ಇಂದಿಗೆ ಸರಿಯಾಗಿ ಒಂದು ವರ್ಷ ಮೊದಲು; ಎಂದರೆ 2016, ಡಿಸೆಂಬರ್ 31; ಮಧ್ಯರಾತ್ರಿ ಸಮೀಪಿಸುತ್ತಿತ್ತು. ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಭಾರೀ ಜನಸ್ತೋಮವೇ ಸೇರಿತ್ತು. ನವ ವರ್ಷವನ್ನು ಸ್ವಾಗತಿಸುವವರ ಸಂಭ್ರಮವದು.
ಪೋಲೀಸರೂ ದೊಡ್ಡ ಸಂಖ್ಯೆಯಲ್ಲಿಯೇ ಸೇರಿದ್ದರು. ಬೆಂಗಳೂರು ಮಹಾನಗರದ ಸಮಸ್ತ ಪೋಲೀಸ್ ಪಡೆಯೇ ಅಲ್ಲಿತ್ತು! ಮಾತ್ರವಲ್ಲ, ರಿಸರ್ವ್ ಪೋಲೀಸ್ ಬಟಾಲಿಯನ್`ಗಳನ್ನೂ ಕರೆಸಲಾಗಿತ್ತು!
ನವವರ್ಷಾಚರಣೆಗೂ ಪೋಲೀಸ್ ಸನ್ನದ್ಧತೆಗೂ ಏನು ಸಂಬಂಧ!? ಪ್ರಧಾನಮಂತ್ರಿಗಳು ಬಂದರೂ ಬಾರದಷ್ಟು ಪೋಲೀಸರು ನವ ವರ್ಷದ ಸ್ವಾಗತ-ಸಂಭ್ರಮಕ್ಕೆ ಏಕೆ ಬೇಕು!? ಪೋಲೀಸರೂ ನವವರ್ಷ-ಸಂಭ್ರಮದಲ್ಲಿ ಭಾಗಿಯಾಗಲೆಂದೇ ಅಲ್ಲಿ ನೆರೆದಿದ್ದರೇ!?
ಎಷ್ಟು ಮಾತ್ರಕ್ಕೂ ಅಲ್ಲ! ಸಂಭ್ರಮದ ಮಾತಿರಲಿ, ಇಂಗ್ಲೀಷ್ ಕ್ಯಾಲೆಂಡರಿನ ನೂತನ ವರ್ಷಾರಂಭದ ದಿನವೆಂದರೆ ಅದು ಪೋಲೀಸರ ಪಾಲಿಗೆ ಪರಮ ಕ್ಲೇಶದ ಸಮಯ!

ಏಕೆ!?

ತಥಾಕಥಿತ ಆಧುನಿಕ ಸಮಾಜವು ನವ ವರ್ಷವನ್ನು ಸ್ವಾಗತಿಸುವ ಪರಿಯು ಅತ್ಯಂತ ವಿಕೃತವಾದುದು! ನವವರ್ಷಾಚರಣೆಯು ನಡೆಯುವುದು ಮನೆಯಲ್ಲಿಯೋ, ಮಂದಿರದಲ್ಲಿಯೋ ಅಲ್ಲ, ರಸ್ತೆಗಳಲ್ಲಿ; ಅದು ಮಂಗಲದ ಜೊತೆಗಲ್ಲ, ಮದ್ಯ-ಮಾಂಸಗಳ ಮಧ್ಯದಲ್ಲಿ! ಇನ್ನು ಹಿಡಿಯಲಾರದಷ್ಟು ಮದ್ಯವು ಒಳಗಿಳಿದ ಮೇಲೆಯೇ ಈ ಮಂದಿ (ಒಂದಕ್ಷರದ ಅಂತರದಲ್ಲಿ ಅದು ‘ಹಂದಿ’) ರಸ್ತೆಗಿಳಿಯುವುದು!

ಕುಡಿಯಬಾರದುದನ್ನು ಕುಡಿದ ಮೇಲೆ ಆಡಬಾರದುದನ್ನು ಆಡುವುದು, ಮಾಡಬಾರದುದನ್ನು ಮಾಡುವುದು ಸ್ವಾಭಾವಿಕವೇ!
ಗಂಡಿಗೆ ಕೊಂಬು ಸೇರಿದ ಮೇಲಿನ ಕಥೆಯೆಂದರೆ ಅದು ದಾನವತೆಯೇ! (ಗಂಡಿನ ‘ಗ’ ಕ್ಕೆ ಕೊಂಬು ಸೇರಿದರೆ ಗುಂಡು; ಗಂಡಿಗೆ ಕೊಂಬು ಸೇರಿದರೆ ದಾನವ!) ಅಲ್ಲಿ ಸೇರಿದ ಮಾತಾ~ಭಗಿನೀಸದೃಶರ ಮೇಲೆ ನಡೆಯುವುದು ಅಸಭ್ಯ-ಅಶ್ಲೀಲ-ಅನುಚಿತ ಶಬ್ದಗಳ ಪ್ರಯೋಗ!
ಅಷ್ಟು ಮಾತ್ರವೇ ಅಲ್ಲ, ಆ ಮಾನಿನಿಯರ ಮಾನದ ಮೇಲೆ ಪಾನ-ದಾನವರ ಮಾನವೀಯತೆಯನ್ನು ಮರೆತ ಆಕ್ರಮಣ!!

ಹೇ ರಾಮ್!
ಇದು ಡಿಸೆಂಬರ್ 31 – ಜನವರಿ 1ರ ಮಧ್ಯರಾತ್ರಿ ಮಹಾತ್ಮಾಗಾಂಧಿ(!) ರಸ್ತೆಯಲ್ಲಿ ನಡೆದ ಪುಣ್ಯಕಾರ್ಯ! ಕಳೆದ ವರ್ಷ ಮಾತ್ರವಲ್ಲ, ಪ್ರತಿ ವರ್ಷವೂ…ಬೆಂಗಳೂರು ಮಾತ್ರವಲ್ಲ, ಭಾರತದ ವಿವಿಧೆಡೆ ನಡೆಯುವ- ಪ್ರತಿವಾರ್ಷಿಕ~ಸಾರ್ವತ್ರಿಕ ಅನಾಹುತವಿದು!

ಕಳೆದ ವರ್ಷದ ವಿಸ್ಮಯ-ವಿಕಟ-ವಿನೋದವೆಂದರೆ ಬೆಂಗಳೂರು ಪೋಲೀಸರ ಸರ್ವಸೈನ್ಯದ ಸಮ್ಮುಖದಲ್ಲಿಯೇ ಸಾವಿರಾರು ಮಹಿಳೆಯರ ಮರ್ಯಾದೆಯ ಮೇಲೆ ಮದ್ಯದ ಅಮಲಿನ ಮಲಿನ ಹಲ್ಲೆ! ತಮ್ಮ ಹೆಂಡಿರು-ಮಕ್ಕಳನ್ನು ಕಾಪಾಡಿಕೊಳ್ಳಲು ಪರದಾಡಿದ ಜನರು! ಮಾನ ಉಳಿಸಿಕೊಳ್ಳಲು ದಿಕ್ಕು-ದೆಸೆಗೆಟ್ಟು ಧಾವಿಸಿದ ಮಾನಿನಿಯರು!
ರಾಜಧಾನಿಯ ಪೋಲೀಸರ ಸರ್ವಸೈನ್ಯವು ಪಾನ-ರಾವಣರ ಸಂಖ್ಯೆಯ ಮುಂದೆ ಅರೆಕಾಸಿನ ಮಜ್ಜಿಗೆಯಾಯಿತೆಂದರೆ ‘ಸಮಾಜದಲ್ಲಿ ಇಂಥವರ ಸಂಖ್ಯೆ ಯಾವ ಪ್ರಮಾಣದಲ್ಲಿ ಹೆಚ್ಚುತ್ತಿದೆ? ಇದು ಹೀಗೆಯೇ ಮುಂದುವರಿದರೆ ದೇಶದ ಸ್ಥಿತಿ- ನಮ್ಮ~ನಿಮ್ಮ ಕಥೆ ಮುಂದೇನಾದೀತು’ ಎನ್ನುವುದನ್ನು ಊಹಿಸಬಹುದು!

~
ಇಷ್ಟಕ್ಕೂ ನಮಗರ್ಥವೇ ಆಗದ ಸಂಗತಿಯೆಂದರೆ ಗ್ರೆಗೋರಿಯನ್ ಕ್ಯಾಲೆಂಡರಿನ ನವ ವರ್ಷವನ್ನು ಭಾರತೀಯರು ಏಕಾದರೂ ಆಚರಿಸಬೇಕು? ಎಂಬುದು!

ಇದೋ ನೋಡಿ:
ಭಾರತೀಯ ಕಾಲಗಣನೆಯು ಪ್ರಕೃತಿಪೂಜೆ; ಗ್ರೆಗೋರಿಯನ್ ಕ್ಯಾಲೆಂಡರ್ ವ್ಯಕ್ತಿಪೂಜೆ.
ನಮ್ಮ ಪಂಚಾಂಗಗಳು ಸಂಪೂರ್ಣ ವೈಜ್ಞಾನಿಕ; ಪಾಶ್ಚಾತ್ಯರ ಕಾಲಗಣನೆಯು ಅಂಧಾನುಕರಣೆ – ಎಂಬುದನ್ನು ಈ ಕೆಳಗಿನ ನಮ್ಮ ಲೇಖನದಲ್ಲಿ ಸಾಧಾರವಾಗಿ ನಿರೂಪಿಸಿದೆ.

ಇರುವುದೆಲ್ಲವ ಬಿಟ್ಟು. . . !
…ನಮ್ಮ ಚೈತ್ರ-ವೈಶಾಖಗಳಿಗೆ, ಸಿಂಹ-ಧನುರ್ಮಾಸ ಗಳಿಗೆ ಖಗೋಳದಲ್ಲಿ ಆಧಾರವಿದೆ.
ಜನವರಿ ಫೆಬ್ರವರಿಗಳಿಗೆ ಆಧಾರವೆಲ್ಲೋ..?
ಭಾರತೀಯಕಾಲಗಣನೆ ಸೃಷ್ಟಿಯ ಮೇಲೆ ನಿಂತಿದೆ.
ಜುಲೈ-ಆಗಸ್ಟ್ ಗಳು ವ್ಯಕ್ತಿಗಳ ಮೇಲೆ ನಿಂತಿವೆ..!!

ಮುಂದೆ ಓದಿ>http://hareraama.in/blog/iruvudellava-bittu

~
ರಾವಣನು ಸತ್ತ ಬಳಿಕವೂ, ಸುದ್ದಿ ತಿಳಿಯದ ರಾಕ್ಷಸಿಯರು ಸೀತೆಗೆ ‘ರಾವಣನನ್ನು ವರಿಸು ವರಿಸು’ ಎಂದು ಒತ್ತಾಯಿಸುತ್ತಿದ್ದರಂತೆ. ನಮ್ಮ ಜನ ಜನವರಿ ಒಂದರಂದು ನವ-ವರ್ಷಾರಂಭವನ್ನು ಆಚರಿಸುವಾಗ ನಮಗೆ ಲಂಕೆಯ ರಕ್ಕಸಿಯರದೇ ನೆನಪು! ರಕ್ಕಸಿಯರೇ ವಾಸಿ; ರಾವಣ ಸತ್ತು ಕೆಲ ಹೊತ್ತು ಮಾತ್ರವೇ ಅವರು ರಾವಣ ವರಣದ ಜಪ ಮಾಡುತ್ತಿದ್ದುದು; ಬ್ರಿಟಿಷರು ಭಾರತ ಬಿಟ್ಟು ತೊಲಗಿ ಎಪ್ಪತ್ತು ವರ್ಷಗಳೇ ಕಳೆದಿವೆ; “ಇಂಡಿಯನ್ನರು” ಇನ್ನೂ ಅವರ ಅಂಧಾನುಕರಣೆಯನ್ನು ಬಿಟ್ಟಿಲ್ಲ!

ಭಾರತೀಯರ ನವ ವರ್ಷಾಚರಣೆ ಮತ್ತು ಪಾಶ್ಚಾತ್ಯರ & ಅವರ ಮಾನಸ ಸಂತಾನದ ನವವರ್ಷಾಚರಣೆಗಳ ನಡುವೆ ತೀರ್ಥ ಮತ್ತು ವೈನ್`ಗಳ ನಡುವೆ ಇರುವಷ್ಟೇ ಅಂತರವಿದೆ! ಭಾರತೀಯ ಪರಂಪರೆಯಲ್ಲಿ ಯುಗಾದಿಯಂದು ಹೊಸ ಬಟ್ಟೆಯುಟ್ಟು, ಪರಮಸಾತ್ತ್ವಿಕವಾದ, ಮಧುರ ಭಕ್ಷ್ಯಗಳನ್ನು ಭಗವಂತನಿಗರ್ಪಿಸಿ, ಬಳಿಕ ಅದನ್ನು ಇಷ್ಟ-ಮಿತ್ರರೊಡನೆ ಸೇರಿ ಸೇವಿಸಿ, ಸಂಭ್ರಮಿಸಿದರೆ- ಪಾಶ್ಚಾತ್ಯರು/ಅವರ ಮಾನಸಪುತ್ರರು ಕುಡಿಯಬಾರದುದನ್ನು ಕುಡಿದು, ತಿನ್ನಬಾರದುದನ್ನು ತಿಂದು, ತೊಟ್ಟ ಬಟ್ಟೆಯನ್ನೂ ಬಿಚ್ಚಿ ಬಿಸುಡಿ, ಹುಚ್ಚು ಕುಣಿತದಲ್ಲಿ ತಾವೂ ಕೊಚ್ಚಿ ಹೋಗುವುದಲ್ಲದೇ, ಈ ಪವಿತ್ರ ರಾಷ್ಟ್ರದ ಮರ್ಯಾದೆಯನ್ನೇ ಕೊಚ್ಚಿಕೊಂಡೊಯ್ಯುತ್ತಾರೆ!

ಭಾರತೀಯತೆಗೆ ಎಳ್ಳು-ನೀರು ಬಿಟ್ಟ ದೋಷವೊಂದು;
ಮದ್ಯಪಾನ-ಮಾನಹರಣಗಳ ಮೂಲಕ ಅತ್ಯಂತ ಹೇಯವಾಗಿ ವರ್ಷಾರಂಭವನ್ನು ಆಚರಿಸಿದ ದೋಷ ಇನ್ನೊಂದು!

~

ಆರಂಭವು ಅತಿ ಮುಖ್ಯ; ಏಕೆಂದರೆ, ಮುಂದುವರಿಕೆ-ಮುಕ್ತಾಯಗಳು ಆರಂಭವನ್ನೇ ಅವಲಂಬಿಸಿರುತ್ತವೆ. ಮೊದಲ ಹೆಜ್ಜೆಯೇ ಅಡ್ಡ ದಾರಿಯಲ್ಲಿದ್ದರೆ ಎಂದೂ ಗುರಿ ತಲುಪಲು ಸಾಧ್ಯವಾಗದು! ಯಾವುದೇ ಆರಂಭವು ಮಂಗಲಮಯವಾಗಿರಬೇಕು ಎಂದು ಭಾರತೀಯ ಪರಂಪರೆಯು ಆಗ್ರಹಿಸಲು ಇದುವೇ ಕಾರಣ. ವೈವಾಹಿಕ ಜೀವನವನ್ನು ಆರಂಭಿಸಬೇಕೆಂದರೆ ಮೊದಲಾಗಿ ಮದುವೆಯೆಂಬ ಮಂಗಲಕಾರ್ಯವನ್ನು ನೆರವೇರಿಸುತ್ತಾರೆ. ಮಂಗಲ ಕಾರ್ಯವನ್ನೇ ಆರಂಭಿಸುವುದಾದರೂ ಮೊದಲು ಮಂಗಲಮೂರ್ತಿಯ ಮಂಗಲ ಸ್ಮರಣೆಗೈಯುತ್ತಾರೆ.
ಒಂದು ಸಂಗೀತ ಕಛೇರಿಯನ್ನು ಆರಂಭಿಸುವಾಗಲೂ ಮೊದಲಿಗೆ ಗುರು-ಗಣಪತಿಯರ ಸ್ತುತಿಯನ್ನು ಹಾಡುತ್ತಾರೆ.

ಅಂತೆಯೇ ನವ ವಸ್ತ್ರ- ಮಧುರಭೋಜನ- ಇಷ್ಟ-ಮಿತ್ರಸಮಾಗಮ- ಭಗವದಾರಾಧನೆಗಳೊಡನೆ ನವ ವರ್ಷವನ್ನು ಆರಂಭಿಸುತ್ತಾರೆ.
‘ಮೊದಲ ದಿನದ ನೆರಳು ವರ್ಷವಿಡೀ’ ಎಂಬುದು ಇದರ ಭಾವ.
~
ಭಾರತ ಮಾತ್ರವಲ್ಲ, ಅನೇಕ ಅನ್ಯ ದೇಶಗಳಲ್ಲಿಯೂ ಈ ಭಾವವಿದೆ; ಬೆಲ್ಜಿಯಂ ಮತ್ತು ರೊಮೇನಿಯಾದ ರೈತರು ವರ್ಷದ ಮೊದಲ ದಿನ ತಮ್ಮ ಹಸುಗಳೊಂದಿಗೆ ಮಾತನಾಡಲು ಪ್ರಯತ್ನಿಸುತ್ತಾರೆ! ಅದು ಸಫಲವಾದರೆ ವರ್ಷವಿಡೀ ಅದೃಷ್ಟಮಯವೆಂಬುದು ಅವರ ಪಾರಂಪರಿಕ ವಿಶ್ವಾಸ! ‘ಸ್ವದೇಶದ ಆಚರಣೆಗಳು ಬೇಡ; ವಿದೇಶದ ಆಚರಣೆಯೇ ಬೇಕು’ ಎಂದಾದರೆ ಬೆಲ್ಜಿಯಂ-ರೋಮೇನಿಯಾಗಳ ಈ ಆಚರಣೆಯ ಅನುಕರಣೆ ಮಾಡೋಣ.
ಮೂಕ ಜೀವವೊಂದನ್ನು ಮಾತನಾಡಿಸುವುದಕ್ಕಿಂತ ಶ್ರೇಷ್ಠವಾದ ಹೊಸ ವರ್ಷದ ಆಚರಣೆ ಬೇರೆ ಯಾವುದಿದೆ!?

ಆದರೆ ಮಧ್ಯರಾತ್ರಿಯ ಈ ಮದ್ಯಾಸುರರು ಅನುಸರಿಸುವುದು ವಿದೇಶೀಯರ ಕೆಡುಕು-ಕುಡುಕುತನಗಳನ್ನು ಮಾತ್ರ, ಒಳಿತನ್ನಲ್ಲ!
~
ಕೊನೆಗುಟುಕು:
ಸಾಮಾನ್ಯವಾಗಿ ಈ ಬಗೆಯ ಲೇಖನಗಳು ಗ್ರೀಕ್ ನಾಟಕಗಳಂತೆ ದುಃಖಾಂತವೇ ಆಗಿರುತ್ತವೆ! ದೇಶವೇ ದುರಂತದೆಡೆಗೆ ಸಾಗುತ್ತಿರುವಾಗ ದೇಶದ ವಿದ್ಯಮಾನಗಳ ಕುರಿತಾದ ಲೇಖನಗಳು ಸುಖಾಂತವಾಗುವುದಾದರೂ ಹೇಗೆ? ಆದರೆ ಪ್ರಕೃತ ಲೇಖನವು ಮಾತ್ರ ಆಂಧ್ರದಲ್ಲಿ ಮೂಡಿದ ಆಶಾಕಿರಣವೊಂದರಲ್ಲಿ ಪರ್ಯವಸಾನಗೊಳ್ಳುತ್ತಿದೆ!

ಹೌದು, ಈ ದಿಶೆಯಲ್ಲಿ ದೇಶಕ್ಕೇ ದಾರಿ ತೋರಬಲ್ಲ ಬೆಳಕಿನ ಕಿರಣವೊಂದು ಆಂಧ್ರದಲ್ಲಿ ಮೂಡಿದೆ; ಆಂಧ್ರಪ್ರದೇಶ ಸರಕಾರದ ಧಾರ್ಮಿಕ-ದತ್ತಿ ಇಲಾಖೆಯು ತನ್ನ ಅಧೀನದಲ್ಲಿರುವ ಸಕಲ ದೇವಸ್ಥಾನಗಳಿಗೆ ಕಟ್ಟುನಿಟ್ಟಿನ ಸೂಚನೆಯೊಂದನ್ನು ನೀಡಿದೆ. ತದನ್ವಯ, ಎಲ್ಲ ದೇವಸ್ಥಾನಗಳು ಯುಗಾದಿಯಂದೇ ನವ ವರ್ಷವನ್ನು ಆಚರಿಸಬೇಕು. ಭಾರತೀಯ ವೇದಸಂಸ್ಕೃತಿಗೆ ಸಮ್ಮತವೆನಿಸದ ಜನವರಿ ಒಂದರ ನವವರ್ಷಾಚರಣೆಯನ್ನು ಯಾವುದೇ ದೇವಸ್ಥಾನವು ಮಾಡಕೂಡದು!

Link: Temples in Andhra Pradesh asked not to celebrate New Year on January 1

ದೇವಾಲಯಗಳಲ್ಲಿ ಜನವರಿ ೧ರ ಹೊಸವರ್ಷಾಚರಣೆಯ ವಿರುದ್ಧ ಆಂಧ್ರಪ್ರದೇಶ ಸರಕಾರ ಹೊರಡಿಸಿರುವ ಸುತ್ತೋಲೆ

ದೇವಾಲಯಗಳಲ್ಲಿ ಜನವರಿ ೧ರ ಹೊಸವರ್ಷಾಚರಣೆಯ ವಿರುದ್ಧ ಆಂಧ್ರಪ್ರದೇಶ ಸರಕಾರ ಹೊರಡಿಸಿರುವ ಸುತ್ತೋಲೆ

ಈವರೆಗೆ ನಡೆದ ಸಂಸ್ಕೃತಿಯ ಪತನದಲ್ಲಿ ಸರಕಾರಗಳ ಪಾತ್ರವು ಬಹು ದೊಡ್ಡದು! ಹೀಗಿರುವಾಗ, ಇಲ್ಲೊಂದು ಸರಕಾರವು ಸಂಸ್ಕೃತಿಯ ಪುನರುತ್ಥಾನಕ್ಕೆ ಕಾರಣವಾಗಬಲ್ಲ ಮಹತ್ತ್ವದ ಹೆಜ್ಜೆಯೊಂದನ್ನು ಇರಿಸಿದೆ; ಅಭಿನಂದಿಸದಿರಲು ಸಾಧ್ಯವೇ ಇಲ್ಲ!

ಆಂಧ್ರ ಸರಕಾರದ ಕಾಲೋಚಿತವಾದ ಮತ್ತು ಉಚಿತ-ಕಾಲಬೋಧಕವಾದ ಆದೇಶವನ್ನು ನಾವೆಲ್ಲರೂ- ಭಾರತನಿಷ್ಠರೆಲ್ಲರೂ ಒಕ್ಕೊರಲಿನಿಂದ ಸಮರ್ಥಿಸೋಣ. ಭಾರತದಲ್ಲಿಯೇ ಭಾರತೀಯ ಕಾಲಗಣನೆಯ ಅವಗಣನೆಯನ್ನು ಎದುರಿಸಿ, ಭಾರತೀಯರೆಲ್ಲರೂ ಎಚ್ಚೆತ್ತು, ಕೆಚ್ಚೆದೆಯಿಂದ ಹೋರಾಡೋಣ.

ನಮ್ಮ ನವವರ್ಷಾಚರಣೆಯು ಯುಗಾದಿಯಂದು;
ಅಲ್ಲಿರುವುದು ಬೇವು-ಬೆಲ್ಲ; ಮದ್ಯ-ಮಾಂಸ ಇಲ್ಲವೇ ಇಲ್ಲ!

LokaLekha by @SriSamsthana SriSri RaghaveshwaraBharati MahaSwamiji

~*~

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.

ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments