|| ಹರೇ ರಾಮ ||

ಜೀವಿ ಎಷ್ಟು ಕಾಲ ಬದುಕಿರುತ್ತಾನೆ ಎಂಬುದಕ್ಕಿಂತ, ಹೇಗೆ ಬದುಕುತ್ತಾನೆ ಎಂಬುದು ಮುಖ್ಯ.
ಹೇಗೆ ಬದುಕುತ್ತಾನೆ ಎಂಬುದಕ್ಕಿಂತಲೂ, ಹೇಗೆ ಸಾಯುತ್ತಾನೆ ಎಂಬುದು ಇನ್ನೂ ಮುಖ್ಯ ..!

ಬದುಕು ಪರೀಕ್ಷೆಯಾದರೆ, ಸಾವು ಅದರ ಫಲಿತಾಂಶ.
ಹೇಗೆ ಬದುಕಬೇಕೆಂಬ ನಿರ್ಧಾರವನ್ನು ಸಾಮಾನ್ಯರು ಮಾಡಬಹುದು. .
ಆದರೆ, ಹೇಗೆ ಸಾಯಬೇಕೆಂಬುದನ್ನು ನಿರ್ಧರಿಸಲು ಅಸಾಮಾನ್ಯರಿಗೆ ಮಾತ್ರವೇ ಸಾಧ್ಯ..!

ಬದುಕಿದರೆ ಹೇಗೆ ಬದುಕಬೇಕೆಂಬುದನ್ನು ಶ್ರೀ ರಾಮಾಯಣ ಹೇಗೆ ನಿರೂಪಿಸಿದೆಯೋ,   ಹಾಗೆಯೇ, ಸತ್ತರೆ ಹೇಗೆ ಸಾಯಬೇಕೆಂಬುದನ್ನು ಕೂಡಾ ಮನ ಮುಟ್ಟುವಂತೆ ನಿರೂಪಿಸಿದೆ.
ಬದುಕಿನ ಜೊತೆಗೆ ಸಾವನ್ನು ಕಲಿಯಬಯಸುವಿರಾದರೆ ಮಧ್ಯರಾಮಾಯಣಕ್ಕೆ ಬನ್ನಿ..

ಪಕ್ಷಿರಾಜ ಜಟಾಯು ಮತ್ತು ಮಾಯಾವಿ ಮಾರೀಚ..
ತಮ್ಮ ಸಾವಿನ ಮೂಲಕ ರಾಮಾಯಣಕ್ಕೆ ತಿರುವು ತಂದುಕೊಟ್ಟ, ಅಷ್ಟೇ ಏಕೆ – ಅಂದಿನ ಜಗತ್ತಿನ ಚಿತ್ರಣವನ್ನು ಬದಲಾಯಿಸಿದ ಎರಡು ಅದ್ಭುತ ಪಾತ್ರಗಳನ್ನು ಒಮ್ಮೆ ನೋಡಿ.
ಕಾರ್ಯ ನಿರ್ವಹಣೆಯ ದೃಷ್ಟಿಯಿಂದ ಈರ್ವರಲ್ಲಿಯೂ ದೋಷವೆಣಿಸುವಂತಿಲ್ಲ, ಸ್ವಾಮಿಕಾರ್ಯಕ್ಕೆ ತನ್ನ ಸರ್ವಶಕ್ತಿಯನ್ನೂ ಧಾರೆಯೆರೆದವರು.
ಕೆಲ ವಿಷಯಗಳಲ್ಲಿ ಇವರೀರ್ವರೂ ಒಬ್ಬರನ್ನೊಬ್ಬರು ಹೋಲುತ್ತಾರೆ..!
ಆದರೆ ಹಲವು ವಿಷಯಯಗಳಲ್ಲಿ ಕತ್ತಲೆ- ಬೆಳಕುಗಳಂತೆ ಸಂಪೂರ್ಣವಾಗಿ ಭಿನ್ನವಾಗಿ ನಿಲ್ಲುತ್ತಾರೆ..!

ಹೋಲಿಕೆ ಇಲ್ಲಿ…

 • ಈರ್ವರೂ ಪ್ರಧಾನ ಭೂಮಿಕೆ ವಹಿಸುವುದು ರಾಮಾಯಣದ ಅರಣ್ಯಕಾಂಡದಲ್ಲಿ ಬರುವ ಸೀತಾಪಹರಣದ ಪ್ರಕರಣದಲ್ಲಿ..
 • ಈರ್ವರೂ ತಮ್ಮ ಸ್ವಾಮಿಗಾಗಿ ಸರ್ವೋಚ್ಚ ಬಲಿದಾನವನ್ನೇ ಮಾಡಿದವರು.  ಸಾಯುವ ಕ್ಷಣದಲ್ಲಿಯೂ ತಮ್ಮ ಮಾತುಗಳ ಮೂಲಕವೇ ಸ್ವಾಮಿಕಾರ್ಯವನ್ನು ಸಾಧಿಸಿಕೊಟ್ಟವರು..
 • ತಾವು ಹೊರಟ ಕಾರ್ಯದಲ್ಲಿ ಸಾವು ನಿಶ್ಚಿತವೆಂಬುದು ಈರ್ವರಿಗೂ ಮೊದಲೇ ತಿಳಿದಿತ್ತು..
 • ಈರ್ವರೂ ತಮ್ಮ ಶತ್ರು ನಾಯಕನಿಂದಲೇ ಹತರಾದವರು..

ಹೋಲಿಕೆ ಎಲ್ಲಿ ?…

 • ಈರ್ವರ ಉದ್ದೇಶಗಳಲ್ಲಿಯೇ ಮಹದಂತರವಿದೆ..
  ರಾಮನ ಮಡದಿ ರಾಮನೊಡನಿರಲೆಂಬುದು ಜಟಾಯುವಿನ ಸದುದ್ದೇಶ..
  ಮಾರಿಚನದ್ದಾದರೂ ಆ ಮಹಾಸತಿಯ ಪಾತಿವ್ರತ್ಯಕ್ಕೆ ಚ್ಯುತಿ ತರುವ, ರಾಮನ ಮಡದಿಯನ್ನು ರಾವಣನ ವಶಗೊಳಿಸುವ ದುರುದ್ದೇಶ..!
 • ಕಾರ್ಯವಿಧಾನಗಳೂ ಸಂಪೂರ್ಣ ಭಿನ್ನ.
  ಜಟಾಯುವಿನದು ಸತ್ಯ ಸಂಗ್ರಾಮವಾದರೆ, ಮಾರೀಚನದು ಪಕ್ಕಾ ವಂಚನೆ..!
 • ಈರ್ವರ ಪ್ರೇರಣಾ ಸ್ರೋತದಲ್ಲಿರುವ  ಅಂತರವನ್ನು ಗಮನಿಸಿ:
  ಜಟಾಯುವಿನದ್ದು ಸ್ವಯಂಪ್ರೇರಣೆ..
  ರಾವಣನಿಂದ ಅಪಹರಿಸಲ್ಪಡುತ್ತಿದ್ದ ಸೀತೆಯ ಆರ್ತನಾದವನ್ನು ಕೇಳಿ ತಾನೇ ತಾನಾಗಿ ರಾವಣನೊಡನೆ ಖಾಡಾಖಾಡಿಯಾಗಿ ಹೋರಾಟಕ್ಕೆ ನಿಂತವನು ಜಟಾಯು.
  ಬಲವಂತಕ್ಕೆ ಬಂದವನು ಮಾರೀಚ..!
  ಎಷ್ಟು ಮಾತ್ರಕ್ಕೂ ತನ್ನ  ಆಜ್ಞೆಯನ್ನು ಪಾಲಿಸಲು ಮಾರೀಚನೊಪ್ಪದಿದ್ದಾಗ, ಕೊನೆಯಲ್ಲಿ ಪ್ರಾಣಭಯವನ್ನೊಡ್ಡುತ್ತಾನೆ ರಾವಣ..
  ಪಾಪಿ ರಾವಣನ ಕೈಯಿಂದ ಸಾಯುವುದಕ್ಕಿಂತ ರಾಮನ ಕೈಯಲ್ಲಿ ಸಾಯುವುದೇ ಮೇಲೆಂದು ಒಲ್ಲದ ಮನಸ್ಸಿನಿಂದ ಹೊರಟುಬಂದವನು ಮಾರೀಚ!

ಅದೆಷ್ಟೇ ಮರೆಮಾಚಿದರೂ ಸುಳ್ಳು ಕೊನೆಗೂ ಸುಳ್ಳಾಗಿಯೇ ಉಳಿಯುತ್ತದೆ..
ಸತ್ಯವಾದರೂ ಕೊನೆಯಲ್ಲಿ ಪರಮಸತ್ಯವಾಗಿಯೇ ವಿರಾಜಿಸುತ್ತದೆ..
ಸಾಯುವ ಕೊನೆಕ್ಷಣದಲ್ಲಿ ಮಾಡಿದ “ಹಾ ಸೀತೆ…!, ಹಾ… ಲಕ್ಷ್ಮಣಾ…!”ಎಂಬ ಮಾರೀಚನ ಉದ್ಗಾರ ಮಿಥ್ಯೆ ಅಲ್ಲವೇ?
ಆ ಮೋಸ ತಾನೇ ಸೀತಾಪಹರಣಕ್ಕೆ ಕಾರಣವಾಗಿದ್ದು?
ಪ್ರಾಣೋತ್ಕ್ರಮಣದ ಚರಮಾವಸ್ಥೆಯಲ್ಲಿಯೂ ರಕ್ತಮಾಂಸಗಳೊಸರುವ ತನ್ನ ಬಾಯಿಯಿಂದ “ಸೀತೆಯನ್ನಾರು ಕದ್ದರು? ಯಾವ ಕಡೆಗೊಯ್ದರು?” ಎನ್ನುವ ಸತ್ಯವನ್ನು ರಾಮನಿಗೆ ಅರುಹಿದವನು ಜಟಾಯು..
ಆ ಸತ್ಯವೇ ಮುಂದೆ ಸೀತೆಯ ಪುನಃಪ್ರಾಪ್ತಿಗೆ ಕಾರಣವಾಯಿತು..
ಜಗತ್ತಿನಲ್ಲಿ ಧರ್ಮಾಧರ್ಮಗಳಲ್ಲಿ ಯಾವ ಅಂತರವಿದೆಯೋ, ಜಟಾಯು-ಮಾರೀಚರ ನಡುವೆ ಅದೇ ಅಂತರವಿದೆ..!
ಜಟಾಯು ಮಾರೀಚರಿಗೆ – ಕೊನೆಗೇನು ಸಿಕ್ಕಿತು? – ಎಂಬುದನ್ನೂ ನಾವು ಚಿಂತಿಸಬೇಕು.

ಧರ್ಮದ ಫಲಕ್ಕೂ ಅಧರ್ಮದ ಫಲಕ್ಕೂ ಅಂತರ ಗೊತ್ತಾಗುವುದಲ್ಲೇ..!
ಪರನಾರೀ ಚೌರ್ಯದ ಕುತ್ಸಿತ ಕಾರ್ಯಕ್ಕೆ ಮಾರೀಚನನ್ನು ಒಪ್ಪಿಸುವಾಗ –
ಕಾರ್ಯ ಸಾಧಿಸಿಕೊಟ್ಟರೆ ಅರ್ಧರಾಜ್ಯ ಕೊಡುವುದಾಗಿಯೂ, ಬರಬಹುದಾದ ಆಪತ್ತುಗಳಲ್ಲಿ ಜೊತೆಗಿದ್ದು ರಕ್ಷಿಸುವುದಾಗಿಯೂ’ಭರವಸೆ‘ಯಿತ್ತ ರಾವಣ, ಕಾರ್ಯವಾದ ನಂತರ ಮಾರೀಚನ ಕಡೆಗೆ ತಿರುಗಿಯೂ ನೋಡಲಿಲ್ಲ!
ಅರ್ಧ ರಾಜ್ಯದ ಮಾತು ಹಾಗಿರಲಿ, ಮಾರೀಚ ಸತ್ತುಬಿದ್ದದ್ದೆಲ್ಲಿ ಎಂದು ನೋಡುವ ಗೋಜಿಗೂ ರಾವಣ ಹೋಗುವುದಿಲ್ಲ..!
ಆಪತ್ತುಗಳಲ್ಲಿ ರಕ್ಷಿಸುವೆನೆ೦ದವನು ಕೊನೆಯ ಪಕ್ಷ ಮಾರೀಚನ ಶರೀರಕ್ಕೆ ಆಗಬೇಕಾದ ಅಂತ್ಯಸಂಸ್ಕಾರಗಳನ್ನೂ ಮಾಡಿಸಲಿಲ್ಲ!
ಸೀತೆಯೆಂದೂ ರಾವಣನ ವಶವಾಗಲಿಲ್ಲ. ಆದರೆ, ಮಾರೀಚನ ಶರೀರ ನಾಯಿ-ನರಿಗಳ ಪಾಲಾಯಿತು.

ಆದರೆ,

ಜಟಾಯುವಿಗೆ ಪ್ರಾಪ್ತವಾದ ದಿವ್ಯಮೃತ್ಯು ಭೂಮಂಡಲದ ಇತಿಹಾಸದಲ್ಲಿಯೇ ಯಾವ ಸತ್ಪುರುಷರಿಗೂ ಪ್ರಾಪ್ತವಾಗಿರಲಾರದು.!
ರಾವಣನ ಖಡ್ಗ ಪ್ರಹಾರಕ್ಕೆ ತನ್ನ ಪಕ್ಷಗಳನ್ನು(ರೆಕ್ಕೆಗಳನ್ನು)-ಪಾಶ್ವ೯ಗಳನ್ನು –ಪಾದಗಳನ್ನು ಕಳೆದುಕೊಂಡು ಧರೆಗುರುಳಿದ ಜಟಾಯುವಿಗೆ ಪ್ರಥಮ ಚಿಕಿತ್ಸೆಯ ರೂಪದಲ್ಲಿ ಲಭಿಸಿದ್ದು ಲೋಕಮಾತೆ ಸೀತೆಯ ಮಡಿಲು..!
ಶೈತ್ಯೋಪಚಾರ ರೂಪದಲ್ಲಿ ಸಿಂಪಡಿಸಲ್ಪಟ್ಟಿದ್ದು ಆ ವಾತ್ಸಲ್ಯಮೂರ್ತಿಯ ಕಣ್ಣೀರು..!
ಮರಣವನ್ನೇ ಮಹೋತ್ಸವವನ್ನಾಗಿ ಮಾಡಿಕೊಂಡ ಆ ಮಹಾವೀರ, ಅಮರನಾಗಿದ್ದು ಶ್ರೀರಾಮನ ಚರಣಗಳಲ್ಲಿ..!
ಮಿಕ್ಕೆಲ್ಲಾ ಅಂಗಗಳೂ ಛಿನ್ನವಿಚ್ಚಿನ್ನವಾಗಿದ್ದರೂ, ಅಳಿದುಳಿದ ನಾಲಿಗೆಯೊಂದರಿಂದಲೇ ಶ್ರೀರಾಮನಿಗೆ ಅನುಪಮ ಸೇವೆ ಸಲ್ಲಿಸಿದ ಅದ್ಭುತ “ಚೇತನ“..!
ಸಾಯುವ ಗಳಿಗೆಯಲ್ಲಿಯೂ ಮಾಡಿದ್ದು ರಾಮಕಾರ್ಯ, ನೋಡಿದ್ದು ಶ್ರೀರಾಮನ ಮುಖಕಮಲ..!
ಬ್ರಹ್ಮಾಂಡದ ಒಡೆಯನ ಕರಕಮಲಗಳಿಂದಲೇ ಅಂತ್ಯಸಂಸ್ಕಾರ..
ದಶರಥನಿಗೂ ಸಿಗದ ಭಾಗ್ಯವದು…!

ತ್ರೇತಾಯುಗದ ನಂತರ, ದ್ವಾಪರಯುಗ ಕಳೆದು, ಕಲಿಯುಗ ಬಂದಿದೆ..
ಇಂದಿನ ಇಪ್ಪತ್ತೊಂದನೇ ಶತಮಾನದಲ್ಲಿಯೂ ಮಾರೀಚ-ಜಟಾಯುಗಳು ಮತ್ತೊಮ್ಮೆ ಹುಟ್ಟಿ ಬಂದಿದ್ದಾರೆ..!
ತಾವೂ ಸತ್ತು ಸಾವಿರಾರು ಜನರನ್ನೂ ಸಾಯಿಸುವ, ದೇಶವನ್ನೇ ನೋಯಿಸುವ ಭಯೋತ್ಪಾದಕರಲ್ಲಿ ಮಾರೀಚನ ಆವೇಶವಿದೆ..!!
ತ್ಯಾಗ ಒಳಿತಾದರೂ ಧ್ಯೇಯ ಕೆಡುಕಾದಾಗ, ಅದರ ಫಲ ವಿಶ್ವವಿಪ್ಲವವೇ ಹೊರತು ವಿಶ್ವಶಾಂತಿಯಲ್ಲ..!

ಇತ್ತೀಚೆಗೆ ಮುಂಬೈಯಲ್ಲಿ ನರಮೇಧವನ್ನು ನಡೆಸಿ ಕಮಾಂಡೋಗಳಿಂದ ಹತರಾದ ಭಯೋತ್ಪಾದಕರಿಗೆ ಅಂತ್ಯ ಸಂಸ್ಕಾರ ಮಾಡಲು ಅವರ ಯಾವೊಬ್ಬ ಬಂಧುವೂ ಮುಂದೆ ಬರಲಿಲ್ಲ.
ಮಾತ್ರವಲ್ಲ, ಯಾವ ದೇಶಕ್ಕಾಗಿ ಅವರುಗಳು ಪ್ರಾಣತೆತ್ತರೋ – ಆ ಪಾಕಿಸ್ತಾನವೇ ಅವರನ್ನು ’ತಮ್ಮವರಲ್ಲ!’ ಎಂದುಬಿಟ್ಟಾಗ – ಅನಾಥ ಮಾರೀಚನ ನೆನಪಾಗದಿರುತ್ತದೆಯೇ…!?

ದೇಶಕ್ಕಾಗಿ ಹುತಾತ್ಮರಾಗುವ ವೀರ ಸೈನಿಕರಲ್ಲಿ ಜಟಾಯುವಿನ ಚೇತನವಿದೆ..
ತಮ್ಮ ಜೀವವನ್ನು ತೆತ್ತು ಅಸಂಖ್ಯ ಜೀವಗಳನ್ನು ಉಳಿಸುವವರಿವರು..
ಭಾರತಮಾತೆಯ ಚರಣಗಳನ್ನು ತಮ್ಮ ಪ್ರಾಣಗಳಿಂದ ಪೂಜಿಸುವವರಿವರು..!
ಭಾರತಮಾತೆಯ ಭುಜಗಳಾಗಬೇಕಾದ ಯುವಕರೇ….!!
ನಿಮ್ಮ ಹೃದಯದೇವತೆಗಳಾಗಬೇಕಾದವರಿವರು..!! ಹೊರತು – ಸಡಿಲ ಚಾರಿತ್ರ್ಯದ ಚಿತ್ರ ತಾರೆಗಳಲ್ಲ..!

ನಿಮ್ಮ ಅಂತರಂಗವು ’ಮಾರೀಚನ ಮಾಯಾಮೃಗ ಸುಳಿದಾಡುವ ಕಗ್ಗಾಡಾ’ಗದಿರಲಿ.
ಜಟಾಯು ಚಿರಾಯುವಾಗಿ ವಿಹರಿಸುವ ಅನಂತ ಆಕಾಶವಾಗಲಿ.

ರಾಮಬಾಣ: ಬದುಕಿದರೆ ಶ್ರೀರಾಮನಂತೆ ಬದುಕಬೇಕು(ರಾವಣನಂತೆ ಅಲ್ಲ..!) ಸತ್ತರೆ ಜಟಾಯುವಿನಂತೆ ಸಾಯಬೇಕು( ಮಾರೀಚನಂತೆ ಅಲ್ಲ..!)

Facebook Comments