|| ಹರೇ ರಾಮ ||

ದೀಪ ಬೆಳಗಬೇಕು..
ದೀಪ ಬೆಳಗಬೇಕೆಂದರೆ ಬತ್ತಿಗಳು ಉರಿಯಬೇಕು..
ದೀಪವು ದೀರ್ಘಕಾಲ ಬೆಳಗಬೇಕೆಂದರೆ ಎಣ್ಣೆಯು ಸದ್ದಿಲ್ಲದೆಯೇ ಆತ್ಮಾರ್ಪಣೆ ಮಾಡಿಕೊಳ್ಳಬೇಕು..
ತಾನು ಆರಿ ದೀಪವನ್ನು ಉರಿಸಬೇಕು…
ತನ್ನ ಆಯುಸ್ಸನ್ನು ಜ್ಯೋತಿಗೆ ಧಾರೆಯೆರೆಯಬೇಕು..
ದೀಪದ ಧವಲಪ್ರಭೆಗಾಗಿ ದೀಪಪಾತ್ರವು ತನ್ನ ಮೈಯೆಲ್ಲವನ್ನೂ ಮಸಿಯಾಗಿಸಿಕೊಳ್ಳಬೇಕು..
ದೀಪವು ಪ್ರಜ್ವಲಿಸಿ ಪ್ರಕಟಗೊಂಡರೆ ಇವು ಕಂಡೂ ಕಾಣಿಸದವು..!!
ತಾವು ಮರೆಯಲ್ಲಿ ನಿಂತು ಸಕಲ ಕೈಂಕರ್ಯವನ್ನೂ ನಡೆಸಿ ದೀಪವನ್ನು ಮೆರೆಸಿದವು..
ದಶರಥನೆಂಬ ದೀಪವು ದೇದೀಪ್ಯಮಾನವಾಗಿ ಧರೆಯನ್ನು ಬೆಳಗಲು ತಮ್ಮ ಸರ್ವಸ್ವವನ್ನೂ ಧಾರೆಯೆರೆದ ಆ ಕಾರಣಪುರುಷರನ್ನು – ತ್ಯಾಗಜೀವಿಗಳನ್ನು – ಎಲೆಮರೆಯ ಕಾಯಿಗಳನ್ನು ಇಲ್ಲಿ ಉಲ್ಲೇಖಿಸದಿರಲು ಸಾಧ್ಯವೇ ಇಲ್ಲ..!
ಅವರೇ ವೀರದಶರಥನ ವಿವೇಕೀ ಮಂತ್ರಿಗಳು..!

ಮಂತ್ರಿಣಃ ಸಪ್ತ ವಾಷ್ಟೌ ವಾ ಪ್ರಕುರ್ವೀತ ಪರೀಕ್ಷಿತಾನ್
“ಏಳು ಅಥವಾ ಎಂಟು ಸುಯೋಗ್ಯ ವ್ಯಕ್ತಿಗಳನ್ನು ಚೆನ್ನಾಗಿ ಪರೀಕ್ಷಿಸಿ ಮಂತ್ರಿಗಳನ್ನಾಗಿ ನೇಮಿಸಿಕೊಳ್ಳಬೇಕು”.. ಇದು ಮನುವಚನ..
ಅದರಂತೆ ದಶರಥನ ಆಸ್ಥಾನದಲ್ಲಿ ಎಂಟು ಮಂತ್ರಿಗಳು..
೧. ಧೃಷ್ಟಿ
೨. ಜಯಂತ
೩. ವಿಜಯ
೪. ಸಿದ್ಧಾರ್ಥ
೫. ಅರ್ಥಸಾಧಕ
೬. ಅಶೋಕ
೭. ಮಂತ್ರಪಾಲ
ಎಂಟನೆಯವನೇ ಸಾರಥ್ಯ- ಸಾಚಿವ್ಯಗಳನ್ನು ಜೊತೆಜೊತೆಗೇ ನಿರ್ವಹಿಸುತ್ತಿದ್ದ ’ಸುಮಂತ್ರ’..

ಶ್ರಮ-ವಿಶ್ರಮಗಳ ಪರಿವಿಲ್ಲದೆಯೇ, ಅನವರತವಾಗಿ ಧರಿತ್ರಿಯ ಭಾರವೆಲ್ಲವನ್ನೂ ಹೊರುವ ಅಷ್ಟದಿಗ್ಗಜಗಳನ್ನು ನೆನಪಿಸುವಂತಿದ್ದರು ಸಾಕೇತ ಸಾಮ್ರಾಜ್ಯದ ಸರ್ವಭಾರವನ್ನೂ ಹೊತ್ತು ನಡೆಸುತ್ತಿದ್ದ ದಶರಥನ ಅಷ್ಟ ಸಚಿವರು..
ಮಂತ್ರಿಗಳಂಥವರಿದ್ದರೆ ’ದಶರಥ ರಾಜ್ಯ’ವೇನು,”ರಾಮರಾಜ್ಯ’ವೂ ಅಸುಕರವಲ್ಲ..!!

ಯೋಗ್ಯತೆ-ಯೋಗಗಳು ಜೊತೆಗಿರುವುದೇ ಸೊಗಸು..
ಯೋಗ್ಯತೆಯಿದ್ದು ಯೋಗವಿಲ್ಲದಿದ್ದರೆ ಅದು ಅತೃಪ್ತಿ..
ಯೋಗ್ಯತೆಯಿಲ್ಲದೆಯೇ ಬರುವ ಯೋಗ , ಅದು ನೆಮ್ಮದಿಯ ವಿಯೋಗ..!!
ಅದು ಸಂಪತ್ತಿನ ವೇಷ ತೊಟ್ಟು ಬರುವ ಆಪತ್ತು..!!
ಅದು ವ್ಯಕ್ತಿಗೆ ವಿನಾಶ… ಸಮಾಜಕ್ಕೆ ಕೇಡು..!!
ಯೇನ ಕೇನ ಪ್ರಕಾರೇಣ ಖುರ್ಚಿಯನ್ನಾಶ್ರಯಿಸಬಯಸುವವರರಿಯದ ಸತ್ಯವಿದು..!!
ಯೋಗ್ಯತೆಯೇ ಯೋಗವಾಗಿ ಪರಿಣಮಿಸಿದರೆ.. ಆತ್ಮಕಲ್ಯಾಣ.. ಲೋಕಕಲ್ಯಾಣ ಒಟ್ಟೊಟ್ಟಿಗೇ..!!
ದಶರಥನ ಮಂತ್ರಿಗಳ ಯೋಗ್ಯತೆಯು ಕೋಸಲದ ಶುಭಯೋಗವಾಗಿ ಪರಿಣಮಿಸಿತು…
ಆಯಾ ಪಾತ್ರಕ್ಕೆ ಬೇಕಾದ ವೇಷಭೂಷಣಗಳೊಂದಿಗೆ ಸಜ್ಜಾಗಿಯೇ ನಟನೊಬ್ಬ ರಂಗವನ್ನೇರುವಂತೆ, ಸಚಿವತ್ವಕ್ಕೆ ಬೇಕಾದ ಸಕಲ ಅರ್ಹತೆಗಳನ್ನೂ ಸಾಧನೆ ಮಾಡಿಯೇ ಆ ಸ್ಥಾನವನ್ನೇರಿದ್ದರವರು..

ಪ್ರಾಮಾಣಿಕತೆಯೇ ದುರ್ಲಭ..
ಪ್ರಾಮಾಣಿಕರೆಲ್ಲ ಸಮರ್ಥರಲ್ಲ..
ಪ್ರಾಮಾಣಿಕತೆ – ಸಾಮರ್ಥ್ಯಗಳೆರಡೂ ಇದ್ದವರು ವಿಧೇಯರಲ್ಲ..
ಮೂರೂ ಕೂಡಿದರೆ ಪೂರ್ವ ಸುಕೃತವದು..
ಅಂಥ ಸೇವಕರನ್ನು ಪಡೆಯಲು ಸ್ವಾಮಿಯೇ ಪುಣ್ಯ ಮಾಡಿರಬೇಕು..!!
ಧನ್ಯ ದಶರಥ..!
ಆತನ ಮಂತ್ರಿಗಳಂಥವರು…!

ಮಂತ್ರಿಯೆಂದರೆ ಮಂತ್ರಕ್ಕೊದಗುವವನು..
ಮಂತ್ರವೆಂದರೆ ರಾಜ್ಯಹಿತದ ಗುಪ್ತಸಮಾಲೋಚನೆ..
ಹಲವು ಪರಿಣತರ ಹಲವು ಬಗೆಯ ಚಿಂತನೆಗಳು ಹೊರಸೂಸಿ, ಕಲೆತು, ಮಥನವೇರ್ಪಟ್ಟು, ಹೊರಹೊಮ್ಮುವ ಸಮೀಚೀನವಾದ ನಿರ್ಣಯವದು..
ವಸ್ತುವೊಂದನ್ನು ಸಮಗ್ರವಾಗಿ ತಿಳಿಯಲು ಒಂದು ದೃಷ್ಟಿ ಪರ್ಯಾಪ್ತವಲ್ಲ..
ಹಿಂದೆ….. ಮುಂದೆ…
ಆಚೆ….. ಈಚೆ….
ಮೇಲೆ…… ಕೆಳಗೆ……
ಒಳಗೆ….. ಹೊರಗೆ…….
ಹೀಗೆ ಬಗೆ ಬಗೆಯ ನೋಟಗಳು ಕಲೆತು ಒಂದು ನೋಟವಾದಾಗಲೇ ವಸ್ತುವಿನ ಸಮಗ್ರದರ್ಶನವಾಗುವುದು..
ಹಲವು ನದಿಗಳು ಸ್ವತಂತ್ರವಾದ ಅಸ್ತಿತ್ವದೊಡನೆ – ವ್ಯಕ್ತಿತ್ವದೊಡನೆ ಹರಿಯುತ್ತವೆ..
ಕೊನೆಯಲ್ಲಿ ಸಾಗರದೊಡನೆ ಸಂಗಮಗೊಳ್ಳುತ್ತವೆ..
ಸಮರಸವಾಗುತ್ತವೆ.. ಏಕರಸವಾಗುತ್ತವೆ..
ಹಾಗೆಯೇ ಮಂತ್ರಾಲೋಚನೆಯಲ್ಲಿ ಹಲವರ ಹಲವು ಸ್ವತಂತ್ರ ಚಿಂತನೆಗಳು ಹರಿಯಬೇಕು..
ಕೊನೆಗೊಂದು ಮಹಾನಿರ್ಣಯದಲ್ಲಿ ಸಮರಸವಾಗಿ ಸಮನ್ವಿತವಾಗಬೇಕು…

ಕಾಲಿಡುವಲ್ಲಿ ಮೊದಲು ಕಣ್ಣಿಡಬೇಕಲ್ಲವೇ..?
ದೃಷ್ಟಿಪೂತಂ ನ್ಯಸೇತ್ ಪಾದಂ’..
ಕಣ್ಣೆಡವಿದರೆ ಮತ್ತೆ ಕಾಲೆಡುವುವುದು ಸ್ವಾಭಾವಿಕವಲ್ಲವೇ..?
ಚೆನ್ನಾಗಿ ನೋಡಿಕೊಳ್ಳಬೇಕಾದುದನ್ನು ಮೊದಲು ಚೆನ್ನಾಗಿ ನೋಡಬೇಕಲ್ಲವೇ..?
ಆ ಮುನ್ನೋಟವೇ – ಯಾವುದೇ ಕಾರ್ಯದ ಪೂರ್ವಾವಲೋಕನವೇ ’ಮಂತ್ರ’ ಅಥವಾ ಮಂತ್ರಾಲೋಚನೆ..

ರಾಜ್ಯಭಾರಕ್ಕೆ ಮಂತ್ರವೇ ಮೂಲಾಧಾರ..

ಮಂತ್ರದ ಪರಿಚಯ ಬೇಕೇ..?
ಮಂತ್ರಾಲೋಚನೆಯ ಪ್ರಾರಂಭ – ಪ್ರಯೋಗ – ಪರಿಣಾಮಗಳ ಬಗೆಗೆ ತಿಳಿದುಕೊಳ್ಳಬೇಕೆ..?
ದಶರಥನ ಮಂತ್ರಿಗಳ ನಾಮಧೇಯಗಳನ್ನು ಒಮ್ಮೆ ಕೊನೆಯಿಂದ ಮೊದಲವರೆಗೆ ಅವಲೋಕಿಸಿದರೆ ಸಾಕು..!!

ಮಂತ್ರಗಳೆರಡು ಬಗೆ, ‘ಸುಮಂತ್ರ-ದುರ್ಮಂತ್ರ‘ ಎಂಬುದಾಗಿ..
ತಪ್ಪು ಸಲಹೆಗಳು, ತಪ್ಪುದಾರಿಯಲ್ಲಿ ನಡೆಯುವ ಸಂವಾದ, ತತ್ಫಲವಾದ ತಪ್ಪು ನಿರ್ಣಯಗಳಿಂದ ಕೂಡಿದ ಮಂತ್ರಾಲೋಚನೆಯು ’ದುರ್ಮಂತ್ರ’..
ಸೂಕ್ತ ಸಲಹೆಗಳು, ಸಮುಚಿತ ಸಂವಾದ, ಸಮರ್ಪಕ ನಿರ್ಣಯಗಳಿಂದ ಕೂಡಿದ ಮಂತ್ರಾಲೋಚನೆಯು ’ಸುಮಂತ್ರ’..

ಷಟ್ಕರ್ಣೋ ಭಿದ್ಯತೇ ಮಂತ್ರಃ’..
ಇಬ್ಬರ ನಡುವೆ ನಡೆಯುವ ಸಂಭಾಷಣೆಯು ಆರು ಕಿವಿಗಳನ್ನು , ಎಂದರೆ ಮೂರನೆಯ ವ್ಯಕ್ತಿಯನ್ನು ತಲುಪಲೇಬಾರದು..
ತಲುಪಬಾರದಲ್ಲಿ ವಿಷಯಗಳು ತಲುಪಿದರೆ ಮೂಲಘಾತವೇ ಆದೀತು..!
ಆದುದರಿಂದಲೇ ’ಸುಮಂತ್ರ’ ಎಷ್ಟು ಮುಖ್ಯವೋ, ಮಂತ್ರಾಲೋಚನೆಯ ಗೌಪ್ಯಪಾಲನೆಯೂ ಅಷ್ಟೇ ಮುಖ್ಯ..
ಅದುವೇ ’ಮಂತ್ರಪಾಲ

ಸಮಸ್ಯೆಗಳು ಬಂದು ಮುಸುಕಿದಾಗ, ಪರಿಹಾರ ತೋರದಾದಾಗ  ಶೋಕವು  ಮನುಷ್ಯನನ್ನು ಬಾಧಿಸುವುದುಂಟು..
ಮುಂದೇನು ಮಾಡಬೇಕೆಂಬುದೇ ತಿಳಿಯದ ದಿಙ್ಮೂಢಾವಸ್ಥೆಯು ಆವರಿಸುವುದುಂಟು..
ಆಗ ನಮ್ಮ ನೆರವಿಗೆ ಬರುವುದೇ ’ಮಂತ್ರ’
ಆಪ್ತಸಮಾಲೋಚನೆಯಿಂದ ಮುಂದಿನ ದಾರಿ ನಮಗೆ ಸುಜ್ಞಾತವಾಗಬೇಕು..
ಆದರೆ ಬೇರೆಯವರಿಗೆ ನಮ್ಮ ಮುಂದಿನ ಹೆಜ್ಜೆಯೇನೆಂಬುದು ಅಜ್ಞಾತವಾಗಿಯೇ ಇರಬೇಕು..
ಹಾಗಾದಾಗ – ಸಮಾಲೋಚನೆಯ ’ಸುಮಂತ್ರಾವಸ್ಥೆ’ ಮತ್ತು ಗೌಪ್ಯ ರಕ್ಷಣೆಯ ’ಮಂತ್ರಪಾಲಾವಸ್ಥೆ’ಯ ನಂತರ ಮನಸ್ಸಿಗೆ ಬರುವ ನಿರಾಳ ಸ್ಥಿತಿಯೇ – ಕಾರ್ಯಧೈರ್ಯವೇ ‘ಅಶೋಕ

ಮುಂದಿನದು ಅತ್ಯಂತ ಮುಖ್ಯವಾದ ಘಟ್ಟ..
ಕಾರ್ಯಸಾಧನೆ…
ಅಂತರಂಗದಲ್ಲಿ ಅನಾವರಣಗೊಂಡ ಯೋಜನೆಗಳೆಲ್ಲವೂ ಬಹಿರಂಗದಲ್ಲಿ ಒಂದಿನಿತೂ ವ್ಯತ್ಯಯವಿಲ್ಲದಂತೆ ಕ್ರಿಯಾನ್ವಯಗೊಳ್ಳಬೇಕು…
’ವಿಚಾರ’ವು ’ಆಚಾರ’ಕ್ಕೆ ಬರಬೇಕು..
ಅದು ’ಅರ್ಥಸಾಧಕ’..

ಮತ್ತೆ ಬರುವುದು ’ಕಾರ್ಯಸಿದ್ಧಿ’ಯ ಅವಸ್ಥೆ..
ಯೋಜನೆ (ಪ್ಲಾನ್) ಸಮರ್ಪಕವಾಗಿದ್ದಾಗ, ಕ್ರಿಯಾನ್ವಯನ(ಎಕ್ಸಿಕ್ಯೂಷನ್)ದಲ್ಲಿ ತಪ್ಪುತಡೆಗಳಿಲ್ಲದಾಗ, ಬಂದೇಬರುವ ಸುಫಲವು ’ಸಿದ್ಧಾರ್ಥಾವಸ್ಥೆ’..

ಕಾರ್ಯಸಿದ್ಧಿಯ ಫಲವಾಗಿ ಉಂಟಾಗುವ ಪರಮೋತ್ಕರ್ಷವು ’ವಿಜಯ’..

ವಿಜಯವು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದ್ದರೆ ಅದು ’ಜಯಂತ’..
ಬದುಕೆಂಬುದು ಪ್ರತಿಕ್ಷಣದ ಸವಾಲು..
ಸಮುದ್ರದ ತೆರೆಗಳಿಗೆ ಹೇಗೆ ಸಮಾಪ್ತಿಯೆಂಬುದಿಲ್ಲವೋ ಹಾಗೆಯೇ ಜೀವನದ ಸಂಗ್ರಾಮಗಳಿಗೆ  ಸಮಾರೋಪವೆಂಬುದಿಲ್ಲ..
ಮೇಲೆ ಹೇಳಿದ ವಿಧಾನಗಳಿಂದ ಬದುಕಿನಲ್ಲಿ ಮತ್ತೆ ಮತ್ತೆ ಬರುವ ಸವಾಲುಗಳನ್ನು ಮತ್ತೆ ಮತ್ತೆ ಮೀರಿ ನಿಲ್ಲುವ ಯಶೋಮಾಲಿಕೆಯ ಅವಸ್ಥೆಯೇ ’ಜಯಂತ’..

ಇವೆಲ್ಲವುಗಳ ಪರಿಪೂರ್ಣತೆಯು ’ಧೃಷ್ಟಿ’ಯಲ್ಲಿ..
ಧೃಷ್ಟಿಯೆಂದರೆ ಪ್ರಾಗಲ್ಭ್ಯ – ಪರಿಪೂರ್ಣತೆ …
ಕಾರ್ಯಪರಂಪರೆಯನ್ನೇ ಸಾಧನೆ ಮಾಡಿದ ಆತ್ಮವಿಶ್ವಾಸ..
ಮೂಜಗವೇ ಇದಿರಾದರೂ ಗೆಲ್ಲುವೆನೆಂಬ ಧೈರ್ಯ..
ಸಕಲ ಜಗತ್ತಿನ ಮಧ್ಯೆ ಸ್ವಾಭಿಮಾನದಿಂದ ತಲೆಯೆತ್ತಿ ನಡೆಯುವ ಪ್ರಗಲ್ಭ ಸ್ಥಿತಿ..!!

ಎಂಟಲ್ಲ…ಒಂದು..!
ಅಯೋಧ್ಯೆಯ ಸಚಿವರು ಎಂಟಾದರೂ ಎಂಟಲ್ಲ..
ಒಂದೇ ವಿಕಾಸದ ಎಂಟು ಮೆಟ್ಟಿಲುಗಳು..
ಕೊನೆಯು ಕೊನೆಯಲ್ಲ… ಅದುವೇ ಮೊದಲು..!!

ಕೊನೆಯವನಾದ ಸುಮಂತ್ರನೇ ಮೊದಲಿಗನಾಗುವ ಚಿಂತನೆಯ ಈ ಪರಿಯನ್ನು ಅವಲೋಕಿಸಿದರೆ ಸಾಮಾನ್ಯರ ಹೋರಾಟವು ಎಲ್ಲಿ ಕೊನೆಗೊಳ್ಳುವುದೋ ಅಲ್ಲಿಯೇ ಈ ಸಾಧಕರ ಹೋರಾಟದ ಆರಂಭವೆಂಬುದು ಸ್ಫುಟವಾಗುವುದಿಲ್ಲವೇ..?

ದಶರಥನು ಅಯೋಧ್ಯೆಯ ಶಿರದಂತಿದ್ದರೆ.. ಶಿರದೊಳಗಿನ ಮಿದುಳಿನಂತಿದ್ದ ಆತನ ಮಂತ್ರಿಗಳ ಸಾಮರ್ಥ್ಯ ಕರ್ತವ್ಯಪರಾಯಣತೆಗಳಿಂದಾಗಿ-
ಅವನಿಯ ಅಗಣಿತ ರಾಷ್ಟ್ರ ನಗರಗಳ ನಡುವೆ ಶಿರವೆತ್ತಿ ನಿಂತವು ಅಯೋಧ್ಯೆ- ಕೋಸಲಗಳು..!!

|| ಹರೇ ರಾಮ ||

Facebook Comments Box