LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಎಂಟು ಒಂದಾಯಿತು..ಕೊನೆಯೇ ಮೊದಲಾಯಿತು…!!

Author: ; Published On: ಗುರುವಾರ, ನವೆಂಬರ 18th, 2010;

Switch to language: ಕನ್ನಡ | English | हिंदी         Shortlink:

|| ಹರೇ ರಾಮ ||

ದೀಪ ಬೆಳಗಬೇಕು..
ದೀಪ ಬೆಳಗಬೇಕೆಂದರೆ ಬತ್ತಿಗಳು ಉರಿಯಬೇಕು..
ದೀಪವು ದೀರ್ಘಕಾಲ ಬೆಳಗಬೇಕೆಂದರೆ ಎಣ್ಣೆಯು ಸದ್ದಿಲ್ಲದೆಯೇ ಆತ್ಮಾರ್ಪಣೆ ಮಾಡಿಕೊಳ್ಳಬೇಕು..
ತಾನು ಆರಿ ದೀಪವನ್ನು ಉರಿಸಬೇಕು…
ತನ್ನ ಆಯುಸ್ಸನ್ನು ಜ್ಯೋತಿಗೆ ಧಾರೆಯೆರೆಯಬೇಕು..
ದೀಪದ ಧವಲಪ್ರಭೆಗಾಗಿ ದೀಪಪಾತ್ರವು ತನ್ನ ಮೈಯೆಲ್ಲವನ್ನೂ ಮಸಿಯಾಗಿಸಿಕೊಳ್ಳಬೇಕು..
ದೀಪವು ಪ್ರಜ್ವಲಿಸಿ ಪ್ರಕಟಗೊಂಡರೆ ಇವು ಕಂಡೂ ಕಾಣಿಸದವು..!!
ತಾವು ಮರೆಯಲ್ಲಿ ನಿಂತು ಸಕಲ ಕೈಂಕರ್ಯವನ್ನೂ ನಡೆಸಿ ದೀಪವನ್ನು ಮೆರೆಸಿದವು..
ದಶರಥನೆಂಬ ದೀಪವು ದೇದೀಪ್ಯಮಾನವಾಗಿ ಧರೆಯನ್ನು ಬೆಳಗಲು ತಮ್ಮ ಸರ್ವಸ್ವವನ್ನೂ ಧಾರೆಯೆರೆದ ಆ ಕಾರಣಪುರುಷರನ್ನು – ತ್ಯಾಗಜೀವಿಗಳನ್ನು – ಎಲೆಮರೆಯ ಕಾಯಿಗಳನ್ನು ಇಲ್ಲಿ ಉಲ್ಲೇಖಿಸದಿರಲು ಸಾಧ್ಯವೇ ಇಲ್ಲ..!
ಅವರೇ ವೀರದಶರಥನ ವಿವೇಕೀ ಮಂತ್ರಿಗಳು..!

ಮಂತ್ರಿಣಃ ಸಪ್ತ ವಾಷ್ಟೌ ವಾ ಪ್ರಕುರ್ವೀತ ಪರೀಕ್ಷಿತಾನ್
“ಏಳು ಅಥವಾ ಎಂಟು ಸುಯೋಗ್ಯ ವ್ಯಕ್ತಿಗಳನ್ನು ಚೆನ್ನಾಗಿ ಪರೀಕ್ಷಿಸಿ ಮಂತ್ರಿಗಳನ್ನಾಗಿ ನೇಮಿಸಿಕೊಳ್ಳಬೇಕು”.. ಇದು ಮನುವಚನ..
ಅದರಂತೆ ದಶರಥನ ಆಸ್ಥಾನದಲ್ಲಿ ಎಂಟು ಮಂತ್ರಿಗಳು..
೧. ಧೃಷ್ಟಿ
೨. ಜಯಂತ
೩. ವಿಜಯ
೪. ಸಿದ್ಧಾರ್ಥ
೫. ಅರ್ಥಸಾಧಕ
೬. ಅಶೋಕ
೭. ಮಂತ್ರಪಾಲ
ಎಂಟನೆಯವನೇ ಸಾರಥ್ಯ- ಸಾಚಿವ್ಯಗಳನ್ನು ಜೊತೆಜೊತೆಗೇ ನಿರ್ವಹಿಸುತ್ತಿದ್ದ ’ಸುಮಂತ್ರ’..

ಶ್ರಮ-ವಿಶ್ರಮಗಳ ಪರಿವಿಲ್ಲದೆಯೇ, ಅನವರತವಾಗಿ ಧರಿತ್ರಿಯ ಭಾರವೆಲ್ಲವನ್ನೂ ಹೊರುವ ಅಷ್ಟದಿಗ್ಗಜಗಳನ್ನು ನೆನಪಿಸುವಂತಿದ್ದರು ಸಾಕೇತ ಸಾಮ್ರಾಜ್ಯದ ಸರ್ವಭಾರವನ್ನೂ ಹೊತ್ತು ನಡೆಸುತ್ತಿದ್ದ ದಶರಥನ ಅಷ್ಟ ಸಚಿವರು..
ಮಂತ್ರಿಗಳಂಥವರಿದ್ದರೆ ’ದಶರಥ ರಾಜ್ಯ’ವೇನು,”ರಾಮರಾಜ್ಯ’ವೂ ಅಸುಕರವಲ್ಲ..!!

ಯೋಗ್ಯತೆ-ಯೋಗಗಳು ಜೊತೆಗಿರುವುದೇ ಸೊಗಸು..
ಯೋಗ್ಯತೆಯಿದ್ದು ಯೋಗವಿಲ್ಲದಿದ್ದರೆ ಅದು ಅತೃಪ್ತಿ..
ಯೋಗ್ಯತೆಯಿಲ್ಲದೆಯೇ ಬರುವ ಯೋಗ , ಅದು ನೆಮ್ಮದಿಯ ವಿಯೋಗ..!!
ಅದು ಸಂಪತ್ತಿನ ವೇಷ ತೊಟ್ಟು ಬರುವ ಆಪತ್ತು..!!
ಅದು ವ್ಯಕ್ತಿಗೆ ವಿನಾಶ… ಸಮಾಜಕ್ಕೆ ಕೇಡು..!!
ಯೇನ ಕೇನ ಪ್ರಕಾರೇಣ ಖುರ್ಚಿಯನ್ನಾಶ್ರಯಿಸಬಯಸುವವರರಿಯದ ಸತ್ಯವಿದು..!!
ಯೋಗ್ಯತೆಯೇ ಯೋಗವಾಗಿ ಪರಿಣಮಿಸಿದರೆ.. ಆತ್ಮಕಲ್ಯಾಣ.. ಲೋಕಕಲ್ಯಾಣ ಒಟ್ಟೊಟ್ಟಿಗೇ..!!
ದಶರಥನ ಮಂತ್ರಿಗಳ ಯೋಗ್ಯತೆಯು ಕೋಸಲದ ಶುಭಯೋಗವಾಗಿ ಪರಿಣಮಿಸಿತು…
ಆಯಾ ಪಾತ್ರಕ್ಕೆ ಬೇಕಾದ ವೇಷಭೂಷಣಗಳೊಂದಿಗೆ ಸಜ್ಜಾಗಿಯೇ ನಟನೊಬ್ಬ ರಂಗವನ್ನೇರುವಂತೆ, ಸಚಿವತ್ವಕ್ಕೆ ಬೇಕಾದ ಸಕಲ ಅರ್ಹತೆಗಳನ್ನೂ ಸಾಧನೆ ಮಾಡಿಯೇ ಆ ಸ್ಥಾನವನ್ನೇರಿದ್ದರವರು..

ಪ್ರಾಮಾಣಿಕತೆಯೇ ದುರ್ಲಭ..
ಪ್ರಾಮಾಣಿಕರೆಲ್ಲ ಸಮರ್ಥರಲ್ಲ..
ಪ್ರಾಮಾಣಿಕತೆ – ಸಾಮರ್ಥ್ಯಗಳೆರಡೂ ಇದ್ದವರು ವಿಧೇಯರಲ್ಲ..
ಮೂರೂ ಕೂಡಿದರೆ ಪೂರ್ವ ಸುಕೃತವದು..
ಅಂಥ ಸೇವಕರನ್ನು ಪಡೆಯಲು ಸ್ವಾಮಿಯೇ ಪುಣ್ಯ ಮಾಡಿರಬೇಕು..!!
ಧನ್ಯ ದಶರಥ..!
ಆತನ ಮಂತ್ರಿಗಳಂಥವರು…!

ಮಂತ್ರಿಯೆಂದರೆ ಮಂತ್ರಕ್ಕೊದಗುವವನು..
ಮಂತ್ರವೆಂದರೆ ರಾಜ್ಯಹಿತದ ಗುಪ್ತಸಮಾಲೋಚನೆ..
ಹಲವು ಪರಿಣತರ ಹಲವು ಬಗೆಯ ಚಿಂತನೆಗಳು ಹೊರಸೂಸಿ, ಕಲೆತು, ಮಥನವೇರ್ಪಟ್ಟು, ಹೊರಹೊಮ್ಮುವ ಸಮೀಚೀನವಾದ ನಿರ್ಣಯವದು..
ವಸ್ತುವೊಂದನ್ನು ಸಮಗ್ರವಾಗಿ ತಿಳಿಯಲು ಒಂದು ದೃಷ್ಟಿ ಪರ್ಯಾಪ್ತವಲ್ಲ..
ಹಿಂದೆ….. ಮುಂದೆ…
ಆಚೆ….. ಈಚೆ….
ಮೇಲೆ…… ಕೆಳಗೆ……
ಒಳಗೆ….. ಹೊರಗೆ…….
ಹೀಗೆ ಬಗೆ ಬಗೆಯ ನೋಟಗಳು ಕಲೆತು ಒಂದು ನೋಟವಾದಾಗಲೇ ವಸ್ತುವಿನ ಸಮಗ್ರದರ್ಶನವಾಗುವುದು..
ಹಲವು ನದಿಗಳು ಸ್ವತಂತ್ರವಾದ ಅಸ್ತಿತ್ವದೊಡನೆ – ವ್ಯಕ್ತಿತ್ವದೊಡನೆ ಹರಿಯುತ್ತವೆ..
ಕೊನೆಯಲ್ಲಿ ಸಾಗರದೊಡನೆ ಸಂಗಮಗೊಳ್ಳುತ್ತವೆ..
ಸಮರಸವಾಗುತ್ತವೆ.. ಏಕರಸವಾಗುತ್ತವೆ..
ಹಾಗೆಯೇ ಮಂತ್ರಾಲೋಚನೆಯಲ್ಲಿ ಹಲವರ ಹಲವು ಸ್ವತಂತ್ರ ಚಿಂತನೆಗಳು ಹರಿಯಬೇಕು..
ಕೊನೆಗೊಂದು ಮಹಾನಿರ್ಣಯದಲ್ಲಿ ಸಮರಸವಾಗಿ ಸಮನ್ವಿತವಾಗಬೇಕು…

ಕಾಲಿಡುವಲ್ಲಿ ಮೊದಲು ಕಣ್ಣಿಡಬೇಕಲ್ಲವೇ..?
ದೃಷ್ಟಿಪೂತಂ ನ್ಯಸೇತ್ ಪಾದಂ’..
ಕಣ್ಣೆಡವಿದರೆ ಮತ್ತೆ ಕಾಲೆಡುವುವುದು ಸ್ವಾಭಾವಿಕವಲ್ಲವೇ..?
ಚೆನ್ನಾಗಿ ನೋಡಿಕೊಳ್ಳಬೇಕಾದುದನ್ನು ಮೊದಲು ಚೆನ್ನಾಗಿ ನೋಡಬೇಕಲ್ಲವೇ..?
ಆ ಮುನ್ನೋಟವೇ – ಯಾವುದೇ ಕಾರ್ಯದ ಪೂರ್ವಾವಲೋಕನವೇ ’ಮಂತ್ರ’ ಅಥವಾ ಮಂತ್ರಾಲೋಚನೆ..

ರಾಜ್ಯಭಾರಕ್ಕೆ ಮಂತ್ರವೇ ಮೂಲಾಧಾರ..

ಮಂತ್ರದ ಪರಿಚಯ ಬೇಕೇ..?
ಮಂತ್ರಾಲೋಚನೆಯ ಪ್ರಾರಂಭ – ಪ್ರಯೋಗ – ಪರಿಣಾಮಗಳ ಬಗೆಗೆ ತಿಳಿದುಕೊಳ್ಳಬೇಕೆ..?
ದಶರಥನ ಮಂತ್ರಿಗಳ ನಾಮಧೇಯಗಳನ್ನು ಒಮ್ಮೆ ಕೊನೆಯಿಂದ ಮೊದಲವರೆಗೆ ಅವಲೋಕಿಸಿದರೆ ಸಾಕು..!!

ಮಂತ್ರಗಳೆರಡು ಬಗೆ, ‘ಸುಮಂತ್ರ-ದುರ್ಮಂತ್ರ‘ ಎಂಬುದಾಗಿ..
ತಪ್ಪು ಸಲಹೆಗಳು, ತಪ್ಪುದಾರಿಯಲ್ಲಿ ನಡೆಯುವ ಸಂವಾದ, ತತ್ಫಲವಾದ ತಪ್ಪು ನಿರ್ಣಯಗಳಿಂದ ಕೂಡಿದ ಮಂತ್ರಾಲೋಚನೆಯು ’ದುರ್ಮಂತ್ರ’..
ಸೂಕ್ತ ಸಲಹೆಗಳು, ಸಮುಚಿತ ಸಂವಾದ, ಸಮರ್ಪಕ ನಿರ್ಣಯಗಳಿಂದ ಕೂಡಿದ ಮಂತ್ರಾಲೋಚನೆಯು ’ಸುಮಂತ್ರ’..

ಷಟ್ಕರ್ಣೋ ಭಿದ್ಯತೇ ಮಂತ್ರಃ’..
ಇಬ್ಬರ ನಡುವೆ ನಡೆಯುವ ಸಂಭಾಷಣೆಯು ಆರು ಕಿವಿಗಳನ್ನು , ಎಂದರೆ ಮೂರನೆಯ ವ್ಯಕ್ತಿಯನ್ನು ತಲುಪಲೇಬಾರದು..
ತಲುಪಬಾರದಲ್ಲಿ ವಿಷಯಗಳು ತಲುಪಿದರೆ ಮೂಲಘಾತವೇ ಆದೀತು..!
ಆದುದರಿಂದಲೇ ’ಸುಮಂತ್ರ’ ಎಷ್ಟು ಮುಖ್ಯವೋ, ಮಂತ್ರಾಲೋಚನೆಯ ಗೌಪ್ಯಪಾಲನೆಯೂ ಅಷ್ಟೇ ಮುಖ್ಯ..
ಅದುವೇ ’ಮಂತ್ರಪಾಲ

ಸಮಸ್ಯೆಗಳು ಬಂದು ಮುಸುಕಿದಾಗ, ಪರಿಹಾರ ತೋರದಾದಾಗ  ಶೋಕವು  ಮನುಷ್ಯನನ್ನು ಬಾಧಿಸುವುದುಂಟು..
ಮುಂದೇನು ಮಾಡಬೇಕೆಂಬುದೇ ತಿಳಿಯದ ದಿಙ್ಮೂಢಾವಸ್ಥೆಯು ಆವರಿಸುವುದುಂಟು..
ಆಗ ನಮ್ಮ ನೆರವಿಗೆ ಬರುವುದೇ ’ಮಂತ್ರ’
ಆಪ್ತಸಮಾಲೋಚನೆಯಿಂದ ಮುಂದಿನ ದಾರಿ ನಮಗೆ ಸುಜ್ಞಾತವಾಗಬೇಕು..
ಆದರೆ ಬೇರೆಯವರಿಗೆ ನಮ್ಮ ಮುಂದಿನ ಹೆಜ್ಜೆಯೇನೆಂಬುದು ಅಜ್ಞಾತವಾಗಿಯೇ ಇರಬೇಕು..
ಹಾಗಾದಾಗ – ಸಮಾಲೋಚನೆಯ ’ಸುಮಂತ್ರಾವಸ್ಥೆ’ ಮತ್ತು ಗೌಪ್ಯ ರಕ್ಷಣೆಯ ’ಮಂತ್ರಪಾಲಾವಸ್ಥೆ’ಯ ನಂತರ ಮನಸ್ಸಿಗೆ ಬರುವ ನಿರಾಳ ಸ್ಥಿತಿಯೇ – ಕಾರ್ಯಧೈರ್ಯವೇ ‘ಅಶೋಕ

ಮುಂದಿನದು ಅತ್ಯಂತ ಮುಖ್ಯವಾದ ಘಟ್ಟ..
ಕಾರ್ಯಸಾಧನೆ…
ಅಂತರಂಗದಲ್ಲಿ ಅನಾವರಣಗೊಂಡ ಯೋಜನೆಗಳೆಲ್ಲವೂ ಬಹಿರಂಗದಲ್ಲಿ ಒಂದಿನಿತೂ ವ್ಯತ್ಯಯವಿಲ್ಲದಂತೆ ಕ್ರಿಯಾನ್ವಯಗೊಳ್ಳಬೇಕು…
’ವಿಚಾರ’ವು ’ಆಚಾರ’ಕ್ಕೆ ಬರಬೇಕು..
ಅದು ’ಅರ್ಥಸಾಧಕ’..

ಮತ್ತೆ ಬರುವುದು ’ಕಾರ್ಯಸಿದ್ಧಿ’ಯ ಅವಸ್ಥೆ..
ಯೋಜನೆ (ಪ್ಲಾನ್) ಸಮರ್ಪಕವಾಗಿದ್ದಾಗ, ಕ್ರಿಯಾನ್ವಯನ(ಎಕ್ಸಿಕ್ಯೂಷನ್)ದಲ್ಲಿ ತಪ್ಪುತಡೆಗಳಿಲ್ಲದಾಗ, ಬಂದೇಬರುವ ಸುಫಲವು ’ಸಿದ್ಧಾರ್ಥಾವಸ್ಥೆ’..

ಕಾರ್ಯಸಿದ್ಧಿಯ ಫಲವಾಗಿ ಉಂಟಾಗುವ ಪರಮೋತ್ಕರ್ಷವು ’ವಿಜಯ’..

ವಿಜಯವು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದ್ದರೆ ಅದು ’ಜಯಂತ’..
ಬದುಕೆಂಬುದು ಪ್ರತಿಕ್ಷಣದ ಸವಾಲು..
ಸಮುದ್ರದ ತೆರೆಗಳಿಗೆ ಹೇಗೆ ಸಮಾಪ್ತಿಯೆಂಬುದಿಲ್ಲವೋ ಹಾಗೆಯೇ ಜೀವನದ ಸಂಗ್ರಾಮಗಳಿಗೆ  ಸಮಾರೋಪವೆಂಬುದಿಲ್ಲ..
ಮೇಲೆ ಹೇಳಿದ ವಿಧಾನಗಳಿಂದ ಬದುಕಿನಲ್ಲಿ ಮತ್ತೆ ಮತ್ತೆ ಬರುವ ಸವಾಲುಗಳನ್ನು ಮತ್ತೆ ಮತ್ತೆ ಮೀರಿ ನಿಲ್ಲುವ ಯಶೋಮಾಲಿಕೆಯ ಅವಸ್ಥೆಯೇ ’ಜಯಂತ’..

ಇವೆಲ್ಲವುಗಳ ಪರಿಪೂರ್ಣತೆಯು ’ಧೃಷ್ಟಿ’ಯಲ್ಲಿ..
ಧೃಷ್ಟಿಯೆಂದರೆ ಪ್ರಾಗಲ್ಭ್ಯ – ಪರಿಪೂರ್ಣತೆ …
ಕಾರ್ಯಪರಂಪರೆಯನ್ನೇ ಸಾಧನೆ ಮಾಡಿದ ಆತ್ಮವಿಶ್ವಾಸ..
ಮೂಜಗವೇ ಇದಿರಾದರೂ ಗೆಲ್ಲುವೆನೆಂಬ ಧೈರ್ಯ..
ಸಕಲ ಜಗತ್ತಿನ ಮಧ್ಯೆ ಸ್ವಾಭಿಮಾನದಿಂದ ತಲೆಯೆತ್ತಿ ನಡೆಯುವ ಪ್ರಗಲ್ಭ ಸ್ಥಿತಿ..!!

ಎಂಟಲ್ಲ…ಒಂದು..!
ಅಯೋಧ್ಯೆಯ ಸಚಿವರು ಎಂಟಾದರೂ ಎಂಟಲ್ಲ..
ಒಂದೇ ವಿಕಾಸದ ಎಂಟು ಮೆಟ್ಟಿಲುಗಳು..
ಕೊನೆಯು ಕೊನೆಯಲ್ಲ… ಅದುವೇ ಮೊದಲು..!!

ಕೊನೆಯವನಾದ ಸುಮಂತ್ರನೇ ಮೊದಲಿಗನಾಗುವ ಚಿಂತನೆಯ ಈ ಪರಿಯನ್ನು ಅವಲೋಕಿಸಿದರೆ ಸಾಮಾನ್ಯರ ಹೋರಾಟವು ಎಲ್ಲಿ ಕೊನೆಗೊಳ್ಳುವುದೋ ಅಲ್ಲಿಯೇ ಈ ಸಾಧಕರ ಹೋರಾಟದ ಆರಂಭವೆಂಬುದು ಸ್ಫುಟವಾಗುವುದಿಲ್ಲವೇ..?

ದಶರಥನು ಅಯೋಧ್ಯೆಯ ಶಿರದಂತಿದ್ದರೆ.. ಶಿರದೊಳಗಿನ ಮಿದುಳಿನಂತಿದ್ದ ಆತನ ಮಂತ್ರಿಗಳ ಸಾಮರ್ಥ್ಯ ಕರ್ತವ್ಯಪರಾಯಣತೆಗಳಿಂದಾಗಿ-
ಅವನಿಯ ಅಗಣಿತ ರಾಷ್ಟ್ರ ನಗರಗಳ ನಡುವೆ ಶಿರವೆತ್ತಿ ನಿಂತವು ಅಯೋಧ್ಯೆ- ಕೋಸಲಗಳು..!!

|| ಹರೇ ರಾಮ ||

31 Responses to ಎಂಟು ಒಂದಾಯಿತು..ಕೊನೆಯೇ ಮೊದಲಾಯಿತು…!!

 1. sriharsha.jois

  ಗುರುವೇ…

  ದಶರಥನ ಮಂತ್ರಿಗಳ ಹೆಸರು ಎಂಬುದನ್ನು ಮರೆತು ನಾವು ಮನನ ಮಾಡಿದರೆ ಅಲ್ಲಿ ಅಧ್ಯಾತ್ಮದ ಕುರುಹಿಲ್ಲವೇ..?
  ನನಗೇನೋ ಓದಿದಷ್ಟೂ ಅದೇ ಮಥಿಸುತ್ತಿದೆ ಮನದಲ್ಲಿ..
  ಹಾಗಾಗುವುದಿಲ್ಲವೇ ತಂದೇ…?

  [Reply]

 2. sriharsha.jois

  ಕಿರಿಯರು ಮೊದಲಲ್ಲವೇ ಗುರುದೇವಾ..?
  ಅದಕ್ಕೇ ಮೊದಲ ಪ್ರತಿಕ್ರಿಯೆ…!

  [Reply]

 3. ಮಂಗ್ಳೂರ ಮಾಣಿ...

  ಈ ಎಂಟು ವ್ಯಕ್ತಿಗಳನ್ನು ನಮ್ಮಲ್ಲಿ ಸಮೀಕರಿಸಿಕೊಳುವುದು ಹೇಗೆ ಗುರುಗಳೇ?

  [Reply]

 4. shrinivas hegde

  hare raama,

  gurugale,

  idana odida mele nange ansidu, ayodye yalli ombattu ondagitten heli, dasharat nannu serisi.
  haage e deha vemba ayodye yalli iruva navadrargalanu ondagisi sariyad dariyalli devara kadege tirgisidre, shriraaman avirbhava agtu heli nambike…

  [Reply]

 5. nandaja haregoppa

  ಹರೇ ರಾಮ

  ಇದು ನಮ್ಮ ಬದುಕಿಗೆ ತು೦ಬಾ ಹತ್ತಿರವಾಗಿದ್ದು ಅನಿಸುತಿದೆ ,ನಮ್ಮ ದೇಹ ಅಯೋದ್ಯೆ , ಏಳು ಚಕ್ರಗಳು

  ಮ೦ತ್ರಿಗಳು,ಸುಮ೦ತ್ರ ನೇ ಬುದ್ದಿ ,ಇದೆಲ್ಲ ಸರಿ ಇದ್ದರೆ ,ಸರಿಯಾಗಿ ಕಾರ್ಯ ನಿರ್ವಹಿಸಿದರೆ ದೀಪ ದೀರ್ಘವಾಗಿ

  ಬೆಳಗಬಹುದಲ್ಲವೇ? {ನನಗೆ ತೋಚಿದ್ದು ಬರೆದಿರುವೆ ಸರಿಯೆ ,ತಪ್ಪೆ ,ಗೊತ್ತಿಲ್ಲ }

  ಚಕ್ರಗಳ ಬಗ್ಗೆ ,ಹೆಚ್ಹು ತಿಳಿಸಿಕೊಡಿ ಗುರುಗಳೇ

  [Reply]

 6. Raghavendra Narayana

  I read the first portion i.e. about “Deepa”… taking a pause… enjoying it still… let it dwell..
  .
  Hare Raama
  Aatma Raama
  Jagadaatma Raama
  Jagadguru Krishna
  Jadeesha Eesha
  .
  Shri Gurubho Namaha

  [Reply]

 7. vinootha B

  ಹರೇ ರಾಮ ಹರೇ ರಾಮ ಹರೇ ರಾಮ !!!

  [Reply]

 8. seetharama bhat

  ಹರೇರಾಮ್

  ಅಷ್ಟದಿಕ್ಪಾಲರ೦ತೆ ಅಷ್ಟಮ೦ತ್ರಿಗಳು
  ದಶರಥನೆ೦ಬ ಜೀವನನ್ನು
  ರಾಮನೆ೦ಬ ಪರಮಾತ್ಮನೆಡೆಗೆ
  ಕೊ೦ಡೊಯ್ಯಿತು -ಅನ್ನಿಸುತ್ತಿದೆ

  [Reply]

 9. dattu

  ರಾಜ್ಯಶಾಸ್ತ್ರದ ಪಾಠ !!!.

  [Reply]

  Rama Ajjakana Reply:

  ರಾಜ್ಯ ಶಾಸ್ತ್ರದಲ್ಲಿ ಇದನ್ನೇ ಹೇಳುತ್ತಿದ್ದರೆ ನಮ್ಮ ದೇಶದ ಪರಿಸ್ಥಿತಿ ಈಗನಂತಾಗುತ್ತಿರಲಿಲ್ಲ…

  [Reply]

 10. maruvala narayana

  ಶ್ರೀ ಸಂಸ್ಥಾನದವರು ರಾಮಾಯಣವನ್ನು ಹೇಳುತ್ತಿರುವ e ರೀತಿ ಅತ್ಯಂತ ಆಕರ್ಷಕ.

  [Reply]

  gopalakrishna pakalakunja Reply:

  ಆಕರ್ಷಕ ಮಾತ್ರವಲ್ಲ ಅದು ‘ಯುನೀಕ್”. ….
  ಅಕ್ಷರ ಅಕ್ಷರಗಳ ,ಶಬ್ದ ಶಬ್ದಗಳ ಮಧ್ಯೆ ಹುದುಗಿರುವ ಧ್ವನಿಯನ್ನೂ, ಗೂಢಾರ್ಥವನ್ನೂ ಬಗೆದು ಹೊರಗೆಳೆದು
  ತನ್ನದೇ ಆದ ಶೈಲಿಯಲ್ಲಿ ಸರಳವಾಗಿ, ಅರ್ಥವಾಗುವಂತೆ ಮನದಟ್ಟಾಗುವಂತೆ ಅದನ್ನು “ಪ್ರಸೆಂಟ್” ‘ಮಾಡುವ ರೀತಿ ಅತ್ಯದ್ಭುತ !
  ‘ಜಂಕ್ ಫುಡ್’ ನ್ನೇ ಬಯಸುವ ಈಗಿನ ಮಕ್ಕಳನ್ನು ಮುದ್ದು ಮಾಡಿ , ಷಡ್ರಸ ಸಮೇತ, ವಾತ್ಸಲ್ಯ ಪೂರ್ವಕ, ಭಾರತೀಯ ಹಸುವಿನ ಶುದ್ಧ ಹಾಲನ್ನ ಉಣಿಸಿ , ಮೈದಡವಿ ಜೋಗುಳ ಹಾಡಿ ಹರಸಿದಂತೆ…

  [Reply]

 11. gopalakrishna pakalakunja

  ದೀಪವು ದೇದೀಪ್ಯಮಾನವಾಗಿ ಧರೆಯನ್ನು ಬೆಳಗಲು ತಮ್ಮ ಸರ್ವಸ್ವವನ್ನೂ ಧಾರೆಯೆರೆವ ಎಣ್ಣೆ ಬತ್ತಿಗಳು
  ಅದೇ ಬೆಳಕು, ಅದೇ ನೆಲ, ಅದೇ ಜಲ, ಅದೇ ವಾಯು, ಅದೇ ಆಕಾಶ ….. ಅದೇ ಜೀವಕೋಟಿ… ಈಗಲೂ ಇದೆ.
  ಆದರೆ, …
  “ಯೋಗ್ಯತೆಯಿಲ್ಲದೆಯೇ ಬರುವ ಯೋಗ , ಅದು ನೆಮ್ಮದಿಯ ವಿಯೋಗ..!!
  ಅದು ಸಂಪತ್ತಿನ ವೇಷ ತೊಟ್ಟು ಬರುವ ಆಪತ್ತು..!!
  ಅದು ವ್ಯಕ್ತಿಗೆ ವಿನಾಶ… ಸಮಾಜಕ್ಕೆ ಕೇಡು..!!
  ಯೇನ ಕೇನ ಪ್ರಕಾರೇಣ ಖುರ್ಚಿಯನ್ನಾಶ್ರಯಿಸಬಯಸುವವರರಿಯದ ಸತ್ಯವಿದು..!!….’

  ಹೀಗೇಕೆ ಸಂಸ್ಥಾನ ? ಯುಗ ಯುಗಾಂತರಗಳಿಂದ ಬೇರು ಬಿಟ್ಟಿದ್ದ ನಮ್ಮ ಸಂಸ್ಕೃತಿ
  ಕೆಲವು ಶತಮಾನಗಳ ಅವಾಂತರದ ಭರಾಟೆಯಿಂದ
  ಸಂಸ್ಕಾರ ಹೀನ ಸಮಾಜವೇಕಾಯಿತು
  ನಮ್ಮೆಲ್ಲರ ಪ್ರಾರಬ್ಧ ಕರ್ಮದ ಫಲವೇ ಇದು ?
  ಅವಶ್ಯಮನುಭೋಕ್ತ್ವಂ…?

  [Reply]

 12. Geetha Manjappa

  HareRaama
  Entu ondaguvudu eduve sanghatane. Ramarajyavannu kattuva sankalpa hondiruva namma RAMAnige navella shrikaryakartharu kelavaru battiyadare ulidavarella ondu hani enneyadaru aagi deepavannu dedeepyamanavaagi belagalu saddillade atmarpane madona. Maru prashne illada dhrudhasankalpa nammadadare Sadguruvina sankalpavada RAMARAJYA bahubegane bandeethu.
  SHRI SHRIgalavara aashirvachanavannu bare katheyanthe kelade swalpavadaru karyaroopakke taralu navella aptha shishyaru prayatnisuvalli yashaswiyagona.

  [Reply]

 13. Ashwini

  ಜೀವನ ಪಾಠವಿದು!!!

  ಜಗತ್ತು, ಜೀವದ ದೃಷ್ಟಿಗನುಗುಣವಾಗಿ ತೋರುವುದು.
  ಸುಂದರ ಸೃಷ್ಟಿ ಕಾಣಲು ಸುದೃಷ್ಟಿಯಿರಬೇಕಲ್ಲವೇ..
  ಸುದೃಷ್ಟಿಯೇ ಭಗವಂತನ ಕೃಪಾದೃಷ್ಟಿಗೆ ಪಾತ್ರವಾಗುವುದು.

  ಕರ್ಮಕ್ಕನುಗುಣವಾಗಿ ಆವರಿಸುವ ಸುಖ-ದುಃಖಗಳು,ಜೀವಿಗೆ ತನ್ನನುದ್ದರಿಸಿಕೊಳ್ಳಲು ದೇವನಿತ್ತ ಅವಕಾಶ.
  ಅವಕಾಶದ ಸದ್ವಿನಿಯೋಗ ಕಾರ್ಯ-ಭಾವಗಳ ಮೂಲಕವಷ್ಟೇ..
  ಸರಿಯಾದ ಕಾರ್ಯ-ಭಾವ ನಿರ್ಣಯಗಳೇ ಸುಮಂತ್ರ.

  ಹೃದಯಂಗಳದಿ ಗೂಡವಾಗಿ ಕುಳಿತ ಚಿನ್ಮಯನನ್ನು
  ಸೇರ ಹೊರಟ ಜೀವಿಯ ಸಾಧನೆ ಚಿಗುರಿನಲ್ಲಿ ಗೌಪ್ಯವಾಗಿರಬೇಕಷ್ಟೇ..
  ಸಾನಿದ್ಯಕ್ಕನುಗುಣವಾಗಿ ವಿಷಯ ವಿಸ್ತೃತಗೊಂಡರದೇ ಮಂತ್ರಪಾಲ.

  ಅಡೆತಡೆಗಳಿಲ್ಲದ ದಾರಿಯೆಂದರದು ಸವಕಲು ಹಾದಿ
  ವಿಧಿ ನೆಡೆಸಿದಲ್ಲಿ ವಿಧಿವತ್ತಾಗಿ ನೆಡೆದರದುವೇ ಪರಮ-ಅರ್ಥಸಾಧಕತೆ.

  ದಾರಿ ಚೆನ್ನಾಗಿ ತಿಳಿದವರನ್ನು(ಸಿದ್ಧರು) ಹಿಂಬಾಲಿಸಿದರೆ ಗುರಿ ತಪ್ಪದೆ ತಲುಪಬಹುದು,ಅದುವೇ ಸಿದ್ದಾರ್ಥಾವಸ್ಠೆ.

  ಸಿದ್ದತೆ ಸಿದ್ದಿಯಾದಗ ವಿಜಯವಾಗುವುದು, ಭವಶೋಕಹಾರನ ಸನ್ನಿಧಿ ಜಯಂತವಾಗುವುದು.
  ಬದುಕು ಅಶೋಕವಾಗುವುದು.

  ಗುರುವೇ,ಅತ್ಯಲ್ಪ ಜ್ಞಾನಕ್ಕೆ ತೋಚಿದ ಭಾವವಿದು.ತಪ್ಪುಗಳ ಸರಿಪಡಿಸಿ ಒಪ್ಪಿಸಿಕೋ.

  ಬಹು ಎತ್ತರದಿಂದ ಕೆಳಗಿಳಿದು ಮಹತ್ತರ ಜ್ಞಾನವನ್ನು ಪರಮ ಕರುಣದಿ ಅನುಗ್ರಹಿಸುತ್ತಿರುವ ಕಾರುಣ್ಯಮೂರ್ತಿಯ ಪದತಲಕ್ಕಿದೋ ನಮೋ ನಮ:.

  [Reply]

  seetharama bhat Reply:

  ಹರೇರಾಮ್

  ತು೦ಬಾ ಚೆನ್ನಾಗಿದೆ

  [Reply]

  ಮಂಗ್ಳೂರ ಮಾಣಿ... Reply:

  :)

  [Reply]

 14. Raghavendra Narayana

  ಜಗದ ಆತ್ಮ ರಾಮ

  [Reply]

 15. shobha lakshmi

  ಹೆಸರಿಗೂ ಸ್ವಭಾವಕ್ಕೂ ತು೦ಬ ಹೊ೦ದಾಣಿಕೆ..ಹೆಸರಿನಿ೦ದಲೇ ಸ್ವಭಾವ ತಿಳಿಬಹುದಲ್ಲವೇ?

  ಯೋಗ್ಯತೆಇಲ್ಲದೇ ಯೋಗ ಬ೦ದರೆ ಅದು ಆಪತ್ತು..ಇದೇ ಈಗ ಆಗಿರುವ ಆಪತ್ತು..

  [Reply]

 16. suresha adagodi

  ದೀಪದ ಎಣ್ಣೆಯಾಗಬೇಕು ನಾವು…

  [Reply]

 17. madhyastharv

  ಹರೇರಾಮ ಸಂಸ್ಥಾನ-ಸಾಚಿವ್ಯ ಮತ್ತು ಅಸುಕರ ಎಂದರೇನು? ಉದಾರಣೆಯೊಂದಿಗೆ ವಿವರಣೆ ಬೇಕು ಅಂತ ಬಿನ್ನಹ.

  [Reply]

 18. Anuradha Parvathi

  ದಶರಥನಂಥ ರಾಜ ಮತ್ತು ಅವನ ಮಂತ್ರಿಗಳನ್ನು ಪಡೆದ ಅಯೋಧ್ಯೆಯ ಜನರೇ ಧನ್ಯರು. ನಮಗೆ ಅವರ ಭಾಗ್ಯ ಇಲ್ಲವಲ್ಲ………..

  [Reply]

  shrinivas hegde Reply:

  hare raama,

  akka, naveela dhanyare, yaakandre shriraaman pratirupavaagi gurugalu, ayodyeya mantrigala rupadalli guru parivaaradavaru…

  istela idru naveela dhanyarala heli andkambdu hege?

  [Reply]

  Geetha Manjappa Reply:

  HareRaama,
  Dasharathana kalada Ayodhyadalli navidda punyave ,aa samskarave bahushyaha eegina namma Ramana sannidhya hagu Ayodhyeyanthaha Shrimathadalliralu padedukondu banda bhagyaveno! Ee nadinalli koti koti janariruvaga namage kelavarige maatra ee punya labhyavagiddu namma maha bhagyavallave?

  [Reply]

  shrinivas hegde Reply:

  hare raama,

  ellarigu ee bhagya ide, aadare ellaru ee kade muka madila aste…

  [Reply]

 19. Krishna Prasad

  ಇಷ್ಟೆಲ್ಲಾ ಮಂತ್ರಿಗಳು ಇದ್ದರೂ ರಾಮನನ್ನು ಕುರುಡನಾಗಿ ಕಾಡಿಗೆ ಕಳಿಸಿದನಲ್ಲಾ ವೃದ್ಧ ರಾಜ!!..

  ಮಹಾ ಭಾರತದ ದೃತರಾಷ್ಟ್ರನ ಹಾಗೆ ಒಂದು ತರಹದ ಕುರುಡ ರಾಜ ಈ ದಶರಥ …

  [Reply]

 20. Raghavendra Narayana

  ಮ೦ತ್ರಾಲೋಚನೆ ಅದ್ಭುತ…. “ಜಯ೦ತ” ಅದ್ಭುತ…
  .
  ಜ್ಯೋತಿಯಾದರು, ಪರ೦ಜ್ಯೋತಿ ಬೆಳಗಿತು..
  ಸಾಮಾನ್ಯರಿಗು, ಸಾಮಾನ್ಯ ಸಾಧಕರಿಗು, ಸಾಧಕರಿಗು ಜ್ಯೋತಿಯಾದರು
  .
  ಸೂರ್ಯಕಾ೦ತಿಗಳಾಗಿದ್ದವರು ನಾವು ಬೆನ್ನುಹಾಕಿ ಕತ್ತಲರಾಜ್ಯವ ಸೇರಿದ್ದೇಕೆ…
  .
  ಶ್ರೀ ಗುರುಭ್ಯೋ ನಮಃ

  [Reply]

 21. gopalakrishna pakalakunja

  ಹರೇ ರಾಮ !
  ಕೆಲವಾರು ದಿನಗಳಿಂದ ಶ್ರೀ ಶ್ರೀ ಗಳ ” ಈ “(e) ಪ್ರಪಂಚದಲ್ಲಿ ನೋಡದ್ದೇ “ಅಸಕ್ಕ” ಹಿಡುದ್ದು. ಕರುಣಾನುಗ್ರಹ ಬೀರಿ ಒಂದೈದು ನಿಮಿಷ “ಈ” ಬಳಗಕ್ಕೆ ಕೃಪೆ ಮಾಡೆಕ್ಕೂ ಹೇಳಿ ಬೇಡುತ್ತೆ.

  [Reply]

 22. Sharada Jayagovind

  Hareraama Samsthana

  [Reply]

 23. shwetha m shasthry

  ಹರೇರಾಮ.’ಗುರು’ ಹಾಗು ‘ಬತ್ತಿ’ಗೆ ವ್ಯತ್ಯಾಸ ಏನಿದೆ?. ಬತ್ತಿಗಳು ತಾನು ಉರಿದು ಬೆಳಕನ್ನು ನೀಡಿದರೆ,’ಗುರು’ ಬೆ೦ಕಿಯ೦ತಿರುವ ಸಮಸ್ಯೆಗಳನ್ನ ತಾನು ತೆಗೆದು ಇತರರು ಸರಿಯಾದ ದಾರಿಯಲ್ಲಿ ಹೋಗುವ೦ತೆ ಬೆಳಕನ್ನು ನೀಡುತ್ತಾರೆ. ಅಲ್ಲವೇ?

  [Reply]

 24. Muralee Krishna Bhat perva

  Shree samsthaana anvartharaagiddare… aa divya jnaana sampatthu namagella dorakiddu poorvajanma punya… as karuneya kadalu…. kripaavaaridhi…. namma gurugalaadaddu namma adrishta….

  [Reply]

Leave a Reply

Highslide for Wordpress Plugin