ಸೀತೆಯ ಚಾರಿತ್ರ್ಯ ದೊಡ್ಡದು.
ತನ್ನ ಬಾಲದ ಬೆಂಕಿಯಿಂದ ಸಂಪೂರ್ಣ ಲಂಕೆಯೇ ಹೊತ್ತಿ ಉರಿದರೂ ಅಬಾಧಿತಳಾಗಿಯೇ ಉಳಿದ ಆಕೆಯನ್ನು ಕಂಡು ಹನುಮಂತ ಉದ್ಗರಿಸುತ್ತಾನೆ..
ಅಪಿ ಸಾ ನಿರ್ದಹೇತ್ ಅಗ್ನಿಂ ನ ತಾಂ ಅಗ್ನಿಃ ಪ್ರಧಕ್ಷ್ಯತಿ ||

(ತನ್ನ ಚಾರಿತ್ರ್ಯ ಬಲದಿಂದ ಸೀತೆಯೇ ಅಗ್ನಿಯನ್ನು ಸುಟ್ಟು ಬಿಡಬಹುದೇ ಹೊರತು, ಅಗ್ನಿ ಸೀತೆಯನ್ನು ಮುಟ್ಟಲಾರ – ವಾಲ್ಮೀಕಿ ರಾಮಾಯಣ)

Seethaa Raama

Seethaa Raama

ರಾವಣನ ಭೋಗ ಲಾಲಸೆ ದೊಡ್ಡದು.
ಅಂತಃಪುರದಲ್ಲಿ ಏಳು ಸಾವಿರ ಮಂದಿ ಸ್ತ್ರೀಯರಿದ್ದರೂ, ಆತನಿಗೆ ಸಾಕೆಂಬುದಿರಲಿಲ್ಲ..

ಸೀತೆಯ ಚಾರಿತ್ರ್ಯ, ರಾವಣನ ಭೋಗ ಲಾಲಸೆಗಳ ನಡುವಿನ ಮಹಾ ಸಂಗ್ರಾಮವೇ ’ರಾಮಾಯಣ’..

ತನ್ನ ಬಲ ಪರಾಕ್ರಮಗಳಿಂದ ಹದಿನಾಲ್ಕು ಲೋಕಗಳನ್ನೂ ವಶಪಡಿಸಿಕೊಂಡ ರಾವಣನಿಗೆ ಸೀತೆಯನ್ನು ಮಾತ್ರ ವಶಪಡಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

ಬಗೆಬಗೆಯ ಆಮಿಷಗಳನ್ನೊಡ್ಡಿದರೂ..
ಪರಿಪರಿಯಲ್ಲಿ ಪೀಡಿಸಿ ಭಯಪಡಿಸಿದರೂ..
ಸೀತೆಯನ್ನು ವಶಪಡಿಸಿಕೊಳ್ಳಲಾರದೆ ಚಿಂತಾಕ್ರಾಂತನಾಗಿ ಕುಳಿತಿದ್ದ ರಾವಣನಿಗೆ ಸಚಿವನೊಬ್ಬ ಸಲಹೆ ಕೊಡುತ್ತಾನೆ..
“ಸೀತೆಗೆ ರಾಮನೆಂದರೆ ಪಂಚಪ್ರಾಣ, ನೀನ್ಯಾಕೆ ರಾಮನ ರೂಪ ಧರಿಸಿ ಸೀತೆಯ ಬಳಿ ಸಾಗಬಾರದು? ದೀರ್ಘಕಾಲದ ಪತಿವಿರಹದಿಂದ ಕಂಗೆಟ್ಟ ಆಕೆ ಕ್ಷಣದಲ್ಲಿ ನಿನ್ನ ವಶವಾಗಿ ಬಿಡಬಹುದಲ್ಲವೇ?”..

ಅಸಹಾಯಕತೆಯ ಮುಖಮುದ್ರೆಯೊಂದಿಗೆ ರಾವಣ ಉತ್ತರವಿತ್ತ:

“ನಾನಿದನ್ನು ಬಹಳ ಮೊದಲೇ ಪ್ರಯತ್ನಿಸಿದ್ದೆ, ಆದರೇನು ಮಾಡೋಣ?,
ರಾಮನ ರೂಪವನ್ನು ಧರಿಸಲೆಂದು ಆಪಾದಮಸ್ತಕ ರಾಮನ ಮೂರ್ತಿಯನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಲು ಆರಂಭಿಸುತ್ತಿದ್ದಂತೆಯೇ,ನನ್ನ ಸ್ವರೂಪ – ಸ್ವಭಾವಗಳೇ ಬದಲಾಗಿ ಬಿಡ್ಡುತ್ತಿದ್ದವು..
ಕೇವಲ ಸೀತೆಯೇಕೆ, ಪರನಾರಿಯರನ್ನು ವಶಪಡಿಸಿಕೊಳ್ಳುವ ವಿಚಾರವೇ ಮನದಿಂದ ಮರೆಯಾಗಿ ಬಿಡುತ್ತಿತ್ತು. ಮುಂದುವರಿದರೆ ರಾವಣತ್ವವೇ ನಶಿಸಿಬಿಡಬಹುದೆಂಬ ಭಯದಿಂದ ಆ ಪ್ರಯತ್ನವನ್ನೇ ನಾನು ಕೈ ಬಿಡಬೇಕಾಯಿತು”.

ಶ್ರೀ ರಾಮನ ಸ್ಮರಣೆ ಮಾಡುವ ಪವಾಡವಿದು!!
ದುರುದ್ದೇಶದಿಂದಲೇ ಆದರೂ, ಒಂದೇ ಒಂದು ಬಾರಿ ಸ್ಮರಿಸಿದ ಮಾತ್ರಕ್ಕೇ ರಾವಣನಂಥವನ ವಿಕೃತ ಮನಸ್ಸನ್ನೇ ಪರಿವರ್ತಿಸಬಲ್ಲ ರಾಮನ ರೂಪದ ಪ್ರಭಾವವನ್ನು ಊಹಿಸಿಕೊಳ್ಳಿ!

ಸ್ಮರಣೆಯೆಂಬುದು ಅಂತರಂಗದ ಬಾಗಿಲಿದ್ದಂತೆ..

ಸ್ಮರಣೆಯ ಮೂಲಕ ಯಾರನ್ನು ಬೇಕಾದರೂ ನಮ್ಮೊಳಗೆ ಕರೆತರಬಹುದು..
ಒಂದು ವೇಳೆ ರಾವಣನನ್ನು  ಕರೆತಂದರೆ..!?
ನಮ್ಮ ಮನಸ್ಸೇ ಲಂಕೆಯಾದೀತು..
ಹೊತ್ತಿ ಉರಿದೀತು..
ರಣ ಭೂಮಿಯಾದೀತು..!

ಅದೇ ನಾವು ರಾಮನನ್ನೇ ಕರೆತಂದರೆ..?
ನಮ್ಮ ಅಂತರಂಗವೇ ರಾಮರಾಜ್ಯವಾದೀತು..
ಯುದ್ಧಗಳನ್ನು ಮೀರಿದ ಅಯೋಧ್ಯೆಯಾದೀತು..!

ಕೃತಯುಗದಲ್ಲಿ ರಾಕ್ಷಸರ ವಾಸ ಕಾಡಿನಲ್ಲಿ..
ತ್ರೇತಾಯುಗದಲ್ಲಿ ರಾಕ್ಷಸರು ಲಂಕೆಯಂತಹ ನಾಡಿನಲ್ಲಿ.,
ದ್ವಾಪರದಲ್ಲಿ ಕಂಸ ಶಿಶುಪಾಲರಾಗಿ ಮನೆ ಮನೆಗಳಲ್ಲಿ..
ಕಲಿಯುಗದಲ್ಲಿ ರಾಕ್ಷಸರು ಮನ ಮನಗಳಲ್ಲಿ…!!

ಮನದೊಳಗೆ ರಾಕ್ಷಸ ಸಂಹಾರವಾಗಬೇಡವೇ?
ಹಾಗಾಗಲು –  ನಮ್ಮೊಳಗೆ ರಾಮನ ಅವತಾರ ಆಗಲೇ ಬೇಕಲ್ಲವೇ.?

ಜೀವನ ಪಾವನವಾಗಲು ಎಷ್ಟೆಲ್ಲ ಬೇಕು?
ಇಷ್ಟು ಸಾಕು..!
ಹತ್ತು ಹಲವು ಬಾರಿ ಬೇಕಿಲ್ಲ…
ರಾಮನೊಪ್ಪುವಂತೆ ಒಂದೇ ಒಂದು ಬಾರಿ ಸ್ಮರಣೆಯಾಗಲಿ..

ಸ್ಮರಣೆಯ ರಥವೇರಿ ರಾಜಾರಾಮ ಮನದ ರಾಜ್ಯವನ್ನು ಪ್ರವೇಶಿಸಲಿ..
ದೇಹ ದೇಹಗಳಲ್ಲಿ ರಾಮರಾಜ್ಯದ ಉದಯವಾಗಲಿ..!
ಮತ್ತೆ ದೇಶ ದೇಶಗಳಲ್ಲಿ ವಿಸ್ತರಿಸಲಿ..

ಆರಂಭ ನಮ್ಮಿಂದಲೇ..

|| ಹರೇ ರಾಮ ||

Facebook Comments