ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಸರ್ವೆ ನಂಬ್ರ ೨೬೯ | ೧ರಲ್ಲಿ ನಮ್ಮ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯು ಸುಮಾರು ೧೯೩೫ನೇ ಇಸವಿಯಿಂದ ಪ್ರಾರಂಭವಾಗಿದ್ದು, ಬನಾರಿ ಕೆ. ಸುಬ್ರಾಯ ಭಟ್ ಅವರ ನೇತೃತ್ವದಲ್ಲಿ ೧೯೫೫ರಲ್ಲಿ ಸ್ವಂತ ಕಟ್ಟಡ ಹೊಂದಿತು. ಆಗಿನ ಜಿಲ್ಲಾಧಿಕಾರಿ ಶ್ರೀ ರಾಜಾರಾಂ I A S ಇವರಿಂದ ಉದ್ಘಾಟನೆಗೊಂಡಿತು. ಇದಕ್ಕೆ ಆಗಿನ ಊರ ಪಟೇಲರಾದ ಶ್ರೀಮಾನ್ ಯು.ಪಿ. ಕೊರಂಗಿನ್ನಾಯ ಇವರ ಪೂರ್ಣ ಸಹಕಾರವು ಸಿಕ್ಕಿತ್ತು. ಅಂದಿನಿಂದ ಇಂದಿನ ವರೆಗೆ ಸರಿಸುಮಾರು ೨೦೬೬ ಮಕ್ಕಳು ವಿದ್ಯಾರ್ಜನೆ ಮಾಡಿರುತ್ತಾರೆ. ಈಗಿನ ಸರ್ಕಾರಿ ನಿಯಮಾಳಿಯಿಂದ ಅಧ್ಯಾಪಕರ ಕೊರತೆಯನ್ನು ಎದುರಿಸುತ್ತಿರುವ ನಾವು ಇದನ್ನು ಸಮರ್ಥವಾಗಿ ಎದುರಿಸಲು ೨೦೦೨ ರಲ್ಲಿ ಶ್ರೀಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀರಾಘವೇಶ್ವರ ಸ್ವಾಮೀಜಿಯವರ ಪಾದ ಕಮಲಕ್ಕೆ ಅರ್ಪಿಸಿದೆವು. ಶ್ರೀಗಳ ಮಾರ್ಗದರ್ಶನದ ಮೂಲಕ ಶಾಲೆಯು ಉತ್ತರೋತ್ತರ ಅಭಿವೃದ್ಧಿಯನ್ನು ಕಾಣಲು ಸಹಕಾರಿಯಾಯಿತು.

ಈ ಸಂಸ್ಥೆಯು ಈಗ ಶ್ರೀ ಧರ್ಮಚಕ್ರ ಟ್ರಸ್ಟ್ ರಿ. ಅಧೀನಕ್ಕೆ ಒಳಪಟ್ಟಿರುತ್ತದೆ. ಪ್ರಕೃತ ಸಂಸ್ಥೆಯಲ್ಲಿ ೧೮೨ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು ಸರಕಾರಿ ಅನುದಾನ ಪಡೆಯುತ್ತಿರುವ ೪ ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸ್ಥೆಯ ಈ ವತಿಯಿಂದ ಇಬ್ಬರು ಗೌರವ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ೧೩ ಜನ ಸದಸ್ಯರಿದ್ದು ಪ್ರಕೃತ ಸತೀಶ್ ಬನಾರಿ ಇವರು ಕಾರ್ಯದರ್ಶಿಯಾಗಿರುತ್ತಾರೆ. ಸಂಸ್ಥೆಯು ಸುಮಾರು ಎರಡು ಎಕರೆ ಸ್ಥಳವನ್ನು ಹೊಂದಿದ್ದು ಆವರಣಗೋಡೆ, ವಿಶಾಲವಾದ ಆಟದ ಮೈದಾನ, ತೆರೆದ ಬಾವಿ, ಮಳೆಕೊಯ್ಲಿನ ವ್ಯವಸ್ಥೆಯನ್ನು ಹೊಂದಿರುತ್ತದೆ. ಸಂಸ್ಥೆಯಲ್ಲಿ ಕಂಪ್ಯೂಟರ್, ಧ್ವನಿವರ್ಧಕ ವ್ಯವಸ್ಥೆಯನ್ನು ಹೊಂದಿರುತ್ತದೆ.

ಸಂಸ್ಥೆಯು ಧರ್ಮಚಕ್ರದ ಅಧೀನಕ್ಕೆ ಒಳಪಟ್ಟ ನಂತರ ಶ್ರೀಭಾರತೀ ಬಾಲ ವಿಕಾಸ ಕೇಂದ್ರ ಮತ್ತು ಶ್ರೀ ಭಾರತಿ ಕಿರಿಯ ಪ್ರಾಥಮಿಕ ಶಾಲೆಯನ್ನು ಊರವರ ಅನುಕೂಲಕ್ಕೋಸ್ಕರ ಪ್ರತ್ಯೇಕವಾಗಿ ೨೦೦೫-೦೬ನೇ ಸಾಲಿನಲ್ಲಿ ಪ್ರಾರಂಭಗೊಂಡಿತು. ಪ್ರಕೃತ ೮೪ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಇದಕ್ಕೋಸ್ಕರ ಪ್ರತ್ಯೇಕ ಸುಸಜ್ಜಿತವಾದ ಕಟ್ಟಡ ಹೊಂದಿರುತ್ತದೆ. ಪ್ರಕೃತ ಮಕ್ಕಳ ಸಂಖ್ಯೆಗನುಗುಣವಾಗಿ ಕಟ್ಟಡ ಕಾಮಗಾರಿ, ಶೌಚಾಲಯ ವ್ಯವಸ್ಥೆ ಅಭಿವೃದ್ಧಿ ಪಡಿಸುತ್ತಾ ಇದೆ.

ಸಂಸ್ಥೆಯು ರಾಷ್ಟ್ರೀಯ ಹಬ್ಬಗಳ ಆಚರಣೆಯೊಂದಿಗೆ ಶಾರದಾ ಪೂಜೆ, ಶುಕ್ರವಾರ ಭಜನೆ ಆಚರಿಸುತ್ತಾ ಇದೆ. ಪಾಠಪ್ರವಚನದೊಂದಿಗೆ ಮಕ್ಕಳ ಅಭಿವೃದ್ಧಿಗೆ ಶಾಸ್ತ್ರೀಯ ಸಂಗೀತ, ಭರತನಾಟ್ಯ ತರಬೇತಿಗಳು, ಗ್ಲಾಸ್ ಪೈಂಟಿಂಗ್, ಕರಕುಶಲವಸ್ತುಗಳ ತಯಾರಿ, ಪಿನೋಯಿಲ್, ಸಾಬೂನು ತಯಾರಿ ತರಬೇತಿಗಳನ್ನು ನೀಡಲಾಗುತ್ತಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಶೈಕ್ಷಣಿಕ ಪ್ರವಾಸ, ವಾರ್ಷಿಕೋತ್ಸವವನ್ನು ಪ್ರತಿವರ್ಷ ಆಚರಿಸುತ್ತಾ ಬಂದಿದೆ. ಸಂಸ್ಥೆಗೆ ಶ್ರೀಗಳು ಎರಡು ಬಾರಿ ಚಿತ್ತೈಸಿ ಕಟ್ಟಡವನ್ನು ಉದ್ಘಾಟನೆಗೊಳಿಸಿ ಮಕ್ಕಳನ್ನು ಆಶೀರ್ವದಿಸಿರುತ್ತಾರೆ. ಶಾಲೆಯ ಕಟ್ಟಡ ಕಾಮಗಾರಿಗಾಗಿ ಸಂಪಾಜೆಯ ಕೀಲಾರು ಗೋಪಾಲಕೃಷ್ಟಯ್ಯ ಪ್ರತಿಷ್ಠಾನದಿಂದ ಒಂದು ಲಕ್ಷ ಹಾಗೂ ಉರುವಾಲು ರಾಜಗೋಪಾಲರಾವ್ ಸ್ಮರಣಾರ್ಥ ಶ್ರೀಮತಿ ಭೂಮಿದೇವಿ ಮತ್ತು ಮಕ್ಕಳಿಂದ ೬೦,೦೦೦/- ದೇಣಿಗೆ ಹಾಗೂ ಬೆಂಗಳೂರಿನ ಉದ್ಯಮಿಗಳಾದ ಕಲ್ಯಾಣಿ ಗ್ರೂಪ್‌ಯಿಂದ ೫೦,೦೦೦/- ಹಾಗೂ ಹತ್ತು ಹಲವು ದಾನಿಗಳಿಂದ ಸಹಕಾರ ಪಡೆದಿರುತ್ತದೆ. ಹೀಗೆ ಉತ್ತಮ ರೀತಿಯಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ

Facebook Comments Box