ಕಷ್ಟಗಳು ಬರುವಾಗ ಸಾಲುಸಾಲಾಗಿ ಬರುತ್ತವೆ. ಇದು ಕಷ್ಟ ಕಂಡವರ ಮಾತು.. ಯುಕ್ತಿ ಹೇಳುತ್ತದೆ, ಅದು ಸತ್ಯ ಅಂತಾದರೆ ಶ್ರೇಯಸ್ಸೂ ಕೂಡ ಹಾಗೆಯೇ, ಸಾಲುಸಾಲಾಗಿ ಬರುತ್ತವೆ.‌

ನವಮಿ ತಿಥಿ, ಪುನರ್ವಸು ನಕ್ಷತ್ರ, ಕರ್ಕಾಟಕ ಲಗ್ನದಲ್ಲಿ – ಶ್ರೀರಾಮ
ಪುಷ್ಯ ನಕ್ಷತ್ರ, ಮೀನ ಲಗ್ನದಲ್ಲಿ – ಭರತ
ಪಂಚಮದಲ್ಲಿ ಗುರು ಮತ್ತು ಚಂದ್ರ‌‌.. ಪಂಚಮ ಅಂದ್ರೆ ಮನಸ್ಸು, ಮನಸಲ್ಲಿ ಗುರು ಮತ್ತು ಚಂದ್ರ ಇದ್ದಾಗ ಪ್ರಸನ್ನಚಿತ್ತ ಇರದೆ ಇನ್ನೇನು..

ಮರುದಿನ, ದಶಮಿ ತಿಥಿ,ಆಶ್ಲೇಷಾ ನಕ್ಷತ್ರ, ಕರ್ಕಾಟಕ ಲಗ್ನದಲ್ಲಿ : ಸುಮಿತ್ರೆಗೆ ಅವಳಿ ಮಕ್ಕಳ ಜನನ – ಲಕ್ಷ್ಮಣ – ಶತ್ರುಘ್ನ

ನಾಲ್ವರು ಮಕ್ಕಳು ಜನಿಸಿದರು.. ಗುಣವಂತರು, ಪರಸ್ಪರ ಹೋಲಿಕೆ ಉಳ್ಳವರು, ನಕ್ಷತ್ರ ಕಾಂತಿ ಉಳ್ಳವರು…

ಆ ಸಂದರ್ಭದಲ್ಲಿ ದಿವಿಯಲ್ಲಿ ಉತ್ಸವ ನಡೆಯಿತು, ಗಂಧರ್ವರು ಗಾಯನ, ಅಪ್ಸರೆಯರು ನರ್ತನ, ದೇವದುಂದುಭಿಗಳ ವಾದನ, ದಿವಿಯಿಂದ ಭುವಿಗೆ ಪುಷ್ಪವೃಷ್ಟಿ… ಇದರರ್ಥ ದಿವಿಯು ಭುವಿಯನ್ನು ಪೂಜಿಸಿತು‌. ಈ ನಾಲ್ಕು ನಡೆದಿವೆ‌.

ದೇವತೆಗಳೆಲ್ಲ ದಿವಿಯಲ್ಲಿದ್ದರೆ, ದೇವರ ದೇವ ಭುವಿಯಲ್ಲಿದ್ದ, ಭುವಿ ಪೂಜ್ಯವಾಯಿತು, ದಿವಿ ಪೂಜಕವಾಯಿತು‌‌.

ಅಯೋಧ್ಯೆಯಲ್ಲಿ ಹಿಂದೆದೂ ಕಾಣದ ಉತ್ಸವ ನಡೆಯಿತು. ರಥರಸ್ತೆಯಲ್ಲಿ ಜನರು, ನಟನರ್ತಕರಿಂದ ತುಂಬಿ ಹೋಗಿದೆ. ಎತ್ತ ನೋಡಿದರೂ ಗಾಯನ, ವಾದನ, ಎಲ್ಲರೂ ಆಭರಣಧಾರಿಗಳಾಗಿದ್ದಾರೆ. ಸೂತಮಾಗಧರಿಗೆ ಧನ ದಾನ, ಬ್ರಾಹ್ಮಣರಿಗೆ ದಾನ, ಸಾವಿರಾರು ಗೋದಾನಗಳನ್ನು ಮಾಡಿದ..

ಹನ್ನೊಂದು ದಿನ ಕಳೆದಿದೆ, ನಾಮಕರಣದ ಕಾರ್ಯಕ್ರಮ.. ಪರಮಪ್ರೀತರಾದ ವಸಿಷ್ಠರು ನಾಮಕರಣ ನೆರವೇರಿಸಿದರು. ಮುಂದೊಂದು ದಿನ ಈ ವಂಶದಲ್ಲಿ ಭಗವಂತ ಬರುತ್ತಾನೆ ಎಂಬುದನ್ನು ತಿಳಿದಿದ್ದ ವಸಿಷ್ಠರು ಪೌರೋಹಿತ್ಯವನ್ನು ಮಾಡುತ್ತಿರುತ್ತಾರೆ‌

“ರಾಮ” ಎಂಬ ಶಬ್ದದ ಸಾರ – ಆನಂದ; ಕೋಟಿ ಕೋಟಿ ಜೀವಗಳ ದುಃಖವನ್ನು ಕಳೆಯಲು ಆನಂದವೇ ಭೂಮಿಗೆ ಬಂದಿದೆ – ಹಾಗಾಗಿ ಆನಂದವೆಂದೇ ಹೆಸರಿಸಿದರು ಅವನಿಗೆ ವಸಿಷ್ಠರು!
ಜಗದಲ್ಲಿ ಎಲ್ಲಾ ಜೀವಗಳೂ ಯಾವನಲ್ಲಿ ಆನಂದವನ್ನು ಕಾಣುತ್ತವೆಯೆಯೋ ಅವನು ರಾಮ! ಪರಂವಸ್ತು ಒಂದು ಆಟವನ್ನು ಆಡುತ್ತಾ ಇದೆ. ಅಲ್ಲಿಂದ ಇಲ್ಲಿಗೆ ಬಂದು, ಪು‌ನಃ ಅಲ್ಲಿಗೆ ಹೋಗುವುದು. ಏತನ್ಮಧ್ಯೆ ಇಲ್ಲಿನ ದುಃಖವನ್ನು ಪರಿಹರಿಸುವ, ಕಾಟ ತಡೆಯವ ಆಟ!

ರಾಮ ಎನ್ನಬೇಕಾದರೆ ಒಮ್ಮೆ ಬಾಯಿ ತೆಗೆದು, ಬಾಯಿ ಮುಚ್ಚಬೇಕಾಗುತ್ತದೆ. ಬಾಯಿ ಅಂದ್ರೆ ನಮ್ಮ ಹೃದಯದ ದ್ವಾರ – ಅದನ್ನು ತೆರೆಯಬೇಕಾಗುತ್ತದೆ ರಾಮ ನಮ್ಮಲ್ಲಿ ಬರಬೇಕಾದರೆ..

ಭರಿಸುವವನು ಭರತ.. ರಾಜ್ಯವನ್ನು ಆಳಿದವನು..
ಅರವತ್ತು ಸಾವಿರ ವರ್ಷ ರಾಜ್ಯವನ್ನು ಆಳಿದವನು ಅಸ್ತಂಗತ… ರಾಜನಾಗಬೇಕಾಗಿದ್ದವನು ವನಂಗತ..
ಅಕ್ಷರಶಃ ರಾಜ್ಯ ಅನಾಥ ವಾಗಿತ್ತು… ಆ ಹದಿನಾಲ್ಕು ವರ್ಷ ರಾಜ್ಯವನ್ನು ಭರಿಸಿದವರು ಯಾರು? ಭರತ… ರಾಮನ ಪಾದುಕೆಗೆ ಪಟ್ಟಕಟ್ಟಿ ರಾಜ್ಯವನ್ನು ಆಳಿದವನು.. ಎಂತಹ ಯೋಗ ಅವನದ್ದು..

ಲಕ್ಷ್ಮಣ ಅಂದ್ರೆ ಲಕ್ಷ್ಮೀ ಸಂಪನ್ನ.. ಶ್ರೀಮಂತ. ಏನು ಲಕ್ಷ್ಮೀ ಸಂಪನ್ನ ಅಂದ್ರೆ? ರಾಮ ಕೈಂಕರ್ಯ ಎಂಬ ಸಂಪತ್ತನ್ನು ಹೊಂದಿದವನು…. ಸೇವೆಗಿಂತ ಹಿರಿದಾದ ಶ್ರೀ ಬೇರೆಯದಿಲ್ಲ!

ಶತ್ರುಘ್ನ… ಆತ ನಿತ್ಯ ಶತ್ರುಘ್ನ; ಶತ್ರು ಸಂಹಾರಕಾರಿ

ನಾಮಕರಣ ಆಯಿತು, ಭೂರಿಭೋಜನ ಇತ್ತು.. ಹಳ್ಳಿಗಳಿಂದ ಬಂದವರಿಗೂ ಭೋಜನ.. ಬ್ರಾಹ್ಮಣರಿಗೆ ಅಮಿತವಾಗಿ ರತ್ನಗಳನ್ನು ದಾನ ಮಾಡುತ್ತಾನೆ ದಶರಥ..

ಸಂಸ್ಕಾರಗಳನ್ನು ಕಾಲಕಾಲಕ್ಕೆ ಮಾಡುತ್ತಾಬಂದ ದಶರಥ.. ಮಕ್ಕಳು ಶುಕ್ಲಪಕ್ಷದ ಚಂದ್ರನಂತೆ ಬೆಳೆದರು.

ಎಲ್ಲ ಮಕ್ಕಳೂ ರತ್ನಗಳಂತೇ ಇದ್ದರೂ, ದಶರಥನಿಗೆ ರಾಮ ಅಂದರೆ ಹೆಚ್ಚು ಪ್ರೀತಿ. ನಾಲ್ವರಲ್ಲಿ ರಾಮ ಪತಾಕೆಯಂತೆ ಶೋಭಿಸುತ್ತಿದ್ದ. ತಂದೆಗೆ -ಎಲ್ಲ ಜೀವಿಗಳಿಗೂ ಸಂತೋಷವನ್ನು ಉಂಟುಮಾಡುತ್ತಿದ್ದ. ನಕ್ಷತ್ರಗಳು ಕಾಂತಿ ಉಳ್ಳವರಾಗಿದ್ದರೂ, ಸೂರ್ಯೋದಯವಾದಾಗ ನಕ್ಷತ್ರಗಳು ಗೋಚರಿಸುವುದಿಲ್ಲ, ಹಾಗೆಯೇ ಲಕ್ಷ್ಮಣ, ಭರತ,ಶತ್ರುಘ್ನರು ಶೋಭಾಯಮಾನವಾಗಿದ್ದರೂ, ರಾಮನ ಶೋಭೆಯ ಎದುರು ಅವರುಗಳು ಗೋಚರವಾಗಲಿಲ್ಲ; ಗೋಚರವಾಗಬೇಕು ಎಂಬ ಯಾವ ಆಸೆಯೂ ಅವರಿಗಿರಲಿಲ್ಲ!

ವಿದ್ಯಾಭ್ಯಾಸ: ವೇದಗಳು, ವೇದಾಂಗಗಳು, ಉಪವೇದಗಳು, ಪುರಾಣ, ಮಿಮಾಂಸೆ, ನ್ಯಾಯ ಹೀಗೆ ಶಾಸ್ತ್ರೀಯವಾಗಿ ವಿದ್ಯಾಭ್ಯಾಸ ಆಗ್ತಾ ಇದೆ.

ನಾಲ್ವರೂ ವೇದಜ್ಞರಾದರು, ಶೂರರಾದರು. ಜ್ಞಾನಸಂಪನ್ನರು, ಉತ್ತೋಮತ್ತಮ ಗುಣವನ್ನು ಹೊಂದಿದ್ದರು‌. ಲೋಕಹಿತ ನಿರತರಾದರು‌‌‌. ಇದು ವಿದ್ಯಾಭ್ಯಾಸ… ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿನ ಶಿಕ್ಷಣದ ಕಲ್ಪನೆಯೂ ಇದೇ ರೀತಿಯದ್ದು, ರಾಮನ ಕಾಲದ ವಿದ್ಯಾಭ್ಯಾಸ ಕೊಡಬೇಕು ಎಂಬುದು‌‌.

ಪರಾಕ್ರಮ ಸತ್ಯಕ್ಕೆ ಮೀಸಲು. ಅಶ್ವ-ಗಜ-ರಥ ಚಾಲನೆಯಲ್ಲಿ ಸಮ್ಮತರು, ಧನುರ್ವಿದ್ಯೆಯಲ್ಲಿ ನಿಷ್ಣಾತರು…

ಇಷ್ಟೆಲ್ಲ ವಿದ್ಯೆಗಳಲ್ಲಿ ಸಂಪನ್ನರಾದರೂ ಅವರೆಲ್ಲ ತಂದೆತಾಯಿರ ಸೇವೆಯಲ್ಲಿ ಇಷ್ಟ ಇದ್ದವರಾದರು.

ಲಕ್ಷ್ಮಣ- ಚಿಕ್ಕವಯಸ್ಸಿನಿಂದಲೇ ರಾಮನಲ್ಲಿ ಅತಿಶಯವಾದ ಪ್ರೀತಿಯನ್ನು ಹೊಂದಿದ್ದ. ತನ್ನ ಸರ್ವಸ್ವದಿಂದ ರಾಮನ ಸಂತೋಷವನ್ನು ಸಾಧಿಸುತ್ತಿದ್ದ. ರಾಮನ ಸುಖಕ್ಕಾಗಿ ತನ್ನನ್ನು ಕರ್ಪೂರದಂತೆ ಉರಿಸಿಕೊಂಡವನು. ರಾಮನ ಎಲ್ಲ ಕಾರ್ಯಗಳನ್ನೂ ಲಕ್ಷ್ಮಣನೇ ಮಾಡಿಕೊಡುತ್ತಿದ್ದ.

ಲಕ್ಷ್ಮಣನೆಂದರೇ ರಾಮನ ಪ್ರಾಣವೇ‌‌‌‌… ಎಲ್ಲರ ಪ್ರಾಣ ಒಳಗಿದ್ದರೆ ರಾಮನ ಪ್ರಾಣ ಹೊರಗಿದೆ – ಲಕ್ಷ್ಮಣನ ರೂಪದಲ್ಲಿ! ಅಷ್ಟು ಪ್ರೀತಿ!

ಶಿಶುವಾಗಿದ್ದಲೂ ರಾಮಶಿಶುವಿನ ಪಕ್ಕ ಲಕ್ಷ್ಮಣ ಶಿಶು ಇದ್ದಾಗ ಮಾತ್ರ ರಾಮ ಅಳುವನ್ನು ನಿಲ್ಲಿಸುತ್ತಿದ್ದ, ನಿದ್ದೆ ಮಾಡುತ್ತಿದ್ದ.. ಮೃಷ್ಟಾನ್ನ ಇದ್ದಾಗಲೂ ರಾಮ ಊಟ ಮಾಡುತ್ತಿರಲಿಲ್ಲ, ಲಕ್ಷ್ಮಣ ಪಕ್ಕದಲ್ಲಿ ಇದ್ದರೆ ಮಾತ್ರ ರಾಮ ಊಟ ಮಾಡುತ್ತಿದ್ದ..

ಕಾಡಿನಲ್ಲಿ ಹೋಗುವಾಗ ರಾಮನ ಹಿಂದೆಯೇ ಲಕ್ಷ್ಮಣ ಇರುತ್ತಿದ್ದ‌‌‌ – ರಕ್ಷಕನಂತೆ!

ಹೀಗೆ ರಾಮ ಲಕ್ಷ್ಮಣರಂತೆ, ಭರತ-ಶತ್ರುಘ್ನರೂ ಅಷ್ಟೇ ಅನ್ಯೋನ್ಯತೆಯಿಂದ ಇದ್ದರು‌.

ಮಕ್ಕಳು ಬೆಳೆದಂತೆ ದಶರಥನ ಆನಂದವೂ ಬೆಳೆಯಿತು. ತನ್ನ ಮಕ್ಕಳ ಹಾಗೆ ಯಾರ ಮಕ್ಕಳೂ ಇಲ್ಲ ಎಂದು ಪೂರ್ಣತೆಯನ್ನು ಕಾಣುತ್ತಾನೆ. ಇನ್ನೇನು ಕರ್ತವ್ಯ ಅಂತ ದಶರಥ ಆಲೋಚನೆ ಮಾಡುತ್ತಾನೆ‌‌.

ರಾಮ ವಿದ್ಯೆಯಿಂದ ಪೂರ್ಣನಾದರೂ, ಇನ್ನೂ ಪೂರ್ಣನಾಗಬೇಕಿದೆ… ಇ‌ಂತಹ ರಾಮನಿಗೆ, ಪರಿಪೂರ್ಣ ವ್ಯಕ್ತಿತ್ವಕ್ಕೆ ಸಲ್ಲುವ ಸಮರ್ಥ ಹೆಣ್ಣು ಎಲ್ಲಿ ಸಿಗುತ್ತಾಳೆ ಎಂದು ದಶರಥ ರಾಮನ ಮದುವೆಯ ಕುರಿತು ಚಿಂತಿಸುತ್ತಾನೆ‌.

ಗುರುಗಳನ್ನು- ಮಂತ್ರಿಗಳನ್ನು – ಬಂಧುಬಾಂಧವರನ್ನೆಲ್ಲ‌ ಕರೆಸಿ ರಾಮನ ವಿವಾಹದ ಕುರಿತು ಚರ್ಚಿಸುತ್ತಿದ್ದಾನೆ, ಅದೇ ಸಮಯದಲ್ಲಿ ಭಗವತ್ಸಂಕಲ್ಪದಂತೆ ಮಹಾಪುರುಷನೊಬ್ಬನ ಆಗಮನವಾಯಿತು.. ಅವರು ಮಹಾಮುನಿ ವಿಶ್ವಾಮಿತ್ರರು.

ರಾಮನಿಗೆ ಜನ್ಮ ನೀಡಿ, ವಿದ್ಯಾಭ್ಯಾಸ ‌ನೀಡುವುದು ದಶರಥನ ಕರ್ತವ್ಯ, ಉನ್ನತ ವಿದ್ಯಾಭ್ಯಾಸ, ವಿವಾಹ ವಿಶ್ವಾಮಿತ್ರರ ಕರ್ತವ್ಯ! ರಾಮಾಯಣದ ಉದ್ದಕ್ಕೂ ಆಯಾ ಪಾತ್ರಗಳು ತಮ್ಮ ತಮ್ಮ ಕರ್ತವ್ಯದ ಸಮಯ ಬಂದಾಗ ಹೇಗೆ ಪ್ರವೇಶಿಸಿ ಅದನ್ನು ನೆರವೇರಿಸುತ್ತವೆ ಎಂಬುದನ್ನು ಕಾಣಬಹುದು.

ಪುರೋಹಿತರ ಸಹಿತವಾಗಿ ವಿಶ್ವಾಮಿತ್ರರನ್ನು ಗೌರವಿಸಿ,ಸ್ವಾಗತಿಸಲು ತೊಡಗಿದ ದಶರಥ..
ಅರ್ಘ್ಯ, ಮಧುಪರ್ಕವನ್ನು ಸಮರ್ಪಣೆ ಮಾಡಿ ಶಾಸ್ತ್ರೋಕ್ತವಾಗಿ ಸ್ವಾಗತಿಸಿದ. ವಿಶ್ವಾಮಿತ್ರರು ನಗರ-ಕೋಶ-ಗ್ರಾಮ-ರಾಜ-ಬಂಧುಬಾಂಧವರ ಕ್ಷೇಮ, ಧರ್ಮಕರ್ಮ ಸರಿಯಾಗಿ ನಡೆಯುತ್ತಿದೆಯೇ ಎಂದು ಕುಶಲ ಪ್ರಶ್ನೆ ಮಾಡುತ್ತಾರೆ. ವಸಿಷ್ಠರನ್ನು ಮೊದಲು ಮಾತನಾಡಿಸಿ, ಉಳಿದ ಋಷಿಗಳನ್ನೂ ಮಾತನಾಡಿಸುತ್ತಾರೆ‌.

“ನೀವು ಇಂದು ಬಂದಿರುವುದು ಅಮೃತ ಸಿಕ್ಕಿದಂತೆ, ಮಕ್ಕಳಾಗದವರಿಗೆ ಮಕ್ಕಳಾದಂತೆ, ಕಳೆದಹೋದ ವಸ್ತು ಸಿಕ್ಕಂತೆ ಸಂತೋಷವಾಗಿದೆ…
ನನ್ನಿಂದ ಏನಾಗಬೇಕು ಬ್ರಹ್ಮನ್, ನಿಮ್ಮಂತಹಾ ಸತ್ಪಾತ್ರರು ಎಲ್ಲಿ ಸಿಗುತ್ತಾರೆ; ಮಾಡಿದರೆ ನಿಮ್ಮ ಸೇವೆಯನ್ನು ಮಾಡಬೇಕು, ಜನ್ಮ ಸಾರ್ಥಕವಾಯಿತು! ನಾನೀಗ ನಿಮ್ಮ ನೆರಳಲ್ಲಿ, ನನಗಿದು ಪರಮಾದ್ಭುತ, ತಮ್ಮ ಅಪೇಕ್ಷೆ ಏನು, ನಿಮ್ಮ ಕಾರ್ಯಮಾಡಿ ಧನ್ಯನಾಗಬೇಕು ನಾನು, ಅದೇನಿದ್ದರೂ ಹೇಳಿಬಿಡಿ, ಚಾಚೂ ತಪ್ಪದೆ ಮಾಡುತ್ತೇನೆ, ನನಗೆ ನೀವು ದೇವರು, ನಿಮ್ಮ ಆಗಮನವೇ ನನಗೆ ಧರ್ಮಸಿದ್ಧಿ” ಎಂದು ದಶರಥ ಹೇಳುತ್ತಾನೆ.

ವಿಶ್ವಾಮಿತ್ರರಿಗೆ ಇದನ್ನೆಲ್ಲ ಕೇಳಿ ಕಿವಿ-ಹೃದಯಕ್ಕೆ ತಂಪೆರದಂತೆ ಆಯಿತು. ರೋಮಾಂಚನವಾಗಿದೆ ವಿಶ್ವಾಮಿತ್ರರಿಗೆ‌. ಅವರು ಹೇಳ್ತಾರೆ, “ಈ ಮಾತುಗಳನ್ನು ಭೂಮಂಡಲದಲ್ಲಿ ನಿನ್ನ ಬಿಟ್ಟರೆ, ಸೂರ್ಯವಂಶದವರ ಬಿಟ್ಟರೆ, ವಸಿಷ್ಠರ ಶಿಷ್ಯನ ಬಿಟ್ಟರೆ ಇನ್ಯಾರೂ ಹೇಳೋಕೆ ಸಾಧ್ಯವಿಲ್ಲ! ನಾನು ಹೇಳುತ್ತೇನೆ, ನಾನು ಹೇಳಿದ್ದನ್ನು ನಡೆಸು, ನಿನ್ನ ವಚನ ಸುಳ್ಳಾಗದಿರಲಿ” ಎಂದು ಎಚ್ಚರಿಸಿ, “ಪರಮಸಿದ್ಧಿಗಾಗಿ ನಾನೊಂದು ನಿಯಮ ಸ್ವೀಕರಿಸಿ ಯಜ್ಞವನ್ನು ಮಾಡುತ್ತಿದ್ದೇನೆ, ಆ ಯಜ಼್ಞ ಪೂರ್ಣವಾಗುವುದಕ್ಕೆ ಇಬ್ಬರು ರಾಕ್ಷಸರು ವಿಘ್ನ ತಂದೊಡ್ಡುತ್ತಿದ್ದಾರೆ.. ಇನ್ನೇನು ಯಜ್ಞ ಫಲ ಕೊಡಬೇಕು ಎನ್ನುವ ಹೊತ್ತಲ್ಲಿ ಮಾಂಸರಕ್ತಗಳಿಂದ ಯಜ್ಞ ವೇದಿಕೆಯ ಮೇಲೆ ಮಳೆಗರೆಯುತ್ತಾರೆ. ಇಷ್ಟೆಲ್ಲ ಶ್ರಮ ಹಾಕಿದ ಯಜ್ಞ ಭಂಗವಾದಾಗ ನಾನು ಬೇಸರಿಸಿ ಆ ಸ್ಥಳದಿಂದ ಹೊರಡುತ್ತೇನೆ, ನಾನು ಕೋಪವನ್ನೂ ಮಾಡುವಂತಿಲ್ಲ, ಶಾಪವನ್ನೂ ಕೊಡುವಂತಿಲ್ಲ‌‌, ಆ ಯಜ್ಞ ಅಂಥಾದ್ದು. ರಾಜಶ್ರೇಷ್ಠನಾದ ದಶರಥನೇ, ಸತ್ಯಪ್ರತಿಜ್ಞನೇ.. ರಾಮನನ್ನು ಕಳಿಸಿಕೊಡು. ಪುಟ್ಟ ಬಾಲಕನೇ ಆದರೂ ಶೂರ, ಪರಾಕ್ರಮ, ಸತ್ಯಕ್ಕೆ ಮೀಸಲು.. ಅವನೊಳಗೆ ದಿವ್ಯ ತೇಜಸ್ಸು ವಿಹಿತವಾಗಿದೆ, ಜೊತೆಗೆ ನಾನಿದ್ದೇನೆ! ಯಜ್ಞಕಂಟಕರನ್ನು ವಧಿಸಲು ಶಕ್ತ ಅವನು, ನಾನು ಅವನಿಗೆ ವಿವಿಧ ರೂಪದ ಶ್ರೇಯಸ್ಸನ್ನು ಕೊಡುತ್ತೇನೆ, ಅದರಿಂದ ಅವನು ಮೂರುಲೋಕದಲ್ಲಿ ಖ್ಯಾತಿಯನ್ನು ಹೊಂದುತ್ತಾನೆ. ತಪಸ್ವಿಗಳನ್ನು ರಕ್ಷಿಸುವುದು ರಾಜಕರ್ತವ್ಯ. ರಾಮನ ಎದುರು ಮಾರೀಚ, ಸುಭಾಹರು ನಿಲ್ಲಲಾರರು! ರಾಮನ ಹೊರತು ಇ‌ನ್ಯಾರೂ ಅವರನ್ನು ಎದುರಿಸಲು ಸಾಧ್ಯವಿಲ್ಲ, ಅವನನ್ನು ನನಗೆ ಕೊಟ್ಟುಬಿಡು”

ದಶರಥನ ಭಯ, ಗೊಂದಲವನ್ನು ಗಮನಿಸಿ ವಿಶ್ವಾಮಿತ್ರರು ಹೇಳುತ್ತಾರೆ – “ಪುತ್ರ ವ್ಯಾಮೋಹ ಬೇಡ, ಇದು ನನ್ನ ವಚನ, ರಾಮನ ಕೈಯಲ್ಲಿ ಮಾರೀಚ ಸುಭಾಹರು ವಧೆಯಾಗ್ತಾರೆ…”

ಕೊನೆಯಲ್ಲಿ, “ರಾಮನೇನು ಅಂತ ನಾನು ಬಲ್ಲೆ, ವಸಿಷ್ಠರು ಬಲ್ಲರು. ಅವನು ಬರೀ ನಿನ್ನ ಮಗನಲ್ಲ, ಮಹಾದೊಡ್ಡದು ಅದು.. ನೀನೇನು ಬಲ್ಲೆ.. ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ ಮಹಾತಪಸ್ವಿಯಾದ ವಸಿಷ್ಠರನ್ನು ಕೇಳು.. ನಿನಗೆ ಧರ್ಮ ಬೇಕಾದರೆ, ಜಗತ್ತಿನಲ್ಲಿ ಮಹಾ ಯಶಸ್ಸು ಬೇಕಾದರೆ..ರಾಮನನ್ನು ಕೊಡು…”

“ವಸಿಷ್ಠರೇ ಮೊದಲಾದ ಗುರುಗಳನ್ನು ಕೇಳು, ಸುಮಂತ್ರನೇ ಮೊದಲಾದ ಮಂತ್ರಿಗಳನ್ನು ಕೇಳು.. ಅವರು ಒಪ್ಪಿದರೆ ಮಾತ್ರ ರಾಮನನ್ನು ಕಳುಹಿಸಿಕೊಡು, ಅವರು ಬೇಡ ಅಂದರೆ ಬೇಡ…”

“ತಡಮಾಡಬೇಡ, ಬೇಸರಿಸದರು‌‌.. ಬೇಗ ರಾಮನನ್ನು ಕಳಿಸಿಕೊಡು” ಎಂದು ಹೇಳಿ, ವಿಶ್ವಾಮಿತ್ರರು ಹೊರಟರು…

ದಶರಥ ಒಮ್ಮೆ ವಿಚಲಿತನಾಗಿ, ಎಚ್ಚರವೇ ತಪ್ಪಿಹೋಯಿತು‌‌. ಸ್ವಲ್ಪ ಹೊತ್ತಿನ ನಂತರ ಎಚ್ಚರವಾಗಿ, ಅತೀವವಾಗಿ ವಿಷಾದವಾಯಿತು. ಇನ್ನಿಲ್ಲದ ಭಯವುಂಟಾಯಿತು.. ವ್ಯತಿಥನಾಗಿ ಸಿಂಹಾಸನವನ್ನು ತ್ಯಜಿಸಿ ಚಲಿಸಿದನು.

ಚಲಿತ – ವಿಚಲಿತ ದಶರಥನ ಮಾತುಗಳು, ಅಚಲಿತ ವಸಿಷ್ಠರ ಕಾರ್ಯಗಳು ಏನು ಎಂದು ನಾಳಿನ ಪ್ರವಚನದಲ್ಲಿ ನೋಡೋಣ…

*ಮಹಾಪುರಷರು ನಮಗೆ ಸನಿಹವಾಗುತ್ತಾರಾದರೆ ಅದಕ್ಕೆ ಮಹಾತ್ಯಾಗಕ್ಕೂ ಸಿದ್ಧವಿರಬೇಕಾಗುತ್ತದೆ‌. – ಶ್ರೀಸೂಕ್ತಿ*

ಪ್ರವಚನವನ್ನು ಇಲ್ಲಿ ಕೇಳಿರಿ :

ಪ್ರವಚನವನ್ನು ನೋಡಲು :

Facebook Comments