ಅದು 1992ನೆಯ ಇಸವಿಯ ಡಿಸೆಂಬರ್ ತಿಂಗಳು; ನಮಗಿನ್ನೂ ಆಗ ಎಳೆಯ ಪ್ರಾಯ; ಶ್ರೀಕ್ಷೇತ್ರ ಗೋಕರ್ಣದಲ್ಲಿ ವೇದಾಧ್ಯಯನಗೈಯುತ್ತಿದ್ದ ಸಮಯ. ಒಂದು ದಿನ ಎಂದಿನಂತೆ ರಥಬೀದಿಯ ಮಾರ್ಗವಾಗಿ ಛಾತ್ರಾವಾಸಕ್ಕೆ ತೆರಳುತ್ತಿದ್ದಾಗ ವಾತಾವರಣದಲ್ಲಿ ಅನಿರ್ವಚನೀಯವಾದ ಪರಿವರ್ತನೆಯನ್ನು ಗಮನಿಸಿದೆವು‌. ಉತ್ತರದಿಂದ ಬೀಸಿ ಬರುವ ಗಾಳಿಯಲ್ಲಿ ಅದೇನೋ ವಿದ್ಯುತ್ ಸಂಚಾರ! ರಸ್ತೆಯಲ್ಲಿ ಪ್ರತಿದಿನವೂ ಕಾಣುವ ಅದೇ ಮುಖಗಳಲ್ಲಿ ಆ ದಿನ ಏನೋ ಹರ್ಷೋನ್ಮಾದ! ಅರಳಿದ ಮುಖಗಳ ನಡುವೆ ನಡೆಯುತ್ತಿದ್ದ ಸಂತೋಷದ ಸಂಭಾಷಣೆಯಲ್ಲಿ ರೋಮಾಂಚನದ ಸಿಂಚನ! ‘ಏನಿರಬಹುದು? ಅಂಥದ್ದೇನು ನಡೆದಿರಬಹುದು?’ ಎಂಬ ನಮ್ಮ ಕುತೂಹಲ ಆಕಾಶವನ್ನು ಮುಟ್ಟುವಾಗಲೇ ಆಕಾಶವಾಣಿಯು ಧನ್ಯಧ್ವನಿಯಲ್ಲಿ ಬಿತ್ತರಿಸುತ್ತಿದ್ದ, ಭಾರತೀಯರೆಲ್ಲರೂ ಬಹುಕಾಲದಿಂದ ಶಬರಿಯ ಭಾವದಲ್ಲಿ ಪ್ರತೀಕ್ಷಿಸುತ್ತಿದ್ದ ಅಘಟಿತ ಘಟನೆಯೊಂದು ಕಿವಿ ತಲುಪಿತು; ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿನ ಬಾಬರೀ ಮಸೀದಿಯು ಆ ದಿನ ಕರಸೇವಕರಿಂದ ಧ್ವಂಸಗೊಳಿಸಲ್ಪಟ್ಟಿತ್ತು! ಆಲದ ಮರದಲ್ಲಿ ಬಹುಕಾಲದಿಂದ ಸೇರಿಕೊಂಡಿದ್ದ ಬ್ರಹ್ಮರಾಕ್ಷಸವು ಉಚ್ಚಾಟನೆಗೊಂಡಿತ್ತು!

ಈ ಬಗೆಯ ಅಸಾಧಾರಣವಾದ ವಾರ್ತೆಗಳನ್ನು ಹಂಚದೆ ಅಂತರಂಗದಲ್ಲಿಯೇ ಹೆಚ್ಚು ಕಾಲ ಇಟ್ಟುಕೊಳ್ಳಲು ಸಾಧ್ಯವಾಗದು; ಈ ವಾರ್ತೆಯನ್ನು ಕೇಳಿದಾಗ ನಮಗಾದುದೂ ಅದೇ. ಹಾಗಾಗಿ ಅದೇ ಸಮಯದಲ್ಲಿ ಅಭಿಮುಖವಾಗಿ ಬರುತ್ತಿದ್ದ ಉತ್ತರಪ್ರದೇಶದ ಮೂಲದ ಹನುಮತ್ ಪ್ರಸಾದ್ ಎಂಬ ಸಹಪಾಠಿಗೆ ಈ ಸಮಾಚಾರವನ್ನು ಹಂಚಿದೆವು. ಆ ಕ್ಷಣದಲ್ಲಿ, ಆತನ ಮುಖದಲ್ಲಿ ಕಂಡ ಬದಲಾವಣೆಗಳನ್ನು ಕಾಮನಬಿಲ್ಲಿನ ಅಕ್ಷರಗಳಲ್ಲಿ, ಕೋಲ್ಮಿಂಚಿನ ಲೇಖನಿಯಲ್ಲಿ ಬರೆಯುವುದೇ ಸರಿಯೇನೋ!

ಒಂದು ಕ್ಷಣ ಅವನಿಗೆ ತಾನು ಕೇಳುತ್ತಿರುವುದು ಏನೆಂದೇ ಅರ್ಥವಾಗಲಿಲ್ಲ; ಅರ್ಥವಾದ ಬಳಿಕವೂ ಅದನ್ನು ಅರಗಿಸಿಕೊಳ್ಳಲು ಕೊಂಚ ಸಮಯವೇ ಬೇಕಾಯಿತು! “ಇದು ನಿಜವೇ!?” ಎಂಬ ಪ್ರಶ್ನೆಯು ಅವನ ಮುಖದಿಂದ ಅಪ್ರಯತ್ನವಾಗಿ ಹೊರಬಂದಿತು! ನಿಜವೇ ಹೌದೆಂಬುದು ಸ್ಥಾಪಿತವಾದಾಗ ಅವನ ಮುಖದಲ್ಲಿ ಮಿಂಚಿದ ನೂರು ಸೂರ್ಯರ ಬೆಳಕು, ಕಿವಿಗಳೇ ಕೊರೆದು ಹೋಗುವಂತೆ ಅವನು ಹಾಕಿದ ಕೇಕೆಗಳು ಈಗಲೂ ನಮ್ಮ ಕಣ್ಣು-ಕಿವಿಗಳಲ್ಲಿವೆ!

ಸಂತೋಷದ ಸುನಾಮಿಯಂತೆ ಇದ್ದಕ್ಕಿದ್ದಂತೆ ನಮ್ಮ ಮೇಲೆ ಎರಗಿ ಬಂದ ಆತ, ಬಲವಾಗಿ ತಬ್ಬಿ ಹಿಡಿದದ್ದು ಮಾತ್ರವಲ್ಲ, ಸಂತೋಷದ ಆವೇಶದಲ್ಲಿ ‘ತನಗೆ ತೃಪ್ತಿಯಾಗುವಷ್ಟು’ ಗುದ್ದಿಬಿಡಬೇಕೇ!? ಅವನ ಭಾವದ ಬಿತ್ತರದ ಅರಿವಾದಾಗ ಆ ಗುದ್ದುಗಳು ನಮಗೆ ಗುದ್ದು ಎನಿಸದೇ ಮುದ್ದು ಎಂದೇ ಎನಿಸಿದವು! ಗುದ್ದಿನ ನೋವು ಕೆಲವಾರು ದಿನಗಳವರೆಗೆ ಮೈಯಲ್ಲಿ ಉಳಿದಿತ್ತು; ಆದರೆ ಆ ನಲಿವು ಘಟನೆ ನಡೆದು 25 ವರ್ಷಗಳ ಬಳಿಕವೂ- ಇಂದಿಗೂ ಮನಸ್ಸಿನಲ್ಲಿ ಹಾಗೆಯೇ ಉಳಿದಿದೆ!

ಸುದೀರ್ಘ ಸಮಯದ ಬಳಿಕ ಬರುವ ಸತ್ಯದ ವಿಜಯವು ಅದೆಷ್ಟು ಸುಮಧುರ!

ತ್ರೇತಾಯುಗದ ಹನುಮಂತನಿಂದ ಆರಂಭಿಸಿ ಸಮಕಾಲೀನ~ಸಹಪಾಠಿ ಹನುಮತ್ ಪ್ರಸಾದನವರೆಗೆ ಪ್ರತಿಯೊಬ್ಬ ನೈಜ ಭಾರತೀಯನ ಹೃದಯದ ನೈಜ ಭಾವವೂ ರಾಮಜನ್ಮಭೂಮಿಯಲ್ಲಿ ರಾಮಮಂದಿರವು ಮೂಡಿಬರಬೇಕೆಂಬುದೇ ಆಗಿದೆ!

ಶ್ರೀರಾಮನು ಭಾರತೀಯಸಂಸ್ಕೃತಿಯ ಆತ್ಮಪುರುಷ. ಅವನ ಜನ್ಮವೆಂದರೆ ಅದು ಭಾರತದಲ್ಲಿ ಭುವಿ-ದಿವಿಗಳ ಮಹೋತ್ಸವ! ಆ ದೇವರದೇವನು ನರದೇವನಾಗಿ ಜನ್ಮತಾಳುವಾಗ ಪಂಚ ಗ್ರಹಗಳು ಪರಮೋಚ್ಚದಲ್ಲಿ ನಿಂತು, ಗಗನಾಂಗಣದಲ್ಲಿ ತೋರಣ ಕಟ್ಟಿದವು; ಗಂಧರ್ವರ ಆನಂದವು ಒಳಗೆ ಹಿಡಿಸಲಾರದೆ ಗಗನಗಾಯನವಾಗಿ ಹೊರಹೊಮ್ಮಿದರೆ, ದೇವಾಂಗನೆಯರು ದಿವ್ಯಾನಂದದಲ್ಲಿ ದಿವಿಯ ರಂಗಸ್ಥಳದಲ್ಲಿ ಕುಣಿಕುಣಿದಾಡಿದರು; ಭುವಿಯು ದಿವಿಯನ್ನು ಪೂಜಿಸುವುದು ನಿತ್ಯದ ನಿಯಮವಾದರೆ, ಆ ದಿನ ಸರ್ವಲೋಕನಮಸ್ಕೃತನಾದ ರಾಮನನ್ನು ತನ್ನೊಳಗೊಂಡು-ಪುಳಕಿತಗೊಂಡ ಭುವಿಗೆ ದಿವಿಯೇ ಹೂಮಳೆಯ ಪೂಜೆ ಸಲ್ಲಿಸಿತು! ಅಯೋಧ್ಯಾಧಿಪತಿಯ ಮತ್ತು ಅಯೋಧ್ಯೆಯ ಆನಂದವು ಯಾವ ಎತ್ತರವನ್ನು ತಲುಪಿತೆಂದರೆ ಆ ದಿನ ರಸ್ತೆಗಳಲ್ಲಿ ರತ್ನಗಳನ್ನು ತೂರಲಾಯಿತು!!

ರಾಮನುದಿಸಿದ ಕಾಲ-ದೇಶಗಳು ಭಾರತ-ಭಾರತವಾದಸಿಗಳ ಪಾಲಿಗೆ ಪಾವಿತ್ರ್ಯದ ಪರಾಕಾಷ್ಠೆ! ವಸಂತ ಋತುವಿನ-ಚೈತ್ರಮಾಸದ-ಶುಕ್ಲಪಕ್ಷದ-ನವಮಿಯೆಂದರೆ ಅದು ಸುಮ್ಮನೆ ನವಮಿಯಲ್ಲ; ಶತಕೋಟಿ ಭಾರತೀಯರಿಗೆ ಅದು ಶ್ರೀರಾಮನವಮಿ! ಹಾಗೆಯೇ ಅವನಿಯಲ್ಲಿ ಅವನು ಅವತಾರವೆತ್ತಿದ ಅಯೋಧ್ಯೆಯ ಆ ಸ್ಥಳವೂ ಪರಮ ಪಾವನ ಪೂಜಾಸ್ಥಾನ.

ರಾಮನ ಹೊರತಾಗಿ ಭಾರತ ದೇಶವನ್ನೂ ಮತ್ತು ಭಾರತೀಯ ಸಂಸ್ಕೃತಿಯನ್ನೂ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ! ಭಾರತೀಯರೆಲ್ಲರ ಹೃದಯದಲ್ಲಿ ರಾಮನಿದ್ದಾನೆ; ಕೋಟಿಕೋಟಿ ಭಾರತೀಯರ ಹೆಸರಿನಲ್ಲಿ- ಅವರ ಒಂದೊಂದು ಉಸಿರಿನಲ್ಲಿ ರಾಮನಿದ್ದಾನೆ; ಭಾರತದ ಉದ್ದಗಲದಲ್ಲಿ- ಊರೂರಿನಲ್ಲಿ ರಾಮನಡಿಯಿಟ್ಟ ನೆಲ, ಅವನ ಕಾಲ್ತೊಳೆದು ಪವಿತ್ರಗೊಂಡ ಜಲಗಳಿವೆ! ರಾಮನು ಕಾಲಿಟ್ಟ ನೆಲವನ್ನೆಲ್ಲ ಕ್ಷೇತ್ರವೆಂದು ಪೂಜೆ ಮಾಡಿದ ಮೇಲೆ ಅವನ ಜನ್ಮಭೂಮಿಯನ್ನು ಪಾಳುಬೀಳಲು ಬಿಡಲು ಸಾಧ್ಯವೇ? ಅಲ್ಲಿದ್ದ ಭವ್ಯ ರಾಮಾಲಯವನ್ನು ಮುರಿದು ಕಟ್ಟಿದ ಕಲಂಕಭವನವನ್ನು ಸಹಿಸಿಕೊಂಡಿರಲು ಸಾಧ್ಯವೇ?

ಭಾರತಕ್ಕೆ ಬೇಕಾದುದು ರಾಮನ ಸ್ಮರಣೆಯೇ ಹೊರತು ಬಾಬರನದಲ್ಲ.ರಾಮನು ಭಾರತದ ಆತ್ಮ; ಭಾರತೀಯರೆಲ್ಲರ ಪಾಲಿನ ಪರಮಾತ್ಮ. ಬಾಬರ್ ಭಾರತದವನೇ ಅಲ್ಲ! ಉಜ್ಬೇಕಿಸ್ತಾನದ ಫರ್ಗಾನಾ ನಗರದಿಂದ ಭಾರತದ ಮೇಲೆ ದಂಡೆತ್ತಿ ಬಂದ ದುರಾಕ್ರಮಣಕಾರಿಯನ್ನು ಭಾರತೀಯರು ರಾಮನ ಬದಲಿಗೆ ಪೂಜೆ ಮಾಡಬೇಕೇ!? ಬಾಬರೀ ಮಸೀದಿಯು ಅಕ್ರಮ ಆಕ್ರಮಣದ ಕುರುಹಾದರೆ, ರಾಮಮಂದಿರವು ವಿಶ್ವಾದರ್ಶವಾದ ರಾಮರಾಜ್ಯದ ಸ್ಮೃತಿಚಿಹ್ನ! ಭಾರತಕ್ಕೆ ಬಾಬರನ ಕೊಡುಗೆ ಬರ್ಬರತೆಯಾದರೆ, ರಾಮನ ಕೊಡುಗೆಯು ರಾಮರಾಜ್ಯ. ರಾಮನು ಭಾರತದ ಸ್ಮರಣಪುರುಷನಾದರೆ, ಬಾಬರನು ಮರಣಪುರುಷ! ಭಾರತಕ್ಕೆ ಬಾಬರನ ಸ್ಮರಣೆಯೂ ಬೇಕಿಲ್ಲ; ಸ್ಮರಣಿಕೆಯೂ ಬೇಕಿಲ್ಲ. ಅದರಲ್ಲಿಯೂ ರಾಮನ ಜನ್ಮಸ್ಥಳದಲ್ಲಿ ರಾಮನ ಮಂದಿರದ ಬದಲು ಬಾಬರನ ಸ್ಮರಣಿಕೆಯೆಂಬುದಕ್ಕಿಂತ ದೊಡ್ಡ ಅವಿವೇಕ ಬೇರಿಲ್ಲ! ಅಂದು ಹಿಂದುಸ್ಥಾನದ ಮೇಲೆ ಬಾಬರ್ ನಡೆಸಿದ ಆಕ್ರಮಣಕ್ಕಿಂತಲೂ ಮಿಗಿಲಾದ ಕ್ರೌರ್ಯವದು!

ಎಂದೋ ಬಾಳಿದ-ಆಳಿದ ರಾಮನ ಪ್ರಭಾವವು ಭಾರತವಾಸಿಗಳ ಭಾವದ ಮೇಲೆ ಅದೆಷ್ಟಿದೆಯೆಂದರೆ, 1992 ರ ಡಿಸೆಂಬರ್ ತಿಂಗಳ ಈ ಸಮಯದಲ್ಲಿ ರಾಮಮಂದಿರದ ಕರಸೇವೆಗಾಗಿ ವಿಶ್ವಹಿಂದೂ ಪರಿಷತ್ತು ಕೊಟ್ಟ ಕರೆಗೆ ಓಗೊಟ್ಟು, ಪ್ರಾಣದ ಹಂಗು ತೊರೆದು, ಅಡಿಗಡಿಗೆ ನಿರ್ಮಿಸಲಾಗಿದ್ದ ಅಡೆತಡೆಗಳನ್ನು ದಾಟಿ ಅಯೋಧ್ಯೆಯಲ್ಲಿ ಸೇರಿದ ಕರಸೇವಕರ ಸಂಖ್ಯೆ ಇದೇ ಡಿಸೆಂಬರ್ ೬ಕ್ಕೆ 2 ಲಕ್ಷ ದಾಟಿತ್ತು! ನಮ್ಮೂರುಗಳಿಂದ, ನಮ್ಮ ಅಕ್ಕಪಕ್ಕದ ಮನೆಗಳಿಂದ ಕರಸೇವೆಗಾಗಿ ಅಯೋಧ್ಯೆಗೆ ಹೋಗಿ ಧನ್ಯತೆಯ ದಿವ್ಯಜಲದಲ್ಲಿ ಮಿಂದೆದ್ದವರು ಅದೆಷ್ಟು ಮಂದಿಯಿಲ್ಲ! ರಾಮಮಂದಿರದ ಆಂದೋಲನಕ್ಕಿಂತ ಮೊದಲಿನ ಲೋಕಸಭಾ ಚುನಾವಣೆಯಲ್ಲಿ ಕೇವಲ 2 ಸ್ಥಾನ ಗಳಿಸಿದ್ದ ಭಾರತೀಯ ಜನತಾ ಪಕ್ಷವು, ರಾಮನ ಹೆಸರನ್ನು ಉಸುರಿದ ಮಾತ್ರಕ್ಕೆ ಮುಂದಿನ ಮಹಾಚುನಾವಣೆಯಲ್ಲಿ 85 ಸ್ಥಾನಗಳನ್ನು ಗಳಿಸಿತು; 1998 ರ ಮಹಾಚುನಾವಣೆಯಲ್ಲಿ ಆ ಸಂಖ್ಯೆ 182 ಕ್ಕೇರಿದರೆ, ಇಂದು 282 ಸ್ಥಾನಗಳೊಡನೆ ಸ್ಪಷ್ಟ ಬಹುಮತದಲ್ಲಿ ಭಾಜಪವು ಭಾರತವನ್ನು ಆಳುತ್ತಿದೆ! ಇದು ರಾಮನ ಕರುಣೆಯಿಂದ ಮಾತ್ರವೇ ಸಾಧ್ಯವಾಯಿತೆಂಬುದನ್ನು ಭಾಜಪವು ಎಂದೂ ನೆನಪಿನಲ್ಲಿರಿಸಿಕೊಳ್ಳಬೇಕು.

ಭಾರತೀಯ ಜನತಾ ಪಕ್ಷದ ನಾಯಕರೇ, ನಿಮಗೆ ಮತ ನೀಡಿದ ಕೋಟ್ಯನುಕೋಟಿ ಭಾರತೀಯರದೊಂದೇ ಮಾತು- “ರಾಮಜನ್ಮಭೂಮಿಯಲ್ಲಿ ರಾಮಮಂದಿರ ಕಟ್ಟಿ, ರಾಮನ ಕರುಣೆಯ ಋಣ ತೀರಿಸಿ!

ಹೌದು, ರಾಮಮಂದಿರದ ನಿರ್ಮಾಣವಾಗಬೇಕು! ಅದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿಯೇ ಆಗಬೇಕು! ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಕೇವಲ ರಾಮಮಂದಿರದ ನಿರ್ಮಾಣವು ಮಾತ್ರವೇ ಆಗಬೇಕು! ಅಲ್ಲಿಯವರೆಗೆ ನಮ್ಮ-ನಿಮ್ಮ ರಾಮಭಕ್ತಿಗೂ ಅರ್ಥವಿಲ್ಲ; ರಾಮನ ಹೆಸರಿನಲ್ಲಿ ರಾಜಕೀಯ ನಾಯಕರು ಅನುಭವಿಸುತ್ತಿರುವ ಅಧಿಕಾರಕ್ಕೂ ಪೂರ್ಣಾರ್ಥದ ಸಾರ್ಥಕತೆಯಿಲ್ಲ!

~*~

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.

ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments