|| ಹರೇರಾಮ ||

ಕೇವಲ ದುಃಖವು ದುಃಖವೇ ಅಲ್ಲ.
ಸಂತೋಷದ ನಂತರ ಬರುವ ದುಃಖವೇ ನಿಜವಾದ ದುಃಖ..!
ಹುಟ್ಟುಬಡವನಿಗೆ ಗಂಜಿ ಕುಡಿಯಲು ಕಷ್ಟವೇನಿಲ್ಲ –
ಅದು ಕಷ್ಟವಾಗುವುದು, ಕೆಲಕಾಲ ಮೃಷ್ಟಾನ್ನವನ್ನುಂಡ ನಂತರವೇ…!

ಇಲ್ಲಿ ವಾಲ್ಮೀಕಿಗಳಿಗಾದದ್ದು ಹಾಗೆಯೇ…
ಪಕ್ಷಿಗಳ ಪ್ರೇಮ ಪ್ರಸಂಗವನ್ನು ಕಂಡ ಕಣ್ಣಿನಿಂದಲೇ ಅವುಗಳ ದಾರುಣ ಮರಣ-ವಿರಹ-ಸಂಕಟಗಳನ್ನು-
ಆ ಮೃದು ಹೃದಯಿ ಮುನಿ ಕಾಣಬೇಕಾಯಿತು….!
ಒಂದಾದ ಮೇಲೊಂದರಂತೆ ಪ್ರೇಮ-ಘೋರಗಳ ಪರಾಕಾಷ್ಠೆಯನ್ನು ಕಾಣುವುದೆಂದರೆ –
ಆನಂದದ ಅಂಬರವೇರಿ ಅನ್ಯಾಯದ ಪಾತಾಳಕ್ಕೆ ಉರುಳಿದಂತೆಯೇ ಅಲ್ಲವೇ..?

ಸುಡುವ ಸೂರ್ಯನ ಝಳಕ್ಕೆ ಹಿಮಾಲಯವು ಕರಗಿ ಗಂಗೆಯಾಗಿ ಹರಿವಂತೆ..
ಧರೆಯ ಧಗೆಗೆ ಮೋಡ ಕರಗಿ ಮಳೆಯಾಗಿ ಇಳಿಯುವಂತೆ..
ಪಕ್ಷಿಯ ಪರಿತಾಪದ ಬಿಸಿಗೆ ಕರಗಿತು ಮುನಿಮನವೆಂಬ ಹಿಮಾಲಯ..ಹರಿಯಿತು ಕಾವ್ಯಗಂಗೆಯಾಗಿ…!
ವಾಲ್ಮೀಕಿಗಳೊಳಗೆ ಹಕ್ಕಿಗಳ ಹರುಷದಿಂದಾಗಿ ಹುಟ್ಟಿಕೊಂಡಿದ್ದ ನಾಕವು ಶೋಕವಾಗಿ ಪರಿವರ್ತಿತವಾದರೆ-
ಶೋಕವು ಶ್ಲೋಕದಲ್ಲಿ ಪರ್ಯವಸಾನಗೊಂಡಿತು…!

ಮಹಾಪೂರವು ಆಣೆಕಟ್ಟನ್ನು ಮುರಿದು ಮುನ್ನುಗ್ಗುವಂತೆ –
ಸಂಯಮದ ಕಟ್ಟೆಯನ್ನೊಡೆದು ಮುನಿಮುಖದಿಂದ ಹೊರಹೊಮ್ಮಿತು ಶಾಪವಾಕ್ಯ..

ಮಾ ನಿಷಾದ ಪ್ರತಿಷ್ಠಾಂ ತ್ವಂ
ಅಗಮಃ ಶಾಶ್ವತೀಃ ಸಮಾಃ|
ಯತ್ ಕ್ರೌಂಚಮಿಥುನಾತ್ ಏಕಂ
ಅವಧೀಃ ಕಾಮಮೋಹಿತಮ್..||

ಶಾಪವಿದು ಬೇಡನಿಗೆ...ಮಂಗಲಮಹಾವರ ಮನುಕುಲಕೆ..!

“ಎಲೋ ಬೇಡನೇ..! ಕ್ರೌಂಚ ದ್ವಂದ್ವದಲ್ಲೊಂದನ್ನು, ಅದು ಕಾಮಮೋಹಿತವಾಗಿದ್ದಾಗ ನಿಷ್ಕರುಣೆಯಿಂದ ಕೊಂದೆಯಲ್ಲವೇ..?
ಮುಗ್ಧ ಪಕ್ಷಿಯ ವಾಸದ ನೆಲೆ (ವೃಕ್ಷ)-
ವಿಶ್ವಾಸದ ನೆಲೆ (ಪತ್ನಿ)-
ಮತ್ತು ಶ್ವಾಸದ ನೆಲೆ (ಬದುಕು)-
ಹೀಗೆ ಮೂರೂ ನೆಲೆಗಳನ್ನು ಇಲ್ಲವಾಗಿಸಿದ ನಿನಗೆ ನೆಲೆಯೇ ಸಿಗದಿರಲಿ…!”

ವೃತ್ತಿಧರ್ಮವೆಂಬ ನೆಲೆಯಲ್ಲಿ ನಿಂತಲ್ಲವೇ ಆತ ಪಕ್ಷಿಯನ್ನು ಹೊಡೆದದ್ದು..?
ಅಂದಮೇಲೆ ಋಷಿಯು ಬೇಡನ ಮೇಲೆ  ಕೋಪಿಸಲೇಕೆ..?
ಆತನನ್ನು ಶಪಿಸಲೇಕೆ..?

ಹಿಂಸೆಗಾದರೊಂದು ಕಾರಣ ಬೇಡವೇ…?
ಹಸಿವಿಗಾಗಿ ಕೊಲ್ಲುವುದುಂಟು..
ಅಪಾಯವಿದ್ದರೆ ಆತ್ಮರಕ್ಷಣೆಗೆಂದು ಕೊಲ್ಲುವುದುಂಟು..!
ಅಪರಾಧ ನಡೆದಾಗ ದಂಡನೆಯ ರೂಪದಲ್ಲಿ ಕೊಲ್ಲುವುದುಂಟು..

ಆದರಿಲ್ಲಿ..?
ಪಕ್ಷಿಯ ಹತ್ಯೆಯ ಹಿನ್ನೆಲೆಯಲ್ಲಿ ಇದ್ಯಾವ ಕಾರಣಗಳೂ ಇರಲಿಲ್ಲ..!
ಕೊಂದವನಿಗೆ ಹಸಿವಿರಲಿಲ್ಲ…
ಮುಗ್ಧ ಪಕ್ಷಿಯಿಂದ ಅವನಿಗೆ ಯಾವ ಅಪಾಯವೂ ಇರಲಿಲ್ಲ..
ಯಾವ ಅಪರಾಧವೂ ಘಟಿಸಿರಲಿಲ್ಲ..
ಆದುದರಿಂದಲೇ ವೃತ್ತಿಧರ್ಮವೊಂದೇನು..ಯಾವ ಧರ್ಮದ ನೆಲೆಯಲ್ಲಿಯೂ ನಡೆಸಿದ ಹತ್ಯೆ ಅದಾಗಿರಲಿಲ್ಲ..!

ಹಿಂಸೆಗಾದರೊಂದು ಸಮಯ ಬೇಡವೇ..?
ಕೊಲ್ಲಲು ಜೋಡಿ ಹಕ್ಕಿಗಳು ಜೊತೆಯಾಗಿ ಅದ್ವೈತದ ನೈಸರ್ಗಿಕ ಆನಂದದಲ್ಲಿ ವಿಹರಿಸುತ್ತಿರುವ ಸಮಯವೇ ಆಗಬೇಕೇ…?

ಹಿಂಸೆಗಾದರೊಂದು ಸಂದರ್ಭ ಬೇಡವೇ…?
ಪ್ರೇಮ-ದಯೆಗಳ ಸಾಕಾರರೂಪರಾದ ಮಹರ್ಷಿಗಳ ಕಣ್ಣೆದುರೇ ಇಂತಹ ಘೋರ ಕೃತ್ಯವನ್ನು ನಡೆಸುವುದೇ…?

ಹಿಂಸೆಗಾದರೊಂದು ಮಿತಿ ಬೇಡವೇ…?
ಪಕ್ಷಿಯುಗಳದಲ್ಲಿ ಒಂದನ್ನು ಹೊಡೆದು ಇನ್ನೊಂದನ್ನು ಬಿಡುವುದರಲ್ಲಿ,
ಒಂದರ ಮರಣಸಂಕಟ, ಇನ್ನೊಂದರ ವಿಯೋಗವ್ಯಥೆಯನ್ನು
ಒಮ್ಮೆಲೇ ಕಂಡು ಆನಂದಿಸುವ ಕ್ರೂರ ಹಿಂಸಾಸಂತೋಷಪ್ರವೃತ್ತಿಯಲ್ಲವೇ ಆ ಬೇಡನಲ್ಲಿ ಅಡಗಿದ್ದದ್ದು…!?

ವಿಷಯವೊಂದನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯ ಬುದ್ಧಿಗೆ ಉಪಕರಣಗಳು ಬೇಕು..
ಯುಕ್ತಿಗಳು ಬೇಕು..ಸಾಕ್ಷ್ಯಗಳು ಬೇಕು..
ಆದರೆ,
ಮುನಿಯಾದವನಿಗೆ ಅವನ ಪರಿಶುದ್ಧ ಅಂತಃಕರಣವೇ ಸಾಕು..
ಆ ಸಮಯದಲ್ಲಿ ಅವನ ಅಂತರಂಗದಲ್ಲೇಳುವ ಭಾವತರಂಗಗಳೇ ಸಾಕು..
ಅವನ ಆತ್ಮಸಾಕ್ಷಿಯೇ ಸಾಕು..!
ತನ್ನ ಆತ್ಮದಲ್ಲೇ ಜಗತ್ತನ್ನೇ ನೋಡಬಲ್ಲವನಿಗೆ, ಅರಿಯಬಲ್ಲವನಿಗೆ ತಾನೆ, ಮುನಿಯೆಂದು ಹೆಸರು..!

ಬೇಡನ ಬೇಡದ ಕೃತ್ಯದಿಂದಾಗಿ ತನ್ನೊಳಗೆ ಉಂಟಾದ ಶೋಕದಿಂದಲೇ ವಾಲ್ಮೀಕಿಗಳು ನಿರ್ಣಯಿಸಿದರು ಇಲ್ಲಿ ಧರ್ಮನಾಶವಾಗಿದೆ ಎಂದು.
ಏಕೆಂದರೆ, ಸತ್ಪುರುಷರಿಗೆ ಶೋಕವುಂಟಾಗುವುದು ಧರ್ಮನಾಶವಾದಾಗ ಮಾತ್ರ…!

‘ಧರ್ಮೋ ಹಂತಿ ಹತೋ ರಾಜನ್ ಧರ್ಮೋ ರಕ್ಷತಿ ರಕ್ಷಿತಃ..|’

ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುವುದು..
ಧರ್ಮವನ್ನು ನಾವು ಘಾತಿಸಿದರೆ ಅದು ನಮ್ಮನ್ನು ಘಾತಿಸುವುದೂ ಅಷ್ಟೇ ಸಹಜ…!
ಬಲ್ಲವರ ವಾಣಿಯಿದು..!

ಬೇಡ ಹೊಡೆದದ್ದು ಕೇವಲ ಪಕ್ಷಿಯನ್ನಲ್ಲ..
ಪಕ್ಷಿಗಳಲ್ಲಿ ಆನಂದದ ರೂಪದಲ್ಲಿ ಪ್ರಕಟವಾಗುತ್ತಿದ್ದ ಪ್ರಾಕೃತಿಕ ಧರ್ಮವನ್ನು…!
ಆದುದರಿಂದಲೇ ಪಕ್ಷಿಯೊಳಗೆ ಆಹತವಾದ ಧರ್ಮವು ವಾಲ್ಮೀಕಿಗಳೊಳಗಿನಿಂದ ವ್ಯಕ್ತವಾಗಿ – ಶಾಪವಾಗಿ ಬೇಡನನ್ನು ದಂಡಿಸಿತು…!
(ಪೂಜ್ಯರಾದ ಎನ್ೆ.ಎಸ್. ರಾಮಭದ್ರಾಚಾರ್ಯರು ನೀಡುತ್ತಿದ್ದ ವಿವರಣೆಯಿದು).

ನೆಲೆ ಸಿಗದಿರಲೆಂಬ ಶಾಪವಾಣಿಯೂ ಅರ್ಥಪೂರ್ಣವಾದುದೇ…!

ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ…|
ಧರ್ಮೋ ಧಾರಯತೇ ಪ್ರಜಾಃ…|

ಜಗತ್ತು ನೆಲೆ ನಿಂತಿರುವುದೇ ಧರ್ಮದ ಮೇಲೆ..
ಸಕಲ ಜೀವಿಗಳನ್ನೂ ಧರಿಸಿರುವ ಸೃಷ್ಟಿಯ ಧಾರಕಶಕ್ತಿಯೇ ಧರ್ಮ..
ಅದನ್ನೇ ಘಾತಿಸಿದ ಮೇಲೆ ಮತ್ತೆ ನೆಲೆಯೆಲ್ಲಿಂದ…?
ತಾನು ಕುಳಿತ ಕೊಂಬೆಯನ್ನೇ ಕಡಿದಂತಲ್ಲವೇ ಅದು..?

ಶ್ಲೋಕವಾಯಿತು ಶೋಕ..!

ಶೋಕದಲ್ಲಿಯೋ, ರೋಷದಲ್ಲಿಯೋ, ಆವೇಶದಲ್ಲಿಯೋ..ಆಡಿದ ಮಾತುಗಳು ತಾಳ ತಪ್ಪುವುದು ಸಹಜ..
ಆದರೆ ಅದೇನು ವಿಚಿತ್ರವೋ, ಶೋಕವಶರಾದ ವಾಲ್ಮೀಕಿಗಳ ಬಾಯಿಯಿಂದ ಅಪ್ರಯತ್ನವಾಗಿ ಹೊರಹೊಮ್ಮಿದ ಮಾತುಗಳು ಕೇವಲ ಮಾತಾಗಿರದೆ ಸುವ್ಯವಸ್ಥಿತವಾದ ಛಂದೋಬದ್ಧವಾದ ಕವಿತೆಯಾಗಿದ್ದವು…!

ಸರಿಯಾಗಿ ನಾಲ್ಕು ಚರಣಗಳು..
ಒಂದೊಂದು ಚರಣದಲ್ಲಿಯೂ ಸರಿಯಾಗಿ ಎಂಟೆಂಟು ಅಕ್ಷರಗಳು…!
ತಂತ್ರೀವಾದ್ಯಗಳೊಡನೆ ಮೇಳೈಸಿ ಸೊಗಸಾಗಿ ಹಾಡಬರುವ ತೆರನಾದ ರಾಗ- ತಾಳ-ಲಯಗಳ ಸಮನ್ವಯ..!
ಇವುಗಳೆಲ್ಲವೂ ಆ ಕವಿತಾರೂಪದ ಶಾಪವಾಕ್ಯದಲ್ಲಿ ತಾನೇತಾನಾಗಿ ಪಡಿಮೂಡಿದ್ದವು..

ಗಿರಿಯಿಂದ ಸಹಜವಾಗಿ ಧುಮ್ಮಿಕ್ಕುವ ಝರಿಯಂತೆ..
ವಾಲ್ಮೀಕಿಗಳ ಯಾವ ಪ್ರಯತ್ನವೂ ಇಲ್ಲದೆಯೇ ಛಂದೋಬದ್ಧವಾಗಿ – ರಸಭಾವ ಪರಿಪೂರ್ಣವಾಗಿ –
ತಾಳ-ಲಯಸಮನ್ವಿತವಾಗಿ ಆ ಕವಿತೆ ಅವರೊಳಗಿನಿಂದ ಧುಮ್ಮಿಕ್ಕಿತು…!

ಅವು ಕೇವಲ ಅಕ್ಷರಗಳ ಜೋಡಣೆಯಲ್ಲ..
ಅಂತಃಸ್ಪೂರ್ತಿಯ ನೆಲೆಯಲ್ಲಿ ಚಿಮ್ಮಿಬಂದ ಕಾವ್ಯಧಾರೆ..

ಅದು ಈ ಜಗದ ಮೊದಲ ಕವಿತೆ…!
ಆದಿಕಾವ್ಯದ ಆದಿಮಂಗಳ ಪಂಕ್ತಿಯದು…!

ಆದಿಕವಿತೆಯು ಮುಂಬರುವ ಅನಂತಕವಿತೆಗಳಿಗೆ ಹೇಳಿದ ಪಾಠವಿದು..
ಕವಿತೆಯೆಂಬುದು ಮುಗಿಲಿನಿಂದ ತಾನೇತಾನಾಗಿ ಇಳಿದು ಬರುವ ಮಳೆಯಂತೆ..
ಗಿರಿಯಿಂದ ಸಹಜವಾಗಿ ಹರಿದು ಬರುವ ಝರಿಯಂತೆ…
ಭೂಮಿಯ ಒಡಲಿನಿಂದ ನೈಸರ್ಗಿಕವಾಗಿ ಚಿಮ್ಮಿ ಬರುವ ಚಿಲುಮೆಯಂತೆ…
ಸಹಜವಾದ ಭಾವ ಸೃಷ್ಟಿಯಾಗಿರಬೇಕೇ ಹೊರತು ನಲ್ಲಿಯ ನೀರಿನಂತೆ  ಕೃತ್ರಿಮವಾದ ಬುದ್ಧಿಸೃಷ್ಟಿಯಾಗಿರಬಾರದು..
ಒಂದಿಷ್ಟು ಹಣಕ್ಕಾಗಿಯೋ ಹೆಸರಿಗಾಗಿಯೋ ಮನ ಬಂದಂತೆ ಕೃತ್ರಿಮವಾಗಿ ಹೊಸೆಯುವ ಶಬ್ದಜಾಲಗಳೆಲ್ಲ ಕಾವ್ಯಗಳಲ್ಲ…!

ಕೆಲವರ ವರ ಹಲವರಿಗೆ ಶಾಪವಾಗುವುದುಂಟು..!
ಉದಾಹರಣೆಗೆ, ರಾವಣನಿಗೂ, ಹಿರಣ್ಯಕಶ್ಯಪುವಿಗೂ ಸಿಕ್ಕಿದ ವರಗಳು ವಿಶ್ವಕಂಟಕವಾಗಿ ಪರಿಣಮಿಸಿದವು…!
ಆದರೆ ಇಲ್ಲಿ ಹಾಗಲ್ಲ…
ಬೇಡನಿಗೆ ವಾಲ್ಮೀಕಿಗಳಿತ್ತ ಶಾಪವು ವಿಶ್ವಕ್ಕೆ ಶ್ರೀರಾಮಾಯಣ ರೂಪದ ಶಾಶ್ವತ ವರವಾಗಿ ಪರಿಣಮಿಸಿತು…!
ಅನಂತ ಕಾವ್ಯಗಳ ಅಮೃತಧಾರೆಯ ಪ್ರಥಮಬಿಂದುವಾಯಿತು…!

|| ಹರೇರಾಮ ||

Facebook Comments