯಾಣ ಹೈಕೋರ್ಟ್ ತನ್ನ ಮುಂದೆ ಬಂದ ಅರ್ಜಿಯನ್ನು ಮಾನ್ಯ ಮಾಡಿ, ನವ ವರ್ಷ ಮತ್ತು ಮದುವೆ ಮತ್ತಿತರ ಸಮಾರಂಭಗಳಲ್ಲಿ ಪಟಾಕಿ-ಪ್ರಯೋಗವನ್ನು ನಿಷೇಧಿಸಿದೆ.
ಆದರೆ ದೀಪಾವಳಿಯ ಪಟಾಕಿ-ಸಂಭ್ರಮದ ವಿರುದ್ಧ ಅರ್ಜಿ ಅಲ್ಲಿಸಿದ ಮುಗ್ಧ-ಮಕ್ಕಳ ಜಾಣ-ಹಿರಿಯರು ಕ್ರೈಸ್ತ ನವ ವರ್ಷದ ವಿಷಯದಲ್ಲಿ ಜಾಣಗುರುಡುತನವನ್ನೇ ತೋರಿದರು!

ಅಹಿಂದುಗಳ ಹಬ್ಬವಾದರೆ:

 • ಕಣ್ಣಿಗೆ ಪಟಾಕಿಯ ಬೆಂಕಿ ಕಾಣದು!
 • ಕಿವಿಗೆ ಪಟಾಕಿಯ ಸ್ಫೋಟದ ಸದ್ದು ಕೇಳದು!
 • ಮೂಗಿಗೆ ಪಟಾಕಿಯ ಘಾಟು ಬಾರದು!
 • ಉಸಿರಿಗೆ ವಾಯುವು ಕಲುಷಿತವೆನಿಸದು!

ಅದೇ ಹಿಂದುಗಳ ಹಬ್ಬವಾದರೆ:

 • ಇಲ್ಲದ ಬೆಂಕಿಯೂ ಕಂಡೀತು!
 • ಸ್ಫೋಟವೇ ಇಲ್ಲದೆ ಸದ್ದು ಕೇಳೀತು!
 • ಅಮೃತವೇ ಆದರೂ ವಿಷವೆನಿಸೀತು!

ನೈಜ ಭಾರತೀಯರ ಸ್ಥಿತಿ ಎಲ್ಲಿಯವರೆಗೆ ತಲುಪಿದೆಯಂದರೆ “ನಮ್ಮ ದೇಶದಲ್ಲಿ- ನಮ್ಮದೇ ದೇಶದಲ್ಲಿ, ನಾವು ನಾವಾಗಿ- ನಮ್ಮತನದಲ್ಲಿ ಬದುಕಲು ಸಾಧ್ಯವಿಲ್ಲ!”

ವರ್ತಮಾನ ಕಾಲದ ಒಂದು ಕಠೋರ‌ ವಾಸ್ತವವನ್ನು ನಿಮ್ಮ ಮುಂದೆ‌ ತೆರೆದಿಡುವುದಾದರೆ “ಭಾರತದಲ್ಲಿ ಭಾರತೀಯರಾಗಿ ಬಾಳುವುದು ಸುಲಭವಲ್ಲ; ಪರಕೀಯರಾದರೆ ಅಥವಾ ಪರಕೀಯರಂತಿದ್ದರೆ ಸುಖವಾಗಿ ಬಾಳಬಹುದು!” ಭಾರತದಲ್ಲಿ ಭಾರತೀಯತೆಗೆ ಸ್ಥಾನವಿಲ್ಲ! ಭಾರತೀಯತೆಗೆ ಸಲ್ಲುವಂತಹದೇನನ್ನು ಮಾಡಿದರೂ ಅದರ ಮೇಲೆ ನೂರೆಂಟು ದೂರುಗಳು! ಅದರ‌ ವಿರುದ್ಧ ಸಾವಿರದೆಂಟು ಆದೇಶಗಳು! ಹೆಜ್ಜೆ-ಹೆಜ್ಜೆಗೆ ಹೀಗಳೆದು ಲೇಖನಗಳು! ಅದೇ ಅಭಾರತೀಯವಾದುದನ್ನು ಅಥವಾ ಭಾರತೀಯತೆಗೆ ವಿರುದ್ಧವಾದುದನ್ನು ಮಾಡಿದರೆ ಅದಕ್ಕೆ ‘ರಾಜಾಶ್ರಯ!’. ಇದು ಇಂದಿನ ಇಂಡಿಯಾ!

ನಾವೀ ಲೇಖನದಲ್ಲಿ ಈ ದೇಶದ ಮೂಲ ಸಂಸ್ಕೃತಿಯ ವಾರಸುದಾರರಿಗಾಗಿ ಹೆಚ್ಚಿನದೇನನ್ನೂ ಕೇಳುತ್ತಿಲ್ಲ;

 • ಎಲ್ಲರನ್ನೂ ನೋಡುವಂತೆ ನಮ್ಮನ್ನೂ ನೋಡಿ.
 • ಎಲ್ಲರಿಗೂ ಇರುವ ಕಾನೂನೇ ನಮಗೂ ಇರಲಿ.
 • ನಮ್ಮ ಆಚರಣೆಗಳನ್ನು ನಮ್ಮಷ್ಟಕ್ಕೆ ಆಚರಿಸಲು ನಮಗೆ ಅವಕಾಶ ನೀಡಿ.

ಈ ಬಗೆಯ ನೀತಿಗಳು ಬಹುಸಂಖ್ಯಾತರ ಹಿತದಲ್ಲಿ ಹೇಗೂ ಇಲ್ಲ; ಮಾತ್ರವಲ್ಲ, ಅಲ್ಪಸಂಖ್ಯಾತರ ಹಿತದಲ್ಲಿಯೂ ಇಲ್ಲ. ಬಹುಸಂಖ್ಯಾತರ ಮತ್ತು ಅಲ್ಪಸಂಖ್ಯಾತರ ನಡುವೆ ಕಂದಕ ಹಿರಿದಾದಂತೆ ಅಲ್ಪಸಂಖ್ಯಾತರ ಕ್ಷೇಮದ ಮಾರ್ಗವು ಕಿರಿದಾಗುವುದು, ನೆಮ್ಮದಿಯ ನೆಲೆಯು ನಾಶವಾಗುವುದು ನಿಶ್ಚಿತ!

ಕೊನೆಗೊಂದು ನೀತಿಮಾತಿನ ಕಿವಿಮಾತು (ಸಕಾಲಿಕ ಮಾರ್ಪಾಡಿನೊಡನೆ):

ಅಲ್ಪಸಂಖ್ಯಾತರನ್ನು ಬಹು ಕಾಲ ಮೋಸಗೊಳಿಸಬಹುದು;
ಬಹುಸಂಖ್ಯಾತರನ್ನು ಅಲ್ಪ ಕಾಲ ಮೋಸಗೊಳಿಸಬಹುದು;
ಆದರೆ, ಬಹುಸಂಖ್ಯಾತರನ್ನು ಬಹುಕಾಲ ಮೋಸಗೊಳಿಸಲು ಸಾಧ್ಯವಿಲ್ಲ!

~*~

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.

ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments