||ಹರೇರಾಮ||

ಹಿರಿದಾದ ಭೂಮಿಯ ಪರಿಚಯವನ್ನು ಕಿರಿದಾದ ಪ್ರತಿಕೃತಿಯ ಮೂಲಕ ಮಾಡಿಕೊಡುವಂತೆ..
ಭೂಮಿ-ಆಗಸಗಳನ್ನು ವ್ಯಾಪಿಸಿ ನಿಂತ ವಿರಾಟ್ ಪುರುಷನ ವಿಶಾಲ ಕಥೆಯನ್ನು ನಾರದರು ವಾಲ್ಮೀಕಿಗಳಿಗೆ ಕೆಲವೇ ಮಾತುಗಳಲ್ಲಿ ಹೇಳಿದರು..

* ಮರುಭೂಮಿಯಲ್ಲಿ ಚಿಲುಮೆಯಾಗಿ..

ಆತನ ಜನ್ಮವೇ ಶೋಕಪರಿಹಾರ..!!
ಬಹುಕಾಲ ಮಕ್ಕಳಿಲ್ಲದ ಕೊರಗಿನಲ್ಲಿ ಸೊರಗಿದ್ದ ದಶರಥ ಚಕ್ರವರ್ತಿಯ ಬದುಕಿನಲ್ಲಿ ….
ಬರಗಾಲದಲ್ಲಿ ಭರಪೂರ ಸುರಿದ ಮಳೆಯಂತೆ……!!
ಮರುಭೂಮಿಯಲ್ಲೊಸರುವ ನೀರ ಸೆಲೆಯಂತೆ…..!!
ಅಮಾವಾಸ್ಯೆ ಕಳೆದು ಉದಿಸಿ ಬರುವ ಸೂರ್ಯನಂತೆ…!!
ಶ್ರೀರಾಮನ ಆವಿರ್ಭಾವವಾಯಿತು…!!!

* ಬೆರೆತವು ಭುವಿ-ಬಾನುಗಳು……

ಇತ್ತ…..
ದೇವದೂತನ ದಿವ್ಯಹಸ್ತವನ್ನಲಂಕರಿಸಿದ್ದ ದೇವನಿರ್ಮಿತ ಪಾಯಸದ ಮೂಲಕವಾಗಿ
ದೇವದೇವನು ದಿವಿಯಿಂದ ಧರೆಗಿಳಿದು ದಶರಥನ ಯಜ್ಞಾಗ್ನಿಯ ಮಧ್ಯದಲ್ಲಿ ಪ್ರಕಟಗೊಂಡರೆ…..
ಅತ್ತ…..
ಮಿಥಿಲೆಯ ಯಜ್ಞಭೂಮಿಯಲ್ಲಿ ಯಜ್ಞಾರ್ಥವಾಗಿ ಭೂಮಿಯನ್ನುಳುವ ಜ್ಞಾನಿಗಳ ರಾಜ ಜನಕನ ನೇಗಿಲರೇಖೆಯಲ್ಲಿ ಭುವನದ ಭಾಗ್ಯರೇಖೆಯಾಗಿ ಭೂಗರ್ಭವನ್ನು ಭೇದಿಸಿ ಮೇಲೆದ್ದು ಬಂದಳು ಸೀತೆ…!!!

ಎಂದಿದ್ದರೂ ಬಾನು ಭುವಿಯೆಡೆಗೆ ಬಾಗಲೇಬೇಕಲ್ಲವೇ….!!

ಬದುಕಿನ ಸಮರಸದ ಸಿದ್ಧಿಗಾಗಿ ಅರಸಿಯನ್ನರಸಿ ಅರಸುಗಳರಸನ ಅಭಿಯಾನ ಆರಂಭಗೊಂಡಿತು….

ಪತ್ನಿಯೆಂದರೆ ಯಜ್ಞದ ಸಹಭಾಗಿನಿ..
ಆದುದರಿಂದಲೇ ಇರಬೇಕು, ಸೀತೆಯನ್ನು ಪಡೆಯುವ ಹಾದಿಯಲ್ಲಿ ರಾಮನ ಪ್ರಥಮ ಕಾರ್ಯವೇ ಯಜ್ಞರಕ್ಷಣೆ…!!

ಸಮರವಿಲ್ಲದೆ ಸಮರಸವೆಲ್ಲಿ…?
ಆದುದರಿಂದಲೇ ತಾಟಕಿ-ಸುಬಾಹು ಮೊದಲಾದವರ ವಧೆ…!

ತನ್ನ ಮದುವೆಗೆ ಮೊದಲು ಮುರಿದ ಮದುವೆಯೊಂದನ್ನು ಕೂಡಿಸುವ ಆದರ್ಶ ಅಹಲ್ಯೋದ್ಧಾರದಲ್ಲಿ…!!

ರಾಮನಾರಾಯಣನು ಸೀತಾಲಕ್ಷ್ಮಿಯನ್ನು ಪಡೆಯಲು ಮಾಧ್ಯಮವೇ ಶಿವನ ಧನುಸ್ಸು…..!!

ಸಂಹಾರ ಸಾಧನವನ್ನು ಮುರಿಯುವುದೇ ವಿವಾಹವೆಂಬ ಸೃಷ್ಟಿಕಾರ್ಯದ ಸಿದ್ಧತೆ ….
ರಾಮ-ಸೀತೆಯರ ವಿವಾಹವಾಗುತ್ತಿದ್ದಂತೆಯೇ ರಾಮ-ರಾಮರ ವಿವಾದ ಪ್ರಾರಂಭ….!!
ಸೂರ್ಯೋದಯವಾಗುತ್ತಿದ್ದಂತೆಯೇ ಚಂದ್ರ ತೇಜೋವಿಹೀನನಾಗುವಂತೆ ಶ್ರೀರಾಮನ ಆವಿರ್ಭಾವದ ಎದುರು ಕಳೆಯನ್ನು ಕಳೆದುಕೊಂಡನು ಪರಶುರಾಮ….!!
ವೈಷ್ಣವ ಶಕ್ತಿಯ ಪ್ರತೀಕವಾದ ವೈಷ್ಣವ ಧನುಸ್ಸು ಶೋಭಿಸಿತು ಲೋಕೈಕವೀರನ ಕರಕಮಲಗಳಲ್ಲಿ….!!

* ಅರಸಿ ಬಂತು ಅರಸೊತ್ತಿಗೆ…!

ದಶರಥನ ಮಕ್ಕಳಲ್ಲಿ ಆತ ಜ್ಯೇಷ್ಠನೂ ಅಹುದು..ಶ್ರೇಷ್ಠನೂ ಅಹುದು…
ಆತ ದೊರೆಯಾಗಲೇಬೇಕೆಂಬುದು ಹೆತ್ತವರ,ಹತ್ತಿರದವರ,ಮಾತ್ರವಲ್ಲ….
ನಾಡಿನ ಸರ್ವಪ್ರಜೆಗಳ ಹರಕೆ….ಹಾರೈಕೆ…!!!
ಯುಗಕ್ಕೊಮ್ಮೆಯೂ ಸಿಗಲಾರದ ಇಂಥ ಅಸದೃಶ ವ್ಯಕ್ತಿತ್ವವೊಂದನ್ನು ರಾಜ್ಯದ ಮುಕುಟದಿಂದ ಸಿಂಗರಿಸಹೊರಟ ದಶರಥನನ್ನು ಲೋಕವೇ ಅಭಿನಂದಿಸಿತು…!

* ಕಾಮಿನಿಯ ಕಾರಸ್ಥಾನ….!

ಹಂಡೆಹಾಲು ಹಾಳು ಮಾಡಲು ಹಂಡೆ ಹುಳಿ ಬೇಕೆ..?ಹುಂಡುಹುಳಿ ಸಾಲದೇ…!!

ಮಂಥರೆಯ ದುರ್ಮಂತ್ರದಿಂದ ದೂಷಿತಳಾದ ಕೈಕೇಯಿ ,ತನ್ನ ಸುಖದ ಭ್ರಮೆಗಾಗಿ ಸಾಕೇತದ ಸಕಲರ ನಿಜಸುಖವನ್ನೇ ನಾಶ ಮಾಡಿದಳು…!

ಹಿಂದೆಂದೋ ಕೈಕೇಯಿಗೆ ದಶರಥ ಕೊಟ್ಟ ವರ ಇಂದು ಆತನಿಗೇ ಶಾಪವಾಗಿ ಪರಿಣಮಿಸಿತು..!!
ಪರಿಣಾಮ..? ಆನಂದಾಶ್ರುಗಳೊಡನೆ ರಾಮನ ರಾಜ್ಯಾಭಿಷೇಕವನ್ನು ನೋಡಬಯಸಿದ ಪ್ರಜೆಗಳು…
ಅಯೋಧ್ಯೆಯ ಆನಂದವೇ ಅಡವಿಗೆ ನಿರ್ಗಮಿಸುವುದನ್ನು ಕಣ್ಣೀರಿನ ಕಣ್ಣುಗಳಲ್ಲಿ ನೋಡಬೇಕಾಯಿತು…!!
ಎಂದೆಂದೂ ಬಯಸದ ಭರತನಿಗೆ ದೊರೆತನ ನಿಶ್ಚಯವಾಯಿತು…!!

* ದೊರೆಯ ದುರಂತ….

ಅರಮನೆಯ ಅಂಗಳದಲ್ಲಿ ತಾಯ್ತಂದೆಯರನ್ನು,
ತಮಸಿಯ ತೀರದಲ್ಲಿ ಪ್ರೀತಿಯ ಪ್ರಜೆಗಳನ್ನು,
ಗಂಗೆಯ ಗಡಿಯಲ್ಲಿ ಸೂತ ಸುಮಂತ್ರನನ್ನು ಬೀಳ್ಕೊಟ್ಟು,
ಪ್ರಿಯಸಖ ಗುಹನಲ್ಲಿ ಮತ್ತು ಪೂಜ್ಯಪಾದ ಭರದ್ವಾಜರಲ್ಲಿ ಒಂದೊಂದು ರಾತ್ರಿ ತಂಗಿ
ಅತ್ತ ರಾಮ ಚಿತ್ರಕೂಟದೆಡೆಗೆ ಮುನ್ನಡೆದರೆ…
ಇತ್ತ ಅಯೋಧ್ಯೆಗೆ ಅಯೋಧ್ಯೆಯೇ ರಾಮನಿಗಾಗಿ ರೋಧಿಸಿತು..

ದಶರಥನ ಪುತ್ರಪ್ರೇಮದ ಪರಾಕಾಷ್ಟೆ ಪುತ್ರಶೋಕದಲ್ಲಿ ಪರ್ಯವಸಾನವಾಯಿತು…

ಕೈಕೇಯಿಯ ಕೊರಳಲ್ಲಿ ಆತ ಬಂಧಿಸಿದ್ಧ ಮಂಗಲಸೂತ್ರ ..ಮಸಣಸೂತ್ರವಾಗಿ …
ಮರಣಕಾರಣವಾಗಿ ಪರ್ಯವಸಾನವಾಯಿತು….

ಕೈಕೇಯಿಯ ಮೋಹಪಾಶ ಸತ್ಯಪಾಶವಾಗಿ, ಕೊನೆಗೆ ಮೃತ್ಯುಪಾಶವಾಗಿ ಪರ್ಯವಸಾನಗೊಂಡಿತು….!!!

ಅಯೋಧ್ಯೆ ಅರಾಜಕವಾಯಿತು…!!

* ರಾಜ್ಯಕ್ಕಿಂತ ರಾಮನೇ ಮಿಗಿಲು….!

ಕೇಕಯದ ರಾಜಗೃಹದಿಂದ ರಾಜನಿಲ್ಲದ ,ರಾಮನಿಲ್ಲದ ಅಯೋಧ್ಯೆಗೆ ಮರಳಿದ ಭರತನಿಗೆ..
ಅಲ್ಲಿ ಕಂಡದ್ದು “ಭರತ”ವಲ್ಲ…”ಇಳಿತ” ಮಾತ್ರ…

ಆತನ ಪ್ರೇಮಚಕ್ಷುವಿಗೆ ರಾಜ್ಯದ ಪ್ರಭುತ್ವಕ್ಕಿಂತ ರಾಮನ ಪಾದವೇ ಹಿರಿದಾಗಿ ತೋರಿತು…!
ಕೈಕೇಯಿಯ ಕಪಟದ ಫಲವಾಗಿ ಬಂದ ಕಿರೀಟವನ್ನು ತಿರಸ್ಕರಿಸಿ ,ಪುರಜನರೊಡಗೂಡಿ ಅಡವಿಯೆಡೆ-ಅಣ್ಣನ ಪಾದಗಳೆಡೆ ಧಾವಿಸಿದನಾತ…!!

* ರಾಮನುಂ ಭರತನುಂ ತಬ್ಬಿಕೊಂಡತ್ತಂದು….

ಚಿತ್ರಕೂಟ-ಮಂದಾಕಿನಿಯರ ಸಾಕ್ಷಿಯಲ್ಲಿ ಅಯೋಧ್ಯೆಯ ಅಮರಪ್ರೇಮಿ ಸೋದರರು ಸಂಧಿಸಿದರು..!

ಅವರ ತ್ಯಾಗದ ಮುಂದೆ ಚಿತ್ರಕೂಟವೇ ಕುಬ್ಜವೆನಿಸಿತು…!
ಅವರ ಪ್ರೇಮಾಶ್ರುವಿನ ಮುಂದೆ ಮಂದಾಕಿನಿಯೂ ಕಿರಿದೆನಿಸಿತು…!!
ರಾಜ್ಯ ನಿನಗಿರಲಿ-ನಿನಗಿರಲಿ ಎಂಬ ಪ್ರೀತಿ ಸಂವಾದ ಸಮರದಲ್ಲಿ ಸಹೋದರರಿಬ್ಬರೂ ಗೆದ್ದರು..!!

ಅಣ್ಣನ ಪಾದುಕೆಯನ್ನು ಶಿರದಲ್ಲಿ ಹೊತ್ತು ಭರತ ನಂದಿಗ್ರಾಮಕ್ಕೆ ಸಾಗಿದರೂ ಆರ್ದ್ರವಾದ ಆತನ ಅಂತಃಕರಣ ಮಾತ್ರ…

ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿನಲ್ಲಿಯೇ ಉಳಿದ, ಪ್ರೇಮಭರಿತವಾದ ರಾಮನ ಮನಸ್ಸು ಮಾತ್ರ ಭರತನನ್ನೇ ಹಿಂಬಾಲಿಸಿಕೊಂಡು ಹೋಯಿತು …..
ಅಣ್ಣನ ಚರಣವನ್ನು ಬಿಡಲಾರದೆ ಕಾಡಿನಲ್ಲಿಯೇ ಉಳಿದುಕೊಂಡಿತು…!!

* ಪಾದುಕೆಯ ಪರಮಾಧಿಕಾರ..

ಪಾದುಕೆಯೊಂದು ರಾಜ್ಯವಾಳಿದ ಇತಿಹಾಸ ಜಗತ್ತಿನ ಇತಿಹಾಸದಲ್ಲಿ ಮತ್ತೆಲ್ಲಿಯೂ ಸಿಗಲಾರದು…!!
ಆದರೆ ಪ್ರೇಮದಲ್ಲಿ ಅಸಂಭವವಾದುದು ಯಾವುದೂ ಇಲ್ಲ..!

ಸತ್ಯಕ್ಕಾಗಿ ಸಿಂಹಾಸನವನ್ನೇ ತೊರೆದ ಧರ್ಮಮೂರ್ತಿಯ ಚರಣಭೂಷಣವು ಭರತನ ಶಿರೋಭೂಷಣವಾಯಿತು…!!
ಸೂರ್ಯವಂಶದ ಸಮ್ರಾಟರು ಮಂಡಿಸುವ ಸಿಂಹಾಸನದಲ್ಲಿ  ತ್ಯಾಗಮೂರ್ತಿಯ ಪಾದುಕೆಗಳಿಗೆ ಪಟ್ಟಾಭಿಷೇಕವಾಯಿತು..!!

ದೊರೆತನದ ಸಕಲ ಧುರವನ್ನು ಹೊತ್ತರೂ ..ದೊರೆಯಾಗಲಿಲ್ಲ ಭರತ…!!

ಸಿಂಹಾಸನದಲ್ಲಿ ವನವಾಸಿಯ ಪಾದುಕೆಗಳು…
ಅವುಗಳ ಪರವಾಗಿ ರಾಜ್ಯಭಾರ ಮಾಡುವವನು ಮುನಿ ವೇಷಧಾರಿಯಾಗಿ ಮುನಿಜೀವನ ನಡೆಸುವ ರಾಜಕುಮಾರ…!

ಸಕಲ ಸಂಪತ್ತುಗಳೂ ಪಾದುಕೆಗಳಿಗೆ ಅರ್ಪಣೆ….

ಸಕಲ ಕಾರ್ಯಗಳಿಗೂ ಬೇಕು ಪಾದುಕೆಗಳ ಅಪ್ಪಣೆ…!!

ಸಾಟಿಯುಂಟೇ ಭರತನ ಭ್ರಾತೃಪ್ರೇಮಕ್ಕೆ…!!?

* ಅಯೋಧ್ಯೆಯ ನಷ್ಟ…ದಂಡಕೆಯ ಲಾಭ…!!

ಸೂರ್ಯನಿಗೆಲ್ಲಿಯಾದರೂ ಸಂಪೂರ್ಣವಾದ ಅಸ್ತವುಂಟೆ..?
ಭೂಗೋಳದ ಒಂದು ಪಾರ್ಶ್ವಕ್ಕೆ ಆತ ಮರೆಯಾದರೆ,ಇನ್ನೊಂದು ಪಾರ್ಶ್ವದಲ್ಲಿ ಉದಯವಾಗಲೇಬೇಕಲ್ಲವೆ…?
ಹಾಗೆಯೇ…ಅಯೋಧ್ಯೆಯಲ್ಲಿ ಮರೆಯಾದ ರಾಮನೆಂಬ ತೇಜೋರಾಶಿ ದಂಡಕೆಯಲ್ಲಿ ಪ್ರಕಟವಾಗಿ ಸಂಚರಿಸತೊಡಗಿತು …!!

ಮನೆಬಾಗಿಲಿಗೇ ಭಾಗೀರಥಿ ಬಂದಂತೆ… ತ್ರಿಭುವನವಾಸಿಯೇ ವನವಾಸಿಯಾಗಿ ಬಳಿಯಲ್ಲಿಯೇ ಸುಳಿದಾಡಿದರೆ…!!?

ದಕ್ಢಿಣದ ಕಾನನಗಳ ಗಿರಿ-ಝರಿಗಳು,ತರು-ಲತೆಗಳು,ಮೃಗ-ಪಕ್ಷಿಗಳು, ಮುನಿ-ಜನರನ್ನು ಆವರಿಸಿಕೊಂಡಿತು ರಾಮನೆಂಬ ಆನಂದ….!!!

||ಹರೇರಾಮ||

Facebook Comments