ಪತಿಯು ಇನ್ನೊಂದು ಮದುವೆಯಾಗುವೆನೆಂದರೆ ಅದಕ್ಕೆ ಧರ್ಮಪತ್ನಿಯ ಪ್ರತಿಕ್ರಿಯೆ ಹೇಗಿದ್ದೀತು? ಶಿಷ್ಯನು ಬೇರೋರ್ವ ಗುರುಗಳನ್ನು ಆಶ್ರಯಿಸುವೆನೆಂದರೆ ಅದಕ್ಕೆ ಬಹ್ವಂಶ ಕುಲಗುರುಗಳ ಪ್ರತಿಕ್ರಿಯೆಯೂ ಹಾಗೆಯೇ ಇದ್ದೀತು! ಆದರೆ ವಸಿಷ್ಠರು ಎಲ್ಲರಂತಲ್ಲವಲ್ಲವೇ! ಮನುಷ್ಯರಲ್ಲಿಯೇ ಗುರುವು ಶ್ರೇಷ್ಠ; ಗುರುಗಳಲ್ಲಿ ವಸಿಷ್ಠರು ಸರ್ವಶ್ರೇಷ್ಠ! ಮಾನವತೆಯ ಮಹಾಮೇರು ಅವರು; ನಿಜವಾದ ಗುರು ಅವರು.

ಕೋ ಗುರುಃ? ಯಾರು ನಿಜವಾದ ಗುರು?
=ಅಧಿಗತತತ್ತ್ವಃ!  ತತ್ತ್ವವನ್ನು- ತಥ್ಯವನ್ನು ಚೆನ್ನಾಗಿ ತಿಳಿದವನು.
=ಶಿಷ್ಯಹಿತಾಯ ಉದ್ಯತಃ ಸತತಮ್! ಶಿಷ್ಯನ ಹಿತಕ್ಕಾಗಿ ಸತತವೂ ಉದ್ಯತ*ನಾಗಿರುವವನು. (-ಶಂಕರಾಚಾರ್ಯರು)

“ಸಂತಾನಪ್ರಾಪ್ತಿಗಾಗಿ ಋಷ್ಯಶೃಂಗರನ್ನು ಆಶ್ರಯಿಸುವೆ; ಅಪ್ಪಣೆ ನೀಡಿ” ಎಂದು ದಶರಥನು ಪ್ರಾರ್ಥಿಸಿದಾಗ ವಸಿಷ್ಠರು ಹೃದಯತಲದಿಂದ ದೊರೆಯನ್ನು ಹರಸಿ, ಋಷ್ಯಶೃಂಗರ ಬಳಿ ಕಳುಹಿದರು. ಏಕೆಂದರೆ ನಿಜವಾದ ಗುರುವಿನ ಆ ಎರಡು ಲಕ್ಷಣಗಳು ಅವರಲ್ಲಿ ಪರಿಪೂರ್ಣವಾಗಿದ್ದವು:

ಅಧಿಗತತತ್ತ್ವಃ– ದಶರಥನ ಸಂತಾನಪ್ರಾಪ್ತಿಯ ಮಾರ್ಗವು ಮಹರ್ಷಿ ಋಷ್ಯಶೃಂಗರ ಚರಣದಲ್ಲಿ ನಿಹಿತವಾಗಿದೆ ಎಂಬ ತತ್ತ್ವವನ್ನು- ತಥ್ಯವನ್ನು ಅವರು ತಿಳಿದಿದ್ದರು; ಮಾತ್ರವಲ್ಲ…
ಶಿಷ್ಯಹಿತಾಯ ಉದ್ಯತಃ ಸತತಮ್– ಶಿಷ್ಯನಾದ ದಶರಥನ ಹಿತಕ್ಕಾಗಿ ಅವರು ಸತತವೂ ಉದ್ಯತರಾಗಿದ್ದರು.

ಯಾರಿಂದಲಾದರೂ ಸರಿ, ದಶರಥನಿಗೆ- ತನ್ಮೂಲಕ ಲೋಕಕ್ಕೆ ಶ್ರೇಯಸ್ಸಾಗಬೇಕೆಂಬುದಷ್ಟೇ ಅವರ ಭಾವವಾಗಿದ್ದಿತು. ‘ಶ್ರೇಯಸ್ಸಾಗುವುದಿದ್ದರೆ ಅದು ತನ್ನ ಮೂಲಕವೇ ಆಗಲಿ’ ಎಂಬ ಸ್ವಾರ್ಥದೂಷಿತವಾದ ಆಗ್ರಹ ಅವರಿಗಿರಲಿಲ್ಲ! ‘ಹಾಲು ಹೌದು, ಆದರೆ ನಾಯಿಯ ತೊಗಲಿನಲ್ಲಿದೆ’ ಎಂಬಂತೆ ‘ಶ್ರೇಯಸ್ಸಾಗಲಿ’ ಎಂಬ ಮಂಗಲಮಯವಾದ ಪರಹಿತಚಿಂತನೆಯು ‘ಆಗುವುದಿದ್ದರೆ ಅದು ತನ್ನ ಮೂಲಕವೇ ಆಗಲಿ’ ಎಂಬ ಸ್ವಾರ್ಥದ ದುರಾಗ್ರಹದಿಂದ ದೂಷಿತವಾಗಿರುವ ಲೋಕಸಾಮಾನ್ಯರಿಗೆ ಇದು ವಸಿಷ್ಠರ ಪಾಠ!

ಎಂಥ ವ್ಯಕ್ತಿತ್ವವದು! “ಕಾಮಕ್ರೋಧಾವುಭೌ ಯಸ್ಯ ಚರಣೌ ಸಂವವಾಹತುಃ” – ಪ್ರಪಂಚದ ಪ್ರತಿಯೊಂದು ಜೀವವೂ ಯಾವೆರಡು ದುರ್ಗುಣಗಳ ಕತ್ತರಿಯಲ್ಲಿ ಕತ್ತರಿಸಲ್ಪಡುತ್ತಿವೆಯೋ ಆ ಕಾಮ-ಕ್ರೋಧಗಳು ಅವರ ಕಾಲೊತ್ತುವವಂತೆ! ಇನ್ನು ಅವುಗಳದೇ ಮರಿಯಾದ ಮಾತ್ಸರ್ಯವು ಅವರ ಬಳಿ ಸುಳಿಯುವ ಮಾತೆಲ್ಲಿದೆ!?

ಹಾಗೆಂದು ವಸಿಷ್ಠರು ಅಸಮರ್ಥರೆಂದೇನೂ ಅಲ್ಲ; ಅವರಿಗೆ ಅಸಾಧ್ಯವಾದುದೂ ಯಾವುದೂ ಇಲ್ಲ! ಆದರೆ ಅವರೇ ಎಲ್ಲವನ್ನೂ ಮಾಡಿದರೆ ಉಳಿದವರಿಗೇನು ಪಾತ್ರ? ಸರ್ವಸಮರ್ಥನಾದ ಆಂಜನೇಯನೇ ರಾಮಕಾರ್ಯವೆಲ್ಲವನ್ನೂ ನೆರವೇರಿಸಿದರೆ ಅಂಗದ-ಜಾಂಬವಂತರಿಗೇನು ಕೆಲಸ? ಅಳಿಲಿಗೆಲ್ಲಿಯ ಸಾರ್ಥಕತೆ? ಒಂದು ಮಹಾವೃಕ್ಷದಲ್ಲಿ ಬೇರು ಬಹು ಮುಖ್ಯವಾದರೂ ಕಾಂಡ~ಕೊಂಬೆ~ಹೂವು~ಹಣ್ಣುಗಳಿಗೆ ಅವುಗಳದ್ದೇ ಆದ ಕಾರ್ಯವಿರುವಂತೆ ಅನ್ಯಾನ್ಯ ಕಾರ್ಯಗಳಿಗೆ ವಿಧಿಯು ಅನ್ಯಾನ್ಯ ವ್ಯಕ್ತಿಗಳನ್ನು ನಿಶ್ಚಯಿಸಿರುತ್ತದೆ. ಅದು ಹಾಗೆಯೇ ನಡೆದರೆ ಚೆಂದ.

ವಿಶ್ವದ ಸ್ವಾಮಿಯೇ ಅಪರೂಪದಲ್ಲಿ ವಿಶ್ವದಲ್ಲಿ ಅವತರಿಸಿ ಬರುತ್ತಿರುವಾಗ ಅವನ ಸೇವಾಧನ್ಯತೆಯು ಅಧಿಕಾಧಿಕ ಚೇತನರಿಗೆ ಲಭಿಸಬೇಕಲ್ಲವೇ? ಶ್ರೀರಾಮನೆಂಬ ಅಮೃತಸಮುದ್ರವು ಧರೆಗೆ ಹರಿದು ಬರುತ್ತಿರುವಾಗ, ಆ ಅಮೃತಸಮಯಕ್ಕಾಗಿಯೇ ಯುಗಯುಗಗಳಿಂದ ಕಾಯುವ ಅನಂತಾನಂತ ಪುಣ್ಯಜೀವಗಳಿಗೆ ಅಷ್ಟಷ್ಟಾದರೂ ಅಮೃತವು ಹಂಚಲ್ಪಡಬೇಡವೇ?

ರಾಮಜನ್ಮಕ್ಕೆ ಸಾಧನವಾಗಬಲ್ಲ ಮಹಾಯಾಗವನ್ನು ನೆರವೇರಿಸುವ ಮಹಾಯೋಗವನ್ನು ಸಂತೋಷವಾಗಿ ಋಷ್ಯಶೃಂಗರಿಗೆ ಬಿಟ್ಟುಕೊಡುವಾಗ ವಸಿಷ್ಠರಲ್ಲಿದ್ದುದು ಈ ಭಾವ!

ಅತ್ತ, ತನ್ನ ಗುರುವಿನ ಕುರಿತಾದ ದಶರಥನ ಭಾವವಾದರೂ ಕಿಂಚಿತ್ತಾದರೂ ಬದಲಾಗಿರಲಿಲ್ಲ. “ಸಂತತಿಕಾರಕವಾದ ಯಾಗವನ್ನು ನೆರವೇರಿಸಿಕೊಡುವಂತೆ ಋಷ್ಯಶೃಂಗರಲ್ಲಿ ಪ್ರಾರ್ಥಿಸಲೇ?” ಎಂಬುದು ಅವನು ಬಾಯ್ದೆರೆದು ಆಡಿದ ಮಾತು; “ಋಷ್ಯಶೃಂಗರಲ್ಲಿ ನಿಮ್ಮನ್ನು ಕಾಣಲೇ?” ಎಂಬುದು ಅವನ ಹೃದಯದ ಭಾವ!

~*~*~

(ಸಶೇಷ)

*ಕ್ಲಿಷ್ಟ-ಸ್ಪಷ್ಟ:

  • ಉದ್ಯತ: ತೊಡಗಿರುವವನು

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ57ನೇ ರಶ್ಮಿ.

 

56 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments