LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ವಿಶ್ವವ್ಯವಸ್ಥೆಯ ಜೀವಸೂತ್ರವಿದು ವಿಶ್ವನಿಯಾಮಕಪೀಠ..!

Author: ; Published On: ಗುರುವಾರ, ಸೆಪ್ಟೆಂಬರ 2nd, 2010;

Switch to language: ಕನ್ನಡ | English | हिंदी         Shortlink:

‍|| ಹರೇರಾಮ ||‍

ಅದ್ಭುತಾಕಾರದ ಅಗ್ನಿಗೋಳಗಳು..!

ಅನಂತ ಅಂತರಾಳಗಳು..!

ಬೆಳಕ ಬೀರುವ ತಾರೆಗಳು..!

ಬೆಳಕ ಹೀರುವ ಗ್ರಹಗಳು..!

ಒಂದನ್ನೊಂದು ಬಿಡದಂತೆ ಹಿಡಿದಿಡುವ ಆಶ್ಚರ್ಯಕರ ಸೆಳೆತ..!

ಕ್ಷಣಮಾತ್ರವೂ ನಿಲ್ಲದ ಅವಿಶ್ರಾಂತ ಗತಿ..!

ಒಂದರ ಸುತ್ತ ಇನ್ನೊಂದು ಸುತ್ತುವ  ಅನಿರ್ವಚನೀಯ ಪ್ರೀತಿ..!

ಮಾನವ ಮತಿಯ ಸಕಲ ಕಲ್ಪನೆಗಳಿಗೂ ಮೀರಿದ ವಿಸ್ತಾರದ ಅನಂತಕೋಟಿ ಬ್ರಹ್ಮಾಂಡ ಮಂಡಲಗಳ ಮಧ್ಯದಲ್ಲೊಂದು ಪುಟ್ಟ ಭೂಮಂಡಲ..!

ಮೂರ್ತಿ ಕಿರಿದಾದರೂ ಕೀರ್ತಿ ಕಿರಿದಲ್ಲವದರದ್ದು..!

ಬಗೆದು ನೋಡಿದರೆ ಬ್ರಹ್ಮಾಂಡದಲ್ಲೆಲ್ಲ್ಲೂ ಜೀವಗಳ ಸುಳಿವಿಲ್ಲ ..!

ಜೀವಸೆಲೆಯಿರುವುದು ನಮ್ಮ ಹೆಮ್ಮೆಯ ಭೂಮಿಯಲ್ಲಿ ಮಾತ್ರವೇ..!

ಅನಂತ ತೇಜಃಪುಂಜಗಳಿರಬಹುದು ಬ್ರಹ್ಮಾಂಡದಲ್ಲಿ..

ಆದರೆ ಅಸಂಖ್ಯ ಚೇತನಗಳು ಬಗೆಬಗೆಯ ರೂಪದ, ಬಗೆಬಗೆಯ ರೀತಿಯ ಬದುಕು ನಡೆಸುವುದು ಭೂಮಿಯಲ್ಲಿ ಮಾತ್ರ..!

ಆದುದರಿಂದಲೇ ಭೂಮಿಯೆಂದರೆ ಅದು ಬ್ರಹ್ಮಾಂಡದ ಜೀವ…!

ಜೀವಗಳೇನು ! ದೇವರೇ ಮತ್ತೆ ಮತ್ತೆ ಹುಟ್ಟಿ ಬರುವ ಪಾವನ ರಾಷ್ಟ್ರವೊಂದಿದೆ ಭೂಮಂಡಲದಲ್ಲಿ…

ಅದುಭಾರತ

ಭಾರತವೆಂದರೆ ನಾಕಕಿಂತ ಮೇಲು..

ಭಾರತೀಯರೆಂದರೆ ದೇವತೆಗಳಿಗಿಂತಲೂ ಮಿಗಿಲು..

ಗಾಯಂತಿ ದೇವಾಃ ಕಿಲ ಗೀತಕಾನಿ

ಧನ್ಯಾಸ್ತು ತೇ ಭಾರತಭೂಮಿಭಾಗೇ|

ಸ್ವರ್ಗಾಪವರ್ಗಾಸ್ಪದಮಾರ್ಗಭೂತೇ

ಭವಂತಿ ಭೂಯಃ ಪುರುಷಾಃ ಸುರತ್ವಾತ್||

ವಿಷ್ಣುಪುರಾಣ

ಸ್ವರ್ಗದಲ್ಲಿ ಮುಕ್ತಿಗೆಡೆಯಿಲ್ಲ..

ಆದುದರಿಂದಲೇ ದೇವತೆಗಳು ತಮ್ಮ ದೇವತ್ವವನ್ನೂ, ಸ್ವರ್ಗವಾಸವನ್ನೂ ತೊರೆದು ಮಾನವರಾಗಿ ಹುಟ್ಟಿ ಬರಬಯಸುವ ಮೋಕ್ಷಭೂಮಿಯಿದು..!

ಭಾರತವೆಂದರೆ ಮಾನವತೆಯಲ್ಲಿ ಹುಟ್ಟಿ, ದಾನವತೆಯನ್ನು ಮೆಟ್ಟಿ, ಮಾಧವತೆಯನ್ನುಮುಟ್ಟುವ ಮಹಾಸಾಧಕರ ತವರೂರು..

ದೇವದೂತರು ಹುಟ್ಟಿಬರುವ ದೇಶಗಳು ಹಲವಿವೆ..

ಆದರೆ, ಸ್ವಯಂ ದೇವರೇ ಭುವಿಯಲ್ಲಿ ವಾಸಿಸುವ ತನ್ನ ಮಕ್ಕಳನ್ನು ನೋಡಲು ಅಗಾಗ ಮೈವೆತ್ತು ಬರುವ ನಾಡೆಂದರೆ ಭಾರತವೊಂದೇ..!

ಭಾರತವೆಂದರೆ ದೇವರ ಒಡಲು…!

ಭಾರತವೆಂದರೆ ದೇವರ ಮಡಿಲು..!

ಭಾರತವೆಂದರೆ ದೇವರ ತಾಯಿ..!!

ಭೂಮಿಯೆಂಬ ಮನೆಯಲ್ಲಿ ಭಾರತವೆಂದರೆ ದೇವರಕೋಣೆ..!

ಮೂರು ಮಹಾಸಮುದ್ರಗಳು…

ಏಳು ಕುಲಪರ್ವತಗಳು…

ನೂರಾರು ಮಹಾನದಿಗಳು…

ಸಾವಿರಾರು ಭಾಷೆಗಳು…

ಅಗಣಿತ ಪಂಥಗಳು – ಜೀವನ ವಿಧಾನಗಳು..

ಬಗೆಬಗೆಯ ಮಾನವ ಪ್ರಭೇದಗಳು…

ತನ್ನ ತಾಯ್ನಾಡಿಗೆ ದೇವರು ಏನನ್ನು ತಾನೆ ಕೊಡಲಿಲ್ಲ..!?

ಈ ನೆಲಕ್ಕೆ ನೀಡಿದ ತೆರನಾದ ಬಗೆಬಗೆಯ ಸಂಪತ್ತುಗಳನ್ನು ಬೇರಾವ ರಾಷ್ಟ್ರಕ್ಕೆ ತಾನೇ ಈಶ್ವರನಿತ್ತಿದ್ದಾನೆ…?

ಸುಂದರ ಶರೀರಕ್ಕೊಂದು ತುಂಬಿದ ಹೃದಯ ಬೇಡವೇ..?

ವಿಶ್ವದಲ್ಲಿಯೇ ಸರ್ವೋಪರಿಯೆನಿಸಿದ ಭಾರತದ ಹೃದಯಸ್ಥಾನದಲ್ಲಿದ್ದ ನಾಡು…

ಅದುವೇ ಕೋಸಲ…!

ಕೋಸಲವೆಂದರೆ…

ಜ್ಞಾನದ ಬೆಳಕಿನಿಂದ ಬೆಳಗುವ ಆತ್ಮಜ್ಞಾನಿಗಳ ಜ್ಞಾನರಾಜ್ಯವದು..

ಎಲ್ಲರ ಮೊಗದಲ್ಲಿ ನಗು ಮಿನುಗುವ  ಆನಂದರಾಜ್ಯವದು..

ಯಾರಿಗೂ ಯಾವಾಗಲೂ ಯಾರಿಂದಲೂ ಭಯವಿಲ್ಲದಅಭಯರಾಜ್ಯವದು..

ಧುಮ್ಮಿಕ್ಕುವ ಝರಿಗಳ, ಹರಿಯುವ ಹೊಳೆಗಳ, ಚಿಮ್ಮುವ ಚಿಲುಮೆಗಳ, ಸ್ತಿಮಿತಗಾಂಭೀರ್ಯದ ಸರೋವರಗಳ ಕಣ್ತಣಿಸುವ ಅಮೃತರಾಜ್ಯವದು..

ದೇವರ ಸೃಷ್ಟಿಯ ವನಗಳು, ಮಾನವ ಸೃಷ್ಟಿಯ ಉದ್ಯಾನಗಳಿಂದ ವಿಭೂಷಿತವಾದ ಹಸಿರುರಾಜ್ಯವದು..

ಪ್ರಕೃತಿಯ ಹಸಿರುಂಡು ಮಮತೆಯ ಹಾಲುಣಿಸುವ ಹಸುಗಳ ಹುಂಭಾರವವು ಹೆಜ್ಜೆ ಹೆಜ್ಜೆಗೆ ಕೇಳಿಬರುವ ವಾತ್ಸಲ್ಯ‘ರಾಜ್ಯವದು..

ಎಲ್ಲೆಂದರಲ್ಲಿ ಮಂತ್ರಗಳು ಮೊಳಗುವ ವೇದರಾಜ್ಯವದು…

ಎಲ್ಲೆಂದರಲ್ಲಿ ದರ್ಶನವೀಯುವ ದೇವವೃಕ್ಷಗಳ, ದೇವಸ್ಥಾನಗಳ ದೇವರಾಜ್ಯವದು…

ಉಸಿರು ಉಸಿರಿನಲ್ಲಿ ಹೋಮಧೂಮದ ಸುಗಂಧವು ಪಸರಿಸುವ ಯಜ್ಞರಾಜ್ಯವದು..

ಧನಲಕ್ಷ್ಮಿಯು ಕೋಶದಲ್ಲಿಯೂ, ಧಾನ್ಯಲಕ್ಷ್ಮಿಯು ಕಣಜದಲ್ಲಿಯೂ ತುಂಬಿತುಳುಕುವ ಸಮೃದ್ಧಿರಾಜ್ಯವದು..

ತುಂಬಿದ ಸಂಪತ್ತು ನಿಂತ ನೀರಾಗದೆ  ದೀನರೆಡೆಗೆ ಧಾರಾಳವಾಗಿ ಹರಿಯುವ ದಾನರಾಜ್ಯವದು..

ತುಷ್ಟ ಮನಸ್ಸು, ಪುಷ್ಟ ಶರೀರಗಳಿಂದ ಕೂಡಿದ ಪ್ರಜೆಗಳ ತೃಪ್ತಿರಾಜ್ಯವದು..

ವೇದಘೋಷ, ದೇವಪೂಜೆ, ದಾನ, ಯಜ್ಞ, ತಪಸ್ಸುಗಳ ಮೂಲಕವಾಗಿ ಅಲ್ಲಿ ದಿವ್ಯತೆಯು ಪ್ರಕಟಗೊಳ್ಳುತ್ತಿದ್ದರೆ…

ಬಯಲು-ಬೆಟ್ಟಗಳಲ್ಲಿ, ನದೀ-ಸರೋವರಗಳಲ್ಲಿ, ಕಾನನೋದ್ಯಾನಗಳಲ್ಲಿ ಪ್ರಕೃತಿಯ ರಮ್ಯತೆಯು ಹೊರಸೂಸುತ್ತಿತ್ತು..

ಅರಿವು ಆನಂದಗಳ ರೂಪದಲ್ಲಿ ಸ್ವಯಂ ನಾರಾಯಣನೇ ಅಲ್ಲಿ ನೆಲೆಸಿದ್ದರೆ..

ಧನಧಾನ್ಯ ಸಮೃದ್ಧಿಯ ರೂಪದಲ್ಲಿ ಸಾಕ್ಷಾತ್ ಲಕ್ಷ್ಮೀದೇವಿಯೇ ನೆಲೆಸಿದ್ದಳಲ್ಲಿ..!

ಆ ಕೋಸಲದಲ್ಲಿ..

ಸಚೇತನರಲ್ಲಿ ಸತತವಾಗಿ ಪ್ರವಹಿಸುವ ಚೈತನ್ಯವಾಹಿನಿಯಂತೆ..

ನಾಡಿನ ಸಮೃದ್ಧಿಗೆ ಪ್ರಥಮ ಕಾರಣವಾಗಿ, ಪ್ರವಹಿಸುತ್ತಿದ್ದಳು ಸರಯೂ..

ಸೃಷ್ಟಿಕರ್ತನ ಮಾನಸವು ಕರಗಿದಾಗ..

ಅದು ಕೈಲಾಸದ ಪರಿಸರದಲ್ಲಿ ಮಾನಸ ಸರೋವರವಾಗಿ ರೂಪುಗೊಂಡಾಗ..

ಅಲ್ಲಿಂದ ಹರಿದವಳವಳು..!

ಬ್ರಹ್ಮಮಾನಸಸರದಿಂದ ಹೊರಹೊಮ್ಮಿದ್ದರಿಂದಲೇ ‘ಸರಯೂ’ ಆಕೆ..

ಅನಂತ ಅಮೃತಬಿಂದುಗಳನ್ನೊಳಗೊಂಡು ಹರಿಯುವ ಆ ನದಿಯ ಪುಣ್ಯತೀರದಲ್ಲಿ

ಅಸಂಖ್ಯ ಅಮೃತಜೀವಿಗಳಿಗೆ ಆಶ್ರಯವಿತ್ತ ಪುರಾತನ ನಗರಿಯೊಂದು ನೆಲೆ ನಿಂತಿದ್ದಿತು..

ಅದುವೇ ಮಾನವ ಕುಲದ ಮೂಲಪುರುಷನಾದ ಮನು ಮಹಾರಾಜನು ನಿರ್ಮಿಸಿದ ಮೋಕ್ಷನಗರಿ ಅಯೋಧ್ಯೆ..!

ಸೃಷ್ಟಿಯ ಮೂಲಪುರುಷನ ಮನಸ್ಸು ನೀರಾಗಿ ಹರಿದ ನದಿಯ ತಟದಲ್ಲಿ…

ಮಾನವಕೋಟಿಯ ಮೂಲಪುರುಷನು ನಿರ್ಮಿಸಿದ ಆ ಮಹಾನಗರಿಯಲ್ಲಿ..

ಮಾನವತೆಯ ಮರ್ಯಾದೆಗಳನ್ನು ಮನುಕುಲಕ್ಕೆ ತೋರಿದ,

ಸೃಷ್ಟಿಯ ಸಂಕಟಕ್ಕೆ ಮಿಡಿಯುವ ಹೃದಯದ ಮಹಾಪುರುಷರು ಆವಿರ್ಭವಿಸಿದರೆ ಅದು ಸಹಜವಲ್ಲವೇ..?

ಶುಭಶಿರದಲ್ಲಿ ಶೋಭಿಸುವ ಮಣಿಮುಕುಟದಂತೆ..

ಮಣಿಮಾಲೆಯ ಮಧ್ಯೆ ಮೆರೆಯುವ ನಾಯಕಮಣಿಯಂತೆ..

ಸಮೃದ್ಧಕೋಸಲದ ಸುಭದ್ರರಾಜಧಾನಿಯಾಗಿ ರಾರಾಜಿಸುತ್ತಿದ್ದಿತು ಅಯೋಧ್ಯೆ..!

ಅಯೋಧ್ಯೆಯೆಂಬ ಸುಮಂಗಲಿಗೆ ತಿಲಕವಾಗಿ ಒಪ್ಪಿತ್ತು ರಾಜರಾಜರು ವಿರಾಜಿಸುವ ರಮಣೀಯವಾದ ಅರಮನೆ ..

ಅಲ್ಲೊಂದು ರತ್ನ ಸಿಂಹಾಸನ..

ಉತ್ತಮಾಂಗವೆನಿಸಿದ ಶಿರಸ್ಸಿನೊಳಗೆ  ಮಂಡಿಸಿ ಸಮಸ್ತ ಶರೀರದ ಆಗುಹೋಗುಗಳನ್ನು ನಿಯಂತ್ರಿಸುವ ಮಹಾಮಸ್ತಿಷ್ಕದಂತೆ..

ಅಯೋಧ್ಯೆಯ ಅರಮನೆಯಲ್ಲಿ ಮಂಡಿಸಿ, ಕೋಸಲವೇನು, ಸಮಸ್ತ ಭೂಮಂಡಲದ ಆಗು-ಹೋಗುಗಳನ್ನೇ ನಿಯಂತ್ರಿಸುವ ವಿಶ್ವನಿಯಾಮಕಪೀಠವದು..!

ಭೂಮಂಡಲದ ನಾಯಕರು ಮಂಡಿಸುವ ಮಹಾಸಿಂಹಾಸನವದು..!

ಬ್ರಹ್ಮಾಂಡನಾಯಕನೂ  ಮಂಡಿಸಲು ಯೋಗ್ಯವಾದ ಧರ್ಮಸಿಂಹಾಸನವದು..!

ಭೂಲೋಕದ ಸಕಲಜೀವಗಳ ಯೋಗಕ್ಷೇಮದ ಹೊಣೆ ಹೊತ್ತ ಅಖಂಡ ಭೂಮಂಡಲದ ಏಕೈಕ ಸಿಂಹಾಸನವದು..!

ಧರಣಿಯ ರಾಜರೆಲ್ಲರೂ ವಿನಯದಿಂದ ಬಾಗುವ, ಕೋಸಲದ ಪ್ರಜೆಗಳೆಲ್ಲರೂ ಹೆಮ್ಮೆಯಿಂದ ಬೀಗುವ ಮಹೋನ್ನತ ಸಿಂಹಾಸನವದು..

ದುಷ್ಟರನ್ನು ಶಿಕ್ಷೆಯಿತ್ತು ತಿದ್ದುವ, ಶಿಷ್ಟರನ್ನು ರಕ್ಷೆಯಿತ್ತು ಸಲಹುವ ನಿಗ್ರಹಾನುಗ್ರಹ ಸಾಮರ್ಥ್ಯ ಸಂಪನ್ನವಾದ ಪರಮಾಸನವದು..

ಮಾನವತೆಯ ಉಗಮವಾಗುವಾಗಲೇ ಉದಯಿಸಿ ಬಂದ ಆದಿ ಸಿಂಹಾಸನವದು..

ಅನಂತ ಕಾಲಪ್ರವಾಹದ ನಡುವೆಯೂ ತನ್ನ ಸತ್ತ್ವ- ಅಸ್ತಿತ್ವವನ್ನು ಕಳೆದುಕೊಳ್ಳದ ಅಮರ ಸಿಂಹಾಸನವದು..

ರಾಮಾಯಣವು ನಡೆದಿದ್ದು ಆ ಸಿಂಹಾಸನವನ್ನಲಂಕರಿಸಿದ್ದ ಮಹೋನ್ನತವಾದ ರಾಜವಂಶದಲ್ಲಿ..

ಆದಿರಾಜನು ಕಟ್ಟಿದ ಆದಿನಗರಿಯ ಆದಿಸಿಂಹಾಸನದಲ್ಲಿ ಕುಳಿತು ಲೋಕವನ್ನಾಳಿದ ಅನಂತ ಸಾಮರ್ಥ್ಯ -ಸುಗುಣಸಂಪನ್ನರಾದ ಸಮ್ರಾಟರ ವಂಶದಲ್ಲಿ ನಡೆದೊಂದು ಮಹತ್ತರ ಘಟನೆಯೇ ಆದಿಕಾವ್ಯದ ವಸ್ತುವಾಯಿತೆಂಬುದು ಉಚಿತವೇ ಅಲ್ಲವೇ..?

‍|| ಹರೇರಾಮ ||

ಟಿಪ್ಪಣಿ:

ಅನಿರ್ವಚನೀಯ – ಹೀಗೆಂದು ವಿವರಿಸಲಾಗದ..

ಸರ್ವೋಪರಿಯೆನಿಸಿದ – ಎಲ್ಲದಕ್ಕಿಂತಲೂ ಮೇಲೆನಿಸಿದ..

ಸ್ತಿಮಿತ – ನಿಶ್ಚಲ..

ನಾಯಕಮಣಿ – ಮಣಿಹಾರದ ಮಧ್ಯದಲ್ಲಿ ಬೇರೆಲ್ಲ ಮಣಿಗಳಿಗಿಂತ ದೊಡ್ಡದಾಗಿ ಎದ್ದುತೋರುವ ಮಣಿ..ಶಿಖಾಮಣಿ
ನಿಗ್ರಹಾನುಗ್ರಹಸಾಮಥ್ಯ೯ಸಂಪನ್ನ – ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಬೇಕಾದ ಶಕ್ತಿಸಾಮಥ್ಯ೯ಗಳನ್ನು ಹೊಂದಿದವರು…

ಆವಿರ್ಭವಿಸಿದರೆ – ಹುಟ್ಟಿದರೆ..

27 Responses to ವಿಶ್ವವ್ಯವಸ್ಥೆಯ ಜೀವಸೂತ್ರವಿದು ವಿಶ್ವನಿಯಾಮಕಪೀಠ..!

 1. Shaman Hegde

  ಹರೇರಾಮ… ಭಾರತವೆಂದರೆ …..!!!!!.ಕೋಸಲವೆಂದರೆ……!!!!ಮಹಾಸಿಂಹಾಸನದ ಬಗೆಗಿನ ವರ್ಣನೆ , ಎಲ್ಲವೂ ಅತ್ಯಾದ್ಭುತ!!!

  [Reply]

 2. dattu

  मॅरा भारत महान।

  [Reply]

 3. Raghavendra Narayana

  ಬಹಳ ವರ್ಷಗಳಾದ೦ತೆ ಅನ್ನಿಸುತ್ತಿದೆ.
  ಗುರುಗಳೇ, ಆಗಾಗ ಕಾಮೆ೦ಟ ಮೂಲಕ ದರ್ಶನ ನೀಡುತ್ತಿದ್ದರೆ ನಾವೂ ಉಸಿರಾಡಬಹುದು.

  [Reply]

 4. Raghavendra Narayana

  ಶ್ರೀ ಗುರುಭ್ಯೋ ನಮಃ
  .
  ಬ್ರಹ್ಮಾ೦ಡದ ವರ್ಣನೆ ಭಾರತದ ವರ್ಣನೆಯ ಮು೦ದೆ ಸಪ್ಪೆ.
  ಮೋಕ್ಷವೆ೦ಬ ಒ೦ದು ಭಾವದ ಮು೦ದೆ ಪರಮಾತ್ಮ ಸೃಷ್ಟಿಸಿದ ಬ್ರಹ್ಮಾ೦ಡ ಹುಲ್ಲುಕಡ್ಡಿಗೆ ಸಮ.
  ಮೋಕ್ಷಭೂಮಿ ಭಾರತ ಪರಮಾತ್ಮನ ಅಯೋಧ್ಯೆ.
  ಪರಮಾತ್ಮ ಇಲ್ಲಿ ಕೋಟಿ-ಕೋಟಿಯಾಗಿ ಜನಿಸುವನು ತಣಿಯುವನು.
  ಈ ಭೂಮಿಯ ಒ೦ದೊ೦ದು ಕಣವೂ ಪರಮಾತ್ಮನ ಕುರುಹು.
  ವಸು೦ಧರೆ ಹಸು ನೀನು, ತಾಯಿ ನೀನು, ನಿನ್ನ ಗರ್ಭದಿ೦ದಲೆ ಉದಯಿಸಬೇಕು ಪರಮಾತ್ಮ, ನಿನ್ನ ಮಡಿಲಲ್ಲಿಯೆ ಅರಿಯಬೇಕು ತಾ ಪರಮಾತ್ಮನೆ೦ದು, ನಿನ್ನೊಡಲ ಸೇರಬೇಕು ಪರಮಾತ್ಮನಾಗಲು.
  .
  ಹರೇ ರಾಮ, ಭರತ ರಾಮ, ರಾಮ-ಭರತರಿ೦ದ ಭಾರತ ಆನ೦ದ-ಭಾರತ.. ಆನ೦ದ ಭವ..
  ಭವ್ಯ ದಿವ್ಯ ಸ೦ಗಮ ಭಾರತ – ಇದುವೇ ಸಾಕಾರ ಪರಮಾತ್ಮನ ಸಿ೦ಹಾಸನ + ಹುಲಿ ಚರ್ಮದ ಧ್ಯಾನಾಸನ.

  [Reply]

 5. sriharsha.jois

  ಭೂಮಿ ಇಡೀ ಬ್ರಹ್ಮಾಂಡದ ಒಂದು ಪುಟ್ಟ ಭಾಗ ಅಷ್ಟೆ..!
  ಆದರೆ, ಪ್ರಭು ಯಾಕೆ ಎಲ್ಲವನ್ನೂ ಇಲ್ಲೇ ಹುದುಗಿಸಿದ..?
  ಯಾಕೆ ತನ್ನ ಆಡುಂಬೊಲವನ್ನಾಗಿಸಿಕೊಂಡ…?
  ಜೀವನದ ಕಷ್ಟ-ಸುಖಗಳನ್ನು ತಿಳಿಯಲು ಯಾಕೆ ಪದೇಪದೇ ಆವಿರ್ಭವಿಸಿದ..?
  ಈ ಭೂಮಿಯ ಮೇಲಿನ ತನ್ನ ಲೀಲಾನಾಟಕದಲ್ಲಿ ಸಕಲರನ್ನೂ ಯಾಕೆ ಒಳಗೂಡಿಸಿಕೊಂಡ..?
  ತಾನು ಜಗದ್ರಕ್ಷಕ ಎಂಬುದನ್ನೂ ಒತ್ತಟ್ಟಿಗಿಟ್ಟು ಯಾಕೆ ಸಾಧಾರಣ ಬದುಕನ್ನು ಬದುಕಿದ..?

  ಗುರುದೇವಾ, ಪ್ರಶ್ನೆಗಳು ನೂರಾರು…
  ಕೇಳಲರಿಯೆ ನಾನು..
  ಮನದೊಳಗಿನ ?? ಗಳ ಕಂತೆ..
  ಹೊರಬರುವ ಪರಿಯೆಂತೋ ಅರಿಯದಲೆ ನಿಂತೆ…

  ಹಾಗೆ ನೋಡಿದರೆ…..

  [Reply]

 6. Vishwa M S Maruthipura

  ಭಾರತವೆಂದರೆ ಮಾನವತೆಯಲ್ಲಿ ಹುಟ್ಟಿ, ದಾನವತೆಯನ್ನು ಮೆಟ್ಟಿ, ಮಾಧವತೆಯನ್ನುಮುಟ್ಟುವ ಮಹಾಸಾಧಕರ ತವರೂರು ಮಾನವರಾಗಿ ಹುಟ್ಟಿದ್ದೇವೆ …ಮೈ ಮನದೊಳಗಿನ ದಾನವತೆಯನ್ನ ಮೆಟ್ಟಿನಿಲ್ಲುವ ಪ್ರಯತ್ನ ಸಾಗಿದೆ …..!ಕೆಲವೊಮ್ಮೆ ಬಯಕೆಗಳ ಹಂದರ ಮೈ ಮನಸನ್ನ ಆವರಿಸಿ ಮೋಹ ಪಾಶ ಗಳಿಂದ ಬಂದಿಸಿದಂತೆ ಭಾಸವಾಗುತ್ತದೆ ಆದರೂ ….ಅದೆಲ್ಲವನ್ನು ಮೆಟ್ಟಿ ನಿಂತು… ಗುರುವೆನ್ನುವ ಸತ್ವಗುಣದ ಮೂಲಕ ಬದುಕಿನ ನಿಜವಾದ ಗುರಿ..”ಮಾಧವತೆ”ಯನ್ನ ಮುಟ್ಟುವ ಆಶಯದಲ್ಲಿದ್ದೇವೆ …ಹರೇರಾಮ

  [Reply]

 7. ಜಗದೀಶ್ ಬಿ. ಆರ್.

  ಅವರ್ಣನೀಯ ವರ್ಣನೆ!

  [Reply]

 8. nandaja haregoppa

  ಹರೇ ರಾಮ

  ಹಸಿರು ರಾಜ್ಯದ { ಭಾರತದ }
  ಜ್ಞಾನ ತುಂಬಿದ ಜನರು
  ಆನಂದದಿಂದ
  ಯಜ್ಞ ದೇಗುಲದಲ್ಲಿ
  ವೇದ ಮಂತ್ರಗಳಿಂದ
  ಅಮೃತ ಕಲಶದಲ್ಲಿ
  ಸಮ್ರುದ್ದಿಯನ್ನು ಮೊಗೆಮೊಗೆದು
  ದಾನ ಮಾಡಿದಾಗ
  ತೃಪ್ತಿಯಿಂದ
  ವಾತ್ಸಲ್ಯಮೂರುತಿ
  ದೇವರ ದೇವ
  ಅಭಯ ನೀಡದಿಹನೆ ?
  ಕಣ್ಣ ಮುಂದೆ ಬಾರನೇ ?

  [Reply]

 9. Raghavendra Narayana

  Never read this kind of topic..
  If read, never this kind of presentation..
  If this kind of presentation, never got this kind of understanding..
  Great thing is, these readings are creating positive vibrations internally, good things are bound to happen in external world too..
  .
  The kindness of Lord Raama is flowing to us through Shri Samsthana
  .
  After the “Layaa” of world, just before Shiva goes back to “Dhyana” state – there would be Mouna+Ananda for few seconds before cut-off the external world connectivity, I think such state we can experience when we are reading this article.
  .
  Shri Gurubhyo Namaha

  [Reply]

 10. Anuradha Parvathi

  ಅದ್ಭುತ. ಭಾರತದ ಬಗ್ಗೆ ಇಂಥಾ ವಿವರಣೆ ಎಲ್ಲೂ ಓದಿಲ್ಲ, ಕೇಳಿಲ್ಲ. ಭಾರತೀಯಳಾಗಿದ್ದಕ್ಕೆ ಅದರಲ್ಲೂ ಇಂಥಾ ಗುರುಗಳ ಶಿಷ್ಯೆ ಆಗಿದಕ್ಕೆ ಹೆಮ್ಮೆ ಆಗುತ್ತಿದೆ. ಯಾವುದೊ ಜನ್ಮದ ಪುಣ್ಯ ಇದು.
  ಇಂಥಾ ಭಾರತವನ್ನು ಬಿಟ್ಟು ಹೊರ ದೇಶಕ್ಕೆ ಹೋಗಲು ಜನ ಹಾತೊರೆಯುತ್ತಿರುವುದು ದುರಂತ.

  [Reply]

 11. Anuradha Parvathi

  ಚಾತುರ್ಮಾಸ್ಯದ ಸಂದೇಶ- ಮೂಲದ ಸ್ಮರಣೆಯಲ್ಲಿ ತುಂಬಾ ಚೆನ್ನಾಗಿ, ಮನಸ್ಸಿಗೆ ನಾಟುವ ಹಾಗೆ ಇದೆ, ಪರದೇಶಕ್ಕೆ ಹೋಗುವ, ಹೋದವರ ಬಗ್ಗೆ.

  [Reply]

 12. Jayashree Neeramoole

  ಮಾತೃಸ್ವರೂಪಿ ಗುರುಗಳ ಚರಣಗಳಿಗೆ ಅನಂತ ಪ್ರಣಾಮಗಳು. ಮಾತೆಯ ಮಡಿಲಲ್ಲಿ, ಮಾತೆಯ ಮೂಲಕವಾಗಿಯೇ , ಮಾತೆಯ ವರ್ಣನೆಯನ್ನು,ಮಮತೆಯನ್ನು,… ಅನುಭವಿಸುವ ಸುಯೋಗವನ್ನೊದಗಿಸಿದ ಮಾತೆಗೆ ಅನಂತಾನಂತ ಪ್ರಣಾಮಗಳು.

  [Reply]

 13. Ashwini

  ಭಾರತವೆಂದರೆ….
  ವಿಶ್ವಾತ್ಮನ ಪರಮ ಸೃಷ್ಟಿ ‘ ವಿಶ್ವ ‘ ದ ‘ ಆತ್ಮ ‘ಭೂಮಿ
  ‘ಬದ್ದಾತ್ಮ’ ಗಳ ‘ಕರ್ಮ’ ಭೂಮಿ
  ‘ಮುಮುಕ್ಷು’ಗಳ ‘ಮೋಕ್ಷ ‘ ಭೂಮಿ
  ‘ಮುಕ್ತಾತ್ಮ’ ಗಳ ‘ಜೀವಕಾರುಣ್ಯ’ ಕ್ಕೆ ‘ಸಾಕ್ಷಿ’ಯಾದ ಭೂಮಿ
  ‘ಬದ್ದತ್ವ’ ದಿಂದ ’ಮುಕ್ತತ್ವ’ ದೆಡೆಗಿನ ‘ಆತ್ಮ’ ನೆಡೆಯ ‘ಗಮ್ಯ’ ಭೂಮಿ

  ಪರಮಸಿಂಧುವು ತನ್ನೊಳಗಿನ ,ತನ್ನೊಲವಿನ ಸೃಷ್ಟಿಯ ‘ಬಿಂದು’ ಗಳೆಡೆಗೆ ಬರಲು ಆರಿಸಿಕೊಂಡ ಭೂಮಿಯ ವರ್ಣನೆ ಅವರ್ಣನೀಯ.

  ಅನಂತ ಪ್ರಣಾಮಗಳು ಗುರುದೇವ.

  [Reply]

 14. madhyastharv

  ಹರೇ ರಾಮ ಕನ್ನಡ ಶಬ್ದ ಭಂಡಾರಕ್ಕೆ ಅನೇಕ ಹೊಸ ಹೊಸ ಶಬ್ದಗಳು………
  ಅನಂತ ಪ್ರಣಾಮಗಳು ಗುರುದೇವಾ……….

  [Reply]

 15. jagadisha sharma

  ಮತ್ತೊಮ್ಮೆ ಅನಾವರಣಗೊಂಡ ಗಂಭೀರಶೈಲಿಯ ಪ್ರಸನ್ನತೆ!

  [Reply]

 16. seetharama bhat

  Hareraama,

  Adi kavyada udaya
  Adi Devana Avathara
  Aada bhumiye Danya
  Adarinda Navu danyaragona

  hareram

  [Reply]

 17. Kakunje Keshava Bhatta

  “Sri Gurubhyo Namaha”

  Superexcellent narration!

  Hare Rama!

  [Reply]

 18. Raghavendra Narayana

  ಗುರುಗಳ ಆಶೀರ್ವಚನ / ಸ೦ದೇಶ ಕೇಳಬಹುದು.. ಕೇಳಲೇಬೇಕು.
  http://hareraama.in/category/av/audio/page/3/

  [Reply]

 19. sreenivasa murthy

  ಹರೇ ರಾಮ
  ಬಹಳ ಸೊಗಸಾದ ಬರಹ…”ಸುಂದರ ಶರೀರಕ್ಕೊಂದು ತುಂಬಿದ ಹೃದಯ ಬೇಡವೇ..?” ಅದ್ಭುತವಾದ ಮಾತು!
  ಆದರೆ ಅಯೋಧ್ಯೆಯ ವರ್ಣನೆ ಸೊಗಸಾಗಿದ್ದರು ಓದಿದ ಮೇಲೆ ಮನಸ್ಸಿಗೆನೊ ಕಸಿವಿಸಿ..
  ಇಂದು ರಾಮಜನ್ಮಭೂಮಿ ಅಯೋಧ್ಯೆಗೆ ಹೊದರೆ ರಾಮಾಯಣದ ನೆನಪೆ ಬಾರದ ಪರಿಸ್ಥಿತಿ..
  ಮಾನವ ಕುಲದ ಮೂಲಪುರುಷನಾದ ಮನು ಮಹಾರಾಜನು ನಿರ್ಮಿಸಿದ ಮೋಕ್ಷನಗರಿ ಅಯೋಧ್ಯೆ..!
  ಎಂದು ಗುರುದೇವ ವರ್ಣಿಸಿದ ಅಯೋಧ್ಯೆ ,ಸೃಷ್ಟಿಯ ಸಂಕಟಕ್ಕೆ ಮಿಡಿಯುವ ಹೃದಯದ ಮಹಾಪುರುಷರು ಆವಿರ್ಭವಿಸಿದ ನಾಡು…ಮಹಾಪುರುಷ ಮಹಾಮಹಿಮನ ಜನ್ಮಭೂಮಿ ನಮ್ಮದು ಎಂದು ಹೇಳುವ ಹಕ್ಕು ನಮಗಿಲ್ಲವೇ? ರಾಮಜನ್ಮಭೂಮಿಗೆ ಇತಿಹಾಸಕ್ಕೋಂದು ಕುರುಹಾಗಿ..ಮುಂದಿನ ಪಿಳಿಗೆಗೆ ರಾಮನ ಆದರ್ಶಗಳನ್ನು ಸಾರುವುದಕ್ಕಾಗಿ ಒಂದು ದೇವಾಲಯವನ್ನು ಹಿಂದೂಸ್ಥಾನದಲ್ಲಿ ನಿರ್ಮಿಸುವುದು ಯಾಕಾಗಿ ಸಾದ್ಯವಾಗುತ್ತಿಲ್ಲ…….? ಅದಕ್ಕಾಗಿಯೇ ಹೆಳಿದ್ದಿರಬೇಕು………
  ನೂರು ಸಾಗರ, ದೈವ ಸಾಸಿರವಿದ್ದರೇ…
  ಗಂಗೆಯಿದ್ದರೇ, ತುಂಗೆಯಿದ್ದರೇ, ಗಿರಿ ಹಿಮಾಲಯ ಶಿಕರವಿದ್ದರೇ…..
  ಏನು ಪ್ರಯೋಜನ ಮನೆಯ ಮಕ್ಕಳು ಮಲಗಿ ನಿದ್ರಿಸುತಿದ್ದರೆ……………………

  [Reply]

  Raghavendra Narayana Reply:

  ಖ೦ಡಿತ ನೋವಿನ ಸ೦ಗತಿ.
  ನಮ್ಮ ಜಡತ್ವದ ಗಿರಿ ಹಿಮಾಲಯಕ್ಕಿ೦ತ ಎತ್ತರ.
  ಮೊದಲು ರಾಮನನ್ನು ನಮ್ಮ ಹೃದಯದಲ್ಲಿ ನೆಲೆಸಿಕೊಳ್ಳಬೇಕು, ನ೦ತರ ಎಲ್ಲೆಲ್ಲೂ ಸ್ಥಾಪಿಸಬಹುದು ??

  [Reply]

 20. Aravinda

  ಅದ್ಭುತ ಭಾ..ರತ…..!!!!
  ಅದ್ಭುತ ರಾಘವ….!!!!

  [Reply]

 21. shobha lakshmi

  (…………………………………………………

  ಮೂಕಳಾದೆ, ಹರೇರಾಮ,,

  ಬ್ರಹ್ಮಾ೦ಡದಲ್ಲೊ೦ದು ಪುಟ್ಟ ಭೂಮಿ,,ಅದರ ಹ್ರುದಯ ಭಾರತ,,ಭಾರತದಲ್ಲಿ ನೆಲೆಸಿರುವ ಆತ್ಮ ನಮ್ಮ ಗುರುಪೀಠ ,,ಆತ್ಮದೊಳಗೊ೦ದು ಪರಮಾತ್ಮ,,,ಗುರು ರಾಘವೇಶ್ವರ,,ಹರೇರಾಮ

  [Reply]

 22. Raghavendra Narayana

  ಶ್ರೀ ಗುರುಭ್ಯೋ ನಮಃ
  .
  ಗುರುಗಳೇ, ರಾಮಾಯಣದ ಲೇಖನಕ್ಕಾಗಿ ಕಾಯುತ್ತಿದ್ದೇವೆ.
  .
  ವಿನ೦ತಿ: ಗುರುಗಳ ಪ್ರವಚನಗಳನ್ನು ಲೇಖನವಾಗಿಸಿ ರಾಜ್ಯ ಬ್ಲಾಗಲ್ಲಿ ಉಪಯೋಗಿಸಿಕೊಳ್ಳಬಹುದುದೇನೊ?? ಗ್ರೂಪ್ ಸ್ಟಡಿ ಮಾಡಬಹುದು.
  .
  ಗುರುಗಳು ಕಾಣ
  ಶಿಶ್ಯರು ಕ್ಷೀಣ
  .
  ಅಖ೦ಡ ಭರತ ಭೂಮಿಯೆ ಗುರುಶಿಷ್ಯರಿಗಾಗಿ ಪರಮಾತ್ಮ ನಿರ್ಮಿಸಿದ ಸು೦ದರ ಪಾಠಶಾಲೆ, ಜ್ಞಾನ ನದಿಯ ತಟದಲ್ಲಿ ಜೀವಿಸುವುದರಿ೦ದ ನೆನೆಯುವದರಿ೦ದ ಒಣಗುವುದರಿ೦ದ ಆಗುವ ಲಾಭವೇನು? ಗ೦ಗಾ ನದಿಯಲ್ಲಿ ಸ್ನಾನ ಮಾಡಿದ ಅನುಭವವಿರುವವರಾರ್?

  [Reply]

 23. gopalakrishna pakalakunja

  “……ಶುಭಶಿರದಲ್ಲಿ ಶೋಭಿಸುವ ಮಣಿಮುಕುಟದಂತೆ..

  ಮಣಿಮಾಲೆಯ ಮಧ್ಯೆ ಮೆರೆಯುವ ನಾಯಕಮಣಿಯಂತೆ..

  ಸಮೃದ್ಧಕೋಸಲದ ಸುಭದ್ರರಾಜಧಾನಿಯಾಗಿ ರಾರಾಜಿಸುತ್ತಿದ್ದಿತು ಅಯೋಧ್ಯೆ..!

  ಅಯೋಧ್ಯೆಯೆಂಬ ಸುಮಂಗಲಿಗೆ ತಿಲಕವಾಗಿ ಒಪ್ಪಿತ್ತು ರಾಜರಾಜರು ವಿರಾಜಿಸುವ ರಮಣೀಯವಾದ ಅರಮನೆ ..

  ಅಲ್ಲೊಂದು ರತ್ನ ಸಿಂಹಾಸನ..

  ಉತ್ತಮಾಂಗವೆನಿಸಿದ ಶಿರಸ್ಸಿನೊಳಗೆ ಮಂಡಿಸಿ ಸಮಸ್ತ ಶರೀರದ ಆಗುಹೋಗುಗಳನ್ನು ನಿಯಂತ್ರಿಸುವ ಮಹಾಮಸ್ತಿಷ್ಕದಂತೆ..

  ಅಯೋಧ್ಯೆಯ ಅರಮನೆಯಲ್ಲಿ ಮಂಡಿಸಿ, ಕೋಸಲವೇನು, ಸಮಸ್ತ ಭೂಮಂಡಲದ ಆಗು-ಹೋಗುಗಳನ್ನೇ ನಿಯಂತ್ರಿಸುವ ವಿಶ್ವನಿಯಾಮಕಪೀಠವದು..!”
  ಓದುತ್ತಾ ಹೋದಂತೆ ಈ ಲೋಕ ಬಿಟ್ಟು ಬೇರೆಲ್ಲೋ ವಿಹರಿಸಿದಂತೆ ಆಯಿತು..

  [Reply]

 24. Ganesh Bhat Madavu

  ವಿಶ್ವ ವ್ಯವಸ್ಥೆಯ ಜೀವ ಸೂತ್ರ ಅದ್ಭುತ ಗುರುಗಳೇ,,ಲೇಖನವನ್ನು ಓದಿದಾಗ ಭಾರತವನ್ನು ಬೆಳಗುವ ಜ್ಯೋತಿ ಮತ್ತೆ ಉದಯವಾಗುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ..

  [Reply]

 25. RAMESHHEGDE GUNDUMANE

  Hare raama

  [Reply]

 26. Vidya Ravishankar.

  ಹರೇರಾಮ.

  ಅದ್ಭುತ. ಈ ಪರಿಯ ಸೊಬಗ ವರ್ಣಿಸಲು ಜಗದೊಡೆಯನಿಂದ ಮಾತ್ರ ಸಾಧ್ಯ. ಶ್ರೀ ಗುರುಭ್ಯೋ ನಮಃ.

  [Reply]

Leave a Reply

Highslide for Wordpress Plugin